-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 46

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 46

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 46
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


                     
     ಪ್ರೀತಿಯ ಮಕ್ಕಳೇ... ಕಳೆದ ವಾರ ಸಸ್ಯಗಳಲ್ಲಿ ಬೆಳವಣಿಗೆ ನಿರಂತರವಾದುದು ಎಂಬುದರ ಬಗ್ಗೆ ತಿಳಿದೆವು. ಪ್ರಾಣಿಗಳಲ್ಲಿ ಹೀಗೆ ಅಲ್ಲ. ಕೆಲವೊಂದು ಅಂಗಾಂಶಗಳು ಭ್ರೂಣಾವಸ್ಥೆಯಲ್ಲಿ ರೂಪುಗೊಂಡು ನಂತರ ನಿಧಾನವಾಗಿ ಸವೆಯುತ್ತಾ ಹೋಗುತ್ತವೆ. ಅವು ಹೊಸದಾಗಿ ರೂಪುಗೊಳ್ಳುವುದೇ ಇಲ್ಲ. ಆದ್ದರಿಂದಲೇ ವೃದ್ಧಾಪ್ಯದಲ್ಲಿ ದೇಹ ಕೃಶವಾಗುತ್ತಾ ಸಾಗುತ್ತದೆ. ಆದರೆ ಸಿಕೋಯಾ ಮರಗಳನ್ನು ಕೇಳಿದ್ದೀರಿ ತಾನೆ. ಅವುಗಳ ವಯಸ್ಸು ಕೇವಲ 3000 ವರ್ಷಗಳು. ಆದರೆ ಅವು ಈಗಲೂ ಬೆಳೆಯುತ್ತಿವೆ ಬೆಳೆಯುತ್ತಲೇ ಇರುತ್ತವೆ.

ಮನೆಯ ಸಮೀಪ ಇರುವ ತೆಂಗಿನ ಮರ ಮನೆಯ ಕಡೆಗೆ ಬಾಗುವುದನ್ನು ನೀವು ನೋಡಿಯೇ ಇದ್ದೀರಿ. ತೆಂಗಿನ ಮರ ಬಾಗುವ ಬಗ್ಗೆ ಬಾಳೆಯ ಮರ ನೆಟ್ಟಗಿರುವ ಬಗ್ಗೆ ಒಂದು ಕಥೆಯೇ ಇದೆ. ಪಕ್ಕದಲ್ಲಿ ಒಂದು ದೊಡ್ಡದಾದ ಮರ ಇದ್ದರೆ ತೆಂಗಿನ ಮರ ಮರದಿಂದ ದೂರ ಬಾಗುವುದು ಸಾಮಾನ್ಯ. ಮಾವಿನ ತೋಟದಲ್ಲಿ ತನ್ನ ಟೊಂಗೆಗಳನ್ನು ಗೋಳಾಕಾರದಲ್ಲಿ ಜೋಡಿಸಿಕೊಳ್ಳುವ ಮಾವಿನ ಮರವನ್ನು ಮನೆಯ ಹಿತ್ತಲಿನಲ್ಲಿ ನೆಟ್ಟರೆ ಸೊಟ್ಟ ಪಟ್ಟ ಕೊಂಬೆಗಳನ್ನು ಅಡ್ಡಾದಿಡ್ಡಿಯಾಗಿ ಬೆಳೆಸಿಕೊಳ್ಳುತ್ತದೆ. ಎಂದಾದರೂ ತೋಟಕ್ಕೆ ಹೋಗಿ ಇಂತಹ ವಿಚಿತ್ರಗಳನ್ನು ಗಮನಿಸಿದ್ದೀರಾ? ಇದರ ಹಿಂದಿರುವ ಕಾರಣಗಳ ಬಗ್ಗೆ ನಿಮ್ಮ ಶಿಕ್ಷಕರ ಬಳಿ ಏನಾದರೂ ಕೇಳಿದ್ದೀರಾ? ಸಸ್ಯಗಳಲ್ಲಿ ಇಂತಹ ಬೆಳವಣಿಗೆಗಳನ್ನು ಚಲನೆ ಎನ್ನುತ್ತೇವೆ. ಇಂತಹ ಚಲನೆಗಳು ಕೆಲವೊಮ್ಮೆ ಶಾಶ್ವತವಾದವುಗಳು. ಮನುಷ್ಯನ ಕಾಲೋ ಕೈಯೋ ಚಲಿಸಿದ ಹಾಗೆ ಚಲಿಸಿ ಹಿಂದಕ್ಕೆ ತೆಗೆದುಕೊಂಡಂತಲ್ಲ. ಬಾಗಿದ ಮರದ ಕೊಂಬೆ ಹಾಗೆಯೇ ಇರುತ್ತದಲ್ಲವೇ?

ಈ ಚಲನೆಗಳು ಯಾವುದೋ ಒಂದು ಪ್ರಚೋದನೆಗೆ ಅನುಗುಣವಾಗಿರುತ್ತವೆ. ಪ್ರಚೋದನೆಗೆ ಅನುಗುಣವಾದ ಸಸ್ಯಗಳ ಬೆಳವಣಿಗೆ ಎಂದರೆ ಚಲನೆಯನ್ನು ಅನುವರ್ತನಾ ಚಲನೆ (tropic movements/tropism) ಎನ್ನುತ್ತೇವೆ. ಇಲ್ಲಿ ಪ್ರಚೋದನೆಯನ್ನು ಅವಲಂಬಿಸಿ ಚಲನೆಯನ್ನು ಹೆಸರಿಸಲಾಗುತ್ತದೆ. ಚಲನೆ ಪ್ರಚೋದನೆಯ ಕಡೆಗಿದ್ದರೆ ಅದನ್ನು ಧನ (positively) ಎಂದೂ ಪ್ರಚೋದನೆಯ ವಿರುದ್ಧ ದಿಕ್ಕಿಗಿದ್ದರೆ ಋಣ (negatively) ಎಂದು ಗುರುತಿಸಲಾಗುತ್ತದೆ. 

ಈ ಪ್ರಚೋದನೆ ಬೆಳಕು ಆಗಿದೆ ಎಂದಿಟ್ಟುಕೊಳ್ಳಿ. ಚಲನೆ ಬೆಳಕಿನ ಕಡೆಗಿದ್ದರೆ ಧನ ಪ್ರಕಾಶಾನುವರ್ತನಾ ಚಲನೆ (positively photo tropic) ಬೆಳಕಿನ ವಿರುದ್ಧ ದಿಕ್ಕಿಗಿದ್ದರೆ ಅದು ಋಣ ಪ್ರಕಾಶಾನುವರ್ತನಾ ಚಲನೆ (negatively photo tropic). ಸಸ್ಯಗಳ ಕಾಂಡ ಬೆಳಕಿನ ಕಡೆಗೆ ಬೆಳೆದರೆ ಬೇರು ಬೆಳಕಿನ ವಿರುದ್ಧವಾಗಿ ಬೆಳೆಯುತ್ತದೆ. ಇದೇ ರೀತಿ ಗುರತ್ವಾನುವರ್ತನೆ (geo tropism), ಜಲಾನುವರ್ತನೆ (hydro tropism), ರಾಸಾಯನಿಕಾನುವರ್ತನೆಗಳನ್ನು (chemotropism) ವಿವರಿಸಬಹುದು. ಬೇರು ಗುರುತ್ವ, ನೀರು ಮತ್ತು ರಾಸಾಯನಿಕಗಳ (ಗೊಬ್ಬರ) ಕಡೆಗೆ ಬೆಳೆದರೆ ಕಾಂಡ ಇದಕ್ಕೆ ವಿರುದ್ದ ನೇರದಲ್ಲಿ ಬೆಳೆಯುತ್ತದೆ. ನೋಡಿ ಬೇರುಗಳ ಧನ ಗುರುತ್ವಾನುವರ್ತನೆಯ ಕಾರಣದಿಂದಾಗಿ ಸಸ್ಯಗಳು ನೆಲಕ್ಕೆ ಭದ್ರವಾಗಿ ಅಂಟಿಕೊಳ್ಳುವುದು ಸಾಧ್ಯವಾಗುತ್ತದೆ ಅಲ್ಲವೇ? .

