ಶಿಕ್ಷಕರ ದಿನಾಚರಣೆಯ ವಿಶೇಷ - 2024 : ನಾನು ಮೆಚ್ಚಿದ ಶಿಕ್ಷಕರು - ಹಿರಿಯರ ಬರಹಗಳು : ಸಂಚಿಕೆ - 03
Tuesday, September 17, 2024
Edit
ಶಿಕ್ಷಕರ ದಿನಾಚರಣೆಯ ವಿಶೇಷ - 2024
ನಾನು ಮೆಚ್ಚಿದ ಶಿಕ್ಷಕರು
ಹಿರಿಯರ ಬರಹಗಳು : ಸಂಚಿಕೆ - 03
ಶಿಕ್ಷಕರ ದಿನಾಚರಣೆ - 2024 ವಿಶೇಷತೆಯಾಗಿ 'ನಾನು ಮೆಚ್ಚಿದ ಶಿಕ್ಷಕರು' ವಿಷಯದಲ್ಲಿ ತಮ್ಮ ತಮ್ಮ ನೆಚ್ಚಿನ ಶಿಕ್ಷಕರ ಕುರಿತಾಗಿ.... ಕೇವಲ ಒಂದೇ ದಿನದ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯ ಜಗಲಿಯ ಹಿರಿಯರು ಬರಹಗಳನ್ನು ಕಳುಹಿಸಿಕೊಟ್ಟಿದ್ದೀರಿ... ನಿಮಗೆಲ್ಲ ಪ್ರೀತಿಪೂರ್ವಕ ಧನ್ಯವಾದಗಳು...
ಎಲ್ಲಾ ಬರಹಗಳನ್ನು ಮಕ್ಕಳ ಜಗಲಿಯಲ್ಲಿ - ಸಂಚಿಕೆಗಳ ರೂಪದಲ್ಲಿ ಪ್ರಕಟಿಸುತ್ತೇವೆ... ತೃತೀಯ ಸಂಚಿಕೆಯ ಬರಹಗಳು ಇಲ್ಲಿವೆ.... ತಾರಾನಾಥ್ ಕೈರಂಗಳ
ನಾನು ಪ್ರೈಮರಿ ಶಾಲೆ ಓದಿದ್ದು ಶೃಂಗೇರಿ ಸಮೀಪದ ಹಳ್ಳಿಯೊಂದರಲ್ಲಿ. ನನ್ನ ಪ್ರೈಮರಿ ಶಾಲೆಯಲ್ಲಿ ನನಗೆ ಕನ್ನಡ ಅಕ್ಷರಗಳನ್ನು ಕಲಿಸಿದ ನಂತರ ಕಾಗುಣಿತವನ್ನು ಹೇಳಿಕೊಂಡು, ‘ಕ’ ತಲಗಟ್ಟು ‘ಕ’, ‘ಕ’ಕ್ಕೆ ಇಳಿ ‘ಕಾ’ ಹೀಗೆ ಅಕ್ಷರ ಬರೆಯುವುದನ್ನು ಹೇಳಿಕೊಟ್ಟಿದ್ದರು. ಹೈಸ್ಕೂಲ್ ನಲ್ಲಿ ಕನ್ನಡ ನನ್ನ ಇಷ್ಟವಾಗಲು ಕಾರಣ ನಮ್ಮ ಕನ್ನಡ ಶಿಕ್ಷಕಿ ನಾಗರತ್ನ ಈಶ್ವರ ಹೆಗಡೆಯವರು. ಅವರು ಮಾಡಿದ ಮುದ್ದಣನ ರಾಮಾಶ್ವಮೇಧ ಆರಂಭದ ಮುದ್ದಣ - ಮನೋರಮೆಯರ ಸಲ್ಲಾಪದ ಭಾಗ, ವಡ್ಡಾರಾಧನೆಯ ಮೊದಲ ಕತೆ - ಸುಕುಮಾರಸ್ವಾಮಿಯ ಕತೆಯಿಂದ ಆಯ್ದ ಭಾಗ - ಸತ್ಯವಾದಿ ಸುದಾಮೆಯ ಕತೆ ಮುಂತಾದ ಪಾಠಗಳು ಅವರ ಆಕರ್ಷಕ ಪಾಠದ ಶೈಲಿಯಿಂದಾಗಿ ಇನ್ನೂ ನೆನಪಿವೆ. ಇವತ್ತು ನನ್ನ ಮಕ್ಕಳಿಗೆ ನಾನು ಆಸಕ್ತಿ ಮತ್ತು ಪ್ರೀತಿಗಳಿಂದ ಆಧುನಿಕಪೂರ್ವ ಕನ್ನಡ ಸಾಹಿತ್ಯ ಪಾಠ ಮಾಡಲು ಔಪಚಾರಿಕ ಶಿಕ್ಷಣದ ಮೂಲಕ ಪ್ರೇರಣೆ ನೀಡಿದವರು ಅವರೇ.
ಪಿಯುಸಿ ವಿದ್ಯಾಭ್ಯಾಸದ ಸಮಯದಲ್ಲಿ ಕನ್ನಡ ಪಾಠ ಮಾಡಿದ ವಿಜಯಲಕ್ಷ್ಮಿ ಮಾರ್ಲ ಅವರು ಬರವಣಿಗೆಯನ್ನು ಗಂಭೀರವಾಗಿ ಪರಿಗಣಿಸುವುದರ ಬಗ್ಗೆ ಹೇಳಿದ ಮಾತುಗಳು ನನ್ನ ಬರವಣಿಗೆಯನ್ನು ರೂಪಿಸುವಲ್ಲಿ ನೆರವಾಗಿವೆ. ಹಿರಿಯಡ್ಕದ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣುಭಟ್ಟರು ನಮಗೆ ಮೂರು ವರ್ಷಕ್ಕೆ ಮೂರು ಪದ್ಯಗಳನ್ನು (ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ) ಪಾಠ ಮಾಡಿದ್ದರು. ನನ್ನ ಪುಸ್ತಕ ಓದುವ ಕನ್ನಡ ಸಾಹಿತ್ಯಾಸಕ್ತಿಗೆ ಪ್ರೋತ್ಸಾಹದ ನೀರೆರೆದವರು ಅವರು.
