-->
ನಾನು ಮೆಚ್ಚಿದ ಶಿಕ್ಷಕರು : ಹಿರಿಯರ ಬರಹಗಳು : ಸಂಚಿಕೆ - 02

ನಾನು ಮೆಚ್ಚಿದ ಶಿಕ್ಷಕರು : ಹಿರಿಯರ ಬರಹಗಳು : ಸಂಚಿಕೆ - 02

ಶಿಕ್ಷಕರ ದಿನಾಚರಣೆಯ ವಿಶೇಷ - 2024 
ನಾನು ಮೆಚ್ಚಿದ ಶಿಕ್ಷಕರು
ಹಿರಿಯರ ಬರಹಗಳು : ಸಂಚಿಕೆ - 02


ಶಿಕ್ಷಕರ ದಿನಾಚರಣೆ - 2024 ವಿಶೇಷತೆಯಾಗಿ 'ನಾ ಮೆಚ್ಚಿದ ಶಿಕ್ಷಕರು' ವಿಷಯದಲ್ಲಿ ತಮ್ಮ ತಮ್ಮ ನೆಚ್ಚಿನ ಶಿಕ್ಷಕರ ಕುರಿತಾಗಿ.... ಕೇವಲ ಒಂದೇ ದಿನದ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯ ಜಗಲಿಯ ಹಿರಿಯರು ಬರಹಗಳನ್ನು ಕಳುಹಿಸಿಕೊಟ್ಟಿದ್ದೀರಿ... ನಿಮಗೆಲ್ಲ ಪ್ರೀತಿಪೂರ್ವಕ ಧನ್ಯವಾದಗಳು...
      ಎಲ್ಲಾ ಬರಹಗಳನ್ನು ಮಕ್ಕಳ ಜಗಲಿಯಲ್ಲಿ - ಸಂಚಿಕೆಗಳ ರೂಪದಲ್ಲಿ ಪ್ರಕಟಿಸುತ್ತೇವೆ... ದ್ವಿತೀಯ ಸಂಚಿಕೆಯ ಬರಹಗಳು ಇಲ್ಲಿವೆ.... ತಾರಾನಾಥ್ ಕೈರಂಗಳ
                      
       
 
   ಅವರು ನನ್ನನ್ನೆಂದೂ ತಿದ್ದಲಿಲ್ಲ, ತೀಡಲಿಲ್ಲ, ಬುದ್ಧಿ ಹೇಳಲೂ ಇಲ್ಲ. ನನ್ನನ್ನು ನಂಬಿದ್ದರು ಅಷ್ಟೇ. ಸುಮ್ಮನೇ ನಂಬಿದ್ದರು…. ಆದರೆ ಆ ನಂಬಿಕೆ ಇದೆಯಲ್ಲಾ ? ಅದೆಷ್ಟು ಗಟ್ಟಿಯಾಗಿತ್ತು ಎಂದರೆ ಅದು ನನ್ನನ್ಯಾವತ್ತೂ ಸೋಲದಂತೆ ತಡೆದಿತ್ತು. ಹಾದಿ ತಪ್ಪದಂತೆ ಕಾಪಾಡಿತ್ತು. ಕುಸಿದಾಗೆಲ್ಲಾ ಧೈರ್ಯ ನೀಡಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನನ್ನನ್ನೇ ನಾನು ನಂಬುವಂತೆ ಮಾಡಿತ್ತು. 
ಅದು ಪ್ರಥಮ ಪಿ.ಯು. ನ ಪ್ರಥಮ ದಿನ. ಮೈಮುಚ್ಚುವಂತೆ ಸೀರೆ ಧರಿಸಿ ಮಧುರ ದನಿಯಲ್ಲಿ ಸ್ಪಷ್ಟವಾಗಿ ಒಂದಿಷ್ಟೂ ತೊದಲದಂತೆ ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದ ಮೇಡಂ ಮೊದಲಿಗೇ ನನಗಿಷ್ಟವಾಗಿ ಹೋದರು. ಅವರ ತರಗತಿಯನ್ನು ತಪ್ಪಿಸಿಕೊಳ್ಳುವ ಮಾತೇ ಇರಲಿಲ್ಲ. ಅವರ ಉಪನ್ಯಾಸಗಳನ್ನು ಗಮನವಿಟ್ಟು ಕೇಳಿದರೆ ಮತ್ತೆ ಪರೀಕ್ಷೆಗಳಿಗೆ ಕಷ್ಟಪಟ್ಟು ಓದುವ ಪ್ರಮೇಯವೇ ಬರುತ್ತಿರಲಿಲ್ಲ. ಅರ್ಥಶಾಸ್ತ್ರಜ್ಞರ ವ್ಯಾಖ್ಯಾನಗಳನ್ನು ಒಂಚೂರೂ ಮರೆಯದಂತೆ ಕರಿಹಲಗೆಯ ಮೇಲೆ ಬರೆದು ವಿವರಿಸುತ್ತಿದ್ದ ಪರಿ ಇದೆಯಲ್ಲಾ ? ನಿಜವಾಗಲೂ ಅದ್ಭುತ. ಅರ್ಥಶಾಸ್ತ್ರದ ಈ ಉಪನ್ಯಾಸಕಿ ನನ್ನ ಬದುಕಿನ ಬಹು ದೊಡ್ಡ ಆಸ್ತಿ. 

