-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 55

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 55

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 55
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

            

    ಪ್ರೀತಿಯ ಮಕ್ಕಳೇ.... ಮತ್ತೆ ಬುಧವಾರ ಬಂದೇ ಬಿಟ್ಟಿತು. ಹಿಂದೆ ಓದಿದ್ದನ್ನು ಒಮ್ಮೆ ನೆನಪು ಮಾಡಿಕೊಂಡರೆ ಮನಸ್ಸು ವಿಜ್ಞಾನ ಓದಿಗೆ ಸಿದ್ಧವಾಗಿಬಿಡುತ್ತದೆ. ಈ ಹಿಂದಿನ ಮೂರು ಸಂಚಿಕೆಗಳಲ್ಲಿ ಸಸ್ಯಗಳು ಹೇಗೆ ಅನಿಲಗಳನ್ನು ಹೊರ ಹಾಕುತ್ತವೆ ಎಂದು ನೋಡಿದೆವು. ನಮಗೆ ಇಂಗಾಲದ ಡೈಆಕ್ಸೈಡ್ ವಿಸರ್ಜಕ ಅನಿಲವಾದರೆ ಆಮ್ಲಜನಕ ಅಗತ್ಯ ಅನಿಲ. ಆದರೆ ಸಸ್ಯಗಳಲ್ಲಿ ಆಮ್ಲಜನಕ ಮತ್ತು ಇಂಗಾಲದ ಡೈಆಕ್ಸೈಡ್ ಎರಡೂ ವಿಸರ್ಜಕ ಅನಿಲಗಳೇ. ಅಂದರೆ ಸಸ್ಯಗಳ ವಿಸರ್ಜಕ ಅನಿಲವಾದ (ಅಪಾನವಾಯು ಅಲ್ಲ) ಆಮ್ಲಜನಕ ನಮಗೆ ಪ್ರಾಣವಾಯು. ಹೇಗಿದೆ ನೋಡಿ. ಈ ಅನಿಲಗಳನ್ನು ಹೊರಹಾಕುವುದು ಪತ್ರ ರಂಧ್ರಗಳ ಮೂಲಕ. ಈ ಅನಿಲ ವಿನಿಮಯದ ವೇಳೆ ನೀರು ಕೂಡಾ ಆವಿಯ ರೂಪದಲ್ಲಿ ತಪ್ಪಿಸಿಕೊಳ್ಳುತ್ತದೆ. ಇದನ್ನು ಭಾಷ್ಪ ವಿಸರ್ಜನೆ ಎಂದು ಕರೆಯುವ ನೀವು ಇದು ಎಲೆಗಳನ್ನು ತಂಪಾಗಿಡಲು ಸಹಕರಿಸುವುದನ್ನು ನೋಡಿದ್ದೀರಿ. ಆದರೆ ಇದು ಸಾಮಾನ್ಯವಾಗಿ ಹಗಲಿಗೆ ಮಾತ್ರ ನಡೆಯುವ ಕ್ರಿಯೆ. ರಾತ್ರಿ ಭಾಷ್ಪ ವಿಸರ್ಜನೆ ಕಡಿಮೆ. 

ಬೆಳಿಗ್ಗೆ ಎದ್ದು ಹುಲ್ಲಿನ ಮೇಲೆ ನಡೆದಾಡಿದಾಗ ಆ ಹುಲ್ಲಿನ ಎಲೆಗಳ ಮೇಲೆ ನೀರು ಸಂಗ್ರಹವಾಗಿರುವುದನ್ನು ಗಮನಿಸಿದ್ದೀರಿ ಅಲ್ಲವೇ? ಅದೇ ಮಾವಿನ ಎಲೆಗಳ ಮೇಲೆ ನೀರು ನಿಂತಿರುವುದಿಲ್ಲ. ಇದು ಏಕೆ ಎಂಬ ಪ್ರಶ್ನೆ ಎಂದಾದರೂ ನಿಮ್ಮ ಮನಸ್ಸಿನಲ್ಲಿ ಹುಟ್ಟಿದೆಯೇ? ಇದು ಸಣ್ಣ ಗಿಡಗಳಾದ ಹುಲ್ಲು, ಗೋದಿ, ಭತ್ತ, ಟೊಮ್ಯಾಟೊ ಇತ್ಯಾದಿಗಳಲ್ಲಿ ಕಂಡು ಬರುತ್ತದೆಯೇ ಹೊರತು ಮರಗಳಲ್ಲಿ ಅಲ್ಲ. ಇದು ಭಾಷ್ಪ ವಿಸರ್ಜನೆ ಅಲ್ಲ ಬದಲಾಗಿ ಇದನ್ನು ಸಸ್ಯಗಳ ಬೆವರುವಿಕೆ (guttation) ಎನ್ನುತ್ತೇವೆ. ಇವು ಎಲೆಗಳ ತುದಿ ಮತ್ತು ಅಂಚಿನಲ್ಲಿರುವ ಹೈಡಾಥೋಡ್ (hydathodes) ಗಳೆಂಬ ವಿಶೇಷ ಕೋಶಗಳಿಂದ ನಡೆಸಲ್ಪಡುತ್ತದೆ. ಸಸ್ಯಗಳು ಹೀರಿಕೊಳ್ಳುವ ಹೆಚ್ಚುವರಿ ನೀರನ್ನು ಹೊರ ಹಾಕಲು ಇದೊಂದು ಮಾರ್ಗ. ಇದಲ್ಲದೇ ಬೆವರುವ ಹಣ್ಣುಗಳೂ ಇವೆ. ಆದರೆ ದೊಡ್ಡ ಮರಗಳಲ್ಲಿ ಈ ಬೆವರುವಿಕೆ ಇಲ್ಲ. ಏಕೆಂದರೆ ಆ ಪ್ರಮಾಣದ ನೀರನ್ನು 20, 50, 75 ಅದೂ ಸಿಕೋಯಾ ಮರಗಳ ಸಂದರ್ಭದಲ್ಲಿ 300 ಅಡಿಗಳಷ್ಟು ಎತ್ತರಕ್ಕೆ ನೀರನ್ನು ಎತ್ತುವುದು ಸುಲಭವಲ್ಲ. 

ನೋಡಿ ನೀವು ಜಿಮ್ ಗೆ ಹೋಗಿ ಬೆವರು ಹರಿಸುತ್ತೀರಿ. ಆದರೆ ಪ್ರಕೃತಿ ಯಾರು, ಯಾವಾಗ ಮತ್ತು ಎಷ್ಟು ಬೆವರಬೇಕು ಎಂಬುವುದನ್ನೂ ನಿರ್ಧರಿಸಿ ಆಗಿದೆ. ಅದಕ್ಕೆ ಸರಿಯಾದ ವ್ಯವಸ್ಥೆ ಕೂಡಾ ಮಾಡಿದೆ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article