ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 53
Tuesday, November 5, 2024
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 53
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ.... ಮತ್ತೆ ಬುಧವಾರ ಬಂದಿದೆ. ನೀವು ನನ್ನ ಲೇಖನದ ನಿರೀಕ್ಷೆಯಲ್ಲಿರುತ್ತೀರಿ. ನಾನು ಲೇಖನವನ್ನು ಕಳುಹಿಸದಿದ್ದರೆ ಶ್ರೀ ತಾರಾನಾಥ ಸರ್ ಬೇಗನೇ ಕಳುಹಿಸುವಂತೆ ಗಡಿಬಿಡಿ ಮಾಡುತ್ತಾರೆ. ಆಗ ಗಡಬಡಿಸಿ ಎದ್ದು ಬರೆಯತೊಡಗುತ್ತೇನೆ. ಹೀಗೆ ತಾರನಾಥ ಸರ್ ಅವರ ಒತ್ತಾಸೆಯಿಂದಾಗಿ ಒಂದು ವರ್ಷ ಪೊರೈಸಿ ಎರಡನೆಯ ವರ್ಷಕ್ಕೆ ಕಾಲಿಡುತ್ತಿದ್ದೇನೆ. ಅದಕ್ಕೆ ನಾನು ಶ್ರೀ ತಾರಾನಾಥ್ ಸರ್ಗೆ ಅಭಿನಂದನೆಗಳನ್ನು ತಿಳಿಸುತ್ತೇನೆ.
ನನಗೆ ಅಚ್ಚರಿಯಾಗುತ್ತದೆ ಶ್ರೀ ಜ್ಞಾನೇಶ್ ಸರ್ 3 ವರ್ಷಗಳಿಂದ ಶ್ರೀ ರಮೇಶ್ ಬಾಯಾರು ಸರ್ ಮತ್ತು ಶ್ರೀಮತಿ ವಿಜಯಾ ಟೀಚರ್, ಶ್ರೀ ರಮೇಶ ನಾಯ್ಕ ಸರ್ ಕಳೆದ 2 ವರ್ಷಗಳಿಂದ ಬರೆಯುತ್ತಿದ್ದಾರೆ. ಅವರೆಲ್ಲರ ಬದ್ಧತೆ ನನಗೆ ಅಚ್ಚರಿ ತರುತ್ತದೆ. ಅವರಿಗೆಲ್ಲಾ ನನ್ನ ಅಭಿನಂದನೆಗಳು.
ಕಳೆದ ವಾರ ನೀರು ಪೋಲು ಮಾಡುವ ಸಸ್ಯಗಳ ಬಗ್ಗೆ ಬರೆದೆ. ಆ ಮುಸುಕಿನ ಜೋಳ ಅತಿಯಾದ ನೀರು ಬೇಡುತ್ತದೆ. ಅದರ ಪಾಪ್ ಕಾರ್ನ್ ಬೇಯಿಸಿದ ತೆನೆ ತಿನ್ನಲು ರುಚಿಯಾಗುತ್ತದೆಂದು ರಾಜಸ್ಥಾನದ ಥಾರ್ ನಲ್ಲಿ ಬೆಳೆಯಲು ಸಾಧ್ಯವೇ? ಯಾಕೆಂದರೆ ಅಲ್ಲಿಯ ಜನ ಪಾತ್ರೆ ತೊಳೆಯುವುದು ನೀರಿನಲ್ಲಿ ಅಲ್ಲ ಬದಲಾಗಿ ಮರಳಿನಲ್ಲಿ. ಏಕೆಂದರೆ ಪಾತ್ರೆ ತೊಳೆಯಲು ಅಲ್ಲಿ ನೀರೇ ಇಲ್ಲ. ಇನ್ನು