ಕನ್ನಡ ಎಂ.ಎ. ಪದವಿಯಲ್ಲಿ ವಿಭಾಗ ಮುಖ್ಯಸ್ಥರಾದ ಡಾ. ಹೆಚ್. ಜಯಪ್ರಕಾಶ್ ಶೆಟ್ಟಿ ಅವರು ಹಳಗನ್ನಡ ಪಾಠ ಮಾಡುವ ಹೊತ್ತಿಗೆ ಆಗಾಗ ಅಲ್ಲಿನ ಪದಗಳ ಅರ್ಥ ಕೇಳುತ್ತಿದ್ದರು. ಆದ್ದರಿಂದ ಅವರ ತರಗತಿಯಲ್ಲಿ ನಾವೂ ಬಹಳ ಎಚ್ಚರಿಕೆಯಿಂದ ಮೈಯೆಲ್ಲಾ ಕಿವಿಯಾಗಿ, ಮೆದುಳನ್ನು ಆದಷ್ಟೂ ಹರಿತಗೊಳಿಸಿ ಕುಳಿತಿರುತ್ತಿದ್ದೆವು. ಇನ್ನೋರ್ವ ಬೋಧಕರಾದ ಡಾ. ಹೆಚ್.ಕೆ. ವೆಂಕಟೇಶ್ ಅವರು ಉಪನ್ಯಾಸಕರಾಗಲು KSET ಅಥವಾ NET ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಎಂದು ತಿಳಿಸಿ, ಉತ್ತೀರ್ಣರಾಗಲು ಮಾರ್ಗದರ್ಶನ ನೀಡಿದವರು. ಅವರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿದ ನಾನು, ಮೊದಲ ಪ್ರಯತ್ನದಲ್ಲೇ ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಜೂನಿಯರ್ ರೀಸರ್ಚ್ ಫೆಲೋಷಿಪ್ ಗಳಿಗೆ ಒಟ್ಟಿಗೇ ಅರ್ಹತೆ ಪಡೆದೆ. ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಇಲ್ಲಿಯ ಸಾವಿರಾರು ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳು ಬರೆಯುವ ಈ ರಾಷ್ಟ್ರಮಟ್ಟದ NET ಪರೀಕ್ಷೆಯಲ್ಲಿ ಆ ಬಾರಿ ಜನರಲ್ ಮೆರಿಟ್ ನಲ್ಲಿ JRF ಗೆ ಆಯ್ಕೆಯಾದ ಕೇವಲ 14 ಮಂದಿಯಲ್ಲಿ ನಾನೊಬ್ಬಳು. ಇವರೊಂದಿಗೆ ಬಾಲ್ಯದಿಂದ ಹೆತ್ತವರು, ಮತ್ತು ನನ್ನ ಅಕ್ಕ ನನ್ನಲ್ಲಿ ಪುಸ್ತಕವನ್ನೋದುವ ಅಭ್ಯಾಸ ಬೆಳೆಸಿದ್ದಾರೆ. ನಾನು ಓದಿದ ಪುಸ್ತಕಗಳು ಲೋಕಜ್ಞಾನವನ್ನು, ಅರಿವನ್ನು ನೀಡುವ ಗುರುವಿನ ಸ್ಥಾನವನ್ನು ಪಡೆದಿವೆ. ಹೀಗೆ ನನ್ನಲ್ಲಿ ಅರಿವನ್ನು ಬೆಳೆಸಿದ ಮತ್ತು ಬೆಳೆದ ಅರಿವನ್ನು ಆಗಾಗ ಹೊಳೆಯಿಸುತ್ತಿರುವ ಎಲ್ಲ ಗುರುಗಳಿಗೂ ಹೃತ್ಪೂರ್ವಕ ನಮನಗಳು.
ಕನ್ನಡ ಸಹಾಯಕ ಪ್ರಾಧ್ಯಾಪಕಿ,
ವಿವೇಕಾನಂದ ಪದವಿ ಕಾಲೇಜು, ಪುತ್ತೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 87621 62678
****************************************
ನಮ್ಮ ಜೀವನದಲ್ಲಿ ಶಿಕ್ಷಣ ಮತ್ತು ಶಿಕ್ಷಣದ ಪಾತ್ರದ ಮಹತ್ವ ನಮಗೆಲ್ಲಾ ಅರಿತಿರುವ ಸಂಗತಿ. ಶಿಕ್ಷಕ ಮತ್ತು ಶಿಕ್ಷಣ ನಮ್ಮ ಜೀವನ ಶೈಲಿಯನ್ನು ಬದಲಾಯಿಸುವ ಮಹಾನ್ ಶಕ್ತಿಗಳು. ನಮ್ಮ ಯಶಸ್ವಿ ಜೀವನಕ್ಕೆ ಶಿಕ್ಷಕರ ಕೊಡುಗೆ ಅಪಾರ. ನಮ್ಮ ರಾಷ್ಟದ ನಿರ್ಮಾಣ ತಮ್ಮ ವಿದ್ಯಾರ್ಥಿಗಳ ಮೇಲೆ ಇದೆ ಎಂದು ಬಲ್ಲವರು ನಮ್ಮ ಶಿಕ್ಷಕರು. ಅಜ್ಞಾನದಿಂದ ಜ್ಞಾನದ ಬೆಳಕಿನೆಡೆಗೆ ಕರೆ ತಂದ ಎಲ್ಲಾ ಶಿಕ್ಷಕರನ್ನು ನೆನಪಿಸುತ್ತಾ... ನನ್ನ ಬಾಲ್ಯದಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ಯಶಸ್ಸು ಸಿದ್ದಿಸಲು ಕಾರಣೀಭೂತ ಶಿಕ್ಷಕರು ಮರೆಯಾಗದೆ ನೆನಪಿನಂಗಳದಲ್ಲಿ ಇದ್ದಾರೆ. ಇಂದು ನಾನು ಒಂದು ಸಂಸ್ಥೆಯಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸಲು ನನ್ನ ಶಿಕ್ಷಕರ ಪಾತ್ರ ಮಹತ್ವವಾಗಿದೆ.
