-->
ಜಗಲಿ ಕಟ್ಟೆ : ಸಂಚಿಕೆ - 64

ಜಗಲಿ ಕಟ್ಟೆ : ಸಂಚಿಕೆ - 64

ಜಗಲಿ ಕಟ್ಟೆ : ಸಂಚಿಕೆ - 64
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


       
     ಇಂದು ಅಕ್ಟೋಬರ್ - 2. ಎಲ್ಲರಿಗೂ ಮಹಾತ್ಮ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳು......

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ :
     ಅಕ್ಟೋಬರ್ 2, 1869 ರಂದು ಜನಿಸಿದ ಮೋಹನ್‌ದಾಸ ಕರಮಚಂದ ಗಾಂಧಿ, ಅವರು ನವ ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವುದು ತಮಗೆಲ್ಲ ತಿಳಿದಿದೆ. ನಮ್ಮ ರಾಷ್ಟ್ರಪಿತ, ಮಹಾತ್ಮ ಗಾಂಧಿ ಎನಿಸಿದ ಇವರನ್ನು ನಾವೆಲ್ಲಾ ಪ್ರೀತಿಯಿಂದ ಬಾಪು ಎಂದು ಕರೆಯುತ್ತೇವೆ. ವೃತ್ತಿಯಲ್ಲಿ ವಕೀಲರಾಗಿ, ಸಾಮಾಜಿಕ ಚಿಂತನೆಯ ಹರಿಕಾರರಾಗಿ, ಬರಹಗಾರರಾಗಿ, ಸತ್ಯ ಮತ್ತು ಅಹಿಂಸೆಯ ಜಾಗತಿಕ ಮಾನವತಾವಾದಿಯಾಗಿ ಭಾರತವನ್ನು ಸ್ವಾತಂತ್ರ್ಯದತ್ತ ಮುನ್ನಡೆಸಿದವರು. ಇವರು ಓರ್ವ ಮಹಾನ್ ಚೇತನ. ರಾಷ್ಟ್ರದ ಪಿತಾಮಹ. ಇಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತವನ್ನು ಸ್ಥಾಪಿಸುವಲ್ಲಿ ಮಹಾತ್ಮ ಗಾಂಧೀಜಿಯವರ ಕೊಡುಗೆಯನ್ನು ನಾವು ಸ್ಮರಿಸಲೇಬೇಕು. ಮಹಾತ್ಮಾ ಗಾಂಧಿಯವರ ತತ್ವಗಳು, ಚಿಂತನೆಗಳು, ಬೋಧನೆಗಳು ಇಂದಿಗೂ ಪ್ರಸ್ತುತವಾಗಿದೆ. ಸತ್ಯ, ಅಹಿಂಸೆ, ಅಸ್ಪೃಶ್ಯತೆಯ ನಿವಾರಣೆ ಮುಂತಾದ ಮೌಲ್ಯಗಳಿಂದ ಇಂದಿಗೂ ಗಾಂಧೀಜಿ ವಿಶ್ವ ಮಾನ್ಯರಾಗಿದ್ದಾರೆ ಎಲ್ಲರ ಹೃದಯದಲ್ಲೂ ಜೀವಂತವಿದ್ದಾರೆ.

