ಜೀವನ ಸಂಭ್ರಮ : ಸಂಚಿಕೆ - 164
Monday, November 18, 2024
Edit
ಜೀವನ ಸಂಭ್ರಮ : ಸಂಚಿಕೆ - 164
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ನಮ್ಮನ್ನು ಸುಂದರ, ಕುರೂಪ ಮಾಡುವುದು ಯಾವುದು ? ನಮ್ಮನ್ನು ಶ್ರೀಮಂತ, ಬಡವ ಮಾಡುವುದು ಯಾವುದು?. ಭಾವವೇ ನಮ್ಮನ್ನು ಶ್ರೀಮಂತ, ಬಡವ, ಸುಂದರ ಮತ್ತು ಕುರೂಪ ಮಾಡುತ್ತದೆ. ಭಾವ ಹೇಗೆ ಕೆಲಸ ಮಾಡುತ್ತದೆ ನೋಡೋಣ.
ನಾವು ಶ್ರೀಮಂತ ಅಂತ ಅಂದರೆ, ಶ್ರೀಮಂತರೆ. ಬಡವ ಅಂತ ಅಂದರೆ, ಬಡವರೇ. ಕೋಟಿ ಕೋಟಿ ಆಸ್ತಿ ಇದ್ದು, ಇದು ನನಗೆ ಕಡಿಮೆ ಅಂದರೆ ಬಡವ.100 ಎಕರೆ ಹೊಲ, ಮನೆ ತುಂಬಾ ಒಡವೆ, ವಸ್ತ್ರ, ಕೈ ತುಂಬಾ ಹಣ ಇದೆ. ಮುದುಕ ಚಿಂತೆ ಮಾಡಿಕೊಳ್ಳುತ್ತಾ ಕುಳಿತಿದ್ದಾನೆ. ಏಕೆಂದರೆ ಆತನ ಜಮೀನಿನ ಪಕ್ಕ ಇರುವ ಇನ್ನು ಎಂಟು ಎಕರೆ ಜಮೀನು ಖರೀದಿಸಿದ್ದರೆ ಎಷ್ಟು ಚೆನ್ನಾಗಿತ್ತು? ಅನ್ನುತ್ತಿದ್ದಾನೆ. 108 ಎಕರೆ ಆದರೆ ಅದು ಧರ್ಮದ ಸಂಕೇತ. ಎಂಟು ಎಕರೆ ಗಳಿಸಲು ಹೋಗಿ, ನೂರು ಎಕರೆಯ ಸಂತೋಷ ಕಳೆದುಕೊಂಡಿದ್ದನು. ನೂರು ಎಕರೆ ಆತನನ್ನು ಶ್ರೀಮಂತ ಮಾಡಲಿಲ್ಲ ಅಂದ ಬಳಿಕ, ಆ 8 ಎಕರೆ ಹೇಗೆ ಆತನನ್ನು ಶ್ರೀಮಂತ ಮಾಡುತ್ತದೆ...? ವಸ್ತುಗಳು ನಮ್ಮನ್ನು ಶ್ರೀಮಂತ ಮಾಡುತ್ತವೆ ಅಂತ ಅಲ್ಲ. ನಮ್ಮ ಹೃದಯ, ಭಾವ, ಮನಸ್ಸು ನಮ್ಮನ್ನು ಶ್ರೀಮಂತ ಮಾಡುತ್ತದೆ. ಎಷ್ಟೋ ಜನ ಶ್ರೀಮಂತರು, ಬಡವರ ಹಾಗೆ ಬದುಕಿಲ್ಲ. ಎಷ್ಟೋ ಜನ ರಾಜರು ಮಹಾರಾಜರು ಬಡವರ ಹಾಗೆ ಬದುಕಿಲ್ಲ. ಇನ್ನೊಂದಷ್ಟು ಬಯಸುತ್ತೇವೆ ಅಂದರೆ ಇದರ ಅರ್ಥ, ಇರುವುದು ಕೊರತೆ, ಕಡಿಮೆ ಅಂತ ಅರ್ಥ. ಕಡಿಮೆ ಅಂತ ಭಾವ ಬಂದರೆ ನಾವು ಬಡವರು. 