-->
ಜಗಲಿ ಕಟ್ಟೆ : ಸಂಚಿಕೆ - 67

ಜಗಲಿ ಕಟ್ಟೆ : ಸಂಚಿಕೆ - 67

ಜಗಲಿ ಕಟ್ಟೆ : ಸಂಚಿಕೆ - 67
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


ಮಕ್ಕಳ ಜಗಲಿ ನಾಲ್ಕನೇ ವರ್ಷದ ಸಂಭ್ರಮವನ್ನು ರಾಜ್ಯಮಟ್ಟದ ಕಥಾ ಸಿರಿ - ಕವನ ಸಿರಿ ಸ್ಪರ್ಧೆ ಆಯೋಜಿಸುವ ಮೂಲಕ ಆಚರಿಸಿಕೊಂಡಿದೆ. ರಾಜ್ಯದ ವಿವಿಧ ಭಾಗಗಳಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಪ್ರತಿಯೊಬ್ಬರಿಗೂ ಮಾಹಿತಿಗಳನ್ನು ಹಂಚಿ ವಿವರಿಸಿ ತಿಳಿಸಿ ಈ ಯಶಸ್ಸಿನ ಹಿಂದೆ ದುಡಿದ ಮಕ್ಕಳ ಜಗಲಿಯ ಬಳಗದ ನನ್ನ ಸ್ನೇಹಿತರಿಗೆ, ಜಗಲಿಯ ಎಲ್ಲಾ ಶಿಕ್ಷಕ ಹಾಗೂ ಪೋಷಕ ಬಂಧುಗಳಿಗೆ ಪ್ರೀತಿಪೂರ್ವಕ ನಮನಗಳು.
        ಪ್ರಶಸ್ತಿ ವಿಜೇತರು ಹಾಗೂ ಮೆಚ್ಚುಗೆ ಬಹುಮಾನ ಪಡೆದ ಜಗಲಿಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಬರೆದು ಕಳುಹಿಸಿದ್ದಾರೆ. ಈಗಾಗಲೇ ಎರಡು ಸಂಚಿಕೆಯಲ್ಲಿ ಪ್ರಕಟಗೊಳಿಸಿದ್ದೇವೆ. ಇನ್ನಷ್ಟು ವಿದ್ಯಾರ್ಥಿಗಳ ಅನಿಸಿಕೆಗಳು ಮುಂದಿನ ಸಂಚಿಕೆಯಲ್ಲಿ ಬರಲಿದೆ. ಈ ಎಲ್ಲಾ ಅನಿಸಿಕೆಗಳ ಹಿಂದೆ ಮಕ್ಕಳಲ್ಲಿ ಹುದುಗಿರುವ ಸಂತಸವನ್ನು ಕಂಡರೆ ತುಂಬಾ ಖುಷಿ ಅನಿಸುತ್ತದೆ. ಮಹಾಮಾರಿ ಕೋವಿಡ್ ಸಮಯದಲ್ಲಿ ಎಲ್ಲರ ಸಹಕಾರದಿಂದ ಹುಟ್ಟು ಪಡೆದ ಮಕ್ಕಳ ಜಗಲಿಯ ಸಾರ್ಥಕತೆ ಇಲ್ಲಿ ಕಾಣುತ್ತದೆ. ದುಃಖ ತಪ್ತ ದಿನಗಳಲ್ಲಿ ಋಣಾತ್ಮಕ ಮನಸ್ಸುಗಳನ್ನು ಧನಾತ್ಮಕ ಚಿಂತನೆಗಳೆಡೆಗೆ ಕೊಂಡೊಯ್ಯುವ ಪ್ರಯತ್ನಕ್ಕೆ ಮಕ್ಕಳ ಜಗಲಿ ನಾಂದಿ ಆಯಿತು ಎಂದರೆ ತಪ್ಪಾಗಲಾರದು.
