-->
ಪಯಣ : ಸಂಚಿಕೆ - 09 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 09 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 09 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713

      ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದುಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ



                ಚಾರ್ಮಾಡಿ ಘಾಟ್
    ಈ ಘಟ್ಟದ ತಿರುವು ರೋಮಾಂಚಕ ಮತ್ತು ಅವಿಸ್ಮರಣೀಯವಾದುದು. ಡ್ರೈವ್ ಮಾಡುವ ಅನುಭವ ವಂತೂ ಅದನ್ನ ಅನುಭವಿಸಿ ನೋಡಬೇಕು. ಸುಮ್ಮನೆ ಕುಳಿತು ಮಾರ್ಗದ ಇಕ್ಕೆಲಗಳನ್ನು ಆಸ್ವಾದಿಸುತ್ತ ಹೋಗುವುದು ಇನ್ನೂ ಸೊಗಸು. ಘಾಟಿಯ ನಡು ಮಧ್ಯದಲ್ಲೆಲ್ಲೋ ಇಳಿದು ನಡೆದುಕೊಂಡು ಸಾಗುವುದೆಂದರೆ ಅನೂಹ್ಯ ಪತ್ತೆದಾರಿ ಕಾದಂಬರಿಯಂತೆ. ನಡುವೆ ಎಲ್ಲೋ ಕುಳಿತು ಬಿಸಿ ಟೀ ಕುಡಿಯುವುದೆಂದರೆ ಅವರ್ಣನೀಯ ಆನಂದ.

       ಚಾರ್ಮಾಡಿ ಘಾಟಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿ ಹೊಂದಿಕೊಂಡಿದ್ದು, ಪಶ್ಚಿಮಘಟ್ಟಗಳ ಸಾಲಿನಲ್ಲಿ ಬರುತ್ತದೆ. ಚಾರ್ಮಾಡಿ ಘಟ್ಟಗಳ ಕೆಳಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ಸೇರಿರುವ ಚಾರ್ಮಾಡಿ ಎಂಬ ಗ್ರಾಮವಿದೆ. ಅದರಿಂದಾಗಿ ಈ ಘಟ್ಟಗಳಿಗೆ ಈ ಹೆಸರು ಬಂತು. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಬೆಸೆಯುವ ಮುಖ್ಯ ರಸ್ತೆಯೊಂದು ಚಾರ್ಮಾಡಿ ಘಟ್ಟದಲ್ಲಿ ಹಾದು
ಹೋಗುತ್ತದೆ.

     ಚಾರ್ಮಾಡಿಯಲ್ಲಿ ಬರುವ ಪ್ರಮುಖ ಬೆಟ್ಟಗಳೆಂದರೆ ಅಮೇದಿಕಲ್ಲು ಬೆಟ್ಟ, ಬಾಳೆಕಲ್ಲು ಬೆಟ್ಟ, ಕೊಡೆಕಲ್ಲು ಬೆಟ್ಟ, ಜೇನುಕಲ್ಲು ಬೆಟ್ಟ, ಎತ್ತಿನಭುಜ ಬೆಟ್ಟ, ದೀಪದಕಲ್ಲು ಬೆಟ್ಟ, ಶಿಶಿಲ ಬೆಟ್ಟ ಮುಂತಾದವು. 
    ಇಲ್ಲಿರುವ ಜಲಪಾತಗಳೆಂದರೆ ಆಲೇಖಾನ್ ಜಲಪಾತ, ಜೇನುಕಲ್ಲು ಜಲಪಾತ, ಕಲ್ಲರ್ಬಿ ಜಲಪಾತ, ಹಕ್ಕಿಕಲ್ಲು ಜಲಪಾತ, ಬಂಡಾಜೆ ಜಲಪಾತ, ಅನಡ್ಕ ಜಲಪಾತ ಮುಂತಾದವು. ವನ್ಯಮೃಗಗಳು, ಹತ್ತಾರು ಝರಿ - ತೊರೆ, ಶೋಲ ಕಾಡು, ಅಪರೂಪವಾದ ಹುಲ್ಲುಗಾವಲುಗಳನ್ನು ಕಾಣಬಹುದು. ಇವುಗಳತ್ತ ಹೋಗದೆಯೂ, ಬರಿಯ ಚಾರ್ಮಾಡಿ ಘಾಟಿ ರಸ್ತೆಯ ಮುಖಾಂತರ ಸಾಗಿದರೂ ಪ್ರಕೃತಿ ಮಾತೆ ಸೊಬಗನ್ನು ಚೆಲ್ಲಾಡಿರುವುದನ್ನು ಕಾಣಬಹುದಿಲ್ಲಿ.

