ಜೀವನ ಸಂಭ್ರಮ : ಸಂಚಿಕೆ - 163
Sunday, November 10, 2024
Edit
ಜೀವನ ಸಂಭ್ರಮ : ಸಂಚಿಕೆ - 163
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ತತ್ವಜ್ಞಾನಿ ಮತ್ತು ತತ್ವದರ್ಶಿಗಳ ಬಗ್ಗೆ ತಿಳಿದುಕೊಳ್ಳೋಣ. ಜಗತ್ತಿನ ವಸ್ತುಗಳನ್ನು ವಿಭಜಿಸಿ ವಿಭಜಿಸಿ ಅದರ ಮೂಲ ಸತ್ಯವಸ್ತು ಕಂಡು ಹಿಡಿದವನು ತತ್ವಜ್ಞಾನಿ. ಸತ್ಯದ ಸೌಂದರ್ಯದಲ್ಲಿ ಬೆರೆತವನು, ಅನುಭವಿಸಿದವನು ತತ್ವದರ್ಶಿ, ದಾರ್ಶನಿಕ, ದರ್ಶನ ಮಾಡಿದವನು ಎನ್ನುವರು.
ತತ್ವಜ್ಞಾನಿ ಆ ವಸ್ತುವಿನ ಧರ್ಮ, ಕರ್ಮ ಕ್ರಿಯೆ ಬೇರೆ ಬೇರೆ ಮಾಡಿ, ಗುಣ, ಸಂಬಂಧ ಇವುಗಳನ್ನು, ಆ ವಸ್ತುವನ್ನು ವಿಭಜಿಸಿ ವಿಭಜಿಸಿ ಕಂಡುಹಿಡಿಯುತ್ತಾನೆ. ಮತ್ತೊಬ್ಬ ಇದ್ದಾನೆ ಇದನ್ನೆಲ್ಲ ಗಮನಿಸದೆ ಆ ವಸ್ತುವಿನ ಸೌಂದರ್ಯದಲ್ಲಿ ಮಗ್ನ ಆಗುತ್ತಾನೆ. ಆತನೇ ದಾರ್ಶನಿಕ. ತತ್ವಜ್ಞಾನಿ ತತ್ವಗಳನ್ನು ವಿಭಜಿಸುತ್ತಾನೆ. ದಾರ್ಶನಿಕ ಸತ್ಯವನ್ನು ಅನುಭವಿಸುತ್ತಾನೆ. ಹೂವಿನ ಬೆಲೆ ಕಟ್ಟುವವನು ತತ್ವಜ್ಞಾನಿ. ಹೂವಿನ ಆನಂದದಲ್ಲಿ ಮೈಮರೆಯುವವನು ತತ್ವದರ್ಶಿ. ತತ್ವದರ್ಶಿ ಮಹಾಕವಿ ಇದ್ದಂತೆ. ಆತನಿಗೆ ಹೂವಿನಲ್ಲಿ ಏನಿದೆ? ಮಹತ್ವದಲ್ಲ. ಅದರ ಸೌಂದರ್ಯದಲ್ಲಿ ಮಗ್ನ ಆಗೋದು ಮಹತ್ವ. ಹೂವಿನಲ್ಲಿ ದಳ ಎಷ್ಟಿದೆ?. ಹೂವಿನ ಆಕೃತಿ ಹೇಗಿದೆ?. ಹೂವಿನ ಒಳಗೆ ಶಲಾಕೆ, ಕೇಸರ ಹೇಗಿದೆ? ಪರಾಗಸ್ಪರ್ಶ ಹೇಗಾಗುತ್ತದೆ?. ಹಣ್ಣು ಹೇಗಾಗುತ್ತದೆ?, ಬೀಜ ಹೇಗಾಗುತ್ತದೆ?. ಇದೆಲ್ಲ ವಿಚಾರ ಮಾಡುವವನು ತತ್ವಜ್ಞಾನಿ. ಬರೀ ಹೂ ಅಂದರೆ ಸಾಕು. ಈ ಹೂ ಕಣ್ಣು ತುಂಬಿತು, ಮನಸ್ಸು ತುಂಬಿತು, ಆ ಹೂವು ಆತನನ್ನೇ ತುಂಬಿ, ಆತ ತನ್ನನ್ನೇ ಮರೆತು, ಆತನೇ ಹೂವಾದಾಗ, ಆಗುವ ಆನಂದ ವರ್ಣಿಸಲು ಸಾಧ್ಯವಿಲ್ಲ. ಅಂತಹ ಆನಂದದಲ್ಲಿ ಬೆರೆತವನೇ ದಾರ್ಶನಿಕ. ಎರಡು ಬೇಕಾಗುತ್ತದೆ. ತತ್ವಜ್ಞಾನಿಯೂ ಬೇಕು, ತತ್ವದರ್ಶಿಯು ಬೇಕು. ಬರಿ ತತ್ವಜ್ಞಾನಿಯಾದರೆ ಆನಂದ ಆಗುವುದಿಲ್ಲ.