       ಮಕ್ಕಳ ಜಗಲಿಯ ಆರಂಭದ ದಿನಗಳಲ್ಲಿ ಸರಿಯೋ ತಪ್ಪು ಗೀಚಿ ತಿದ್ದಿ ಬರೆದು ಕಳಿಸುತಿದ್ದ ವಿದ್ಯಾರ್ಥಿಗಳೀಗ ಉತ್ತಮ ಬರಹಗಾರರ ಲಕ್ಷಣಗಳನ್ನು ತೋರಿಸುತ್ತಿರುವುದು ಉತ್ತಮ ಸಂಕೇತವಾಗಿದೆ. ಅಭಿಮಾನದಿಂದ, ಪ್ರೀತಿಯಿಂದ ಬರೆದು ಕಳಿಸುತ್ತಿದ್ದ ವಿದ್ಯಾರ್ಥಿಗಳ ಬರಹಗಳನ್ನು ತಿದ್ದಿ ಪ್ರಕಟಿಸುತ್ತಿದ್ದ ಕಾರಣಕ್ಕೆ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿರಬಹುದೆಂದು ನಂಬಿರುತ್ತೇವೆ. ಪ್ರತಿ ಸಂದರ್ಭದಲ್ಲಿ ನಾವು ಆಯೋಜಿಸುತ್ತಿದ್ದ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವಂತೆ ಪ್ರೇರಣೆ ನೀಡುತ್ತಿದ್ದೆವು. ಅಕ್ಕನ ಪತ್ರ, ಪರಿಸರದ ಕುರಿತಾಗಿ, ಶಿಕ್ಷಕರ ಬಗೆಗಿನ ಕುರಿತಾಗಿ ಅನಿಸಿಕೆಗಳು ಹೀಗೆ ಅನೇಕ ಬರವಣಿಗೆಯ ಕೌಶಲ್ಯಕ್ಕೆ ಒತ್ತು ನೀಡುವ ಯೋಜನೆಗಳನ್ನು ಪ್ರಕಟಿಸುತ್ತಿದ್ದುದರಿಂದ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಲು ಅನುಕೂಲವಾಗುತಿತ್ತು. ಇಲ್ಲಿರುವ ಒಟ್ಟು ಉದ್ದೇಶ ಸಾಹಿತ್ಯಾಸಕ್ತ ವಿದ್ಯಾರ್ಥಿಗಳನ್ನು ಬೆಳೆಸುವುದಾಗಿದೆ.
       ನವೆಂಬರ್ 14ರಂದು ಮಕ್ಕಳ ಜಗಲಿಯ ಮೊದಲ ಹುಟ್ಟುಹಬ್ಬಕ್ಕೆ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದೆವು. ಅದೃಷ್ಟವಶಾತ್ ಎರಡನೇ ಹುಟ್ಟುಹಬ್ಬಕ್ಕೆ ಆಕಸ್ಮಿಕವಾಗಿ ರಾಜ್ಯಮಟ್ಟದ ಕಥಾ ಸಿರಿ ಹಾಗೂ ಕವನ ಸಿರಿ ಸ್ಪರ್ಧೆಯನ್ನು ಆಯೋಜಿಸುವ ಸಂದರ್ಭ ಒದಗಿ ಬಂತು. ದೈವೇಚ್ಛೆಯಂತೆ ಎರಡೂ ರೀತಿಯ ಸ್ಪರ್ಧೆಗಳು ನಿಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಸಂತಸದ ವಿಚಾರ.