ನನ್ನ ಪ್ರಾಥಮಿಕ ಶಾಲಾ ಜೀವನದಲ್ಲಿ ನನ್ನ ಮೇಲೆ ಪ್ರಭಾವ ಬೀರಿದ ಶಿಕ್ಷಕಿ ಶ್ರೀಮತಿ ಜ್ಯೋತಿ ಮೇಡಂ. ಇವರನ್ನು, ಇವರ ಪಾಠಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲಾ. ಜ್ಯೋತಿ ಮೇಡಂ ತಮ್ಮ ಹೆಸರಿಗೆ ತಕ್ಕಂತೆ ದೀಪದಂತೆ ಇದ್ದರು. ಇವರ ಪಾಠಗಳು ನನ್ನ ಮೇಲೆ ಘನ ಮತ್ತು ಶಾಶ್ವತ ಪ್ರಭಾವ ಬೀರಿದೆ ಎಂದರೆ ಅತಿಶಯೋಕ್ತಿ ಆಗಲಾರದು..
ಜ್ಯೋತಿ ಮೇಡಂ ಶಿಸ್ತು ಮತ್ತು ಜವಾಬ್ದಾರಿಯುತ ಗುಣವನ್ನು ಹೊಂದಿದ್ದರು. ತುಂಬಾ ಸರಳ ವಿಧಾನದ ಮೂಲಕ ಕಠಿಣ ವಿಷಯಗಳನ್ನು ಧಾರೆ ಎರೆಯುತ್ತಿದ್ದರು. ಯಾವತ್ತು ಸಿಟ್ಟಾಗಿದ್ದದನ್ನು ನಾನು ನೋಡಿಲ್ಲ. ಆದರೆ ಅವರನ್ನು ಕಂಡರೆ ನನಗೆ ಭಯ ಮಿಶ್ರಿತ ಪ್ರೀತಿ. ಬಾಲ್ಯದಲ್ಲಿ ಉತ್ತಮ ಹವ್ಯಾಸಗಳನ್ನು ಬೆಳೆಸಲು ಸ್ಪೂರ್ತಿ ಜ್ಯೋತಿ ಮೇಡಂ. ನನ್ನ ಆರನೇ ತರಗತಿಯಲ್ಲಿ ಅಂಚೆಚೀಟಿಯನ್ನು ಸಂಗ್ರಹ ಮಾಡುವ ಒಂದು ಸ್ಪರ್ಧೆಯನ್ನು ಏರ್ಪಡಿಸಿದ್ದರು. ಇಂದಿಗೂ ಅಂಚೆಚೀಟಿಯನ್ನು ನೋಡುವಾಗ ಅವರ ನೆನಪು ಬಂದೇ ಬರುತ್ತದೆ. ಬಾಲ್ಯದಲ್ಲಿ ಎಲ್ಲರೂ ಪೆಟ್ಟಿನ ರುಚಿಯನ್ನು ಕಂಡವರು, ಆದರೆ ಜ್ಯೋತಿ ಮೇಡಂರವರು ತಮ್ಮ ಪ್ರೀತಿಯ ಮಾತಿನ ಮೂಲಕ ನಮ್ಮಲ್ಲಿ ಶಿಸ್ತನ್ನು ಬೆಳೆಸಿದವರು. ನನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ವರ್ಷಗಳೇ ಸಂದಿವೆ. ಆದರೆ ಮೇಡಂ ಮಾತ್ರ ನನ್ನ ಗುರುತು ಹಿಡಿದು ಹೆಸರು ಕರೆದು ಮಾತಾಡಿಸುವುದನ್ನು ಕಂಡರೆ, ಇದಕ್ಕಿಂತ ಭಾಗ್ಯ ಬೇರೆ ಏನು ಬೇಕು. ಹಾಗೆಯೇ ನನ್ನ ಜೀವನದಲ್ಲಿ ಅನೇಕ ಶಿಕ್ಷಕರು ಬಂದು ಹೋಗಿದ್ದಾರೆ. ಪ್ರೌಢಶಾಲೆಯಲ್ಲಿ ಲಕ್ಷ್ಮಣ ಸರ್, ಕನ್ನಡ ಪಾಠವನ್ನು ಚೆನ್ನಾಗಿ ವಿವರಿಸುತ್ತಿದ್ದರು. ರೋಶನಿ ನಿಲಯದಲ್ಲಿ ಪದವಿ ಶಿಕ್ಷಣದ ಸಮಯದಲ್ಲಿ ಅನೇಕ ಉಪನ್ಯಾಸಕರು ಸ್ನೇಹಿತರಂತೆ ಕಾಳಜಿ ತೋರಿ ಪಠ್ಯಗಳನ್ನು ಬೋಧಿಸುತ್ತಿದ್ದರು. ಇಲ್ಲಿ ಟಿ. ಎನ್ ಮಯ್ಯ ಸರ್ ಇವರನ್ನು ಮರೆಯಲು ಅಸಾಧ್ಯ. ಸೇಂಟ್ ಅಲೋಶಿಯಸ್ ಕಾಲೇಜಿನ ಉಪನ್ಯಾಸಕರು ನನ್ನ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.. ಇಂದು ನಾಲ್ಕು ವಿದ್ಯಾರ್ಥಿಗಳ ಮುಂದೆ ನಿಂತು, ನಾಲ್ಕು ಅಕ್ಷರ ಬೋಧಿಸಲು ಅನುವು ಮಾಡಿ ಕೊಟ್ಟವರು ನನ್ನ ಹೆಮ್ಮೆಯ ಶಿಕ್ಷಕರು.. ಒಬ್ಬ ವಿದ್ಯಾರ್ಥಿ ತನ್ನ ವೃತ್ತಿ ಜೀವನದಲ್ಲಿ ಯಶಸ್ವಿಯಾದರೆ ಅದು ಅವನ ಶಿಕ್ಷಕರಿಗೆ ನೀಡುವ ಅಮೂಲ್ಯವಾದ ಕಾಣಿಕೆಯಾಗಿದೆ. ಕೊನೆಯದಾಗಿ ನನಗೆ ಜೀವನ ಪಾಠ... ನೈತಿಕ ಪಾಠದ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕನ ಪಟ್ಟವನ್ನು ನೀಡಿದ ನನ್ನ ಎಲ್ಲಾ ಗುರುಚರಣಕ್ಕೆ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೇನೆ....
ನೇತಾಜಿ ಸುಭಾಷ್ ಚಂದ್ರ ಬೋಸ್
ಸರಕಾರಿ ಪದವಿಪೂರ್ವ ಕಾಲೇಜು, ದೇರಳಕಟ್ಟೆ.
