ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 48
Tuesday, October 1, 2024
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 48
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ.... ಕಳೆದ ವಾರ ನಮ್ಮ ಆಟ ಪಾಠಗಳೆಲ್ಲ ಯಾರದೋ ನಿರ್ದೇಶನಕ್ಕೆ ಒಳಪಟ್ಟಿರುತ್ತದೆ ಎಂದಿದ್ದೆ. ಹೌದು ನರವ್ಯೂಹ ಈ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದೆವು. ಸಸ್ಯಗಳು ಕೂಡಾ ಯಾರದೋ ನಿರ್ದೇಶನಕ್ಕೆ ಒಳಪಡುತ್ತಿರಬೇಕು ಅನ್ನಿಸುತ್ತದೆ. ನಿಮ್ಮ ಮನೆಯ ಬೆಂಡೆ ಗಿಡ ಉಳಿದ ಗಿಡಗಳಿಗಿಂತ ಭಿನ್ನವಾಗಿ ನೇರಕ್ಕೆ ಬೆಳೆಯುತ್ತಿರುತ್ತದೆ. ಸಾಕಷ್ಟು ಬಿಸಿನಲ್ಲಿದ್ದರೆ ಸಣ್ಣ ಸಣ್ಣ ಗಿಣ್ಣುಗಳೊಂದಿಗೆ ಬೆಳೆದರೆ ನೆರಳಿನಲ್ಲಿ ಬೆಳೆಯುವಾಗ ಸೂರ್ಯನನ್ನು ಬೇಗ ತಲುಪಲು ಉದ್ದ ಉದ್ದ ಗಂಟುಗಳನ್ನು ಬಿಡುತ್ತಾ ಸೂರ್ಯನ ಕಡೆಗೆ ದಾಪುಗಾಲು ಹಾಕುತ್ತಾ ಸಾಗುತ್ತದೆ. ಹಾಗಾದರೆ ಅದರಲ್ಲಿ ಏನು ವಿಶೇಷ? ಮೊದಲನೆಯ ಸಂದರ್ಭದಲ್ಲಿ ತುದಿ ವರ್ಧನ ಅಂಗಾಂಶ ಚುರುಕಾಗಿದ್ದರೆ ಎರಡನೆಯ ಸಂದರ್ಭದಲ್ಲಿ ಗಿಣ್ಣಿನ ವರ್ಧನ ಅಂಗಾಂಶ ಚುರುಕಾಗಿರುತ್ತದೆ ಎಂದು ಹೇಳುತ್ತಾ ಸುಲಭದಲ್ಲಿ ಕೈ ತೊಳೆದುಕೊಂಡು ಬಿಡುತ್ತೀರಿ. ಇದೇ ಬೆಂಡೆಯ ಗಿಡ ನೇರವಾಗಿ ಬೆಳೆಯುತ್ತಿರುತ್ತದೆ ಅದರ ತುದಿ ಮೊಗ್ಗನ್ನು ಚಿವುಟಿ ಬಿಡಿ ಅದು ಬೆಳವಣಿಗೆ ನಿಲ್ಲಿಸುವುದಿಲ್ಲ. ನೇರಕ್ಕೆ ಬೆಳೆಯುವ ಬದಲಾಗಿ ಅದರಲ್ಲಿ ಕವಲುಗಳು ಕಾಣಿಸಿಕೊಳ್ಳುತ್ತವೆ ತಾನೆ. ಇಲ್ಲಿಯವರೆಗೆ ನಿದ್ದೆ ಮಾಡುತ್ತಿದ್ದ ಪಾರ್ಶ್ವ ಮೊಗ್ಗುಗಳು (lateral buds) ಒಮ್ಮೆಲೇ ಎಚ್ಚೆತ್ತುಕೊಳ್ಳುವಂತೆ ನಿರ್ದೇಶನ ನೀಡಿದವರು ಯಾರು ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಹಲಸಿನ ಮರದ ಬುಡದಲ್ಲಿ ಒಂದು ಮೊಗ್ಗೂ ಕಾಣಿಸುವುದಿಲ್ಲ. ಆದರೆ ಯಾವಾಗ ನಿಮ್ಮ ತಂದೆ ಹಲಸಿನ ಮರವನ್ನು ಕಡಿಯುತ್ತಾರೋ ಆಗ ಒಮ್ಮೆಲೇ ಬುಡದಲ್ಲಿ ಚಿಗುರುಗಳು ಕಾಣಿಸಿಕೊಳ್ಳುತ್ತವೆ ಅಲ್ಲವೇ. ಎಲ್ಲಿಯೋ ಕಾಂಡದ ತೊಗಟೆಯ ಒಳಗಡೆ ಸುಪ್ತವಾಗಿದ್ದ ಆ ಮೊಗ್ಗುಗಳ ನಿದ್ದೆ ಬಿಡಿಸಿದವರು ಯಾರು? ಹೌದು ಇಂತಹ ಪ್ರಶ್ನೆಗಳು ಎಲ್ಲಾ ಕಾಲಕ್ಕೂ ಇದ್ದದ್ದೇ. ನರವ್ಯೂಹಗಳಿಲ್ಲದ ಸಸ್ಯಗಳಿಗೆ ನಿರ್ದೇಶನಗಳು ಹೇಗೆ ಬರುತ್ತವೆ ನೋಡೋಣ.
