-->
ಪ್ರವಾಸ ಲೇಖನ : ಪ್ರವಾಸದ ಸವಿ ನೆನಪು - ಬರಹ : ಅಭಿನವ್ ಪಿ ಎನ್,  6ನೇ ತರಗತಿ

ಪ್ರವಾಸ ಲೇಖನ : ಪ್ರವಾಸದ ಸವಿ ನೆನಪು - ಬರಹ : ಅಭಿನವ್ ಪಿ ಎನ್, 6ನೇ ತರಗತಿ

ಪ್ರವಾಸ ಲೇಖನ : ಪ್ರವಾಸದ ಸವಿ ನೆನಪು.
ಬರಹ : ಅಭಿನವ್ ಪಿ ಎನ್ 
6ನೇ ತರಗತಿ 
ಸ.ಉ.ಹಿ.ಪ್ರಾ.ಶಾಲೆ ಮುಂಡೂರು. 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


              ಸರಕಾರಿ ಪ್ರೌಢಶಾಲೆ ಸರ್ವೆ(ನನ್ನ ಅಮ್ಮನ ಶಾಲೆ) ಇಲ್ಲಿಂದ ಮೈಸೂರಿಗೆ ಎರಡು ದಿನದ ಪ್ರವಾಸ ಇದೆ ಎಂದು ಹೇಳಿದರು. ನನಗೂ ಹೋಗಬೇಕೆಂದು ಆಸೆಯಾದರೂ ಶಾಲೆಗೆ ರಜೆಯಾಗುತ್ತದೆ ಎಂಬ ಬೇಸರವೂ ಆಯಿತು. ತರಗತಿ ಶಿಕ್ಷಕರ ಒಪ್ಪಿಗೆ ಪಡೆದು ಪ್ರವಾಸಕ್ಕೆ ಹೋಗಲು ಸಿದ್ಧನಾದೆನು. 
         ಹೈಸ್ಕೂಲು ವಿದ್ಯಾರ್ಥಿಗಳ ಜೊತೆಗೆ ಪ್ರವಾಸ ಹೋಗುವ ಅವಕಾಶ ದೊರಕಿದಾಗ ನನಗೆ ಬಹಳ ಸಂತೋಷವಾಯಿತು. ಈ ವಿಚಾರವನ್ನು ಕೇಳಿದ ನಾನು ಪ್ರವಾಸಕ್ಕೆ ಹೋಗಲು ತಯಾರಾದೆನು. ನವಂಬರ್ 15 ಬಂದೇ ಬಿಟ್ಟಿತು. ಅಂದು ನಾನು ಬೆಳಿಗ್ಗೆ ಬೇಗನೆ ಎದ್ದು ತಯಾರಾದೆನು. ಅಮ್ಮನ ಜೊತೆ ಪ್ರವಾಸಕ್ಕೆ ಹೋಗಲು ಸಿದ್ಧನಾದೆನು. ಅಮ್ಮನ ಶಾಲೆ ಜಿಎಚ್ಎಸ್ ಸರ್ವೆಗೆ 4:00 ಗಂಟೆಗೆ ತಲುಪಿದೆವು. ಅಷ್ಟು ಹೊತ್ತಿಗೆ ಅಲ್ಲಿ ಎಲ್ಲಾ ವಿದ್ಯಾರ್ಥಿಗಳು ಬಂದು ಪ್ರವಾಸಕ್ಕೆ ತಯಾರಾಗಿದ್ದರು. ಎಲ್ಲಾ ಶಿಕ್ಷಕರು ಸಿದ್ಧರಾಗಿದ್ದರು. ದೇವರನ್ನ ಪ್ರಾರ್ಥಿಸಿ ಬಸ್ಸನ್ನ ಹತ್ತಿ ಪ್ರವಾಸ ಹೊರಟೆವು. ಸುಮಾರು 10 ಗಂಟೆಯ ಹೊತ್ತಿಗೆ ನಮ್ಮ ಮೊದಲ ಭೇಟಿಯಾಗಿದ್ದ ನಂಜನಗೂಡು ನಂಜುಂಡೇಶ್ವರ ದೇವಸ್ಥಾನಕ್ಕೆ ತಲುಪಿದೆವು. ಅಂದು ಕಾರ್ತಿಕ ಹುಣ್ಣಿಮೆಯಾಗಿದ್ದರಿಂದ ಅಲ್ಲಿ ಜನಸಾಗರವೋ ಸಾಗರ. ಹೇಗೋ ಹರಸಾಹಸ ಮಾಡಿ ದೇವಸ್ಥಾನದ ಒಳ ಪ್ರವೇಶಿಸಿದೆವು. ನಂಜುಂಡೇಶ್ವರನನ್ನು ಪ್ರಾರ್ಥಿಸಿ, ಅಲ್ಲಿಂದ ಹೊರಬಂದು ಸವಿ ನೆನಪಿಗಾಗಿ ಛಾಯಾಚಿತ್ರವನ್ನು ತೆಗೆದುಕೊಂಡೆವು .
