-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 47

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 47

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 47
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
           
      
ಪ್ರೀತಿಯ ಮಕ್ಕಳೇ.... ಹಿಂದಿನ ಸಂಚಿಕೆಯಲ್ಲಿ ಸಸ್ಯಗಳಲ್ಲಿ ಕಂಡುಬರುವ ವಿವಿಧ ಚಲನೆಗಳ ಬಗ್ಗೆ ತಿಳಿದೆವು. ಈ ಚಲನೆಗಳು ಉಂಟಾಗುವುದು ಬೆಳವಣಿಗೆಯಿಂದ ಎಂಬುದು ಕೂಡಾ ಗೊತ್ತಾಗಿದೆ. ಪ್ರಾಣಿಗಳಲ್ಲಿ ಚಲನೆಯನ್ನು ನಿರ್ದೇಶಿಸಲು ಒಂದು ವ್ಯವಸ್ಥೆ ಇದೆ. ಅದನ್ನು ನರವ್ಯೂಹ ಎನ್ನುತ್ತೀರಿ. ಎದುರಿಗೆ ಬಸ್ಸು ಬರುತ್ತಿರುವಾಗ ನೀವು ಪಕ್ಕಕ್ಕೆ ಸರಿಯುತ್ತೀರಿ. ಇದು ದೊಡ್ಡ ಮೆದುಳಿನಿಂದ ನಿರ್ದೇಶಿಸಲ್ಪಡುವ ಕ್ರಿಯೆ. ಬಿಸಿಯಾದ ವಸ್ತುವನ್ನು ಮುಟ್ಟಿದ ತಕ್ಷಣ ಕೈಯನ್ನು ಸರಕ್ಕನೆ ಹಿಂದಕ್ಕೆ ಎಳೆದುಕೊಳ್ಳುತ್ತೀರಿ. ಇದು ಮೆದುಳು ಬಳ್ಳಿಯಿಂದ ನಿರ್ದೇಶಿಸಲ್ಪಡುವ ಕ್ರಿಯೆ. ಆದರೆ ಸಸ್ಯಗಳಲ್ಲಿ ಹೀಗೆ ಸ್ಪಂದಿಸಲು ನರವ್ಯೂಹವೇ ಇಲ್ಲ. ಆದರೂ ಕೂಡಾ ಸಸ್ಯಗಳು ಸಂವೇದನೆಗಳಿಗೆ ಸ್ಪಂದಿಸುತ್ತವೆ ಎಂಬುದನ್ನು ಸರ್ ಜಗದೀಶ್ ಚಂದ್ರ ಬೋಸ್ ಸಿದ್ದಪಡಿಸಿದ್ದಾರೆ. ಅವರು ಇದನ್ನು ಶ್ರುತಪಡಿಸಲು ಸೂಕ್ತವಾದ ಉಪಕರಣಗಳನ್ನೂ ಸಿದ್ಧಪಡಿಸಿದ್ದರು ಸಸ್ಯಗಳಲ್ಲಿ ಈ ಸ್ಪಂದನೆ ಸೀಮಿತವಾದದ್ದು ಎಂಬುದಕ್ಕೆ ಎರಡು ಮಾತಿಲ್ಲ.