10 ಅಂತಸ್ತಿನ ಮನೆ ಕಟ್ಟಿಸಿದ್ದಾನೆ. ಶ್ರೀಮಂತ ಅಲ್ಲವೇನು. ಆದರೆ ಏನು ಮಾಡುವುದು?. ಪಕ್ಕದಲ್ಲಿ ಒಬ್ಬ ಬಂದು 11 ಅಂತಸ್ತಿನ ಮನೆ ಕಟ್ಟಿಸಿದನು. ಆತ ಈತನ ಮನೆಯನ್ನೇನು ಕೆಡುವಲಿಲ್ಲ. ಈತನ ಪಕ್ಕ ಕಟ್ಟಿದ್ದಾನೆ ಅಷ್ಟೇ. ಈತ 10 ಅಂತಸ್ತಿನ ಬಡವ ಆದ. ಏಕೆ ? ಹೋಲಿಸಿ ನೋಡಿದ. ಒಂದು ಅಂತಸ್ತು ಕೊರತೆ ಇತ್ತು. ಒಂದು ಅಂತಸ್ತು ಕೊರತೆ ಇದೆ ಅಂತ ಭಾವಿಸಿದ. ಬಡವಾದನು. ನನ್ನ ಮನೆ ಸಣ್ಣದು ಅವರ ಮನೆ ದೊಡ್ಡದು ಅಂತ ಅಂದ. ಆ ಭಾವ ಆತನನ್ನು ಬಡವ ಮಾಡಿತ್ತು. ಜಗತ್ತಿನಲ್ಲಿ ಹೀಗೆ ಇರುವುದು. ಯಾವಾಗಲೂ ನನಗಿಂತ ಹೆಚ್ಚಿಗೆ ಬೇರೆಯವರು ಹೊಂದಬಾರದು ಅಂತ ಎಲ್ಲಿದೆ? ಯಾವಾಗಲೂ ನನ್ನ ಬಳಿ ಇಷ್ಟೇ ಉಳಿಯುತ್ತದೆ ಅಂತ ಎಲ್ಲಿದೆ? ಅದರ ಮೇಲೆ ಶ್ರೀಮಂತಿಕೆ ಸೌಧ ಕಟ್ಟಿದರೆ, ಅದು ಹೇಗೆ, ಎಷ್ಟು ದಿನ ನಿಲ್ಲುತ್ತದೆ. ನಾನು ಕುರ್ಚಿ ಮೇಲೆ ಕುಳಿತರೆ ಶ್ರೀಮಂತ ಅಂತ ಅಂದರೆ ಎಷ್ಟೊತ್ತು ಕುಳಿತುಕೊಳ್ಳಲು ಸಾಧ್ಯ. ನಾವು ಭ್ರಮಿಷ್ಟರಾಗುತ್ತೇವೆ. ಎಷ್ಟಿದೆಯೋ ಅಷ್ಟು. ಏನಿದೆಯೋ ಅದರಲ್ಲಿ, ಅದರೊಳಗೆ ನಾನು ಶ್ರೀಮಂತ ಅನ್ನುವ ಭಾವ ಇರಬೇಕು. ಅದು ಹಣವೇ ಇರಲಿ, ಆಸ್ತಿಯೇ ಇರಲಿ, ಒಡವೆಯೇ ಇರಲಿ. ಅದು ಮಹತ್ವದ್ದು. ಏಕೆ ನಾನು ಶ್ರೀಮಂತ ಅಷ್ಟೇ.
