-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 68

ನಿಷ್ಪಾಪಿ ಸಸ್ಯಗಳು : ಸಂಚಿಕೆ - 68

ನಿಷ್ಪಾಪಿ ಸಸ್ಯಗಳು : ಸಂಚಿಕೆ - 68
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

      
ಪ್ರೀತಿಯ ಮಕ್ಕಳೇ.... ಹೇಗಿದ್ದೀರಿ? ಚೆನ್ನಾಗಿರುವಿರಿ ತಾನೇ? 
      "ಪುಟ್ಟ ಗುಡಿಸಲಿನಲ್ಲಿ ಕೆಟ್ಟ ಕನಸುಗಳಿಲ್ಲ... ಮನಸು ಕನಸುಗಳಲ್ಲಿ ಜಾಜಿ ಮಲ್ಲಿಗೆ" ಎಂದು ಬರೆಯುತ್ತಾ ಕವಿ ಸತ್ಯಾನಂದ ಪಾತ್ರೋಟ ರವರು "ಜಾಜಿ ಮಲ್ಲಿಗೆ" ಎಂಬ ಕವನ ಸಂಕಲನ ಪ್ರಕಟಿಸಿ "ಜಾಜಿ ಮಲ್ಲಿಗೆ ಕವಿ" ಎಂದೇ ಖ್ಯಾತರಾದರು.
      "ಮೈಸೂರು ಮಲ್ಲಿಗೆ" ಯೂ ಕವಿ ಹೆಸರಿಗೆ ಅಂಟಿದ್ದು ನಿಮಗೆ ಗೊತ್ತೇ ಇದೆ. "ಕೈಯಲ್ಲಿ ಜಾಜಿ ಮಲ್ಲಿಗೆ ಹೂವು ಹಿಡಿದು ಕಾಯುವ ಮನಸ್ಸಿಗೆ ಆಯಾಸವಿಲ್ಲ.. ಅರಳುವ ನಗುವಿಗೆ ಕೊನೆಯಿಲ್ಲ.. ಇದು ಸುಂದರ ಪ್ರೇಮ ಸುಖದ ಮದಿರೆ" ಎಂದು ಜಾಜಿಯ ಘಮವನ್ನು ಲೇಖನಿಗಿಳಿಸಿದುದನ್ನು ಕಂಡಾಗ ಈ ಬಾರಿ "ಏನು ನಿನ್ನ ಲೀಲೆ?" ಎಂದು ಜಾಜಿ ಮಲ್ಲಿಗೆಯನ್ನೆ ಪ್ರಶ್ನಿಸುವ ಮನಸ್ಸಾಯಿತು. ಅದಕೇ ನಿಮಗೀ ಬಾರಿ ಮೃದುವಾದ ಹೂ ಬಿಡುವ ಜಾಜಿ ಗಿಡದ ಪರಿಚಯ.
     ಮೈಸೂರು ಮಲ್ಲಿಗೆ, ದುಂಡು ಮಲ್ಲಿಗೆ, ಮಂಗಳೂರು ಮಲ್ಲಿಗೆ, ಉಡುಪಿ ಮಲ್ಲಿಗೆ, ಭಟ್ಕಳ ಮಲ್ಲಿಗೆ, ಶಂಕರಪುರ ಮಲ್ಲಿಗೆ ಎಂದೆಲ್ಲ ಊರಿನ ಜೊತೆ ವೈವಿಧ್ಯಮಯ ಮಲ್ಲಿಗೆಗಳು ಅರಳುತ್ತಿರುವಾಗ ಉದಯ ಮಲ್ಲಿಗೆ, ಮರ ಮಲ್ಲಿಗೆ, ಕಾಕಡ ಮಲ್ಲಿಗೆ, ಕಸ್ತೂರಿ ಮಲ್ಲಿಗೆ, ಸಂಜೆ ಮಲ್ಲಿಗೆ, ಸೂಜಿ ಮಲ್ಲಿಗೆ, ಜಾಜಿ ಮಲ್ಲಿಗೆ... ಹೀಗೆ ತರಹೇವಾರಿ ಸುವಾಸನಾ ಭರಿತ ಹೂಗಳ ಸಾಲಲ್ಲಿ ಜಾಜಿ ಒಂದಿಷ್ಟು ಪ್ರತ್ಯೇಕತೆ ಪಡೆದಿದೆ. 