ಮಕ್ಕಳೇ ನೀವು ಪಾಠ ಕೇಳುತ್ತೀರಿ. ಶಿಕ್ಷಕರು ಪಾಠ ಮಾಡುತ್ತಾರೆ. ನೀವು ಕೇಳುವಿಕೆಯಲ್ಲಿ ನಿಮ್ಮನ್ನೇ ಮರೆತರೆ, ಶಿಕ್ಷಕ ಹೇಳುವುದರಲ್ಲಿ ತನ್ನನ್ನೇ ಮರೆತರೆ, ನೀವಿಬ್ಬರೂ ದಾರ್ಶನಿಕರೆ. ಅದೇ ಶಿಕ್ಷಕ ಆ ಪುಸ್ತಕ, ಈ ಪುಸ್ತಕ ಓದಿ.... ಯಾವುದೇ ಪ್ರಶ್ನೆ ಕೇಳಿದರೂ, ಆ ಪುಸ್ತಕದಲ್ಲಿ ಉತ್ತರ ಹೀಗಿದೆ... ಈ ಪುಸ್ತಕದಲ್ಲಿ ಉತ್ತರ ಹೀಗಿದೆ.... ಅಂತ ಹೇಳಿದರೆ, ಚೆನ್ನಾಗಿ ಅಭ್ಯಾಸ ಮಾಡಿಕೊಂಡು ಬಂದಿದ್ದರೆ, ಆತ ತತ್ವಜ್ಞಾನಿ. ಬುದ್ದಿಯಿಂದ ತಿಳಿದುಕೊಂಡರೆ ಜ್ಞಾನಿ. ಮನಸ್ಸಿನಿಂದ, ಹೃದಯದಿಂದ ಅನುಭವಿಸಿದರೆ ದಾರ್ಶನಿಕ ಆಗುತ್ತೀವಿ.
ಜ್ಞಾನಿಗಳಿಗೆ ತತ್ವಜ್ಞಾನಿ ಅಂತಾರೆ. ದಾರ್ಶನಿಕರಿಗೆ ಮಹಾತ್ಮರು (ಮಹಾ, ಆತ್ಮರು) ಮಹಾನುಭಾವರು (ಮಹಾ, ಅನುಭವಿ) ಅನ್ನುತ್ತಾರೆ. ಬುದ್ಧ, ಮಹಾವೀರ, ಬಸವಣ್ಣ, ಅಲ್ಲಮ, ಕಾಳಿದಾಸ, ರವೀಂದ್ರನಾಥ ಟಾಗೋರ್, ಹಿಂದಿನ ಋಷಿ ಮುನಿಗಳು ದಾರ್ಶನಿಕರಾಗಿದ್ದರು ಮತ್ತು ತತ್ವಜ್ಞಾನಿಗಳು ಆಗಿದ್ದರು. ನಾವು ಎರಡೂ ಆಗಬೇಕು. ಒಂದೇ ಆಗುವುದಿದ್ದರೆ ದಾರ್ಶನಿಕರು ಆಗಬೇಕು. ಜಗತ್ತಿನಲ್ಲಿ ಏನದೆ? ಏನಿಲ್ಲ? ತೆಗೆದುಕೊಂಡು ಏನು ಮಾಡುವುದು? ಆನಂದ ಪಟ್ಟರೆ ಸಾಕಲ್ಲ. ಸೂರ್ಯ ಉದಯಿಸುತ್ತಾನೆ. ಆ ಸೂರ್ಯ ನಲ್ಲಿ ಕಣ್ಣು ಅರಳಿಸಿದರೆ, ಮನಸ್ಸು ಅರಳಿಸಿದರೆ, ಮಗ್ನ ಆದರೆ ಸಾಕಲ್ಲ. ಸೂರ್ಯೋದಯ ಎಷ್ಟು ಗಂಟೆಗೆ ಆಯಿತು?. ಅದು ಪೂರ್ವ ದಿಕ್ಕಿನಲ್ಲಿ, ನೇರವಾಗಿ ಉದಿಯಿಸಿತ್ತಾ, ಬಲಕ್ಕೆ ಉದಯಿಸಿತ್ತಾ, ಎಡಕ್ಕೆ ಉದಯಿಸಿತ್ತಾ, ಹೀಗೆ ವಿಚಾರ ಮಾಡುತ್ತಿದ್ದರೆ ಜ್ಞಾನಿ. ಹೀಗೆ ತಿಳಿದುಕೊಳ್ಳುವ ಭರಾಟೆಯಲ್ಲಿ ಆನಂದ ಮರೆತು ಹೋಗುತ್ತದೆ. ಸೂರ್ಯೋದಯ ದಿಂದ ಸಂತೋಷ ಪಟ್ಟರೆ, ಆತನೇ ಋಷಿ. ರವೀಂದ್ರನಾಥ ಟ್ಯಾಗೋರ್ ಹೇಳ್ತಾರೆ... ಭಗವಂತನೇ ನಾನೆಷ್ಟು ಪುಣ್ಯವಂತ, ನೀನು ಸರ್ವಜ್ಞ. ಎಲ್ಲವನ್ನು