ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 50
Tuesday, October 15, 2024
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 50
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ.... ಕಳೆದ ಸಂಚಿಕೆಯಲ್ಲಿ ಸಸ್ಯ ಹಾರ್ಮೋನುಗಳ ಬಳಕೆಯ ಬಗ್ಗೆ ಸೂಕ್ಷ್ಮವಾಗಿ ತಿಳಿದುಕೊಂಡೆವು. ಈಗ ಈ ಹಾರ್ಮೋನುಗಳನ್ನು ಕೃಷಿ ಉತ್ಪಾದನೆ ಹೆಚ್ಚಿಸಲು ಬಳಸಲಾಗುತ್ತಿದೆ. ಇವುಗಳು ಸಂಶ್ಲೇಷಿತ ರಾಸಾಯನಿಗಳು ಇವುಗಳು ಬಹಳ ಅಪಾಯಕಾರಿ ಎಂದು ಬಿಂಬಿಸಲಾಗುತ್ತಿದೆ. ಇವುಗಳಿಂದ ಅಡ್ಡ ಪರಿಣಾಮಗಳಿರಬಹುದು. ಆದರೆ ಇವರು ಅಪಪ್ರಚಾರ ಮಾಡುವಷ್ಟಲ್ಲ ಎಂಬುದು ಖಂಡಿತ. ಸಾವಯವ ಕೃಷಿಯ ಸಂದರ್ಭದಲ್ಲಿಯೂ ಹಾಗೆ. ಇವರು ಹೇಳುವ ಹಾಗೆ ಭಯಂಕರ ಕ್ರಾಂತಿ ಆಗುವುದಿಲ್ಲ.
ಇಂಗಾಲದ ಡೈಆಕ್ಸೈಡ್, ಇಂಗಾಲದ ಮಾನಾಕ್ಸೈಡ್, ಕಾರ್ಬೋನೇಟ್ ಮತ್ತು ಬೈಕಾರ್ಬೋನೇಟ್ ಗಳನ್ನು ಹೊರತುಪಡಿಸಿ ಉಳಿದ ಜೀವಿ ಮೂಲ ಇಂಗಾಲದ ಸಂಯುಕ್ತಗಳನ್ನು ಸಾವಯವ ಸಂಯುಕ್ತಗಳು (organic compounds) ಎನ್ನುತ್ತೇವೆ. ಇವುಗಳ ಮೂಲ ಸಾವಯವ ವಸ್ತುಗಳು ಅಂದರೆ ಜೀವಿ ಮೂಲವಾಗಿತ್ತು. ಇಂತಹ ಸಾವಯವ ವಸ್ತುಗಳಲ್ಲಿ ಅತ್ಯಂತ ಸರಳವಾದದ್ದೆಂದರೆ ಯೂರಿಯಾ. ಇದು ಪ್ರಾಣಿಗಳ ಮೂತ್ರದಲ್ಲಿ ಕಂಡು ಬರುತ್ತದೆ. ಇದನ್ನು ಡಚ್ ವಿಜ್ಞಾನಿ 1727 ರಲ್ಲಿ ಕಂಡುಹಿಡಿದ ಮತ್ತು ಫ್ರೆಂಚ್ ವಿಜ್ಞಾನಿ 1773 ರಲ್ಲಿ ಇದನ್ನು ಮೂತ್ರದಿಂದ ಬೇರ್ಪಡಿಸಿ ಹರಳಿನ ರೂಪದಲ್ಲಿ ಪಡೆದ. ಇದನ್ನು 1828 ರಲ್ಲಿ ಜರ್ಮನಿಯ ವೋಹ್ಲರ್ (Wohler) ಎಂಬ ವಿಜ್ಞಾನಿ ಅಮೋನಿಯಂ ಸಯನೇಟ್ (ammonium cyanate) ಎಂಬ ರಾಸಾಯನಿಕದಿಂದ ಪ್ರಯೋಗಶಾಲೆಯಲ್ಲಿ ಕೃತಕವಾಗಿ ಸಿದ್ಧಪಡಿಸಿದ. ಯೂರಿಯಾ ಪ್ರಯೋಗಶಾಲೆಯಲ್ಲಿ ಕೃತಕವಾಗಿ ತಯಾರಿಸಲಾದ ಮೊದಲ ಸಾವಯವ ಸಂಯುಕ್ತ ಎಂದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಆನಂತರ ಸಾಕಷ್ಟು ಸಾವಯವ ವಸ್ತುಗಳನ್ನು ಪ್ರಯೋಗಶಾಲೆಯಲ್ಲಿ ತಯಾರಿಸಲಾಗುತ್ತಿದೆ. ಹೆಚ್ಚಿನ ಔಷಧಗಳು ಸಾವಯವ ಸಂಯುಕ್ತಗಳೇ. ಅಷ್ಟೇ ಏಕೆ ಮೇದೋಜೀರಕ ಗ್ರಂಥಿಯಿಂದ ತಯಾರಾಗುತ್ತಿರುವ ಇನ್ಸುಲಿನ್ ಎಂಬ ಹಾರ್ಮೋನು ಈಗ ಪ್ರಯೋಗಶಾಲೆಯಲ್ಲಿ ಸಿದ್ದವಾಗುತ್ತಿದೆ. ಈ ಇನ್ಸುಲಿನ್ ಅನ್ನು ವ್ಯಾಪಕವಾಗಿ ಬಳಸುವ ನಮಗೆ ಕಳೆನಾಶಕಗಳ ಬಗ್ಗೆ ಪೂರ್ವಾಗ್ರಹ ಏಕೋ ನನಗೆ ತಿಳಿಯತ್ತಿಲ್ಲ. ನಾವು ದನಿ ಎತ್ತಬೇಕಾಗಿರುವುದು ಕಳೆನಾಶಕಗಳ ಬಳಕೆಯ ಬಗ್ಗೆ ಅಲ್ಲ. ಬದಲಾಗಿ ಕಳೆನಾಶಕಗಳ ಮಿತಿಮೀರಿದ ಬಳಕೆಯ ಬಗ್ಗೆ.
ಅದಿರಲಿ ಬಿಡಿ ನಾನು ಮಾತನಾಡ ಹೊರಟಿರುವುದು ಲವ್ ಗ್ರಾಸ್ ನ ಬಗ್ಗೆ. ಮತ್ತೊಮ್ಮೆ ನಮ್ಮ ವಿಜಯಾ ಟೀಚರ್ ಹೇಳಿರುವ ಮಾತನ್ನು ಮತ್ತೊಮ್ಮೆ ನೆನಪಿಸುತ್ತೇನೆ. ನೆರಳು, ಇಳಿಜಾರು ಇತ್ಯಾದಿಗಳನ್ನು ಅವಲಂಬಿಸಿ ಲವ್ ಗ್ರಾಸ್ ಗಂಟಿನ ಉದ್ದ ವ್ಯತ್ಯಾಸವಾಗುತ್ತದೆ. ನಿಜ. ನಾವು ಈಗಾಗಲೇ ಓದಿದ ಹಾಗೆ ಸಸ್ಯಗಳ ಬೆಳವಣಿಗೆಯನ್ನು ಆಕ್ಸಿನ್ ಗಳು ನಿಯಂತ್ರಿಸುತ್ತವೆ. ಬೆಳೆಯುವ ಭಾಗದಲ್ಲಿ ಸಮ ಪ್ರಮಾಣದಲ್ಲಿ ಹರಡಿ ಹೋಗಿರುವುದರಿಂದ ಆಕ್ಸಿನ್ ಎಲ್ಲ ಕಡೆ ಸಮನಾಗಿ ಹರಡಿ ಹೋಗುವುದರಿಂದ ಎಲ್ಲಾ ಕಡೆ ಕೋಶಗಳು ಸಮನಾಗಿ ಬೆಳೆದು ಸಸ್ಯ ನೆಟ್ಟಗೆ ಬೆಳೆಯುತ್ತದೆ. ಈಗ ಸಸ್ಯದ ಒಂದು ಕಡೆಯಿಂದ ಬಿಸಿಲು ಬೀಳುತ್ತಿದೆ ಎಂದುಕೊಳ್ಳೋಣ. ಆಗ ಆಕ್ಸಿನ್ ಬೆಳಕಿನ ವಿರುದ್ಧ ಕಡೆಗೆ ಎಂದರೆ ನೆರಳಿರುವ ಭಾಗದ ಕಡೆಗೆ ಹೋಗುತ್ತದೆ. ಆಗ ನೆರಳಿರುವ ಭಾಗದ ಕೋಶಗಳು ಹೆಚ್ಚು ಉದ್ದವಾಗುವುದರಿಂದ ನೆರಳಿನ ಭಾಗ ಹೆಚ್ಚು ಬೆಳೆದು ಕಾಂಡ ಬೆಳಕಿನ ಕಡೆಗೆ ಬಾಗುತ್ತದೆ. ತೆಂಗಿನ ಮರ ಓರೆಯಾಗುವುದು ತೋಟದಲ್ಲಿ ನೆಟ್ಟ ಮಾವಿನ ಮರದ ಗೆಲ್ಲು ಸೊಟ್ಟಪಟ್ಟ ಆಗಲು ಕಾರಣ ಇದೇ. ನೀವು ಅಡಿಕೆ ಮರಗಳ ನಡುವೆ ಎಡೆ ಸಸಿಯಾಗಿ ಅಡಿಕೆ ಗಿಡಗಳನ್ನು ಮರಗಳ ನೆರಳಿನಲ್ಲಿ ನೆಟ್ಟರೆ ಅವುಗಳ ಗಿಣ್ಣುಗಳು ಉದ್ದವಾಗುತ್ತವೆ. ಈ ಗಿಡಗಳ ಮೇಲೆ ಬಿಸಿಲು ಎಲ್ಲಾ ಕಡೆಯಿಂದಲೂ ಬೀಳದೇ ನೇರವಾಗಿ ಬೀಳುವುದರಿಂದ ಆಕ್ಸಿನ್ ನೆರಳಿರುವ ಗಿಣ್ಣಿನ ಭಾಗಕ್ಕೆ ಚಲಿಸುತ್ತದೆ. ಆಗ ಗಿಣ್ಣಿನ ವರ್ಧನ ಅಂಗಾಂಶದ ಕೋಶಗಳು ಉದ್ದವಾಗುವುದರಿಂದ ಮರದ ಗಿಣ್ಣುಗಳು ಉದ್ದವಾಗುತ್ತವೆ. ಲವ್ ಗ್ರಾಸ್ ನಲ್ಲಿ ಆಗುವುದು ಕೂಡಾ ಇದೆ. ಬಿಸಿಲು ಎಲ್ಲ ಕಡೆಯಿಂದ ಬಿದ್ದರೆ ಗಿಣ್ಣುಗಳು ಚಿಕ್ಕವಾಗಿರುತ್ತವೆ. ಅದೇ ನೆರಳಿನಲ್ಲಿ ಬೆಳೆದರೆ ಉದ್ದಗಿಣ್ಣುಗಳನ್ನು ಹೊಂದಿರುತ್ತವೆ. ಒತ್ತಾದ ಕಾಡಿನಲ್ಲಿ ಬೆಳೆಯುವ ಮರಗಳು ಅಡ್ಡ ಟೊಂಗೆಗಳಿಲ್ಲದೇ ನೇರವಾಗಿ ಬೆಳೆಯುವ ಮೂಲಕ ಗುಣಮಟ್ಟದ ಮೋಪು ದೊರೆಯಲು ಕಾರಣ ಕೂಡಾ ಇದೇ ಹಾರ್ಮೋನುಗಳ ಚಟುವಟಿಕೆ.
ಈ ರೀತಿ ಜನಹಿತಕ್ಕಾಗಿ ಕೆಲಸ ಮಾಡುವ ಹಾರ್ಮೋನುಗಳ ಬಗ್ಗೆ ಅಪಪ್ರಚಾರ ದಯವಿಟ್ಟು ಮಾಡಬೇಡಿ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************