ಜೀವನ ಸಂಭ್ರಮ : ಸಂಚಿಕೆ - 156
Sunday, September 22, 2024
Edit
ಜೀವನ ಸಂಭ್ರಮ : ಸಂಚಿಕೆ - 156
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ..... ಇಂದು ಪಾತಂಜಲ ಯೋಗ ಸೂತ್ರದ ಎರಡನೇ ಪಾದ, ಎರಡನೆಯ ಮೆಟ್ಟಿಲು, ನಾಲ್ಕನೇ ಉಪಾಂಗದಲ್ಲಿ ಬರುವ ನಾಲ್ಕನೇ ಸ್ವಾಧ್ಯಾಯ ಆತ್ಮ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ಆತ್ಮ ಸ್ವಾಧ್ಯಾಯ ಎಂದರೆ ನಾನು. ಸುಮ್ಮನೆ ಪ್ರಶ್ನೆ ಕೇಳುವುದು.
ನಾನು ಅಂದರೆ ಯಾರು? ದೇಹ ನಾನು ಅಲ್ಲ. ದೇಹ ಮುಪ್ಪಾಗಿದೆ, ನಾನು ಮುಪ್ಪಾಗಿಲ್ಲ. ದೇಹ ಕಪ್ಪಗೆ ಇದೆ, ನಾನು ಕಪ್ಪಿಲ್ಲ. ದೇಹ ಕುಳ್ಳಗೆ ಇದೆ, ನಾನು ಕುಳ್ಳ ಅಲ್ಲ. ನಾನು ದೇಹ ನೋಡುವವ. ನಾನು ಬೇರೆ. ಇಂದ್ರಿಯಗಳು ನಾನಲ್ಲ. ನಾನು ಮನಸ್ಸು ಅಲ್ಲ. ನಾನು ಬುದ್ದಿಯಲ್ಲ. ಹಾಗಾದರೆ ನಾನು ಯಾರು?.
ನಾನು ಸಾಕ್ಷಿ . ನಾನು ನೋಡುವವನು, ಏನೇನು ಕಣ್ಣುಗಳಿಗೆ ಬರುತ್ತದೆಯೋ ಅದನ್ನೆಲ್ಲ ನೋಡುವವ. ನಾನು ಬರೀ ನೋಡುವವ. ನಾನು ದೇಹ... ನೋಡುತ್ತೇನೆ. ನಾನು ಬುದ್ಧಿ... ನೋಡುತ್ತೇನೆ. ನಾನು ಮನಸ್ಸು... ನೋಡುತ್ತೇನೆ. ನಾನು ಇಂದ್ರಿಯಗಳನ್ನು ನೋಡುತ್ತೇನೆ. ನಾನು ಅಂದರೆ ನೋಡುವವ. ಇದು ದೇಹ. ಇದು ಇಂದ್ರಿಯ. ಇದು ಬುದ್ಧಿ. ಇದು ಮನಸ್ಸು. ಅಂತ ಹೇಳುವವ.
ನಾನು - ಬೇರೆ ತಿಳಿದುಕೋ ಎಂದನು ಪಾತಂಜಲ. ಇದನ್ನು ಮತ್ತೆ ಮತ್ತೆ ಹೇಳಿಕೊ ಎಂದನು. ನಾನು ಜ್ಞಾನ. ನನಗೆ ಜ್ಞಾನ ಇರುವುದರಿಂದ ನೋಡುತ್ತೇನೆ. ಕೇವಲ ನಾನು ನಾನೇ. ನಾನು ಈ ದೇಹದಲ್ಲಿ ಇದ್ದೀನಿ. ನಾನು ದೃಷ್ಟ. ನಾನು ಇರುವವನು. ಸುಮ್ಮನೆ ಇರುವವನು. ಇದನ್ನು ಮನಸ್ಸಿನಲ್ಲಿ ಮತ್ತೆ ಮತ್ತೆ ಧ್ಯಾನಿಸುತ್ತಾ ಹೋದರೆ ಆತ್ಮ ಸ್ವಾಧ್ಯಾಯ. ನಾನು ಅಂದರೆ ಕೇವಲ ಅರಿವು, ಜ್ಞಾನ, ಪ್ರಜ್ಞೆ. ಜ್ಞಾನದ ಬೆಳಕು.
ನಾನು ಮನಸ್ಸಿನಲ್ಲಿ ಮೂಡುವ ಎಲ್ಲಾ ಚಿತ್ರಗಳನ್ನು, ತರಂಗಗಳನ್ನು, ಸುಖ ದುಃಖಗಳನ್ನು ನೋಡುವವನು. ಆ ಸುಖ ದುಃಖ ನನಗೆ ಏನು ಅಂಟುವುದಿಲ್ಲ. ಹೀಗೆ ಇದನ್ನು ಮತ್ತೆ ಮತ್ತೆ ಧ್ಯಾನಿಸಬೇಕು ಎಂದು ಪತಂಜಲ ಮಹರ್ಷಿ ಹೇಳಿದನು. ನಾನು ಅಂದರೆ ಆತ್ಮ. ಅದು ಇರುವವರೆಗೆ ಈ ದೇಹಕ್ಕೆ ಶಕ್ತಿ, ಬಲ, ಜ್ಞಾನ ಎಲ್ಲ. ಇಲ್ಲ ಅಂದರೆ ಈ ದೇಹ ಜಡ. ಇದನ್ನು ಸ್ವಾಧ್ಯಾಯ ಮಾಡು ಎಂದನು ಪಾತಂಜಲ ಮಹರ್ಷಿ. ಸರಿಯಲ್ಲವೇ ಮಕ್ಕಳೇ....
......................................... ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************