ಜೀವನ ಸಂಭ್ರಮ : ಸಂಚಿಕೆ - 159
Sunday, October 13, 2024
Edit
ಜೀವನ ಸಂಭ್ರಮ : ಸಂಚಿಕೆ - 159
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ.... ಕಳೆದ ಒಂದೂವರೆ ತಿಂಗಳಿನಿಂದ ಮಾನ್ಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಆದ ಡಾಕ್ಟರ್ ಆನಂದ್, ಕೆ, ಭಾರತ ಆಡಳಿತ ಸೇವೆ, ರವರ ಕೃಪೆಯಿಂದ ಉಪ ಕಾರ್ಯದರ್ಶಿಯಾಗಿ ಜಿಲ್ಲಾ ಪಂಚಾಯತ್ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ಬಾರಿ ಚುನಾವಣಾ ನೀತಿ ಸಂಹಿತೆ ಇದ್ದುದ್ದರಿಂದ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಬ್ಬವನ್ನು ಸರಳವಾಗಿ ಆಚರಿಸುವಂತೆ ತಿಳಿಸಿದರು. ಆದರೂ ಹಬ್ಬ ವೈಭವಯುತಕವಾಗಿ ನಡೆಯಿತು.
'ಆಯುಧ ಪೂಜಾ ಹಬ್ಬ' ಇಲ್ಲಿ ಮೂರು ಪದಗಳಿವೆ. ಈ ಹಬ್ಬ ಆಚರಣೆಯನ್ನ ಹೇಗೆ ನೋಡಿದರೆ ಮತ್ತು ಹೇಗೆ ಭಾವಿಸಿದರೆ ಸಂತೋಷ ಪಡಬಹುದು ಅನ್ನುವ ಕುರಿತು ನನ್ನದೇ ಅನಿಸಿಕೆಗಳನ್ನ ಇಲ್ಲಿ ವಿವರಿಸಿದ್ದೇನೆ.
ಆಯುಧ : ಆಯುಧ ಎಂದರೆ ಕೆಲಸ ಮಾಡಲು ಸಹಾಯಕವಾಗುವ ಸಾಮಗ್ರಿ. ನಮ್ಮ ಜಿಲ್ಲಾ ಪಂಚಾಯತಿನಲ್ಲಿ ಇರುವ ಎಲ್ಲಾ ಗಣಕಯಂತ್ರಗಳು, ಪ್ರಿಂಟರ್ ಮತ್ತು ವಾಹನಗಳನ್ನು ಸ್ವಚ್ಚ ಮಾಡಿ ಅಲಂಕರಿಸಿದ್ದರು. ಹೊರಗಡೆ ಸಾಲಾಗಿ ನಿಂತ ವಾಹನಗಳು, ಅವುಗಳ ಅಲಂಕಾರ ಅದ್ಭುತವಾಗಿತ್ತು. ಆ ಸಂದರ್ಭದಲ್ಲಿ ನನ್ನ ಕಾಡಿದ ವಿಚಾರ. ನಿಸರ್ಗ ದೇವತೆ ನಮಗೆ ಎಂತಹ ಅದ್ಭುತ ಆಯುಧಗಳನ್ನು ಅಳವಡಿಸಿದೆ ಅಲ್ಲವೇ. ನೋಡುವ ಆಯುಧ ಕಣ್ಣು, ಕೇಳುವ ಆಯುಧ ಕಿವಿ, ಮೂಸುವ ಆಯುಧ ಮೂಗು, ರುಚಿಸುವ ಮತ್ತು ಮಾತನಾಡುವ ಆಯುಧ ಬಾಯಿ ಮತ್ತು ನಾಲಿಗೆ, ಸುಂದರ ಕೆಲಸ ಮಾಡುವ ಆಯುಧ ಎರಡು ಕೈಗಳು, ಸುಂದರ ಜಾಗಕ್ಕೆ ಎಂತಹ ಇಕ್ಕಟ್ಟಿನಲ್ಲಿಯೂ ಕರೆದುಕೊಂಡು ಹೋಗುವ ಆಯುಧ ಎರಡು ಕಾಲಗಳು. ಸೌಂದರ್ಯ ಅನುಭವಿಸುವ ಆಯುಧ ಮನಸ್ಸು, ಎಲ್ಲಾ ತಿಳಿದುಕೊಳ್ಳುವ ಆಯುಧ ಬುದ್ಧಿ. ಇವುಗಳನ್ನು ಶುಚಿಯಾಗಿ ಅಲಂಕರಿಸಿದರೆ ಎಷ್ಟು ಅದ್ಭುತ ಅಲ್ಲವೇ.
