ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 54
Tuesday, November 12, 2024
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 54
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ.... ಕಳೆದ ವಾರ ಎಲೆಗಳಲ್ಲಿ ಉಸಿರಾಟ ಹೇಗೆ ನಡೆಯುತ್ತದೆ ಎಂದು ನೋಡುತ್ತಿದ್ದೆವು. ಮರುಭೂಮಿಯ ಸಸ್ಯಗಳು ನೀರುಳಿಸಲು ಮಾಡಿಕೊಂಡ ವಿಶೇಷ ವ್ಯವಸ್ಥೆಯನ್ನು ನೋಡಿದೆವು. ಇದನ್ನು ನಾವು ನೀರುಳಿಸುವ ಸಾಮರ್ಥ್ಯ (Water Use efficiency) (WUE) ಎನ್ನುತ್ತೇವೆ. ಇಂತಹ CAM ಸಸ್ಯಗಳು ಕಡಿಮೆ ನೀರನ್ನು ಬಳಸಿಕೊಂಡು ಹೆಚ್ಚು ಜೀವ ದ್ರವ್ಯರಾಶಿಯನ್ನು (bio mass) ಉತ್ಪಾದಿಸುತ್ತವೆ. ಈ ವಾರ ಕಾಂಡ ಮತ್ತು ಬೇರುಗಳ ಉಸಿರಾಟದ ಬಗ್ಗೆ ತಿಳಿಯೋಣ.
ಎಳೆಯ ಕಾಂಡಗಳು ಹಸಿರಾಗಿರುವುದನ್ನು ನೋಡಿದ್ದೀರಲ್ಲವೇ. ಹಸಿರು ಭಾಗಗಳು ಎಂದರೆ ಅವು ಕ್ಲೋರೊಪ್ಲಾಸ್ಟ್ ಗಳನ್ನು ಹೊಂದಿರುವುದರಿಂದ ಆಹಾರ ತಯಾರಿಸುವ ಸಾಮರ್ಥ್ಯ ಹೊಂದಿರುತ್ತವೆ. ಆಹಾರ ತಯಾರಿಕೆಯ ಸಂದರ್ಭದಲ್ಲಿ ಮಾಡಬೇಕಾದ ಅನಿಲ ವಿನಿಮಯಕ್ಕಾಗಿ ಅವುಗಳು ಪತ್ರ ರಂಧ್ರಗಳನ್ನು ಬಳಸಿಕೊಳ್ಳುತ್ತವೆ. ಈ ಕಾಂಡಗಳು ಬೆಳೆಯುತ್ತಾ ಹೋದ ಹಾಗೆ ಅವು ಹಸಿರು ಬಣ್ಣವನ್ನು ಕಳೆದುಕೊಂಡು ಅತ್ತ ಕೋಶಗಳ ದಪ್ಪನೆಯ ಪದರವಾದ ತೊಗಟೆಯಾಗಿ ಮಾರ್ಪಡುತ್ತವೆ. ಮಿರ್ಟೇಸಿ (Myrtaceae) ಗುಂಪಿಗೆ ಸೇರುವ ಪೇರಳೆ, ನಂದಿ ನೀಲಗಿರಿ ಮರಗಳಲ್ಲಿ ಈ ತೊಗಟೆ ಕಾಲಕಾಲಕ್ಕೆ ಬಿದ್ದು ಹೋಗುತ್ತಿರುತ್ತದೆ. ಈ ತೊಗಟೆಗಳ ಕೋಶಗಳು ಸತ್ತಿರುವುದರಿಂದ ಅವು ಗಾಳಿಯನ್ನು ಹೀರಿಕೊಳ್ಳಲಾರವು ಮತ್ತು ತಮ್ಮ ಮೂಲಕ ಗಾಳಿ ವಿನಿಮಯಕ್ಕೂ ಅವಕಾಶ ನೀಡಲಾರವು. ಈ ಕಾಂಡಗಳ ತೊಗಟೆಗಳಲ್ಲಿ ಲೆಂಟಿಸೆಲ್ ಗಳು (lnticels) ಎಂಬ ರಂಧ್ರಗಳಿದ್ದು ಈ ರಂಧ್ರಗಳ ಮೂಲಕ ಅನಿಲ ವಿನಿಮಯ ನಡೆಯುತ್ತವೆ. ಕೆಲವೊಂದು ಸಸ್ಯಗಳಲ್ಲಿ ಈ ಲೆಂಟಿಸೆಲ್ ಗಳ ಕಾಂಡದ ಸೀಳುಗಳು ಬಹಳ ಅಲಂಕಾರಿಕವಾಗಿ ಕಾಂಡವನ್ನು ಅಕರ್ಷಕವಾಗಿಸುತ್ತವೆ. ಇವು ಕೆಲವು ಕೀಟಗಳ ಅಡಗುತಾಣಗಳಾಗಿದ್ದು ಪರೋಪಕಾರಿಯಾಗಿವೆ. ನಾವು ಮನುಷ್ಯರಾದರೂ ಮನೆಯ ಮೂಲೆಗಲ್ಲಿ ಬಲೆಯನ್ನು ಕಟ್ಟಿ ಮನೆಯೊಳಗೆ ಬರುವ ಕೀಟ ಸೊಳ್ಳೆಗಳನ್ನು ಹಿಡಿದು ನಮ್ಮಗೆ ಉಪಕರಿಸುವ ಜೇಡಗಳನ್ನು ಅವುಗಳ ಮನೆ ಮುರಿದು ಬಡಿದೋಡಿಸುತ್ತೇವೆ. ಕಾಂಡಗಳಲ್ಲಿ ಸತ್ತ ಜೀವಕೋಶಗಳ ಸಂಖ್ಯೆ ಹೆಚ್ಚಿರುವುದರಿಂದ ಆಮ್ಲಜನಕದ ಬೇಡಿಕೆ ಕಡಿಮೆ.
ಬೇರುಗಳು ಮಣ್ಣಿನೊಳಗೆ ಇದ್ದು ನೀರನ್ನು ಹೀರಿಕೊಳ್ಳುತ್ತವೆ. ಈ ಹೀರಿಕೊಳ್ಳುವಿಕೆಗೆ ಶಕ್ತಿ ಬೇಕು. ಶಕ್ತಿ ಬೇಕು ಎಂದರೆ ಉಸಿರಾಟ ಅನಿವಾರ್ಯ. ಈ ಉಸಿರಾಟಕ್ಕೆ ಮಣ್ಣಿನ ಎಡೆಗಳಲ್ಲಿ ಅಡಗಿರುವ ಆಮ್ಲಜನಕವನ್ನು ಬಳಸಿಕೊಳ್ಳುತ್ತದೆ. ಆದ್ದರಿಂದ ಮಣ್ಣಿನೊಳಗೆ ಆಮ್ಲಜನಕ ಸೇರಿ ಹೋಗಲು ಮಣ್ಣನ್ನು ಸಡಿಲಗೊಳಿಸುವ ಉದ್ದೇಶದಿಂದ ಆಳವಾಗಿ ಉಳುಮೆ ಮಾಡುತ್ತಾರೆ. ಈ ಮಣ್ಣಿನೊಳಗೆ ನೀರು ಸೇರಿಕೊಂಡು ಬಿಟ್ಟರೆ ನೀರು ಗಾಳಿಯನ್ನು ಹೊರದೂಡುತ್ತದೆ ಮತ್ತು ಬೇರಿಗೆ ಉಸಿರುಗಟ್ಟುತ್ತದೆ. ಆಗ ಬೇರಿಗೆ ಶಕ್ತಿ ಇಲ್ಲದೇ ನೀರು ಹೀರಿಕೊಳ್ಳದೇ ಗಿಡ ಬಾಡಿ ಹೋಗುತ್ತದೆ. ನಿಮ್ಮ ಕುಂಡದಲ್ಲಿ ಅತಿಯಾಗಿ ನೀರು ಹಾಕಿ ಅಲ್ಲಿ ನೀರು ನಿಂತರೆ ಗಿಡಗಳು ಬಾಡಿ ಹೋಗುವುದನ್ನು ನೀವು ಗಮನಿಸಿರಬಹುದು. ನಿಮ್ಮ ಉದ್ದು ಹೆಸರಿನಂತಹ ಧಾನ್ಯದ ಗದ್ದೆಗಳಲ್ಲಿ ಮಳೆ ಬಂದು ಒಂದೆರಡು ದಿನ ನೀರು ನಿಂತರೆ ಧಾನ್ಯದ ಗಿಡಗಳು ಸತ್ತು ಹೋದದ್ದು ನಿಮಗೆ ನೆನಪಿದೆಯೇ? ಅದಕ್ಕೆ ಕಾರಣ ಕೂಡಾ ಅದೇ. ಇದನ್ನು ಜೀವ ಭೌತಿಕ ಬರಗಾಲ (physiological drought) ಎನ್ನುವುದು. ಆಟಿ ತಿಂಗಳಿನಲ್ಲಿ ಗಿಡಗಳು ಹೂ ಬಿಡುವುದಿಲ್ಲ ಎಂದು ಕಥೆಯೊಂದಿದೆಯಲ್ಲ. ಆ ಕಥೆ ನಿಮ್ಮನ್ನು ನನ್ನ ಲೇಖನದ ಬಳಿ ಕರೆದುಕೊಂಡು ಬಂದು ನಿಲ್ಲಿಸಿದರೆ ನೀವು ವಿಜ್ಞಾನದ ಹಾದಿಯಲ್ಲಿದ್ದೀರಿ ಎಂದರ್ಥ.