ಲಾಲ್ ಬಹದ್ದೂರ್ ಶಾಸ್ತ್ರೀಜಿ:
      ನಮ್ಮ ದೇಶ ಕಂಡ ಇನ್ನೋರ್ವ ಅತ್ಯಂತ ಪ್ರಭಾವಿ ಪ್ರಾಮಾಣಿಕ, ಸರಳ, ಸಜ್ಜನ ರಾಜಕಾರಣಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ ಕೂಡಾ ಅಕ್ಟೋಬರ್ - 2. ಉತ್ತರ ಪ್ರದೇಶದ ಮೊಘಲ್ಸರಾಯ್ನಲ್ಲಿ 1904 ರಂದು ಜನಿಸಿದರು. ತಾನು ಹಸುಗೂಸು ಇರುವಾಗಲೇ ತಂದೆಯನ್ನು ಕಳೆದು ಕೊಂಡು ತಾಯಿಯ ಆಸರೆಯಲ್ಲಿ ಬೆಳೆದು ತಮ್ಮ ಅಧ್ಯಯನದಲ್ಲಿ ನಿರತರಾದರು. ತನ್ನ 16ನೇ ವಯಸ್ಸಿನಲ್ಲಿ ಅವರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ತನ್ನ ದೇಶದ ಜನತೆಗೆ ಬ್ರಿಟಿಷರಿಂದ ಮುಕ್ತಿ ದೊರೆಯಬೇಕೆಂದು ತಮ್ಮ ಅಧ್ಯಯನವನ್ನು ತೊರೆದರು. ಸೆರೆಮನೆವಾಸ, ಗಾಂಧಿ ಚಿಂತನೆಗಳಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ಸರಳ ಜೀವನ, ಸರಳ ಸ್ವಭಾವ, ಪ್ರಾಮಾಣಿಕತೆ ಮತ್ತು ಅವರ ದೃಢಸಂಕಲ್ಪಕ್ಕೆ ಹೆಸರುವಾಸಿಯಾಗಿದ್ದರು. ನೆಹರೂ ಸರಕಾರದಲ್ಲಿ ರೈಲ್ವೆ ಮಂತ್ರಿ ಮತ್ತು ಗೃಹ ಸಚಿವರಂತಹ ಹುದ್ದೆಗಳನ್ನು ಅಲಂಕರಿಸಿದರು. ಪಂಡಿತ್ ಜವಾಹರಲಾಲ್ ನೆಹರು ಅವರ ಮರಣದ ನಂತರ, ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶದ ಎರಡನೇ ಪ್ರಧಾನಿಯಾದರು. ಅಧಿಕಾರ ಸ್ವೀಕರಿಸಿ ಕೇವಲ ಒಂದೂವರೆ ವರ್ಷಗಳ ಕಾಲ ಮಾತ್ರ ಪ್ರಧಾನಿಯಾಗಿ ಉಳಿಯಲು ಸಾಧ್ಯವಾಯಿತು. ಆದರೆ ತನ್ನ ಅಲ್ಪಾವಧಿಯಲ್ಲಿ ಭಾರತೀಯ ರಾಜಕೀಯ ಇತಿಹಾಸದ ಅಳಿಸಲಾಗದ ಛಾಪು ಮೂಡಿಸಿದ ಮಹಾನ್ ಪುರುಷರಲ್ಲಿ ಇವರು ಒಬ್ಬರೆನಿಸಿದ್ದಾರೆ. ಇವರ ಜೀವನವು ಸಾಮಾನ್ಯ ವ್ಯಕ್ತಿಯಂತೆಯೇ ಇತ್ತು.  ಯುದ್ಧ ಭೀತಿಯ ಸಂದರ್ಭದಲ್ಲಿ ದೇಶಕ್ಕೆ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ನೀಡಿದರು. ಪ್ರಧಾನಿ ನಿವಾಸದಲ್ಲಿ ಕೃಷಿ ಮಾಡುತ್ತಿದ್ದರು. 
