ಸ್ಫೂರ್ತಿಯ ಮಾತುಗಳು : ಸಂಚಿಕೆ - 140
Monday, November 4, 2024
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 140
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಜ್ಞಾನಯೋಗ ಮತ್ತು ಭಕ್ತಿಯೋಗ ಭಾರತದ ಅಂತಃಸತ್ವದ ಪ್ರಮುಖ ದಿಕ್ಕುಗಳಾಗಿವೆ. “ಭ” ಎಂದರೆ ಬೆಳಕು. ಜ್ಞಾನಕ್ಕೆ ಬೆಳಕು ಎಂದೂ ಹೇಳುತ್ತೇವೆ. ಅಂಧಕಾರ ಎಂದರೆ ಅಜ್ಞಾನ. ಭಕ್ತಿಯಲ್ಲೂ “ಭ’” ಇದೆ. ವಿವೇಕಾನಂದರು ಹೇಳುವಂತೆ, “ಯಾವುದಾದರೂ ದೇಶದಲ್ಲಿ ಒಳಿತು ಇದೆಯೆಂದಾರೆ ಅದು ಭಾರತದಿಂದ ಹರಿದ ಜ್ಞಾನ ಮತ್ತು ಭಕ್ತಿಯೋಗದ ಪರಿಣಾಮ. ಭಾರತದ ಅಂತಃ ಸತ್ವವೇ ಅಷ್ಟು ಅದ್ಭುತ, ಪ್ರಗಲ್ಭ ಮತ್ತು ಪ್ರಖರ.
“ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸಿ” ಈ ಶ್ಲೋಕ ಭಾರತೀಯ ಚಿಂತನೆಯ ಒಳನೋಟವನ್ನು ಬಿಂಬಿಸುತ್ತದೆ. ಭಾರತೀಯರು ಜನ್ಮದಾತೆ ಮತ್ತು ಭೂಮಾತೆಯನ್ನು ಸ್ವರ್ಗಕ್ಕಿಂತ ಶ್ರೇಷ್ಟವೆಂದು ಆದರಿಸುತ್ತಾರೆ. ದೇವರಿಗೆ ಸಾಷ್ಟಾಂಗ ಪ್ರಣಾಮ ಮಾಡುವಂತೆ ತಾಯಿಗೂ ಸಾಷ್ಟಾಂಗ ನಮಸ್ಕಾರ ಮಾಡುತ್ತೇವೆ. ಎಲ್ಲ ಸ್ವಾಮೀಜಿಗಳು ಕೂಡಾ ತಾಯಿಗೆ ದೀರ್ಘದಂಡ ನಮಸ್ಕಾರ ಮಾಡುತ್ತಾರೆ. ತಾಯಿಗಿಂತ ಮಿಗಿಲಾದ ಸಂಪತ್ತು ಯಾವುದೂ ಇಲ್ಲ ಎಂಬುದೇ ಈ ದೇಶದ ಸತ್ವ ಮತ್ತು ತತ್ವ.
“ಲೋಕಾಃ ಸಮಸ್ತಾ ಸುಖಿನೋ ಭವಂತು”. ಸ್ವಹಿತವೇ ನಮ್ಮ ಮುಖ್ಯ ಗುರಿಯಾಗಿರಬಾರದು. ಸ್ವಹಿತಕ್ಕೆ ಪ್ರಾಧಾನ್ಯತೆ ನೀಡಿದರೆ ಅದು ಸ್ವಾರ್ಥವೆನಿಸುತ್ತದೆ. ತನ್ನ ಮತ್ತು ತನ್ನವರ ಸುಖ ಜೀವನವನ್ನೂ ಮೀರಿದ ಅಂತಃಸತ್ವ ಭಾರತೀಯರದು. ನಾವು ಇಡೀ ವಿಶ್ವವೇ ಸುಖದಿಂದಿರಬೇಕೆಂದು ಹಾರೈಸುತ್ತೇವೆ. ಯಾವುದೇ ಧಾರ್ಮಿಕ ಕಾರ್ಯಕ್ರಮಗಳ ಅಂತ್ಯದಲ್ಲಿ ಲೋಕಕ್ಕೇ ಮಂಗಳವಾಗಲಿ, ಕ್ಷೇಮವಾಗಲಿ ಎಂದು ಭಗವಂತನನ್ನು ಪ್ರಾರ್ಥಿಸುತ್ತೇವೆ. ಶತ್ರುವಿನ ಹಿತವನ್ನೂ ಬಯಸುವ ನಮ್ಮ ಅಂತಃಸತ್ವ ವಿಶ್ವಕ್ಕೇ ಮಾದರಿ. ಭಾರತೀಯ ಜ್ಞಾನಿಗಳು, ಋಷಿಮುನಿಗಳು, ಸಂತರು, ದೃಷ್ಟಾರರು, ಗುರುಗಳು, ಹಿರಿಯರು, “ವಸುದೈವ ಕುಟುಂಬಕಂ” ಎಂಬ ಮಾತಿನ ಮೂಲಕ ಎಲ್ಲರನ್ನೂ ಬೆಸೆಯುವ, ಜೋಡಿಸುವ, ಹೊಂದಿಸುವ ಪ್ರಯತ್ನಗಳನ್ನೇ ಮಾಡಿದ್ದಾರೆ. ಭಾರತೀಯರ ರಕ್ತದ ಕಣ ಕಣದಲ್ಲೂ ಎಲ್ಲರ ಒಳಿತಿನ ಆಶಯವಿದೆ, ಎಲ್ಲರ ಬಗ್ಗೆಯೂ ಪ್ರೀತ್ಯಾದರಗಳಿವೆ.