ಉಳ್ಳಾಲ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 77604 62406
****************************************
"ಮನೆ ಮೊದಲ ಪಾಠಶಾಲೆ ತಾಯಿ ತಾನೇ ಮೊದಲ ಗುರು" ಎಂಬಂತೆ ಮನೆಯಲ್ಲಿ ತಂದೆ ತಾಯಿಯ ಪಾತ್ರ ಮಕ್ಕಳ ಮೇಲೆ ಬಹಳವಾಗಿರುತ್ತದೆ. ಈ ಸಂದರ್ಭದಲ್ಲಿ ನಮ್ಮ ತಂದೆಯ ಚಾಲೆಂಜ್ ಕನಸನ್ನು ನನಸು ಮಾಡಿದ ಸೌಭಾಗ್ಯದ ದಿನ ಎನ್ನಲು ನನಗೆ ಅತ್ಯಂತ ಸಂತೋಷವ ಎನಿಸುತ್ತದೆ. "ಏಕ ಮಾತ್ರರಂ ಕಲಿಸಿದಾತಂ ಗುರು" ಎಂಬ ಗಾದೆಯಂತೆ ನಾನು ಚಿಕ್ಕವನಿದ್ದಾಗ ತಂದೆ ಯಾವುದೇ ಒಂದು ಸಣ್ಣ ಸಮಾರಂಭದಲ್ಲಿ ಅತಿಥಿಗಳಿಗೆ ಮಾಲಾರ್ಪಣೆ ಮಾಡಲು ಅವಕಾಶ ಕೇಳಿದಾಗ ಕಾರ್ಯಕ್ರಮ ಆಯೋಜಕರು ನಮ್ಮ ತಂದೆಯನ್ನು ಅವಮಾನಿಸಿ ತಳ್ಳಿದಾಗ ನನ್ನ ತಂದೆ ಅವತ್ತೇ ನನ್ನ ಸಣ್ಣ ಮಗನನ್ನು ಒಳ್ಳೆಯದಾಗಿ ಓದಿಸಿ ಒಳ್ಳೆಯ ಶಿಕ್ಷಕರನ್ನಾಗಿ ಮಾಡುವ ಕನಸು ಕಂಡರು. ಯಥಾವತ್ತಾಗಿ ಬಹಳ ಪರಿಶ್ರಮ ಪಟ್ಟು ಆ ಒಂದು ಕೆಲಸವನ್ನು ನಿರಂತರವಾಗಿ ಮಾಡಿ ಮುಗಿಸಿಬಿಟ್ಟರು. ಇಂತಹ ಅತಿಥಿಗಳ ಮಾಲಾರ್ಪಣೆ ನನ್ನ ಆಗಬೇಕು. ಒಳ್ಳೊಳ್ಳೆ ಸನ್ಮಾನ ನನ್ನ ಮಗನಿಗೆ ಆಗಬೇಕು. ಎಂಬ ವಿಶ್ವಾಸದಿಂದ ಅಂದು ಕಣ್ತುಂಬ ನೋಡಿದ ಕನಸು ಇಂದು ಸಾರ್ಥಕವಾಯಿತು. ನನ್ನ ತಂದೆಯ ಕನಸನ್ನು ನನಸು ಮಾಡಲು ನಾನು ಇವತ್ತು ಕರ್ನಾಟಕ ರಾಜ್ಯೋತ್ಸವ, ಆದರ್ಶ ಶಿಕ್ಷಕ ಇಂಥ ಎಷ್ಟೋ ಪ್ರಶಸ್ತಿಗಳನ್ನು ಗಿಟ್ಟಿಸಿ ಸನ್ಮಾನಗಳ ಸುರಿ ಮಳೆ ಆಗುತ್ತಾ ಇದೆ. ಆದರೆ ಖೇದದ ವಿಷಯ ಈ ಸೌಭಾಗ್ಯ ನೋಡಲು ನಮ್ಮ ತಂದೆ ನನ್ನ ಮುಂದೆ ಇಲ್ಲ. ಧನ್ಯವಾದಗಳು....
ಹಿಂದಿ ಭಾಷಾ ಶಿಕ್ಷಕ
ನೋಮಾನಿಯ ಪ್ರೌಢಶಾಲೆ
ಆಜಮ್ ನಗರ, ಬೆಳಗಾವಿ
Mob : +91 93416 44495
****************************************
ಗುರಿ ಎಂದಾಗ ತಟ್ಟಣೆ ನೆನಪಾಗುವುದೇ ಗುರು. ಬಾಲ್ಯದಲ್ಲಿ ಮಕ್ಕಳಿಗೆ ಮುಖ್ಯವಾಗಿ ಸಿಗಬೇಕಾದುದು ಸಂಸ್ಕೃತಿಯ ಜೊತೆಗೆ ವಿದ್ಯೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಎಂಬ ಮಾತಿದೆ. ಅಂತೆಯೇ ಚಿಕ್ಕವರಾಗಿದ್ದಾಗಲೇ ಶಿಕ್ಷಣದ ಜೊತೆಗೆ ಸಂಸ್ಕಾರ, ಎಂದರೆ ಗೌರವ ಕೊಡುವುದು, ಮಾತನಾಡುವ ರೀತಿಯನ್ನು ತಿಳಿಸುವುದು, ತಪ್ಪುಗಳನ್ನು ತಿದ್ದುವುದು ಬಹಳ ಮುಖ್ಯವಾಗಿದೆ. ಮಕ್ಕಳನ್ನು ಯಾವ ಹಂತದಲ್ಲಿ ಹೇಗೆ ರೂಪಿಸಬೇಕು, ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕು, ಎಂಬುದನ್ನು ಗುರುಗಳು ಬಹಳ ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಯಾವುದೇ ಗುರುಗಳಿರಲಿ ಅವರು ತಮ್ಮ ತಮ್ಮ ಕರ್ತವ್ಯಗಳನ್ನು ಬಹು ಜವಾಬ್ದಾರಿಯುತವಾಗಿ ನಡೆಸಿಕೊಂಡು ಬರುತ್ತಾರೆ.