        ಜಾಜಿ ಬಳ್ಳಿಯಂತೆ ಬೆಳೆಯುವ ಸಸ್ಯವಾದರೂ ಪೊದೆಯಾಕಾರ ಪಡೆಯುತ್ತದೆ. ಕಡು ಹಸಿರಾದ ಎಲೆಗಳಿಂದ ತುಂಬಿಕೊಂಡು ತನ್ನ ಸುತ್ತಲೂ ಶಾಖೆಗಳನ್ನು ಹರಡುತ್ತಾ ದಟ್ಟವಾಗಿ ಹಬ್ಬುತ್ತದೆ. ಎಲೆಗಳು ಸಂಯುಕ್ತವಾದ ಏಳು ಅಥವಾ ಒಂಭತ್ತು ಪತ್ರಕಗಳಿಂದ ಕೂಡಿದ್ದು ತುದಿಯ ಎಲೆ ದೊಡ್ಡದಾಗಿರುತ್ತದೆ. ಶಾಖೆಗಳ ತುದಿಗಳಲ್ಲಿ ವಿಶಿಷ್ಠವಾದ ಹೂ ಗೊಂಚಲು ಇರುತ್ತದೆ. ಈ ಪುಷ್ಪ ಮಂಜರಿ ಆಕಾರ ಮತ್ತು ಗಾತ್ರದಲ್ಲಿ ಭಿನ್ನವಾಗಿದೆ. ಹಲವು ಶಾಖೆಗಳಾಗಿ ಹರಡಿದ ಹೂ ಗೊಂಚಲಲ್ಲಿ ಮೊಗ್ಗುಗಳು ಮೂಡುತ್ತಾ ಅರಳುತ್ತಾ ಹಲವಾರು ದಿನಗಳವರೆಗೆ ಮುಂದುವರಿಯುತ್ತವೆ. ಮೊಗ್ಗು ನೇರಳೆ ಹಾಗೂ ಗುಲಾಬಿ ವರ್ಣದ ಸಂಯೋಜನೆಯಲ್ಲಿದ್ದರೆ ಅರಳಿದಾಗ‌ ಐದು ಪುಷ್ಪದಳಗಳಿರುವ ಒಳಭಾಗ ಮಬ್ಬು ಬಿಳಿ. ಇಳಿ ಸಂಜೆಯಲ್ಲಿ ಬೀಸುವ ಗಾಳಿಯ ಜೊತೆಗೆ ನಿಧಾನವಾಗಿ ಬಿರಿಯುವ ಜಾಜಿಯ ಕಂಪು ಸೇರಿತೆಂದರೆ ಸ್ವರ್ಗವೇ ಧರೆಗಿಳಿದ ಭಾಸವಾಗದಿರದು! ತೀರಾ ತಂಪಾಗಿ, ತೆಳುವಾಗಿ ಘಮ ಪಸರಿಸುವ ಗುಣವೇ ಇದರ ಹೆಚ್ಚುಗಾರಿಕೆಯಾಗಿದೆ. ಈ ಹೂವಿಗೆ ಸುಗಂಧ ನೀಡುವ 'ಇಂಡೋಲ್' ಎಂಬ ರಾಸಾಯನಿಕವೇ ಕಾರಣವೆನ್ನುತ್ತಾರೆ.
     ಹಲವರಿಗೆ ಈ ಜಾಜಿಮಲ್ಲಿಗೆಯ ಸುವಾಸನೆ ಮನಸ್ಸನ್ನು ಶಾಂತಗೊಳಿಸಿ ಮೈಮರೆಸಿದರೆ ಇನ್ನು ಕೆಲವರಿಗೆ ತಲೆನೋವು, ತಲೆಸುತ್ತು ತರಿಸುತ್ತದೆ. ಯಾವುದೇ ವಸ್ತು ಅಥವಾ ವಿಚಾರಗಳನ್ನು ಎಲ್ಲರೂ ಇಷ್ಟ ಪಡಲು ಸಾಧ್ಯವೇ ಇಲ್ಲ ಅಲ್ಲವೇ? ಒಂದೆಡೆ ಬಂಗಾರವನ್ನು ಕದ್ದಾದರೂ ಪಡೆಯುವವರಿದ್ದರೆ ಅದೇ ಕಾಲದಲ್ಲಿ ಇದ್ದರೂ ಹಾಕದವರಿರುತ್ತಾರೆ. 