       ತನ್ನ ಸೇವೆಗೆ ಸಿಗುವ ಭತ್ಯೆ ಮತ್ತು ಸಂಬಳದಿಂದಲೇ ಸಂಸಾರ ನಡೆಸುತ್ತಿದ್ದರು. ಒಂದು ಘಟನೆ ಮಾತ್ರ ಈಗಲೂ ಎಲ್ಲರಿಗೂ ಮಾದರಿಯಾಗಿದೆ. ಒಂದು ಬಾರಿ ಶಾಸ್ತ್ರಿ ಅವರ ಮಗ ಪ್ರಧಾನ ಮಂತ್ರಿಯ ಕಾರನ್ನು ವೈಯಕ್ತಿಕ ಕಾರಣಕ್ಕೆ ಬಳಸಿದ್ದರು. ಅದರಿಂದ ಇರಿಸುಮುರಿಸಾದ ಶಾಸ್ತ್ರಿ ಅವರು ಅದರ ಮೊತ್ತವನ್ನು ತನ್ನ ಜೇಬಿಂದ ಸರ್ಕಾರಿ ಖಾತೆಗೆ ಪಾವತಿಸಿದ್ದರು. ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಯಲ್ಲಿದ್ದರೂ ಅವರಿಗೆ ಸ್ವಂತ ಮನೆಯಾಗಲಿ ಆಸ್ತಿಯಾಗಲಿ ಇಲ್ಲದೇ ಇದ್ದುದು ಅವರ ನಿಸ್ವಾರ್ಥ ಬದುಕಿನ ಪ್ರಾಮಾಣಿಕತೆಗೆ ಸಾಕ್ಷಿ. ನಂತರ ಅವರು 11 ಜನವರಿ 1966 ರಂದು ನಿಗೂಢವಾಗಿ ಸಾವನ್ನಪ್ಪುತ್ತಾರೆ. ಆದರೆ ದೇಶ ಕಂಡ ಅಪರೂಪದ ಮಾದರಿ ರಾಜಕಾರಣಿಯೊಬ್ಬರಾಗಿ ಇಂದಿಗೂ ಎಲ್ಲರ ಹೃದಯದಲ್ಲೂ ಜೀವಂತವಿದ್ದಾರೆ. 
       ಇಬ್ಬರು ಮಹಾನ್ ವ್ಯಕ್ತಿಗಳ ಹುಟ್ಟುಹಬ್ಬದ ದಿನದ ಜೊತೆಗೆ.... ನವರಾತ್ರಿ ಹಬ್ಬವೂ ಪ್ರಾರಂಭವಾಗುತ್ತಿದೆ... ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು...
     ತಾವೆಲ್ಲಾ ದಸರಾ ಹಬ್ಬದ ರಜೆಯ ಸಡಗರದಲ್ಲಿದ್ದೀರಿ.. ನವರಾತ್ರಿಯಲ್ಲಿ ನಿತ್ಯ ರಂಗೋಲಿ ಹಾಕಿ ಸಂಭ್ರಮಿಸಿ. ಅದರ ಫೋಟೋವನ್ನು ಮಕ್ಕಳ ಜಗಲಿಗೆ ಕಳುಹಿಸಿ. ಹಾಗೂ ಮಕ್ಕಳ ಜಗಲಿ ಏರ್ಪಡಿಸಿದ 3ನೇ ವರ್ಷದ ರಾಜ್ಯಮಟ್ಟದ ಕಥೆ ಮತ್ತು ಕವನ ಸ್ಪರ್ಧೆಯಲ್ಲಿ ತಾವೆಲ್ಲ ಭಾಗವಹಿಸಿ.. ನಮಸ್ಕಾರ...
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************



ಕಳೆದ ಸಂಚಿಕೆಯ ಜಗಲಿಕಟ್ಟೆ - 63 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ ..... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ಎರಡು ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....



ಎಲ್ಲರಿಗೂ ನಮಸ್ಕಾರಗಳು,
     ಓಂಕಾರದ ಅಧ್ಯಯನವೇ ನಾದ ಸ್ವಾಧ್ಯಾಯ. ಪಾತಂಜಲ ಮಹರ್ಷಿಯ ನಾದ ಸ್ವಾಧ್ಯಾಯದ ಕುರಿತಾದ ಸುಂದರ ಲೇಖನ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ. 
     ಕರುಣಾಮಯಿ ಮಹಮ್ಮದ್ ಪೈಗಂಬರ್ ರವರ ಕುರಿತಾಗಿ ಅವರ ಜನ್ಮದಿನದಂದು ರೆಹಮಾನ್ ಖಾನ್ ರವರಿಂದ ಉತ್ತಮ ಲೇಖನ.
