-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 141

ಸ್ಫೂರ್ತಿಯ ಮಾತುಗಳು : ಸಂಚಿಕೆ - 141

ಸ್ಫೂರ್ತಿಯ ಮಾತುಗಳು : ಸಂಚಿಕೆ - 141
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 


                  
ರಮೇಶ ಗುಬ್ಬಿಯವರು ಇತ್ತೀಚೆಗೆ ಪ್ರಕಟಿಸಿದ “ಕಾಲ” ಕುರಿತ ಚುಟುಕುಗಳ ಮಾಲೆಯೊಳಗೆ ಒಂದು ಸುಂದರ ನಾಲ್ಕೆಸಳಿನ ಚುಟುಕು ಕುಸುಮವಿದೆ. ಈ ಕುಸುಮದ ಪರಿಮಳವು ಈ ಲೇಖನಕ್ಕೆ ಪ್ರೇರಣೆಯೂ ಹೌದು.
ಸೋತೆನೆಂದು ಕುಸಿದವನ ಕರಪಿಡಿಯುವುದು ಕಾಲ
ಗೆದ್ದೆನೆಂದು ಬೀಗುವವನ ಕಾಲೆಳೆಯುವುದೂ ಕಾಲ
ಕಾಲ ಹಾಕ ಬಹುದು ಮಾಲ
ಕತ್ತರಿಸಲು ಬಲ್ಲುದು ಬಾಲ
ಬಹಳ ಸರಳ ಸಾಲುಗಳು. ಸಾಲುಗಳ ಒಳಾರ್ಥವನ್ನು ನೋಡುತ್ತಾ ಹೋದರೆ ಸರಳವೆನಿಸದು, ಅಂತರಾರ್ಥ ಬಹಳ ಆಳವಾಗಿದೆ. 

ಕಾಲ, ಎಂದರೆ ಸಮಯವನ್ನು ದೇವರು ಎಂದು ಪೂಜಿಸುವವರೂ ಇದ್ದಾರೆ; ಸಮಯವೇನು ಮಹಾ ಎಂದು ಸಮಯಕ್ಕೆ ಮಹತ್ವ ಕೊಡದವರೂ ಇದ್ದಾರೆ. ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂ ಕಾಲದ ಮಿತಿಯಿದೆ. ಈ ಮಿತಿಯಲ್ಲಿ ಏರು ಪೇರುಗಳಿವೆ. ಎಲ್ಲ ಜೀವಿಗಳ ಬದುಕಿನ ಕಾಲ ಸಮಾನವಾಗಿಲ್ಲ. ಹೂವಿನ ಮೊಗ್ಗು ಅರಳಿ ಕಾಂತಿ ಮತ್ತು ಸುಗಂಧ ಬೀರಿ ಕೆಲವು ದಿನಗಳಲ್ಲಿ ಉದುರಿ ಬೀಳಬಹುದು. ಆನೆಗೊಂದು ಜೀವಿತ ಕಾಲವಾದರೆ ಆಮೆಯದು ಬೇರೆಯದೇ ಆಗಿದೆ. ಮನುಷ್ಯರೂ ಕಾಲದ ಮಿತಿಯಿಂದ ಮುಕ್ತರಲ್ಲ. ವೈಜ್ಞಾನಿಕವಾಗಿ ಮಾನವ ಬಹಳ ಬಹಳ ದೂರ ಸಾಗಿದ್ದಾನೆ. ಆದರೆ ತನ್ನ ಜೀವಿತ ಕಾಲವನ್ನು ಬದಲಾಯಿಸಲು ಅವನಿಂದಾಗಲೇ ಇಲ್ಲ. ಕಾಲದ ಮಿತಿಯನ್ನು ಮೀರಲಾರ, ಕಾಲದ ಮಿತಿಯೊಳಗೆ ಮನುಷ್ಯ ಕಾಲವಶನಾಗುವನು.

ಮನುಷ್ಯನಿಗೆ ತನ್ನ ಕಾಲಮಿತಿಯ ಅರಿವಿದ್ದರೂ ಕಾಲಾತೀತನಂತೆ ಬದುಕುತ್ತಾನೆ. ಕಾಲನ ಭಯವೂ ಇಲ್ಲ, ಕಾಲನ ಒಲವೂ ಇಲ್ಲ. ಮಹಾಭಾರತದ ಕಥಾ ಪ್ರಸಂಗವೊಂದು ಹೀಗಿದೆ. ಧರ್ಮರಾಯನ ಬಳಿಗೆ ಭಿಕ್ಷುಕನೊಬ್ಬನು ಬರುತ್ತಾನೆ. ಭಿಕ್ಷೆ ಕೇಳುತ್ತಾನೆ. ಆ ವೇಳೆಗೆ ಧರ್ಮರಾಯನು ಒತ್ತಡದ ಕೆಲಸಗಳಲ್ಲಿ ಲೀನನಾಗಿದ್ದನು. ಭಿಕ್ಷುಕನಿಗೆ, “ನಾಳೆ ಬಾ” ಎಂದು ಬಿಟ್ಟ. ಇದನ್ನು ಗಮನಿಸುತ್ತಿದ್ದ ಅನುಜ ಭೀಮ ಮನದೊಳಗೆ, “ಅಣ್ಣನಾದರೋ ಲೋಕಜ್ಞಾನಿ. ನಾಳೆಯೆಂಬುದು ಅನಿಶ್ಚಿತವೆಂದರಿತ ಕಾಲಜ್ಞಾನಿ. ಆದರೂ ಭಿಕ್ಷುಕನಿಗೆ ನಾಳೆ ಬಾ ಎಂದನೇಕೆ?” ಎಂದು ಪರಿತಪಿಸಿದನಂತೆ. ಧರ್ಮರಾಯನೇ ಒಂದು ಕ್ಷಣ ಕಾಲವನ್ನು ಮರೆತು, ನಾಳೆಯ ಕಾಲವೂ ತನ್ನದೇ ಎಂದು ನಿರ್ಧಾರ ಮಾಡಿರುವಾಗ ಜನ ಸಾಮಾನ್ಯರು ಕಾಲವನ್ನು ಮರೆತರೆ ವಿಶೇಷವಲ್ಲ.