       ಆದರೆ ನಮ್ಮ ತುಳುನಾಡಿನ ಜನಪದದಲ್ಲಿ ಒಂದು ನಂಬಿಕೆಯಿದೆ. ಅದೇನೆಂದರೆ 'ಆಟಿ ತಿಂಗಳಲ್ಲಿ ಒಮ್ಮೆಯಾದರೂ ಜಾಜಿ ಮಲ್ಲಿಗೆ ಮುಡಿಯಬೇಕು' ಎಂದು. ಮಳೆಗಾಲ ಕಾಲಿಟ್ಟರೆ ಸರ್ವ ಋತುಗಳಲ್ಲಿ ರಾಜನಾಗಿ ಮೆರೆವ ಮಾರಾಟದ ಮಲ್ಲಿಗೆಗೆ ಒಂದಿಷ್ಟು ಕಡಿವಾಣ ಬೀಳುತ್ತದೆ. ಜಾಜಿ ಹೂ ಬಿಡುವುದೇ ಮುಂಗಾರು ಮಳೆಗೆ ಬೆನ್ನೊಡ್ಡುವ ಆಟಿ ತಿಂಗಳಲ್ಲಿ. ಮುಂಗಾರು ತಡವಾದರೆ ಜಾಜಿಯೂ ಸರಿಯಾಗಿ ಹೂ ನೀಡದು. ಆಗಸ್ಟ್ ಸೆಪ್ಟೆಂಬರ್ ತಿಂಗಳು ಜಾಜಿಯ ಘಮದ ಕಾಲ! ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರುಗಳಲ್ಲಿ ಐದು ಸಾವಿರ ಕುಟುಂಬಗಳು ಮಲ್ಲಿಗೆ ಬೆಳೆದರೆ ಒಂದೂವರೆ ಸಾವಿರ ಕುಟುಂಬಗಳು ಮಾತ್ರ ಜಾಜಿಯ ಕೈ ಹಿಡಿದಿವೆ. ಮಲ್ಲಿಗೆ ವಾರ್ಷಿಕ ಐದಾರು ಕೋಟಿ ರೂಪಾಯಿ ಗಳ ವ್ಯವಹಾರ ನಡೆಸಿದರೆ ಜಾಜಿ ಕೇವಲ ಐವತ್ತು ಲಕ್ಷದ ಆಸುಪಾಸಿನಲ್ಲೆ ಮೌನವಾಗುತ್ತದೆ. ಇದಕ್ಕೆ ಕಾರಣವೇನೆಂದರೆ ಜಾಜಿ ತುಂಬಾ ನಾಜೂಕಾದ, ಮೃದುವಾದ ಹೂ. ಹೆಚ್ಚು ಹೊತ್ತು ಬಾಳಿಕೆ ಬಾರದು. ಸಂಜೆಯೇ ಅರಳುವುದರಿಂದ ಮಳೆಯ ನರ್ತನವಾದರೆ ಕೊಯ್ಯಲು ಸಿಗದು. ಮೊಗ್ಗು ಕೊಯ್ದು ಕಟ್ಟಿದರೂ ಮರುದಿನ ಮಧ್ಯಾಹ್ನವಾಗುತ್ತಲೇ ಅರೆಜೀವವಾಗಿ ಅಂದಗೆಡುತ್ತದೆ. ಶೀತಲ ಪೆಟ್ಟಿಗೆಗೂ ಜಾಜಿ ತಲೆಬಾಗದು! ಈ ಕಾರಣಗಳಿಂದ ಜಾಜಿ ದೇಶ ವಿದೇಶ ಸುತ್ತುವ ಮಲ್ಲಿಗೆಯ ಎದುರು ಬರೀ ಅವಿಭಜಿತ ದಕ್ಷಿಣ ಕನ್ನಡದೊಳಗಷ್ಟೇ ಸುತ್ತುತ್ತದೆ. ಈ ವರ್ಷದ ಮಳೆಗಾಲದಲ್ಲಿ ಮಲ್ಲಿಗೆಗೆ ಅಟ್ಟೆಗೆ 470 ರುಪಾಯಿಗಳಿಂದ 2100 ರವರೆಗೆ ಏರಿದ್ದರೆ ಜಾಜಿಮಲ್ಲಿಗೆ 160 ರಿಂದ 730 ರ ನಡುವೆ ಈಜಾಡುತ್ತಿತ್ತು.
