-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 133

ಸ್ಫೂರ್ತಿಯ ಮಾತುಗಳು : ಸಂಚಿಕೆ - 133

ಸ್ಫೂರ್ತಿಯ ಮಾತುಗಳು : ಸಂಚಿಕೆ - 133
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                    
 “ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸಿ” ಎಂಬ ಪರಮ ಶ್ರೇಷ್ಠವಾದ ಮಾತು ಮಾಂಡೂಕ ಉಪನಿಷತ್ ನಲ್ಲಿದೆ. ನಾವು ಹುಟ್ಟಿದ ದೇಶ ಸ್ವರ್ಗಕ್ಕಿಂತ ಶ್ರೇಷ್ಠವೆಂದೇ ಈ ಶ್ಲೋಕದ ಸಂದೇಶ. ದೇಶದ ಬಗ್ಗೆ ಗೌರವ ಮತ್ತು ಅಭಿಮಾನ ಇರಲೇ ಬೇಕಾದುದು ನಮ್ಮೆಲ್ಲರ ಸಹಜ ಕರ್ತವ್ಯ. ಜನರ ಜೀವನ ಮಟ್ಟ ಹಿಮಾಲಯದೆತ್ತರ ಏರಲು ಭಾರತ ಎಲ್ಲ ಕ್ಷೇತ್ರಗಳಲ್ಲೂ ವಿಕಸನ ಹೊಂದಬೇಕು. ಕೇಂದ್ರ ಸರಕಾರ 2024-25ನೇ ಸಾಲಿನ ಮುಂಗಡ ಪತ್ರದಲ್ಲಿ ವಿಕಸಿತ ಭಾರತದ ಮಹಾ ಸಂಕಲ್ಪದೊಂದಿಗೆ ಹೊಸ ಮನ್ವಂತರದ ಬಾಗಿಲು ತೆರೆಯುವತ್ತ ಗಮನವನ್ನು ಹರಿಸಿರುವುದು ಶ್ಲಾಘನೀಯ. 2047ಕ್ಕೆ ನಮಗೆ ಸ್ವಾತಂತ್ರ್ಯ ದೊರೆತು ಶತ ಸಂವತ್ಸರಗಳಾಗುತ್ತದೆ. ಈ ಹೊತ್ತಿಗೆ ಭಾರತ ಸಂಪೂರ್ಣವಾಗಿ ವಿಕಸಿಸ ಬೇಕೆಂಬುದು ಕೇಂದ್ರ ಸರಕಾರದ ದೃಢ ನಿಲುವು. ಅಭಿವೃದ್ಧಿ ಕೆಲಸಗಳಿಂದ ಮಾತ್ರವೇ ಭಾರತ ವಿಕಸಿಸದು. ಭಾರತ ವಿಕಸಿಸಲು ಅಭಿವೃದ್ಧಿ ಕೆಲಸಗಳ ಜೊತೆಗೆ ಪ್ರಜಾ ಕೋಟಿಯು ತಮ್ಮನ್ನು ಮೊತ್ತ ಮೊದಲಾಗಿ ಸರ್ವಾಂಗೀಣವಾಗಿ ವಿಕಸನಗೊಳಿಸಬೇಕು.