       ಎರಡೂ ರೀತಿಯ ಸ್ಪರ್ಧಿಗಳಲ್ಲಿಯೂ ಕೂಡ ಪ್ರಥಮ ದ್ವಿತೀಯ ತೃತೀಯ ಸ್ಥಾನಗಳಾಗಿ ಪ್ರಶಸ್ತಿಗಳನ್ನು ವಿಂಗಡಿಸಿಕೊಂಡಿಲ್ಲ. ಬದಲಾಗಿ ಯಶಸ್ಸಿನ ಸಾಧನೆಗಾಗಿ ಸಮಾನ ಪ್ರಶಸ್ತಿಗಳನ್ನು ನೀಡುತ್ತಿದ್ದೇವೆ. ಒಂದು ವಿಭಾಗದಲ್ಲಿ ಒಂದು ಬಾರಿ ಪ್ರಶಸ್ತಿಯನ್ನು ಸ್ವೀಕರಿಸಿಕೊಂಡ ವಿದ್ಯಾರ್ಥಿಗಳು ಮತ್ತೊಂದು ಬಾರಿ ಅದೇ ಪ್ರಶಸ್ತಿಯನ್ನು ಸ್ವೀಕರಿಸಲು ಅವಕಾಶಗಳಿರುವುದಿಲ್ಲ. ಈ ಒಂದು ನಿಯಮದ ಕಾರಣದಿಂದ ಪ್ರತಿಭಾವಂತ, ಪ್ರಯತ್ನ ಶೀಲ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಈ ಪ್ರಶಸ್ತಿಯನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ತನ್ನ ನಿರಂತರ ಭಾಗವಹಿಸುವಿಕೆ, ಅವಿಶ್ರಾಂತ ಸಾಧನೆಯಿಂದ ಪರಿಶ್ರಮ ಪಡುವ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ಪಡೆದುಕೊಳ್ಳುವ ಅವಕಾಶಗಳು ವಿಪುಲವಾಗಿದೆ.
        ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯ ಮಾಹಿತಿ ಪತ್ರಗಳು ನಿಮ್ಮ ಮನೆಯನ್ನು ತಲುಪಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ನಿಮ್ಮ ಸಹಕಾರ ಇರಲಿ. ಮಕ್ಕಳಲ್ಲಿ ಕಲೆ ಹಾಗೂ ಸಾಹಿತ್ಯದ ಅಭಿರುಚಿಯನ್ನು ನಿರಂತರವಾಗಿ ಉಳಿಸಿಕೊಳ್ಳುವ ಒಂದು ನಿಸ್ವಾರ್ಥ ಪ್ರಯತ್ನ ಮಕ್ಕಳ ಜಗಲಿಯಿಂದ. ಪ್ರತಿಯೊಂದು ಮಗು ಕೂಡ ಈ ವಿಚಾರಗಳಲ್ಲಿ ತನ್ನನ್ನು ತಾನು ತೊಡೆಸಿಕೊಂಡಿದ್ದೇ ಆದಲ್ಲಿ ಸಾಧಕರಾಗುವ ಪಥದಲ್ಲಿ ಹೆಜ್ಜೆ ಹಾಕುತ್ತಾರೆ. ಸಂಸ್ಕಾರಯುತವಾಗಿ ತನ್ನ ಜೀವನವನ್ನು ರೂಪಿಸಿಕೊಳ್ಳುವ ಅವಕಾಶಗಳು ನಿಚ್ಚಳವಾಗಿರುತ್ತದೆ. 
        'ಮಕ್ಕಳ ಜಗಲಿ' ನಿಮ್ಮ ಮನೆ ಮಕ್ಕಳ ಜಗಲಿ.. ನಿಮ್ಮೆಲ್ಲರ ಸಹಕಾರ ನಿರಂತರವಾಗಿರಲಿ ಎನ್ನುತ್ತಾ... ಎಲ್ಲರಿಗೂ ನಮಸ್ಕಾರ..        
