ವಿದ್ಯಾರ್ಥಿಗಳ ಅನಿಸಿಕೆಗಳು : ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2024 ರ ಪ್ರಶಸ್ತಿ ವಿಜೇತರು
Sunday, November 17, 2024
Edit
ವಿದ್ಯಾರ್ಥಿಗಳ ಅನಿಸಿಕೆಗಳು : ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2024 ರ ಪ್ರಶಸ್ತಿ ವಿಜೇತರು : ಸಂಚಿಕೆ -1
ಮಕ್ಕಳ ಜಗಲಿ ಕವನ ಸಿರಿ ಪ್ರಶಸ್ತಿ - 2024
ಮತ್ತು
ಮಕ್ಕಳ ಜಗಲಿ ಕಥಾ ಸಿರಿ ಪ್ರಶಸ್ತಿ - 2024
ಪ್ರಶಸ್ತಿ ಪಡೆದ ಹಾಗೂ ಮೆಚ್ಚುಗೆ ಬಹುಮಾನ ವಿಜೇತ ವಿದ್ಯಾರ್ಥಿಗಳ ಅನಿಸಿಕೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ...
ವಿದ್ಯಾರ್ಥಿಗಳು ನೀಡಿರುವ ಪ್ರತಿಯೊಂದು ಅನಿಸಿಕೆಗಳು ಕೂಡ ಬೆಳೆಯುವ ಪ್ರತಿಭೆಗಳಿಗೆ ಪ್ರೇರಣೆಯಾಗಿದೆ. ಮಕ್ಕಳ ಜಗಲಿಯಿಂದ ನೀಡಲಾಗುವ ಪ್ರಶಸ್ತಿಗಳಲ್ಲಿ ಪ್ರಥಮ ಅಥವಾ ದ್ವಿತೀಯ ಎನ್ನುವುದಾಗಿರುವುದಿಲ್ಲ. ಅವು ಸಮಾನ ಪ್ರಶಸ್ತಿಗಳು. ಹಾಗೂ ಪ್ರತಿಭಾವಂತ ಎಲ್ಲಾ ಸಾಹಿತ್ಯ ಪ್ರತಿಭೆಗಳಿಗೆ ಈ ಪ್ರಶಸ್ತಿಗಳು ಹಂಚಿ ಹೋಗಬೇಕೆನ್ನುವ ದೃಷ್ಟಿಯಿಂದ ಒಂದು ಬಾರಿ ಒಂದು ವಿಭಾಗದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಮತ್ತೊಂದು ಬಾರಿ ಅದೇ ಪ್ರಶಸ್ತಿಯನ್ನು ನೀಡಲಾಗುವುದಿಲ್ಲ.... ಅವರ ಉತ್ತಮ ಕೃತಿಗಳನ್ನು ಮೆಚ್ಚುಗೆ ಬಹುಮಾನಕ್ಕೆ ಮಾತ್ರ ಪರಿಗಣಿಸಲಾಗುತ್ತದೆ...
ಹಾಗೂ ಮಕ್ಕಳ ಜಗಲಿಯ ಉದ್ದೇಶ ಕೇವಲ ಸ್ಪರ್ಧೆಗಾಗಿ ಮಾತ್ರ ಪ್ರೇರೇಪಿಸುವುದಲ್ಲ... ಬದಲಾಗಿ ಮಕ್ಕಳ ಜಗಲಿಯಲ್ಲಿ ನಿರಂತರವಾಗಿ ಕಥೆ, ಕವನ, ಲೇಖನಗಳನ್ನು ಕಳುಹಿಸಿಕೊಟ್ಟು ತಮ್ಮ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಿ ಬಳಸಿಕೊಳ್ಳಬೇಕೆನ್ನುವುದಾಗಿದೆ... ಇಲ್ಲಿ ಪ್ರಶಸ್ತಿ ಗಳಿಸಿರುವ ಎಷ್ಟೋ ವಿದ್ಯಾರ್ಥಿಗಳು ಮಕ್ಕಳ ಜಗಲಿ ಆರಂಭವಾದಾಗಿನಿಂದ ನಿರಂತರವಾಗಿ ಭಾಗವಹಿಸುತ್ತಾ ಬಂದಿರುವವರಾಗಿರುವುದು ಹೆಮ್ಮೆಯ ಸಂಗತಿ...
ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಎಲ್ಲಾ ಪೋಷಕರಿಗೆ ಹಾಗೂ ಶಿಕ್ಷಕರಿಗೆ... ಮತ್ತು ಮಕ್ಕಳ ಜಗಲಿಯ ಹಿಂದೆ ಬೆನ್ನೆಲುಬಾಗಿರುವ ಮಕ್ಕಳ ಜಗಲಿ ಬಳಗಕ್ಕೆ ಪ್ರೀತಿಪೂರ್ವಕ ಧನ್ಯವಾದಗಳು...
ತಾರಾನಾಥ್ ಕೈರಂಗಳ
◾ಮೋನಿಕಾ ಜಯಕರ ನಾಯ್ಕ, ಪ್ರಥಮ ಪಿಯುಸಿ
ನನಗೆ ಕಥೆ ಮತ್ತು ಕವನ ಬರೆಯುವ ಅಸಕ್ತಿ ಚಿಕ್ಕ ವಯಸ್ಸಿನಲ್ಲಿ ಮೂಡಿತು. ಈ ಸಾಹಿತ್ಯದ ಬಗ್ಗೆ ನನಗೆ ಅರಿವು ಮೂಡಿದ್ದು ನನ್ನ ಅಕ್ಕ ಬರೆಯುತ್ತಿದ್ದ ಕಥೆ, ಕವನಗಳನ್ನು ನೋಡಿ. ಆಗಿನ್ನೂ ನಾನು ಚಿಕ್ಕವಳು ಆ ಕಥೆ ಕವನಗಳನ್ನು ಓದಿ ನನಗೂ ಬರೆಯಬೇಕೆಂಬ ಆಸೆ ಮೂಡಿತು. ಅಂದಿನಿಂದ ನನಗೆ ತೋಚುವ ಹೂವು, ಹಣ್ಣು, ಚಿಟ್ಟೆಗಳ ಬಗ್ಗೆ ಚಿಕ್ಕ ಚಿಕ್ಕ ಕವನಗಳನ್ನು ಬರೆಯತೊಡಗಿದೆ. ಅದನ್ನು ಅವಳಿಗೆ ತೋರಿಸುತ್ತಿದ್ದೆ, ಅದರಲ್ಲಿ ತಪ್ಪಿದ್ದನ್ನು ತಿಳಿ ಹೇಳಿ ತಿದ್ದುತ್ತಿದ್ದಳು. ನಾನು ತಪ್ಪನ್ನು ತಿದ್ದುಕೊಂಡು ಇನ್ನೂ ಆಸಕ್ತಿಯನ್ನು ಬೆಳೆಸಿಕೊಂಡು ಬರೆಯ ತೊಡಗಿದೆ. ನನ್ನ ತಂದೆ ತಾಯಿ ತುಂಬಾ ಖುಷಿ ಪಟ್ಟು, ನಮ್ಮಲ್ಲಿರುವ ಕಲೆಯನ್ನು ನೋಡಿ ಇದಕ್ಕೆ ಸದಾ ಪ್ರೋತ್ಸಾಹವನ್ನು ನೀಡುತ್ತಿದ್ದರು. ನನ್ನ ಪ್ರಾಥಮಿಕ ಶಾಲೆಯಲ್ಲಿಯೂ ಕೂಡ ನನ್ನ ಕಲೆಗೆ ಶಿಕ್ಷಕರು ಪ್ರೋತ್ಸಾಹಿಸುತ್ತಿದ್ದರು.