       ಮಕ್ಕಳೇ, ಆದರೂ ಜಾಜಿಗೊಂದು ಮಾರುಕಟ್ಟೆಯಿದೆ ಗೊತ್ತಾ? ಅದೇನೆಂದು ಬಲ್ಲಿರಾ? ಜಾಜಿ ಮಲ್ಲಿಗೆಯಲ್ಲಿ ಮಲ್ಲಿಗೆಗಿಂತ ನಾಲ್ಕುಪಟ್ಟು ಹೆಚ್ಚು ಸುಗಂಧ ವಿದೆ! ಇದು ಅಧಿಕ ಸುಗಂಧ ದ ಎಣ್ಣೆ ನೀಡುತ್ತದೆ. 0.24 ರಿಂದ 0.42 ರಷ್ಟು ಎಣ್ಣೆ ಹೊಂದಿರುವುದರಿಂದ ಸುಗಂಧ ದ್ರವ್ಯ, ಸೌಂದರ್ಯ ವರ್ಧಕಗಳ ತಯಾರಿಗೆ ಬಳಕೆಯಾಗುತ್ತದೆ. 17 ನೇ ಶತಮಾನದಲ್ಲಿ ಯುರೋಪ್ ಗೆ ಸುಗಂಧ ದ್ರವ್ಯದ ಮೂಲಕವೇ ಪರಿಚಯವಾದ ಜಾಜಿ ದಕ್ಷಿಣ ಏಷ್ಯಾಕ್ಕೆ ಸ್ಥಳೀಯವಾಗಿದೆ. ಮಾರಿಷಸ್, ಜಾವಾ, ಮಧ್ಯ ಅಮೇರಿಕಾಗಳಲ್ಲಿ ದೇಶೀಕರಿಸಲಾಗಿದೆ ಎಂಬ ವರದಿಯಿದೆ. ಉತ್ತರ ಹಿಮಾಲಯ, ಪಶ್ಚಿಮ ಬಂಗಾಳ, ಆಂದ್ರದ ವಿಶಾಖಪಟ್ಟಣಂ, ತಮಿಳುನಾಡಿನ ತಿರುನಲ್ಲೇರಿ ಗುಡ್ಡಪ್ರದೇಶ ಹಾಗೂ ಸಮತಟ್ಟು ಪ್ರದೇಶಗಳಲ್ಲಿ ಜಾಜಿ ಸಹಜವಾಗಿ ಬೆಳೆಯುವ ಸಸ್ಯವಾಗಿದೆ. ಭಾರತದ ವಿವಿಧ ಭಾಗ, ಯುರೋಪ್, ಮೆಡಿಟರೇನಿಯನ್ ಪ್ರದೇಶದ ವಿವಿಧ ದೇಶಗಳಲ್ಲಿ ಜಾಜಿಯ ವ್ಯಾಪಕ ಕೃಷಿ ನಡೆಯುತ್ತದೆ. ಭಾರತದಲ್ಲಿ ಉತ್ತರ ಪ್ರದೇಶ, ಇಟಲಿಯ ಸಿಸಿಲಿ ಹಾಗೂ ಕೆಲಬ್ರಿಯ ಫ್ರಾನ್ಸ್ ನ ಗ್ರಾಸ್ ಜಾಜಿ ಕೃಷಿಯಲ್ಲಿ ಖ್ಯಾತಿಗಳಿಸಿವೆ. ಈಜಿಪ್ಟ್, ಸಿರಿಯ, ಅಲ್ಜೀರಿಯಾ, ಮೊರಕ್ಕೋ ದೇಶಗಳಲ್ಲಿ ಜಾಜಿಯೂ ಒಂದು ಪ್ರಮುಖ ಬೆಳೆ.
