ಪಯಣ : ಸಂಚಿಕೆ - 18 (ಬನ್ನಿ ಪ್ರವಾಸ ಹೋಗೋಣ)
Friday, November 22, 2024
Edit
ಪಯಣ : ಸಂಚಿಕೆ - 18 (ಬನ್ನಿ ಪ್ರವಾಸ ಹೋಗೋಣ)
ಮನೋಹರವಾಗಿ ಮಲಗಿಕೊಂಡಿರುವ ಅರಬ್ಬಿ ಸಮುದ್ರ ನಡುವೆ ಶಿಲಾಮಯ ನಡುಗಡ್ಡೆ ಇದು ಉಡುಪಿ ಜಿಲ್ಲೆಯಲ್ಲಿರುವ ಸೇಂಟ್ ಮೇರಿಸ್ ದ್ವೀಪ. ಪ್ರವಾಸಿಗಳ ಭೇಟಿ ಹೆಚ್ಚುತ್ತಿರುವಂತೆ ಈಗ ಈ ದ್ವೀಪ ಹೊಸ ರೂಪ ಪಡೆದುಕೊಳ್ಳುತ್ತಿದೆ. ದ್ವೀಪಕ್ಕೆ ಪ್ರಯಾಣದ ಉಸ್ತುವಾರಿ ವಹಿಸಿಕೊಂಡಿರುವ ಮಲ್ಪೆ ಅಭಿವೃದ್ಧಿ ಸಮಿತಿ ಸೈಂಟ್ ಮೇರೀಸ್ ದ್ವೀಪದ ಆಕರ್ಷಣೆಯನ್ನು ಹೆಚ್ಚಿಸುವ ಪ್ರಯತ್ನ ನಡೆಸಿದೆ.
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಇಂದಿನ ಪ್ರವಾಸದಲ್ಲಿ ಉಡುಪಿ ಜಿಲ್ಲೆ ಮಲ್ಪೆಯ ಸೇಂಟ್ ಮೇರಿಸ್ ದ್ವೀಪಕ್ಕೆ ಪಯಣ ಬೆಳೆಸೋಣ ಬನ್ನಿ.....
ಪ್ರಕೃತಿ ನಿರ್ಮಿತ ಬೆಸಾಲ್ಟ್ ಶಿಲಾಸ್ತಂಭಗಳಿರುವ ಈ ದ್ವೀಪಕ್ಕೆ ಮಲ್ಪೆಯಿಂದ ದೋಣಿ ಪಯಣ ಅನಿವಾರ್ಯ. ಈ ಹಿಂದೆ ದ್ವೀಪಕ್ಕೆ ಒಯ್ಯುವ ದೋಣಿಗಳ ಮಾಲೀಕರ ನಡುವೆ ಪ್ರವಾಸಿಗರನ್ನು ಸೆಳೆಯುವ ಪೈಪೋಟಿ ಇತ್ತು. ಒಮ್ಮೊಮ್ಮೆ ಜಗಳಕ್ಕೂ ಕಾರಣವಾಗಿ ಪ್ರವಾಸಿಗರಿಗೆ ಕಿರಕಿರಿಯೆನಿಸುತ್ತಿತ್ತು. ದೋಣಿ ಹತ್ತುವಲ್ಲಿ ಅಸಹ್ಯಕರ ವಾಸನೆಯ ವಾತಾವರಣವಿತ್ತು. ಹಿಂದಿನ ಜಿಲ್ಲಾಧಿಕಾರಿ ಎಸ್.ಆರ್ ಉಮಾಶಂಕರ್ ಮಲ್ಪೆ ಅಭಿವೃದ್ಧಿ ಸಮಿತಿ ರಚಿಸಿ, ದೋಣಿ ಏರುವಲ್ಲಿಗೆ ಸುರಕ್ಷಿತ ಜಟ್ಟಿ ನಿರ್ಮಿಸಿದ್ದಾರೆ. ಒಂದಾದ ನಂತರ ಒಂದು ದೋಣಿ ಹೊರಡುತ್ತದೆ. ಪ್ರವಾಸಿಗರಿಗೆ ಈಗ ಮುಕ್ತ. ಎಲ್ಲವೂ ವ್ಯವಸ್ಥಿತ.