     ಭಾರತ ವಿಕಸಿಸಲು ಭಾರತೀಯರೆಲ್ಲರೂ ಕಂಕಣಿತರಾಗಬೇಕಾಗಿದೆ. “ಭಾರತ” ಇದರಲ್ಲಿರುವ ಅಕ್ಷರಗಳನ್ನು ವಿಮರ್ಶೆ ಮಾಡಿದರೆ “ಭಾ” ಎಂದರೆ ಜ್ಞಾನ. “ರತ” ಎಂದರೆ “ರತಿಸು” ಅಥವಾ “ಅನುಭವಿಸು” ಎಂದರ್ಥ. ಜ್ಞಾನವನ್ನು ಯಾವಾತ ಅನುಭವಿಸಿ ಆನಂದಿಸುವನೋ ಅವನೇ ಭಾರತೀಯ. ನಮ್ಮ ಪ್ರಮಾಣ ಪತ್ರಗಳಲ್ಲಿ ರಾಷ್ಟ್ರೀಯತೆಯನ್ನು ಭಾರತೀಯ ಎಂದೇ ದಾಖಲಿಸುತ್ತೇವೆ. ಯಾರನ್ನೇ ಆಗಲಿ, ಭಾರತೀಯ ಎನ್ನ ಬೇಕಾದರೆ ಆತ ಮತ್ತು ಆಕೆ ಇಲ್ಲಿನ ಜ್ಞಾನ ಮತ್ತು ಆಧ್ಯಾತ್ಮಿಕತೆಯನ್ನು ಅನುಸರಣೆ ಮಾಡಿರಬೇಕು. ಭಾರತೀಯ ಸಿದ್ಧಾಂತಗಳು ಮತ್ತು ಆಚರಣೆಗಳನ್ನು ಬದುಕಿನೊಂದಿಗೆ ಸಮನ್ವಯವಾಗಬೇಕು. ನೈಜ ಅರ್ಥದ ಭಾರತೀಯರಾಗ ಬೇಕು. ನೈಜ ಭಾರತೀಯತೆಯ ಧಾರಕರಿಂದ ಬಾರತವು ವಿಕಸಿಸಲು ಖಂಡಿತ ಸಾಧ್ಯವಿದೆ.
      ಭಾರತೀಯ ಸಿದ್ಧಾಂತಗಳಲ್ಲಿ ಅತ್ಯಂತ ಪ್ರಮುಖವಾದುದು ಗೌರವ, ಪ್ರೀತಿ ಮತ್ತು ಸಹಬಾಳ್ವೆ. ಈ ಮೂರೂ ಅಂಶಗಳನ್ನು ಚಾಚೂ ತಪ್ಪದೆ ತನ್ನೊಳಗೆ ಅಂತರ್ಗತಗೊಳಿಸಿಕೊಂಡವನು ನಿಜವಾದ ಭಾರತೀಯ. ಶಾಲಾ ಎಸ್ಸೆಂಬ್ಲಿಯಲ್ಲಿ ನಾವು ದಿನಾ ಹೇಳುವ ಪ್ರತಿಜ್ಞೆಯೊಂದಿದೆ- “ನನ್ನ ದೇಶ ಭಾರತ. ನಾನು ಭಾರತೀಯ. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಭಾರತೀಯರೆಲ್ಲರೂ ನನ್ನ ಸಹೋದರ ಸಹೋದರಿಯರು......” ಹೀಗೆ ಸಾಗುವ ಪ್ರತಿಜ್ಞೆಯಲ್ಲೂ ಗೌರವ, ಪ್ರೀತಿ ಮತ್ತು ಸಹಬಾಳ್ವೆಯನ್ನು ಒತ್ತಿ ಹೇಳಲಾಗಿದೆ. ಶಪಥವನ್ನು ಮಾಡುವ ರೂಢಿ ಇಂದು ನಿನ್ನೆ ಆರಂಭಗೊಂಡಿರುವುದಲ್ಲ. ದಶಕಗಳಾಚೆಗೂ ನಮ್ಮ ಹೆತ್ತವರೂ ಸೇರಿದಂತೆ ಎಲ್ಲರೂ ಪ್ರತಿಜ್ಞಾ ಮಾತುಗಳನ್ನು ಎದೆ ಮಟ್ಟಕ್ಕೆ ಕೈ ಚಾಚಿ ಆತ್ಮ ಸಾಕ್ಷಿಯಾಗಿ ಉಲಿಯುತ್ತಲೇ ಬಂದಿದ್ದಾರೆ. ಆದರೆ ಪ್ರತಿಜ್ಞೆ ಅಂತರಾಳದೊಳಗೆ ದಾಖಲಾಗಲಿಲ್ಲ. ಅದು ತುಟಿಗಳಿಗಷ್ಟೇ ಸೀಮಿತವಾಯಿತು. ಮಾಡುವ ಪ್ರತಿಜ್ಞೆಯು ಹೃದಯಾಂತರ್ಗತವಾದಾಗ ಭಾರತ ವಿಕಸಿಸುವುದರಲ್ಲಿ ಸಂದೇಹವಿಲ್ಲ.
