-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 134

ಸ್ಫೂರ್ತಿಯ ಮಾತುಗಳು : ಸಂಚಿಕೆ - 134

ಸ್ಫೂರ್ತಿಯ ಮಾತುಗಳು : ಸಂಚಿಕೆ - 134
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                   
                  
ಯಾವುದೇ ಕಾರ್ಯಕ್ರಮದ ಯಶಸ್ಸು ಕಾರ್ಯಕರ್ತರನ್ನು ಆಧರಿಸಿದೆ. ಕಾರ್ಯಕರ್ತರು ಮಾಡುವ ಸೇವೆ ಎಲೆ ಮರೆಯ ಕಾಯಿಯಂತಿರುತ್ತದೆ. ಕ್ರಿಯಾಶೀಲ ಕಾರ್ಯಕರ್ತರ ಹೊರತಾಗಿ ಯಾವುದೇ ಕಾರ್ಯಕ್ರಮಗಳ ಸಫಲತೆಯು ಕನಸಿನ ಮಾತು. ಕಾರ್ಯಕರ್ತರ ಕಾರ್ಯ ಶೈಲಿ, ಅವರ ಪ್ರಾಮಾಣಿಕ ತೊಡಗಿಸುವಿಕೆ, ಅವರು ಮಾಡುವ ನಿರಂತರ ಸಕಾರಾತ್ಮಕ ಯೋಚನೆಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತವೆ.

ಕಾರ್ಯಕರ್ತರು ಹೇಗಿರಬೇಕೆಂಬುದನ್ನು ಅನುಭವಿಗಳು ವ್ಯಾಖ್ಯಾನಿಸುವ ಸುಂದರ ರೀತಿ ಹೀಗಿದೆ. ಕಾರ್ಯಕರ್ತನಾದವನು ಕಾಲಿಗೆ ಚಕ್ರಗಳನ್ನು ಕಟ್ಟಿಕೊಂಡಿರಬೇಕು. ಮುಖ ಹೊಳೆಯುತ್ತಿರಬೇಕು. ಅವರ ನಾಲಿಗೆ ಸಕ್ಕರೆಯಂತಿರಬೇಕು. ಮನಸ್ಸಿನಲ್ಲಿ ಬೆಂಕಿಯಿರಬೇಕು. ತಲೆಯಲ್ಲಿ ಮಂಜುಗಡ್ಡೆಯಿರಬೇಕು. ಈ ಮಾತುಗಳನ್ನು ವಿವರಿಸದೇ ಇದ್ದರೆ ಅರ್ಥವಾಗದು. 

ಕಾಲಿಗೆ ಚಕ್ರ ಕಟ್ಟಿಕೊಂಡಿರಬೇಕು ಎಂದರೆ ಆತ ಲವಲವಿಕೆಯಿಂದ ಓಡಾಡುತ್ತಿರಬೇಕು. ವಿಶ್ರಾಂತಿಯನ್ನೇ ಬಯಸುವ ಸೋಮಾರಿಯು ಉತ್ತಮ ಕಾರ್ಯಕರ್ತ ಎನ್ನಿಸಿಕೊಳ್ಳಲು ಅನರ್ಹ. ಕಾರ್ಯಕ್ರಮದ ಯಶಸ್ಸಿಗೆ ಜನಸಂಘಟನೆ ಮಾಡಬೇಕಾಗುತ್ತದೆ. ಸಂಪನ್ಮೂಲ ಕ್ರೋಢೀಕರಿಸಬೇಕಾಗುತ್ತದೆ. ನಾನಾ ಪರಿಕರಗಳನ್ನು ಜೋಡಿಸಬೇಕಾಗುತ್ತದೆ. ಕಾರ್ಯಕ್ರಮದ ಎಲ್ಲ ವಿಭಾಗಗಳಿಗೂ ಸೂಕ್ತವಾದ ಸ್ವಯಂ ಸೇವಕರು, ಸಾಹಿತ್ಯಗಳು.... ಹೀಗೆ ಅನೇಕವುಗಳನ್ನು ಜೋಡಿಸಲು ಇರುತ್ತದೆ. ಅದಕ್ಕಾಗಿ ಓಡಾಟ ಸಹಜ. ಕಾಲುಗಳಿಗೆ ಚಕ್ರಕಟ್ಟಿಕೊಂಡಿರಬೇಕು ಎಂದರೆ ಓಡಾಡಬಲ್ಲವನಾಗಿರಬೇಕೆಂದು ಅರ್ಥವಾಗುತ್ತದೆ.

ಮುಖ ಹೊಳೆಯುತ್ತಿರಬೇಕು ಎಂದರೆ ಮಂದಸ್ಮಿತನಾಗಿರಬೇಕು ಎಂದು ತತಕ್ಷಣ ಅರ್ಥವಾಗುತ್ತದೆ. ಬಾಡಿದ ಮುಖಿ, ಸಿಡುಕು ಮುಖಿ ಯಾರನ್ನೂ ಬೆರೆಯಲಾರ, ಯಾರ ಮನಸ್ಸನ್ನೂ ಸೆಳೆಯಲಾರ. ಯಾರೂ ಅವನ ಬಳಿ ಸುಳಿಯರು. ಯಾರೂ ಅವನಿಗೆ ನೆರವಾಗರು. ಹಾಗಿರುವಾಗ ಅಂಥಹವರಿಗೆ ಕಾರ್ಯಕರ್ತನಾಗಿ ಯಶಸ್ಸು ಪಡೆಯಲಾಗದು. ನಾಲಿಗೆ ಸಕ್ಕರೆಯಂತಿರಬೇಕು ಎಂಬುದು ಮಾತಿಗೆ ಅನ್ವಯಿಸುತ್ತದೆ. ಬಾಯಿಯು “ಮಾತು ಮತ್ತು ಆಹಾರ ಸೇವನೆ” ಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಾರ್ಯಕರ್ತ ಉತ್ತಮ ಆಹಾರ ಸೇವಿಸಬೇಕು. ಪಾನೀಯ ಮತ್ತು ತಿನಿಸುಗಳಲ್ಲಿ ಪರಿಶುದ್ಧತೆ ಹೊಂದಿರಬೇಕು. ಮದ್ಯ ಮತ್ತು ಧೂಮ ಸೇವನೆ ಕಾರ್ಯಕರ್ತನಿಗೆ ತಕ್ಕುದಲ್ಲ. ಮಾತು ನಯವಾಗಿರಬೇಕು, ಆಕರ್ಷಕವಾಗಿರಬೇಕು, ನೋಯಿಸದಂತಿರಬೇಕು. ಮಾತಿನ ಪಾಲಕನೂ ಆಗಿರಬೇಕು. ಮಾತಿನಲ್ಲಿ ತಮಾಷೆ ಇದ್ದರೆ ತೊಂದರೆಯಿಲ್ಲ; ವ್ಯಂಗ್ಯವಂತೂ ಇರಲೇ ಬಾರದು.

ಮಂಜುಗಡ್ಡೆ ತಂಪು. ಅದು ತಲೆಯಲ್ಲಿರಬೇಕು ಎಂದರೆ ತಲೆಯು ತಂಪಾಗಿರಬೇಕು. ಮನುಷ್ಯನ ತಲೆ ಬಿಸಿಯಾಗಿರುವುದೇ ವಾಸ್ತವ. “ಮಂಡೆ ಬೆಚ್ಚ” ಎಲ್ಲರಲ್ಲೂ ಸಹಜ. ಸಣ್ಣ ಸಣ್ಣ ವಿಷಯಗಳಿಗೆ ಅಥವಾ ಸಮಸ್ಯೆಗಳಿಗೆ ಬಹಳ ಮಂಡೆ ಬಿಸಿ ಮಾಡುವವರಿಂದ ಕಾರ್ಯಕರ್ತನಾಗಿ ಯಶಸ್ಸು ಒದಗದು. ನಿರಾಳವಾದ ಯೋಚನೆ, ಶಾಂತವಾದ ಮಿದುಳು ಕಾರ್ಯಕರ್ತನಿಗೆ ಅತ್ಯಪೇಕ್ಷಣೀಯ. ಸಮಸ್ಯೆಗಳನ್ನು ಹೊತ್ತು ತಿರುಗಾಡುವವನು ಎಲ್ಲೂ ಜಯಶೀಲನಾಗಲಾರ, ಜನಪ್ರಿಯನಾಗಲಾರ.

ಮನದೊಳಗೆ ಬೆಂಕಿಯಿರಬೇಕು. ಇದು ಎಂತಹ ಬೆಂಕಿ? ಇನ್ನೊಬ್ಬರನ್ನು ಸೋಲಿಸುವ ದಾಹದ ಬೆಂಕಿಯಲ್ಲ, ಇನ್ನೊಬ್ಬರ ಬೆಳವಣಿಗೆಯನ್ನು ಕಂಡು ಮತ್ಸರಿಸುವ ಬೆಂಕಿಯಲ್ಲ. ಅದು ಧ್ಯೇಯಾಗ್ನಿಯಾಗಿರಬೇಕು, ಧ್ಯೇಯ ಸಾಧಿಸುವ ಬೆಂಕಿಯಾಗಿರಬೇಕು. ತಾನು ಕೈಗೆತ್ತಿದ ಕಾರ್ಯಕ್ರಮ ಯಶಸ್ವಿಯಾಗಲೇ ಬೇಕು ಎಂದು ಛಲತೊಟ್ಟು ಮನ್ನುಗ್ಗುವವನಾಗಿರಬೇಕು. ಅವನೇ ನೈಜ ಅರ್ಥದ ಕಾರ್ಯಕರ್ತ. ನಮಗೆ ಇಂತಹ ಕಾರ್ಯಕರ್ತರಾಗಲು ಖಂಡಿತಾ ಸಾಧ್ಯವಿದೆ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article