-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 137

ಸ್ಫೂರ್ತಿಯ ಮಾತುಗಳು : ಸಂಚಿಕೆ - 137

ಸ್ಫೂರ್ತಿಯ ಮಾತುಗಳು : ಸಂಚಿಕೆ - 137
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
     

ಋಷಿ ಮುನಿಗಳಿಂದ ರಚಿತವಾದ ವೇದೋಪನಿಷತ್ತು ಪುರಾಣಗಳಿಂದ ಮೊದಲ್ಗೊಂಡು ಆಧುನಿಕ ಕಾಲದ ವರೆಗಿನ ಎಲ್ಲ ವಾಚಿಕ ಹಾಗೂ ಲಿಖಿತ ಸಾಹಿತ್ಯಗಳು ತನ್ನದೇ ಆದ ಮೂಲ ಆಶಯಗಳನ್ನು ಹೊಂದಿವೆ. ಎಲ್ಲ ಆಶಯಗಳ ಹಿಂದೆ ಸಮಷ್ಠಿಯ ಹಿತವು ಅಡಗಿರುವುದು ಅವುಗಳನ್ನು ಓದುವುದರಿಂದ ನಿಚ್ಚಳವಾಗುತ್ತದೆ. ಗುರುಕುಲ ಶಿಕ್ಷಣ ವ್ಯವಸ್ಥೆಯಲ್ಲಿ ಗುರುವಿನೊಂದಿಗೆ ವಾಸವಾಗಿದ್ದು ಶಿಷ್ಯರು ಸಾಹಿತ್ಯಾದಿ ಕಲೆಗಳೆಲ್ಲವನ್ನೂ ತಮ್ಮದಾಗಿಸುತ್ತಿದ್ದರು. ಅವರಿಗೆ ಗುರುವಿನಿಂದ ನೈಜ ಜೀವನ ಶಿಕ್ಷಣವು ದೊರೆಯುತ್ತಿತ್ತು. ಪಾಶ್ಚಾತ್ಯರ ಪ್ರಭಾವಕ್ಕೊಳಗಾದ ನಮ್ಮ ಶಿಕ್ಷಣವು ಜೀವನ ಶಿಕ್ಷಣವನ್ನು ಕೈಬಿಟ್ಟು ವ್ಯಾವಹಾರಿಕ ಶಿಕ್ಷಣವಾಗಿ ಮಾರ್ಪಾಡಾಯಿತು. ಶಿಕ್ಷಣದ ಮೂಲ ಸ್ವರೂಪದಿಂದ ಮೌಲ್ಯಗಳು, ಜೀವನ ತತ್ವಗಳು, ಮನೋಭಾವಗಳು, ಕೌಶಲ್ಯಗಳೇ ಮೊದಲಾದ ಪ್ರಮುಖ ಅಂಗಗಳು ಕೀಳಲ್ಪಟ್ಟು ವಿಕಲಾಂಗ ಶಿಕ್ಷಣ ನಮ್ಮ ಪಾಲಿಗೊಲಿಯಿತು. ಗುರುಕುಲ ಶಿಕ್ಷಣದಿಂದ ವಂಚಿತವಾದ ಶೈಕ್ಷಣಿಕಾಂಶಗಳನ್ನು ಇಂದಿನ ಸಮಾಜಕ್ಕೆ ಪೂರಣಗೊಳಿಸುವ ಆಶಯವನ್ನು ಈಡೇರಿಸಲೇ ಬೇಕಾದ ಮಹತ್ತರ ಜವಾಬ್ದಾರಿ ಸಾಹಿತ್ಯಕ್ಕಿದೆ.