ಮಲ್ಪೆ ಬಂದರಿನಿಂದ 20 ನಿಮಿಷಗಳ ದೋಣಿ ಪಯಣದ ನಂತರ ಈ ದ್ವೀಪ ಸ್ವರ್ಗ ತೋಳ್ದೆರೆಯ ಆಹ್ವಾನಿಸುತ್ತದೆ. ಇಲ್ಲಿ ಮೂಲ ಸೌಕರ್ಯಗಳಿಲ್ಲವೆಂಬ ಕೊರಗು ಮೊದಲಿನಿಂದಲೂ ಇತ್ತು. ಮಲ್ಪೆ ಅಭಿವೃದ್ಧಿ ಸಮಿತಿಯಾದ ಬಳಿಕ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಹುಲ್ಲು ಚಪ್ಪರ, ಕಲ್ಲು ಬೆಂಚುಗಳನ್ನು ನಿರ್ಮಿಸಿದ್ದಾರೆ. ಮಕ್ಕಳಿಗೆ ಆಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಶೌಚಾಲಯ, ಸಣ್ಣದೊಂದು ಅಂಗಡಿ, ಆದರೂ ಒಂದು ಕೊರತೆ ಹಾಗೇ ಉಳಿದಿದೆ. ಸಮುದ್ರ ತೀರದಿಂದ ದ್ವೀಪಕ್ಕೆ ಸೇರಬೇಕಾದರೆ ದೊಡ್ಡ ದೋಣಿಯಿಂದ ಸಣ್ಣ ದೋಣಿಗೆ ಇಳಿದು ಹೋಗಬೇಕು. 
ಸೇಂಟ್ ಮೇರೀಸ್ ದ್ವೀಪಕ್ಕೆ ಬರುವ ಬಹುತೇಕ ಪ್ರವಾಸಿಗರಿಗೆ ದ್ವೀಪದ ಮಹತ್ವ ತಿಳಿದಿಲ್ಲ. ಮಾಹಿತಿ ಪತ್ರ, ಪ್ರಯಾಣಿಸುವ ದೋಣಿಯಲ್ಲಿ ದ್ವೀಪದ ಕುರಿತು ಮಾಹಿತಿ ನೀಡುವ ಧ್ವನಿಸುರುಳಿ ಬಳಸುವ ಮೂಲಕ ಪ್ರಕೃತಿ ವಿಸ್ಮಯದ ಬಗ್ಗೆ ಮಾಹಿತಿ ನೀಡಲು ಪ್ರಯತ್ನಿಸಲಾಗುತ್ತಿದೆ. ಜೊತೆಗೆ ಪರಿಸರ ಹಾಳು ಮಾಡುವವರಿಗೆ ದಂಡ ವಿಧಿಸುವಂತಹ ಕಠಿಣ ಕ್ರಮಗಳು ದ್ವೀಪದ ಸೌಂದರ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಪಾತ್ರವಹಿಸಬಹುದು.
ಬನ್ನಿ ಸೇಂಟ್ ಮೇರೀಸ್ ದ್ವೀಪಕ್ಕೆ. ಪ್ರಕೃತಿಯ ಸ್ವರ್ಗಕ್ಕೆ ನೋಡಿ ತಲೆಬಾಗಿ ಪ್ರಕೃತಿಯ ವಿಸ್ಮಯ. ಕಡಲ ನಡುವಿನ ಈ ಭೂ ಪ್ರದೇಶದಲ್ಲಿ ತೆಂಗು-ತಾಳೆ ಮರಗಳು, ಸಮುದ್ರದ ಅಲೆಗಳು, ಹಾಲುಬಣ್ಣದ ಮರಳು ಈ ಸ್ಥಳಕ್ಕೆ ವಿಶೇಷ ಸೊಬಗು ತಂದಿವೆ. ಅನೇಕ ಚಿತ್ರಗಳಿಗೆ ಹೊರಾಂಗಣವಾಗಿರುವ ಸೇಂಟ್ ಮೇರಿ ದ್ವೀಪ ಉಡುಪಿಯಿಂದ 8 ಕಿ.ಮೀ. ಮಂಗಳೂರಿನಿಂದ 57 ಕಿ.ಮೀ. ದೂರದಲ್ಲಿದೆ.
