-->
ಜೀವನ ಸಂಭ್ರಮ : ಸಂಚಿಕೆ - 155

ಜೀವನ ಸಂಭ್ರಮ : ಸಂಚಿಕೆ - 155

ಜೀವನ ಸಂಭ್ರಮ : ಸಂಚಿಕೆ - 155
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 

               
ಮಕ್ಕಳೇ, ಇಂದು ಪಾತಂಜಲ ಯೋಗ ಸೂತ್ರದ ಎರಡನೆಯ ಪಾದ, ಎರಡನೇ ಮೆಟ್ಟಿಲು, ನಾಲ್ಕನೇ ಉಪಾಂಗದಲ್ಲಿ ಬರುವ ಮೂರನೇ ಸ್ವಾಧ್ಯಾಯ, ನಾದ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ವಿಜ್ಞಾನದಲ್ಲಿ ಹೇಳುತ್ತೇವೆ ಅಣುಗಳು ಯಾವಾಗಲೂ ಕಂಪಿಸುತ್ತಾ ಇರುತ್ತವೆ. ಘನ ವಸ್ತುವಿನಲ್ಲಿ ಕಂಪಿಸುತ್ತದೆ. ದ್ರವ ವಸ್ತುವಿನಲ್ಲಿ ಪರಿಮಿತಿ ಒಳಗೆ ಚಲಿಸುತ್ತದೆ. ಅನಿಲದಲ್ಲಿ ಹೆಚ್ಚು ದೂರ ಚಲಿಸುತ್ತದೆ. ಎಲೆಕ್ಟ್ರಾನ್ ಗಳು ಪ್ರೋಟಾನ್, ನ್ಯೂಟ್ರಾನ್ ಸುತ್ತ ಸುತ್ತುತ್ತದೆ. ಯಾವುದು ಸ್ಥಿರವಾಗಿಲ್ಲ. ಪ್ರತಿಯೊಂದು ಕಂಪಿಸುತ್ತಾ ಕಂಪಿಸುತ್ತಾ ಇದೆ. ಹೀಗೆ ಕಂಪಿಸುತ್ತಾ ಅಣುಗಳು ಸಮೀಪಕ್ಕೆ ಬಂದರೆ ಘನೀಭೂತವಾಗಿ ಒಂದು ವಸ್ತು ತಯಾರಾಗುತ್ತದೆ. ಅಣುಗಳು ಸೇರಿ ಅಣುಪುಂಜವಾಗುತ್ತದೆ. ಅಣು ಪುಂಜಗಳು ಸೇರಿ ವಸ್ತುವಾಗುತ್ತದೆ. ಅಣುಗಳು ಸೂಕ್ಷ್ಮ ಕಣ್ಣಿಗೆ ಕಾಣುವುದಿಲ್ಲ. ಇದೇ ಬಿಂದು. ಅದಕ್ಕೊಂದು ರೂಪ ಇರುತ್ತದೆ ಅದೇ ಕಲೆ. ಪ್ರತಿಯೊಂದು ವಸ್ತು ನಾದ, ಬಿಂದು, ಕಲೆ ಹೀಗೆ ರೂಪಗೊಳ್ಳುತ್ತದೆ. ಒಬ್ಬ ಕಲಾಕಾರ ಇದ್ದಾನೆ. ಆತ ಏನನ್ನು ಚಿತ್ರಿಸಬೇಕು, ಕೆತ್ತಬೇಕು ಆ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ. ಅಲ್ಲಿ ಸೌಂದರ್ಯ ಅಸ್ಪಷ್ಟವಾಗಿ ಕಂಡುಬರುತ್ತದೆ. ಅದು ನಾದ. ಸೂಕ್ಷ್ಮ ರೂಪದ ಸೌಂದರ್ಯವನ್ನು ಸ್ಥೂಲ ರೂಪದಲ್ಲಿ ಭಾವಿಸಿಕೊಳ್ಳುತ್ತಾನೆ, ಇದು ಬಿಂದು. ಅದನ್ನು ಚಿತ್ರಗೊಳಿಸುತ್ತಾನೆ ಇದು ಕಲಾ. ಇದನ್ನೆಲ್ಲಾ ಪ್ರತಿಪಾದಿಸುವುದು ಓಂಕಾರ. ಒಳಗೆ ಅತಿ ಸೂಕ್ಷ್ಮ ನಾದಾತ್ಮಕ ಓಂಕಾರ, ಕಡೆಗೆ ಕಲಾತ್ಮಕ ಓಂಕಾರ, ಮಧ್ಯದಲ್ಲಿ ಬಿಂದಾತ್ಮಕ ಓಂಕಾರ. ಜಗತ್ತೆಲ್ಲ ಓಂಕಾರ. ಜಗತ್ತೆಲ್ಲ ಕಂಪಿಸುವಾಗ ಬರುವ ಧ್ವನಿ ಓಂಕಾರ. ಇದು ಯಾವ ಭಾಷೆ ಅಲ್ಲ. ಓಂಕಾರ ಅನ್ನುವುದು ನಾದ. ಓಂಕಾರ ಮಂತ್ರ, ನಾದ. ಆ ನಾದವನ್ನು ಅಧ್ಯಯನ ಮಾಡುವುದಕ್ಕೆ ನಾದಸ್ವಾಧ್ಯಾಯ ಎನ್ನುವರು.
      ಮಂತ್ರ ಸ್ವಾಧ್ಯಾಯ ಅದರ ಕಂಪನ ಭಾವ ಮಾಡಿಕೊಂಡರೆ ನಾದಸ್ವಾಧ್ಯಾಯ. ಓಂ ಅಂದಾಗ ಹೊರಡುವ ನಾದ ಕೇಳುತ್ತಾ ಇರುವುದು. ನಾವು ಮೌನವಾದಾಗ ಮೌನದ ಮಧ್ಯದಲ್ಲಿ ಧ್ವನಿ ಶುರುವಾಗುತ್ತದೆ. ಅಂತಹ ಧ್ವನಿಗೆ ಓಂಕಾರ ನಾದ ಎನ್ನುವರು. ಕಂಠದ ನಾದ ಬೇರೆ. ವಿಶ್ವವೆಲ್ಲ ಆ ಧ್ವನಿ ತುಂಬಿದೆ. ವಿಜ್ಞಾನಿಗಳು ಅದಕ್ಕೆ ಬ್ಯಾಗ್ರೌಂಡ್ ರೇಡಿಯೇಷನ್ ಎಂದು ಕರೆದರು. ಅದು ವಿಶ್ವದ ತುಂಬೆಲ್ಲ ತುಂಬಿದೆ. ಇದೇ ಓಂಕಾರ. ಮೌನವಾಗಿದ್ದಾಗ ಎಲ್ಲಾ ಕಡೆ ಧ್ವನಿ ಕೇಳಲು ಶುರುವಾಗುತ್ತದೆ. ಇಂತಹ ಧ್ವನಿಯನ್ನು ಮತ್ತೆ ಮತ್ತೆ ಕೇಳು ಎಂದನು ಪತಂಜಲ. ಇದು ನಿನ್ನನ್ನು ಮರೆಸಿ ವಿಶ್ವವನ್ನು ತಲೆಯಲಿ ತುಂಬುತ್ತದೆ. ಮನುಷ್ಯ ಯಾವಾಗಲೂ ತನ್ನ ತಲೆಯಲ್ಲಿ ತನ್ನದನ್ನೇ ತುಂಬಿಕೊಂಡಿರುತ್ತಾನೆ. ವಿಶ್ವದ ಬಗ್ಗೆ ವಿಚಾರ ಮಾಡುವುದಿಲ್ಲ. ತನ್ನ ಬಗ್ಗೆ, ತನ್ನ ಕುಟುಂಬ, ತನ್ನ ಮನೆ, ಅಧಿಕಾರ, ಸಂಪತ್ತು ಇಷ್ಟನ್ನೇ ತುಂಬಿಕೊಂಡಿರುತ್ತಾನೆ. ಓಂಕಾರ ಮನಸ್ಸನ್ನು ಕಂಪಿಸುವುದರಿಂದ ವೈಯಕ್ತಿಕ ವಿಷಯಗಳು ಹೋಗಿ ವಿಶ್ವದ ವಿಷಯ ತುಂಬುತ್ತದೆ. ಇದಕ್ಕೆ ನಾದ ಸ್ವಾಧ್ಯಾಯ. ಓಂಕಾರ ತಾನಾಗೇ ಇರುವುದರಿಂದ ಇದಕ್ಕೆ ಅನಾಹುತ ಓಂಕಾರ ಎನ್ನುವರು. ಇಂತಹ ಸೂಕ್ಷ್ಮ ನಾದಗಳನ್ನು ಕೇಳುವುದರಿಂದ ವೈಯಕ್ತಿಕವಾಗಿ ಕಣ್ಣು ಮತ್ತು ಕಿವಿ ಮುಚ್ಚಿ ಕುಳಿತುಕೊಂಡರೆ ಒಂದು ಧ್ವನಿ ಕೇಳಿಸುತ್ತದೆ. ಅದು ಯಾರು ಮಾಡಿದ್ದಲ್ಲ ಅದು ಅಂತರಂಗದ ಧ್ವನಿ. ಅದನ್ನು ಮೀರಿದಾಗ ವಿಶ್ವದ ಧ್ವನಿ ಕೇಳುತ್ತದೆ. ಇಂಥ ಸೂಕ್ಷ್ಮ ದ್ವನಿಗಳನ್ನು ಕೇಳುತ್ತಾ ಕೇಳುತ್ತಾ ಹೋದರೆ ನಮ್ಮ ವೈಯಕ್ತಿಕ ಭಾವನೆಗಳು ಚೆಲ್ಲಿ ಹೋಗುತ್ತದೆ. ಮನಸ್ಸು ಸೂಕ್ಷ್ಮವಾಗಲು ಪ್ರಾರಂಭವಾಗುತ್ತದೆ. ಇದು ನಾದಸ್ವಾಧ್ಯಾಯ. ಅದೇ ರೀತಿ ಆಹತ ನಾದ ಸ್ವಾಧ್ಯಾಯ ಮಾಡಬಹುದು. ವೀಣಾ ತಂತಿ ಮೀಟಿದಾಗ, ಧ್ವನಿ ಶುರುವಾಗುತ್ತದೆ. ಬಡಿದಾಗ ಮೀಟಿದಾಗ ನಾದ ಶುರವಾಗುತ್ತದೆ. ಆ ನಾದ ಕೇಳುತ್ತಾ ಇರುವುದು. ನಾದ ಮಧುರ. ಇದಲ್ಲದೆ ನಿಸರ್ಗದ ದ್ವನಿ, ಪಕ್ಷಿಗಳ ಧ್ವನಿ ಹೀಗೆ ಕೇಳುತ್ತಾ ಇದ್ದರೆ, ಜಗತ್ತು ಎಷ್ಟು ಅದ್ಭುತ ಎನ್ನುವುದು ತಿಳಿಯುತ್ತದೆ. ಗಾಳಿ ಬೀಸುವಾಗ, ಮಳೆ ಬೀಳುವಾಗ ಧ್ವನಿ ಬರುತ್ತದೆ. ಧ್ವನಿ ಹಿಂದೆ ಇರುವ ನಾದ ಬಹಳ ಮುಖ್ಯ. ಅದನ್ನು ಕೇಳು ಎಂದು ಪಾತಂಜಲ ಹೇಳುತ್ತಾನೆ. ಇದರಿಂದ ಕಾಮ, ಕ್ರೋಧ ಕಡಿಮೆಯಾಗುತ್ತದೆ ಎಂದು ಹೇಳಿದ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article