ಪ್ರಾಣಿಗಳಲ್ಲಿ ಈ ಚಲನೆಯನ್ನು ನಿರ್ದೇಶಿಸಲು ಪ್ರತ್ಯೇಕವಾದ ಒಂದು ವ್ಯವಸ್ಥೆ ಇದೆ. ಅದೇ ನರವ್ಯೂಹ. ನರವ್ಯೂಹ ನರಕೋಶಗಳು (neuron), ನರಗಳು (nerves), ನರ ಗ್ರಂಥಿಗಳು (nerve ganglia), ಮೆದುಳು ಬಳ್ಳಿ (spinal cord), ಮತ್ತು ಮೆದುಳಿನಿಂದಾಗುತ್ತದೆ. ಗ್ರಾಹಕ ಕೋಶಗಳು (receptors) ಸಂವೇದನೆಗಳನ್ನು ಸ್ವೀಕರಿಸುತ್ತವೆ ಮತ್ತು ಆ ಸಂದೇಶಗಳನ್ನು ರಾಸಾಯನಿಕ ಸಂದೇಶಗಳಾಗಿ ಪರಿವರ್ತಿಸುತ್ತವೆ. ಈ ಗ್ರಾಹಕ ಕೋಶಗಳಿಗೆ ಹೊಂದಿಕೊಂಡಿರುವ ನರದ ತುದಿಯಲ್ಲಿ ಈ ರಾಸಾಯನಿಕ ಸಂದೇಶಕ್ಕೆ ಸಂವಾದಿಯಾದ ವಿದ್ಯುತ್ ಸಂದೇಶವಾಗಿ ಪರಿವರ್ತಿಸಿಕೊಂಡು ತನ್ನ ನರತಂತುವಿನ (axon) ತುದಿಯವರೆಗೂ ಸಾಗಿಸುತ್ತದೆ. ಅಲ್ಲಿ ಈ ವಿದ್ಯುತ್ ಸಂದೇಶ ರಾಸಾಯನಿಕ ಸಂದೇಶವಾಗಿ ಪಕ್ಕದ ನರಕೋಶದ ನರಾಗ್ರಕ್ಕೆ ವಿದ್ಯುತ್ ಸಂದೇಶವಾಗಿ ವರ್ಗಾವಣೆಯಾಗುತ್ತದೆ. ಇದೊಂದು ರಿಲೇ ಓಟ ಇದ್ದ ಹಾಗೆ. ಪ್ರತಿ ಓಟಗಾರ ತನ್ನ ಓಟದ ಕೊನೆಯಲ್ಲಿ ತನ್ನ ರಿಲೇ ದಂಡವನ್ನು ತನ್ನ ಸಹ ಓಟಗಾರನಿಗೆ ತಲುಪಿಸುವಾಗ ಒಂದಷ್ಟು ತಡವಾಗುತ್ತದೆ. ನರ ಸಂದೇಶಗಳು ವಿದ್ಯುತ್ ಸಂದೇಶಗಳಾದರೂ ವಿದ್ಯುತ್ ನ ವೇಗ ಅವಕ್ಕಿಲ್ಲ. ಏಕೆಂದರೆ ಪ್ರತೀ ನರ ಸಂಪರ್ಕದಲ್ಲಿ ವಿದ್ಯುತ್ ಸಂದೇಶ ರಾಸಾಯನಿಕ ಸಂದೇಶವಾಗಿ ರಾಸಾಯನಿಕ ಸಂದೇಶ ನರ ಸಂದೇಶವಾಗಿ ಬದಲಾಗುವ ರಿಲೇ ಓಟ ನಡೆಯುತ್ತಲೇ ಇರಬೇಕಾಗುತ್ತದೆ. ಆದರೆ ಸಸ್ಯಗಳಲ್ಲಿ ಈ ರೀತಿಯ ನಿಯಂತ್ರಣಾ ವ್ಯವಸ್ಥೆ ಇಲ್ಲದೇ ಇರುವುದರಿಂದ ಸಸ್ಯಗಳು ತಕ್ಷಣವೇ ಸ್ಪಂದಿಸಲಾರವು. ಏನಿದ್ದರೂ ಬೆಳವಣಿಗೆಯ ಮೂಲಕ ಇದನ್ನು ಸಾಧಿಸಬೇಕಾಗುತ್ತದೆ. ಆದ್ದರಿಂದ ಸಸ್ಯಗಳಲ್ಲಿ ಚಲನೆಯನ್ನು ಬೆಳವಣಿಗೆ ಎಂದು ಪರಿಗಣಿಸುವುದು.