ನಾನು ಪ್ರಾಥಮಿಕ ಶಾಲೆಯನ್ನು ಮುಗಿಸಿ, ಶ್ರಿವಲಿ ಪ್ರೌಢಶಾಲೆ ಚಿತ್ರಾಪುರವನ್ನು ಸೇರಿದ ಮೇಲೆ ಅಲ್ಲಿ ನನ್ನ ಕಲೆಗೆ ಸುಂದರ ವೇದಿಕೆ ದೊರೆತಂತಾಯಿತು. ಅಲ್ಲಿ ಸಾಹಿತ್ಯದಲ್ಲಿ ನಿಪುಣರಾಗಿರುವ ರೇಷ್ಮಾ ಮೇಡಂ ಅವರಿಗೆ ನಾನು ಬರೆದಿರುವ ಕಥೆ ಕವನಗಳನ್ನು ತೋರಿಸುತ್ತಿದ್ದೆ. ಅವರು ನನ್ನ ಕಲೆಯನ್ನು ಗುರುತಿಸಿ ನನಗೆ ಕಥೆ, ಕವನಗಳನ್ನು ಬರೆಯುವ ಶೈಲಿ, ಅಕ್ಷರಗಳ ಬಳಕೆ, ಮೊದಲಾದ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದರು. ಅಲ್ಲದೆ ನನ್ನನ್ನು ಸಾಹಿತ್ಯ ಸಂಘದ ಅಧ್ಯಕ್ಷಳನ್ನಾಗಿ ಮಾಡಿದರು. ಇದರ ವತಿಯಿಂದ ನಡೆಯುವ ಸ್ಪರ್ಧೆಗಳಿಗೆ ಭಾಗವಹಿಸಿ ಬಹುಮಾನವನ್ನು ಗಳಿಸುತ್ತಿದ್ದೆ. ಇದಕ್ಕೆ ಮುಖ್ಯೋಪಾಧ್ಯಾಯರು ಮಮತಾ ಮೇಡಂ, ಹಾಗೆಯೇ ಎಲ್ಲಾ ಶಿಕ್ಷಕರು ಪ್ರೋತ್ಸಾಹಿಸುತ್ತಿದ್ದರು. ಹೀಗೆ ನನಗೆ ಕಥೆ ಕವನ ಬರೆಯುವ ಹವ್ಯಾಸವೂ ಬೆಳೆಯತೊಡಗಿತು.
ಹೀಗೆ ಒಮ್ಮೆ ಮಕ್ಕಳ ಜಗಲಿ ಎನ್ನುವ ವೇದಿಕೆ ಬಗ್ಗೆ ತಿಳಿಯಿತು. ಅದರಲ್ಲಿ ಭಾಗವಹಿಸುತ್ತಿದ್ದೆ. ನನಗೆ ಅದರಲ್ಲಿ ಮೆಚ್ಚುಗೆ ಬಹುಮಾನ ಬರುತ್ತಿತ್ತು. ನನಗೆ ಈ ವರ್ಷ ಯಾವ ವಿಷಯದ ಕುರಿತು ಕಥೆ ಬರೆಯಬೇಕು ಎಂದು ತುಂಬಾ ಯೋಚಿಸಿದಾಗ ನನಗೆ ತೋಚಿದ್ದು ಇಂದು ವಿದ್ಯಾವಂತರು ಉದ್ಯೋಗವನ್ನು ಪಡೆದುಕೊಂಡು ತಮ್ಮನ್ನು ಸಾಕಿ ಸಲುಹಿದ ತಂದೆ ತಾಯಿಯನ್ನು ಮರೆಯುತ್ತಾರೆ. ಇನ್ನು ಕೆಲವರು ವೃದ್ಧಾಶ್ರಮಗಳಿಗೆ ಸೇರಿಸಿ, ಹೊರ ದೇಶಗಳಲ್ಲಿ ನೆಲೆಸುತ್ತಾರೆ. ನಮಗೆ ಜನ್ಮ ನೀಡಿ ಸಾಕಿ ಸಲುಹಿದ ತಂದೆ ತಾಯಿಯರಿಗೆ ಹೀಗೆ ಮಾಡುವುದು ಮನುಷ್ಯತ್ವವಲ್ಲ. ಅವರನ್ನು ನೋಡಿಕೊಳ್ಳುವುದು ನಮ್ಮ ಋಣ ಎನ್ನುವ ಈ ವಿಷಯದ ಬಗ್ಗೆ ನನ್ನ ಒಂದು ಕಥೆಯಿಂದ ತಿಳಿಸಿಕೊಡಬೇಕು ಎನ್ನುವ ಉದ್ದೇಶದಿಂದ 'ಯಾರದ್ದು ತಪ್ಪು..?' ಎನ್ನುವ ಶೀರ್ಷಿಕೆಯೊಂದಿಗೆ ಈ ಕಥೆಯನ್ನು ಬರೆದೆ. ಈ ಕಥೆಯನ್ನು ಮಕ್ಕಳ ಜಗಲಿ ವೇದಿಕೆ ಮೆಚ್ಚಿ ನನಗೆ ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ನೀಡಿ, ಕಥಾ ಸಿರಿ ಪ್ರಶಸ್ತಿ- 2024ನ್ನು ನೀಡಿದೆ. ಹಾಗೂ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ನೀಡಿದೆ. ಇದು ನನಗೆ ತುಂಬಾ ಸಂತೋಷವನ್ನು ತಂದಿದೆ. ಮಕ್ಕಳಲ್ಲಿರುವ ಸಾಹಿತ್ಯದ ಅಭಿರುಚಿಯನ್ನು, ಕಲೆಯನ್ನು ಗುರುತಿಸಿಕೊಳ್ಳುವ ವೇದಿಕೆ ಎಂದರೆ ಅದು ಮಕ್ಕಳ ಜಗಲಿ ವೇದಿಕೆ. ಈ ವೇದಿಕೆಯಿಂದ ನನ್ನಂತಹ ಅದೆಷ್ಟೋ ಬಾಲ ಕವಿಗಳು ಕಥೆ, ಕವನ ಬರೆದು ತಮ್ಮ ಪ್ರತಿಭೆಯನ್ನು ಗುರುತಿಸಿ ಕೊಂಡಿದ್ದಾರೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದನ್ನು ಅನಾವರಣ ಮಾಡುವ ಒಂದು ಸುಂದರವಾದ ವೇದಿಕೆಯಾಗಿದೆ. ಈ ಮಕ್ಕಳ ಜಗಲಿ ವೇದಿಕೆಗೆ ಹಾಗೂ ಈ ಸ್ಪರ್ಧೆಯನ್ನು ಪ್ರತಿವರ್ಷವೂ ನಡೆಸಿಕೊಂಡು ಬರುತ್ತಿರುವ
ತಾರಾನಾಥ ಕೈರಂಗಳ್ ಸರ್ ಹಾಗೂ ಬಳಗಕ್ಕೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಕಥಾ ಸಿರಿ ಪ್ರಶಸ್ತಿ - 2024 ವಿಜೇತೆ
ಪ್ರಥಮ ಪಿಯುಸಿ
ಸಿದ್ಧಾರ್ಥ ಪದವಿ ಪೂರ್ವ ಕಾಲೇಜು ಭಟ್ಕಳ
ಭಟ್ಕಳ ತಾಲೂಕು, ಉತ್ತರ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಯಾರದ್ದು ತಪ್ಪು..?