       ಅಲ್ಲಿಂದ ನಮ್ಮ ಮುಂದಿನ ಪ್ರಯಾಣ ತಲಕಾಡಿನತ್ತ ಆಗಿತ್ತು. ತಲಕಾಡಿನಲ್ಲಿ ಪಂಚಲಿಂಗಗಳ ದೇವಸ್ಥಾನ. ಮೊದಲು ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಹೋದೆವು. ಅಲ್ಲಿನ ಗೈಡ್ ನಮಗೆ ಆ ದೇವಸ್ಥಾನದ ಇತಿಹಾಸವನ್ನು ತಿಳಿಸಿದರು. ಅದರ ಬಗ್ಗೆ ಸವಿವರಣೆಯನ್ನು ನೀಡಿದರು. ಅದನ್ನೆಲ್ಲ ನೋಡಿಕೊಂಡು ಮುಂದೆ ತಲಕಾಡು ಹೇಗೆ ಆಯ್ತು ಎಂಬುದನ್ನು ತಿಳಿಸಿ ತಲಾ ಮತ್ತು ಕಾಡು ಇವರ ಮೂರ್ತಿಯನ್ನು ತೋರಿಸಿದರು. ಅಲ್ಲಿಂದ ಮರಳಿನಲ್ಲಿ ಪ್ರಯಾಣ ಆರಂಭವಾಯಿತು. ಬಹಳ ವಿಶೇಷವಾದಂತಹ ಅನುಭವ. ಆ ಮರಳು ನಮ್ಮಲ್ಲಿರುವ ಮರಳಿನಂತಲ್ಲ. ಬಹಳ ಸಣ್ಣ ಸಣ್ಣ ಕಣಗಳಿಂದ ಕೂಡಿದ್ದು ನಡೆಯಲು ತುಂಬಾ ಮೃದುವಾಗುತ್ತಿತ್ತು. ಆದರೆ ಸ್ವಲ್ಪ ನಡೆದಾಗ ಚಪ್ಪಲು ಜಾರಲು ಆರಂಭಿಸಿತು. ಹಾಗಾಗಿ ಸ್ವಲ್ಪ ಹೊತ್ತು ಚಪ್ಪಲನ್ನ ಕೈಯಲ್ಲಿ ಹಿಡಿದುಕೊಂಡು ನಡೆದುಕೊಂಡು ಹೋದೆವು. ಅದು ಇನ್ನೊಂದು ರೀತಿಯ ಖುಷಿಯನ್ನ ಕೊಡುತ್ತಿತ್ತು. ಗೆಳೆಯರ ಜೊತೆ ಬೇಗ ಹೋಗಬೇಕೆಂಬ ಆತುರ ನನ್ನಲ್ಲಿತ್ತು. ಹಾಗಾಗಿ ಮರಳಿನಲ್ಲಿ ಓಡುವ ಆಟವನ್ನು ಆರಂಭಿಸಿದೆವು. ಓಡುತ್ತಾ ಓಡುತ್ತಾ ಬಹಳ ಬೇಗ ನಾವು ಪಾತಾಳೇಶ್ವರ ದೇವಸ್ಥಾನವನ್ನು ತಲುಪಿದೆವು. ಅದು ಹೆಸರಿಗೆ ಸರಿ ಹೊಂದುವ ಹಾಗೆ ಒಂದು ಪಾತಾಳದಲ್ಲೇ ಇದ್ದಿತ್ತು. ಅಲ್ಲಿಯೂ ನಮಗೆ ಅದರ ಇತಿಹಾಸದ ಬಗ್ಗೆ ತಿಳಿಸಿದರು. ಪಾತಾಳೇಶ್ವರ ದರ್ಶನ ಮಾಡಿ ನಂತರ ಮರಳಿನಲ್ಲಿ ಪ್ರಯಾಣ ಮುಂದುವರಿಸಿದೆವು. ಹಾಡನ್ನು ಹೇಳುತ್ತಾ ಮೆದುಳಿಗೆ ಮೇವಿನ ಪ್ರಶ್ನೆಗಳನ್ನು ಕೇಳುತ್ತಾ, ಮುಂದೆ ಮುಂದೆ ಸಾಗಿದೆವು. ನಂತರ ನಾವು ಮರುಳೇಶ್ವರ ದೇವಸ್ಥಾನವನ್ನ ತಲುಪಿದೆವು. ಅಲ್ಲಿಯೂ ದೇವರ ದರ್ಶನವನ್ನು ಮಾಡಿ ನಂತರ ಆರ್ಕೇಶ್ವರ ದೇವಸ್ಥಾನಕ್ಕೆ ಬಂದೆವು. ಅಲ್ಲಿಂದ ವಿಷ್ಣುವರ್ಧನನು ಜಯಿಸಿದಂತಹ ತಲಕಾಡುಗೊಂಡ ಎಂಬ ಬಿರುದನ್ನು ಪಡೆದಿರುವಂತಹ ಕೀರ್ತಿನಾರಾಯಣ ದೇವಸ್ಥಾನಕ್ಕೆ ಬಂದೆವು. ಇದು ತಲಕಾಡಿನ ಕೊನೆಯ ಐದನೆಯ ದೇವಸ್ಥಾನವಾಗಿತ್ತು. ನಡೆದು ನಡೆದು ಸಾಕಾಗಿದ್ದ ನಮಗೆ ನಮ್ಮ ಹೊಟ್ಟೆ ಚರುಗುಟ್ಟಲು ಆರಂಭಿಸಿತು. ಹಾಗಾಗಿ ಅಲ್ಲಿಯೇ ಇದ್ದಂತಹ ಪುಟ್ಟಕ್ಕನ ಹೋಟೆಲ್ ಗೆ ಹೋದೆವು. ಬಿಸಿಬಿಸಿಯಾದ ಸವಿರುಚಿಯಾದ ಊಟ ಮಾಡಿದೆವು. ನಂತರ ಅಲ್ಲಿ ಕೆಲವು ಬೇಕಾದಂತಹ ವಸ್ತುಗಳನ್ನು ತೆಗೆದುಕೊಂಡು ಬಸ್ಸನ್ನ ಹತ್ತಿದೆವು .
