-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 142

ಸ್ಫೂರ್ತಿಯ ಮಾತುಗಳು : ಸಂಚಿಕೆ - 142

ಸ್ಫೂರ್ತಿಯ ಮಾತುಗಳು : ಸಂಚಿಕೆ - 142
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

                  
     ಅರಿಯೆಂದರೆ ತಿಳಿಯು ಅಥವಾ ಶತ್ರು ಎಂದು ಸಾಮಾನ್ಯ ಅರ್ಥವಿದೆ. ಕವಿಗಳು ಕಾವ್ಯಗಳಲ್ಲಿ ‘ಅರಿ’ ಎಂಬ ಪದವನ್ನು ವಿವಿಧ ಅರ್ಥದಲ್ಲಿ ಬಳಸಿದ್ದಾರೆ. ಸಮಾಸವೊಂದಕ್ಕೂ ಅರಿಯೆಂದು ಹೆಸರಿದೆ. ಈ ಲೇಖನದಲ್ಲಿ ‘ಅರಿ’ ಯನ್ನು ಶತ್ರುವೆಂಬ ಅರ್ಥಕ್ಕೆ ಮೀಸಲಿರಿಸಿದೆ. ‘ಅರಿಹಂತ” ಎಂದರೆ ಶತ್ರು ಹಂತಕ ಎಂಬ ಪ್ರತ್ಯೇಕ ವಿವರಣೆ ಅನಗತ್ಯ. ಜೈನ ಧರ್ಮ ಸ್ಥಾಪಕ ವರ್ಧಮಾನ ಮಹಾವೀರರಿಗೆ ಅರಿಹಂತನೆಂದೂ ಇತಿಹಾಸದಲ್ಲಿ ವಿಶೇಷಣವಿದೆ.

ಕ್ರಿ. ಪೂ 599 ರಿಂದ ಕ್ರಿ.ಪೂ 527ರ ತನಕ ಬಾಳಿದ ವರ್ಧಮಾನರು ಜೈನ ಧರ್ಮದ 24ನೇಯ ಮತ್ತು ಕೊನೆಯ ತೀರ್ಥಂಕರ. ಮಹಾವೀರರು ಗೌತಮ ಬುದ್ಧರ ಸಮಕಾಲೀನರೆನ್ನುವ ವಾದವೂ ಇದೆ. ಜೈನ ಧರ್ಮದ ಸಿದ್ಧಾಂತಗಳ ಪ್ರಮುಖ ಪ್ರಚಾರಕರಾಗಿ ಪೂಜ್ಯತೆ ಪಡೆದ ವರ್ಧಮಾನ ಮಹಾವೀರರು ಪಾರ್ಶ್ವನಾಥರ ಆಧ್ಯಾತ್ಮಿಕ ಉತ್ತರಾಧಿಕಾರಿ. ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಯುದ್ಧಗಳ ಮೂಲಕ ಶತ್ರು ಸಂಹಾರ ಮಾಡಲು ಅವಕಾಶವಿಲ್ಲ. ಯುದ್ದದಲ್ಲಿ ಯಾರೊಂದಿಗೂ ಸೆಣಸದೆ ಇವರು “ಅರಿಹಂತ” ಹೇಗಾದರು? ಸೋಜಿಗವೆನಿಸುತ್ತದೆಯೇ?