“ಅಹಿಂಸಾ ಪರಮೋ ಧರ್ಮಃ” ಇದು ನಮ್ಮ ಜೀವನ ಸಿದ್ಧಾಂತ. ನಮ್ಮ ಎಲ್ಲ ಪೂರ್ವಜರು ಮತ್ತು ದೃಷ್ಠಾರರು ಅನುಗ್ರಹಿಸಿದ ಮತ್ತು ಅನುಸರಿಸಿದ ಮಹಾ ತತ್ವವಿದು. ಒಂದು ಕೆನ್ನೆಗೆ ಬಾರಿಸಿದವನಿಗೆ ಇನ್ನೊಂದು ಕೆನ್ನೆಯನ್ನು ತೋರಿಸು ಎಂಬ ಮಾತು ಇದೆ. ಪರಿಸರದ ಜೀವರಾಶಿಗಳನ್ನು ಮತ್ತು ಯಾವುದೇ ಮನಸ್ಸುಗಳನ್ನು ನೋಯಿಸಬಾರದೆಂಬುದೇ ಸನಾತನ ಸಿದ್ಧಾಂತ ಮತ್ತು ಜೀವನ ಧರ್ಮ. ಧರ್ಮಕ್ಕೆ ಅಪಛಾರವಾದಾಗ, ಸನಾನತನ ನಂಬುಗೆಗಳಿಗೆ ಧಕ್ಕೆಯುಂಟಾದಾಗ, “ಧರ್ಮ ಹಿಂಸಾ ತಥೈವಚ” ಎಂದೂ ಹಿರಿಯರು ಹೇಳಿದ್ದಾರೆ. ದೇಶ ಧರ್ಮ, ಮಾನವ ಧರ್ಮ, ಜೀವನ ಧರ್ಮದ ಪ್ರಶ್ನೆ ಬಂದಾಗ ಹಿಂಸೆಯನ್ನೂ ಮಾಡಬೇಕಾಗುತ್ತದೆ; ಹೇಡಿಯಾಗಿರುವುದು ಸರಿಯಲ್ಲ ಎಂಬ ಪಾಠವೂ ನಮ್ಮ ಅಂತಃಸತ್ವ.
ನಿಸ್ವಾರ್ಥ ಜೀವನಕ್ಕೆ ಭಾರತದಲ್ಲಿ ಅತ್ಯಂತ ಮಹತ್ವವಿದೆ. ಎಲ್ಲರನ್ನೊಳಗೊಳಿಸಿ, ಎಲ್ಲರೂ ಒಂದೆಡೆ ಸೇರಿ ಕಲೆತು ಬಾಳುವುದೇ ಭಾರತೀಯ ಜೀವನದ ತಿರುಳು. “ನೀನೂ ಬದುಕು ಮತ್ತು ಅನ್ಯರನ್ನೂ ಬದುಕಲು ಬಿಡು” ಈ ಮಾತು ಭಾರತೀಯ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಪ್ರಧಾನ ತತ್ವ. ಪರಸ್ಪರರು ಬೆಸೆದು ಬಾಳುವ ರೀತಿ ನೀತಿಗಳೇ ನಮಗೆ ಹೆಚ್ಚು ಗೌರವನ್ನು ತಂದಿವೆ. ನಾವು ಎಲ್ಲವನ್ನೂ ಸಹಿಸುತ್ತೇವೆ, ಎಲ್ಲರನ್ನೂ ಸಹಿಸುತ್ತೇವೆ. ಹೊಂದಾಣಿಕೆಯಿಂದ ಬಾಳುತ್ತೇವೆ. ಸಹಿಷ್ಣುತೆಯೇ ಭಾರದ ಜೀವಾಳ.
ಕಳಬೇಡ, ಕೊಲಬೇಡ; ಹುಸಿಯ ನುಡಿಯಲು ಬೇಡ; ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ; ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ. ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ! ಬಸವಣ್ಣನವರ ಈ ವಚನ ಭಾರತದ ಅಂತಃಸತ್ವದ ಮಹಾ ಮುಕುಟ. ಅವರ ಈ ಸಂದೇಶಗಳು ನಮ್ಮ ಜೀವನದಲ್ಲಿ ಸಮ್ಮಿಳಿತವಾಗಿವೆ. ನಮ್ಮ ಹಿರಿಯರ ಬದುಕಿನ ಪಥಗಳು ನಮಗೆ ಅನುಕರಣೀಯ ಮತ್ತು ಅನುಸರಣೀಯ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
********************************************