        ನಂತರ ನಮ್ಮೆಲ್ಲರ ನಿರೀಕ್ಷೆಯ ಸ್ಥಳವಾಗಿದ್ದ ಕೆ.ಆರ್‌.ಎಸ್.ಗೆ ಹೊರಟೆವು. ಬಹಳ ಸುಂದರವಾದಂತಹ ಪ್ರದೇಶ ಕೆ.ಆರ್‌.ಎಸ್. ಇದು ನನ್ನ ಎರಡನೆಯ ಭೇಟಿಯಾಗಿದ್ದರೂ ನನ್ನ ಮೊದಲನೆಯ ಪ್ರವಾಸದ ನೆನಪನ್ನ ಮೆಲುಕು ಹಾಕಲು ಅನುಕೂಲವಾಯಿತು. ಗೆಳೆಯರ ಜೊತೆಗೆ ಛಾಯಾಚಿತ್ರವನ್ನು ತೆಗೆದುಕೊಂಡನು. ನೀರಿನ ಸಾಗರವನ್ನು ನೋಡಿ ನೋಡಿ ಕಣ್ತುಂಬಿಕೊಂಡೆನು. ಅದಾದ ನಂತರ ಕೆ .ಆರ್ .ಎಸ್ . ಉದ್ಯಾನವನದ ಒಳಗೆ ಹೋದೆವು. ಅಷ್ಟು ಹೊತ್ತಿಗಾಗಲೆ ಕತ್ತಲು ಆವರಿಸಿತ್ತು. ನಸು ಬೆಳಕಿನಲ್ಲಿ ಚಂದದ ಉದ್ಯಾನವನವನ್ನು ನೋಡಿದೆವು. ಆಗ ಜೋರಾಗಿ ಸಿಡಿಲು ಗುಡುಗಿನಿಂದ ಮಳೆ ಆರಂಭವಾಗತೊಡಗಿತು. ಮಳೆ ನಿಲ್ಲುತ್ತದೋ ಏನು ಅಂತ ಹೇಳಿ ಸ್ವಲ್ಪ ಹೊತ್ತು ಕಾದೆವು. ಆದರೆ ಮಳೆ ನಿಲ್ಲಲೇ ಇಲ್ಲ. ಜೋರು ಜೋರಾಗಿ ಮಳೆ ಬರಲು ಆರಂಭಿಸಿತು.
         ನಂತರ ನಾವಲ್ಲಿಂದ ಹೊರಟೆವು. ರಾತ್ರಿ ಮೈಸೂರಿನ ಬಿ .ಆರ್. ಸಿ .ಯನ್ನು ತಲುಪಿದೆವು. ಎಲ್ಲರೂ ಸ್ನಾನ ಮಾಡಲು ಹೊರಟರು. ಆದರೆ ತುಂಬಾ ಚಳಿ ಇದ್ದುದರಿಂದ ಸುಮಾರು 7 ಕಿ.ಮೀ ರಷ್ಟು ದೂರ ಪ್ರಯಾಣ ಬೆಳೆಸಿ ಹಿಂದಿ ಮೇಡಂ ನ ಸಂಬಂಧಿಕರ ಮನೆಯಲ್ಲಿ ಬಿಸಿ ನೀರು ಸ್ನಾನ ಮಾಡಿಕೊಂಡು ಬಂದದ್ದನ್ನು ಮಾತ್ರ ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ. ಆಮೇಲೆ ವಾಪಸ್ಸು ಬಂದು ರಾತ್ರಿಯ ಊಟವನ್ನು ಮಾಡಿ ನಿದ್ರೆಗೆ ಜಾರಿದೆವು. 
