-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 62

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 62

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 62
ಲೇಖಕರು : ರಮ್ಯಾ ಆರ್ ಭಟ್
ಸಹ ಶಿಕ್ಷಕಿ. 
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621
                

         ಎಲ್ಲರಿಗೂ ನನ್ನ ನಮಸ್ಕಾರಗಳು.
ನವೆಂಬರ್ ತಿಂಗಳು ಬಂದರೆ ಆಚರಣೆಗಳ ಸುರಿಮಳೆ, ಹೇಗೆಂದರೆ, ಹಲವು ಜಾತಿಯ ಹಣ್ಣಿನಿಂದ ಮಾಡಿದ ಫ್ರೂಟ್ ಸಲಾಡ್ ನಂತೆ. ಈ ತಿಂಗಳಿನಲ್ಲಿ ಕನ್ನಡಮ್ಮನ ಪೂಜಿಸುವ ಸಂಭ್ರಮ, ದೀಪಾವಳಿ, ತುಳಸಿ ಪೂಜೆ, ಮಕ್ಕಳ ದಿನಾಚರಣೆ, ಕನಕ ಜಯಂತಿ, ಹೀಗೆ ಆಚರಣೆಗಳ ಸುರಿಮಳೆ. ಅದರದ್ದೇ ಸಂಭ್ರಮ.
         

ಎಲ್ಲ ಜೀವಿಗಳಿಗೂ ಅವುಗಳದ್ದೆ ಆದ ಸ್ವಾಭಿಮಾನವಿರತ್ತದೆ. ಅದರಲ್ಲಿ ಮನುಷ್ಯನಲ್ಲಿ ಹೆಚ್ಚು.. ನಮ್ಮ ಹಿರಿಯರೆಲ್ಲ ನಮಗೆ ತಿಳಿಸಿರುವಂತೆ, ಸಕಾರಾತ್ಮಕವಾದ ಆತ್ಮಾಭಿಮಾನ, ಸ್ವಾಭಿಮಾನ ಇವೆರಡು ಇದ್ದಲ್ಲಿ ಆ ಮನುಷ್ಯನ ಗುರಿ ಸಾಧನೆ ಖಂಡಿತ. ಸ್ವಾಭಿಮಾನ ಎನ್ನುವುದು ಹುಟ್ಟು ಸ್ವಭಾವವಲ್ಲ, ಕೆಲವೊಂದು ಸಂಧರ್ಭಗಳಲ್ಲಿ, ಕೆಲವೊಬ್ಬ ವ್ಯಕ್ತಿಗಳಿಂದ, ಕೆಲವೊಂದು ಘಟನೆಗಳಿಂದ, ಜೀವನದಲ್ಲಿ ಕಲಿಯುವಂತಹ ಪಾಠ ಎಂದು ಹೇಳಿದರೆ, ಆಶ್ಚರ್ಯವೇನಿಲ್ಲ. ಆದರೆ ಅದರ ಆರಂಭ ಎಳೆಯ ವಯಸ್ಸಿನಲ್ಲೇ ಚಿಗುರೊಡೆದರೆ ಅವರು ಮುಂದೊಂದು ದಿನದ ಸಾಧಕರೇ ಎನ್ನುವುದರಲ್ಲಿ ಸಂಶಯವಿಲ್ಲ. 

