-->
ವಿದ್ಯಾರ್ಥಿಗಳ ಅನಿಸಿಕೆಗಳು - ಸಂಚಿಕೆ - 2 : ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2024 ರ ಪ್ರಶಸ್ತಿ ವಿಜೇತರು

ವಿದ್ಯಾರ್ಥಿಗಳ ಅನಿಸಿಕೆಗಳು - ಸಂಚಿಕೆ - 2 : ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2024 ರ ಪ್ರಶಸ್ತಿ ವಿಜೇತರು

ವಿದ್ಯಾರ್ಥಿಗಳ ಅನಿಸಿಕೆಗಳು - ಸಂಚಿಕೆ - 2 : ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2024 ರ ಪ್ರಶಸ್ತಿ ವಿಜೇತರು 

ಮಕ್ಕಳ ಜಗಲಿ ಕವನ ಸಿರಿ ಪ್ರಶಸ್ತಿ - 2024
ಮತ್ತು 
ಮಕ್ಕಳ ಜಗಲಿ ಕಥಾ ಸಿರಿ ಪ್ರಶಸ್ತಿ - 2024
ಪ್ರಶಸ್ತಿ ಪಡೆದ ಹಾಗೂ ಮೆಚ್ಚುಗೆ ಬಹುಮಾನ ವಿಜೇತ ವಿದ್ಯಾರ್ಥಿಗಳ ಅನಿಸಿಕೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ...
       
ವಿದ್ಯಾರ್ಥಿಗಳು ನೀಡಿರುವ ಪ್ರತಿಯೊಂದು ಅನಿಸಿಕೆಗಳು ಕೂಡ ಬೆಳೆಯುವ ಪ್ರತಿಭೆಗಳಿಗೆ ಪ್ರೇರಣೆಯಾಗಿದೆ. ಮಕ್ಕಳ ಜಗಲಿಯಿಂದ ನೀಡಲಾಗುವ ಪ್ರಶಸ್ತಿಗಳಲ್ಲಿ ಪ್ರಥಮ ಅಥವಾ ದ್ವಿತೀಯ ಎನ್ನುವುದಾಗಿರುವುದಿಲ್ಲ. ಅವು ಸಮಾನ ಪ್ರಶಸ್ತಿಗಳು. ಹಾಗೂ ಪ್ರತಿಭಾವಂತ ಎಲ್ಲಾ ಸಾಹಿತ್ಯ ಪ್ರತಿಭೆಗಳಿಗೆ ಈ ಪ್ರಶಸ್ತಿಗಳು ಹಂಚಿ ಹೋಗಬೇಕೆನ್ನುವ ದೃಷ್ಟಿಯಿಂದ ಒಂದು ಬಾರಿ ಒಂದು ವಿಭಾಗದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಮತ್ತೊಂದು ಬಾರಿ ಅದೇ ಪ್ರಶಸ್ತಿಯನ್ನು ನೀಡಲಾಗುವುದಿಲ್ಲ.... ಅವರ ಉತ್ತಮ ಕೃತಿಗಳನ್ನು ಮೆಚ್ಚುಗೆ ಬಹುಮಾನಕ್ಕೆ ಮಾತ್ರ ಪರಿಗಣಿಸಲಾಗುತ್ತದೆ... 
      ಹಾಗೂ ಮಕ್ಕಳ ಜಗಲಿಯ ಉದ್ದೇಶ ಕೇವಲ ಸ್ಪರ್ಧೆಗಾಗಿ ಮಾತ್ರ ಪ್ರೇರೇಪಿಸುವುದಲ್ಲ... ಬದಲಾಗಿ ಮಕ್ಕಳ ಜಗಲಿಯಲ್ಲಿ ನಿರಂತರವಾಗಿ ಕಥೆ ಕವನಗಳನ್ನು ಕಳುಹಿಸಿಕೊಟ್ಟು ತಮ್ಮ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಿ ಬಳಸಿಕೊಳ್ಳಬೇಕೆನ್ನುವುದಾಗಿದೆ... ಇಲ್ಲಿ ಪ್ರಶಸ್ತಿ ಗಳಿಸಿರುವ ಎಷ್ಟೋ ವಿದ್ಯಾರ್ಥಿಗಳು ಮಕ್ಕಳ ಜಗಲಿ ಆರಂಭವಾದಾಗಿನಿಂದ ನಿರಂತರವಾಗಿ ಭಾಗವಹಿಸುತ್ತಾ ಬಂದಿರುವವರಾಗಿರುವುದು ಹೆಮ್ಮೆಯ ಸಂಗತಿ...
       ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಎಲ್ಲಾ ಪೋಷಕರಿಗೆ ಹಾಗೂ ಶಿಕ್ಷಕರಿಗೆ... ಮತ್ತು ಮಕ್ಕಳ ಜಗಲಿಯ ಹಿಂದೆ ಬೆನ್ನೆಲುಬಾಗಿರುವ ಮಕ್ಕಳ ಜಗಲಿ ಬಳಗಕ್ಕೆ ಪ್ರೀತಿಪೂರ್ವಕ ಧನ್ಯವಾದಗಳು...
ತಾರಾನಾಥ್ ಕೈರಂಗಳ