         ಬೆಳಿಗ್ಗೆ ಬೇಗನೆ ಏಳಬೇಕೆಂದು ಸೂಚನೆಯನ್ನು ಕೊಟ್ಟಿದ್ದರು. ಹಾಗಾಗಿ ಬೆಳಿಗ್ಗೆ ಬೇಗನೇ ಎದ್ದು ನಮ್ಮ ನಿತ್ಯ ಕರ್ಮಗಳನ್ನ ಮುಗಿಸಿ 5:00 ಗಂಟೆಗೆ ಬಸ್ಸನ್ನ ಹತ್ತಿದೆವು. ಆ ಮುಸುಕಿನ ಮುಂಜಾವಿನಲ್ಲಿ ಚಾಮುಂಡಿ ಬೆಟ್ಟವನ್ನು ನೋಡುವುದೇ ಚೆಂದ. ಎಲ್ಲರೂ ಚಾಮುಂಡಿ ಬೆಟ್ಟದತ್ತ ಧಾವಿಸಿದೆವು. ಚಾಮುಂಡಿ ಬೆಟ್ಟದಲ್ಲಿ ದೇವಿಯ ದರ್ಶನಕ್ಕಾಗಿ ಸಾಲಾಗಿ ನಿಂತೆವು. ನಂತರ ದೇವಿಯ ದರ್ಶನವನ್ನ ಮಾಡಿ ಹೊರಗಡೆ ಬಂದೆವು. ಅಲ್ಲಿರುವಂತಹ ಅಂಗಡಿಗೆ ಹೋಗಲು ನಮಗೆ ಅವಕಾಶವನ್ನು ನೀಡಿದರು. ಬಹಳಷ್ಟು ಸಂತೋಷದಿಂದ ಎಲ್ಲರೂ ತಮಗೆ ಬೇಕಾದಂತಹ ವಸ್ತುಗಳನ್ನು , ಅಣ್ಣ ತಮ್ಮಂದಿರಿಗೆ ಬೇಕಾದಂತಹ ವಸ್ತುಗಳನ್ನು ತೆಗೆದುಕೊಂಡು ಮೈಸೂರಿನ ಸವಿ ನೆನಪಿಗಾಗಿ ಕೆಲವೊಂದು ವಸ್ತುಗಳನ್ನು ತೆಗೆದುಕೊಂಡು ಅಲ್ಲಿಂದ ಬೆಳಗಿನ ತಿಂಡಿಗಾಗಿ ಹೊರಟೆವು .
          ಬೆಳಗಿನ ಉಪಹಾರವನ್ನು ಮುಗಿಸಿ ಮೈಸೂರು ಅರಮನೆಯತ್ತ ಧಾವಿಸಿದೆವು. ಇಲ್ಲಿಯೂ ಜನಸಾಗರವೋ ಸಾಗರ. ಮೈಸೂರು ಅರಮನೆಯನ್ನು ನೋಡಿದೆವು. ರಾಜರ ಬಾಲ್ಯದ ಫೋಟೋಗಳು ನಂತರ ಅವರು ಉಪಯೋಗಿಸಿದಂತಹ ಸಿಂಹಾಸನಗಳು ಹಳೆಯ ಕಾಲದ ನಾಣ್ಯಗಳು ಚಿನ್ನದ ಅಂಬಾರಿ ಇವೆಲ್ಲವನ್ನ ನೋಡಿಕೊಂಡು ಅರಮನೆಯಲ್ಲಿರುವಂತಹ ಸೂಕ್ಷ್ಮ ಕೆತ್ತನೆಗಳನ್ನ ವೀಕ್ಷಿಸಿಕೊಂಡು ಅಲ್ಲಿಂದ ಹೊರ ಬಂದೆವು.
        ನಂತರ ನಮ್ಮೆಲ್ಲರ ಬಹು ನೆಚ್ಚಿನ ಸ್ಥಳ ಜಿ ಆರ್ ಎಸ್ ಫ್ಯಾಂಟಸಿ ಪಾರ್ಕ್ ಗೆ ಹೋಗಲು ತಯಾರಾದೆವು. ಬಹಳಷ್ಟು ಖುಷಿಯಿಂದ ಬಸ್ಸಿನಲ್ಲಿ ಹಾಡನ್ನು ಹಾಡುತ್ತಾ ಕುಣಿಯುತ್ತಾ ಜಿ .ಆರ್. ಎಸ್. ಫ್ಯಾಂಟಸಿ ಪಾರ್ಕ್ ತಲುಪಿದೆವು. ಅಲ್ಲಿ ನಮ್ಮ ವಸ್ತ್ರವನ್ನ ಬದಲಾಯಿಸಿ ವಾಟರ್ ಪಾರ್ಕ್ ನಲ್ಲಿ ಆಡಲು ಸಿದ್ಧರಾದೆವು. ನಮ್ಮನ್ನ ಸಾಲಾಗಿ ಕರೆದುಕೊಂಡು ಒಳಗೆ ಹೋದರು. ಅಲ್ಲಿ ಎಲ್ಲರಿಗೂ ಕುಡಿಯಲು ಒಂದೊಂದು ಜ್ಯೂಸನ್ನು ಕೊಟ್ಟರು. ನಂತರ ತ್ರೀಡಿ ಫಿಲಂ ನೋಡಲಿಕ್ಕೆ ಕರೆದುಕೊಂಡು ಹೋದರು. ಇದು ಒಂದು ಹೊಸ ಅನುಭವ ಇದನ್ನು ನಾವು ಅನುಭವಿಸಲೇಬೇಕು ಹೇಳಲು ಪದಗಳೇ ಸಾಕಾಗುವುದಿಲ್ಲ. ಮೊದಲು ನಮಗೆ ತ್ರೀಡಿ ಕನ್ನಡಕವನ್ನು ಹಾಕಿಕೊಂಡು ನೋಡಿದಾಗ ಆಗುವಂತಹ ಅನುಭವ ಹೇಳಲು ಸಾಧ್ಯವಿಲ್ಲ, ಇದನ್ನು ನೋಡಿ ಆದ ಮೇಲೆ ಅಲ್ಲಿರುವಂತಹ ಕ್ರೇಝಿ ಸ್ಪಿನ್, ಟೈಟಾನಿಕ್ ಶಿಪ್, ಜ್ವಾಯಿಂಟ್ ವೀಲ್ ಗಳಲ್ಲಿ ನಮಗೆ ಬೇಕಾಗುವಷ್ಟು ಸಲ ಕುಳಿತುಕೊಂಡು ಸಂತೋಷಪಟ್ಟೆವು. ಅದಾದ ಬಳಿಕ ನಮ್ಮನ್ನು ಊಟಕ್ಕೆ ಕರೆದರು. ಬಹಳ ಶುಚಿ ರುಚಿಯಾದ ಊಟವನ್ನು ಮಾಡಿ ನಂತರ ವಾಟರ್ ಪಾರ್ಕ್ ನಲ್ಲಿ ಆಡಲು ಧಾವಿಸಿದೆವು. ಇದರಲ್ಲಿ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಆದರೆ ನಾನು ಬಹಳ ಚಿಕ್ಕವನಾದ ಕಾರಣ ಕೆಲವೊಂದರಲ್ಲಿ ಆಡಲು ಅವಕಾಶ ಇರಲಿಲ್ಲ. ಮಿನಿಮಮ್ 45 ಕೆಜಿಗಿಂತ ಮೇಲೆ ಇದ್ದವರಿಗೆ ಮಾತ್ರ ಆಡಲು ಅವಕಾಶವಿತ್ತು. ಹಾಗಾಗಿ ನನಗೆ ಸ್ವಲ್ಪ ಬೇಸರವಾಯಿತು. ಆ ಆಟಗಳಿಂದ ವಂಚಿತರಾಗಿ ಈ ಕಡೆಗೆ ಬಂದೆವು. ಉಳಿದ ಎಲ್ಲಾ ನೀರಿನ ಆಟಗಳಲ್ಲಿ ಸಂಜೆತನಕ ಆಡಿದೆವು. ನಂತರ ನಮ್ಮನೆಲ್ಲರನ್ನು ವಾಟರ್ ಮ್ಯೂಸಿಕ್ ನ ಹತ್ತಿರ ಕರೆದುಕೊಂಡು ಬಂದರು. ಅಲ್ಲಿ ಕೊನೆಯ ಡ್ಯಾನ್ಸ್ ಮಾಡಿ ಅಲ್ಲಿಂದ ಹೊರಟೆವು. ನಂತರ ಫ್ರೆಶ್ ಅಪ್ ಆಗಿ ಅಲ್ಲಿ ಒಂದು ಮೈಂಡ್ ಶೋ ಇತ್ತು. ಅಲ್ಲಿಗೆ ಹೋದೆವು. ಅದನ್ನು ನೋಡ್ತಾ ಇದ್ದ ಹಾಗೆ ನಮಗೆ ಐಸ್ ಕ್ರೀಮ ನ್ನು ಕೊಟ್ಟರು. ಆ ಸರ್ಕಸ ನ್ನು ನೋಡಿ ಐಸ್ ಕ್ರೀಮ ನ್ನು ಸವಿದು ಆಮೇಲೆ ಅಲ್ಲಿಂದ ಬಸ್ ಹತ್ತಿದೆವು. ಬಸ್ಸಿನಲ್ಲಿ ಬೇಕಾದಷ್ಟು ಕುಣಿದು ಕುಪ್ಪಳಿಸಿ ಹರಟೆ ಹೊಡೆದೆವು. ಸಂತೋಷ ಪಟ್ಟೆವು.