ವರ್ಧಮಾನ ಮಹಾವೀರರು ತನ್ನೊಳಗಿನ ವೈರಿಗಳನ್ನು ಗೆದ್ದು, “ಅರಿಹಂತ” ನೆಂಬ ಅಭಿದಾನ ಪಡೆದರು. ನಾವು ನಮ್ಮೊಳಗಿನ ಶತ್ರುಗಳನ್ನು ಜಯಿಸಬೇಕು ಎಂದೇ ಪ್ರಚಾರ ಮಾಡಿದ ಮಹಾ ಜ್ಞಾನಿ ಅವರು. ವರ್ಧಮಾನರು ಓರ್ವ ಸರ್ವಜ್ಞ. ಕಾಮಕ್ರೋಧಾದಿ ಷಡ್ವೈರಿಗಳನ್ನು ಗೆದ್ದವರಿಗೆ ಸಮ್ರಾಜ್ಯ ಮೋಹವಾಗಲಿ ಅನ್ಯ ಮೋಹ ಅಥವಾ ಚಪಲಗಳಾಗಲಿ ಇರಲು ಸಾಧ್ಯವಿಲ್ಲ. ಕಾಮನೆಗಳಿಲ್ಲ, ಕ್ರೋಧವಿಲ್ಲ, ಲೋಭವಿಲ್ಲ, ಮೋಹಗಳಿಲ್ಲ, ಮದವಿಲ್ಲ, ಮತ್ಸರವಿಲ್ಲ. ಇವು ಯಾವುವೂ ಇಲ್ಲದವನಿಗೆ ಸ್ವಾರ್ಥವೂ ಇರುವುದಿಲ್ಲ. ಆಗ ಯುದ್ಧ, ಸೆಣಾಸಾಟ, ನನಗೆ ನಿನಗೆ ಎಂಬ ಜಗಳಗಳು ತನ್ನಿಂದ ತಾನೇ ಮಾಯವಾಗುತ್ತವೆ. ಆದುದರಿಂದಲೇ ತನ್ನೊಳಗಿನ ವೈರಿಗಳನ್ನು ಹತಗೊಳಿಸಿದ ವರ್ಧಮಾನರು ಅರಿಹಂತರಾದರು.

ನಾವು ಅರಿಹಂತರಾಗಬಹುದೇ ಎಂಬ ಜಿಜ್ಞಾಸೆ ಸಹಜ. ಮನಸ್ಸು ಮಾಡಿದರೆ ಸಾಧಿಸಲಾಗದೇ ಇರುವಂತಹುದು ಪ್ರಪಂಚದಲ್ಲಿ ಯಾವುದೂ ಇಲ್ಲ. ಹಾಗೆಂದು ಸಾಧಿಸ ಬೇಕಾದುದು ಮನಸ್ಸಿನ ನಿಯಂತ್ರಣವೇ ಹೊರತು ಅನ್ಯವನ್ನಲ್ಲ. ಮನಸ್ಸು ನಿಯಂತ್ರಿತವಾದರೆ ನಾವು ಸಜ್ಜನರಾಗಿ ಮುಂದುವರಿಯುತ್ತೇವೆ. ಇಲ್ಲದೇ ಹೋದರೆ ದುರ್ಜನ ಪಟ್ಟ ಸುಲಭವಾಗಿಯೇ ದೊರೆಯುತ್ತದೆ. ಅದಕ್ಕಾಗಿಯೇ ದೃಷ್ಟಾರರೆಲ್ಲರೂ ಹೇಳಿರುವುದು, “ನೀನು ಜಗವನ್ನು ಪ್ರೀತಿಸು, ಜಗವು ನಿನ್ನನ್ನು ಪ್ರೀತಿಸುತ್ತದೆ, ನೀನು ಜಗವನ್ನು ದ್ವೇಷಿಸಿದರೆ ಜಗವೂ ನಿನ್ನನ್ನು ದ್ವೇಷಿಸುತ್ತದೆ. ನಮ್ಮ ಬದುಕು ಹಸನಾಗಲು ನಮ್ಮನ್ನು ಪ್ರೀತಿಸುವವರ ಸಂಖ್ಯೆ ಹೆಚ್ಚಬೇಕೇ ದ್ವೇಷಿಸುವವರ ಸಂಖ್ಯೆ ಹೆಚ್ಚಬೇಕೇ? ಈ ಪ್ರಶ್ನೆಗೆ ಸಿಗುವ ಉತ್ತರವೇ ದೃಷ್ಠಾರರ ಮಾತು’ “ಪ್ರೀತಿಸು ಮತ್ತು ಪ್ರೀತಿಯನ್ನು ಗಳಿಸು, ನಿಸ್ವಾರ್ಥಿಯಾಗು”. ಇವನ್ನು ಅನುಸರಿಸಿದರೆ ನಾವೂ “ಅರಿಹಂತ” ರಾಗುವೆವು..
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article