ಪಯಣ : ಸಂಚಿಕೆ - 13 (ಬನ್ನಿ ಪ್ರವಾಸ ಹೋಗೋಣ)
Thursday, October 17, 2024
Edit
ಪಯಣ : ಸಂಚಿಕೆ - 13 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಎಲ್ಲರಿಗೂ ನಮಸ್ಕಾರ...
ಈ ವಾರವೂ ನವರಾತ್ರಿ ಹಬ್ಬದ ವಿಶೇಷವಾಗಿ ಶ್ರೀದೇವಿಯರ ದೇಗುಲದ ದರ್ಶನದಲ್ಲಿ ಶ್ರೀ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದರ್ಶನ ಪಡೆಯೋಣವೇ...?
ದಕ್ಷಿಣ ಕನ್ನಡ ಜಿಲ್ಲೆ ದೇವಸ್ಥಾನಗಳ ತವರೂರು. ಇಲ್ಲಿನ ಮೂಲ್ಕಿಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಪುರಾತನ ಪ್ರಸಿದ್ಧ ದೇವಾಲಯವಾಗಿದ್ದು, ಇಲ್ಲಿನ ಪ್ರಮುಖ ದೇವಸ್ಥಾನಗಳಲ್ಲಿ ಬಪ್ಪನಾಡು ಎಂದೇ ಪ್ರಸಿದ್ಧಿ ಪಡೆದಿದೆ.
ಇಲ್ಲಿನ ಬೃಹದಾಕಾರದ ಡೋಲು ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಬಪ್ಪನಾಡು ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನವೂ ಸಾಕಷ್ಟು ಜನಪ್ರಿಯವಾಗಿದೆ. ಈ ಯಕ್ಷಗಾನ ಪ್ರಸಂಗದಲ್ಲಿ ಬರುವ ಬಪ್ಪಬ್ಯಾರಿ ಪಾತ್ರವೇ ಬಹಳ ಮುಖ್ಯವಾದದ್ದು.
ಮೂಲ್ಕಿ ಪಟ್ಟಣದಲ್ಲಿರುವ ಬಪ್ಪನಾಡು ಎಂಬ ಹಳ್ಳಿಯಲ್ಲಿರುವ ಈ ದೇವಸ್ಥಾನ ಶಾಂಭವಿ ನದಿಯ ದಂಡೆಯಲ್ಲಿದೆ. ಬಪ್ಪನಾಡು ಎಂದರೆ 'ಬಪ್ಪ' ಎಂಬ ವ್ಯಕ್ತಿಯ ಊರು ಎಂಬುದು ಸೂಚ್ಯಾರ್ಥ. ಇದರ ಹಿನ್ನೆಲೆಯಂತೆ ಈ ದೇವಸ್ಥಾನ ಕಟ್ಟಿಸಲು ಬಪ್ಪ ಎಂಬ ಮುಸ್ಲಿಂ ವ್ಯಕ್ತಿ ಕಾರಣನಾದನಂತೆ.
ಈ ದೇಗುಲ ಸುಂದರವಾಗಿದ್ದು, ಒಳಗಿರುವ ಕಂಬಗಳು ಕೆತ್ತನೆಯ ಕುಸುರಿ ಕೆಲಸಗಳಿಂದ ಕೂಡಿದೆ. ದೇವಾಲಯದ ಎದುರೇ ದೊಡ್ಡ ಗಾತ್ರದ ಡೋಲನ್ನು ಇಡಲಾಗಿದೆ. ಇದರ ನಾದ ಇಡೀ ಊರನ್ನು ಕೇಳಿಸುವಷ್ಟು ಜೋರು. ದೇಗುಲದ ಮುಖಮಂಟಪ, ಗರ್ಭಗುಡಿಗಳೂ ವಿಶಾಲವಾಗಿದೆ. ಗಣೇಶನ ಗುಡಿ, ನರಸಿಂಹ ದೇವರ ಗುಡಿಗಳು ಇಲ್ಲಿವೆ. ಈ ದೇವಸ್ಥಾನ 14ನೇ ಶತಮಾನದ ವಾಸ್ತುಶಿಲ್ಪದ ಮಾದರಿಯಲ್ಲಿದೆ.