ಹೀಗೆ ತರಗತಿಯಲ್ಲಿ ಹಲವು ಸ್ವಭಾವದ ಮಕ್ಕಳಿರುತ್ತಾರೆ ಅದರಲ್ಲಿ ಒಬ್ಬ, ತುಂಬಾ ಸಂಕೋಚದ ಸ್ವಭಾವದವನು. ಆದರೆ ಅವನ ವಿಶೇಷತೆ ಎಂದರೆ ಎಲ್ಲ ಕೆಲಸದಲ್ಲೂ ಅವನು ತುಂಬಾ ಅಚ್ಚುಕಟ್ಟು, ಊಟ, ತಿಂಡಿ, ಓದು, ಬರಹ, ಮತ್ತೊಬ್ಬರನ್ನು ಮಾತನಾಡಿಸುವ ರೀತಿ ಎಲ್ಲವೂ ಮಲ್ಲಿಗೆ ಹೂವನ್ನು ಬಿಡಿಸುವಂತೆ ಕೋಮಲ. ಆದರೆ ಅವನಿಗೆ ಯಾರಾದರೂ ಹೀಯಾಳಿಸಿದರೆ, ಥಟ್ಟನೆ ಕಣ್ಣುತುಂಬಿ ಬರುತ್ತದೆ.. ಅಷ್ಟು ಸೂಕ್ಷ್ಮ ಆಗಬೇಡ ಎಂದು ನಾನು ಪ್ರತಿ ಬಾರಿಯು ಹೇಳಿ, ಈಗ ಸ್ವಲ್ಪ ಸುಧಾರಿಸಿದ್ದಾನೆ.

ಹೀಗೆ ಮೊನ್ನೆ ಶಾಲಾ ಕಾರ್ಯಕ್ರಮದ ವಿಚಾರಗಳನ್ನು ತಿಳಿಸುವ ಸಲುವಾಗಿ ಅವರ ಪೋಷಕರಿಗೆ ಕರೆ ಮಾಡಿ ಮಾತನಾಡುವಾಗ, ಮಾತಿನ ಮಧ್ಯೆ ಅವರು ಒಂದು ಕಥೆ ಹೇಳಿದರು... "ಮಾತಾಜಿ ನಿಮ್ಮ ಒಪ್ಪಿಗೆ ಇದ್ದರೆ, ನನ್ನ ಮಗನ ವಿಚಾರವನ್ನು ನಿಮ್ಮ ಬಳಿ ಸ್ವಲ್ಪ ಹಂಚಿಕೊಳ್ಳಬೇಕು" ಎಂದರು. ನಾನು ಹೇಳಿ ಎಂದೆ. ಅವರು ಹೇಳಿದ ಕಥೆ ಕೇಳಿ ನನಗೆ ಖುಷಿಯು ಆಯಿತು, ಹೆಮ್ಮೆಯೂ ಆಯಿತು.. ಹಾಗೆ ನನ್ನ ನಿರ್ವಹಣೆಯ ಜವಾಬ್ದಾರಿಯು ಹೆಚ್ಚಿತು.. 

ಅವರು ಮಾತಾಡುತ್ತಾ, "ಮಾತಾಜಿ ಅವನು ಈಗೀಗ ತುಂಬಾ ಬದಲಾಗಿದ್ದಾನೆ, ಮೊದಲು ತುಂಬಾ ಅಳುಮುಂಜಿಯಾಗಿದ್ದ, ನಾಚಿಕೆ ಸ್ವಭಾವ ಹೆಚ್ಚಿತ್ತು, ಇನ್ನೊಬ್ಬರ ಎದಿರು ನಿಂತು ಮಾತನಾಡಲು ಭಯ ಪಡುತ್ತಿದ್ದ. ಇವನ ಬೆಳವಣಿಗೆ ಹೀಗೆ ಆದರೆ, ಏನು ಕಥೆ ಎಂಬ ಭಾವ ನಮ್ಮನ್ನು ಕಾಡುತ್ತಿತ್ತು. ಆದರೆ ಈಗ ಅವನ ಬದಲಾವಣೆ ಕಂಡು ನನಗೆ ಖುಷಿ ಆಗಿದೆ, ಇದಕ್ಕೆಲ್ಲ ನೀವೇ ಕಾರಣ, ನಿಮಗೆ ನಾನು ಋಣಿ" ಎಂದರು. ಒಮ್ಮೆ ನನಗೆ ಆಶ್ಚರ್ಯ, ಖುಷಿ ಅನುಮಾನ, ಎಲ್ಲವೂ ಒಟ್ಟಿಗೆ ಆಯಿತು. ನಾನು ಕೇಳಿದೆ ಮನೆಯಲ್ಲಿ ಏನು ನಡೆಯಿತು ಹೇಳಿ ಎಂದು. ಆಗ ಅವರು, "ನನ್ನ ಮಗ ನೀವು ಹೇಳಿಕೊಟ್ಟ ಎಲ್ಲ ಮಾತುಗಳನ್ನು ಪಾಲಿಸುತ್ತಾನೆ, ಎಲ್ಲ ಕೆಲಸದಲ್ಲೂ ನಿಮ್ಮದೇ ಉದಾಹರಣೆ ಕೊಡುತ್ತಾನೆ, ಶಾಲೆಗೆ ಗೈರು ಹಾಜರಾಗಲು ಒಪ್ಪುವುದೇ ಇಲ್ಲ. ಪುಟ್ಟ ನಿನಗೆ ಇಂದು ಹುಷಾರಿಲ್ಲ, ಒಂದು ದಿನ ಹೋಗದಿದ್ದರೆ ನಷ್ಟವೇನು? ಎಂದು ಕೇಳಿದರೆ "ಅಮ್ಮ ನಮ್ಮ ಮಾತಾಜಿ, ಒಂದು ದಿನವೂ ಶಾಲೆ ತಪ್ಪಿಸುವುದಿಲ್ಲ, ಅವರಿಗೆ ನಗಡಿಯಾಗಿ, ಮೂಗು ಕೆಂಪಾಗಿದ್ದರು ಶಾಲೆಗೆ ಬರುತ್ತಾರೆ, ನಾನು ಹಾಗೆ ಶಾಲೆಗೆ ತಪ್ಪಿಸುವುದಿಲ್ಲ ಹೋಗುತ್ತೇನೆ" ಎಂದು ಹೇಳಿದ ನನಗೆ ಖುಷಿಯಾಯಿತು. 