ಅಲೆಕ್ಸಾಂಡರ್ ಭಾರತ ದೇಶಕ್ಕೆ ಬಂದನು. ನಮ್ಮ ದೇಶದಲ್ಲಿ ತಕ್ಷಶಿಲಾ ಎನ್ನುವುದು ಒಂದು ದೊಡ್ಡ ಶೈಕ್ಷಣಿಕ ಕೇಂದ್ರ. ಜಗತ್ತಿನ ಅತ್ಯಂತ ಹಳೆ ಜಗತ್ಪ್ರಸಿದ್ಧ ವಿಶ್ವವಿದ್ಯಾನಿಲಯ. ಇದನ್ನು ಕಟ್ಟಿದವರು ಭಾರತೀಯರು. ಅದೇ ರೀತಿ ನಳಂದ ವಿಶ್ವವಿದ್ಯಾನಿಲಯ ಕೂಡ. ಅಲೆಕ್ಸಾಂಡರ್ ಅಂದರೆ ಗ್ರೀಕ್ ದೇಶದ ಮೆಸಡೋನಿಯಾದ ದೊರೆ. ತರುಣ, ಸಶಕ್ತ, ಶೂರ, ಯುದ್ಧ ಕಲೆಯಲ್ಲಿ ಆತನನ್ನು ಮೀರಿಸಿದವರು ಇರಲಿಲ್ಲ. ಅಷ್ಟು ಚಾಣಾಕ್ಷ. ತಜ್ಞ. ಒಂದು ಬಲಿಷ್ಠ ಸೇನೆ ಕಟ್ಟಿಕೊಂಡು ಯೂರೋಪ್ ದೇಶವನ್ನು ಸೋಲಿಸಿದ. ಆ ಬಳಿಕ ಮದ್ಯ ಏಷ್ಯಾ ಸೋಲಿಸಿದ. ನಂತರ ಭಾರತ ದೇಶಕ್ಕೆ ಬಂದನು. ಅವನ ಸೇನೆ ಎಂದರೆ ಎದುರಿಸುವ ಸೇನೆ ಇರಲಿಲ್ಲ. ಎಲ್ಲಾ ಗೆದ್ದಿದ್ದ, ಭಾರತ ಗೆದ್ದರೆ ನಾನು ಜಗತ್ತಿನ ಸಾಮ್ರಾಟ ಅಂತ ಭಾವಿಸಿದ್ದನು. ಇಡೀ ಜಗತ್ತು ನನ್ನ ಸಂಪತ್ತು ಅಂತ ಭಾವಿಸಿದ್ದನು. ಭಾರತದ ಫೋರಸ್ ನನ್ನು ಸೋಲಿಸಿದನು. ಆಗ ಅಲೆಕ್ಸಾಂಡರ್ ಗೆ ಬಹಳ ಸಂತೋಷ ಆಯ್ತು. ಆತ ಆ ಬಳಿಕ ತಕ್ಷಶಿಲೆಯ ಗುರು ಭೇಟಿ ಮಾಡಿದನು. ಆ ಗುರು, ಸಂತ ಆಗಿದ್ದನು. ಆತನಿಗೆ ಗೊತ್ತಿತ್ತು ತಕ್ಷಶಿಲೆಯಲ್ಲಿ ಜಗತ್ಪ್ರಸಿದ್ಧ ಬುದ್ಧಿವಂತರು ಇದ್ದಾರೆ ಅಂತ. ಭಾರತೀಯ ಸಂತ ಶ್ರೇಷ್ಠ ಬುದ್ಧಿವಂತನನ್ನು ತನ್ನ ದೇಶಕ್ಕೆ ಕರೆದುಕೊಂಡು ಹೋಗಬೇಕು ಎಂಬುದು ಆತನ ಇಚ್ಛೆ. ಅದಕ್ಕಾಗಿ ಸಂತನ ಬಳಿ ಹೋಗಿ ಆಮಂತ್ರಿಸಿದ. ಆತನಿಗೆ ಕಾಣಿಕೆಯಾಗಿ ಒಂದು ಅಮೂಲ್ಯ ರತ್ನ ನೀಡಿದನು. ಆಗ ಜ್ಞಾನಿ ಸಂತ ಹೇಳುತ್ತಾನೆ ಇದ್ಯಾವರತ್ನ?. ನನ್ನ ರತ್ನದ ಮುಂದೆ ನಿನ್ನ ದ್ಯಾವ ರತ್ನ?. ಮೈ ಮೇಲೆ ಅರ್ಧಂಬರ್ಧ ಬಟ್ಟೆ, ಅಲೆಕ್ಸಾಂಡರ್ನಿಗೆ ಆಶ್ಚರ್ಯ ಆಯ್ತು. ನಿನ್ನದೇ ಅದ್ಯಾವರತ್ನ ಎಂದನು. ಆಗ ಆ ಸಂತ ಹೇಳಿದ, ನನ್ನ ರತ್ನ ಈ ಸೂರ್ಯ. ಯಾವುದು ಹೊಳೆಯುತ್ತದೆ ಅದು ರತ್ನ. ಜಗತ್ತಿನ ಬೆಳಗುವ ರತ್ನ ನನ್ನದು. ನನ್ನಷ್ಟು ಶ್ರೀಮಂತ ನೀನು ಇರಲು ಹೇಗೆ ಸಾಧ್ಯ? ಎಂದನು. ನಿನ್ನದು ಯಾವುದು? ಎಲ್ಲಾ ಕಲ್ಲುಗಳು ಅಂದನು. ನಾವು ಸೂರ್ಯನನ್ನೇ ದಿನ ನೋಡುತ್ತೇವೆ. ಆದರೆ ನಮ್ಮಷ್ಟು ಬಡವರು ಯಾರಿಲ್ಲ. ಅಲೆಕ್ಸಾಂಡರ್ ತಕ್ಷಣ ಬೆಚ್ಚಿಬಿದ್ದನು. ಯಾಕೆಂದರೆ ಈ ರತ್ನಗಳಿಗಾಗಿ ಯುದ್ಧ ಮಾಡಿದ್ದನು. ಇದನ್ನು ಕೇಳಿ ಈ ರತ್ನಗಳಿಗೆ ಬೆಲೆನೇ ಇಲ್ಲ ಅನಿಸಿತು. ಸೂರ್ಯನನ್ನೇ ನೋಡಿ ನಮ್ಮದಲ್ಲವೇನು. ಅದನ್ನು ನೋಡಿ ನಮ್ಮ ರತ್ನ ಅಂತ ಭಾವಿಸಿದರೆ, ನಾವು ಶ್ರೀಮಂತರಲ್ಲವೇನು. ಈ ರತ್ನ ಯಾವಾಗಲೂ ನಮ್ಮ ಜೊತೆ ಇರುವುದಿಲ್ಲ, ಅದನ್ನು ಕಾಪಾಡಬೇಕು. ಇಲ್ಲ ಬ್ಯಾಂಕಿನ ಲಾಕರಿನಲ್ಲಿ ಇಡಬೇಕು. ಇಲ್ಲ ಈ ರತ್ನ ನಮ್ಮ ಪ್ರಾಣ ತೆಗೆಯುತ್ತದೆ. ಅಲ್ಲವೇನು?. ಸೂರ್ಯ 12 ತಾಸು ಹೊಳೆಯುತ್ತದೆ. ನಮ್ಮ ಮುಖ ಬೆಳಗುತ್ತದೆ. ಶಾಖ ನೀಡುತ್ತದೆ. ನಮ್ಮ ಜೊತೆ ಇರುತ್ತದೆ. ಜಗತ್ತನ್ನು ಸುಂದರಗೊಳಿಸಿ , ಸಂತೋಷ ಕೊಡುತ್ತದೆ. ಕೊನೆಗೆ ಅಲೆಕ್ಸಾಂಡರ್ ಏನು ತಿಳಿಯದೆ ನನ್ನ ದೇಶಕ್ಕೆ ಬರಬೇಕು ಅಂತ ವಿನಂತಿ ಮಾಡಿಕೊಂಡನು. ಆಗ ಸಂತ ಹೇಳಿದ ನಿನ್ನದ್ಯಾವ ದೇಶ?. ಎಲ್ಲಿದೆ ನಿನ್ನ ದೇಶ?. ವಿಚಾರ ಮಾಡು. ನೀನು