ನಿಷ್ಪಾಪಿ ಸಸ್ಯಗಳು : ಸಂಚಿಕೆ - 72
Thursday, October 17, 2024
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 72
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ..... ಹೇಗಿದ್ದೀರಿ? ರಜೆಯಲ್ಲಿ ಅಜ್ಜಿ ಮನೆಗೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮನ ಮನೆಗಳಿಗೆ ಸುತ್ತಿರಬೇಕಲ್ವೇ? ಹೊಸ ಗಿಡಗಳನ್ನೇನಾದರೂ ಗುರುತಿಸಿರುವಿರಾ?
ನಾನೂ ಬಾಲ್ಯದಲ್ಲಿ ನಮ್ಮತ್ತೆ ಸ್ನಾನಕ್ಕೆ ಹೊರಡುವ ಕ್ರಮವನ್ನು ಗಮನಿಸುತ್ತಿದ್ದೆ. ಸ್ನಾನ ಮಾಡುವ ಅರ್ಧ ಮುಕ್ಕಾಲು ಗಂಟೆಯ ಮೊದಲು ಅವರು ಗದ್ದೆಯ ಬದುವಿಗೆ ಹೋಗಿ ಗರುಗ ಅನ್ನುವ ಸೊಪ್ಪನ್ನು ಹುಡುಕಿ ತಂದು ಅಂಗೈಯಲ್ಲಿ ಹಾಕಿ ತಿಕ್ಕಿ ಬಂದ ರಸವನ್ನು ತಲೆಗೆ ಹಾಕುತ್ತಿದ್ದರು. ಆ ಸೊಪ್ಪಿನ ರಸದಿಂದ ಅಂಗೈಗಳು ಕಪ್ಪಾಗುತ್ತಿದ್ದವು. ಸ್ನಾನದ ಮನೆಗೆ ಹೋಗುವ ಮೊದಲು ಸ್ವಲ್ಪ ದಾಸವಾಳದ ಸೊಪ್ಪು ತಂದು ತೊಳೆದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ ಕಿವುಚಿ ದಪ್ಪ ಲೋಳೆ ಬರುವಂತೆ ಮಾಡಿ ಒಯ್ಯುತ್ತಿದ್ದರು. ಅದೇ ಅವರ ಶಾಂಪೂ! ಸೀಗೆ ಹುಡಿಯಲ್ಲೆ ಸ್ನಾನ ಮಾಡುತ್ತಿದ್ದ ಅವರಿಗೆ ಕೂದಲುದುರುವ ಸಮಸ್ಯೆಯೇ ತಿಳಿದಿರಲಿಲ್ಲ. ಎಂಭತ್ತರ ಹರೆಯದಲ್ಲೂ ತಲೆಯಲ್ಲಿ ಬಿಳಿ ಕೂದಲ ನಡುವೆ ಕಪ್ಪು ಕೂದಲುಗಳಿದ್ದವು.
ನಾವಿಂದು ಆಧುನಿಕತೆಯ ನೆಪದಲ್ಲಿ ನೂರಾರು ಸಾಬೂನು ಶಾಂಪೂಗಳ ನಡುವೆ ಕೂದಲಿನ ಮಾರ್ದವತೆ ಮಾತ್ರವಲ್ಲ ಕೂದಲನ್ನೂ , ಬಣ್ಣವನ್ನೂ ಅತಿ ಬೇಗನೆ ಕಳೆದು ಕೊಳ್ಳುತ್ತಿದ್ದೇವೆನ್ನುವುದು ವಿಷಾದನೀಯ.
ಕನ್ನಡದಲ್ಲಿ ಗರುಗ, ಕಾಡುಗರುಗ, ಅಜಗರ, ಗರಗಲು, ಕೇಶವರ್ಧನ ಎಂದು ಕರೆಯಲ್ಪಡುವ ಭೃಂಗರಾಜ ಎಲ್ಲೆಡೆ ಕಳೆಯಂತೆ ಬೆಳೆಯುವುದಾದರೂ ಮನುಷ್ಯನಿಗೆ ತುಂಬಾ ಉಪಯುಕ್ತವಾದ ಸಸ್ಯವಾಗಿದೆ. ಸಂಸ್ಕೃತದಲ್ಲಿ ಕೇಶರಂಜನ, ಕೇಶರಾಜ ಎಂದು ಖ್ಯಾತಿ ಹೊಂದಿದೆ. ಅರೆತಲೆನೋವಿಗೆ ಉತ್ತಮ ಔಷಧಿಯಾದುದರಿಂದ ಸೂರ್ಯಾವರ್ತ ಎಂಬ ಕೀರ್ತಿಯಿದೆ.