ಸಸ್ಯಗಳಲ್ಲಿ ನರ ಸಂದೇಶಗಳಿಲ್ಲ ಅದರ ಬದಲಾಗಿ ಅವು ರಾಸಾಯನಿಕ ರೂಪದಲ್ಲಿರುತ್ತವೆ. ಈ ರಾಸಾಯನಿಕ ನಿರ್ದೇಶನಗಳನ್ನು ಚೋದಕಗಳು (hormones) ಎನ್ನಲಾಗುತ್ತದೆ. ಈ ಹಾರ್ಮೋನುಗಳ ರಚನೆ ಮತ್ತು ಕಾರ್ಯದ ಆಧಾರದ ಮೇಲೆ ಅವುಗಳನ್ನು ಮುಖ್ಯವಾಗಿ 4 ಗುಂಪುಗಳಾಗಿಸುತ್ತವೆ. ಜೀವಕೋಶಗಳು ವಿಭಜನೆಯಾಗುವಂತೆ ನಿರ್ದೇಶಿಸುವ ಹಾರ್ಮೋನುಗಳು ಸೈಟೊಕೈನಿನ್ ಗಳು. Cyto ಅಂದರೆ ಕೋಶ, kinesis ಎಂದರೆ ವಿಭಜನೆ ಎಂದರ್ಥ. ಇವು ಬೇರು ಮತ್ತು ಕಾಂಡದ ತುದಿಗಳಲ್ಲಿರುವ ಕೋಶಗಳು ವಿಭಜನೆಯಾಗುವಂತೆ ನೋಡಿಕೊಳ್ಳುತ್ತವೆ. ಆದ್ದರಿಂದ ಸಸ್ಯಗಳ ಬೆಳವಣಿಗೆ ನಿರಂತರವಾದದ್ದು. ಈ ವಿಭಜನೆಯಾದ ಕೋಶಗಳು ನಿರ್ದಿಷ್ಟ ಕೆಲಸ ಮಾಡುವ ಸಾಮರ್ಥ್ಯ ಪಡೆಯಬೇಕು. ಅಂದರೆ ಜೇಡಿ ಮಣ್ಣಿನ ಮುದ್ದೆಯಿಂದ ಹಣತೆ, ಹೂಜಿ, ಮಡಕೆ ಇತ್ಯಾದಿಗಳನ್ನು ಮಾಡಬೇಕಲ್ಲ ಹಾಗೆ. ಈ ಬೇರೆ ಬೇರೆ ಕೆಲಸ ಮಾಡಲು ಸಮಾನ ರಚನೆಯನ್ನು ಹೊಂದಿರುವ ಜೀವಕೋಶಗಳ ಗುಂಪನ್ನು ಅಂಗಾಂಶವೆನ್ನುತ್ತೇವೆ. ಕೋಶಗಳ ಮುದ್ದೆ ಅಂಗಾಂಶವಾಗಿ ಬದಲಾಗುವ ಕ್ರಿಯೆ ವ್ಯತ್ಯಸ್ತೀಕರಣ (differtiation). ಈ ವ್ಯತ್ಯಸ್ತೀಕರಣ ಕ್ರಿಯೆ ನಡೆಯದೇ ಹೋದರೆ ಜೀವಕೋಶಗಳ ಮುದ್ದೆಯಾಗಿ ಹಾಗೇ ಉಳಿದು