5, 6, 7, 8ನೇ ತರಗತಿ ವಿಭಾಗದ ಕವನ ಸ್ಪರ್ಧೆಯಲ್ಲಿ ಕವನ ಸಿರಿ ಪ್ರಶಸ್ತಿ - 2024 
◾ ರಾಮಚರಣತೇಜ ಹೆಗಡೆ, 8ನೇ ತರಗತಿ  
ಮರೆಯೊಳಿಹ ಪ್ರತಿಭೆಗಳ ಗುರುತಿಸಿ 
ತರಳರನು ಮುನ್ನೆಲೆಗೆ ತರುತಲಿ
ಹಿರಿಯ ಕಾರ್ಯವ ಮಾಡಿಹಿರಿ ಸಾಹಿತ್ಯ ಕ್ಷೇತ್ರದಲಿ
ಸರುವರಿಗು ವೇದಿಕೆಯ ನೀಡುತ
ಕಿರಿಯ ಲೇಖನಿಗಳನು ಬೆಳೆಸಿಹ 
ಸಿರಿಯ ಸಂಸ್ಥೆಯಿದಹುದು ಮಕ್ಕಳ ಜಗುಲಿಯದು ತಾನು//
ಮಾನ್ಯರೇ, ಯಾವುದೇ ಒಂದು ಗೃಹಕ್ಕೆ ಜಗುಲಿಯೇ ಪ್ರಥಮ ಪ್ರವೇಶ ತಾಣ. ಅಂತೆಯೇ ಸಾಹಿತ್ಯ ಲೋಕ ಎಂಬುದೊಂದು ಮನೆ ಎಂದಾದಲ್ಲಿ ಕಿರಿಯ ಸಾಹಿತಿಗಳು ಅದರೊಳಗೆ ದಾಪುಗಾಲಿಡಲು ಮಕ್ಕಳ ಜಗುಲಿಯು ಅತಿ ಪ್ರಶಸ್ತವೆನಿಸಿದೆ. ಹೀಗೆ ರಾಜ್ಯದ ಮೂಲೆ ಮೂಲೆಯಲ್ಲಿನ ಪ್ರತಿಯೊಬ್ಬ ಬಾಲ ಸಾಹಿತ್ಯ ಪ್ರೇಮಿಗೂ ವೇದಿಕೆ ನೀಡಿ ಅವರನ್ನು ಪ್ರೋತ್ಸಾಹಿಸಿದ್ದೀರಿ. ಇಂತಹ ಸಾವಿರಾರು ಸಾಹಿತ್ಯ ತಾರೆಗಳಲ್ಲಿ ಒಬ್ಬನಾಗಿ ಮಿನುಗಲು ನನಗೂ ದಾರಿ ಕಲ್ಪಿಸಿದ್ದಕ್ಕಾಗಿ ನಾನು ನಿಮಗೆ ಕೃತಜ್ಞನಾಗಿದ್ದೇನೆ. ಮುಂದೆಯೂ ಸಾಹಿತ್ಯ ಕ್ಷೇತ್ರದ ಅಭ್ಯುದಯಕ್ಕೆ ಸಹಕರಿಸಿ ಕನ್ನಡ ಸಾಹಿತ್ಯವನ್ನು ಉತ್ತುಂಗಕ್ಕೇರಿಸುವಿರೆಂದು ಆಶಿಸುತ್ತಾ ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ನಾನು ನನ್ನ ಸಾಮರ್ಥ್ಯವನ್ನು ಅನಾವರಣಗೊಳಿಸಲು ಅವಕಾಶ ಕಲ್ಪಿಸಿದ ತಮಗೆ ಅನಂತಾನಂತ ಧನ್ಯವಾದಗಳನ್ನರ್ಪಿಸುತ್ತಿದ್ದೇನೆ. 
ಕವನ ಸಿರಿ ಪ್ರಶಸ್ತಿ - 2024
◾ ರಾಮಚರಣತೇಜ ಹೆಗಡೆ
8ನೇ ತರಗತಿ 
ಶ್ರೀ ಗಜಾನನ ಸೆಕೆಂಡರಿ ಸ್ಕೂಲ್, ಹೆಗಡೆಕಟ್ಟಾ
ಶಿರಸಿ ತಾಲೂಕು, ಉತ್ತರ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಭೂಮಿ - ಬಾನು
*********************************************