      ರಮೇಶ್ ಸರ್ ರವರ ವಿಕಸಿತ ಭಾರತದ ಪರಿಕಲ್ಪನೆಗೆ ಪೂರಕವಾದ ಸುಂದರ ಲೇಖನ ಬಹಳಷ್ಟು ಮುದ ನೀಡಿತು. ಧನ್ಯವಾದಗಳು ಸರ್.
      ಸಸ್ಯಗಳ ಶಾಶ್ವತ ಚಲನೆಗಳಿಗೆ ಕಾರಣಗಳನ್ನು ಸರಳವಾಗಿ ಸೊಗಸಾಗಿ ದಿವಾಕರ ಸರ್ ರವರು ತಮ್ಮ ಮಕ್ಕಳಿಗಾಗಿ ವಿಜ್ಞಾನ ಸಂಚಿಕೆಯಲ್ಲಿ ತಿಳಿಸಿದ್ದಾರೆ.
      ತಮ್ಮ ನೆಚ್ಚಿನ ಶಿಕ್ಷಕರ ಕುರಿತಾಗಿ ಅನೇಕ ಹಿರಿಯರು ತಮ್ಮ ಅನಿಸಿಕೆಗಳನ್ನು ಬಹಳ ಸುಂದರವಾಗಿ ವ್ಯಕ್ತ ಪಡಿಸಿದ್ದಾರೆ. ಎಲ್ಲರಿಗೂ ಧನ್ಯವಾದಗಳು.
      ನೋಡಲು ಮಲ್ಲಿಗೆಯಂತಿದ್ದರೂ ಮಲ್ಲಿಗೆಯಷ್ಟು ಹಿರಿಮೆ ಇರದ ಜಾಜಿ ಮಲ್ಲಿಗೆಯ ಪರಿಚಯದಿಂದ, ಜಾಜಿ ಹೂ ಮಲ್ಲಿಗೆಯಿಂದ ಕಡಿಮೆ ಏನಲ್ಲ ಎನ್ನುವ ವಿಚಾರವನ್ನು ಬಹಳ ಸೊಗಸಾಗಿ ತಮ್ಮ ಸಂಚಿಕೆಯಲ್ಲಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು ಮೇಡಂ.
      ಪ್ರಕೃತಿ ರಮಣೀಯ ದೃಶ್ಯವನ್ನು ಒಳಗೊಂಡ ಸುಂದರ ಘಾಟಿ ಪ್ರದೇಶ ಚಾರ್ಮಾಡಿಯ ಕುರಿತಾದ ಸವಿವರ ಲೇಖನ ರಮೇಶ ಉಪ್ಪುಂದದರಿಂದ ತಮ್ಮ ಪಯಣ ಸಂಚಿಕೆಯಲ್ಲಿ.
     ವಾಣಿಯಕ್ಕನವರಿಂದ ಮಕ್ಕಳ ಕಥೆಗೆ ಸಂಬಂಧಿಸಿದ ಆಮೆ ಚಿಪ್ಪಿನ ಜೀರುಂಡೆ ಎನ್ನುವ ಒಳ್ಳೆಯ ಪುಸ್ತಕದ ಪರಿಚಯ ಸೊಗಸಾಗಿತ್ತು.
      ಸಂಸ್ಕಾರ ಹಾಗೂ ಮೌಲ್ಯಯುತ ಶಿಕ್ಷಣ ಇಂದಿನ ಶಿಕ್ಷಣದ ಅವಿಭಾಜ್ಯ ಅಂಗ. ನಮಸ್ಕಾರ ಎನ್ನುವ ಪದವನ್ನು ಎಲ್ಲರಲ್ಲೂ ಅಳವಡಿಸಿ ಆ ಭಾವನೆಯನ್ನು ಬಿತ್ತಿದ ಪರಿಯನ್ನು ಶಿಕ್ಷಕರ ಡೈರಿ ಸಂಚಿಕೆಯಲ್ಲಿ ಉಮೇಶ್ ಕಾರಂತರವರು ಸೊಗಸಾಗಿ ತಿಳಿಸಿದ್ದಾರೆ.