ಹಾಗೆ ಮೊನ್ನೆ ಮನೆಯ ಅಭ್ಯಾಸವನ್ನು ಮಾಡುವಾಗ ಅವನಿಗೆ ಆರೋಗ್ಯ ಸರಿ ಇರಲಿಲ್ಲ ಬರೆಯಲು ಕಷ್ಟವಾಗುತ್ತಿತ್ತು, ಆಗ ನಾನು ಹೇಳಿದೆ "ಪುಟ್ಟ ಇದೊಂದು ದಿನ ಬರೆಯದೆ ಹೋದರೆ ಮಾತಾಜಿ ನಿನ್ನನ್ನೇನು ಬೈಯುವುದಿಲ್ಲ, ನಿನ್ನ ಸಮಸ್ಯೆಯನ್ನು ತಿಳಿಸು, ನಿನಗೆ ಕಷ್ಟವಾದರೆ ನಾನೇ ಹೇಳುತ್ತೇನೆ" ಎಂದೆ. ಆಗ ಅವನು ಹೇಳಿದ "ನನ್ನ ಮಾತಾಜಿ ನನಗೆ ಬೈಯುವುದಿಲ್ಲ ಅಮ್ಮ, ಆದರೆ ನನಗೆ ಯೋಚನೆ ಅದಲ್ಲ.. ತರಗತಿಯಲ್ಲಿ ಅವರು ಎಲ್ಲ ವಿಚಾರಕ್ಕೂ ನನ್ನದೇ ಉದಾಹರಣೆಯನ್ನು ಕೊಡುತ್ತಿರುತ್ತಾರೆ, ಹಾಗಿರುವಾಗ ನಾನೇ ತಪ್ಪು ಮಾಡಿದರೆ, ನಾನು ಅವರಿಗೆ ಹೇಗೆ ಮುಖ ತೋರಿಸಲಿ, ಅವ್ರು ನನ್ನ ತುಂಬಾ ನಂಬಿರ್ ಮಾರೈತಿ ನಾ ಮೋಸ ಮಾಡಿದಂಗೆ ಆತಿಲ್ಯಾ, ಅವ್ರ್ ಮನ್ಸಿಗೆ ಬೇಜಾರ್ ಮಾಡುಕೆ ನಂಗ್ ಇಷ್ಟ ಇಲ್ಲ.' ಎಂದು ಹೇಳಿ ತನ್ನ homework ಮುಗಿಸಿ ಮಲಗಿಕೊಂಡ ಮಾತಾಜಿ, ನಿಮ್ಮ ವರ್ತನೆ ಅವನಲ್ಲಿ ಅಷ್ಟು ಪರಿಣಾಮ ಬೀರಿದೆ ಎಂದು ಆ ಮಗುವಿನ ತಾಯಿ ಹೇಳುವಾಗ, ನನ್ನಲ್ಲಿ ಒಂದು ರೀತಿಯ ತಳಮಳ, ಹೆಮ್ಮೆ, ಖುಷಿ, ಗರ್ವ ಎಲ್ಲದರ ಸಹಮಿಲನ. ಜೊತೆಗೆ ಭಯ. 