ಭಾರತೀಯರನ್ನು ಸೋದರ ಸೋದರಿಯರೆಂದು ತಿಳಿಯುತ್ತೇನೆ ಎನ್ನುವ ನಾವು ನಮ್ಮ ಹೆತ್ತವರ ಉದರದ ಮೂಲಕವೇ ಜನಿಸಿ ಬಂದ ಸಹೋದರ ಸಹೋದರಿಯರನ್ನಾದರೂ ಪ್ರೀತಿಸುತ್ತೇವೆಯೇ? ಗೌರವಿಸುತ್ತೇವೆಯೇ? ಎಂಬ ಪ್ರಶ್ನೆಗಳಿಗೆ ಬಹ್ವಂಶ ನಕಾರವೇ ಉತ್ತರವಾಗಿರುತ್ತದೆ. ಆದುದರಿಂದಲೇ ಕೌಟುಂಬಿಕ ಸಾಮರಸ್ಯ, ಸಾಮಾಜಿಕ ಸಾಮರಸ್ಯ ನಮ್ಮಲ್ಲಿ ಬೆಳೆದಿಲ್ಲ. ಇಂದಿನ ಮಕ್ಕಳು ಮುಂದಿನ ಜನಾಂಗ. ನಾವು ಎಲ್ಲರನ್ನೂ ಪ್ರೀತಿಸುವ, ಸಹಿಸುವ ಮತ್ತು ಗೌರವಿಸುವ ಪ್ರಾಜ್ಞರಾಗಬೇಕೆಂಬ ಸರ್ವರ ಹಿರಿಯಾಸೆ ಕೈಗೂಡಿದರೆ ಭಾರತ ವಿಕಸಿಸಲಾರಂಭಿಸುತ್ತದೆ. ಶರಾಬು ಅಂಗಡಿಗಳನ್ನು ಮುಚ್ಚಿ ಬಡವರ ಹಣವು ಕುಟುಂಬದ ಬೆಳವಣಿಗೆಯಲ್ಲಿ ಬಳಕೆಯಾಗುವಂತೆ ನಿಯಮ ರೂಪಿಸುವ ಮನೋಗುಣ ಸರಕಾರಕ್ಕಿರಬೇಕು. ಆದರೆ ಸರಕಾರವು ತನ್ನ ಆದಾಯ ವರ್ಧನೆಗೆ ಶರಾಬನ್ನು ಆಧಾರವಾಗಿರಿಸಿ, ಬಡವರನ್ನು ಬಡವರನ್ನಾಗಿಯೇ ಉಳಿಸುವ, ಮತ್ತೂ ಬಡವರನ್ನಾಗಿಸುವ ಹುನ್ನಾರ ಮಾಡಿದರೆ ಹೇಗೆ? ಕುಡಿತ ರಹಿತ ದೇಶ ವಿಕಸಿಸುವುದರಲ್ಲಿ ಸಂಶಯವಿಲ್ಲ. ಸರಕಾರವೇ ರಾಜ್ಯಗಳನ್ನು ಕುಡುಕರ ತೋಟಗಳನ್ನಾಗಿ ಬದಲಿಸುವ, ಕುಡುಕರೇ ಆದಾಯದ ಮೂಲವಾಗುವಂತೆ ಶರಾಬನ್ನೇ ಜನರ ಹತ್ತಿರ ತರುವ ಉದ್ದೇಶ ಹೊಂದಿರುವುದು ದೇಶವನ್ನು ಮಬ್ಬಾಗಿಸುತ್ತದೆ.
       ಸಭೆಯಲ್ಲಿ ಭಾಗವಹಿಸುವವರನ್ನು ಸಭಾಸದ ಎನ್ನುತ್ತೇವೆ. ಸಭ್ಯ ಎಂಬ ಪದವೂ ಸಭೆ ಎಂಬ ಪದದಿಂದಲೇ ಜನಿಸಿದೆ. ಸಭಾಸದರು ಸಭ್ಯರಾಗಿದ್ದರೆ ಅದು ಸಭೆ. ಇಂದಿನ ಬಹುತೇಕ ಸಭೆಗಳು ಸಭ್ಯರ ಸಮಾವೇಶದಂತೆ ಕಾಣುವುದೇ? ಅಲ್ಲಿ ಸಭಾಸದರಿಂದ ಆಲಿಸುವ, ಗಮನಿಸುವ, ಶಿಸ್ತಿನಿಂದ ಕುಳಿತುಕೊಳ್ಳುವ ಗುಣ ಪ್ರತಿಫಲನವಾಗುವುದೇ? ಆಲಿಸಿದುದರ ಅನುಸರಣೆ ಆಗುತ್ತಿದೆಯೇ? ಉತ್ತಮ ವಿಚಾರಗಳ ಆಲಿಸುವಿಕೆ ಮತ್ತು ಅನುಪಾಲನೆಗಳಾದರೆ ದೇಶದ ಪ್ರವರ್ಧಮಾನಕ್ಕೆ ಅವಕಾಶಗಳು ತೆರೆದು ಕೊಳ್ಳುತ್ತವೆ. ದೇಶ ವಿಕಸಿಸುತ್ತದೆ.