          ನಂತರ ಪಿರಿಯಾಪಟ್ಟಣದಲ್ಲಿ ಊಟವನ್ನು ಮುಗಿಸಿ ಸುಮಾರು 12 ಗಂಟೆಯಷ್ಟು ಹೊತ್ತಿಗೆ ಶಾಲೆಗೆ ತಲುಪಿದೆವು. ಎಲ್ಲರ ಪೋಷಕರು ಬಂದಿದ್ದರಿಂದ ಎಲ್ಲರೂ ಅವರವರ ಮನೆಯನ್ನ ತಲುಪಿದರು. ಈಗಲೂ ನನ್ನಲ್ಲಿ ಈ ಪ್ರವಾಸದ ಸ್ಥಳಗಳು ಕಣ್ಣ ಮುಂದೆ ಬರುವಂತಾಗಿದೆ. ಅಪಾರವಾದ ಜ್ಞಾನವನ್ನು ಗಳಿಸಿದೆ. ಅಣ್ಣ, ಅಕ್ಕ ನವರ ಜೊತೆ ಬೆರೆಯಲು ಅವಕಾಶ ದೊರೆಯಿತು. ಎಂದೆದಿಗೂ ಮರೆಯಲಾಗದ ಅನುಭವ. ಈ ಪ್ರವಾಸ ನನಗೆ ಬಹಳಷ್ಟು ಖುಷಿಯನ್ನು ಕೊಟ್ಟಿದೆ. ಈ ಖುಷಿಗೆ ಕಾರಣರಾದ ನನ್ನ ತಂದೆ ತಾಯಿಗೆ ಮೊದಲು ವಂದಿಸುತ್ತಿದ್ದೇನೆ. ಹಾಗೆಯೇ ಅವಕಾಶ ನೀಡಿದಂತಹ ಸರ್ವೇ ಶಾಲೆಯ ಮುಖ್ಯೋಪಾಧ್ಯಾಯರಾಗಿರುವಂತಹ ಉಮಾವತಿ ಮೇಡಂ ಗೂ ವಂದನೆಗಳನ್ನ ಸಲ್ಲಿಸುತ್ತಿದ್ದೇನೆ. ಹಾಗೆಯೇ ಪ್ರವಾಸದಲ್ಲಿ ನನಗೆ ಪ್ರೋತ್ಸಾಹ ನೀಡುತ್ತಿದ್ದಂತಹ ಸಹದೇವ ಸರ್, ಜಾರ್ಜ್ ಸರ್ , ಉಮಾಶಂಕರ್ ಸರ್ , ವೆಂಕಟೇಶ್ ಸರ್ , ಉಮೇರ ತಬಸಂ ಮೇಡಂ , ಕಾಂಚನ ಮೇಡಂ, ಜ್ಯೋತಿ ಮೇಡಂ, ಅಭಿಜ್ಞಾ ಅಕ್ಕ ಇವರಿಗೆಲ್ಲರಿಗೂ ಮನದಾಳದ ಕೃತಜ್ಞತೆಗಳನ್ನು ಸಲ್ಲಿಸುತ್ತಾ ನನ್ನ ಈ ಪ್ರವಾಸ ಕಥನವನ್ನು ಮುಕ್ತಾಯಗೊಳಿಸುತ್ತಿದ್ದೇನೆ.
....................................... ಅಭಿನವ್ ಪಿ ಎನ್ 
6ನೇ ತರಗತಿ 
ಸ.ಉ.ಹಿ.ಪ್ರಾ.ಶಾಲೆ ಮುಂಡೂರು. 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article