************************************************
9, 10,11,12ನೇ ತರಗತಿ ವಿಭಾಗದ ಕವನ ಸ್ಪರ್ಧೆಯಲ್ಲಿ ಕವನ ಸಿರಿ ಪ್ರಶಸ್ತಿ - 2024
◾ ಸಹನ ಹಂಪಿ, 10ನೇ ತರಗತಿ
ನನ್ನ ಮತ್ತು ಕವಿತೆಯ ಗೆಳೆತನ ಎಂಟನೇ ತರಗತಿಯಲ್ಲಾಯಿತು. ನನ್ನ ಮೊದಲ ಕವಿತೆ 'ಮುದ್ದು ತಮ್ಮ ಮಿಕ್ಕಿ'. ಮಿಕ್ಕಿ ಇದು ನನ್ನ ಪ್ರೀತಿಯ ತಮ್ಮ (ನಾಯಿ ಅನ್ನಲು ಮನಸ್ಸಿಲ್ಲ). ಅದಾದ ನಂತರ ನನ್ನ ಗೆಳೆಯರಾಗಿದ್ದ ಚಿಂಪಿ ಗುಬ್ಬಿ, ಮಿಂಚಿ ಮೊಲ, ಸ್ನೋವಿ ಬೆಕ್ಕುಗಳ ಬಗ್ಗೆ ಕವಿತೆ ಬರೆದೆ. ನಾನು ಜಿ.ಪಿ.ರಾಜರತ್ನಂ ಅವರ 'ಕಂದನ ಕಾವ್ಯ ಮಾಲೆ', ಶಶಿಕಾಂತ ಕಾಡ್ಲೂರರು ಬರೆದ 'ಗಿಡದ ಮ್ಯಾಗಣ ಮಂಗಣ್ಣ', ಪಂಜೆ ಮಂಗೇಶ್ವರ ರಾವ್ ಅವರ 'ತಟ್ಟು ಚಪ್ಪಾಳೆ ಪುಟ್ಟ ಮಗು' ಕವನ ಸಂಕಲನಗಳು ನನ್ನ ಗುರುಗಳಾದವು. ನನ್ನನ್ನು ಓದಿನೆಡೆಗೆ ಸೆಳೆದ ಪುಸ್ತಕಗಳೆಂದರೆ ಅಪ್ಪನ 'ನದಿಯೊಂದು ನಿದ್ರಿಸಿದಾಗ' ಕಾದಂಬರಿ, 'ಗುಪ್ತನಿಧಿ' (ಲೇಖಕರ ಹೆಸರು ಮರೆತಿದ್ದೇನೆ), ಗುಂಡೂರಾವ್ ದೇಸಾಯಿ ಅವರ 'ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು' ತೇಜಸ್ವಿ ಅವರ 'ಮಹಾ ಪಲಾಯನ' ಕಾದಂಬರಿಗಳು. ನಾನು 'ಮಾಯಾಗ್ರಹ' ಹೆಸರಿನ ಕಾದಂಬರಿ ಬರೆದಿದ್ದೇನೆ, ಆದರೆ ಪ್ರಕಟಿಸಿಲ್ಲ. ಕಥೆ, ಕವಿತೆ, ಪುಸ್ತಕಗಳ ಸಹವಾಸದಿಂದಾಗಿ ನಾನು ನನ್ನಕ್ಕಳಿಗಿಂದ ದೊಡ್ಡವಳಾಗಿದ್ದೇನೆ. ಸಾಹಿತ್ಯ ಸಮ್ಮೇಳನಗಳಲ್ಲಿ ಕವನ ವಾಚಿಸಿದ್ದೇನೆ. ಮಕ್ಕಳ ಜಗಲಿ ಅಂತರ್ಜಾಲ ಪತ್ರಿಕೆಯು ರಾಜ್ಯಮಟ್ಟದ ಕವನ ಸ್ಪರ್ಧೆ ಏರ್ಪಡಿಸಿದ ವಿಷಯ ತಿಳಿದು ಭಾಗವಹಿಸುವುದಾಗಿ ತಿಳಿಸಿದಾಗ ನಮ್ಮ ಜ್ಞಾನಸಂಜೀವಿನಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀರವಿ ಕುಲಕರ್ಣಿ ಸರ್ರು, ಹಾಗೂ ವರ್ಗ ಗುರುಗಳಾದ ನಾಗಭೂಷಣ ಗುರುಗಳು ಖುಷಿಯಿಂದ ಒಪ್ಪಿ ಪರಿಚಯ ಪತ್ರಕ್ಕೆ ಸಹಿಮಾಡಿ ಕೊಟ್ಟರು. ಹೀಗಾಗಿ ನಾನು ರಾಜ್ಯಮಟ್ಟದ ಪ್ರಶಸ್ತಿ ಪಡೆಯಲು ಕಾರಣರಾದ ಅವರಿಗೆ ಸದಾ ಋಣಿ. ಹಾಗೆಯೇ ಮಕ್ಕಳ ಜಗಲಿಯ ಶ್ರೀ ತಾರಾನಾಥ ಕೈರಂಗಳ್ ಅವರಿಗೂ ನಮನಗಳು. ಕವಿತೆ ಓದಿ ಹರ್ಷ ವ್ಯಕ್ತಪಡಿಸಿದ ಗೆಳತಿಯರು, ಬಂಧುಗಳು ಎಲ್ಲರಿಗೂ ನಮಸ್ಕಾರಗಳು.