ಸಾಹಿತ್ಯದ ಪ್ರಮುಖ ಮೂಲ ಆಶಯ ಜ್ಞಾನ ಪ್ರಸರಣ. ಶಾಲೆಯಲ್ಲಿ ಸಿಗುವ ಜ್ಞಾನ ಪಠ್ಯಾಂಶಕ್ಕೆ ಸೀಮಿತ. ಹೆಚ್ಚಿನ ಮತ್ತು ಹೊಸ ಜ್ಞಾನವು ಸಾಹಿತ್ಯಗಳ ಮೂಲಕವೇ ದೊರೆಯಬೇಕು. ಅದಕ್ಕಾಗಿಯೇ ಸಾಹಿತ್ಯದಲ್ಲಿ ನಾವು ವಿವಿಧ ಶಾಸ್ತ್ರಗಳನ್ನು ನೋಡುತ್ತೇವೆ. ಗಣಿತ, ಖಗೋಳ, ಸಸ್ಯ, ಭೂಗರ್ಭ, ಆರೋಗ್ಯ, ತತ್ವ, ನಿಯಮ, ವೈದ್ಯಕೀಯ... ಹೀಗೆ ಉನ್ನತ ಜ್ಞಾನ ನೀಡುವ ಉದ್ದೇಶದಿಂದ ನೂರಾರು ಜ್ಞಾನ ಶಾಖೆಗಳು ಸಾಹಿತ್ಯದಲ್ಲಿವೆ. ‘ಆನೋ ಭದ್ರಾಃ ಕೃತವೋ ಯಂತು ವಿಶ್ವತಃ” ಎನ್ನುವಂತೆ ಎಲ್ಲ ಮೂಲಗಳಿಂದಲೂ ಯೋಚನಾ ಲಹರಿಗಳು ಹರಿದು ಬರಬೇಕು. ಜ್ಞಾನವರ್ಧನೆಯಾಗುತ್ತಲೇ ಇರಬೇಕು. “ಅಜ್ಜ ನೆಟ್ಟ ಆಲದ ಮರಕ್ಕೆ ಸುತ್ತು ಬಂದಂತೆ” ಎಂಬ ನುಡಿಯಿದೆ. ಜ್ಞಾನವು ಈ ಗಾದೆಯ ಮುಷ್ಟಿಯೊಳಗಿರದು. ಅದು ಹೊಸ ಹೊಸ ಆವಿಷ್ಕಾರಗಳತ್ತ ತೆರೆದಿರುತ್ತದೆ. ಬೌದ್ಧಿಕ ವಿಕಾಸವಾದಂತೆ ಹೊಸ ಹೊಸ ಆಲೋಚನೆಗಳು ಹುಟ್ಟುತ್ತವೆ. ಎಲ್ಲ ನವ ನವೀನ ಆಲೋಚನೆಗಳು ಮುಂದಿನ ಪೀಳಿಗೆಗೂ ಹರಿಯಬೇಕಾದರೆ ಸಾಹಿತ್ಯವೇ ಆಧಾರ.

ಸಾಹಿತ್ಯವು ಸಮಾಜದ ಹಿತಕ್ಕೆ ಕಾರಣವಾಗಬೇಕು. ಸರ್ವರ ಹಿತವೇ ಸಾಹಿತ್ಯದ ಪ್ರಧಾನ ಆಶಯ. ನಮ್ಮ ಪರಂಪರೆಯನ್ನು ಗಮನಿಸಿದರೆ, “ಬದುಕು ಮತ್ತು ಬದುಕಲು ಬಿಡು” ಎಂಬ ಧ್ಯೇಯವೇ ಸರ್ವರದು. ಹೊಡಿ, ಬಡಿ, ತಳ್ಳು, ಕೊಲ್ಲು ... ಮುಂತಾದ ಹಿಂಸಾತ್ಮಕ ಗುಣಗಳನ್ನು ಸಾಹಿತ್ಯವು ಪ್ರಚೋದಿಸುವುದಿಲ್ಲ. ಸಾಹಿತ್ಯ ಪ್ರಕಾರಗಳೆಲ್ಲವೂ ನೀತಿಯನ್ನು, ಜೀವನ ಪಥವನ್ನು ನಿರ್ದೇಶಿಸುತ್ತವೆ. ಭಾವನೆಗಳನ್ನು ಅರಳಿಸುತ್ತವೆ. ಮನರಂಜನೆ ನೀಡುತ್ತವೆ. ಏಕಾಗ್ರತೆಯನ್ನು ಬೆಳೆಸುತ್ತವೆ. ಸಾಹಿತ್ಯ ನೀಡುವ ಆರೋಗ್ಯ, ಕೃಷಿ, ಆಹಾರ, ವಿಹಾರ, ವ್ಯಾಯಾಮ, ಪರಿಸರ, ಮುಂತಾದುವುಗಳ ಪೂರ್ಣ ಮಾಹಿತಿಗಳು ಜನಜೀವನವನ್ನು ನೆಮ್ಮದಿಯತ್ತ ಒಯ್ಯುತ್ತವೆ. ಕಣ್ಮನಗಳು ತಂಪಾಗಿರಲು, ಭಾವನೆಗಳು ಸ್ವಚ್ಛವಾಗಿರಲು, ಜೀವನವು ಘಮ ಘಮಿಸಲು ಸಾಹಿತ್ಯ ಸರ್ವ ರೀತಿಯಲ್ಲಿಯೂ ನೆರವಾಗುತ್ತದೆ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article