ಪೌರಾಣಿಕ ಹಿನ್ನೆಲೆ : ಬಪ್ಪ ಬ್ಯಾರಿ ಎಂಬ ಮುಸ್ಲಿಂ ವರ್ತಕ ಶಾಂಭವಿ ನದಿಯ ಮುಖಾಂತರ ಸಮೀಪದ ಹಳ್ಳಿಗೆ ಹೋಗುತ್ತಿದ್ದಾಗ ಅವನಿದ್ದ ದೋಣಿ ಅಚಾನಕ್ಕಾಗಿ ನದಿಯ ಮಧ್ಯದಲ್ಲಿ ನಿಂತುಬಿಟ್ಟಿತಂತೆ. ಏನಾಯಿತೆಂದು ನೋಡುವಾಗ ಅವನಿಗೆ ಒಂದು ಅಶರೀರವಾಣಿ 'ಮೂಲ್ಕಿ ಸಾವಂತರ (ರಾಜ) ಸಹಾಯದೊಂದಿಗೆ ಇಲ್ಲಿ ದೇವಸ್ಥಾನ ಕಟ್ಟು, ಇಲ್ಲಿ ಪೂಜೆಗೆ ಒಬ್ಬ ಅರ್ಚಕನನ್ನು ನೇಮಿಸು' ಎಂದು ಕೇಳಿಬಂತಂತೆ. ಈ ದನಿ ಕೇಳಿದ ಬಪ್ಪಬ್ಯಾರಿ ಇದನ್ನು ಸಾವಂತರಿಗೆ ಹೇಳಿದನಂತೆ, ನಂತರ ಕೊಡುಗೈ ದಾನಿಗಳಿಂದ ಹಣ ಸಂಗ್ರಹಿಸಿ ಅಲ್ಲಿ ಒಂದು ದೇವಸ್ಥಾನ ಕಟ್ಟಿಸಲಾಯಿತು.
ಇದು
ಸುಮಾರು ನೂರು ವರ್ಷಗಳ ಹಿಂದಿನ ಕತೆ. ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ ದಕ್ಷಿಣ ಕನ್ನಡಿಗರಿಗೆ ಒಂದು ಶಕ್ತಿದೇವತಾ ಆರಾಧನಾ ಕೇಂದ್ರ. ಇಲ್ಲಿ ಲಿಂಗವೇ ಪ್ರಮುಖ ದೇವತಾ ವಿಗ್ರಹ. ಮುಸ್ಲಿಂರಿಗೂ ಈ ದೇವಳಕ್ಕೆ ಮುಕ್ತ ಪ್ರವೇಶ ಅಲ್ಲದೆ ಪ್ರಸಾದವನ್ನೂ ಸ್ವೀಕರಿಸುವ ಅನುಮತಿ ಇರುವುದು ಇಲ್ಲಿನ ವೈಶಿಷ್ಟ್ಯ. ದೇವಳದ ಉತ್ಸವದಲ್ಲೂ ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಈಗಲೂ ಉತ್ಸವದ ದಿನ ಪ್ರಸಾದವನ್ನು ಮೊದಲು ಕೊಡುವುದು ಬಪ್ಪಬ್ಯಾರಿಯ ಮನೆಗೆ ಎಂಬುದೂ ಕೂಡ ಕೌತುಕವೇ. ವಾರ್ಷಿಕ ಉತ್ಸವದಲ್ಲಿ ಡೋಲು ಬಾರಿಸುವುದು ಒಂದು ವಿಶೇಷ ಹಬ್ಬ. ಇದು ''ಬಪ್ಪನಾಡು ಡೋಲು' ಎಂದೇ ಪ್ರಸಿದ್ಧವಾಗಿದೆ. ದೇವಳದ ಆಡಳಿತ ಮಂಡಳಿ ಡೋಲು ಬಾರಿಸುವವರಿಗೆ ವಿಶೇಷ ಸಂಭಾವನೆ ನೀಡುತ್ತದೆ. ಸೌರ ಯುಗಾದಿ, ನರಸಿಂಹ ಜಯಂತಿಯಂದು ಇಲ್ಲಿ ವಿಶೇಷ ಪೂಜೆ ಇರುತ್ತದೆ. ವಸಂತ ಪೂಜೆ ಪ್ರತಿದಿನ ನಡೆಯುತ್ತದೆ. ಮಹಾನವಮಿಯಂದು ದುರ್ಗೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಭಕ್ತಾದಿಗಳು ದೇವಿಗೆ ಸಾಕಷ್ಟು ಮಲ್ಲಿಗೆ ಹೂವು ಅರ್ಪಿಸುವುದು ವಿಶೇಷವಾಗಿದೆ.