ಸೇಂಟ್ ಮೇರಿಸ್ ದ್ವೀಪ ಎಂಬುದು ಪಂಚ ದ್ವೀಪಗಳ ಸಮೂಹಕ್ಕೆ ನೀಡಲಾದ ಹೆಸರು. ನಮ್ಮ ಪಶ್ಚಿಮ ಕರಾವಳಿಯ ಮಲ್ಪೆಯಿಂದ ಕೇವಲ 3 ಕಿ.ಮೀ. ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಇರುವ ಐದು ಚಿಕ್ಕ ದ್ವೀಪಗಳಿಗೆ ಈ ಹೆಸರನ್ನು ಯಾರಿಟ್ಟರೋ ತಿಳಿಯದು. ಇಲ್ಲಿ ಯಾವ ಚರ್ಚ್ ಅಥವಾ ಸಂತರ ಸಮಾಧಿ ಇಲ್ಲ. ಆದರೆ ಭೂವಿಜ್ಞಾನದ ದೃಷ್ಟಿಯಿಂದ ಇದೊಂದು ಅಪರೂಪದ ಶಿಲಾದ್ವೀಪ.
ಈ ದ್ವೀಪ ಗುಚ್ಛಗಳ ಪೈಕಿ ತೆಂಗಿನ ದ್ವೀಪ ಮಾತ್ರ 27 ಎಕರೆಗಳಷ್ಟು ದೊಡ್ಡದು. ಉಳಿದವು ಚಿಕ್ಕ ಚಿಕ್ಕ ದ್ವೀಪಗಳು. ತೆಂಗಿನ ರೂಪದಲ್ಲಿ 6 -7 ಎಕರೆಗಳಷ್ಟು ಜಾಗದಲ್ಲಿ ಶುದ್ಧ ಮರಳು. ಉಳಿದ ಕಡೆ ಶಿಲಾಸ್ತಂಭಗಳು ಮತ್ತು ತೆಂಗಿನ ಮರಗಳು. ಸುತ್ತ ನೀಲಿ ಬಣ್ಣದ ಸಾಗರ. ನಡುವೆ ಬಿಳಿ ನೊರೆ ಮತ್ತು ಅಲೆಗಳ ಅಬ್ಬರ, ಎಂಥ ಅರಸಿಕನನ್ನೂ ಕವಿಯಾಗಿಸುವ ವಾತಾವರಣ. ಮರಳಿನಲ್ಲಿ ತಿರುಗಾಡಿ ಸಾಗರದ ನೀರಿನಲ್ಲಿ ಕಾಲುಗಳನ್ನು ಇಟ್ಟುಕೊಂಡು ತೆರೆಗಳಿಗಾಗಿ ಕಾಯುವುದೊಂದು ಆನಂದ.
1963ಕ್ಕೆ ಮೊದಲು ಈ ದ್ವೀಪಗಳ ಬಗ್ಗೆ ಭೂವಿಜ್ಞಾನಿಗಳಿಗೆ ಪರಿಚಯ ಇರಲಿಲ್ಲ. 1963ರ ಸುಮಾರಿಗೆ ಪ್ರೊ. ಸಿ. ನಾಗಣ್ಣನವರು ನಾಡದೋಣಿಯಲ್ಲಿ ಸಾಹಸ ಯಾತ್ರೆ ಮಾಡಿ ಇವುಗಳ ಅಧ್ಯಯನ ಆರಂಭಿಸಿದರು. ನಂತರ ಅವರು 1964 ಮತ್ತು 1966ರಲ್ಲಿ ಇನ್ನಷ್ಟು ಸಂಶೋಧನೆ ನಡೆಸಿ ಅವುಗಳ ಭೂವೈಜ್ಞಾನಿಕ ಮಹತ್ವವನ್ನು ವಿಜ್ಞಾನ ಜಗತ್ತಿಗೆ ತಿಳಿಸಿದರು. 'ಈ ದ್ವೀಪ ಸಮೂಹಗಳಲ್ಲಿ ಇರುವ ಶಿಲೆಗಳು ಜ್ವಾಲಾಮುಖಿಯಿಂದ ಹೊರಹೊಮ್ಮಿದ ಲಾವಾರಸವು ತಂಪುಗೊಂಡಾಗ ನಿರ್ಮಾಣವಾದದ್ದು. ಅವುಗಳ ವೈಜ್ಞಾನಿಕ ಹೆಸರು ಡೇನೈಟ್, ರೈಯೋಲೈಟ ಮತ್ತು ಗ್ರ್ಯಾನೋಫಯರ್' ಎಂದು ಕಂಡುಕೊಂಡರು.