-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 144

ಸ್ಫೂರ್ತಿಯ ಮಾತುಗಳು : ಸಂಚಿಕೆ - 144

ಸ್ಫೂರ್ತಿಯ ಮಾತುಗಳು : ಸಂಚಿಕೆ - 144
ಲೇಖಕರು : ರಮೇಶ  ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

    
ಭೂಮಿಗೆ 4.54ಕೋಟಿ ವರ್ಷಗಳ ಇತಿಹಾಸವಿದೆ. ಈ ದೀರ್ಘಾವಧಿಯಲ್ಲಿ ಹಿಮಪಾತ, ಭೂಕಂಪ, ಜ್ವಾಲಾಮುಖಿ, ಸುನಾಮಿ, ಜಲ ಪ್ರಳಯ, ಸುಂಟರಗಾಳಿ, ಶೈತ್ಯಗಾಳಿ, ಬರಗಾಲ, ಆಲಿಕಲ್ಲು ಮಳೆ, ಕಾಡ್ಗಿಚ್ಚು ಗಳಂತಹ ಪ್ರಕೃತಿ ವಿಕೋಪ ಘಟನೆಗಳು ಅನೇಕ ಬಾರಿ ಜರಗಿವೆ. ಭೂಮಿಯ ನೈಸರ್ಗಿಕ ಪ್ರಕ್ರಿಯೆಗಳಿಂದ ಉಂಟಾಗುವ ಇಂತಹ ಪ್ರಮುಖ ವಿಕೋಪ ಘಟನೆಗಳು ಪರಿಸರಕ್ಕೆ ವ್ಯಾಪಕ ವಿನಾಶ ಮತ್ತು ಜೀವಹಾನಿಯನ್ನು ಉಂಟುಮಾಡುತ್ತವೆ. ಪ್ರಕೃತಿ ವಿಕೋಪಗಳನ್ನು ಪ್ರಮುಖವಾಗಿ ಭೂವೈಜ್ಞಾನಿಕ, ಜಲವೈಜ್ಞಾನಿಕ, ಹವಾಮಾನ ಮತ್ತು ಬಾಹ್ಯಾಕಾಶ ಸಂಬಂಧಿ ವಿಕೋಪಗಳೆಂದು ವಿಂಗಡಿಸಿ ವಿವರಿಸುತ್ತೇವೆ. 

ಭೂಕಂಪಗಳು, ಜ್ವಾಲಾಮುಖಿಗಳು, ಹಿಮಪಾತಗಳು, ಭೂಕುಸಿತಗಳು ಮೊದಲಾದುವು ಭೂವೈಜ್ಞಾನಿಕ ವಿಕೋಪಗಳು. ಸುನಾಮಿ, ಸಾಗರ ಜ್ವಾಲಾಮುಖಿ ಮೊದಲಾದುವು ಜಲವೈಜ್ಞಾನಿಕ ವಿಕೋಪಗಳು. ಮೇಘಸ್ಫೋಟ, ಬರಗಾಲ, ಶೀತಮಾರುತ, ಉಷ್ಣ ಮಾರುತ ಮೊದಲಾದುವು ಹವಾಮಾನ ವಿಕೋಪದಿಂದಾಗುತ್ತವೆ. ಸೂರ್ಯನು ಇದ್ದಕ್ಕಿದ್ದಂತೆಯೆ ಬೃಹತ್ ಪ್ರಮಾಣದಲ್ಲಿ ಸೌರ ವಿಕಿರಣಗಳನ್ನು ಬಿಡುಗಡೆ ಮಾಡಿದರೆ ಸೌರ ಜ್ವಾಲೆಯುಂಟಾಗುತ್ತದೆ. ಸೌರ ಜ್ವಾಲೆಗಳು ಇ-ಉಪಕರಣಗಳಿಗೆ ಹಾನಿಕರ.  ಹವಾಮಾನ ವೈಪರಿತ್ಯದಲ್ಲಿ ಗಾಮಾ ಕಿರಣಗಳು ಸ್ಫೋಟವಾದರೆ ಜೀವರಾಶಿಗಳು ನಶಿಸುತ್ತವೆ. ಪ್ರಾಕೃತಿಕ ವಿಕೋಪಗಳಲ್ಲಿ ಮಾನವವ ಭಾಗೇದಾರಿಕೆಯಿದೆ. ಪ್ರಕೃತಿಯನ್ನು ಸ್ವಹಿತಕ್ಕಾಗಿ ಬಳಸುವ ಮಾನವನ ಮನೋಗುಣವು ಹೆಚ್ಚಿನ ವಿಕೋಪಗಳಿಗೆ ಕಾರಣ. ಪ್ರಕೃತಿ ನಾಶದೊಂದಿಗೆ ಮಾನವ ತನ್ನ ಸ್ವಂತ ಗೋರಿಯನ್ನು ನಿರ್ಮಿಸುತ್ತಿದ್ದಾನೆ. 

ಪ್ರಕೃತಿ ವಿಕೋಪಗಳಲ್ಲಿ ಹೆಚ್ಚಿನವುಗಳಿಗೆ ಗುಹೆಯಿಂದ ಗೃಹಕ್ಕೆ ವಾಸ್ತವ್ಯ ಬದಲಾಯಿಸಿದ ಮಾನವನೇ ಕಾರಣನಾಗುತ್ತಾನೆ. ಮೂಲ ಪ್ರಕೃತಿಯನ್ನು ಮಾನವನು ಅತ್ಯಂದ ವೇಗದಿಂದ ತನಗೆ ಬೇಕಾದಂತೆ ಬದಲಾಯಿಸುತ್ತಿದ್ದಾನೆ. ಇದರಿಂದ ಭೌಗೋಳಿಕ ವಿಕೋಪಗಳಾಗುತ್ತಿವೆ,  ಅರಣ್ಯ ನಾಶದಿಂದ ಭೂಸವೆತ, ವಿರಳ ಮಳೆ, ಮಿತಿ ಮೀರಿದ ಶಾಖ, ಕುಡಿಯುವ ನೀರಿನ ಬರವನ್ನು ನಾವು ಎದುರಿಸುತ್ತಿದ್ದೇವೆ. ಅರಣ್ಯಗಳು ಭೂಜಲ ಸಂವರ್ಧನೆ, ಹವಾಮಾನ ನಿಯಂತ್ರಣ, ಔಷಧ ಮತ್ತು ಆಹಾರದ ಪ್ರಮುಖ ಮೂಲಗಳು. ಗೋಮಾಳಗಳು, ಗದ್ದೆಗಳು, ಹಳ್ಳಗಳು ನಾಶವಾಗಿ ಕಟ್ಟಡಗಳು, ಕೈಗಾರಿಕೆಗಳು, ಕಾಂಕ್ರೀಟು ರಸ್ತೆಗಳು, ತಾರು ರಸ್ತೆಗಳು ಎದ್ದು ನಿಲ್ಲುತ್ತಿವೆ. ಇದರಿಂದಾಗಿ ಪ್ರಕೃತಿಯ ಮೂಲ ಸ್ವರೂಪ ವಿಕೃತವಾಗಿ ಪ್ರಕೃತಿ ವಿಕೋಪಗಳಿಗೆ ಮಾನವ ಕಾರಣನಾಗುತ್ತಿದ್ದಾನೆ.