ನನ್ನ ಜೀವನದಲ್ಲಿ ಮೊದಲನೆಯದಾಗಿ ನನ್ನ ಪಾಠದ ಗುರುಗಳು. ನನ್ನ ಎಲ್ಲಾ ಯಶಸ್ಸಿಗೆ ಮೊದಲಾಗಿ ಸ್ಮರಿಸುವುದು ನನ್ನ ಪ್ರೌಢ ತರಗತಿಯ ಗುರುಗಳನ್ನು. ಯಾಕೆಂದರೆ ನನ್ನದೊಂದು ಉದಾಹರಣೆ ಇದೆ. ನಾನು ಒಂದರಿಂದ ಐದನೇ ತರಗತಿವರೆಗೆ ಬಿ ಪ್ಲಸ್ ಗ್ರೇಡ್ ಪಡೆಯುವ ವಿದ್ಯಾರ್ಥಿ. ಇಲ್ಲಿ ಗುರುಗಳ ತಪ್ಪು ಇಲ್ಲ. ಒಟ್ಟು ತರಗತಿಯಲ್ಲಿ ಮಕ್ಕಳ ಸಂಖ್ಯೆ ತುಂಬಾ ಇತ್ತು. ಅವರಾದರೂ ಮುಕ್ಕಾಲು ಗಂಟೆಯಲ್ಲಿ ಯಾರನೆಂದು ನೋಡುತ್ತಾರೆ. ನಂತರ ನಾನು ಶಾಲೆಯನ್ನು ಬದಲಿಸಿದೆ. ಹೊಸ ವಾತಾವರಣ, ಹೊಸ ಶಿಕ್ಷಕರು, ಹೊಸದಾದ ಹುಮ್ಮಸ್ಸು, ತರಗತಿಯಲ್ಲಿ ಇದ್ದದ್ದು 15 ಮಂದಿ ವಿದ್ಯಾರ್ಥಿಗಳು. ಶಿಕ್ಷಕರು ಪಾಠದ ವಿಷಯದಲ್ಲಿ ಶಿಸ್ತುಬದ್ಧವಾಗಿದ್ದರು. ಅವರ ಬಳಿ ಹೋದಾಗ ಎಲ್ಲರೂ ಹೆಸರು ಕರೆದೇ ಮಾತನಾಡಿಸುತ್ತಿದ್ದರು. ಆಗ ನನ್ನಲ್ಲಿ ಹೊಸದಾದ ಶಿಕ್ಷಣದ ಕನಸು ಬೆಳೆಯಿತು. ಹೊಸ ಆಸಕ್ತಿ ಹುಟ್ಟಿತು. ಹೀಗೆ ನನ್ನನ್ನು ಸಿ ಪ್ಲಸ್ ನಿಂದ ಎ ಪ್ಲಸ್ ನತ್ತ ತರುವಲ್ಲಿ ಅವರ ಪಾತ್ರ ಬಹಳಷ್ಟಿದೆ.
ಹೀಗೆ ಆಟೋಟದ ಕಡೆಗೆ ನೋಡೋಣ. ನನಗೆ ತಿಳಿದು ತಿಳಿಯದೆಯೋ ಕಬಡ್ಡಿ, ಕೋಕೋ, ಓಟ ಹೀಗೆ ಬೇರೆ ಬೇರೆ ಕ್ಷೇತ್ರದಲ್ಲಿ ರಾಜ್ಯಮಟ್ಟದವರೆಗೆ ಸ್ಪರ್ಧಿಸಲು ನನ್ನ ಗುರುಗಳೇ ಕಾರಣ. ಒಮ್ಮೊಮ್ಮೆ ಅನಿಸಿಬಿಡುತ್ತಿತ್ತು ಯಾಕೆ ನಮಗೆ ಚಿತ್ರ ಹಿಂಸೆ ಕೊಡುತ್ತೀರಿ, ಒಮ್ಮೆಗೆ ಸಾಯಿಸಿ ಬಿಡಿ ಎಂದು. ಯಾವ ಜಡಿ ಮಳೆಯನ್ನು ಲೆಕ್ಕಿಸುತ್ತಿರಲಿಲ್ಲ, ಸೂರ್ಯನ ಬಿಸಿಲಿಗೆ ಬೆವರು ಹರಿದು ಬರುತ್ತಿದ್ದರೂ ಅವರಿಗೆ ಕರುಣೆ ಹುಟ್ಟುತ್ತಿರಲಿಲ್ಲ. ಬೆಳಿಗ್ಗೆ ಬೇಗನೆ ಹೊರಟು ತಡವಾಗಿ ಮನೆ ಮುಟ್ಟುತ್ತಿರುವಾಗಲೆಲ್ಲ ಸಾಕಪ್ಪ ಎಂದು ಅನಿಸಿಬಿಡುತ್ತಿತ್ತು. ಗುರುಗಳಿಗೆ ನಮ್ಮ ಮೇಲೆ ಕರುಣೆ ಇಲ್ಲವೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿತ್ತು. ಅವರ ಪಾತ್ರವೇ ಅಂತದ್ದು. ಜೀವನದ ಕಷ್ಟಗಳನ್ನು ಹೇಗೆ ಮೆಟ್ಟಿ ನಿಲ್ಲುವುದೆಂದು ಜೀವಂತ ಉದಾಹರಣೆಗಳೊಂದಿಗೆ ತಿಳಿಸಿಕೊಡುವಲ್ಲಿ ಇವರ ಪಾತ್ರ ಮರೆಯಲಸಾಧ್ಯ. ಸಂಗೀತ ಎಲ್ಲರಿಗೂ ಪ್ರಿಯವಾದದ್ದು. ನನಗೂ. ಸಂಗೀತದಲ್ಲಿ ಆಸಕ್ತಿ. ಸಂಗೀತದಿಂದ ತಾಳ್ಮೆ ಗೆ ಮಹತ್ವದ ಬೆಲೆ ಇದೆ. ನಾವು ಎಷ್ಟು ಬಾಗುತ್ತೇವೋ ಅಷ್ಟೇ ಬೇಗ ನಾವು ನಮ್ಮ ಗುರಿ ಸಾಧಿಸಬಹುದು.