9, 10,11,12ನೇ ತರಗತಿ ವಿಭಾಗದ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ 
◾ಶ್ರೇಯಾ ಆರ್ ನಾಯ್ಕ, 10ನೇ ತರಗತಿ 
          ಶ್ರೀ ಗುರುಭ್ಯೋ ನಮಃ ಪ್ರಥಮವಾಗಿ ಗುರುಗಳಿಗೆ ವಂದಿಸುತ್ತಾ ನನ್ನ ಒಂದೆರಡು ಅನಿಸಿಕೆಗಳನ್ನು ಹೇಳ ಬಯಸುತ್ತೇನೆ.
    ನನಗೆ ಕಥೆ, ಕವನ ಬರೆಯುವ ಹವ್ಯಾಸ 6ನೇ ತರಗತಿಯಿಂದ ಆರಂಭವಾಯಿತು. ಈ ಒಂದು ಹವ್ಯಾಸಕ್ಕೆ ಸ್ಪೂರ್ತಿ ನನ್ನ ತಂದೆ, ತಾಯಿ ಆಗಿದ್ದಾರೆ. ನಾನು ಚಿಕ್ಕವಳಾಗಿದ್ದಾಗಿನಿಂದ ನನ್ನ ತಂದೆ ತಾಯಿ ಕಥೆ, ಕವನ ಬರೆಯುವುದನ್ನು ನೋಡುತ್ತಿದ್ದೆ. ಅದರಿಂದ ಪ್ರಭಾವಿತಳಾಗಿ ನಾನು ಕೂಡ 6ನೇ ತರಗತಿಯಲ್ಲಿ ಚುಟುಕು ಕವನಗಳನ್ನು ಬರೆಯಲು ಆರಂಭಿಸಿದೆ. ಬರೆದ ಕಥೆ ಕವನಗಳನ್ನು ತಂದೆ ತಾಯಿಗೆ ತೋರಿಸಿ ಅದರಲ್ಲಿ ಏನಾದರೂ ತಪ್ಪಿದ್ದರೆ ಅವರು ಸರಿ ಮಾಡುತ್ತಿದ್ದರು. ಹೀಗೆ ನನ್ನ ಈ ಕಥೆ ಕವನ ಬರೆಯುವ ಹವ್ಯಾಸ ನಿರಂತರವಾಗಿ ಮುಂದುವರಿಯುತ್ತಾ ಹೋಯಿತು. ಈ ಹವ್ಯಾಸದಿಂದಲೇ ಇಂದು ನಾನು 'ಕವನ ಸಿರಿ 2024ರ ಮೆಚ್ಚುಗೆ ಬಹುಮಾನವನ್ನು ಪಡೆದಿರುತ್ತೇನೆ. ಈ ಒಂದು ಬಹುಮಾನವನ್ನು ಪಡೆಯಲು ನನಗೆ ಸಹಾಯ ಮಾಡಿದ ನನ್ನ ತಂದೆ, ತಾಯಿಗಳಿಗೆ ನನ್ನ ಶಾಲೆಯ ಮುಖ್ಯೋಪಾಧ್ಯಾಯರಿಗೆ ನಾನು ವಂದನೆಗಳನ್ನು ಸಲ್ಲಿಸುತ್ತೇನೆ. ಮೆಚ್ಚುಗೆ ಪ್ರಶಸ್ತಿ ಬಂದಾಗ ನನಗೆ ತುಂಬಾ ಖುಷಿಯಾಯಿತು. ಕೊಂಚ ಬೇಸರವೂ ಆಯಿತು. ಪ್ರಥಮ ಬಹುಮಾನ ನನ್ನದಾಗಲಿಲ್ಲಎಂಬ ಬೇಸರ. ನಂತರ ಸ್ಪರ್ಧೆ ಎಂದ ಮೇಲೆ ಯಾರಾದರೂ ಒಬ್ಬರು ಪ್ರಥಮ ಸ್ಥಾನ ಪಡೆದುಕೊಳ್ಳಲೇಬೇಕು. ಮುಂದೆ ನಾನು ಆ ಸ್ಥಾನವನ್ನು ಪಡೆಯಲು ಪ್ರಯತ್ನಿಸುತ್ತೇನೆ. ಈ ಒಂದು ಸ್ಪರ್ಧೆಯಲ್ಲಿ ಭಾಗವಹಿಸಲು ನನಗೆ ಅವಕಾಶ ನೀಡಿದ ಮಕ್ಕಳ ಜಗಲಿಯ ಸರ್ವ ಗುರು ವೃಂದದವರಿಗೂ, ಗುರುಗಳಾದ ತಾರಾನಾಥ್ ಕೈರಂಗಳ್ ಇವರಿಗೂ ಧನ್ಯವಾದಗಳು.