ಗರುಗ ತನ್ನಲಿರುವ ಅಪೂರ್ವ ಔಷಧೀಯ ಗುಣಗಳಿಂದಾಗಿ ಪುರಾತನವಾದ ಶೌನಕೇಯ, ಅಥರ್ವ, ಕೌಶಿಕ ಸೂತ್ರಗಳಲ್ಲಿ ಸ್ಥಾನ ಪಡೆದಿದೆ. 13ನೇ ಶತಮಾನದ ರಾಜನಿಘಂಟಿನಲ್ಲಿ 80 ಬಗೆಯ ಸಣ್ಣ ಸಸ್ಯಗಳನ್ನು ಗುರುತಿಸಿದ್ದು ಅದರಲ್ಲಿ ಗರುಗವೂ ಸೇರಿದೆ! ಅಷ್ಟಾಂಗ ಹೃದಯದಲ್ಲಿ ವಾಗ್ಭಟ ಭೃಂಗರಾಜವನ್ನು ದಿನವೂ ಸೇವಿಸುವುದರಿಂದ ಬಲದಾಯಕ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದಿದ್ದಾನೆ.
ತುಳುವಿನಲ್ಲಿ ಗರ್ಗ ಎಂದು ಕರೆಯಲ್ಪಡುವ ಈ ಗಿಡಮೂಲಿಕೆ ಕಾಲುವೆ, ಚರಂಡಿಗಳ ಅಂಚಿನಲ್ಲಿ ಕೊಯ್ಲಾದ ಭತ್ತದ ಗದ್ದೆಗಳಲ್ಲಿ, ನೆರಳು ತೇವವಿರುವ ತೋಟಗಳಲ್ಲಿ ಕಳೆಯಂತೆ ಬೆಳೆಯುವ ಏಕವಾರ್ಷಿಕ ಮೃದು ಸಸ್ಯ. ಇದು ಆಚೀಚೆ ತೆವಳಿಕೊಂಡು ಹರಡಿಯೂ ಬೆಳೆಯಬಲ್ಲದು ಸ್ಥಳಾವಕಾಶದ ಕೊರತೆಯಾದರೆ ಎರಡು ಅಡಿಗಳೆತ್ತರ ನೆಟ್ಟಗೂ ನಿಂತು ಗಾಂಭೀರ್ಯ ತೋರಬಲ್ಲದು. ಎಳೆಯದಾಗಿರುವಾಗ ಕಾಂಡ ನೇರಳೆ ಮಿಶ್ರಿತ ಹಸಿರಾಗಿದ್ದು ಬಿಳಿಯ ಸೂಕ್ಷ್ಮ ರೋಮಗಳಿರುತ್ತವೆ. ಸರಳವಾಗಿ ನೀಳವಾಗಿರುವ ಎಲೆಗಳು ಅಭಿಮುಖವಾಗಿರುತ್ತವೆ.
ಗರುಗದ ಗಿಡವನ್ನು ಗುರುತಿಸಲು ಸಹಾಯ ಮಾಡುವುದು ಅದರ ಹೂ ಮತ್ತು ಬೀಜ. ಎಲೆಯ ಕಂಕುಳಲ್ಲಿ ಸೂರ್ಯಕಾಂತಿ ಹೂವನ್ನು ಹೋಲುವ ಚಿಕ್ಕ ಹೂವಿದ್ದು ಬಿಳುಪಿನ ಪುಟಾಣಿ ದಳಗಳ ಹಿಂಡು ತುಂಬಿರುತ್ತದೆ. ದಳಗಳು ಉದುರಿದ ಬಳಿಕ ಅಲ್ಲೇ ಬಟ್ಟಲಿನಂತೆ ಹರಿವೆ ಬೀಜದಂತಹ ಸಣ್ಣ ಬೀಜಗಳು ತುಂಬಿರುತ್ತವೆ. ಬಿಳಿ, ನೀಲಿ, ಹಳದಿ ಬಣ್ಣದ ಮೂರು ವಿಧಗಳಿರುವ ಗರುಗದಲ್ಲಿ ಹಳದಿ ಬಣ್ಣವನ್ನು ಕೇರಳದಲ್ಲಿ ಔಷಧಿಯಾಗಿ ಬಳಸುತ್ತಾರೆ. ನೀಲಿ ಬಣ್ಣದ್ದು ಪಶ್ಚಿಮ ಬಂಗಾಳದಲ್ಲಿ ಭೀಮಂಜ ಎಂಬ ಹೆಸರಲ್ಲಿ ಪ್ರಸಿದ್ಧವಾಗಿದೆ. ನಮ್ಮ ಪೂರ್ವಜರು ಇದರ ಕಾಡಿಗೆಯನ್ನು ತಯಾರಿಸುತ್ತಿದ್ದರು. ಎಲೆಗಳನ್ನು ಸಂಕಷ್ಟಹರ ಚತುರ್ಥಿವೃತದಲ್ಲಿ ಗಣಪತಿಗೆ, ನಿತ್ಯ ಸೋಮವಾರ ಶಿವನಿಗೆ, ಶ್ರೀ ನರಸಿಂಹ ಜಯಂತಿ ವೃತದಲ್ಲಿ ವಿಷ್ಣುವಿಗೆ, ಶ್ರೀ ಉಮಾಮಹೇಶ್ವರಿಗೆ ಸಲ್ಲಿಸುತ್ತಾರೆ.