ಆದರೆ ಬೇರುಗಳು ನೇರವಾಗಿ ಭೂ ಕೇಂದ್ರದ ಕಡೆಗೆ ಹೋಗಬೇಕು. ಆದರೆ ನೀರಿನ ಮೂಲದ ಕಡೆಗೆ ಗೊಬ್ಬರದ ಗುಂಡಿಯ ಕಡೆಗೆ ಬೇರಗಳು ಬರುವುದನ್ನು ನೀವು ನೋಡಿರಬಹುದು. ಇದು ನಮ್ಮ ಮಾಸ್ಟ್ರು ಹೇಳಿದ್ದಕ್ಕೆ ವಿರುದ್ಧವಾಗಿದೆಯಲ್ಲ ಎಂಬ ಪ್ರಶ್ನೆಯನ್ನು ಯಾವಾಗಲಾದರೂ ಕೇಳಿ ಕೊಂಡಿದ್ದೀರಾ? ನಿಜ ಪ್ರತಿ ಪ್ರಚೋದನೆಗಳು ಒಂದೇ ತೆರನಲ್ಲ. ಗುರುತ್ವದ ಕಡೆಗಿರುವ ಆಕರ್ಷಣೆಗಿಂತ ನೀರು ಮತ್ತು ಗೊಬ್ಬರದ ಕಡೆಗೆ ಬೇರಿಗಿರುವ ಆಕರ್ಷಣೆ ಜಾಸ್ತಿ. ಆದ್ದರಿಂದ ಬೇರುಗಳು ಅಡ್ಡಕ್ಕೆ ಬೆಳೆಯುವುದು ಸಾಧ್ಯವಾಗಿರುವುದರಿಂದ ಬೇರು ಮಣ್ಣಿನ ಸವಕಳಿಯನ್ನು ತಡೆಯುವುದು ಸಾಧ್ಯವಾಗಿದೆ. ಕಾಂಡಗಳು ಋಣ ಗುರುತ್ವಾನುವರ್ತನೆ ಮಾತ್ರ ತೋರಿಸಿದ್ದರೆ ಅದು ಆಕಾಶಗಾಮಿಯಾಗಿ ಬಿಡುತ್ತಿತ್ತು. ಆದರೆ ಧನ ಪ್ರಕಾಶಾನುವರ್ತನೆಯ ಕಾರಣದಿಂದ ನಮಗೆ ಮರ ಕೋತಿಯಾಡಲು ಅಡ್ಡ ಕೊಂಬೆಗಳು ಲಭ್ಯವಾಗುತ್ತವೆ. ಪ್ರಕೃತಿಯ ವಿಸ್ಮಯವನ್ನು ಮತ್ತೊಮ್ಮೆ ಅನುಭವಿಸುವ ಅವಕಾಶವಿದು.

ಪ್ರಾಣಿಗಳಲ್ಲಿ ಚಲನೆಯನ್ನು ನಿರ್ದೇಶಿಸಲು ಮೆದುಳು ಇದೆ. ನರ ವ್ಯವಸ್ಥೆ ಇದೆ. ಆದರೆ ಸಸ್ಯಗಳಿಗೆ ಈ ಸಾಮರ್ಥ್ಯ ಬಂದದ್ದಾದರೂ ಎಲ್ಲಿಂದ. ಟೀಚರ್ ಹೇಳಿದ ಹಾಗೆ ಲವ್ ಗ್ರಾಸ್ ತಾನು ಬದುಕುವ ಪರಿಸರಕ್ಕೆ ಅನುಗುಣವಾಗಿ ತನ್ನ ಎತ್ತರವನ್ನು ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದಾದರೂ ಹೇಗೆ ಎಂದು ಮುಂದಿನ ವಾರ ನೋಡೋಣ.