-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 132

ಸ್ಫೂರ್ತಿಯ ಮಾತುಗಳು : ಸಂಚಿಕೆ - 132

ಸ್ಫೂರ್ತಿಯ ಮಾತುಗಳು : ಸಂಚಿಕೆ - 132
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

                     

ರಾಜನಾದವನ ಧರ್ಮನೀತಿಯು ಹೇಗಿರಬೇಕೆಂದು ಬಹಳ ಸೊಗಸಾಗಿ ವಿದುರ ವಿವರಿಸಿದ್ದಾನೆ. “ಏಕಯಾ ದ್ವೇ ವಿನಿಶ್ಚಿತ್ಯೇ ತ್ರೀಂ ಚತುರ್ಭಿಃ ವಶೇ ಕುರು, ಪಂಚಜಿತ್ವ ಷಟ್ ವಿದಿತ್ವಾ ಸಪ್ತಹಿತ್ವಾ ಸುಖೀಭವ”. ಒಂದು, ಎರಡು ಮೂರು ನಾಲ್ಕು ಐದು ಆರು, ಏಳು ಎಂದು ಕೇವಲ ಸಂಖ್ಯೆಗಳನ್ನು ಹೇಳುತ್ತಾ ನೀತಿ ಬೋಧನೆ ಮಾಡಿದ್ಧಾನೆ. ಈ ಸಂಖ್ಯೆಗಳಲ್ಲೇ ರಾಜಧರ್ಮದ ಮರ್ಮ ಮತ್ತು ಚಮತ್ಕಾರವಿದೆ. ಶ್ಲೋಕವನ್ನು ಓದುವುದರಿಂದ ರಾಜನಿಗೇ ಅರ್ಥವಾಗದು, ಇನ್ನು ಜನಸಾಮಾನ್ಯರಿಗೆ ಅರ್ಥವಾಗುವುದಾದರೂ ಹೇಗೆ? ಹಾಗಾಗಿ ಇದೊಂದು ಒಗಟು ಶ್ಲೋಕವೆಂದು ಅಂದಾಜಿಸಿ ಸಂಖ್ಯೆಗಳ ಒಳಹೊಕ್ಕು ಅರ್ಥವನ್ನು ಮಾಡುವ ಪ್ರಯತ್ನ ಮಾಡಬೇಕಾಗುತ್ತದೆ.

“ಏಕಯಾ ದ್ವೇ ನಿಶ್ಚಿತ್ಯ” ಒಂದರಿಂದ ಎರಡನ್ನು ನಮ್ಮದಾಗಿಸಬೇಕು, ಒಂದರ ಮೂಲಕ ಎರಡನ್ನು ಜಯಿಸಬೇಕು ಎಂದು ವಿವರಣೆಗೆ ಮುಂದಾದರೆ ಒಂದೇನು? ಎರಡೇನು ಎಂಬ ಇನ್ನೊಂದು ಕಗ್ಗಂಟು ಕಾಣಿಸುತ್ತದೆ. ಒಂದರಿಂದ ಎಂದರೆ 'ವಿವೇಕ' ದಿಂದ ಎಂದು ತಿಳಿಯಬೇಕು. ಹಾಗಾದರೆ ಎರಡೇನು? ಅಧ್ಯಾಪಕರು ವಿದ್ಯಾರ್ಥಿಯನ್ನು ಮೌಲ್ಯ ಮಾಪನ ಮಾಡುವಾಗ ಎರಡೇ ಎರಡು ಚಿಹ್ನೆಗಳನ್ನು ಹಾಕುತ್ತಾರೆ. ಒಂದು ಸರಿ (Right), ಇನ್ನೊಂದು ತಪ್ಪು(wrong). ತನ್ನ ವಿವೇಕದ ಮೂಲಕ ತಾನು ಮಾಡುವುದು ಸರಿಯಿದೆಯೇ, ತಪ್ಪಾಗಿದೆಯೇ ಎಂಬುದನ್ನು ಬುದ್ಧಿಮೂಲಕ ನಿರ್ಧರಿಸ ಬಲ್ಲವ ಸಮರ್ಥನಾದ ರಾಜನಾಗಲು ಸಾಧ್ಯ. ಸರಿ ತಪ್ಪುಗಳನ್ನು ವಿವೇಕದ ಮೂಲಕ ನಿರ್ಣಯಿಸಬೇಕು ಎಂಬ ಸಂದೇಶ ಅಥವಾ ನೀತಿ ಏಕಯಾ ದ್ವೇ ನಿಶ್ಚಿತ್ಯ ಎಂಬ ಶ್ಲೋಕ ಭಾಗದಲ್ಲಿದೆಯಲ್ಲವೇ?

