ನಿಷ್ಪಾಪಿ ಸಸ್ಯಗಳು : ಸಂಚಿಕೆ - 77
Thursday, November 21, 2024
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 77
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಹೇಗಿದ್ದೀರಿ? ಶಾಲಾ ವಾರ್ಷಿಕೋತ್ಸವ, ಪ್ರವಾಸಗಳ ತಯಾರಿಯಲ್ಲಿ ನೀವು ಸ್ವಲ್ಪ ಮಟ್ಟಿಗೆ ತಲ್ಲೀನರಾಗಿರುವ ಕಾಲವಿದು ಅಲ್ಲವೇ? ನೀವು ಪ್ರವಾಸ ಹೋಗುವುದಿದ್ದರೆ ದಾರಿಯಲ್ಲಿ ಸಿಕ್ಕ ಗಿಡಮರಗಳೇ ಅಲ್ಲದೆ, ಒಂದಿಷ್ಟು ಬಳ್ಳಿಗಳ ಬಗೆಗೂ ಗಮನ ಹರಿಸಿರಿ.
ನಮ್ಮ ಬಾಲ್ಯಕಾಲದಲ್ಲಿ ಸಾಮಾನ್ಯವಾಗಿ ಎಲ್ಲೆಡೆಯೂ ಮುಳಿಹುಲ್ಲಿನ ಮಾಡು ಇರುವ ಮನೆಗಳಿದ್ದವು. ಈ ಮನೆ ತಯಾರಿಸಲು ಕಚ್ಚಾ ಸಾಮಗ್ರಿಗಳೇ ಸಾಕಿತ್ತು. ಆದರೆ ಅದನ್ನು ಜೋಡಿಸಿಕೊಳ್ಳಲು ಪರದಾಡುವ ಕಾಲ ಅದಾಗಿತ್ತು.
ಮಣ್ಣಿನ ಗೋಡೆಗೆ ಸಣ್ಣಪುಟ್ಡ ಕಿಟಕಿಗಳಾಕೃತಿಗಳಿದ್ದವು. ಮಾಡನ್ನು ಅಡಿಕೆ, ತೆಂಗು, ತಾಳೆಮರಗಳ ಗಟ್ಟಿ ಸಿಪ್ಪೆಗಳನ್ನು ಬೇಕಾದಂತೆ ಕತ್ತರಿಸಿ ಅಡ್ಡಕ್ಕೂಉದ್ದಕ್ಕೂ ಕಣ್ಣಳತೆಯಲ್ಲಿ ಜೋಡಿಸಿ ಕಟ್ಟುತ್ತಿದ್ದರು.. ಅದರ ಮೇಲೆ ನೀರಿಗೆ ಹಾಕಿ ಮೃದುಗೊಳಿಸಿದ ತೆಂಗಿನ ಮಡಲನ್ನು ಸುಂದರವಾಗಿ ಹೆಣೆದು ಒಂದರ ಮೇಲೊಂದು ಜೋಡಿಸಿ ಅಲ್ಲಲ್ಲಿ ಜಾರದಂತೆ ಕಟ್ಟುತ್ತಿದ್ದರು. ಇವೆಲ್ಲ ಪ್ರಕ್ರಿಯೆಗಳಾದ ಬಳಿಕ ಗುಡ್ಡದಿಂದ ತಂದು ಜೋಪಾನ ಮಾಡಿಟ್ಟ (ಮುಳಿ) ಹುಲ್ಲನ್ನು ಒಂದೇ ರೀತಿ ಜೋಡಿಸುತ್ತಾ ಜಾರದಂತೆ ಮತ್ತೆ ಅದರ ಮೇಲೆ ಬಿದಿರಿನ ಸಲಾಕೆಗಳನಿಟ್ಡು ಕಟ್ಟುತ್ತಾ ಗಟ್ಟಿಗೊಳಿಸುವರು. ಮಳೆನೀರು ಸೋರದಂತೆ ತಡೆಯಲು ನಾನಾ ರೀತಿಯ ಕಸರತ್ತು ನಡೆಸಿದರೂ ಮಳೆಯ ಜೊತೆ ಒಮ್ಮೊಮ್ಮೆ ರಭಸವಾಗಿ ಬೀಸುವ ಗಾಳಿ ಇಡೀ ಮಾಡನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿತ್ತು. ಅದಕ್ಕಾಗಿ ಮಾಡು ಸಂಪೂರ್ಣ ವಾದರೂ ಅದರ ಮೇಲೆ ತೆಂಗಿನ ಉದ್ದನೆಯ ಮಡಲುಗಳನ್ನು ಅತ್ತಿತ್ತ ಇಳಿಬಿಟ್ಟು ನೆತ್ತಿಯ ಭಾಗದಲ್ಲಿ ಕಟ್ಟುತ್ತಿದ್ದರು.