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************



ಕಳೆದ ಸಂಚಿಕೆಯ ಜಗಲಿಕಟ್ಟೆ - 66 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ ..... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ಎರಡು ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

ಮಕ್ಕಳ ಜಗಲಿಯ ಪ್ರಿಯ ಓದುಗರಿಗೆಲ್ಲ ನನ್ನ ನಮಸ್ಕಾರಗಳು, ಮಕ್ಕಳ ಜಗಲಿಯಲ್ಲಿ ನಡೆದ, ಮಕ್ಕಳ ಕಥೆ, ಕವನಗಳು, ಲೇಖನಗಳು, ಇವುಗಳೆಲ್ಲವುಗಳ ಸ್ಪರ್ಧೆಯಲ್ಲಿ ವಿಜೇತರಾಗಿರುವವರಿಗೆಲ್ಲ ನನ್ನ ಅಭಿನಂದನೆಗಳು. ಹಾಗೆ ಪ್ರತಿಭೆಗಳು ಹೆಮ್ಮರವಾಗಲು ಪ್ರೋತ್ಸಾಹಿಸುತ್ತಿರುವ, ಚಿಗುರುತ್ತಿರುವ ಪ್ರತಿಭೆಗಳಿಗೆ ನೀರೇರೆದು ಬೆಳೆಸುತ್ತಿರುವ, ಪ್ರತಿಭಾವಂತರಾಗಲು ಅವಕಾಶ ನೀಡಿ, ಎಲೆ ಮರೆ ಕಾಯಂತಿರುವ ಪ್ರತಿಭೆಗಳನ್ನು ಹೆಕ್ಕಿ, ಹೊರ ತರುತ್ತಿರುವ, ಮಕ್ಕಳ ಜಗಲಿಗೆ ನನ್ನ ವಂದನೆಗಳು... ಈ ಎಲ್ಲ ಕಾರ್ಯಗಳ ರಾಯಭಾರಿಯಾಗಿರುವ ತಾರಾನಾಥ್ ಕೈರಂಗಳ ಸರ್ ಅವರಿಗೆ, ನನ್ನ ಅನಂತ ಅನಂತ ಧನ್ಯವಾದಗಳು. 
     ಮಕ್ಕಳ ಜಗಲಿಯ ಬಗ್ಗೆ ಅನಿಸಿಕೆಗಳನ್ನು, ಸಲಹೆಗಳನ್ನು ಆನಂದದಿಂದ ಸ್ವೀಕರಿಸುವ ವೇದಿಕೆ ಇದು.. ನಾನು ಕಂಡಂತೆ ಎಷ್ಟೋ ಕಡೆ, ಪ್ರತಿಭೆಗಳಿಗೆ ವೇದಿಕೆಗಳ ಅವಕಾಶಗಳು ಸಿಗುತ್ತವೆ, ಇನ್ನು ಕೆಲವು ಕಡೆ, ಸ್ವಾರ್ಥದ ಅವಕಾಶಗಳಿರುತ್ತವೆ. ಉದಾಹರಣೆ : ತಮ್ಮ ಪ್ರಚಾರಕ್ಕಾಗಿ, ಪ್ರತಿಭಾನ್ವಿತರಿಗೆ ಮಾತ್ರ ವೇದಿಕೆ ಕಲ್ಪಿಸಿ ಕೊಡುವುದು, ಪುರಸ್ಕಾರಗಳಲ್ಲಿ ಭೇದ ಭಾವ ಮಾಡುವುದು, ಪ್ರಚಾರದಲ್ಲಿರುವವರನ್ನು ಮಾತ್ರ ಗುರುತಿಸುವುದು, ಗುರುತಿಸುವುದರಿಂದ ಲಾಭವಿದ್ದಲ್ಲಿ ಮಾತ್ರ, ಅವಕಾಶ ಕಲ್ಪಿಸಿಕೊಡುವುದು, ಹೀಗೆ ಅನೇಕ ರೀತಿಯ ವ್ಯವಸ್ಥೆಗಳಿವೆ. ಆದರೆ ಮಕ್ಕಳ ಜಗಲಿ ಎಲ್ಲದಕ್ಕಿಂತ ವಿಶೇಷವಾಗಿದೆ. ಕಾರಣ ಇಲ್ಲಿ ಯಾವುದರ ಭೇದವಿಲ್ಲ, ಎಲ್ಲರಿಗೂ ಏಕತೆ ಇದೆ. ನಿಜ ಪ್ರತಿಭೆಗಳ ಅನಾವರಣದ ವೇದಿಕೆ ಇದು. ಪ್ರತಿಭೆಗಳನ್ನು