ತನ್ನ ಶಕ್ತಿ ಪೂಜೆಗೆ ವಿಶೇಷ ಕ್ಷೇತ್ರವಾದ ಬಪ್ಪನಾಡು, ಇಲ್ಲಿನ ವಾರ್ಷಿಕ ಜಾತ್ರೆಗಳು ಮತ್ತು ಉತ್ಸವಗಳಲ್ಲಿ ಎಲ್ಲಾ ಜಾತಿ ಮತ್ತು ಸಮುದಾಯಗಳ ಜನರ ಭಾಗವಹಿಸುವಿಕೆಯೊಂದಿಗೆ ಸ್ಥಳೀಯ ಸಂಪ್ರದಾಯಗಳು, ಸಾಮಾಜಿಕ ಪದ್ಧತಿಗಳು, ವೈದಿಕ ಆಚರಣೆಗಳು ಮತ್ತು ಕೋಮು ಸೌಹಾರ್ದತೆಯ ಶ್ರೀಮಂತ ಮತ್ತು ರೋಮಾಂಚಕ ಅನುಭವ ನೀಡುತ್ತದೆ.
ಮೊಗವೀರರು ರಥವನ್ನು ಅಲಂಕರಿಸುತ್ತಾರೆ, ಕೊರಗರು ತಮ್ಮ ಡೊಳ್ಳು ಅಥವಾ ಭೇರಿ (ಡೋಲು) ಬಡಿತಕ್ಕೆ ನೃತ್ಯ ಮಾಡುತ್ತಾರೆ, ಬ್ರಾಹ್ಮಣರು ವೇದ ಮತ್ತು ಆಗಮಗಳ ಪ್ರಕಾರ ಪೂಜೆ ಮತ್ತು ಆಚರಣೆಗಳನ್ನು ಮಾಡುತ್ತಾರೆ.
ಅನೇಕ ಜಾತಿಗಳ ನಡುವಿನ ಬಾಂಧವ್ಯ, ಧರ್ಮಗಳ ನಡುವಿನ ಸಾಮರಸ್ಯ, ಭವ್ಯ ಹಾಗೂ ದಿವ್ಯವಾದ ಶ್ರೀ ದುರ್ಗಾದೇವಿಯ ಪೂಜೆ ಪುನಸ್ಕಾರ ಉತ್ಸವಗಳು ಸಮಾಜದ ಸರ್ವರ ಭಾಗಿತ್ವದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ರಾಷ್ಟ್ರೀಯ ಹೆದ್ದಾರಿ 66 ರ ಮೂಲಕ ಮಂಗಳೂರಿನಿಂದ ಮತ್ತು ಉಡುಪಿ ಮೂಲ್ಕಿಗೆ ಅನೇಕ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳಿವೆ. ಉಡುಪಿಯಿಂದ 32 ಕಿ.ಮೀ, ಮಂಗಳೂರಿನಿಂದ 25 ಕಿ.ಮೀ. ದೂರದಲ್ಲಿದೆ. ಮುಲ್ಕಿಯಲ್ಲಿ ರೈಲು ನಿಲ್ದಾಣವೂ ಇದೆ.
"ಜಗದೀಶ್ವರಿ, ಜಗನ್ಮಾತೆ ನೆಲೆಸಿರುವ ಬಪ್ಪನಾಡು ಕ್ಷೇತ್ರವು ಶ್ರೀ ದುರ್ಗಾಪರಮೇಶ್ವರಿಯು ಸಕಲರನ್ನು ಸಂತೈಸಲಿ" ದುರ್ಗಾ ದೇವಿಯ ದರ್ಶನ ಪಡೆದು ಪುನೀತರಾಗೋಣ. ಬನ್ನಿ ಪ್ರವಾಸ ಹೋಗೋಣ .....
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
********************************************