ಮಕ್ಕಳೇ , ಆಗಿನ್ನೂ ಕಬ್ಬಿಣದ ಮೊಳೆಗಳನ್ನು ತರಲೂ ಸಾಧ್ಯವಿರದ ಕಾಲ. ಇಡೀ ಮಾಡಿನಲ್ಲಿ ನೂರಾರು ಕಟ್ಟುಗಳನ್ನೇ ಹಾಕಬೇಕಿತ್ತು. ಕಟ್ಟು ಹಾಕಿದಲ್ಲಿ ಮಳೆನೀರು ಒಳನುಗ್ಗಬಾರದು. ತುಂಬಾ ನಾಜೂಕಾಗಿ ಈ ಕಾರ್ಯ ನಡೆಸಬೇಕಿತ್ತು. ಆಗ ಈ ಕಾರ್ಯಕ್ಕೆ ಸಹಾಯಕ್ಕೆ ಬರುತ್ತಿದ್ದ ಬಳ್ಳಿಯೆಂದರೆ ತುಳು ಭಾಷೆಯಲ್ಲಿ 'ಇಲ್ಲ್ ಬೂರು' ಅಥವಾ 'ಪೇರ್ ಬೂರು'. ಕನ್ನಡದಲ್ಲಿ ಮನೆ ಕಟ್ಟೋ ಬಳ್ಳಿ ಕೂಗಲ ಬಳ್ಳಿ ಪೆರು ಬಳ್ಳಿ , ಗೌರಿ ಬಳ್ಳಿ, ಕರೇ ಹಂಬು, ಕಲ್ಲು ಬಳ್ಳಿ, ಕುರ್ಲ ಬಳ್ಳಿ, ಮಲವಿ ಬಳ್ಳಿ ಎಂದೆಲ್ಲಾ ಕರೆಯಲ್ಪಟ್ಟರೆ ಸಂಸ್ಕೃತ ದಲ್ಲಿ ಶಾಮಲತಾ , ಆಂಗ್ಲ ಭಾಷೆಯಲ್ಲಿ ಬ್ಲ್ಯಾಕ್ ಕ್ತೀಪರ್ ಎಂದು ಅನ್ವರ್ಥವಾಗಿ ಕರೆಸಿಕೊಳ್ಳುತ್ತದೆ.
ಕರೀ ಹಂಬು ಎಂದು ಜನರಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಈ ನಿಷ್ಪಾಪಿ ಸಸ್ಯವು ಸುರುಳಿ ಬಳ್ಳಿಯಂತೆ ಬೆಳೆಯುವ ಒಂದು ಪೊದೆ ಸಸ್ಯ. ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ, ಚೀನಾ, ಭಾರತ ಗಳಿಗೆ ಸ್ಥಳೀಯ ಸಸ್ಯವಾಗಿರುವ ಈ ಬಳ್ಳಿಯ ಸಸ್ಯ ಶಾಸ್ತ್ರೀಯ ಹೆಸರು ಇಕ್ನೋಕಾರ್ಪಸ್ ಫ್ರೂಟೆಸೆನ್ಸ್ (Ichnocarpus frutescens). ಅಪೋಸಿನೇಸಿಯ (Apocynaceae) ಕುಟುಂಬದ ಹೂ ಬಿಡುವ ಸಸ್ಯಗಳಲ್ಲಿ ಇದೂ ಒಂದು.
ನಿತ್ಯಹರಿದ್ವರ್ಣದ ಈ ಕಂದು ಬಳ್ಳಿಯ ನಯವಾದ ಶಾಖೆಗಳು ದೀಪಾವಳಿಯ ಸಮಯದಲ್ಲಿ ಬಹು ಸುಂದರವಾದ ಹೂಗೊಂಚಲುಗಳಿಂದ ಶೃಂಗರಿಸಲ್ಪಟ್ಟಿರುತ್ತದೆ. ಬಾಲ್ಯದ ದಿನಗಳಲ್ಲಿ ಬಲಿಪಾಡ್ಯದಂದು ಬಲಿ ಚಕ್ರವರ್ತಿಯ ಸಂಕೇತವೆಂದು ಊರುವ ಸಪ್ತವರ್ಣಿಯ ಗೆಲ್ಲಿಗೆ ಇದೇ ಹೂವನ್ನು ಅಲಂಕಾರಕ್ಕೆಂದು ಹಾಕಿದರೆ, ಅದೇ ಹಬ್ಬದಲ್ಲಿ ಕೃಷಿಯುಪಕರಣಗಳಾದ ನೊಗನೇಗಿಲು, ಹಲಗೆ, ಹಾರೆ ಇತ್ಯಾದಿಗಳ ಅಲಂಕಾರಕ್ಕೂ ಹೂಗಳಿಂದ ತುಂಬಿದ ಈ ಬಳ್ಳಿಯನ್ನೇ ಕತ್ತರಿಸಿ ತಂದು ಅಲಂಕರಿಸುತ್ತಿದ್ದೆವು.