ನಿಮ್ಮ ಈ ನಿಯಮ ಭತ್ತದ ಗಿಡಕ್ಕೆ ಅನ್ವಯಿಸುವುದಿಲ್ಲವೇ ಎಂದು ನೀವು ಕೇಳಬಹುದು. ಭತ್ತ ಒಂದು ಅರೆ ಜಲ ಸಸ್ಯ (semi aquatic plant). ಇವುಗಳು ನೀರು ನಿಂತ ನೆಲದಲ್ಲಿ ಬೆಳೆಯುತ್ತವೆ. ಇವುಗಳ ಎಲೆಯ ತೊಟ್ಟು ಮತ್ತು ಕಾಂಡದ ಕೋಶಗಳು ಗಾಳಿಯ ಜಾಗವನ್ನು ಒಳಗೊಂಡಿರುವ ಏರೆಂಕೈಮಾ (aerenchyma) ಕೋಶಗಳಾಗಿ ಮಾರ್ಪಡುತ್ತವೆ. ಈ ಏರೆಂಕೈಮಾ ಕೋಶಗಳು ನೇರವಾಗಿ ವಾತಾವರಣದಿಂದ ಗಾಳಿಯನ್ನು ಬೇರುಗಳಿಗೆ ತಲುಪುವಂತೆ ಮಾಡುತ್ತವೆ. ಹೀಗೆ ಪಡೆದುಕೊಂಡ ಆಮ್ಲಜನಕ ಸುತ್ತಲಿರುವ ನೀರಿನಲ್ಲಿ ಕರಗಿ ಕಳೆದು ಹೋಗಬಹುದು. ಅದಕ್ಕಾಗಿ ಭತ್ತ ತನ್ನ ಬೇರಿನ ಸುತ್ತ ಒಂದು ಆಮ್ಲಜನಕ ತಡೆಗೋಡೆಯನ್ನು ರಚಿಸಿಕೊಂಡು ಈ ರೀತಿ ಅಡ್ಡಕ್ಕೆ ಆಮ್ಲಜನಕ ನಷ್ಟವಾಗುವುದನ್ನು (Radial Oxygen Loss) (ROL) ತಡೆಯುತ್ತದೆ. ಇನ್ನು ಆಮ್ಲಜನಕ ದೊರೆಯುವುದೇ ಇಲ್ಲ ಎಂಬ ಸಂದರ್ಭ ಬಂದರೆ ಇಥೆನಾಲ್ ಸಹಿಷ್ಣುತೆ (ethanol tolerance) ಹೊಂದಿರುವ ಭತ್ತದ ಬೇರುಗಳು ವಾಯು ರಹಿತ ಉಸಿರಾಟ ನಡೆಸಿ (anaerobic respiration) ಬದುಕುಳಿಯುತ್ತವೆ.
ಭತ್ತದ ಗಿಡಗಳಿಗೆ ಇಷ್ಟೊಂದು ಕಷ್ಟವಾಗುವುದಾದರೆ ಗುಲಾಬಿ ಗಿಡದ ಹಾಗೆ ಕಡಿಮೆ ನೀರಿನಿಂದ ಬೆಳೆಯಬಹುದಲ್ಲ ಎಂಬ ಅನುಕಂಪ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಆದರೆ ರೈತರಿಗೆ ಚೆನ್ನಾಗಿ ಗೊತ್ತು... ನಿಂತ ನೀರಿನಲ್ಲಿ ಹೆಚ್ಚಿನ ಕಳೆ ಬೆಳೆಯದೇ ಇರುವುದರಿಂದ ನಿಂತ ನೀರಿನಲ್ಲಿ ಬೆಳೆದ ಭತ್ತ ಹೆಚ್ಚು ಇಳುವರಿ ನೀಡುತ್ತದೆ ಎಂದು.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************