ಸಂತ ಅಲೋಶಿಯಸ್ ಕಾಲೇಜು
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 79752 15885
****************************************
ಮೊದಲಿಗೆ ನನ್ನ ಗುರುಗಳಿಗೆ ವಂದಿಸುತ್ತಾ.. ನಾನು ಮೆಚ್ಚಿದ ಶಿಕ್ಷಕರು ಯಾರೆಂದು ಹೇಳಲು ಸ್ವಲ್ಪ ಕಷ್ಟ ಸಾಧ್ಯನೇ... ಯಾಕೆಂದರೆ ಏನು ತಿಳಿಯದ ವಯಸ್ಸಿನಲ್ಲಿ ಎಲ್ಲಾವನ್ನು ಹೇಳಿ ಕೊಟ್ಟು ಸರಿ ತಪ್ಪುಗಳನ್ನು ತಿಳಿಸಿ, ಒಳ್ಳೆಯ ಮಾರ್ಗದರ್ಶಕರಾಗಿ, ದೇಶದ ಉತ್ತಮ ಪ್ರಜೆಯಾಗಲು ಸಹಕರಿಸುವಲ್ಲಿ ಪೋಷಕರ ಪಾತ್ರದಂತೆ ಶಿಕ್ಷಕರ ಪಾತ್ರವು ಅತ್ಯಂತ ಮಹತ್ತರ ವಾಗಿರುತ್ತದೆ. ಒಂದನೇ ತರಗತಿಯಲ್ಲಿ ಓದುವಾಗ ತಾಯಿಯಂತೆ ಮಮತೆ ತೋರಿಸಿ ಓದಿಸುತ್ತಾ ಉನ್ನತ ವ್ಯಾಸಂಗಕ್ಕಾಗಿ ತೆರಳಿದಾಗ ತಂದೆಯಂತೆ ಧೈರ್ಯ ತುಂಬುವ ಪಾತ್ರ ಶಿಕ್ಷಕರದ್ದಾಗಿರುತ್ತದೆ. ಅದರಲ್ಲೂ ನನಗೆ ತಾಯಿಯೇ ಮೊದಲ ಶಿಕ್ಷಕಿ. ನಂತರ ಪ್ರಾಧ್ಯಾಪಕರಾಗಿ ನನಗೆ ಸಿಕ್ಕಿದ ಎಲ್ಲಾ ಶಿಕ್ಷಕರು ಒಂದಲ್ಲ ಒಂದು ರೀತಿಯಲ್ಲಿ ಶಿಕ್ಷಣಕ್ಕೆ ಬೇಕಾದ ಸಹಾಯದ ಜೊತೆಗೆ ಪ್ರೋತ್ಸಾಹ ಮಾಡುತ್ತನೇ ಬಂದಿರುತ್ತಾರೆ. ಕುಗ್ಗಿದಾಗ ಸ್ನೇಹಿತೆಯಾಗಿ, ಬಿದ್ದಾಗ ವೈದ್ಯೆಯಾಗಿ, ಅಂಧಕಾರದ ಬದುಕಿಗೆ ದೀಪದಂತೆ ಬಂದು ಬೆಳಕನ್ನು ನೀಡಿದವರು ನನ್ನ ಶಿಕ್ಷಕಿ. ಸಾವಿರ ಪದಗಳಿಗೆ ನಿಲುಕದವಳು, ಮುಗಿಯದ ಪುಸ್ತಕದ ಪುಟ ಈ ನನ್ನ ಗುರು. ಅಕ್ಷರಾಭ್ಯಾಸದಿಂದ ಆರಂಭವಾಗಿ ಮುಂದಿಡುವ ಪ್ರತಿಯೊಂದೂ ಹೆಜ್ಜೆಗೂ ಜೊತೆಯಾದವಳು ಈ ನನ್ನ ಮೆಚ್ಚಿನ ಟೀಚರ್.. ಏನು ಪದಗಳಿಲ್ಲ ನನ್ನ ಮೆಚ್ಚಿನಶಿಕ್ಷಕರ ಕುರಿತಾಗಿ ಹೇಳಲು.. ಕ್ಷಮೆ ಕೇಳುವಾಗ ಏನೇ ತಪ್ಪು ಮಾಡಿಲ್ಲ ಎಂದರೆ.. ಧನ್ಯವಾದ ಹೇಳಿದಾಗ ನಾನೇನು ಮಾಡಿದ್ದೇನೆ ಎಲ್ಲಾನೂ ನಿನ್ನ ಕಠಿಣ ಪರಿಶ್ರಮ ಎಂದು ಹೇಳಿದವಳು ನನ್ನ ಅಧ್ಯಾಪಿಕೆ... ನನ್ನ ಗುರುಗಳೇ ನಿಮಗೆ ಕೋಟಿ ನಮನಗಳು ನನ್ನ ಜೀವನ ಪಯಣದಲ್ಲಿ ದಾರಿ ದೀಪವಾದುದಕ್ಕೆ...
ಮಂಗಳಾ ಸೇವಾ ಸಮಿತಿ ಟ್ರಸ್ಟ್ (ರಿ)
ಬಾಲಸಂರಕ್ಷಣಾ ಕೇಂದ್ರ, ಕುತ್ತಾರ್ ಪದವು
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 63635 86567
****************************************
ನನ್ನ ಮೆಚ್ಚಿನ ಶಿಕ್ಷಕಿ ಚಿತ್ರಾಕ್ಷಿ ಟೀಚರ್. ಏಕೆಂದರೆ ಅವರು ತುಂಬ ಸಿಹಿ ಸಿಹಿಯಾದ ಮಾತಿನಿಂದ ಪಾಠ ಮಾಡುತ್ತಾರೆ. ಎಲ್ಲರ ಜೊತೆ ಖುಷಿಯಾಗಿರುತ್ತಾರೆ. ತಪ್ಪು ಮಾಡಿದಾಗ ಮತ್ತು ತಿದ್ದಿ ಬುದ್ದಿ ಹೇಳುತ್ತಾರೆ. ಅವರು ನಮಗೆ ವಿಜ್ಞಾನ ವಿಷಯವನ್ನು ಅರ್ಥವಾಗುವ ರೀತಿಯಲ್ಲಿ ಹೇಳಿಕೊಡುತ್ತಿದ್ದರು. ಅವರ ಮಕ್ಕಳಂತೆ ನಮ್ಮನ್ನು ಪ್ರೀತಿಯಿಂದ ಕಾಣುತ್ತಾರೆ. ಏನಾದರೂ ಸ್ಪರ್ಧೆ ಇದ್ದರೆ ನಮ್ಮನ್ನು ಚೆನ್ನಾಗಿ ಸಿದ್ದಪಡಿಸುತ್ತಾರೆ. ಶಿಸ್ತಿನ ಬಗ್ಗೆ ಮಕ್ಕಳಿಗೆ ಎಚ್ಚರಿಸುತ್ತಾರೆ. ನಮಗೆ ಏನಾದರೂ ಗೊತ್ತಿಲ್ಲದೆ ತಪ್ಪು ಮಾಡಿದರೆ ಅದನ್ನು ಸಮಾಧಾನವಾಗಿ ಹಾಗೂ ಅರ್ಥವಾಗುವಂತೆ ಹೇಳುತ್ತಾರೆ. ಜೀವನದಲ್ಲಿ ಏನಾದರೂ ಕಷ್ಟ ಬಂದರೆ ಅದನ್ನು ಎದುರಿಸುವ ಧೈರ್ಯ ನೀಡುತ್ತಾರೆ. ನಮ್ಮಲ್ಲಿದ್ದ ವಿಷಯ ಜ್ಞಾನವನ್ನು ಹೊರಗೆ ತೋರಿಸುವಂತೆ ಬೆಂಬಲ ನೀಡುತ್ತಾರೆ. ನಮ್ಮಲ್ಲಿದ್ದ ಪ್ರತಿಭೆಯನ್ನು ಹೊರ ಹಾಕಲು ಸಹಕರಿಸುತ್ತಾರೆ. ನಮ್ಮಲ್ಲಿ ಏನಾದರೂ ಕೆಟ್ಟ ಗುಣವಿದ್ದರೆ ಅದನ್ನು ತಿದ್ದಿ ಮುಂದೆ ಆ ತಪ್ಪು ಮಾಡದಂತೆ ಎಚ್ಚರ ವಹಿಸುತ್ತಾರೆ. ಸಮಾಜದಲ್ಲಿ ಮುಂದೆ ಹೇಗೆ ಬದುಕಬೇಕೆಂಬುದನ್ನು ಪಾಠದ ಮೂಲಕ ಹೇಳುತ್ತಾರೆ. ಅವರು ತಮ್ಮ ಪಾಠದ ಜೊತೆಗೆ ಮತ್ತಷ್ಟು ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ನಮ್ಮ ಜೊತೆ ಪ್ರೀತಿ, ಸಹಬಾಳ್ವೆ ಹಾಗೂ ಒಂದು ಒಳ್ಳೆಯ ಸಹೋದರಿಯಂತೆ ಪ್ರೀತಿಯಿಂದ ಇರುತ್ತಾರೆ.
....................................... ತ್ರಿಶಾ ಎಚ್ ಆರ್
ಮಂಗಳಾ ಸೇವಾ ಸಮಿತಿ ಟ್ರಸ್ಟ್ (ರಿ)
ಬಾಲಸಂರಕ್ಷಣಾ ಕೇಂದ್ರ, ಕುತ್ತಾರ್ ಪದವು
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 63635 86567
****************************************
ನಾನು ಪುತ್ತೂರು ತಾಲೂಕಿನ ಇಚಿಲಂಪಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಚಿಲಂಪಾಡಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿ. ನಾನು ಇಂದು ನನ್ನ ನೆಚ್ಚಿನ ಶಿಕ್ಷಕಿಯಾದ ಸ್ವರ್ಣಲತಾ ಟೀಚರ್ ಅವರ ಬಗ್ಗೆ ಬರೆಯಲು ಇಚ್ಛಿಸುತ್ತೇನೆ. ನನಗೆ ಸ್ವರ್ಣಲತಾ ಟೀಚರ್ ಯಾಕೆ ಅಚ್ಚು ಮೆಚ್ಚು ಅಂದರೆ ಅವರು ನಮಗೆ ಕನ್ನಡ ಪಾಠ ಮಾಡುತ್ತಿದ್ದರು. ಅವರಿಗೆ ನಾನು ಮತ್ತು ನನ್ನ ಕನ್ನಡ ಅಕ್ಷರ ಅಂದರೆ ತುಂಬಾ ಇಷ್ಟ. ಯಾಕೆಂದರೆ ನನ್ನ ಕನ್ನಡ ಅಕ್ಷರ ಗುಂಡು ಗುಂಡಾದ ಅಕ್ಷರ ಆಗಿತ್ತು. ನನ್ನ ಕನ್ನಡ ಕೋಪಿಗೆ 10/10 ಅಂಕಗಳನ್ನು ಕೊಡುತ್ತಿದ್ದರು. ಅಂದಿನಿಂದ ಉಳಿದ ಮಕ್ಕಳು ಕೂಡ ನನ್ನ ಕೈಯಲ್ಲಿ ಅವರ ಕೋಪಿ ಪುಸ್ತಕ ವನ್ನು ಬರೆದು ಕೊಡಲು ಹೇಳುತ್ತಿದ್ದರು. ಆದರೆ ನಾನು ಅದಕ್ಕೆ ಅವಕಾಶ ನೀಡಲಿಲ್ಲ. ಯಾಕೆಂದರೆ ನನ್ನ ಮೇಲೆ ಟೀಚರ್ ಇಟ್ಟ ನಂಬಿಕೆಯನ್ನು ಕಳೆದುಕೊಳ್ಳಲು ನನಗೆ ಇಷ್ಟ ಇರಲಿಲ್ಲ. ನನಗೆ ಅವತ್ತೆ ಗೊತ್ತಾಗಿದ್ದು. ನಾನು ಇಷ್ಟೊಂದು ಚೆನ್ನಾಗಿ ಬರೆಯುತ್ತಿರುವೆ ಎಂದು. ನನ್ನ ಮೇಲೆ ನನಗೆ ಅಚ್ಚರಿಯಾಗಿತ್ತು. ಇವತ್ತಿಗೂ ನನ್ನ ನೆಚ್ಚಿನ ಶಿಕ್ಷಕಿಯಾದ ಸ್ವರ್ಣಲತಾ ಟೀಚರ್ ಬಗ್ಗೆ ತುಂಬಾ ಗೌರವ ಇದೆ. ಹಾಗೆಯೇ ನನ್ನ ಅಕ್ಷರ ಮೇಲಿನ ಹೆಮ್ಮೆ ಇದೆ. ಸಂತೋಷನೂ ಇದೆ. ಎಂದೆಂದಿಗೂ ನನ್ನ ನೆಚ್ಚಿನ ಶಿಕ್ಷಕಿಯಾದ ಸ್ವರ್ಣ ಲತಾ ಟೀಚರ್ ಅವರನ್ನು ಮರೆಯಲಾಗದ ನನ್ನ ನೆಚ್ಚಿನ ಟೀಚರ್. ಇಂತಿ ನಿಮ್ಮ ವಿದ್ಯಾರ್ಥಿನಿ
ಹರ್ಲಡ್ಕ ಮನೆ
ನೆಲ್ಲೂರು ಕೆಂಬ್ರಾಜೆ
ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 77600 67223