ಹಾಗಾದರೆ ಸಸ್ಯಗಳು ಸಂವೇದನೆಗಳಿಗೆ ತಕ್ಷಣ ಪ್ರತಿಕ್ರಿಯೆ ತೋರಿಸಲಾರವೇ? ಎಂದರೆ ಅದು ತಪ್ಪು. ನಾಚಿಕೆ ಮುಳ್ಳಿನ ಗಿಡವನ್ನು ಮುಟ್ಟಿದಾಗ ಅದರ ಎಲೆಗಳು ಮಡಚಿಕೊಳ್ಳುತ್ತವೆ. ಹುಣಿಸೆ, ದೇವದಾರು, ಚಕ್ತೆ ಗಿಡದ ಎಲೆಗಳು ಸಂಜೆ ಬಾಗಿಲು ಹಾಕಿ ಬೆಳಗಾಗುತ್ತಿದ್ದಂತೆ ಸೂರ್ಯನ ಬಿಸಿಲಿಗೆ ಮುಖ ಒಡ್ಡುತ್ತವೆ. ಸೂರ್ಯಕಾಂತಿಯ ಹೂ ಗುಚ್ಛ (inflorescence) ಬೆಳಗಿನ ಸೂರ್ಯನ ಕಡೆಗೆ ಬಾಗುತ್ತವೆ. ನೆಪೆಂತಿಸ್ ಗಿಡದ ಹೂಜಿಯ ಮುಚ್ಚಳ ಒಂದು ಕೀಟ ಒಳ ಹೋಗುತ್ತಿದ್ದಂತೆ ಮುಚ್ಚಿಕೊಳ್ಳುತ್ತದೆ. ಡ್ರಾಸಿರಾದ ಮತ್ತು ವೀನಸ್ ಫ್ಲೈ ಟ್ರಾಪ್ ನ ಇಬ್ಬನಿ ಕಡ್ಡಿಗಳು ಒಂದು ಕೀಟ ತಮ್ಮ ಎಲೆಯೊಳಗೆ ಬಂದ ತಕ್ಷಣ ಮುಚ್ಚಿಕೊಳ್ಳುತ್ತವೆ. ಇದನ್ನು ತಕ್ಷಣದ ಸಂವೇದನಾ ಚಲನೆ (immediate response movements) ಎನ್ನುತ್ತೇವೆ. ಈ ತಕ್ಷಣದ ಚಲನೆಗಳು ನರ ಸಂದೇಶಗಳಿಂದ ನಿರ್ದೇಶಿಲ್ಪಡುವಂತಹದ್ದಲ್ಲ. ಇವುಗಳು ಎಲೆಗಳ ತೊಟ್ಟಿನಲ್ಲಿನ ಕೋಶಗಳಲ್ಲಿ ನೀರಿನ ಒತ್ತಡ ವ್ಯತ್ಯಾಸವಾಗುವುದರಿಂದ (osmotic pressure) ಉಂಟಾಗುವ ಕ್ರಿಯೆಗಳು. ಇದರ ವಿವರಣೆಯನ್ನು ನಾನು ಜೀವಶಾಸ್ತ್ರದಲ್ಲಲ್ಲ ಬದಲಾಗಿ ಭೌತಶಾಸ್ತ್ರದಲ್ಲಿ ಹುಡುಕಬೇಕು ಅಂದುಕೊಳ್ಳಬಹುದು. ಆದರೆ ಹಾಗೆ ವ್ಯತ್ಯಾಸ ಮಾಡಿಕೊಳ್ಳಲು ನಿರ್ದೇಶನ ಎಲ್ಲಿಂದ ಬಂತು ಎಂದು ವಿವರಿಸುವುದು ಕಷ್ಟವೇ.

ಹಾಗಾದರೆ ಮೆದುಳಿನ ವ್ಯವಸ್ಥೆಯೇ ಇಲ್ಲದ ಸಸ್ಯಗಳನ್ನು ಬೆಳಕಿನ ಕಡೆಗೆ ಬಾಗಿಸುವವರು ಯಾರು? ಇದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article