“ತ್ರೀಂ ಚತುರ್ಭಿಃ ವಶೇ ಕುರು” ಮೂರನ್ನು ನಾಲ್ಕರ ಮೂಲಕ ವಶಮಾಡು ಎಂದು ಶ್ಲೋಕ ಭಾಗದಿಂದ ಅರ್ಥವಾಗುವುದಾದರೂ ಆ ಮೂರು ಮತ್ತು ನಾಲ್ಕು ಏನು? ಮೂರು ಎಂದರೆ ಮೂರು ರೀತಿಯ ಜನರು. ನಮ್ಮ ನಡುವೆ ಮೂರು ರೀತಿಯ ಜನರಿರಿರುತ್ತಾರೆ, ಮೊದಲನೆಯವರು ನಮ್ಮ ಅತಿ ಆಪ್ತರು, ಎರಡನೇ ವರ್ಗದವರೆಂದರೆ ತಮಗೆ ಬೇಕೆಂದಾದಾಗ ನಮ್ಮ ಜತೆ ಸೇರುವವರು ಮತ್ತು ಮೂರನೇಯವರು ತಟಸ್ಥರು. ಈ ಮೂರೂ ವಿಧದ ಜನರನ್ನು ಆಳಬೇಕಾದುದು ಅಥವಾ ನಿಭಾಯಿಸಬೇಕಾದುದು ರಾಜ ಧರ್ಮ. ಅತ್ಯಾಪ್ತರು ಪ್ರತಿಯೊಂದರಲ್ಲೂ ಸಹಕರಿಸುತ್ತಾರೆ. ಸೂಕ್ತವಾದುದೆಲ್ಲವನ್ನೂ ಅವರು ಬೆಂಬಲಿಸುವುದರಿಂದ ರಾಜನಿಗೆ ಆಡಳಿತದಲ್ಲಿ ಇವರಿಂದ ಸಮಸ್ಯೆಗಳಾಗಲಾರವು.  ಎರಡನೇ ವರ್ಗವೊಂದನ್ನು ಮೇಲೆ ಹೇಳಿದೆಯಲ್ಲವೇ? ಅವರು ಪ್ರಳಯಾಂತಕರಾಗದೇ ಇದ್ದರೂ ಪ್ರತಿಯೊಂದು ನೀತಿಯನ್ನೂ ವಿರೋಧಿಸುವ ಜಾಯಮಾನ ಹೊಂದಿರುತ್ತಾರೆ. ರಾಜನ ಅತ್ಯಾಪ್ತರಿಗೆ ಅನುಕೂಲವಾದಾಗ, ಉಳಿದವರು, ವಿಶೇಷವಾಗಿ ಎರಡನೇ ವರ್ಗದವರು ರಾಜನ ನೀತಿ ನಿಯಮಗಳು ಸರಿಯಿದ್ದರೂ ಅದನ್ನು ವಿರೋಧಿಸ ಬಹುದು. ಇಂತಹ ಸಂದರ್ಭಗಳಲ್ಲಿ ರಾಜನಾದವನಿಗೆ ನೆರವಾಗುವುದೇ ಆತನಲ್ಲಿರುವ ನಾಲ್ಕು ಗುಣಗಳು. ಈ ಗುಣಗಳಿಗೆ ಚತುರೋಪಾಯಗಳು ಎಂದೂ ಹೇಳುತ್ತೇವೆ. ಸಾಮ, ದಾನ, ಭೇದ, ದಂಡ. ಇವೇ ಆ ನಾಲ್ಕು ಉಪಾಯಗಳು. 

