-->
ಜಗತ್ತನ್ನೇ ಒಂದು ಕುಟುಂಬ ದಂತೆ ಪ್ರೀತಿಸಿದ ಲೋಕ ನೇತಾರ ಪ್ರವಾದಿ ಮಹಮ್ಮದ್ ಪೈಗಂಬರ್...

ಜಗತ್ತನ್ನೇ ಒಂದು ಕುಟುಂಬ ದಂತೆ ಪ್ರೀತಿಸಿದ ಲೋಕ ನೇತಾರ ಪ್ರವಾದಿ ಮಹಮ್ಮದ್ ಪೈಗಂಬರ್...

ಈದ್ ಮಿಲಾದ್ ವಿಶೇಷ ಲೇಖನ : ಜಗತ್ತನ್ನೇ ಒಂದು ಕುಟುಂಬ ದಂತೆ ಪ್ರೀತಿಸಿದ ಲೋಕ ನೇತಾರ ಪ್ರವಾದಿ ಮಹಮ್ಮದ್ ಪೈಗಂಬರ್...
ಲೇಖಕರು: ರೆಹಮಾನ್ ಖಾನ್ ಕುಂಜತ್ತಬೈಲ್
ಅಧ್ಯಕ್ಷರು, ರಂಗ ಸ್ವರೂಪ (ರಿ)
ಕುಂಜತ್ತಬೈಲ್, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
Mob: +91 98808 35659



ಜಗಲಿಯ ಎಲ್ಲಾ ಓದುಗರಿಗೂ ಈದ್ ಮಿಲಾದ್ ಹಬ್ಬದ ಶುಭಾಶಯಗಳು...

ಜಗತ್ತಿನಲ್ಲಿ ನೈತಿಕ ಮೌಲ್ಯಗಳ ಕುಸಿತವಾದಾಗ, ಆಯಾಕಾಲದಲ್ಲೆ ಹುಟ್ಟಿ ಬೆಳೆದು, ತಮ್ಮ ಬದುಕನ್ನೇ ಉದಾಹರಣೆಯನ್ನಾಗಿಸಿ, ಜನರನ್ನು ಅಜ್ಞಾನದ ಅಂಧಕಾರದಿಂದ ಬೆಳಕಿನೆಡೆಗೆ ದಾರಿತೋರುವ ಆಪತ್ಬಾಂಧವರ ಕುರಿತು ಅನೇಕ ಇತಿಹಾಸಗಳಿವೆ. ಅಂತಹ ಆಪತ್ಬಾಂಧವರಲ್ಲಿ ಓರ್ವರು.. ಜಗತ್ ಜ್ಯೋತಿ ವಿಶ್ವ ವಿಮೋಚಕ, ಕಾರುಣ್ಯದ ಕಡಲು, ಪ್ರವಾದಿ ಮುಹಮ್ಮದ್ ಪೈಗಂಬರ್. ಮುಹಮ್ಮದ್ ಪೈಗಂಬರ್ ರವರ ಜನ್ಮದಿನದ ಅಂಗವಾಗಿ ಆಚರಿಸುವ ಹಬ್ಬವೇ ಈದ್ ಮಿಲಾದ್...
     ಮುಹಮ್ಮದ್ ಪೈಗಂಬರ್ ರವರ ಜೀವನ ಸಂದೇಶ ಬರೇ ಮಾತುಗಳಲ್ಲ. ಅವು ದೇಶಾತೀತ ಮತ್ತು ಕಾಲಾತೀತವಾದ ಸತ್ಯ ನುಡಿಗಳಾಗಿವೆ. ಜನರ ಮೇಲೆ ಯಾರು ಕರುಣೆ ತೋರುವುದಿಲ್ಲವೊ ಅವರ ಮೇಲೆ ದೇವನೂ ಕರುಣೆ ತೋರುವುದಿಲ್ಲವೆಂದು ಜಗತ್ತಿಗೆ ಸಾರಿದ ಕರುಣಾಮಯಿ ಅವರು. ನಿನ್ನ ನೆರೆಮನೆಯವನು ಯಾವ ಧರ್ಮದವನಾದರೂ ಸರಿ, ಅವನು ಹಸಿದಿರುವಾಗ ನೀನು ಅವನಿಗೆ ಆಹಾರ ನೀಡದೆ ಹೊಟ್ಟೆ ತುಂಬ ಉಂಡರೆ ನೀನು ನೈಜ ಮುಸಲ್ಮಾನನಾಗಲು ಸಾಧ್ಯವೇ ಇಲ್ಲ ಎಂದು ಸಾಮರಸ್ಯವ ಸಾರಿದ ಮಹಾನ್ ಮಾನವತಾವಾದಿ. "ನಾಳೆ ಪ್ರಳಯವಾದರೂ ಸರಿ, ಆದರೆ ಇಂದು ಗಿಡ ನೆಡು" ಎಂದ ಶ್ರೇಷ್ಠ ಪರಿಸರ ವಾದಿ. ವಿಧವೆಯರ ವಿವಾಹಕ್ಕೆ ಪ್ರೋತ್ಸಾಹಿಸಿ ಅವರ ಬದುಕು ಹಾಗೂ ರಕ್ಷಣೆಯ ಬಗ್ಗೆ ಚಿಂತಿಸಿ ದಾರಿ ತೋರಿದ ಆದರ್ಶ ವ್ಯಕ್ತಿ. ವೃತ್ತಿ ವ್ಯಾಪಾರವಾದರೂ ಕೈಚಾಚಿ ಬಂದವರಿಗೆ ಇಲ್ಲವೆನ್ನಲಾಗದ ಉದಾರ ಮನಸ್ಸು. ಐಶಾರಾಮಿಯಾಗಿ ಬದುಕಬಲ್ಲ ಅವಕಾಶಗಳಿದ್ದರೂ ಸರಳ ಬದುಕಿನ ಶ್ರೇಷ್ಠತೆಯನ್ನು ಅರಿತು ಮಕ್ಕಾ ಹಾಗು ಮದೀನಗಳಲ್ಲಿ ಒಂದು ಸಣ್ಣ ಮಣ್ಣಿನ ಗುಡಿಸಲಿನಲ್ಲಿ ವಾಸಿಸುತ್ತಾ, ಯಾವುದೇ ದರ್ಪವಿಲ್ಲದೆ ಸಾದಾರಣ ವ್ಯಕ್ತಿಯಂತೆ ತಮ್ಮ ಸಹವರ್ತಿಗಳೊಂದಿಗೆ ಬೆರೆಯುತ್ತಿದ್ದ ಸಜ್ಜನ. ಅವರು ಶ್ರೀಮಂತಿಕೆಯ ಬದುಕನ್ನು ಸವಿದವರಲ್ಲ. ಕೇವಲ ನೀರು ಹಾಗು ಖರ್ಜೂರವಾಗಿತ್ತು ಅವರ ದೈನಂದಿನ ಆಹಾರ. ಶಿಕ್ಷಣದ ಮಹತ್ವವನ್ನು ಅಂದೇ ಅರಿತಿದ್ದ ಅವರು ಪ್ರಪಂಚದ ಯಾವ ಮೂಲೆಗಾದರೂ ಹೋಗಿ ಶಿಕ್ಷಣವನ್ನು ಪಡೆಯುವಂತೆ ಜನರನ್ನು ಪ್ರೇರೇಪಿಸಿದರು. ಇದರೊಂದಿಗೆ ಗುರುಹಿರಿಯರನ್ನು ಗೌರವಿಸುವುದು, ಕಿರಿಯರನ್ನು ಪ್ರೀತಿಯಿಂದ ಕಾಣುವುದು, ಮಾತಾಪಿತರಿಗೆ ವಿಶೇಷ ಗೌರವವನ್ನು ನೀಡಿ ಅವರನ್ನು ಸಲಹುವುದು, ರೋಗಿಗಳನ್ನು ಸಂದರ್ಶಿಸಿ ಧೈರ್ಯ ತುಂಬುವುದು, ಬಡವರಿಗೆ ಸಹಾಯಮಾಡುವುದು ಮಾತ್ರವಲ್ಲ, ಪರಸ್ಪರರನ್ನು ಕಂಡಾಗ ಮುಗುಳ್ನಗೆಯಿಂದ ಮಾತನಾಡುವುದು ಕೂಡಾ ವಿಶ್ವಾಸದ ಲಕ್ಷಣ ಎಂದು ಜನತೆಗೆ ಸಾರಿದರು. ಮಾದಕವಸ್ತುಗಳು, ಮದ್ಯಪಾನ ಹಾಗೂ ವೇಶ್ಯಾವಾಟಿಕೆಗಳನ್ನು ನಿಷೇಧಿಸುವುದರೊಂದಿಗೆ ಆರೋಗ್ಯಕರ ಜೀವನವನ್ನು ಪ್ರೋತ್ಸಾಹಿಸಿದರು. ಪೈಗಂಬರರ ಸಂದೇಶಗಳು ಅಂದು ಎಷ್ಟು ಅನಿವಾರ್ಯವಾಗಿತ್ತೋ ಇಂದಿಗೂ ಅಷ್ಟೇ ಆವಶ್ಯಕವಾಗಿವೆ. ಸತ್ಯ ಹಾಗೂ ಪ್ರಾಮಾಣಿಕ ಬದುಕನ್ನು ಬಾಳಿದ ಪೈಗಂಬರರ ಆದರ್ಶಗಳು ಇಂದಿಗೂ ಅನುಕರಣೀಯ. ಅವರ ಜೀವನ ಒಂದು ತರೆದ ಪುಸ್ತಕದಂತಿದೆ. ಓರ್ವ ಸಾಮಾನ್ಯ ವ್ಯಕ್ತಿಯೂ ಕೂಡಾ ತನ್ನ ಚಿಂತನೆಗಳು, ಮಾನವೀಯತೆ, ಪರೋಪಕಾರ, ದಯೆ, ಕರುಣೆಯಂತಹ ಗುಣಗಳ ಮೂಲಕ ಅಸಂಖ್ಯಾತ ಜನರಿಗೆ ದಾರಿದೀಪವಾಗಲು ಸಾಧ್ಯ ಎನ್ನುವುದಕ್ಕೆ ಒಂದು ಶ್ರೇಷ್ಠ ಉದಾಹರಣೆ ಮುಹಮ್ಮದ್ ಪೈಗಂಬರ್. ಇಂತಹ ಮಹಾನ್ ವ್ಯಕ್ತಿಯ ಜನ್ಮ ದಿನದ ನೆನಪಿನೊಂದಿಗೆ ಆಚರಿಸಲ್ಪಡುವ ಈ ಹಬ್ಬವು ಸಮಾಜದಲ್ಲಿ ಸಾಮರಸ್ಯ ಮತ್ತು ಸಹಾನುಭೂತಿಯ ಮನೋಭಾವವನ್ನು ಹೆಚ್ಚಿಸಲಿ, ಎಲ್ಲೆಡೆ ಶಾಂತಿ ನೆಲೆಸಲಿ’ ಎಂದು ಹಾರೈಸುತ್ತೇನೆ... ಸರ್ವರಿಗೂ ಈದ್ ಮಿಲಾದ್ ಹಬ್ಬದ ಶುಭಾಶಯಗಳು...
................ ರೆಹಮಾನ್ ಖಾನ್ ಕುಂಜತ್ತಬೈಲ್
ಅಧ್ಯಕ್ಷರು 
ರಂಗ ಸ್ವರೂಪ (ರಿ)
ಕುಂಜತ್ತಬೈಲ್, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
Mob: +91 98808 35659
******************************************


Ads on article

Advertise in articles 1

advertising articles 2

Advertise under the article