****************************************
ಪ್ರವೀಣ್ ಮಹಿಷಿ, ಅರಸಪ್ಪ, ಪರ್ಜಾನಾ ಇವರು ನನ್ನ ನೆಚ್ಚಿನ ಗುರುಗಳು. ಶಿಕ್ಷಕರು ಬರೀ ಪಾಠ ಪ್ರವಚನ ಮಾಡಿದರೆ ಸಾಲದು, ಬದಲಾಗಿ ವಿದ್ಯಾರ್ಥಿಗಳ ಮನಸ್ಸಿನ ಆಳಕ್ಕಿಳಿದು ಅವರ ಭಾವನೆಗಳನ್ನು ಅರ್ಥೈಸಿಕೊಳ್ಳಬೇಕು. ವಿದ್ಯಾರ್ಥಿಗಳ ಮನಸ್ಸಿನ ಅನುಸಾರ ಪಾಠ ಮಾಡಬೇಕು. ಬರೀ ನಾಲ್ಕು ಗೋಡೆಗಳ ನಡುವೆ ಮಾಡುವ ಪಾಠಕ್ಕಿಂತ ನಾಲ್ಕು ಗೋಡೆಗಳಿಗೂ ಮೀರಿದ ಜ್ಞಾನ ಕೊಡಬೇಕು. ಈ ಎಲ್ಲ ಗುಣಗಳು ನನ್ನ ನೆಚ್ಚಿನ ಗುರುಗಳಲ್ಲಿದೆ. ನನ್ನನ್ನು ಕೂಡ ಶಿಕ್ಷಕನಾಗಿ ರೂಪಿಸಿದ ನನ್ನ ಎಲ್ಲಾ ಪೂಜ್ಯ ಗುರುಗಳಿಗೆ ಪ್ರಣಾಮಗಳು.
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕಾನುಗೋಡು.
ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ
Mob : +91 98457 09941
****************************************
ನಾನು ಮೆಚ್ಚಿದ ನನ್ನ ಶಿಕ್ಷಕಿ ಶ್ರೀಮತಿ ಸುಮತಿ ಟೀಚರ್. ನಾನು 4ನೆ ತರಗತಿ ಓದುವಾಗ ನಮ್ಮೂರಿಗೆ ಬಂದ ಮೊದಲ ಶಿಕ್ಷಕಿ. ನಮಗೆ ಮೊದಲ ಪಾಠವೇ ಶ್ಲೋಕ. ಬೆಳಗ್ಗೆ ಎದ್ದ ಕೂಡಲೇ ಕೈ ನೋಡಿ ಶ್ಲೋಕ. ಕಾಲು ಭೂಮಿಯನ್ನು ಸ್ಪರ್ಶ ಮಾಡುವ ಮೊದಲು ಒಂದು ಶ್ಲೋಕ. ನಂತರ ಸ್ನಾನಕ್ಕೆ ಮೊದಲು. ಊಟಕ್ಕೆ ಮೊದಲು , ಸ್ಕೂಲ್ ಗೆ ಹೋದ ಮೇಲೆ , ಮತ್ತೆ ಸಂಜೆ ದೀಪಾ ಹಚ್ಚುವ ಮೊದಲು ಶ್ಲೋಕ... ಹೀಗೆ ನಮ್ಮ ದೇಶ ನಮ್ಮ ಸಂಸ್ಕೃತಿ ಸಂಪ್ರದಾಯ ಹಾಗೇ ನಮ್ಮ ಅಪ್ಪ ಅಮ್ಮನಿಗೆ ಸಹ ಶ್ಲೋಕ ಹೇಳಿ ಕೊಡಿ ಎಂದು ಹೇಳುತ್ತಿದ್ದರು. ಅದೇನೋ ನನ್ನ ಹಣೆಬರಹ ನನಗೆ ಒಂದೇ ವರ್ಷ ಅವರ ಪಾಠ ಕೇಳುವ ಪುಣ್ಯ. ಅದರೆ ಇವತ್ತು ನನಗೆ ನಲ್ವತ್ತು ವರ್ಷ ಅದರು ಕೂಡ ಅವರು ಹೇಳಿ ಕೊಟ್ಟಿರುವ ಶ್ಲೋಕ ನಾ ಮರೆತಿಲ್ಲ. ಗೊತ್ತಿಲ್ಲ ನಾನು ಓದಿದ್ದೆ 7ನೆ ತರಗತಿ. ನನಗೆ ಅವರು ಪಾಠ ಮಾಡಿದ್ದು 4ನೆ ತರಗತಿವರೆಗೆ. ನಂತರ ನನ್ನ ಶಾಲೆ ಜಯನಗರ. ನಾ ಮರೆಯದ ನನ್ನ ದೇವರು ಸುಮತಿ ಟೀಚರ್
ಎಲ್ ಗುಡ್ಡೆಕೊಪ್ಪ, ಜಯನಗರ
ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ
Mob : +91 99452 22756
****************************************
ಸರ್ಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಶಾಲೆಯಲ್ಲಿ ಸೇವೆಯಲ್ಲಿರುವ ಶ್ರೀ ಜಗನ್ನಾಥ್ ಸರ್. ಶಾಲೆಯಿಂದ ವಿರಮಿಸಿದ ನಂತರವೂ ವಿದ್ಯಾರ್ಥಿ ಮನದಲ್ಲಿ ಎಂದಿಗೂ ನೆನಪಿನಲ್ಲಿರುವ ಹೆಸರದು. ಅವರು ನೀಡುತ್ತಿದ್ದ ಪೆಟ್ಟು ಒಮ್ಮೆಯೂ ಮನಸ್ಸಲ್ಲಿ ನೋವನ್ನುಂಟು ಮಾಡುತ್ತಿರಲಿಲ್ಲ. ಎಲ್ಲಿ ಸಿಕ್ಕರೂ ತಾನೇ ಮುಂದೆ ಬಂದು ಮಾತನಾಡುವ ಅವರದು ವಿಶಿಷ್ಟ ವ್ಯಕ್ತಿತ್ವ. ಅವರಿಗೂ, ಸರ್ವ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ಉಪ್ಪಿನಂಗಡಿ, ಪುತ್ತೂರು ತಾಲೂಕು
Mob : +91 97406 35938
****************************************