ಕವನ ಸಿರಿ ಪ್ರಶಸ್ತಿ - 2024
10ನೇ ತರಗತಿ
ಶ್ರೀ ಜ್ಞಾನ ಸಂಜೀವಿನಿ ಪ್ರೌಢಶಾಲೆ ಲಿಂಗಸ್ಗೂರು
ಲಿಂಗಸ್ಗೂರು ತಾಲೂಕು, ರಾಯಚೂರು ಜಿಲ್ಲೆ
ಕವನದ ಶೀರ್ಷಿಕೆ : ದೇವರು ಮತ್ತು ಚಮ್ಮಾರ
************************************************
5,6,7,8ನೇ ತರಗತಿ ವಿಭಾಗದ ಕಥಾ ಸ್ಪರ್ಧೆಯಲ್ಲಿ ಕಥಾ ಸಿರಿ ಪ್ರಶಸ್ತಿ - 2024 ವಿಜೇತರು
◾ ಜನನಿ ಪಿ, 8ನೇ ತರಗತಿ
ಮಕ್ಕಳ ಜಗಲಿಯ ಎಲ್ಲಾ ಶಿಕ್ಷಕ ವೃಂದದವರಿಗೆ ಜನನಿ ಮಾಡುವ ನಮಸ್ಕಾರಗಳು. ಮಕ್ಕಳ ಜಗಲಿಯ 5,6,7,8ನೇ ವಿಭಾಗದ ಕಥಾ ಸಿರಿ ಪ್ರಶಸ್ತಿ ತನಗೆ ಸಿಕ್ಕಿದಾಗ ಬಹಳ ಸಂತೋಷವಾಯಿತು. ನನ್ನ ಪ್ರೀತಿಯ ತಂದೆ ತಾಯಿಯ ಹಾಗೂ ಗುರುಗಳ ಪ್ರೋತ್ಸಾಹವೇ ಕಾರಣ. ನನ್ನಲ್ಲಿದ್ದ ಕಲೆಯು ಚಿಗುರೋಡೆಯಲು ಕಾರಣವಾದ ಮುಖ್ಯ ವೇದಿಕೆಯೇ ಮಕ್ಕಳ ಜಗಲಿ. ನನ್ನ ಮತ್ತು ಮಕ್ಕಳ ಜಗಲಿಯ ಸಂಬಂಧ ಆರಂಭವಾಗಲು ಕಾರಣರಾದವರು ನನ್ನ ನೆಚ್ಚಿನ ರೇಖಾ ಟೀಚರ್. ನಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಮಕ್ಕಳ ಜಗಲಿ ಗ್ರೂಪ್ನ ಬಗ್ಗೆ ಮಾಹಿತಿ ನೀಡಿದರು. ನಾನು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡೆನು. ಮೊದಲು ಚಿತ್ರಗಳನ್ನು ಮಕ್ಕಳ ಜಗಲಿ ಗ್ರೂಪ್ಗೆ ಕಳಿಸಿದೆನು. ಮಕ್ಕಳ ಜಗಲಿಯಲ್ಲಿ ನಾನು ರಚಿಸಿದ ಚಿತ್ರಗಳು ಪ್ರಕಟವಾದಾಗ ತುಂಬಾ ಸಂತೋಷವಾಯಿತು. ಹೀಗೆಯೇ ಹಲವು ಚಿತ್ರಗಳನ್ನು ಕಳಿಸಬೇಕೆಂಬ ಉತ್ಸಾಹ ಮೂಡಿತು. ಮಕ್ಕಳ ಜಗಲಿಯ ವತಿಯಿಂದ ಕಥೆ, ಕವನ, ಚಿತ್ರ ಹೀಗೆ ಹಲವು ಸ್ಪರ್ದೆಗಳನ್ನು ನಡೆಸುತ್ತಿರುತ್ತಾರೆ. ತಾರಾನಾಥ್ ಕೈರಂಗಳ್ ಸರ್ ಈ ಎಲ್ಲಾ ಸ್ಪರ್ದೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡಿದರು. ಈ ರೀತಿಯಾಗಿ ನನ್ನಲ್ಲಿ ಅಡಗಿದ್ದಂತಹ ಕಲೆಯು ಹೊರ ಬರಲು ಮಕ್ಕಳ ಜಗಲಿಯ ವೇದಿಕೆಯು ಅತ್ಯಂತ ಸಹಾಯಕವಾಯಿತು. ಮಕ್ಕಳ ಜಗಲಿಯ ವೇದಿಕೆಯಿಂದಾಗಿ ಕಥೆ, ಕವನಗಳನ್ನು ಬರೆಯುವ ಹವ್ಯಾಸವು ಪ್ರಾರಂಭವಾಯಿತು. ಪ್ರೋತ್ಸಾಹ ನೀಡುತ್ತಿರುವ ನನ್ನ ಪೋಷಕರಿಗೂ, ಗುರುಗಳಿಗೂ, ವಿಶೇಷವಾಗಿ ಮಕ್ಕಳ ಜಗಲಿಯ ತಂಡಕ್ಕೂ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಕಥಾ ಸಿರಿ ಪ್ರಶಸ್ತಿ - 2024
8ನೇ ತರಗತಿ
ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ
ಶಾಲೆ ರಾಮಕುಂಜ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಬಡ ಅಂಗವಿಕಲ ಹುಡುಗಿಯ ಸಾಧನೆ
**********************************************
5,6,7,8ನೇ ವಿಭಾಗದ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ
◾ ಶ್ರುತಿಕಾ, 8ನೇ ತರಗತಿ
ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ನಿರ್ಲಕ್ಷ್ಯ
ಜಗಲಿಯ ಎಲ್ಲಾ ಓದುಗರಿಗೂ ನನ್ನ ನಮನಗಳು
ಮೊದಲಿಗೆ ಪ್ರತಿ ವರ್ಷವೂ ವಿಧ್ಯಾರ್ಥಿಗಳಿಗೆ ಕವನ ಮತ್ತು ಕಥಾ ಸ್ಪರ್ಧೆಯನ್ನು ಏರ್ಪಡಿಸಿ ರಾಜ್ಯದ ಎಲ್ಲಾ ಎಳೆಸಾಹಿತಿಗಳಿಗೆ ಅವಕಾಶ ನೀಡಿ ಪ್ರೋತ್ಸಾಹಿಸುವ ಮಕ್ಕಳ ಜಗಲಿಗೆ ನನ್ನ ಧನ್ಯವಾದಗಳು. ಹಾಗೂ ಸಮಾನವಾಗಿ ತೀರ್ಪು ನೀಡಿದ ಎಲ್ಲಾ ತೀರ್ಪುಗಾರರಿಗೆ ಧನ್ಯವಾದಗಳು.