ಬಿಡುತ್ತದೆ. ಪ್ರಾಣಿಗಳಲ್ಲಿಯಾದರೆ ಅಂಗಾಂಶವಾಗದೇ ಉಳಿಯುವ ಕೋಶಗಳ ಮುದ್ದೆಯನ್ನು ಕ್ಯಾನ್ಸರ್ ಎನ್ನುವುದು. ಅಂದರೆ ಕ್ಯಾನ್ಸರ್ ಹೇಗೆ ಉಂಟಾಗುತ್ತದೆ ಎಂಬುದಕ್ಕೆ ಉತ್ತರ ದೊರೆಯಿತೇ...? ವರ್ಧನ ಅಂಗಾಂಶ ಸೃಜಿಸಿಸದ ಕೋಶಗಳ ಮುದ್ದೆಯನ್ನು ಅಂಗಾಂಶಗಳಾಗಿ ಬದಲಾಯಿಸುವ, ಅಗತ್ಯ ಬಿದ್ದರೆ ಈ ಕೋಶಗಳನ್ನು ಉದ್ದಗೊಳಿಸುವಂತಹ ಕೆಲಸ ಮಾಡುವ ಹಾರ್ಮೋನುಗಳ ವರ್ಗವೇ ಆಕ್ಸಿನ್ ಗಳದ್ದು (auxins). ಈ ಆಕ್ಸಿನ್ಗಳು ತುದಿಮೊಗ್ಗನ್ನು ಹೆಚ್ಚು ಪ್ರಭಾವಶಾಲಿ ಯಾಗಿರಿಸುವುದರಿಂದ (dominance) ಬೆಂಡೆಯ ಗಿಡ ನೇರವಾಗಿ ಬೆಳೆಯುತ್ತಾ ಸಾಗುತ್ತವೆ. ಯಾವಾಗ ತುದಿಮೊಗ್ಗು ಇಲ್ಲವಾಗುತ್ತದೆಯೋ ಆಗ ಈ ಆಕ್ಸಿನ್ ಗಳು ಸಸ್ಯಗಳ ಉಳಿದ ಭಾಗಗಳಿಗೆ ಹರಡುವುದರಿಂದ ಬೆಂಡೆ ಗಿಡ ಕವಲೊಡೆಯುತ್ತದೆ.
ಸೋಣ ತಿಂಗಳಲ್ಲಿ ಹುರುಳಿ ಬೀಜಗಳನ್ನು ಹಾಕಿ ಮಣ್ಣಿನ ಪಾತ್ರೆ ಮುಚ್ಚಿ ಮೊಳಕೆ ಬರಿಸಿ ಹಳದಿ ಬಣ್ಣದ ಈ ಗಿಡಗಳನ್ನು ಹೂ ಎಂದು ನಾಗನಿಗೆ ಮತ್ತು ಹೊಸ್ತಿಲು ಪೂಜೆಗೆ ಬಳಸುವುದನ್ನು ನೀವು ನೋಡಿರಬಹುದು. ಸಾಮಾನ್ಯ ಹುರುಳಿ ಗಿಡಕ್ಕಿಂತ ಇವು ಹೆಚ್ಚು ಎತ್ತರಕ್ಕೆ ಈ ಗಿಡಗಳು ಬೆಳೆಯುವುದಕ್ಕೆ ಕಾರಣ ಜಿಬ್ಬರೆಲ್ಲಿನ್ ಎಂಬ ಹಾರ್ಮೋನ್ ಕಾರಣ.