ಅತ್ಯಾಪ್ತರು ಬಹಳ ಬೇಗನೆ ರಾಜನ ನೀತಿಯನ್ನು ಒಪ್ಪುವರು. ಉಳಿದವರಲ್ಲಿ ಕೆಲವರಿಗೆ ಸಮಾಧಾನ ಹೇಳಿ ಒಪ್ಪಿಸಬಹುದು. ಸಮಾಧಾನ ಅಥವಾ ಸಾಂತ್ವನದ ಮದ್ದು ಸಾಕಾಗುತ್ತದೆ. ಇನ್ನು ಕೆಲವರಿಗೆ ಏನನ್ನಾದರೂ ಪರಿಹಾರ ಯಾ ಪರ್ಯಾಯವಾದುದನ್ನು ಕೊಟ್ಟು ಮನವೊಲಿಸಬಹುದು. ಅದುವೇ ದಾನ. “ಏನೇ ಆಗಲಿ,” ನಾವು ‘ಬಗ್ಗೆವು, ಒಪ್ಪೆವು’ ಎಂಬ ಮೂರನೇಯ ವರ್ಗಕ್ಕೆ ಭೇದೋಪಾಯ ಯಾ ದಂಡ ನೀತಿಯೇ ಬೇಕಾಗಬಹುದು. ದಂಡಂ ದಶ ಗುಣಂ. ದಂಡಕ್ಕೆ ಅಂತಹ ಶಕ್ತಿಯಿರುವುದರಿಂದಲೇ ಜಗತ್ತಿನಲ್ಲಿ ನ್ಯಾಯ ಜೀವಂತವಾಗಿ ಉಳಿದಿದೆಯಲ್ಲವೇ?
ಮೇಲಿನ ಶ್ಲೋಕದಲ್ಲಿ ”ಪಂಚ ಜಿತ್ವ” ಎಂದು ಹೇಳಿದೆ. ಐದನ್ನು ಜಯಿಸು, ಆ ಐದು ಯಾವುದು? ಮನುಷ್ಯನಲ್ಲಿರುವ ಐದು ಕರ್ಮೇಂದ್ರಿಯಗಳು ಮತ್ತು ಐದು ಜ್ಞಾನೆಂದ್ರಿಯಗಳನ್ನು ತಿಳಿದಿದ್ದೇವೆ. ಬಾಯಿ, ಕೈ, ಕಾಲು, ಗುದ ಮತ್ತು ಜನನೇಂದ್ರಿಯಗಳೇ ಕರ್ಮೇಂದ್ರಿಯಗಳು. ಕಣ್ಣು ಮೂಗು ಕಿವಿ ನಾಲಗೆ ಮತ್ತು ಚರ್ಮ ಜ್ಞಾನೇಂದ್ರಿಯಗಳು. ಇಂದ್ರಿಯಗಳನ್ನು ಗೆಲ್ಲಲಾಗದವನು ಬೇರೆ ಬೇರೆ ಸಂದರ್ಭಗಳಲ್ಲಿ ಸೋಲಬಹುದು. ಇಂದ್ರಿಯಗಳನ್ನು ತಮ್ಮ ನಿಯಂತ್ರಣದಲ್ಲಿಡುವವನು ಸೋಲಲಾರ. 
ಷಟ್ ದ್ವಿತ್ವ ಎಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ ಮಾತ್ಸರ್ಯಗಳೆಂಬ ಷಡ್ವೈರಿಗಳು. ಆರೂ ವೈರಿಗಳನ್ನು ಗೆದ್ದರೆ ಅತ್ಯುತ್ತಮ ರಾಜ. ಅಲ್ಲದೆ ರಾಜನು ಏಳು ವಿಚಾರಗಳಲ್ಲಿ ಅಹಿತವಾಗದಂತೆ ಎಚ್ಚರಿಕೆಯಿಂದಿರಬೇಕು. ಜೂಜು, ಹೆಂಡ, ಸ್ತ್ರೀ ಲೋಲುಪತೆ, ಕಟು ಮಾತು, ಬೇಟೆ ಹುಚ್ಚು, ವೃಥಾ ವ್ಯಯ, ಕಠಿಣ ಶಿಕ್ಷೆ. ವಿದುರನು ಹೇಳಿದಂತಹ ರಾಜನನ್ನು ಹುಡುಕಲು ಅಸಾಧ್ಯ. ಶ್ರೀರಾಮಚಂದ್ರ ಅಂತಹ ಗುಣಗಳ ಸಂಭೂತನಾಗಬಹುದಷ್ಟೇ. ವಿದುರ ಹೇಳುವ ರಾಜಧರ್ಮ ಆಳುವವರಿಗಷ್ಟೇ ಮೀಸಲೆನ್ನದೆ ಪ್ರಜೆಗಳೆಲ್ಲರಿಗೂ ಅಗತ್ಯವೆಂಬುದನ್ನು ನಾವು ಅರಿಯಬೇಕು.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
**********************************************


Ads on article

Advertise in articles 1

advertising articles 2

Advertise under the article