ನಾನು ನನ್ನ 1ರಿಂದ 7ನೇ ತರಗತಿಯವರೆಗಿನ ವ್ಯಾಸಂಗವನ್ನು ಸ.ಹಿ. ಪ್ರಾ.ಶಾಲೆ ಓಜಾಲದಲ್ಲಿ ನೇರವೇರಿಸಿದೆ. ಅಲ್ಲಿ 2ನೇ ತರಗತಿಯಿಂದಲೇ ಚಿಕ್ಕ ಪುಟ್ಟ ಕವಗಳನ್ನು ಬರೆಯುತ್ತಿದ್ದೆ. ಆದರೆ ಆಗ ನನ್ನ ಪ್ರತಿಭೆಯನ್ನು ಗುರುತಿಸಿ ನನಗೆ ಪ್ರೋತ್ಸಾಹ ನೀಡಿದವರು ಕಾವ್ಯ ಟೀಚರ್. ಆದರೆ ನಂತರದ ದಿನಗಳಲ್ಲಿ ಕೊರೋನ ಎಂಬ ಮಹಾಮಾರಿ ಜಗತ್ತಿಗೆ ಅಪ್ಪಳಿಸಿದ್ದರಿಂದ ನಾವು ಮನೆಯಲ್ಲೇ ಉಳಿಯಬೇಕಾಯಿತು. ಆದರೆ ಆ ಸಮಯದಲ್ಲಿ ನಾನು ಕವನಗಳನ್ನು ಬರೆದು ನನ್ನ ಕವನದ ಗುಣ ಮಟ್ಟವನ್ನು ಹೆಚ್ಚಿಸಿಗೊಂಡೆ. ನಂತರದ ದಿನಗಳಲ್ಲಿ ಮತ್ತೆ ಶಾಲೆ ಪ್ರಾರಂಭವಾಯಿತು. ಆಗ ನನ್ನ ಪ್ರತಿಭೆಗೆ ನೀರೆರೆದವರು ವಿಲ್ಮಾ ಟೀಚರ್. ಅವರು ನನ್ನನ್ನು ಮಕ್ಕಳ ಕಲಾ ಲೋಕಕ್ಕೆ ಸೇರಿಸಿದರು. ಅಲ್ಲಿ ನನ್ನನ್ನು ಪ್ರೋತ್ಸಾಹಿಸಿ ಮಾರ್ಗ ದರ್ಶನ ನೀಡಿದವರು ರಮೇಶ್ ಎಂ ಬಾಯಾರು ಸರ್ ಹಾಗೂ ಭಾಸ್ಕರ ಅಡ್ವಳ ಸರ್. ಅವರು ನನಗೆ 16ನೇ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೆಯಾಗುವ ಅವಕಾಶ ನೀಡಿದರು. ನನ್ನೆಲ್ಲಾ ಶಿಕ್ಷಕರ ಹಾಗೂ ಹೆತ್ತವರ ಪ್ರೋತ್ಸಾಹದಿಂದ ಅಂದು ನಾನು ಪ್ರಕಟಿಸಿದ ಪುಸ್ತಕವೇ ನೆಲ ಜಲ.
ಮರು ವರ್ಷ ನಾನು ಜಗದ ನಿಯಮ ಎಂಬ ಪುಸ್ತಕವನ್ನು ಪ್ರಕಟಿಸಿದೆ. 2023 ರ ಮಕ್ಕಳ ಜಗಲಿಯ ಕವನ ಸ್ಪರ್ಧೆಯಲ್ಲಿ ಭಾಗವಹಿಸಿ ಕವನ ಸಿರಿ ಪ್ರಶಸ್ತಿ ಪಡೆದುಕೊಂಡೆ. ಹಾಗೂ ಈ ವರುಷವೂ ಭಾಗವಹಿಸಿ ಮೆಚ್ಚುಗೆ ಬಹುಮಾನವನ್ನು ಪಡದಿದ್ದೇನೆ. ಎಲೆ ಮರೆ ಕಾಯಿಯಂತಿದ್ದ ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು.
8ನೇ ತರಗತಿ
ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ನಿರ್ಲಕ್ಷ್ಯ
************************************************
9,10,11,12ನೇ ವಿಭಾಗದ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ - 2024
◾ ಪ್ರಣಮ್ಯ ಜಿ , ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ
ಮೊದಲನೆಯದಾಗಿ ಮಕ್ಕಳ ಜಗಲಿ ಬಳಗಕ್ಕೆ ನನ್ನ ಹೃತ್ಪೂರ್ವಕ ವಂದನೆಗಳು.
ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಒದಗಿಸಿದ ಜಗಲಿಯ ಬಳಗದವರಿಗೆಲ್ಲರಿಗೂ ನನ್ನ ಮನದಾಳದ ಧನ್ಯವಾದಗಳು.
ಸುಮಾರು ಆರೇಳು ವರ್ಷಗಳಿಂದ ಹಲವಾರು ಕಡೆಗಳಲ್ಲಿ ನಡೆಸಿದಂತಹ ತಾಲೂಕು - ರಾಜ್ಯಮಟ್ಟದ ಕವನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಭಾಗವಹಿಸುತ್ತಾ, ಹಲವಾರು ತೀರ್ಪುಗಾರರ ಹಾಗೂ ಕೇಳುಗರ ಮೆಚ್ಚುಗೆಗೆ ಪಾತ್ರವಾಗಿರುವುದು ನನ್ನ ಪ್ರೀತಿಯ ಪೋಷಕರಿಗೆ ಹಾಗೂ ಗುರುಗಳಿಗೆ ಸಂತಸವನ್ನು ಒದಗಿಸಿಕೊಟ್ಟಿದೆ. ಇದೀಗ ಕಳೆದ ಎರಡು - ಮೂರು ವರುಷಗಳಿಂದ ಪರಿಚಯವಾಗಿರುವ ಮಕ್ಕಳ ಜಗಲಿ ಎಂಬ ಆನ್ಲೈನ್ ಪ್ರತ್ರಿಕೆಯಂತು ನನ್ನ ಪ್ರತಿಭೆಗೆ ಹೊಸಗರಿಯನ್ನಿಟ್ಟು, ಹೊಸ ಹುರುಪನ್ನು ತಂದುಕೊಟ್ಟಿದೆ. ಈ ಪತ್ರಿಕೆಯ ವತಿಯಿಂದ ನಡೆದಂತಹ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನನಗೆ ಸತತ ಮೂರು ಭಾರಿಯಲ್ಲಿ ಪೋತ್ಸಾಹಕ- 2022, ಕವನ ಸಿರಿ ಪ್ರಶಸ್ತಿ -2023 ಮತ್ತು ಇದೀಗ ಮತ್ತೊಮ್ಮೆ ಪೋತ್ಸಾಹಕ - 2024 ಬಹುಮಾನವನ್ನ ತನ್ನ ಮುಡಿಗೆ ಧರಿಸಿಕೊಂಡಿರುವ ಹೆಮ್ಮೆ ನನಗಿದೆ.
ಬಹುಶಃ ನಮ್ಮ ಕಾಲೇಜಿನಲ್ಲಿ ಕಲಿಯುತ್ತಿರುವ ಸಾವಿರ ಹೂವುಗಳ ನಡುವೆ ಮರೆಯಾಗಿದ್ದ ನಾನು ಕವನ ಸಿರಿ - 2023 ಎಂಬ ಬಿರುದನ್ನು ಪಡೆದು ನಕ್ಷತ್ರಗಳ ನಡುವೆ ಎದ್ದುಕಾಣುವ ಪ್ರಕಾಶವಾದ ನಕ್ಷತ್ರವೊಂದರಂತೆ ಪ್ರಜ್ವಲಿಸಿ ನಮ್ಮ ಕಾಲೇಜಿನಲ್ಲಿ ನಡೆದಂತಹ "ಮಾಧುರ್ಯಂ" ಎಂಬ ಕಾರ್ಯಕ್ರಮದಲ್ಲಿ ನನ್ನ ಪ್ರತಿಭೆಯನ್ನು ಗುರುತಿಸುವಂತೆ ಮಾಡಿತು. ಅಷ್ಟೇ ಅಲ್ಲದೆ , ನಾನು ಬರೆದಂತಹ 45 ಕವನಗಳನ್ನೊಳಗೊಂಡಿರುವ ಚೊಚ್ಚಲ ಹೊತ್ತಗೆಯೊಂದು "ಪುಟ್ಟ ಹೆಜ್ಜೆ" ಎಂಬ
ಶೀರ್ಷಿಕೆಯಡಿಯಲ್ಲಿ ಕಾವ್ಯಲೋಕಕ್ಕೆ ಸೇರಲು ಪೋತ್ಸಾಹ ನೀಡಿರುವುದರಲ್ಲಿ ಈ ಜಗಲಿಯ ಪಾತ್ರ ಮಹತ್ತರವಾಗಿದೆ.