ಆಸ್ಟರೇಸಿ (Asteraceae) ಕುಟುಂಬದ ಗರುಗ ಎಕ್ಲಿಪ್ಟಾ ಪ್ರೊಸ್ಟಾಟ (Eclipta prostrata) ಎಂಬ ಸಸ್ಯ ಶಾಸ್ತ್ರೀಯ ಹೆಸರು ಹೊಂದಿದೆ. ಆಯುರ್ವೇದದಲ್ಲಿ ಗರುಗ ಮಹತ್ವದ ಸ್ಥಾನ ಪಡೆದಿದೆ. ಯಕೃತ್ತಿನಿಂದ ಪಿತ್ತರಸ ಉತ್ಪಾದನೆ ಹಾಗೂ ಅದರ ಸಂಬಂಧಿ ರೋಗ ನಿವಾರಣೆಗೆ ಉತ್ತಮ ಫಲಿತಾಂಶ ನೀಡುತ್ತದೆ. ಇದರ ಪಂಚಾಂಗಗಳು ಅಂದರೆ ಬೇರು, ಕಾಂಡ, ಎಲೆ, ಹೂ, ಬೀಜಗಳು ಔಷಧಿಗೆ ಬಳಕೆಯಾಗುತ್ತವೆ. ಹೊಟ್ಟೆಯುಬ್ಬರ, ಚರ್ಮರೋಗ, ತಲೆನೋವು, ಕೂದಲುದುರುವಿಕೆ, ನರಮಂಡಲ ತಂಪಾಗಿಸುವ, ಹುಳದಬಾಧೆ ತಗ್ಗಿಸುವ, ಅಸ್ತಮಾ, ಕೆಮ್ಮು, ಉರಿಯೂತ, ಅಜೀರ್ಣ, ರಕ್ತಹೀನತೆ, ಮೆದುಳಿನ ಅಸ್ವಸ್ಥತೆ ಗಳಿಗೆ ಬಳಕೆಯಾಗುತ್ತದೆ. ಗರ್ಭಸ್ರಾವವನ್ನು ತಡೆಯುವುದೇ ಅಲ್ಲದೆ ಶ್ವಾಸಕೋಶಕ್ಕೆ ಬಲ ನೀಡುತ್ತದೆ. ವಾತ, ಪಿತ್ತ, ಕಫಗಳನ್ನು ಸಮತೋಲನಗೊಳಿಸುತ್ತದೆ. ತಲೆಗೂದಲ ಬಣ್ಣ ತಯಾರಿಗೆ ಬಹಳ ಬೇಡಿಕೆಯಿದೆ.
ಗರುಗವು ಪುನರ್ ಯೌವ್ವನಗೊಳಿಸುವ, ದೀರ್ಘಾಯುಷ್ಯ ನೀಡುವ ಸಸ್ಯವೆಂದು ಪೂರ್ವಿಕರ ನಂಬಿಕೆಯಿದ್ದು ತಲೆತಲಾಂತರದಿಂದ ಬಳಕೆಯಲ್ಲಿದೆ. ಹೊಳೆಯುವ ನಯವಾದ ನೀಳ ಕೂದಲನ್ನು ಹೊಂದುವುದು ಎಲ್ಲಾ ಕಾಲದಲ್ಲೂ ಸ್ತ್ರೀಯರ ಕನಸು. ಇದರ ಈಡೇರಿಕೆಗಾಗಿ ಇಂದಿಗೂ ಪೇಟೆಯಲ್ಲಿರುವ ಮಹಿಳೆಯೂ ಚಟ್ಟಿಯೊಂದರಲ್ಲಿ ತನಗೆ ಬೇಕಾದಷ್ಟು ಗಿಡಗಳನ್ನು ಬೆಳಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ನೀವೂ ಪ್ರಯತ್ನಿಸುವಿರಾ?
ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************