ಯಾರು ? ಈ ದೇಶದಲ್ಲಿ ನಿನ್ನ ರಾಜ್ಯ ಅಂತ ಎಲ್ಲಿದೆ? ನಿನ್ನ ಆಜ್ಞೆಯನ್ನು ಈ ಗುಬ್ಬಿ ಪಾಲಿಸುವುದಿಲ್ಲ. ನಿನ್ನ ಆಜ್ಞೆಯನ್ನು ಗಾಳಿ, ನೀರು, ಬೆಳಕು ಪಾಲಿಸುವುದಿಲ್ಲ. ವಿಚಾರ ಮಾಡು ಎಂದನು. ಜಗತ್ತು ಯಾರದು ಅಲ್ಲ. ಆ ಎಲ್ಲಾ ಜಗತ್ತು ನಂದು ಎಂದನು ಸಂತ. ನಾನು ಸೇನೆ ಕಟ್ಟಿಲ್ಲ. ಆದರೆ ಈ ಜಗತ್ತು ನನ್ನದು ಅಂತ ಭಾವಿಸಿದ್ದೇನೆ. ಎಂದು ಭೂಮಿಗೆ ಬಂದನೋ?. ಎಲ್ಲಿಯವರೆಗೆ ಎಲ್ಲಿ ಇರುತ್ತೇನೋ?. ಅಲ್ಲಿಯವರೆಗೆ ಈ ಜಗತ್ತು ನನ್ನದು ಅಂದನು. ಅಲೆಕ್ಸಾಂಡರ್ ಸೋತಿದ್ದ. ಕೊನೆಗೆ ಒಂದು ಉಪಾಯ ಬಳಸಿದ್ದನು. ನೀನು ಬಾರದಿದ್ದರೆ ಕೊಲ್ಲುತ್ತೇನೆ ಎಂದನು. ಆಗ ಸಂತ ನಕ್ಕು ಹೇಳಿದ, ನೀನು ಮಾಡೋದು ಇಷ್ಟೆ. ಕೊಲ್ಲೋದು ಬಿಟ್ಟರೆ ನಿನಗೇನು ಗೊತ್ತು. ಕೊಲ್ಲೋದರಿಂದ ಯಾರಾದರೂ ಸಾಮ್ರಾಟ ಆಗ್ತಾರ?. ಕೊಂದು ನೀನು ಶಾಶ್ವತ ಸಾಮ್ರಾಟ ಆಗ್ತಿಯೇನು?. ನೀನು ಹೋಗಿ ಊರು ತಲುಪುತಿಯೇನು?. ಎಂದನು. ಈ ಮಾತು ಕೇಳಿ ಭಾರತದಲ್ಲಿ ಎಂಥೆಂಥ ಜ್ಞಾನಿಗಳು ಇದ್ದಾರೆ, ಇನ್ನು ಮುಂದೆ ಹೋಗಿ ಭಾರತ ಎಲ್ಲಾ ಆಕ್ರಮಿಸಬೇಕು ಅಂತಿದ್ದವನು ವಾಪಸ್ ಹೊರಡಲು ಸಿದ್ದನಾದನು. ಆತ ತನ್ನ ಊರು ಮುಟ್ಟಿರಲಿಲ್ಲ ಮಧ್ಯದಲ್ಲಿ ಸತ್ತು ಹೋದನು. ಜಗತ್ತಿನ ಪ್ರಭುವಾದ, ನಾಲ್ಕು ದಿನ ಬದುಕಲಿಲ್ಲ. ಸಾಯುವಾಗ ಸೈನಿಕರನ್ನು ಕರೆದು ಹೇಳಿದನು. ನಾನು ಸತ್ತ ಮೇಲೆ ನನ್ನ ಎರಡು ಹಸ್ತ ಶವಪೆಟ್ಟಿಗೆಯ ಹೊರಗೆ ಮೇಲ್ಮುಖವಾಗಿರಲಿ ಎಂದನು. ಏಕೆಂದರೆ ಅಲೆಕ್ಸಾಂಡರ್ ಖಾಲಿ ಕೈಯಲ್ಲಿ ಬಂದ, ಖಾಲಿ ಕೈಯಲ್ಲಿ ಹೋದ ಅಂತ ಜಗತ್ತಿಗೆ ಗೊತ್ತಾಗಲಿ ಎಂದು. ಆತ ಅರಿಸ್ಟಾಟಲ್ ನ ಶಿಷ್ಯನಾಗಿದ್ದನು. ಆತ ಅರಿಸ್ಟಾಟಲ್ ನ ಆಸೆಯಂತೆ ಭಾರತದಿಂದ ಸಂತನನ್ನು ಕರೆದೊಯ್ಯಲು ಇಚ್ಚಿಸಿದ್ದನು. ಅಲೆಕ್ಸಾಂಡರ್ ದೃಷ್ಟಿಯಲ್ಲಿ ನಾನೇನು ಅಲ್ಲ, ನನ್ನದೇನು ಇಲ್ಲ. ಆದರೆ ಸಂತನ ಭಾವ ಈ ಜಗತ್ತೆಲ್ಲ ನನ್ನದೇ. ನಡೆಯಲು ಜಾಗ ಇದೆ. ನೋಡಲು ವ್ಯವಸ್ಥೆ ಇದೆ. ನೋಡಲು ಯಾರದು ತಕರಾರು ಇಲ್ಲ. ನನ್ನ ಹೆಸರಿಗೆ ಮಾಡಿಕೊಳ್ಳಬೇಕೆಂದರೆ ಎಲ್ಲರದು ತಕರಾರು. ಏನೇ ಮಾಡಿದರು ಅದನ್ನು ಇಲ್ಲೇ ಬಿಟ್ಟು ಹೋಗೋದು. ಭೂಮಿ ಇರೋದೇಕೆ...? ನಡೆಯೋಕೆ, ನೋಡೋಕೆ, ಬೆಳೆಯೋಕೆ ವಿನಹ, ನಮ್ಮ ಹೆಸರಿಗೆ ಮಾಡಿಕೊಳ್ಳಲು ಅಲ್ಲ. ಹೆಸರಿಗೆ ಅಂದರೆ ಅದು ಕಾಗದದಲ್ಲಿ ಮಾತ್ರ. ಬದುಕಲು ಅನ್ನ, ನೀರು, ಗಾಳಿ ಬೇಕು. ಇದು ಯಾರಿಗಿಲ್ಲ ಹೇಳಿ ?.ಇದರಲ್ಲಿ ಕೊರತೆಯಾದರೆ ಬಡವ ಅನ್ನಬೇಕು. ಕೊರತೆ ಇಲ್ಲದಿರುವುದೇ ಶ್ರೀಮಂತಿಕೆ. ಹಾಗಂತ ಗಳಿಸಬಾರದು ಅಂತ ಅಲ್ಲ. ನಮ್ಮ ಶಕ್ತಿ , ಬುದ್ಧಿ, ಸಾಮರ್ಥ್ಯ ಬಳಸಿ ಶ್ರಮ ಆಗದಂತೆ, ದುಃಖ ಆಗದಂತೆ ಗಳಿಸಬೇಕು. ಅದು ನಮ್ಮ ಭಾವ ಶ್ರೀಮಂತ ಮಾಡುತ್ತದೆ. ನಾವು ಬಡವರು ಅಂದರೆ ಎಷ್ಟಿದ್ದರೂ ಬಡವರೇ. ನಾವು ಶ್ರೀಮಂತರು ಅಂದರೆ ಎಷ್ಟೇ ಕಡಿಮೆ ಇದ್ದರೂ ಶ್ರೀಮಂತರೇ. ಶ್ರೀಮಂತ ಭಾವವೇ ನಮ್ಮನ್ನು ಶ್ರೀಮಂತ ಮಾಡುತ್ತದೆ. I need nothing. I have everything to enjoy. ಭಾವದ ಕೊರತೆ ಇದ್ದರೆ ಏನು ಮಾಡಿದರೂ ಬಡವರೇ. ಎಲ್ಲಾ ಪ್ರಾಣಿಗಳು