      ಈ ವಾರದ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬಂದಿದೆ.
   ಎಲ್ಲರಿಗೂ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************

ಎಲ್ಲರಿಗೂ ನಮಸ್ಕಾರಗಳು,
     ನಮ್ಮೊಳಗಿರುವ ಆತ್ಮವನ್ನು ತಿಳಿಯುವ ಪಾತಂಜಲ ಮಹರ್ಷಿಯ ಅತ್ಮ ಸ್ವಾಧ್ಯಾಯದ ಕುರಿತಾದ ಸೊಗಸಾದ ಲೇಖನ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ.
     ಯಾವುದೇ ಕಾರ್ಯಕ್ರಮದ ಯಶಸ್ಸಿಗೆ ಕಾರ್ಯಕರ್ತರೇ ಜೀವಾಳ. ಉತ್ತಮ ಕಾರ್ಯಕರ್ತರಲ್ಲಿರಬೇಕಾದ ಗುಣಗಳನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ ರಮೇಶ್ ಸರ್ ರವರು.
      ಸಸ್ಯಗಳಲ್ಲಿ ನಿಯಂತ್ರಣದ ಸಂಕೀರ್ಣತೆ ಕುರಿತಾದ ವಿವರವಾದ ಅರ್ಥ ಪೂರ್ಣ ಮಾಹಿತಿ ದಿವಾಕರ ಸರ್ ರವರಿಂದ.
      ಅಲರ್ಜಿಗೆ ಪರಿಣಾಮಕಾರಿಯಾದ ಸುಂದರ ಹೂವನ್ನು ಬಿಡುವ ಭಾರಂಗಿ ಸಸ್ಯದ ಕುರಿತಾದ ಅಗತ್ಯ ಮಾಹಿತಿ ಈ ಸಲ ವಿಜಯ ಮೇಡಂರವರಿಂದ.
      ನವರಾತ್ರಿ ಹಬ್ಬದ ನಿರೀಕ್ಷೆಯಲ್ಲಿ ಇರುವ ನಮಗೆ ಪ್ರಕೃತಿಯ ಮಡಿಲಲ್ಲಿ ಕಂಗೊಳಿಸುತ್ತಿರುವ ಶ್ರೀ ದೇವಿ ಅನ್ನಪೂರ್ಣೇಶ್ವರಿ ದೇಗುಲ ಹೊರನಾಡಿನ ಕುರಿತಾದ ಸೊಗಸಾದ ಮಾಹಿತಿ ರಮೇಶ್ ಉಪ್ಪುಂದರವರಿಂದ ತಮ್ಮ ಪಯಣ ಸಂಚಿಕೆಯಲ್ಲಿ . 
      ನೆಚ್ಚಿನ ಶಿಕ್ಷಕರ ಕುರಿತಾದ ಮಕ್ಕಳ ಕವನಗಳು ಚೆನ್ನಾಗಿ ಮೂಡಿ ಬಂದಿವೆ. ಮಕ್ಕಳಲ್ಲರಿಗೂ ಅಭಿನಂದನೆಗಳು.
      ವಾಣಿಯಕ್ಕ ನವರಿಂದ ಗಾಂಧೀಜಿಯವರ ಕುರಿತಾಗಿರುವ ಬಾಪೂ ಎನ್ನುವ ಮಾನವ ಎನ್ನುವ ಸುಂದರ ಪುಸ್ತಕದ ಪರಿಚಯ ಸೊಗಸಾಗಿತ್ತು.
     ಶಿಕ್ಷಕರ ಡೈರಿಯಲ್ಲಿ ಚಟುವಟಿಕೆಯ ಮೂಲಕ ಮಗುವಿನ ಕಲಿಕೆಯಲ್ಲಿ ತರಗತಿಯ ಮಗುವೊಂದು ಕೈಗೊಂಡ ಚಟುವಟಿಕೆಯ ಕುರಿತಾಗಿ ತಮ್ಮ ಅನುಭವವನ್ನು ರಮ್ಯ ಮೇಡಂರವರು ಬಹಳ ಚೆನ್ನಾಗಿ ಹಂಚಿಕೊಂಡಿದ್ದಾರೆ.