ಸೃಷ್ಟಿ ಮಾಡಿದೆ. ನಿನ್ನಷ್ಟು ಸಾಮರ್ಥ್ಯ ನನಗಿಲ್ಲ. ನೀನು ಏನು ಮಾಡಿದಿಯೋ ಅದನ್ನೆಲ್ಲ ನೋಡಿ, ಕೇಳಿ ಅನುಭವಿಸಿದವನು ನಾನು. ನನಗೆ ನಿನ್ನ ಹಾಗೆ ಮಾಡೋದಕ್ಕೆ ಬರುವುದಿಲ್ಲ. ನೀನು ಮಾಡಿರುವುದನ್ನು ಅನುಭವಿಸು ಅಂತ ಕಳಿಸಿದಿಯಲ್ಲ, ಅಷ್ಟು ಮಾಡಿದೆ ಭಗವಂತನೇ. ನನ್ನ ಕಣ್ಣನ್ನು ಸಾರ್ಥಕ ಮಾಡಿಕೊಂಡಿದ್ದೇನೆ. ನನ್ನ ಕೈಗಳನ್ನು ಸಾರ್ಥಕ ಮಾಡಿಕೊಂಡಿದ್ದೇನೆ. ನನ್ನ ಮನ, ಭಾವ ಸಾರ್ಥಕ ಮಾಡಿಕೊಂಡಿದ್ದೇನೆ. ಈ ಜಗತ್ತಿನಲ್ಲಿ ಏನೇನು ನೋಡಬೇಕು? ಅದನ್ನೆಲ್ಲ ನೋಡಿದ್ದೇನೆ. ಏನೆಲ್ಲಾ ಕೇಳಬೇಕು ?.ಅದನ್ನೆಲ್ಲ ಕೇಳಿದ್ದೇನೆ. ಏನೇನೆಲ್ಲ ಅನುಭವಿಸಬೇಕು?. ಅದನ್ನೆಲ್ಲ ಅನುಭವಿಸಿದ್ದೇನೆ. ಈ ಸಾರ್ಥಕ ಜೀವನ ಸಾಗಿಸಿದ್ದೇನೆ. ನನ್ನ ಕಣ್ಣು, ಕೈ , ಮನಸ್ಸು, ಪವಿತ್ರವಾಗಿದೆ. ನಾನು ನಿನ್ನನ್ನು ನೋಡಲು ಬಯಸುವವನಲ್ಲ. ನಿನ್ನ ಜಗತ್ತನ್ನು ಅನುಭವಿಸುವಂತಹ ಇಂದ್ರಿಯಗಳನ್ನು ನೀಡಿರುವೆ. ಆ ಇಂದ್ರಿಯಗಳನ್ನೆಲ್ಲ ಸಾರ್ಥಕ ಮಾಡಿದೆ ಭಗವಂತನೇ ಎಂದರು. ನಾವು ಆತನ ಜಗತ್ತಿನಲ್ಲಿ ಅನುಭವಿಸುವುದನ್ನು ಬಿಟ್ಟು, ಆತ ಹೇಗಿದ್ದಾನೆ? ಎಲ್ಲಿದ್ದಾನೆ? ಅಂತ ಹುಡುಕಲು ಶುರು ಮಾಡಿದ್ದೇವೆ. ದೇವರು ಏನು ಕೊರತೆ ಮಾಡಿದ್ದಾನೆ ? ನೋಡೋದಕ್ಕೆ, ಕೇಳೋದಿಕ್ಕೆ, ತಿನ್ನೋದಿಕ್ಕೆ , ಎಲ್ಲಾ ನೀಡಿದ್ದಾನೆ. ಯಾವ ಪ್ರಾಣಿಯೂ ಏನು ಮಾಡಿಲ್ಲ, ಬಡವರಾಗಿಲ್ಲ. ಆದರೆ ಮನುಷ್ಯ ಮಾತ್ರ ಬಡವಾಗಿದ್ದಾನೆ. ಬದುಕಿನ ಸಾರ್ಥಕತೆ ಇರುವುದು ಗಳಿಸುವುದರಲ್ಲಿ, ಸಂಗ್ರಹಿಸುವುದರಲ್ಲಿ ಅಲ್ಲ, ಸಂತೋಷ ಕಂಡುಕೊಳ್ಳುವುದರಲ್ಲಿ. ಅದಕ್ಕೆ ನಾವು ಅನುಭವಿಯಾಗಬೇಕು, ದಾರ್ಶನಿಕ ಆಗಬೇಕು. ತತ್ವಜ್ಞಾನಿ ಮತ್ತು ದಾರ್ಶನಿಕ ಆದರೆ ಹಾಲು ಜೇನು ಸೇರಿದಂತೆ ಅಲ್ಲವೇ ಮಕ್ಕಳೇ...
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************