    ಜಾಸ್ನಿನಮ್ ಗ್ರ್ಯಾಂಡಿಫ್ಲೋರಮ್ (Jasminum grandiflorum) ಎಂಬ ವೈಜ್ಞಾನಿಕ ಹೆಸರಿನ ಜಾಜಿ ಒಲೆಸಿಯೆ (Oleaceae) ಕುಟುಂಬಕ್ಕೆ ಸೇರಿದೆ. ಕನ್ನಡದಲ್ಲಿ ಜಾಜಿ ಮಲ್ಲಿಗೆ, ಅಜ್ಜೆಗೆ ಎಂದು, ಸಂಸ್ಕೃತ ದಲ್ಲಿ ಜಾತೀ, ಮಾಲತಿ, ಮಾಲಿನಿ, ಮನೋಹರ, ರಾಜಪುತ್ರಿ, ಸಂಧ್ಯಾಪುಷ್ಟಿ, ಸುಮನ ಎಂದೂ ಹೆಸರು ಪಡೆದಿದೆ. ಆಂಗ್ಲ ಭಾಷೆಯಲ್ಲಿ ಸ್ಪಾನಿಕ್ ಜಾಸ್ಮಿನ್. ನಿಷ್ಪಾಪಿ ಸಸ್ಯವಾದ ಈ ಜಾಜಿ ಮಲ್ಲಿಗೆ ಕೂಡ ಒಂದು ಮೂಲಿಕೆಯಾಗಿದೆ. ಎಲೆಗಳಿಗೆ ಪ್ರತಿಬಂಧಕ ಗುಣವಿದೆ. ಇದರ ಎಣ್ಣೆ ಹಾಗೂ ಅತ್ತರು ಚರ್ಮರೋಗ, ತಲೆನೋವು, ಕಣ್ಣು ನೋವಿಗೆ ಔಷಧಿಯಾಗಿದೆ. ಜಾತ್ಯಾದಿ ತೈಲ, ಜಾತ್ಯಾದಿ ಘೃತಗಳು ಮಾರುಕಟ್ಟೆಯಲ್ಲಿವೆ. ಹೊಟ್ಟೆ ಉಬ್ಬರ, ಒಸಡು ಹುಣ್ಣು, ಕಾಲಬೆರಳುಗಳ ನಡುವಿನ ನಂಜು, ಕಾಲಿನ ಆಣಿ, ಬೆಂಕಿ ತಾಗಿದ ಗಾಯ, ಮೈಕೈ ನೋವು, ಕಣ್ಣುರಿ, ಬಾಯಿ ನೋವು, ಪಾರ್ಶ್ವವಾಯು, ಮಧುಮೇಹ, ಚರ್ಮದ ಹುಣ್ಣು ಇತ್ಯಾದಿಗಳಿಗೆ ಪರಂಪರಾಗತ ಔಷಧಿಯಾಗಿದೆ. ಬೇರಿನ ಫೇಸ್ ಪ್ಯಾಕ್ ಚರ್ಮದ ಕಲೆ ನಿವಾರಕವಾದರೆ ತಲೆಯಲ್ಲಿ ನಾಣ್ಯದಾಕಾರದಲ್ಲಿ ಕೂದಲು ಉದುರುವಿಕೆಗೆ ಸಾಂಪ್ರದಾಯಿಕ ಔಷಧಿಯಾಗಿದೆ. ಜಂತು ನಿವಾರಕ, ಮೂತ್ರೊತ್ತೇಜಕವಾಗಿದೆ.
      ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಬಾಂಧವ್ಯದ ಬೆಸುಗೆ ಭದ್ರಗೊಳಿಸುತ್ತಲೇ ಮಾಧುರ್ಯ ತಂದೀಯುವ ವಸ್ತು ಈ ಜಾಜಿ ಎಂದರೆ ತಪ್ಪಾಗದು. ಅಂಕೋಲಾದ ಶ್ರೀ ಕುಂಡೋದರಿ ಮಹಾಮಾಯಾ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗೆ ಒಂದು ಲಕ್ಷ ಜಾಜಿ ಮಲ್ಲಿಗೆ ಅಲಂಕಾರ ನಡೆಸಿದರೆ ಕಾಪು ಶ್ರೀ ವೆಂಕಟರಮಣ ದೇವಳದಲ್ಲಿ ಕಾಪು ಪೇಟೆಯ ಹತ್ತು ಸಮಸ್ತರು ಜಾಜಿ ಮಲ್ಲಿಗೆಯ ಅಲಂಕಾರ ದೊಂದಿಗೆ ಶ್ರಾವಣ ಶನಿವಾರ ಹೂವಿನ ಪೂಜೆ ನೆರವೇರಿಸಿದರು. ತಾತ್ಪರ್ಯವೇನೆಂದರೆ ಅಲ್ಪಕಾಲದ ಹಬ್ಬ ಸೃಷ್ಟಿ ಸುವ ಹೂವಾದರೂ ಜನಮನ ಗೆದ್ದು ನಲಿಯುತ್ತಿದೆ ಎಂದಲ್ಲವೇ?
       ಸರಿ ಮಕ್ಕಳೇ, ನೀವೂ ಜಾಜಿಯ ಸಖ್ಯ ಬೆಳೆಸುವಿರಲ್ಲವೇ? ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************


Ads on article

Advertise in articles 1

advertising articles 2

Advertise under the article