ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 60
Saturday, October 12, 2024
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 60
ಲೇಖಕರು : ರಮ್ಯಾ ಆರ್ ಭಟ್
ಸಹ ಶಿಕ್ಷಕಿ.
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621
ಮಕ್ಕಳ ಜಗಲಿಯ, ಪ್ರಿಯ ಓದುಗರಿಗೆಲ್ಲ ನನ್ನ ನಮಸ್ಕಾರಗಳು.. ಹಾಗೆ ಎಲ್ಲರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು... ದೇವಿ ದುರ್ಗಾ ಮಾತೆ ನಮ್ಮೆಲ್ಲರಿಗೂ, ಸುಖ, ನೆಮ್ಮದಿಯ ಜೀವನ, ಅರೋಗ್ಯ, ಸಮೃದ್ಧಿಯನ್ನು ನೀಡಿ ಹಾರೈಸಲೆಂದು ಬೇಡಿಕೊಳ್ಳುತ್ತೇನೆ.
ಮಾನವನ ಸಂಬಂಧ, ವಿಶ್ವಾಸ, ನಂಬಿಕೆ ಇವುಗಳಿಗೆಲ್ಲ ಭಾಷೆಯ ಅಗತ್ಯವಿಲ್ಲ, ಭಾಷೆ ಯಾವುದಾದರೂ ಸರಿ ಆದರೆ, ಭಾವನೆಗಳು ಎಲ್ಲ ಭಾಷಿಗರಿಗೂ ಒಂದೇ ಆಗಿರುತ್ತದೆ.. ಆದರೆ ಪರಸ್ಪರ ವ್ಯವಹಾರಕ್ಕೆ, ಆರೋಗ್ಯಕರ ಸಂಭಾಷಣೆಗಳಿಗೆ ಭಾಷೆ ಅಗತ್ಯ. ಅದರಲ್ಲೂ ನಮ್ಮ ನಮ್ಮ ಮಾತೃಭಾಷೆ ನಮಗೆ ಪ್ರೀತಿ ಮತ್ತು ಅಭಿಮಾನ.
ಆದರೆ ಈಗಿನ ಕಾಲದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಕಡ್ಡಾಯವಾದ್ದರಿಂದ, ಮತ್ತು ಹಲವು ಉದ್ಯೋಗಗಳಿಗೆ ಅದರ ಅಗತ್ಯ ಹೆಚ್ಚಿದೆ. ಹಾಗೆ ಸಾಮಾನ್ಯವಾಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುವ ಮಕ್ಕಳ ಪೋಷಕರು ನಮ್ಮ ಮಕ್ಕಳು ಇಂಗ್ಲಿಷ್ ನಲ್ಲಿ ಮಾತನಾಡಲಿ ಎಂದು ಬಯಸುವುದು ಸಹಜ. ಹೀಗೆ ಒಮ್ಮೆ ತರಗತಿಯಲ್ಲಿ ತಮ್ಮ ಆಡುಭಾಷೆಯಲ್ಲಿ ಮಾತನಾಡಿಕೊಂಡು ಆಟವಾಡುತ್ತಿದ್ದ ಮಕ್ಕಳಿಗೆ ನಾನು ಹೇಳಿದೆ, "ಮಕ್ಕಳೇ ಆಂಗ್ಲ ಮಾಧ್ಯಮದಲ್ಲಿ ಓದುತ್ತಿದ್ದರೂ ನೀವು ಒಮ್ಮೆಯಾದರೂ ಇಂಗ್ಲಿಷ್ನಲ್ಲಿ ಮಾತನಾಡುವುದಿಲ್ಲ, ಏಕೆ? ನಾಳೆ ಇಂದ ಶಾಲೆಯಲ್ಲಿ ಇಂಗ್ಲಿಷ್ ನಲ್ಲೆ ಮಾತನಾಡಬೇಕು" ಎಂದು ಹೇಳಿದೆ. ಮಾರನೇ ದಿನ ತರಗತಿಗೆ ಬಂದ ಕೆಲವು ಮಕ್ಕಳು ನನ್ನ ಮಾತನ್ನು ನೆನಪಿನಲ್ಲಿಟ್ಟುಕೊಂಡು, ಸಣ್ಣ ಪುಟ್ಟ ಪದಗಳನ್ನು ಹೊಂದಿಸಿ ಇಂಗ್ಲಿಷ ಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದರು. ಅವರ ಪ್ರಯತ್ನ ಕಂಡು ಸಂತೋಷವಾಯಿತು.