ಮೊದ- ಮೊದಲು ಸಣ್ಣ - ಸಣ್ಣ ವಸ್ತುಗಳ ಮೇಲೆ ಕವನ ಹೆಣೆಯಲು ಆರಂಭಿಸಿದ ನಾನು, ನನ್ನ ಹೆತ್ತವರು ಹಾಗೂ ನಾ ಕಲಿಯುತ್ತಿದ್ದ ಸಂತ ಜಾರ್ಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ನೆಲ್ಯಾಡಿ ಹಾಗೂ ಪ್ರಸ್ತುತ ನಾನು ಕಲಿಯುತ್ತಿರುವ ಎಸ್. ಡಿ. ಎಮ್ ಕಾಲೇಜಿನ ಗುರುಗಳು ನೀಡಿರುವ ಪ್ರೇರಣೆ ನನಗೆ ಮತ್ತಷ್ಟೂ ಉತ್ಸಾಹದಿಂದ ಕವನ ರಚನೆಯಲ್ಲಿ ತೊಡಗಿಸಿಕೊಳ್ಳಲು ನೆರವಾಯಿತು. 24 -10 - 2024 ರಂದು "ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ" ಇವರ ವತಿಯಿಂದ ಉಜಿರೆಯಲ್ಲಿ ನಡೆಯಲಿರುವ "ಕವಿಗೋಷ್ಠಿ" ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಒಂದು ದೊರಕಿದೆ. ಜಗಲಿಯ ಬಳಗದೊಡನೆ ಸೇರಿ ಸಾಹಿತ್ಯ ಕೃಷಿಯನ್ನು ಮತ್ತಷ್ಟು ಬೆಳೆಸಿಕೊಳ್ಳುವ ಹಂಬಲವಿದೆ.
ಅನಿಸಿಕೆಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡಿದ ತಮಗೆ ಧನ್ಯವಾದಗಳು...
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ
ಎಸ್ ಡಿ ಎಂ ಪದವಿಪೂರ್ವ ಕಾಲೇಜು ಉಜಿರೆ
ಕಡಬ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಮಳೆರಾಯನ ಮುನಿಸು
**********************************************
9,10,11,12ನೇ ವಿಭಾಗದ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ
◾ ಬಾಲಕೃಷ್ಣ ಬಿ, 10ನೇ ತರಗತಿ
ನಾನು ಮೊದಲು ಕವನ ಬರೆಯಲು ಶುರು ಮಾಡಿದ್ದು ನನ್ನ ಪ್ರಾಥಮಿಕ ಶಾಲೆ ದ ಕ ಜಿ ಪಂ ಉನ್ನತ ಹಿರಿಯ ಪ್ರಾಥಮಿಕ ಶಾಲೆ ನೂಜಿಬಾಳ್ತಿಲ ದಲ್ಲಿ. ತದ ನಂತರ ನಾನು ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಮುಗಿಸಿ ಪ್ರೌಡಶಾಲೆ ಶಿಕ್ಷಣಕ್ಕಾಗಿ ಬೆಥನಿ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲ ಅಲ್ಲಿ ಸೇರಿದೆ. ನಾನು 10 ತರಗತಿಯಲ್ಲಿ ಸಣ್ಣ ಕವನಗಳನ್ನು ರಚಿಸಲು ಶುರು ಮಾಡಿದೆ. ಅದನ್ನು ನನ್ನ ಇಂಗ್ಲೀಷ್ ಅಧ್ಯಾಪಕರಾದ ಬಿಜು ಸರ್ ಇವರಿಗೆ ತೋರಿಸಿದೆ. ಅವರು ನನಗೆ ತುಂಬಾ ಪ್ರೋತ್ಸಹ ಮಾಡುತ್ತಾ ಬಂದರು. ನಾನು ಹೆಮ್ಮೆಯಿಂದ ಹೇಳ್ತೇನೆ ಒಬ್ಬ ಶಿಷ್ಯನ ಹಿಂದೆ ಗುರು ಇದ್ದರೆ ಅವನು ಎಷ್ಟು ಬೇಕಾದ್ರೂ ಸಾಧನೆ ಯನ್ನು ಮಾಡಬಲ್ಲ. ಹಾಗೆಯೇ ಇವರು ನನಗೆ ಪ್ರೋತ್ಸಾಹ ವನ್ನು ಕೊಡುತ್ತಾ ಇದ್ದರು. ಆಗ ಒಂದು ಸ್ಪರ್ಧೆ ಬರುತ್ತದೆ. ಅದೇ ಮಕ್ಕಳ ಜಗಲಿಯ ಸ್ಪರ್ಧೆ. ನಾನು ನನ್ನ ಕವನವನ್ನು ಬರೆದು ಹಾಕಿದೆ. ಸ್ಪರ್ಧೆಯಲ್ಲಿ ನನ್ನ ಕವನವು ಮೆಚ್ಚುಗೆಗೆ ಪಾತ್ರವಾದ ಕವನವಾಗಿ ತೀರ್ಪುಗಾರರು ಬಹುಮಾನ ಕೊಟ್ಟರು. ಅದೊಂದು ಅದ್ಭುತ ಅನುಭವ. ನನಗೆ ಬಹಳ ಆನಂದದ ಕ್ಷಣ ಆಗಿತ್ತು. ಧನ್ಯವಾದಗಳು
10ನೇ ತರಗತಿ
ಬೆಥನಿ ಪದವಿ ಪೂರ್ವ ಕಾಲೇಜು ನೂಜಿ ಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಮನವೇ ಹಾಗೆ ಸುಮ್ಮನೆ ನಕ್ಕು ಬಿಡು
**********************************************
5,6,7,8ನೇ ವಿಭಾಗದ ಕವನ ಮತ್ತು ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ
◾ ಸಮನಾ ಕರಣಂ, 8ನೇ ತರಗತಿ
ಎಳೆಯರ ಪ್ರತಿಭೆಯ ಪತ್ರಿಕೆಯಾದ ಮಕ್ಕಳ ಜಗಲಿ ನಮ್ಮಲ್ಲಿ ಅಡಗಿರುವ ಕವನ-ಕಥಾ ಲೇಖನ ಹವ್ಯಾಸವನ್ನು ಹೆಚ್ಚಿಸುವ ಅವಕಾಶ ನೀಡುತ್ತಿದೆ. ಕಥೆ, ಕವನ ಎರಡಕ್ಕೂ ಮೆಚ್ಚುಗೆ ಪ್ರಶಸ್ತಿ ಬಂದಿರುವುದು ನನಗೆ ತುಂಬ ಸಂತಸವಾಗಿದೆ. ಪ್ರಾಮಾಣಿಕ ಪ್ರಯತ್ನವು ಸಾರ್ವಕಾಲಿಕವಾಗಿಯೂ ಫಲಪ್ರದವಾಗಿರುವುದೆಂದು ಸೂಚಿಸುವ "ಕನಸ್ಸಿನಲ್ಲಿ" ಕಂಡ ಕನಸಿನ ಮ್ಯಾಜಿಕ್ ಪೆನ್ಸಿಲ್ನ ಕಥೆಯು, ಬಾಲ್ಯದಲ್ಲಿ ಆಟವಾಡಿ ನಂತರ ಮರೆತು ಹೋದ ಆ ಒಂದು ಗೊಂಬೆಯ ಕವನವು ನನಗೆ ಮೆಚ್ಚುಗೆ ಪ್ರಶಸ್ತಿಯನ್ನು ತಂದುಕೊಟ್ಟಿತು.