        ನಮಗೆ ಪೂರೈಕೆದಾರರು ಬಹಳಷ್ಟು ಮಂದಿಯಿದ್ದಾರೆ. ಆದರೆ ಉತ್ಪಾದಕರು ಬಹಳ ಕಡಿಮೆಯೇ ಸರಿ. ಉತ್ತಾದನೆಯಾದುದನ್ನು ಜನರಿಗೆ ಪೂರೈಸುವವರು ಮಧ್ಯವರ್ತಿಗಳು. ಅವರಿಗೆ ಪರಿಶ್ರಮ ಬಹಳ ಕಡಿಮೆ. ಆದರೆ ಉತ್ಪಾದಕರಿಗೆ ಪರಿಶ್ರಮ ಅಧಿಕ, ಗಳಿಕೆ ತುಂಬಾ ಕಡಿಮೆ. ರೈತರು, ಕೃಷಿಕರು, ಮೀನುಗಾರರು, ಹೈನೋದ್ಯಮಿಗಳು, ಕರಕುಶಲಿಗಳು ಪರಿಸರ ಮತ್ತು ಭೂ ಆಧಾರಿತರು. ಅವರ ಪರಿಶ್ರಮ ಮತ್ತು ವ್ಯಯಗಳು ಉತ್ಪಾದಿತ ವಸ್ತುಗಳ ಮಾರಾಟದಿಂದ ತೃಪ್ತಿಕರವಾಗಿ ಸರಿದೂಗಲ್ಪಟ್ಟರೆ ಅವರ ಬದುಕು ನಿರಾಳ. ಆದರೆ ಮಧ್ಯವರ್ತಿಗಳಿಂದಾಗಿ ಉತ್ಪಾದಕರು ಬವಣೆಗಳಿಗೊಳಗಾಗುತ್ತಿದ್ದಾರೆ. ಕಮಿಷನ್ ಆಧಾರಿತ ಪೂರೈಕೆಯ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕು. ಭಾರತ ವಿಕಸಿಸಲು ಉತ್ಪಾದಕನೇ ಗರಿಷ್ಠ ಫಲವನ್ನು ಪಡೆಯುವಂತಾಗಬೇಕು. ಮಧ್ಯವರ್ತಿಗಳ ವಿಕೃತಿಯನ್ನು ಅಂತ್ಯಗೊಳಿಸಿ, ಕೃಷಿಕರ ಸಮಸ್ಯೆಗೆ ಪರಿಹಾರ ಮತ್ತು ನ್ಯಾಯ ಒದಗಿಸುವ ಸಾಧ್ಯತೆಗಳೇ ದೇಶವನ್ನು ಬೆಳಗಿಸುತ್ತದೆ.