ಹೀಗೆ ತರಗತಿ ಮುಂದುವರಿದು ಮಧ್ಯಾಹ್ನ ವಾಯಿತು. ಪ್ರತಿ ದಿನ, ತನ್ನ ಊಟವನ್ನು ಬೇಗ ಮುಗಿಸಿ ಓಡಿ ಬಂದು ನಾನು ಊಟ ಮಾಡುವ ಹೊತ್ತಿಗೆ, ನನ್ನ ಬಳಿ ಬಂದು, ಹಿಂದಿನ ದಿನ ಮನೆಯಲ್ಲಿ ನಡೆದ ಘಟನೆಯನ್ನೆಲ್ಲ ಚಾಚೂ ತಪ್ಪದೆ ನನಗೆ ವರದಿ ಒಪ್ಪಿಸುತ್ತಿದ್ದ ಮಗು ಆ ದಿನ ಪತ್ತೆ ಇಲ್ಲ. ಶಾಲೆಗೆ ಅವಳು ಹಾಜರಿದ್ದಳು ಆದರೂ ನನ್ನ ಬಳಿ ಬಾರದಿದ್ದದ್ದನ್ನು ಕಂಡು, ನಾನೇ ಅವಳನ್ನು ಹತ್ತಿರ ಕರೆದು ಕೇಳಿದೆ "ಯಾಕೆ ಏನಾಯಿತು? ಇವತ್ತು ಮೇಡಂ ತುಂಬಾ ಸೈಲೆಂಟ್ ಆಗಿದ್ದೀರಿ? ಅಮ್ಮ ಏನಾದ್ರು ಹೇಳಿದ್ರ?" ಎಂದು ಕೇಳಿದೆ. ಇಲ್ಲ ಎಂದು ತಲೆ ಅಲ್ಲಾಡಿಸಿದಳು, ನಾನು ಕೇಳಿದ ಎಲ್ಲ ಪ್ರಶ್ನೆಗೂ ಅವಳು ಬಾಯಿ ಬಿಟ್ಟು ಉತ್ತರಿಸದೆ ಬರೀ ತಲೆ ಅಲ್ಲಾಡಿಸುತ್ತಿದ್ದಳು. ಮತ್ತೆ ಕೇಳಿದೆ "ಯಾಕೆ ಪುಟ್ಟ ಮಾತಾಡ್ತಾ ಇಲ್ಲ ಬಾಯಿ ಬಿಟ್ಟು ಮಾತನಾಡು" ಎಂದು.. ಆಗ ಅವಳು, ನೀರು ತುಂಬಿದ ಕಣ್ಣುಗಳಿಂದ, ಮುಖ ಸಪ್ಪಗೆ ಮಾಡಿಕೊಂಡು ಅಳುತ್ತ ಹೇಳಿದಳು. "ಮಾತಾಜಿ, ನನಗೆ ಇಂಗ್ಲಿಷ್ ನಲ್ಲಿ ಮಾತನಾಡಲು ಕಷ್ಟವಾಗುತ್ತಿದೆ, ನಿಮ್ಮ ಬಳಿ ಬಂದು ನನ್ನ ಕಥೆಯನ್ನೆಲ್ಲ ಹಂಚಿಕೊಳ್ಳಲು ಆಗುತ್ತಿಲ್ಲ ಎಂದು ತನ್ನ ಅಸಮಾಧಾನವನ್ನು ಹೇಳಿಕೊಳ್ಳುವಷ್ಟರಲ್ಲಿ, ತುಂಬಿದ ಕಣ್ಣಿಂದ ನೀರು ಹೊರ ಬಂದಿತ್ತು.. ಊಟ ಮಾಡುತ್ತಿದ್ದ ನನಗೆ, ಅನ್ನ ಗಂಟಲಿನಿಂದ ಕೆಳಗಿಳಿಯಲಿಲ್ಲ, ನನ್ನ ಕಣ್ಣು ತುಂಬಿ ಬಂದಿತ್ತು. ಅಪರಾಧಿ ಭಾವ ನನನ್ನು ಕಾಡಿತ್ತು. ನನ್ನ ಬಳಿ ಅವಳ ಪ್ರಶ್ನೆಗೆ ಉತ್ತರ ಇರಲಿಲ್ಲ. ತುಂಬಾ ಪಶ್ಚಾತಾಪದಿಂದ ಅವಳ ಬಳಿ ಹೇಳಿದೆ.. "ಅಯ್ಯೋ ಮಗು ನಾನು ಹೇಳಿದ್ದು ಇಂಗ್ಲಿಷ್ ನಲ್ಲಿ ಮಾತನಾಡಲು ಪ್ರಯತ್ನಿಸಿ ಎಂದು ಅಷ್ಟೇ. ನನ್ನ ಬಳಿ ಮಾತನ್ನೇ ಆಡಬೇಡಿ ಎಂದಲ್ಲ, ಎಂದು ತಲೆ ತಟ್ಟಿದೆ.. ಆಗ ಅವಳು ಹೇಳಿದಳು "ನನಗೆ ಇಂಗ್ಲೀಷ್ ಪದಗಳು ಮಾತ್ರ ಗೊತ್ತು, ಆದರೆ ಮಾತನಾಡಲು ಗೊತ್ತಿಲ್ಲ" ಎಂದು. ಆಗ ನಾ ಹೇಳಿದೆ ಪರವಾಗಿಲ್ಲ ನೀನು ಪದಗಳನ್ನೇ ಹೇಳು ಅದನ್ನು ಜೋಡಿಸಿ ಮಾತನಾಡಲು ನಾವು ಎಲ್ಲರೂ ಒಟ್ಟಿಗೆ ಅಭ್ಯಾಸ ಮಾಡೋಣ ಆಯಿತಾ ಎಂದು ಎಲ್ಲರೊಡನೆ ಹೇಳಿ, ಅವಳಿಗೆ ಕಚಗುಳಿ ಮಾಡಿ ನಗಿಸಿದಾಗ ಅವಳ ಮುಖ ಅರಳಿತು.
ಆಗ ನನಗೆ ಸ್ವಲ್ಪ ಸಮಾಧಾನವಾಯಿತಾದರೂ ಅಪರಾಧಿ ಭಾವ ನನ್ನನ್ನು ಕಾಡುತ್ತಲೇ ಇತ್ತು. ಆ ವಿಚಾರವನ್ನು ಮಕ್ಕಳ ಬಳಿ ಹೇಳುವಲ್ಲಿ, ಹೇಳುವ ವಿಧಾನದಲ್ಲಿ ನಾನು ಎಲ್ಲೋ ಎಡವಿದೆ ಎಂದು... ಅಂದಿನಿಂದ ಮಕ್ಕಳಲ್ಲಿ ಏನನ್ನಾದರೂ ಹೇಳುವಾಗ ಹತ್ತು ಬಾರಿ ಯೋಚಿಸಿ ನಂತರ ಹೇಳುತ್ತೇನೆ.
ಸಹ ಶಿಕ್ಷಕಿ.
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621
*******************************************