ಮತ್ತೊಮ್ಮೆ ನನ್ನನ್ನು ಪ್ರೋತ್ರಾಹಿಸುತ್ತಿರುವ ಮಕ್ಕಳ ಜಗಲಿಯ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು
8ನೇ ತರಗತಿ
ಜ್ಞಾನೋದಯ ಸ್ಕೂಲ್ ಬೆಂಗಳೂರು
ಬೆಂಗಳೂರು ಜಿಲ್ಲೆ
ಕವನದ ಶೀರ್ಷಿಕೆ : ಮರೆತು ಹೋದ ಆ ಒಂದು ಗೊಂಬೆ
ಕಥೆಯ ಶೀರ್ಷಿಕೆ : ರಾಜುವಿನ 'ಕನಸಿನ' ಮ್ಯಾಜಿಕ್ ಪೆನ್ಸಿಲ್
************************************************
9,10,11,12ನೇ ವಿಭಾಗದ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ - 2024
◾ ಧನ್ವಿತಾ ಕಾರಂತ್, 10ನೇ ತರಗತಿ
ಮೊದಲಿಗೆ ನಾನು ನನ್ನಲ್ಲಿ ಸಾಹಿತ್ಯದ ಅಭಿರುಚಿ ಬೆಳೆಯಲು ಕಾರಣೀಭೂತರಾದ ಎಲ್ಲರಿಗೂ ನನ್ನ ವಂದನೆಗಳನ್ನು ಸಲ್ಲಿಸುತ್ತೇನೆ.
ಕವನಗಳನ್ನು ಬರೆಯುವುದರಿಂದ ನಾನು ಕಂಡುಕೊಂಡದ್ದೇನೆಂದರೆ, ಅದನ್ನು ಪ್ರಾರಂಭಿಸುವಾಗ ಆಗುವ ತೊಳಲಾಟವು, ಪೆನ್ನು ಬರೆಯುತ್ತಾ ಮುಂದುವರಿದಂತೆ ಸುಲಲಿತವಾಗಿ ಮುಗಿದು ಕೊನೆಗೆ ಅದನ್ನು ಓದಿದಾಗ ಆಗುವ ಸಂತೋಷವು ಎಲ್ಲವನ್ನೂ ಮರೆಸುತ್ತದೆ. ಕವನವೆಂದರೆ ನಮ್ಮ ದೃಷ್ಟಿಕೋನವನ್ನು ಮತ್ತು ಮನಸ್ಸಿನ ಮಾತನ್ನು ಅಕ್ಷರಗಳ ರೂಪದಲ್ಲಿ ವ್ಯಕ್ತಪಡಿಸುವುದಾಗಿದೆ.
ಇನ್ನು ನನಗೆ ಕವನ ಬರೆಯುವ ಹವ್ಯಾಸವು ಚಿಕ್ಕಂದಿನಿಂದಲೂ ಇತ್ತು. ಮೊದಲಿಗೆಲ್ಲಾ ಕಷ್ಟ ಎನಿಸಿದರೂ, ನಂತರದ ದಿನಗಳಲ್ಲಿ ಹವ್ಯಾಸವಾಗಿ ಆಸಕ್ತಿ ಹೆಚ್ಚಿತು. ನನ್ನ ಪುಸ್ತಕಗಳನ್ನು ಓದುವ ಹವ್ಯಾಸವು ಬರೆಯಲು ನಾಂದಿ ಹಾಡಿತೆಂದರೆ ತಪ್ಪಲ್ಲ. ನನಗೆ ಮೂಲ ಪ್ರೇರಣೆ ನನ್ನ ಅಜ್ಜ ಹಾಗೂ ಅಮ್ಮ. ಅಜ್ಜನನ್ನು ನಾನು ನೋಡದಿದ್ದರೂ, ಅವರು ಬರೆದ ಪುಸ್ತಕಗಳ ಸಾಲುಗಳು ಅವರನ್ನು ಜೀವಂತವಾಗಿಸಿವೆ ಮತ್ತು ನನಗೆ ಪ್ರೇರಣೆಯ ಹೊಸ ಬೆಳಕು ನೀಡಿವೆ. ಅಮ್ಮ ನನ್ನನ್ನು ಕವಿಗೋಷ್ಠಿ ಮತ್ತು ಸಾಹಿತ್ಯದ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುವುದಷ್ಟೇ ಅಲ್ಲದೆ, ಅವರ ಲೇಖನಗಳಿಂದಲೂ ನನ್ನಲ್ಲಿ ಸಾಹಿತ್ಯಾಭಿರುಚಿ ಮೂಡಲು ಕಾರಣರಾಗಿದ್ದಾರೆ. ಉಳಿದಂತೆ ಅಜ್ಜ, ಅಜ್ಜಿ, ತಂದೆ ಮತ್ತು ತಂಗಿಯರೂ ಕೂಡ ಬರೆಯಲು ಪ್ರೋತ್ಸಾಹಿಸುತ್ತಾರೆ.