ನಮ್ಮ ಹಿರಿಯರು ಪ್ರಾಕೃತಿಕ ಕೆರೆಗಳ ನೀರನ್ನು ಆಧರಿಸಿ ಬದುಕಿದರು. ನೀರಾಶ್ರಯದ ಹೊರಗೆ ವಾಸ್ತವ್ಯಗಳನ್ನು ಬದಲಿಸಿದಾಗ ಬಾವಿ, ಸುರಂಗ ಕೊರೆದರು. ಭೂಮಿಯೊಳಗಿನ ನೀರು ಖಾಲಿ ಮಾಡಿದರು. ಆದರೆ ಈಗ ನಾವು ನೀರೆತ್ತುವ ಕೊಳವೆ ಬಾವಿ ಭೂಗರ್ಭದ ನೀರನ್ನೇ ಖಾಲಿ ಮಾಡಿ ಭೌಗೋಳಿಕ ವಿಪತ್ತುಗಳಿಗೆ ಕಾರಣರಾಗಿದ್ದೇವೆ. ಭೂಕುಸಿತಗಳು, ಭೂಬಾಯ್ಬಿಡುವಿಕೆಗಳಿಗೆ ಕಾರಣ ಮಾನವ. ಮನೆಯಂಗಳದಲ್ಲಿ ಕಸ ಹಾಸಿ ಮಳೆಗಾಲದಲ್ಲಿ ಹಿರಿಯರು ಧಾನ್ಯ ತರಕಾರಿ ಬೆಳೆಯುತ್ತಿದ್ದರು. ಭೂಮಿಗೆ ನೀರಿಂಗಿಸುತ್ತಾ ಆಹಾರವನ್ನು ಅಂಗಳದಿಂದಲೇ ಪಡೆಯುತ್ತಿದ್ದರು. ಮಣ್ಣಿನ ಸವೆತವೂ ಇರಲಿಲ್ಲ. ಇಂದು ಅಂಗಳಕ್ಕೆ ಕಾಂಕ್ರೀಟ್ ಮತ್ತು ಸಿಮೆಂಟು ಹಾಸುತ್ತೇವೆ. ಆಹಾರ ಇದರ ಮೇಲೆ ಬೆಳೆಯದು. ನೀರಿಂಗದು. ಪಾಚಿ ಹುಟ್ಟಿದ  ನೆಲದ ಮೆಲೆ ನಡೆಯುವಾಗ ಜಾರಿ ಬಿದ್ದು ಕೈಕಾಲು ಮುರಿದುಕೊಳ್ಳುತ್ತೇವೆ. ಸಕಲಾಂಗರೂ ವಿಕಲಾಂಗರಾಗುತ್ತಾರೆ. ಪರಿಸರದ ಸ್ವರೂಪವನ್ನು ಬದಲಾಯಿಸಿದರೆ ವಿಕೋಪ ಕಟ್ಟಿಟ್ಟ ಬುತ್ತಿ.
ಬೃಹತ್ ಕಟ್ಟಡಗಳು, ಕೈಗಾರಿಕೆಗಳು, ವಾಹನಗಳು, ಇ-ಉಪಕರಣಗಳು, ಪ್ಲಾಸ್ಟಿಕ್, ರಾಸಾಯನಿಕಗಳು, ಕಿಟನಾಶಕಗಳು ಎಲ್ಲವೂ ಪರಿಸರ ನಾಶಕಗಳು. ಬಾಹ್ಯಾಕಾಶ, ಭೂಗುಣಗಳು ವಿಕೃತವಾಗಿ ಮಾನವನ ಬದುಕು ವಿಷ ವರ್ತುಲದೊಳಗೆ ಸಿಲುಕಿದೆ. ಈ ಅನಾಹುತಗಳೆಲ್ಲದರ ಜನಕ ಮಾನವ. 

ಪ್ರಕೃತಿ ವಿಕೋಪಗಳು ಜನ ಮತ್ತು ಜೀವ ಸಮುದಾಯದ ಮೇಲೆ ತೀವ್ರ ಹಾನಿಗಳನ್ನುಂಟು ಮಾಡುತ್ತವೆ. ಅಂಗವೈಕಲ್ಯಗಳು, ಜೀವ ಹಾನಿಗಳು, ಪರಿಸರ ಹಾನಿಗಳಿಗೆ ಕಾರಣವಾಗುತ್ತವೆ. ಆರೋಗ್ಯ,ಆಹಾರ, ಜೀವನ ಮಟ್ಟ, ಆರ್ಥಿಕತೆ ಇವೆಲ್ಲದರ ಮೇಲೂ ಪ್ರಾಕೃತಿಕ ವಿಕೋಪ ವಕ್ರದೃಷ್ಟಿ ಬೀರುತ್ತದೆ. ನಾಗರಿಕತೆಗೆ ಸೌಲಭ್ಯಗಳೆಲ್ಲವೂ ಅಗತ್ಯ. ಆದರೂ ಅತಿಯಾದ ಆಸೆ ನಮಗೆ ದುರ್ಗತಿ ತರುತ್ತಿದೆ. ಎಚ್ಚೆತ್ತುಕೊಳ್ಳೋಣ. ಅನಿವಾರ್ಯತೆ ಮೀರಿ ಪರಿಸರವನ್ನು ನಾಶ ಪಡಿಸದೆ, ಉಳಿಸುವ, ಬಲಗೊಳಿಸುವ ಪ್ರಯತ್ನ ಮಾಡೋಣ. ನಮಸ್ತೇ.
........ರಮೇಶ  ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 








Ads on article

Advertise in articles 1

advertising articles 2

Advertise under the article