ತೆಂಗಿನ ಮರಗಳು ತಮ್ಮ ಗರಿಗಳನ್ನು ಉದುರಿಸುತ್ತವೆ, ಅಡಿಕೆ ಗಿಡಗಳು ತಮ್ಮ ಹಾಳೆಗಳನ್ನು ಉದುರಿಸುತ್ತವೆ, ಮನೆಯ ಅಂಗಳದಲ್ಲಿರುವ ಮಾವಿನ ಮರದ ಎಲೆಗಳು ದಿನಾಲೂ ಬೀಳುತ್ತಲೇ ಇರುತ್ತವೆ, ನಿಮ್ಮ ಅಮಟೆ ಮರ ತನ್ನೆಲ್ಲಾ ಎಲೆಗಳನ್ನು ಚಳಿಗಾಲದಲ್ಲಿ ಉದುರಿಸಿ ಮತ್ತಾರು ತಿಂಗಳು ಬೋಳಾಗಿ ನಿಂತುಬಿಡುತ್ತದೆ. ಬೀಜಗಳು ಮೊಳಕೆಯೊಡೆಯದೇ ಮೂರು ವರ್ಷಗಳ ಕಾಲ ಸುಪ್ತವಾಗಿರುವುದು ಕೂಡಾ ಇದೇ ಹಾರ್ಮೋನ್ ನ ಕಾರಣದಿಂದ. ಆ ಹಾರ್ಮೋನೇ ಎಬ್ಸಿಸಿಕ್ ಆಮ್ಲ.
ಇದಲ್ಲದೇ ಕಾಯಿಗಳನ್ನು ಹಣ್ಣಾಗಿಸುವ ಒಂದು ಹಾರ್ಮೋನ್ ಇದೆ. ಇದು ಅನಿಲ ರೂಪದ್ದು. ಅದೇ ಅಸಿಟಲೀನ್. ಕಾಯಿಗಳು ಬೆಳೆದಾಗ ನೈಸರ್ಗಿಕವಾಗಿ ಈ ಅನಿಲ ಉತ್ಪತ್ತಿಯಾಗಿ ಕಾಯಿಯನ್ನು ಹಣ್ಣಾಗಿಸುತ್ತದೆ. ಹಣ್ಣು ಬಿಡುಗಡೆ ಮಾಡುವ ಈ ಅನಿಲ ಉಳಿದ ಹಣ್ಣುಗಳನ್ನು ಹಣ್ಣಾಗಿಸುತ್ತದೆ. ಹಣ್ಣಿನ ವ್ಯಾಪಾರಿಗಳು ಕೃತಕವಾಗಿ ಹಣ್ಣುಗಳನ್ನು ಪಡೆಯಲು ಇದೇ ಅನಿಲವನ್ನು ಬಳಸುವುದು. ಗ್ಯಾಸ್ ವೆಲ್ಡ್ ಮಾಡುವವರು ಆಕ್ಸಿ ಅಸಿಟಲೀನ್ ಜ್ವಾಲೆ ಬಳಸುತ್ತಾರಲ್ಲ ಅವರು ಬಳಸುವ ಒಂದು ಅನಿಲ ಅಸಿಟಲೀನ್. ಈ ಅಸಿಟಲೀನ್ ಕ್ಯಾಲ್ಸಿಯಮ್ ಕಾರ್ಬೈಡ್ ಎಂಬ ಕಪ್ಪು ವಸ್ತುವಿಗೆ ನೀರನ್ನು ಹಾಕಿದಾಗ ಉತ್ಪತ್ತಿಯಾಗುತ್ತದೆ. ನಿಮ್ಮ ಹಣ್ಣಿನ ವ್ಯಾಪಾರಿಗಳು ಮಾಡುವುದೂ ಅದನ್ನೇ. ಆ ಕಪ್ಪು ಹುಡಿಯನ್ನು ನೀರಿಗೆ ಹಾಕಿ ಅದನ್ನು ಕಾಯಿಯ ಗೋದಾಮಿನಲ್ಲಿ ಇರಿಸುತ್ತಾರೆ. ಆಗ ಕಾಯಿ ಬೆಳೆಯದಿದ್ದರೂ ಕೂಡಾ ಹಣ್ಣಾಗುತ್ತದೆ. .
ಬಹಳ ವೇಳೆಯಾಯಿತು. ಮುಂದಿನ ವಾರ ಭೇಟಿಯಾಗೋಣವೇ?