      ಕೊಟ್ಟಿಗೆಹಾರದಿಂದ ಸ್ವಲ್ಪ ದೂರದಲ್ಲಿ ಒಂದು ಸಣ್ಣ ಗುಡ್ಡದ ಮೇಲೆ ಮಲಯ ಮಾರುತ ಎಂಬ ಅತಿಥಿ ಗೃಹವನ್ನು ಅರಣ್ಯ ಇಲಾಖೆಯವರು ನಿರ್ಮಿಸಿದ್ದಾರೆ. ಇದನ್ನು ದಂತಚೋರ, ನರಹಂತಕ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ತಮ್ಮ ಪ್ರಾಣವನ್ನು ತೊರೆದ ಅರಣ್ಯ ಇಲಾಖೆ ಅಧಿಕಾರಿ ಶ್ರೀನಿವಾಸ ಅವರ ನೆನಪಿಗಾಗಿ ನಿರ್ಮಿಸಲಾಗಿದೆ. ಈ ಅತಿಥಿಗೃಹದಿಂದ ಚಾರ್ಮಾಡಿ ಘಟ್ಟದ ಸಂಪೂರ್ಣ ಚಿತ್ರಣ ನೋಡಬಹುದಾಗಿದೆ.

       ದಕ್ಷಿಣ ಕನ್ನಡ ಜಿಲ್ಲೆಯಿಂದ ಬರುವುದಾದರೆ ಧರ್ಮಸ್ಥಳದಿಂದ ಉಜಿರೆ, ಅಲ್ಲಿಂದ ಚಾರ್ಮಾಡಿ ಘಾಟ್ ಪ್ರವೇಶಿಸಬಹುದು. ಇಳಿಯುವವರಾದರೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಟ್ಟಿಗೆಹಾರ ಮೂಲಕ ಸಾಗಬೇಕು. ಮಧ್ಯೆ ಇಳಿದು ಚಾರಣ ಮಾಡುವವರಾದರೆ ಸ್ಥಳೀಯರ ಮಾರ್ಗದರ್ಶನ ಹಾಗೂ ಅರಣ್ಯ ಇಲಾಖೆ ಪರವಾನಿಗೆ ಅಗತ್ಯ. ಮಧ್ಯದಲ್ಲೆಲ್ಲೂ ಊಟ - ವಸತಿ ಸೌಲಭ್ಯ ಸಿಗಲಾರದು. ಘಾಟಿ ಕಡಿದಾಗಿರುವುದರಿಂದ, ಎಚ್ಚರಿಕೆಯ ಚಾಲನೆ ಅನಿವಾರ್ಯ. ಬೆಂಗಳೂರಿನಿಂದ 325 ಕಿ.ಮೀ., ಹಾಸನದಿಂದ 190 ಕಿ.ಮೀ. ಚಿಕ್ಕಮಗಳೂರಿನಿಂದ 250 ಕಿ.ಮೀ. ದೂರ ಹಾಗೂ ಧರ್ಮಸ್ಥಳದಿಂದ ಕೇವಲ 17 ಕಿಲೋ ಮೀಟರ್ ದೂರವಿದೆ.

        "ಈ ಭೂಮಿಯು ಒಂದು ಆಲಯವಿದ್ದಂತೆ. ನಾವು ಅಲೆಯುತ್ತಾ, ಅಲೆಯುತ್ತಾ ತಿರುಗಾಟ ಮಾಡಿದರೆ ನೈಜ ಸೌಂದರ್ಯದ ಪ್ರಕೃತಿಯ ದರ್ಶನವು ನಮ್ಮನ್ನ ಆವರಿಸಿಕೊಂಡು ಬಿಡುತ್ತದೆ" - ಅಂತಹ ಸೌಂದರ್ಯಗಳ ಬೀಡು, ರಮಣೀಯ, ಮನಸ್ಸಿಗೆ ಮುದ ನೀಡುವ ಈ ಚಾರ್ಮಾಡಿ ಘಾಟ್ ನಿಜಕ್ಕೂ ಅದ್ಭುತ...! ಬನ್ನಿ ಪ್ರವಾಸ ಹೋಗೋಣ....
     ಮುಂದಿನ 'ಪಯಣ' ಸಂಚಿಕೆಯಲ್ಲಿ ಮತ್ತೆ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
********************************************




Ads on article

Advertise in articles 1

advertising articles 2

Advertise under the article