' ಮಕ್ಕಳ ಜಗಲಿ' ನನ್ನ ಬರವಣಿಗೆಗೆ ಹೊಸ ಮಜಲೊಂದನ್ನು ದೊರಕಿಸಿ ಕೊಟ್ಟಿದೆ. ನಾನು ಬರೆದ ಕವನಗಳನ್ನೂ, ಪ್ರವಾಸ ಕಥನವನ್ನೂ ಪ್ರಕಟಿಸಿ ಬೆನ್ನು ತಟ್ಟಿದೆ. ಮಕ್ಕಳ ಜಗಲಿಯಲ್ಲಿ ನನಗೆ ಮೊದಲ ವರ್ಷ ದೊರಕಿದ 'ರಾಜ್ಯ ಮಟ್ಟದ ಕವನ ಸಿರಿ' ಪ್ರಶಸ್ತಿಯು ನಿಜಕ್ಕೂ ಸ್ಫೂರ್ತಿದಾಯಕವಾದದ್ದು. ನನ್ನ ಮೊದಲ ಕವನ ಸಂಕಲನ ಹೊರ ಬರಲು ಮತ್ತು ಇನ್ನೂ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯಲು ಇದು ಪ್ರೇರಕವಾಯಿತು. ನಂತರ ಮಕ್ಕಳ ಜಗಲಿಯಿಂದ ನಿರಂತರವಾಗಿ ಸಿಗುತ್ತಿರುವ ಮೆಚ್ಚುಗೆ ಬಹುಮಾನಗಳು ಇನ್ನಷ್ಟು ಬರೆಯಲು ಉತ್ಸಾಹ ತುಂಬುತ್ತಿವೆ. ಹಾಗಾಗಿ ಈ ಸ್ಪರ್ಧೆಗಳ ರೂವಾರಿಗಳಿಗೆ ಮತ್ತು ಪ್ರೋತ್ಸಾಹ ನೀಡುತ್ತಿರುವ ಎಲ್ಲಾ ಗುರು ಹಿರಿಯರಿಗೆ ಇನ್ನೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
10ನೇ ತರಗತಿ
ಶ್ರೀ ಸತ್ಯಸಾಯಿ ಲೋಕ ಸೇವಾ ಪ್ರೌಢಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಅರುಣೋದಯ
*********************************************
9,10,11,12ನೇ ವಿಭಾಗದ ಕವನ ಸ್ಪರ್ಧೆಯಲ್ಲಿ ಕವನ ಸಿರಿ ಪ್ರಶಸ್ತಿ - 2024 ವಿಜೇತರು
◾ಶಮಿತಾ ಕುತ್ಪಾಡಿ, ದ್ವಿತೀಯ ಪಿಯುಸಿ
'' ಮಕ್ಕಳ ಜಗಲಿ'' ಬಳಗವು ಮಕ್ಕಳಿಗೆ ಒಂದೊಳ್ಳೆ ಅವಕಾಶವನ್ನು ಸೃಷ್ಟಿಸಿ ಕೊಡುತ್ತಿದೆ... ಮಕ್ಕಳ ಶಾಲಾ ಕಲಿಕೆಯೊಂದಿಗೆ ಬರವಣಿಗೆಯಲ್ಲಿಯೂ ಆಸಕ್ತಿಯನ್ನು ತುಂಬಿಸುವ ಪ್ರಯತ್ನವನ್ನು ಮಾಡುತ್ತಿದೆ.. ಮಕ್ಕಳಿಗೆ ತಮ್ಮ ಸಾಮರ್ಥ್ಯವನ್ನು ತೋರಿಸಿಕೊಡುವ ಒಂದೊಳ್ಳೆ ವಾತಾವರಣ ಕಲ್ಪಿಸಿಕೊಟ್ಟಿದೆ.
2022ರಲ್ಲಿ ಮಕ್ಕಳ ಜಗಲಿಯ ಕವನ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಚ್ಚುಗೆ ಸ್ಥಾನವನ್ನು ಪಡೆದಿದ್ದೆ. ಈ ಬಾರಿಯ ಕವನ ಸ್ಪರ್ಧೆಯಲ್ಲಿ ಕವನಸಿರಿ ಪ್ರಶಸ್ತಿ ಸಿಕ್ಕಿರುವುದು ತುಂಬಾ ಸಂತೋಷವಾಗಿದೆ. ಮಕ್ಕಳ ಜಗಲಿಯ ರೂವಾರಿಯಾಗಿರುವ ಶ್ರೀ ತಾರಾನಾಥ್ ಕೈರಂಗಳ್ ಸರ್ ಅವರಿಗೆ ನನ್ನ ಹೃದಯಾಂತರಾಳದ ಧನ್ಯವಾದಗಳು..
ಕವನ ಸಿರಿ ಪ್ರಶಸ್ತಿ - 2024
ದ್ವಿತೀಯ ಪಿಯುಸಿ
ಪೂರ್ಣಪ್ರಜ್ಞ ಕಾಲೇಜು ಉಡುಪಿ
ಉಡುಪಿ ತಾಲೂಕು, ಉಡುಪಿ ಜಿಲ್ಲೆ
ಕವನದ ಶೀರ್ಷಿಕೆ : ಅಂತರಾಳ
**********************************************
5,6,7,8ನೇ ವಿಭಾಗದ ಕವನ ಸ್ಪರ್ಧೆಯಲ್ಲಿ ಕವನ ಸಿರಿ ಪ್ರಶಸ್ತಿ - 2024 ವಿಜೇತರು
◾ತ್ರಿಷ ಎಂ., 8ನೇ ತರಗತಿ
ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ 2024 ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ನಾನು ಭಾಗವಹಿಸಿದ್ದೆ. ಹಾಗೆಯೇ ಕವನ ಸಿರಿ ಪ್ರಶಸ್ತಿಗೆ ನಾನು ಆಯ್ಕೆ ಆಗಿರುವುದು ನನಗೆ ತುಂಬಾ ಸಂತೋಷವಾಗಿದೆ. ನಾನು ಬರೆದ ಕವನವನ್ನು ಮೆಚ್ಚಿ ಕವನಸಿರಿ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವ ಮಕ್ಕಳ ಜಗಲಿಯ ಮುಖ್ಯಸ್ಥರಿಗೆ, ಮಕ್ಕಳ ಜಗಲಿಯ ಎಳೆಯರ ಪ್ರತಿಭೆಯ ಪತ್ರಿಕೆ ಬಳಗದವರಿಗೆ ಧನ್ಯವಾದಗಳು ತಿಳಿಸುತ್ತೇನೆ.
ಹಾಗೆಯೇ ನನಗೆ ಮಾರ್ಗದರ್ಶನ ನೀಡಿ, ಕವನ ಬರೆಯುವ ಸಂದರ್ಭದಲ್ಲಿ ನನಗೆ ಉತ್ತಮ ಸಲಹೆ ಸೂಚನೆ ನೀಡಿ, ನನ್ನ ಕೆಲವು ತಪ್ಪುಗಳನ್ನು ತಿದ್ದಿ ತಿಡಿ ನನಗೆ ಸಹಾಯ ಮಾಡಿದ ನನ್ನ ಕನ್ನಡ ಶಿಕ್ಷಕಿಯವರಾದ ರತ್ನಮ್ಮ ಮೇಡಂ ಅವರಿಗೂ ನಾನು ಧನ್ಯವಾದಗಳು ತಿಳಿಸುತ್ತೇನೆ.
ಕವನ ಸಿರಿ ಪ್ರಶಸ್ತಿ - 2024
8ನೇ ತರಗತಿ
ಸರಕಾರಿ ಮಾದರಿ ಹಿರಿಯ
ಪ್ರಾಥಮಿಕ ಶಾಲೆ ನೇಕಾರರ ಕಾಲೋನಿ,
ಬೆಂಗಳೂರು ದಕ್ಷಿಣ ಜಿಲ್ಲೆ
ಕವನದ ಶೀರ್ಷಿಕೆ : ಮಳೆರಾಯ ವರ್ಣ- ವರ್ಷನ ಆರ್ಭಟ
************************************************