ಶ್ರೀಮಂತವಾಗಿದೆ. ಮನುಷ್ಯ ಮಾತ್ರ ಬಡವ. ಭಾವ ಚೆನ್ನಾಗಿದ್ದರೆ ನಾನು ಸಿರಿವಂತ, ನೀವು ಸಿರಿವಂತರೇ. ಭಾವ ಕೆಟ್ಟಿತು ಅಂದರೆ ನಾನು ಬಡವ, ನೀವು ಬಡವರೆ. ಶ್ರೀಮಂತ ಆಗೋದು ಸುಲಭ. ನೀನು ಬದುಕು ನಾನು ಬದುಕುತ್ತೇನೆ. ನಾನು ಶ್ರೀಮಂತ, ನೀನು ಶ್ರೀಮಂತನೆ. ವಿಚಾರ ಮಾಡುವ ಕ್ರಮ ಬದಲಿಸಿದರೆ, ಭಾವ ಶ್ರೀಮಂತವಾಗುತ್ತದೆ. ಇಂದು ಮನೆಗೆ ಹೋಗಿ, ಅದೇ ಹಳೆಯ ಮನೆ ಚಿಕ್ಕ ಮನೆ ನೋಡಿ, ನಾನು ಶ್ರೀಮಂತರಲ್ಲಿ ಶ್ರೀಮಂತ ಅಂತ ಅನ್ನಿ. ಇದೆ ನನ್ನ ಅರಮನೆ ಅನ್ನಿ, ನಾನೇ ರಾಜ, ನನ್ನ ಪತ್ನಿ ರಾಣಿ, ಮಕ್ಕಳೇ ಯುವರಾಜ ಯುವರಾಣಿ ಅಂತ ಭಾವಿಸಿದರೆ, ಎಲ್ಲರೂ ಸಿರಿವಂತರೇ. ಮನೆ ಇರೋದು ಯಾಕೆ...? ಊಟ ಮಾಡೋದಿಕ್ಕೆ, ಮಲಗೋದಿಕ್ಕೆ. ಮಂಚ ದೊಡ್ಡದಲ್ಲ, ಚಾಪೆ ಚಿಕ್ಕದಲ್ಲ, ನಿದ್ದೆ ಬಹಳ ಮುಖ್ಯ. ನಿದ್ದೆ ಬಂದರೆ ಅದೇ ಪಲ್ಲಂಗ ಇದ್ದಂತೆ. ದೊಡ್ಡವರು ದೊಡ್ಡ ಗಾದೆಯ ಮೇಲೆ ಕುಳಿತು ಹೇಳ್ತಾರೆ. ನಾವು ಚಾಪೆ ಮೇಲೆ ಕುಳಿತು ಹೇಳೋದು. ದರೋಡೆ ಮಾಡಿ ಯಾರು ಶ್ರೀಮಂತರಾಗಿಲ್ಲ. ಯಾವ ಕಳ್ಳನು ಶ್ರೀಮಂತನಾಗಿಲ್ಲ. ನನಗೆ ಕೊರತೆ ಇಲ್ಲ ಅನ್ನುವುದೇ ಸಿರಿವಂತಿಕೆ. ಕೊಡುವವರು ಶ್ರೀಮಂತರು. ಬೇಕು ಅನ್ನುವುದು ಬಡವ. ನಾವು ಈ ಜಗತ್ತಿಗೆ ಬಂದಿದ್ದು ಎಣಿಸುವುದಕ್ಕೆ ಅಲ್ಲ. ಬಳಸೋದಕ್ಕೆ. ಅನುಭವಿಸುವುದಕ್ಕೆ. ನಾವು ಶ್ರೀಮಂತರಾಗಬೇಕಾದರೆ ಭಾವ ಶ್ರೀಮಂತವಾಗಬೇಕು. ಅಲ್ಲವೇ ಮಕ್ಕಳೆ..?
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************