ಮಾತ್ರ ಸೋಸಿ ತೆಗೆದು ಅವಕಾಶ ನೀಡುವ ಬದಲು, ಮಕ್ಕಳನ್ನು ಪ್ರತಿಭಾವಂತರಾಗಿಸುವ ವೇದಿಕೆ ಇದು ಎಂದು ಹೇಳಿದರೆ ತಪ್ಪಾಗಲಾರದು. ಇಲ್ಲಿ ಯಾವುದೇ ರೀತಿಯ ಪರಿಮಿತಿಗಳಿಲ್ಲ, ಅರ್ಥ ಯಾವುದೊ ಒಂದು ತಾಲೂಕು ಅಥವಾ ಜಿಲ್ಲೆಗೆ ಮಾತ್ರ ಮೀಸಲಲ್ಲ. ಕರ್ನಾಟಕದ ಮೂಲೆ ಮೂಲೆಯಿಂದ ಪ್ರತಿಭೆಗಳನ್ನು ಹುಡುಕುವ ನಿಸ್ವಾರ್ಥ ವೇದಿಕೆ ಇದಾಗಿದೆ. ನಾವು ಏನನ್ನಾದರೂ ಸಾಧಿಸಬೇಕು ಎಂದು ಮನಸ್ಸಿನಲ್ಲಿ ಆಶಯ ಇರುವವರಿಗೆ, ಉತ್ಸಾಹ ತುಂಬುವ ಜಾಗ ಇದಾಗಿದೆ. ಹೇಳುತ್ತಾ ಹೋದರೆ ಪುಟಗಳು ಸಾಲದಾದೀತು. ಇನ್ನೊಮ್ಮೆ ಅನಿಸಿಕೆ ಬರೆಯುವಾಗ ಇನ್ನಷ್ಟು ವಿಚಾರಗಳನ್ನು ಹೇಳಲಿಚ್ಚಿಸುತ್ತಾ, ಅವಕಾಶಕ್ಕಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ. ಜಗಲಿ ಹೀಗೆ ಬೆಳೆಯಲಿ ಎಂದು ಆಶಿಸುವ ಮಕ್ಕಳ ಜಗಲಿಯ ಅಭಿಮಾನಿ.
...................................... ರಮ್ಯಾ ಆರ್ ಭಟ್
ಸಹ ಶಿಕ್ಷಕಿ. 
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621
*******************************************
             


ನಮಸ್ತೇ,
     ಬ್ರಹ್ಮಚರ್ಯ ಹಾಗೂ ಅಪರಿಗ್ರಹದ ಕುರಿತಾಗಿ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ ವಿವರಣಾತ್ಮಕ ಹಾಗೂ ಉಪಯುಕ್ತ ಲೇಖನ.
     ರಮೇಶ್ ಬಾಯಾರ್ ರವರ ಅಂತಃ ಸತ್ವ ಲೇಖನದಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿ ಬಿಂಬಿಸುವ ಸುಂದರ ಲೇಖನ ತುಂಬಾ ಇಷ್ಟವಾಯಿತು.
     ದಿವಾಕರ ಸರ್ ರವರ ಸಂಚಿಕೆಯಲ್ಲಿ ಪಾಪಾಸುಕಳ್ಳಿಯಂತಹ ಹೆಚ್ಚು ನೀರು ಬೇಡದ ಸಸ್ಯಗಳಲ್ಲಿ ಜಲನಿಯಂತ್ರಣದ ಜೊತೆಗೆ ಪತ್ರರಂಧ್ರವಿಲ್ಲದೇನೆ ಇಂಗಾಲದ ಡೈ ಆಕ್ಸೈಡನ್ನು ಪಡೆಯುವ ವಿಧಾನ ತಿಳಿದ ಹಾಗಾಯ್ತು. ಧನ್ಯವಾದಗಳು ಸರ್.
     ವಿಜಯಾ ಮೇಡಂ ರವರಿಂದ ಈ ಸಲದ ಸಂಚಿಕೆಯಲ್ಲಿ ಕ್ರೊಟಲೇರಿಯಾ ಎನ್ನುವ ವಿಷಪೂರಿತ ಸಸ್ಯದ ಪರಿಚಯ ಸೊಗಸಾಗಿ ಮೂಡಿ ಬಂದಿದೆ.