      ಮಕ್ಕಳ ಚಿತ್ರಗಳಲ್ಲಿ ಪೂರ್ವಿಯವರು ರಚಿಸಿದ ಚಿತ್ರಗಳು ಸೊಗಸಾಗಿ ಮೂಡಿ ಬಂದಿವೆ. ಅಭಿನಂದನೆಗಳು ಪೂರ್ವಿ.
       ರಮೇಶ ಉಪ್ಪುಂದರವರ ಪದಗಳ ಜೋಡಣೆ ಹಾಗೂ ಹೊಸ ಪದಗಳ ಹುಡುಕಾಟಕ್ಕೆ ಕಾರಣವಾಗಿರುವ ಪದದಂಗಳ ಸಂಚಿಕೆ ಚೆನ್ನಾಗಿತ್ತು.
      ಜಗಲಿಯ ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು. ಮತ್ತೊಮ್ಮೆ ಎಲ್ಲರಿಗೂ ನನ್ನ ನಮನಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************



ಶಿಕ್ಷಕರ ಸ್ಕೂಲ್ ಡೈರಿ ಸಂಚಿಕೆ - 59 ರಲ್ಲಿ ಶಿಕ್ಷಕಿ ರಮ್ಯರವರು ಬರೆದ ತರಗತಿಯ ಸನ್ನಿವೇಶ ಮನಮುಟ್ಟುವಂತಿದೆ. ಶಿಕ್ಷಕಿ ತಿಳಿಸಿದಂತೆ ನಿಜಕ್ಕೂ ಶಿಕ್ಷಕರು ಮಕ್ಕಳಿಂದ ಕಲಿಯುವಂಥದ್ದೂ ಬಹಳಷ್ಟು ಇದೆ. ಕಲಿಸುವುದರ ಜೊತೆಗೆ ಶಿಕ್ಷಕರಿಗೂ ಬಹಳಷ್ಟು ಸಂಗತಿ ಕಲಿಕೆಯೂ ಆಗುತ್ತದೆ ಎನ್ನುವುದು ನಿಜ. ಇಲ್ಲಿ ಈ ಪ್ರಸಂಗದ ವಿವರಣೆಯಲ್ಲಿ ಇದು ಯಾವ ತರಗತಿಯ ಸನ್ನಿವೇಶ ಎಂದು ಬರೆದಿದ್ದರೆ ಓದುಗರಿಗೆ ಈ ಸನ್ನಿವೇಶದ ಇನ್ನಷ್ಟು ಪೂರ್ಣನೋಟಗಳು ಸಿಗುತ್ತಿದ್ದವು. ಜೊತೆಗೆ ಇಲ್ಲಿ ಉಲ್ಲೇಖಿತ ಮಗುವು ಅದೇ ತರಗತಿಯ ಮಗುವ, ಆ ಮಗುವಿಗೆ ಪರಿಸರದ ಭಾಷೆ ತಿಳಿಯದಿರಲು ಕಾರಣವೇನು, ಹೊಸ ದಾಖಲಾತಿಯೇ, ಯಾವ ಮಾತೃಭಾಷೆಯ ಮಗು? ಇಂತಹ ವಿವರಗಳೂ ಬರಹದಲ್ಲಿ ಸೇರಿರಬೇಕಿತ್ತು ಎಂದು ಓದುವಾಗ ಅನಿಸಿತು.
.......................................... ವಿದ್ಯಾ ಕಾರ್ಕಳ
ಸಹಶಿಕ್ಷಕಿ, ದ. ಕ. ಜಿ. ಪಂ. ಕಿರಿಯ 
ಪ್ರಾಥಮಿಕ ಶಾಲೆ. ಹೊಸಪಟ್ಣ. 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 94499 07371
*******************************************

ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾ ಕಾರ್ಕಳ - ಸಹ ಶಿಕ್ಷಕಿ, ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article