       ಹಾಲಿನ ಆಯುಷ್ಯ ಕಡಿಮೆ. ಅದೇ ಹಾಲಿನೊಳಗೆ ದೀರ್ಘಾಯುಷಿಯಾದ ತುಪ್ಪವೂ ಇದೆ. ಹಾಲು ಪ್ರಕೃತಿ. ಇದಕ್ಕೆ ಸಂಸ್ಕಾರ ನೀಡಿದಾಗ ಅದು ವಿಕೃತವಾಗದೆ ಪ್ರಕೃತಿಯಾಗಿಯೇ ಉಳಿಯುವುದು. ತುಪ್ಪದ ರೂಪದಲ್ಲಿ ದೀರ್ಘಾಯುಷಿಯೂ ಆಗುವುದು. ಅದೇ ರೀತಿ ವಿಕೃತಿಗೊಳಗಾಗುವ ಪ್ರತಿಯೊಂದನ್ನೂ ಪ್ರಕೃತಿ ಸ್ವರೂಪದಲ್ಲಿಯೇ ಉಳಿಸಲು ಸಂಸ್ಕರಣೆಗೊಳಿಸುತ್ತಲೇ ಇರಬೇಕಾಗುತ್ತದೆ. ಕತ್ತಿಯು ನಿರಂತರ ಹರಿತವಾಗುಳಿಯಲು ಅದನ್ನು ಹರಿತಗೊಳಿಸುವ ಪ್ರಕ್ರಿಯೆ ನಿರಂತರವಾಗಿರಬೇಕು. ಅದೇ ರೀತಿ ಪ್ರತಿಯೊಬ್ಬ ಭಾರತೀಯನೂ ನಿರಂತರ ಜ್ಞಾನ, ಧ್ಯಾನಗಳ ಮೂಲಕ ಧರ್ಮಭೀರುವಾಗಿರುವಂತೆ ಕಾಪಿಡುವ ಹೊಣೆ ನಮ್ಮೆಲ್ಲರದು. ಭಾರತ ವಿಕಸಿಸಲು ಎಲ್ಲ ರಂಗಗಳಲ್ಲೂ ಧನಾತ್ಮಕ ಅಂಶಗಳೇ ಹೊಳೆಯಾಗಿ ಹರಿಯಬೇಕು ಎಂಬ ಸೂತ್ರದ ಅನುಪಾಲನೆ ಅಗತ್ಯ. 
      ವಿಕಸಿತ ಭಾರತದಲ್ಲಿ ಲಿಂಗ ಸಮಾನತೆ, ಪ್ರತಿಯೊಬ್ಬರಿಗೂ ಗುಣ ಮಟ್ಟದ ಶಿಕ್ಷಣ ಮತ್ತು ಆರೋಗ್ಯ, ಭ್ರಷ್ಟಾಚಾರರಹಿತ ಹಸನಾದ ಬದುಕು, ವಿಷ ಮುಕ್ತ, ಪ್ಲಾಸ್ಟಿಕ್ ಮುಕ್ತ, ರಾಸಾಯನಿಕ ಮುಕ್ತ ನೆಲ ಜಲ ಮತ್ತು ಜಂಗ್ ಲ್ ಲಭಿಸುವಂತಾಗಬೇಕು. ಭಾಷೆ, ಗಡಿ, ನದಿಜಲದ ಹೆಸರಿನಲ್ಲಿ ಜಗಳ, ಮತೀಯ ಜಾತೀಯ ಸಂಘರ್ಷಣೆ ಮುಕ್ತವಾಗಬೇಕು. ಸುಜಲಾಂ ಸುಫಲಾಂ ಮಲಯಜ ಶೀತಲಾಂ ಎಂಬ ಆಶಯ ಸಂಪನ್ನವಾಗಬೇಕು, ಭಾರತ ಮಾತೆ ಜಗದ್ವಂದ್ಯ ಳಾಗುವಂತೆ ನಾವು ನಮ್ಮ ಚಾರಿತ್ರ್ಯವನ್ನು ಪರಿಶುದ್ಧಗೊಳಿಸಬೇಕು. ನಿಸ್ವಾರ್ಥಿಗಳಾಗಿ ನಾವು ಬದುಕಿ, ಇತರರ ಬದುಕಿಗೆ ನೆರವೀಯುವ ಅರಳಿದ ಮನಸ್ಸು, ಅರಳಿದ ಮುಖ ಹೊಂದಿರಬೇಕು.
       ವಿಕಸಿತ ಭಾರತದ ಸಂಕಲ್ಪಕ್ಕೆ ನಮ್ಮ ದಾಪುಗಾಲಿನ ಧಾರಾಳ ಕೊಡುಗೆಗಳಿರಲಿ. ಭಾವೀ ಜನಾಂಗವು ಈ ದೇಶದಲ್ಲಿ ಮಂದಸ್ಮಿತರಾಗಿ ಸುಖ ಶಾಂತಿ ನೆಮ್ಮದಿಯಿಂದ ಬಾಳುವಂತಾಗಲಿ ಎಂದು ಹಾರೈಸುವೆ. ಭಾರತ್ ಮಾತಾ ಕೀ ಜೈ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article