    ರಮೇಶ್ ಉಪ್ಪುಂದರವರ ಪಯಣ ಸಂಚಿಕೆಯಲ್ಲಿ ಶಿಲ್ಪಕಲಾವೈಭವದ ಹಳೆಬೀಡು ದೇವಸ್ಥಾನದ ವಿವರವಾದ ಮಾಹಿತಿ ಸಿಕ್ಕಿತು.
      ಮಕ್ಕಳ ಚಿತ್ರಗಳು ಹಾಗೂ ಸಿಂಧು ಅವರ ದಸರಾದ ಕುರಿತ ಲೇಖನ ಸೊಗಸಾಗಿತ್ತು. ಅಭಿನಂದನೆಗಳು ಮಕ್ಕಳಿಗೆ.
      ನಮಗೆ ಭರವಸೆ ಇದೆ ಎನ್ನುವ ಹವಾಮಾನ ಬದಲಾವಣೆ ಕುರಿತಾದ ಪುಸ್ತಕದ ಪರಿಚಯವಾಣಿಯಕ್ಕನವರಿಂದ ಸೊಗಸಾಗಿತ್ತು.
     ರಮೇಶರವರ ಪದದಂಗಳ ಸಂಚಿಕೆ ಅಂದವಾಗಿ ಮೂಡಿಬರುತ್ತಿದೆ. ಕಷ್ಟದ ಸಂಚಿಕೆಯನ್ನು ಮುಂದುವರಿಸುತ್ತಿರುವುದಕ್ಕೆ ಧನ್ಯವಾದಗಳು.
     ಕೊನೆಯದಾಗಿ ಜಗಲಿಯ ಎಲ್ಲರಿಗೂ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ನಮಸ್ತೇ,
     ಕಂಡುಹಿಡಿಯುವಿಕೆ ಮತ್ತು ಅನುಭವಿಸುವಿಕೆಯ ನಡುವಿನ ವ್ಯತ್ಯಾಸವನ್ನು ತತ್ವಜ್ಞಾನಿ ಮತ್ತು ತತ್ವದರ್ಶಿ ಎನ್ನುವ ಸಂಚಿಕೆಯ ಮೂಲಕ ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಸರ್ ಅವರು ಬಹಳ ಮಾರ್ಮಿಕವಾಗಿ ವಿವರಿಸಿದ್ದಾರೆ. ಧನ್ಯವಾದಗಳು ಸರ್.
     ಒಳಿತಿಗೂ ಕೆಡುಕಿಗೂ ಕಾಲವೇ ಕಾರಣ. 'ಕಾಲ' ರಮೇಶ್ ಬಾಯಾರ್ ರವರಿಂದ ಸುಂದರ ಲೇಖನ. ಧನ್ಯವಾದಗಳು ಸರ್.
     ಹಸಿರಾದ ಕಾಂಡವಿರುವ ಸಸ್ಯಗಳಲ್ಲಿ ಆಹಾರ ತಯಾರಿಕೆ, ಅನಿಲ ವಿನಿಮಯ ಮುಂತಾದ ಅನೇಕ ಉಪಯುಕ್ತ ಮಾಹಿತಿಗಳನ್ನೊಳಗೊಂಡ ಉಪಯುಕ್ತ ವೈಜ್ಞಾನಿಕ ಸಂಚಿಕೆ ದಿವಾಕರ ಸರ್ ರವರಿಂದ.
      ಸುದೆ ಮದ್ರೆಂಗಿ ಎನ್ನುವ ಸಸ್ಯದ ಕುರಿತು ವಿವರವಾದ ಮಾಹಿತಿ ಲಭ್ಯವಾಯಿತು ಈ ಸಲದ ನಿಷ್ಪಾಪಿ ಸಸ್ಯಗಳು ಸಂಚಿಕೆಯಲ್ಲಿ. ಧನ್ಯವಾದಗಳು ವಿಜಯಾ ಮೇಡಂ.
      ಮಕ್ಕಳ ಚಿತ್ರ ಸಂಚಿಕೆಯಲ್ಲಿ ಸಾನ್ವಿಯವರ ಚಿತ್ರಗಳು ಸೊಗಸಾಗಿ ಮೂಡಿ ಬಂದಿವೆ. ಅಭಿನಂದನೆಗಳು ಸಾನ್ವಿ.
      ಮಕ್ಕಳ ಜಗಲಿ ಆಯೋಜಿಸಿದ ಮಕ್ಕಳ ಕಥಾ ಸಿರಿ ಹಾಗೂ ಕವನ ಸಿರಿ ಸ್ಪರ್ಧಾ ಫಲಿತಾಂಶ ಪ್ರಕಟಗೊಂಡಿದೆ. ವಿಜೇತ ಮಕ್ಕಳಿಗೆ ವೈಯಕ್ತಿಕ ಅಭಿನಂದನೆಗಳು. ಹಾಗೆ ಭಾಗವಹಿಸಿದ ಮಕ್ಕಳಿಗೂ ಅಭಿನಂದನೆಗಳು. ಮುಂದಿನ ಸ್ಪರ್ಧೆಗಳಲ್ಲಿ ತೀರ್ಪುಗಾರರ ಅನಿಸಿಕೆಗಳನ್ನು ಗಮನದಲ್ಲಿಡಿ ಎನ್ನುವುದೇ ನನ್ನ ಆಶಯ. ಸ್ಪರ್ಧೆ ಆಯೋಜಿಸಿದ ಜಗಲಿಯ ರೂವಾರಿ ಆತ್ಮೀಯರಾದ ತಾರಾನಾಥ್ ಕೈರಂಗಳ ರವರಿಗೆ ಹಾಗೂ ಸಹಕರಿಸಿದ ಎಲ್ಲಾ ಹಿರಿಯರಿಗೆ ನನ್ನ ಮನದಾಳದ ಕೃತಜ್ಞತೆಗಳು.
      ಪ್ರಕೃತಿ ರಮಣೀಯ ಪ್ರದೇಶ ಮುಳ್ಳಯ್ಯನ ಗಿರಿಯ ಸೊಗಸಾದ ಪರಿಚಯ ರಮೇಶ್ ಉಪ್ಪುಂದರವರಿಂದ ತಮ್ಮ ಪಯಣ ಸಂಚಿಕೆಯಲ್ಲಿ.
     ವಾಣಿಯಕ್ಕನವರಿಂದ ಅತೀ ಅಗತ್ಯವಾಗಿ ಓದಲೇ ಬೇಕಾದ ಮಕ್ಕಳಲ್ಲಿ ತತ್ವ ಚಿಂತನೆ ಎನ್ನುವ ಪುಸ್ತಕದ ಪರಿಚಯ ಚೆನ್ನಾಗಿತ್ತು.
     ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಸೊಗಸಾಗಿ ಮಾಡಿಬರುತ್ತಿದೆ.
     ಶಿಕ್ಷಕರ ಡೈರಿ ಸಂಚಿಕೆಯಲ್ಲಿ ಒಳ್ಳೆಯ ವಿಚಾರಗಳನ್ನು ಮಕ್ಕಳಿಗೆ ಹೇಳಿಕೊಟ್ಟಾಗ ಅವರಲ್ಲಾಗುವ ಧನಾತ್ಮಕ ಬದಲಾವಣೆಯ ಕುರಿತಾದ ಅನುಭವದ ಮಾತುಗಳು ರಮ್ಯಾ ಆರ್ ಭಟ್ ಮೇಡಂ ರವರಿಂದ ತುಂಬಾ ಉತ್ತಮವಾಗಿದ್ದವು.
        ಎಲ್ಲರಿಗೂ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ ಮತ್ತು ರಮ್ಯಾ ಆರ್ ಭಟ್, ಸಹ ಶಿಕ್ಷಕಿ. ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article