ತಾನು ಹೀರಿಕೊಂಡ ನೀರಿನ 91% ನೀರನ್ನು ಹೊರಹಾಕುವ ಈ ಗಿಡ ಊರನ್ನು ಇಟ್ಟೀತೆ. ಹಾಗಾದರೆ ಅಲ್ಲಿ ಬೆಳೆಯುವ ಗಿಡಗಳು ಯಾವುವು ಎನ್ನುವುದು ನಿಮಗೆ ಅಲ್ಲಲ್ಲಿ ಇರುವ ಓಯಸಿಸ್ ಗಳ ಬಳಿ ಬಿಟ್ಟರೆ ಮತ್ತೆ ಬೆಳೆಯುವುದು ಬರಿಯ ಕಳ್ಳಿಗಳು. ಈ ಕಳ್ಳಿಗಳು ನೀರು ನಷ್ಟವಾಗುತ್ತದೆಂದು ಎಲೆಗಳನ್ನೇ ಹೊಂದಿರುವುದಿಲ್ಲ. ಏಕೆಂದರೆ ಎಲೆಗಳಿದ್ದರೆ ಪತ್ರ ರಂಧ್ರಗಳಿರುತ್ತವೆ ಪತ್ರರಂಧ್ರಗಳಿದ್ದರೆ ನೀರು ನಷ್ಟವಾಗುತ್ತದೆ. ಆದ್ದರಿಂದ ಅವು ಎಲೆಗಳನ್ನು ಉದುರಿಸಿಕೊಂಡು ಬಿಡುತ್ತವೆ. ಹಾಗಾದರೆ ಆಹಾರ ತಯಾರಿ? ಕಾಂಡವೇ ಹರಿದ್ರೇಣುಗಳನ್ನು (chloroplast,) ಹೊಂದಿ ಹಸಿರಾಗಿ ಕಾಣುತ್ತದೆ. ಅಂದರೆ ಕಾಂಡವು ಪರ್ಣರೋಪಿ ಕಾಂಡವಾಗಿ (phillode) ಮಾರ್ಪಾಡಾಗಿ ಆಹಾರ ತಯಾರಿ ನಡೆಸುತ್ತವೆ. ಇವುಗಳೂ ಅನಿಲ ವಿನಿಮಯ ಮಾಡಿಕೊಳ್ಳಲೇ ಬೇಕಲ್ಲ ಇದಕ್ಕೆ ಪತ್ರ ರಂದ್ರ ಬೇಡವೇ? ಬೇಕು. ಪತ್ರ ರಂಧ್ರ ಇದ್ದರೆ ಭಾಷ್ಪ ವಿಸರ್ಜನೆ ಆಗಲೇ ಬೇಕಲ್ಲ? ಹೌದು ಆಗುತ್ತದೆ. ಆದರೆ ಅದು ನಿಯಂತ್ರಿಸಲು ಪ್ರಕೃತಿ ಮಾಡಿಕೊಟ್ಟ ವ್ಯವಸ್ಥೆಯ ಬಗ್ಗೆ ನೋಡೋಣ.
ಈ ಪರ್ಣರೂಪಿ ಕಾಂಡಗಳಲ್ಲಿರುವ ಪತ್ರ ರಂಧ್ರಗಳು ಕಾಂಡದ ಆಳದಲ್ಲಿರುತ್ತವೆ. ನೇರವಾಗಿ ತೆರೆದುಕೊಂಡ ಕೆರೆಗಳ ನೀರು ಬೇಗ ಆವಿಯಾಗುತ್ತದೆ. ಆದರೆ ಬಾವಿಗಳ ನೀರು ಅಷ್ಟು ಬೇಗ ಆವಿಯಾಗುವುದಿಲ್ಲವಲ್ಲ ಹಾಗೆ. ಮತ್ತೆ ಈ ಪತ್ರ ರಂಧ್ರಗಳು ಹಗಲು ಹೊತ್ತಿನಲ್ಲಿ ಹೆಚ್ಚು ತೆರದುಕೊಳ್ಳದೇ ಇರುವುದರಿಂದ ನೀರಿನ ಆವಿಯಾಗುವ ಪ್ರಮಾಣ ಕಡಿಮೆಯಾಗಿದೆ. ಆದರೆ ಆಹಾರ ತಯಾರಿಸಲು ಇಂಗಾಲದ ಡೈಆಕ್ಸೈಡ್ ಬೇಕಲ್ಲ.... ಅದಕ್ಕೇನು ಮಾಡುವುದು ಎಂಬುದು ಮುಂದಿನ ಪ್ರಶ್ನೆಗೆ ನೀವು ಸಿದ್ಧರಾಗಿದ್ದೀರಿ ಎಂದು ಆ ಪಾಪಾಸು ಕಳ್ಳಿಯ ಗಿಡಕ್ಕೂ ಗೊತ್ತು. ಅದಕ್ಕೆ ಅದು ಈಗಾಗಲೇ ಒಂದು ಉಪಾಯ ಕಂಡು ಕೊಂಡಿದೆ. ಅದನ್ನು ಕ್ರಾಸುಲೇಸಿಯನ್ ಆ್ಯಸಿಡ್ ಮೆಟಾಬಾಲಿಸಂ (CAM) (Crassulacean Acid metabolism) ಎಂದು ಕರೆಯುತ್ತೇವೆ. ಸಸ್ಯಗಳಲ್ಲಿ ಕ್ರಾಸುಲೇಸಿ ಎಂಬುದು ಸಸ್ಯಗಳ ಒಂದು ಕುಟುಂಬ. ಅದರಲ್ಲಿ ನೀವು ತಿನ್ನುವ ಅನಾನಸು ಕೂಡ ಸೇರುತ್ತದೆ. ಈ ಸಸ್ಯಗಳು ರಾತ್ರಿ ಹೊತ್ತಿನಲ್ಲಿ ತಮ್ಮ ಪತ್ರ ರಂಧ್ರಗಳನ್ನು ತೆರೆದು ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುತ್ತವೆ. ಈ ಹೀರಿಕೊಂಡ ಇಂಗಾಲದ ಡೈಆಕ್ಸೈಡ್ ಅನ್ನು ಫಾಸ್ಫೋ ಇನಾಲ್ ಪೈರುವೇಟ್ (PEP) ಒಂದು ಎನಜೈಮ್ ನ ಸಹಾಯದಿಂದ ಮ್ಯಾಲೇಟ್ ಆಗಿ ಪರಿವರ್ತಿಸಿ ರಸದಾನಿಯಲ್ಲಿ ಕರಗಿಸಿ ಬಿಡುತ್ತದೆ. ಹಗಲಿನ ಹೊತ್ತಿನಲ್ಲಿ ಈ ಮ್ಯಾಲೇಟ್ ಅನ್ನು ರಸದಾನಿಯಿಂದ ಹೊರ ತೆಗೆದು ಇಂಗಾಲದ ಡೈಆಕ್ಸೈಡ್ ಆಗಿ ಪರಿವರ್ತಿಸಿ ಹರಿದ್ರೇಣುಗಳಿಗೆ ರವಾನಿಸಿ ಅಲ್ಲಿ ಅದನ್ನು ಆಹಾರ ತಯಾರಿಕೆಗೆ ಬಳಸಲಾಗುತ್ತದೆ. ರಾತ್ರಿಯ ತಂಪು ಹೊತ್ತಿನಲ್ಲಿ ಈ ಪತ್ರ ರಂಧ್ರಗಳು ತೆರೆದುಕೊಳ್ಳುವುದರಿಂದ ನೀರನ್ನು ಕಳೆದುಕೊಳ್ಳುವ ಪ್ರಶ್ನೆ ಬರುವುದಿಲ್ಲ.
ನಾನು ಮೊದಲಿಂದ ಹೇಳುತ್ತಾ ಇದ್ದೇನಲ್ಲ ಪ್ರಕೃತಿ ಒಂದು ಅದ್ಭುತ ವಿನ್ಯಾಸಕಾರ ಎಂದು. ಇದೊಂದು ಹೊಸ ವಿನ್ಯಾಸ ನಿಮ್ಮ ಗಮನಕ್ಕೆ ಬಂತು ತಾನೇ...
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************