ಕವಿಯ ಸಾಲನ್ನು ಗಮನಿಸಿದರೆ ಸೋತವನು ದುಃಖಿಸುತ್ತಾನೆ. ದೀರ್ಘ ಕಾಲದ ಪರಿಶ್ರಮದಿಂದಲೂ ಗೆಲ್ಲಲು ಆಗಲಿಲ್ಲ. ಸೋಲುವುದರಲ್ಲೇ ಕಾಲ ಮುಗಿದರೆ ಅಥವಾ ತಾನು ಕಾಲವಾದರೆ, ಬದುಕಿನಲ್ಲಿ ಗೆಲುವೇ ಇಲ್ಲವಲ್ಲ ಎಂಬ ಹತಾಷೆಯಿಂದ ಅವನು ದುಖದಿಂದ ಕುಸಿಯುತ್ತಾನೆ. ತನ್ನ ಕಾಲವು ವ್ಯರ್ಥವಾಯಿತಲ್ಲ ಎಂದು ತಿಳಿದವನಿಗೆ ಮುಂದೆ ಗೆಲುವಿನ ಕಾಲ ಒದಗಿ ಬರುತ್ತದೆ. ಸೋಲೇ ಗೆಲುವಿನ ಸೋಪಾನ ಎಂದು ಹಿರಿಯರು ಸುಮ್ಮನೆ ಹೇಳಿರುವುದಲ್ಲ. ಕುಸಿದವನನ್ನು ಕಾಲವೇ ಮುಂದೆ ಕೈಹಿಡಿಯುತ್ತದೆ. ಸೋಲು ಗೆಲುವುಗಳೆರಡನ್ನೂ ಕಾಲವೇ ಒದಗಿಸುತ್ತದೆ. ಸೋತವನು ಕುಗ್ಗಿದರೆ ಗೆದ್ದವನು ಬೀಗುತ್ತಾನೆ ಎಂಬುದು ಲೋಕರೂಢಿ. ಗೆದ್ದವನು ಗೆದ್ದಾಗ ಆನಂದ ಪಡಲಿ, ಆದರೆ ಬೀಗಬಾರದು, ಬೀಗಿ ಮೀಸೆ ತಿರುವ ಬಾರದು. ಗೆದ್ದೆನೆಂದು ಬೀಗುವ ಅಹಂಕಾರಿಗೆ ಕಾಲವೇ ಪಾಠ ಕಲಿಸುತ್ತದೆ. ಗೆದ್ದು ವಿಜೃಂಭಿಸುವ ಅವನಿಗೆ ಸರಿಯಾದ ಮದ್ದನ್ನು ಸ’ಕಾಲ’ದಲ್ಲೇ ಕಾಲವೇ ಅರೆಯುತ್ತದೆ. ಅವನ ಗೆಲುವಿನ ವೇಗದ ಕಾಲನ್ನು ಕಾಲವು ಎಳೆಯುತ್ತದೆ. ಅವನಿಗೆ ಸೋಲಿನ ಕಹಿಯನ್ನು ಕಾಲವು ಉಣಿಸುತ್ತದೆ. ಗೆದ್ದವನು ಬೀಗಬಾರದು, ಸೋತವನು ಕುಗ್ಗಬಾರದು. ಕಾಲಾಯ ತಸ್ಮೈ ನಮಃ ಎಂದು ಸೋಲು ಗೆಲುವುಗಳನ್ನು ಕಾಲನಿಗೇ ಅರ್ಪಿಸಬೇಕು.

ಕಾಲವು ಮಾಲೆಯನ್ನೂ ಹಾಕುತ್ತದೆ ಎಂದರೆ ಗೌರವ ಬಿರುದಾವಳಿಗಳನ್ನು ನೀಡುತ್ತದೆ, ಧನ ಕನಕಾದಿ ಸಂಪತ್ತನ್ನೂ ನೀಡುತ್ತದೆ. ಘನವಾದ ಪೀಠಗಳನ್ನೂ ಕಾಲ ನೀಡಬಹುದು. ಆದರೆ ‘ಕಾಲ‘ದ ಪರಿಜ್ಞಾನವಿಲ್ಲದೆ ಬದುಕು ನಡೆಯದು. ನೀಡಿದಾತನೇ ಕಿತ್ತುಕೊಳ್ಳಲೂ ಬಲ್ಲ ಎಂಬುದನ್ನು ‘ಕಾಲ’ವು ಬಾಲವನ್ನು ಕತ್ತರಿಸಲೂ ಬಲ್ಲುದೆಂದು ಹೇಳುತ್ತಾ ಕವಿಗಳು ಎಚ್ಚರಿಸಿದ್ದಾರೆ. ಕಾಲನಿಗೆ ತಾರತಮ್ಯವಿಲ್ಲ, ಆದರೆ ಅಹಂಕಾರಿಗೆ ಕಾಲವು ಹೂಂಕರಿಸದಿರದು.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article