ಪೂಜೆ : ಪೂಜೆ ಎಂದರೆ ಪ್ರೀತಿಯಿಂದ ಅರ್ಪಿಸುವುದು. ದೇವರ ಮುಂದೆ ಇರಿಸಿದ ಬಾಳೆಹಣ್ಣು, ಯಾವುದೇ ಬದಲಾವಣೆ ಆಗುವುದಿಲ್ಲ. ಆದರೆ ಅದನ್ನು ದೇವರಿಗೆ ಅರ್ಪಿಸಿ ತಿನ್ನುವಾಗ ಎಷ್ಟು ಶ್ರದ್ದೆ ಭಕ್ತಿ ಇರುತ್ತದೆ ಅಲ್ಲವೆ. ಹಾಗೆ ನಾವೇನು ಬಳಸುತ್ತೇವೆಯೋ ಆ ಎಲ್ಲಾ ವಸ್ತುಗಳ ಮಾಲೀಕ ನಿಸರ್ಗ ಎಂದು ಭಾವಿಸಬೇಕು. ಏಕೆಂದರೆ ನಿಸರ್ಗ ಕಚ್ಚಾವಸ್ತು ನೀಡದೆ ಇದ್ದರೆ ನಾವು ಯಾವುದೇ ವಸ್ತು ತಯಾರಿಸಲು ಸಾಧ್ಯವಿಲ್ಲ. ನಾವು ಬಳಸುವ ಎಲ್ಲಾ ವಸ್ತುಗಳು ನಿಸರ್ಗದ್ದೆ. ಹಾಗಾಗಿ ನಾವು ಬಳಸುವ ಉಪಕರಣಗಳನ್ನೆಲ್ಲ ಶುಚಿಗೊಳಿಸಿ ಅಲಂಕಾರ ಮಾಡಿ ನಿಸರ್ಗದೇವತೆಗೆ ಅರ್ಪಿಸುವ ಕ್ರಿಯೆ ಆಯುಧ ಪೂಜೆ. ನಿಸರ್ಗ ದೇವತೆಗೆ ಸಲಕರಣೆಗಳನ್ನು ಅರ್ಪಿಸಿದ ಮೇಲೆ ಅದನ್ನು ಭಕ್ತಿಯಿಂದ ಬಳಸಬೇಕಾಗುತ್ತದೆ. ಹೇಗೆ ಬಳಸಬೇಕೆಂದರೆ ಸಂತೋಷ ಪಡುವ ಹಾಗೆ ಬಳಸಬೇಕು ಹಾಗೂ ನಿಸರ್ಗ ಸಂತೋಷ ಪಡಬೇಕು ಹಾಗೆ ಬಳಸಬೇಕು. ಹಾಗೆಯೆ ನಿಸರ್ಗ ನಮಗೆ ಅಳವಡಿಸಿದ ಆಯುಧಗಳನ್ನು ಸುಂದರವಾಗಿ ಸಂತೋಷವಾಗುವಂತೆ ಭಕ್ತಿಯಿಂದ ಬಳಸಬೇಕಾಗುತ್ತದೆ. ಜಗತ್ತಿನಲ್ಲಿರುವ ವಸ್ತುಗಳೆಲ್ಲ ಅಪೂರ್ಣ. ಆದರೆ ಪ್ರತಿಯೊಂದರಲ್ಲೂ ಕೆಲವೊಂದು ದೋಷ ಕೊರತೆ ಇದ್ದೇ ಇರುತ್ತದೆ. ದೋಷ ಮತ್ತು ಕೊರತೆ ಕಡೆ ಗಮನಹರಿಸದೆ ಹೋದರೆ ಜಗತ್ತು ಅದ್ಬುತವಾಗಿದೆ. ಅಂದರೆ ಪ್ರತಿಯೊಂದರಲ್ಲೂ ಸುಂದರವೂ ದೋಷವು ಇದ್ದೇ ಇರುತ್ತದೆ. ಅದರಲ್ಲಿ ಯಾವುದು ನಮಗೆ ಸಂತೋಷ ಕೊಡುತ್ತೋ ಅದರ ಕಡೆ ಲಕ್ಷ್ಯ ವಹಿಸಬೇಕು. ಜಗತ್ತು ಸುಂದರವಲ್ಲ ಕುರೂಪವಲ್ಲ. ಅದು ಇದ್ದ ಹಾಗೆ ಇರುತ್ತದೆ. ಅದನ್ನು ಸುಂದರ ಕುರೂಪ ಮಾಡುವುದು ನಮ್ಮ ಭಾವ, ನಮ್ಮ ಮನಸ್ಸು. ದೇವರಿಗೆ ಅರ್ಪಿಸಿದ ಆಹಾರವನ್ನು ಹೇಗೆ ಪ್ರಸಾದವೆಂದು ಭಾವಿಸಿ ಪ್ರೀತಿಯಿಂದ ಬಳಸುತ್ತೇವೆಯೋ ಹಾಗೆ ಪ್ರೀತಿ ಪ್ರೇಮಭಾವದಿಂದ ನೋಡಿದರೆ ದೋಷ ಮರೆಯಾಗಿ ಸುಂದರ ಕಾಣುತ್ತದೆ. ದ್ವೇಷ ಕೋಪದಿಂದ ನೋಡಿದಾಗ ಸೌಂದರ್ಯ ಮರೆಯಾಗಿ ದೋಷ ಕೊರತೆಗೆ ಕಾಣುತ್ತದೆ. ಉದಾಹರಣೆಗೆ ಜಗಳವಾಡುವಾಗ ದೋಷವನ್ನು ಎತ್ತಿ ತೋರಿಸುತ್ತಾರೆ. ನೋಡುವಾಗ, ಕೇಳುವಾಗ, ಮೂಸುವಾಗ, ತಿನ್ನುವಾಗ, ಮಾತನಾಡುವಾಗ, ಕೆಲಸ ಮಾಡುವಾಗ, ನಡೆಯುವ ಪ್ರೀತಿ ಕ್ರಿಯೆಯಲ್ಲಿ ಪ್ರೀತಿ ತುಂಬಿದ್ದರೆ, ಜಗತ್ತು ಅದ್ಬುತ, ಸುಂದರ ರೂಪ ಮತ್ತು ಅದರ ವೈಭವ ಅನುಭವಿಸಲು ಸಾಧ್ಯವಾಗುತ್ತದೆ. ಆಗ ಪ್ರತಿಯೊಂದು ಕ್ರಿಯೆ ಸುಂದರ, ಮಧುರ, ಸವಿ, ರಸಮಯವಾಗುತ್ತದೆ.
ಹಬ್ಬ : ಹಬ್ಬ ಅಂದರೆ ಸಂತೋಷ ಪಡುವುದು. ನಮ್ಮ ಕಚೇರಿಯ ಎಲ್ಲಾ ಸಿಬ್ಬಂದಿಗಳು ವಿಶೇಷವಾಗಿ ಸಿಂಗರಿಸಿಕೊಂಡು ಬಂದಿದ್ದರು. ತಮ್ಮಲ್ಲಿರುವ ಬಟ್ಟೆ ಆಭರಣಗಳನ್ನೇ ಶುಭ್ರವಾಗಿ ಅಚ್ಚುಕಟ್ಟಾಗಿ ಧರಿಸಿದ್ದರು. ನಮ್ಮ ಕಚೇರಿಯಲ್ಲಿ ಸುಮಾರು ವಿಭಾಗಗಳಿವೆ. ಆಡಳಿತ ವಿಭಾಗ, ಯೋಜನೆ ವಿಭಾಗ, ಅಭಿವೃದ್ಧಿ ವಿಭಾಗ, ಲೆಕ್ಕ ವಿಭಾಗ, ನರೇಗ ವಿಭಾಗ, ಜಲಜೀವನ್ ಮಿಷನ್ ವಿಭಾಗ ಹೀಗೆ. ಎಲ್ಲಾ ವಿಭಾಗಗಳು ಮತ್ತು ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಇಲಾಖೆಯವರು ತಮ್ಮ ಕಚೇರಿಯ ಮುಂಭಾಗ ಕಾರಿಡಾರ್ ನಲ್ಲಿ ಬಗೆ ಬಗೆಯ ರಂಗೋಲಿ ಹಾಕಿದ್ದರು. ಒಂದೊಂದು ಅಷ್ಟು ಚಂದವಾಗಿತ್ತು. ಅದರಲ್ಲಿ ನನ್ನ ಆಪ್ತ ಸಹಾಯಕಿ ಮತ್ತು ಸಿಬ್ಬಂದಿ, ಆಡಳಿತ ವಿಭಾಗದವರು ಹಾಕಿದ ರಂಗೋಲಿ. ಆ ರಂಗೋಲಿಯಲ್ಲಿ ಅಳವಡಿಸಿದ ಬಣ್ಣ ಬಣ್ಣದ ಹೂಗಳು ಮತ್ತು ಅಲ್ಲಲ್ಲಿ ಇರಿಸಿದ ದೀಪದ ಜೋಡಣೆ ಅತಿರಂಜಿತವಾಗಿ ಕಣ್ಮನ ತುಂಬುವಂತೆ ಮಾಡಿದ್ದರು. ಅವುಗಳನ್ನು ನೋಡುವುದೇ ಒಂದು ಆನಂದವಾಗಿತ್ತು. ನಂತರ ಜಲಜೀವನ ಮಿಷನ್ ಕಟ್ಟಡವನ್ನು ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆದಂತಹ ಡಾಕ್ಟರ್ ಆನಂದ್ ರವರು ಉದ್ಘಾಟನೆ ಮಾಡಿದರು. ತದನಂತರ ಎಲ್ಲಾ ಸಿಬ್ಬಂದಿಗಳು, ವಾಹನ ಚಾಲಕ ಸಂಘದವರು ಏರ್ಪಡಿಸಿದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ವಾಹನ ಚಾಲಕರ ಸಂಘದವರು ಜಿಲ್ಲೆಯಲ್ಲಿ ಸಾಧನೆ ಮಾಡಿದ ಸುಮಾರು 9 ಮಂದಿ ಸರ್ಕಾರಿ ನೌಕರರಿಗೆ ಸನ್ಮಾನ ಸಮಾರಂಭ ಏರ್ಪಡಿಸಿದ್ದರು. ಉದ್ಘಾಟನೆ, ಪೂಜೆ ಮತ್ತು ಸನ್ಮಾನ ಸಮಾರಂಭದಲೆಲ್ಲ ಮಾನ್ಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ಸಂತೋಷದಿಂದ ಭಾಗವಹಿಸಿದ್ದರು. ನಾವೆಲ್ಲ ಸೇರಿ ಸನ್ಮಾನ ಮಾಡಿದೆವು. ವಾಹನ ಚಾಲಕರ ಸಂಘದವರು ಸನ್ಮಾನಿಸುವ ಮೂಲಕ ಸಂತೋಷಪಟ್ಟರೆ. ನಾವು ಸನ್ಮಾನಿಸಿ ಸಂತೋಷ ಪಟ್ಟೆವು. ಸನ್ಮಾನಿತರು ಸನ್ಮಾನಿಸಿ ಕೊಂಡು ಸಂತೋಷಪಟ್ಟರು. ನಮ್ಮ ಸಿಬ್ಬಂದಿ ಮಿತ್ರರಲ್ಲ ಚಪ್ಪಾಳೆ ಹೊಡೆಯುವುದರ ಮೂಲಕ ನೋಡಿ ಸಂತೋಷಪಟ್ಟರು. ಕೊನೆಯಲ್ಲಿ ಸಿಹಿ ಭೋಜನ ದೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಿತ್ತು.
ಈ ಬಾರಿಯ ಆಯುಧ ಪೂಜೆ ಹಬ್ಬವನ್ನು ಹೆಚ್ಚು ಸಡಗರದಿಂದ ಎಲ್ಲರೂ ಸೇರಿ ಸಂಭ್ರಮ ಪಟ್ಟೆವು. ಮಕ್ಕಳೇ ನೀವು ಹೀಗೆ ಸಂಭ್ರಮಪಟ್ಟಿದ್ದೀರಿ ಎಂದು ಭಾವಿಸಿರುತ್ತೇನೆ.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
**********************************************