ಈ ಬದಲಾವಣೆ ಪೋಷಕರಿಗೆ ಸಿಟ್ಟು ಬರಿಸಬಹುದೇನೋ, ಅವರು ಏನು ಹೇಳಿಯಾರೋ? ಎಂಬ ಭಯ.. ಆದರೆ ಆ ತಾಯಿ ಹೇಳಿದರು. "ಮಾತಾಜಿ ನನ್ನ ಮಗನ ಈ ಬದಲಾವಣೆ ನನಗೆ ತುಂಬಾ ಖುಷಿ ತಂದಿದೆ.. ಮಕ್ಕಳಲ್ಲಿ ಈ ತರಹದ ಭಾವನೆಗಳು ಬಂದಾಗ ಮಾತ್ರ, ಯಾರದ್ದೇ ಒತ್ತಾಯವಿಲ್ಲದೆ ಅವರು ಅವರ ಕೆಲಸಗಳನ್ನು ಮಾಡಬಲ್ಲರು, ಒಳ್ಳೆಯದನ್ನು ಕಲಿಯಬಲ್ಲರು. ಎಂದು ಇಷ್ಟು ಹೊತ್ತು ನಿಮ್ಮ ಸಮಯ ವ್ಯರ್ಥ ಮಾಡಿದೆ ಕ್ಷಮಿಸಿ, ಆದರೆ ಇದನ್ನು ನಿಮ್ಮಲ್ಲಿ ಹಂಚಿಕೊಳ್ಳಬೇಕು ಎನಿಸಿತು. ಹಾಗಾಗಿ ಹೇಳಿಕೊಂಡೆ ಧನ್ಯವಾದಗಳು." ಎಂದು ಫೋನ್ ಇಟ್ಟರು..

ಎಷ್ಟೋ ಸಂಧರ್ಭಗಳಲ್ಲಿ, ಕೆಲವರ ಪಾಲಿಗೆ ನಮ್ಮ ಮಾತು ತಾತ್ಸಾರ, ಕೆಲಸಕ್ಕೆ ಬಾರದ್ದು, ಮಾಡಲು ಕೆಲಸವಿಲ್ಲ ಏನೋ ಹೇಳುತ್ತಾಳೆ, ಈ ತರಹದ ಪ್ರತ್ಯುತ್ತರಗಳನ್ನು ಕೇಳಿ ಮನಸ್ಸು ಕಲ್ಲಾಗಿದ್ದು ಉಂಟು.. ಆದರೆ ಒಳ್ಳೆಯ ವಿಚಾರಗಳನ್ನು ನಾವು ಹೇಳಿಕೊಟ್ಟರೆ ಅದರ ಪ್ರತಿಫಲ ಒಳ್ಳೆಯದ್ದೇ ಆಗಿರುತ್ತದೆ.. ಎಂಬ ಆತ್ಮವಿಶ್ವಾಸ ನನ್ನಲ್ಲಿ ಹೆಚ್ಚಿಸಿತು.. ನನ್ನ ವಿದ್ಯಾರ್ಥಿಯ ಕಥೆ ಕೇಳಿ.. ಹಾಗೆ ಜವಾಬ್ದಾರಿಯು ಹೆಚ್ಚಿತು... 
...................................... ರಮ್ಯಾ ಆರ್ ಭಟ್
ಸಹ ಶಿಕ್ಷಕಿ. 
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621
*******************************************

.

Ads on article

Advertise in articles 1

advertising articles 2

Advertise under the article