ಹತ್ತು ಮೀಟರ್ ಗಳಿಗಿಂತಲೂ ಹೆಚ್ಚು ಮೇಲೇರುವ ಕರೀ ಹಂಬು ಆರು ಸೆ.ಮೀ. ವ್ಯಾಸವಾಗಬಹುದಾದ ಬಳ್ಳಿಯೇ ಎಂದು ಹೇಳಲಾಗದ ಪೊದೆ ಸಸ್ಯ. ತೊಗಟೆ ಮೃದುವಾಗಿದ್ದು ಸುಲಭವಾಗಿ ತೆಗೆಯಬಹುದು. ಬಳ್ಳಿಯ ಎಲ್ಲಾ ಭಾಗದಲ್ಲೂ ಗೀರಿದರೆ ಕೆನೆವರ್ಣದ ದ್ರವ ಒಸರುತ್ತದೆ. ಕೈಗಳಿಗೆ ಅಂಟಂಟಾಗುತ್ತದೆ. ಎಲೆಗಳು ದೀರ್ಘವೃತ್ತವಾಗಿದ್ದು ತುದಿ ಮೊನಚಾಗಿರುತ್ತದೆ. ಎಲೆಗಳೂ ಕಂದು ಹಸಿರು ಬಣ್ಣದಲ್ಲಿದ್ದು ಎಲೆಗಳ ಕಂಕುಳಲ್ಲಿ ರೆಂಬೆಗಳ ತುದಿಗಳಲ್ಲಿ ಸಂಕೀರ್ಣ ಪುಷ್ಪಗುಚ್ಛದಲ್ಲಿ ಹೂಗಳು ಅರಳುತ್ತವೆ. ಪುಷ್ಪಪಾತ್ರೆಯಲ್ಲಿ ರೂಪುಗೊಳ್ಳುವ ಪುಟಾಣಿ ಹೂಗಳಿಗೆ ಅಚ್ಚ ಬಿಳಿ ವರ್ಣದ ಐದೆಸಳಿರುತ್ತದೆ. ಹಿತವಾದ ಪರಿಮಳ, ಒಂದಿಷ್ಟು ಮಧು ತುಂಬಿ ಕಾಡಿಗೆ ಹಬ್ಬವನ್ನುಂಟುಮಾಡುವ ಈ ಬಳ್ಳಿ ಆಗಸ್ಟ್ ನಿಂದ ಡಿಸೆಂಬರ್ ವರೆಗೆ ಮದುವಣಗಿತ್ತಿಯಾಗಿರುತ್ತದೆ. ಒಂದರ ಮೇಲೊಂದು ಲಂಬವಾಗಿ ಬೆಳೆಯುವ ಕಾಯಿ ಒಣಗಿ ಒಡೆದು ಬೀಜಪ್ಸಾರಗೊಳ್ಳುವಾಗ ರೇಷ್ಮೆಯಂತಹ ಸೂಕ್ಷ್ಮ ತಂತುಗಳಿರುತ್ತವೆ. ಹೂ, ಬಳ್ಳಿ, ಎಲೆಗಳ ಮೇಲೂ ಸೂಕ್ಷ್ಮವಾದ ಕೂದಲಿನ ರಚನೆಯಿದ್ದು ಮುಟ್ಟುವಾಗ ಸ್ವಲ್ಪ ಮಟ್ಡಿಗೆ ದೊರಗಾಗಿರುತ್ತದೆ.
ಮಕ್ಕಳೇ, ಈ ಕರೀ ಹಂಬು ಇಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಮೃದುವಾಗಿದ್ದು ಬೇಕಾದಂತೆ ಬಗ್ಗಿಸಲು ಸಾಧ್ಯವಾಗಿರುವುದು ಹಾಗೂ ಸಾಕಷ್ಟು ಉದ್ದವಾಗಿ ಬೆಳೆಯುವ ಗುಣದಿಂದಾಗಿ ಮನೆಗಳ ಛಾವಣಿಯ ನಿರ್ಮಾಣ ದಲ್ಲಿ ಬಹು ಮುಖ್ಯ ಪಾತ್ರವಹಿಸುವುದು ಮಾತ್ರವಲ್ಲದೇ ಅನ್ನ ಬಸಿಯಲು ಹಾಗೂ ಸಾಮಗ್ರಿಗಳನ್ನು ಹಾಕಿಡಲು ಬೇಕಾದ ಬುಟ್ಟಿಗಳನ್ನು ಹೆಣೆಯಲು ಬಳಸುತ್ತಾರೆ. ಮೀನಿನ ಬಲೆ ತಯಾರಿ, ಹಗ್ಗ ತಯಾರಿ, ಬೇಲಿ ಕಟ್ಟಲು ಕೂಡ ಇದು ಅತ್ಯಗತ್ಯವಾಗಿತ್ತು. ಇಂದು ಪರ್ಯಾಯವಾಗಿ ಹಲವು ಸಲಕರಣೆಗಳು ಲಭ್ಯವಿದ್ದು ಈ ಕರೀ ಹಂಬುವಿನ ಅಗತ್ಯವಿಲ್ಲವೆಂದಾದರೂ ಇದೊಂದು ವಿಶಿಷ್ಠವಾದ ಗಿಡಮೂಲಿಕೆಯಾಗಿದೆ!. ಇದರ ಬೇರಿನ ರುಚಿ ಸಿಹಿಯಾಗಿದ್ದು ಶಕ್ತಿ ವರ್ಧಕವಾಗಿದೆ. ಗಾಯವಾದಾಗ ರಕ್ತ ಸ್ರಾವ ತಡೆಯಬಲ್ಲದು. ಅಸ್ತಮಾ, ಸಂಧಿವಾತ, ಕಾಲರಾ, ಜ್ವರ, ಮೂತ್ರಪಿಂಡದ ಕಲ್ಲು ಹೋಗಲಾಡಿಸಲು, ಅಜೀರ್ಣ, ಚರ್ಮವ್ಯಾಧಿ, ಮಧುಮೇಹಗಳಿಗೆ ಪರಿಣಾಮಕಾರಿ ಔಷಧಿಯಾಗಿದೆ. ರಕ್ತ ಶುದ್ಧಿಕಾರಕ, ಗುಲ್ಮದ ಸಮಸ್ಯೆ ಗೆ ಪರಿಹಾರಕ. ಕಟ್ಟು ಹಾವು ಕಡಿತಕ್ಕೆ ಇತರ ಔಷಧಿಸಸ್ಯಗಳ ಜೊತೆ ಪಾರಂಪರಿಕವಾಗಿ ಬಳಸುತ್ತಿದ್ದರು. Saribadyasava , Linda tails, Vidaryadi lehya , Draksadi kashaya, Jatyadi ghrta ಇತ್ಯಾದಿ ಗಳ ತಯಾರಿಯಲ್ಲಿ ಈ ಕರಿಹಂಬು ಬಳ್ಳಿಯ ಪಾತ್ರವಿದೆ. ಬೇರನ್ನು ಹಸಿಯಾಗಿ ಹಾಗೂ ಒಣಗಿಸಿಯೂ ಮಾರಾಟ ಮಾಡುತ್ತಾರೆ. ಭಾರತದ ಹಲವೆಡೆ ಮಾರುಕಟ್ಟೆಗಳಲ್ಲಿದು ಕಾಣಸಿಗುತ್ತದೆ. ಈ ಸಸ್ಯದ ಸಾರ ಗಡ್ಡೆಗಳನ್ನು ಪ್ರತಿಬಂಧಿಸಬಲ್ಲದು ಹಾಗೂ ಯಕೃತ್ತಿನ ರಕ್ಷಣೆ ಮಾಡಬಲ್ಲದು ಎಂಬ ಸಂಶೋಧನೆಗಳು ಇದರ ಮಹತ್ವವನ್ನು ಎತ್ತಿ ತೋರಿದರೂ ಇಂದು ಈ ಬಳ್ಳಿಯೇ ಕಾಣೆಯಾಗಿದೆ!. ಗುಡ್ಡಬೆಟ್ಟಗಳ ಚಿಕ್ಕ ದೊಡ್ಡ ಮರಗಳನ್ನೇರಿ ಬೆಳೆಯುವ ಈ ಬಳ್ಳಿಯು ಸ್ವಾಭಾವಿಕ ವಾಗಿಯೇ ಬೆಳೆಯಲು ಸಾಧ್ಯವಲ್ಲದೆ ನಾವು ಮನೆಗಳಲ್ಲಿ ಬೆಳೆಸಲಾರೆವು. ರಾತ್ರಿ ಬೆಳಗಾಗುವಾಗ ಗುಡ್ಡ ಬೆಟ್ಟಗಳೇ ಕಣ್ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರಕೃತಿಯನ್ನುಳಿಸುವ ಬಗ್ಗೆ ಯೋಚನೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ ಅಲ್ಲವೇ?
ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************