ಅದೊಂದು ದಿನ ಯಾವುದೋ ಪ್ರಶ್ನೆ ಕೇಳಿದರು. ಯಾವಾಗಲೂ ಕೇಳಿದೊಡನೆ ಉತ್ತರಿಸುತ್ತಿದ್ದ ನನಗೂ ಆ ದಿನ ಉತ್ತರ ನೆನಪಾಗಲಿಲ್ಲ. ನನಗಿಂತ ಮೊದಲು ಹತ್ತಾರು ಸಹಪಾಠಿಗಳು ಉತ್ತರ ಗೊತ್ತಿಲ್ಲದೆ ನಿಂತೇ ಇದ್ದರು. ಆದರೆ ಅವರು “ಶ್ರೀಕಲಾ ನಿನಗೂ ಗೊತ್ತಿಲ್ವಾ ? ನೂರು ಬಾರಿ ಬರಿ ಹಾಗಾದ್ರೆ” ಎಂದರು. ಒಂಥರಾ ಅವಮಾನ ಅನಿಸಿತ್ತು. ಉಳಿದವರಿಗೆ ಯಾವುದೇ ಶಿಕ್ಷೆ ಇಲ್ಲ… ನನಗೆ ? ಸರಿ ತರಗತಿ ಮುಗಿದ ತಕ್ಷಣ ಅಪರಾಹ್ನ ಊಟವನ್ನೂ ಮಾಡದೇ ಗೆಳತಿಯರ ಮಾತನ್ನೂ ಕೇಳದೇ ಬರೆಯಲು ಪ್ರಾರಂಭಿಸಿದೆ. ಗೆಳತಿಯರೆಲ್ಲಾ ಆ ಮೇಡಂ ಬಳಿ ವಿಚಾರ ಹೇಳಿದರು. ಅವರೇ ಸ್ವತಃ ತರಗತಿಗೆ ಬಂದರು… “ಎಂತದಾ ಶ್ರೀಕಲಾ ? ನಾನು ಕುಶಾಲಿಗೆ ಹೇಳಿದ್ದಲ್ವಾ ? ಸಾಕು ಬರ್ದದ್ದು… ಊಟ ಮಾಡು” ಅಂತ ಪುಸ್ತಕ ತೆಗೆದುಕೊಂಡು ಅವರ ಕೊಠಡಿಗೆ ತೆರಳಿದರು. ಇತ್ತೀಚೆಗೆ ನನ್ನ ಮಗಳಿಗೂ ಇಂತಹ ಪರಿಸ್ಥಿತಿ ಬಂದಿತ್ತು. ಅವಳು ಬೇಸರಿಸಿಕೊಂಡಾಗ ನಾನು “ಪುಟ್ಟಾ ಅದು ಅವರು ನಮ್ಮ ಮೇಲಿಟ್ಟಿರುವ ಅಭಿಮಾನದ ದ್ಯೋತಕ. ನಮ್ಮನ್ನು ಉಳಿದವರಂತೆಯೇ ಎಂದು ಪರಿಗಣಿಸಿದಾಗ ಇದೆಲ್ಲಾ ಬರುವುದಿಲ್ಲ…. ಆ ನಂಬಿಕೆಯನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ” ಎಂದು ಧೈರ್ಯದಿಂದ ಹೇಳಿದ್ದೆ. ಇದು ನನ್ನ ಉಪನ್ಯಾಸಕಿ ಕಲಿಸಿಕೊಟ್ಟ ಜೀವನ ಪಾಠ. 

     ದ್ವಿತೀಯ ಪಿ.ಯು. ತರಗತಿಯಲ್ಲಿ ವಿಠಲ ಪಿ.ಯು. ಕಾಲೇಜಿಗೇ ಮೊದಲ ಡಿಸ್ಟಿಂಕ್ಷನ್ ಗಳಿಸಿದಾಗ, ಅದಕ್ಕಾಗಿ ವೇದಿಕೆಯಲ್ಲಿ ಸನ್ಮಾನಿಸಲ್ಪಟ್ಟಾಗ, ಇತ್ತೀಚೆಗೆ ಹಳೆ ವಿದ್ಯಾರ್ಥಿ ನೆಲೆಯಲ್ಲಿ ಗೌರವ ಪಡೆದಾಗಲೆಲ್ಲಾ ನಾನು ನನ್ನ ಉಪನ್ಯಾಸಕಿಯ ಕಣ್ಣುಗಳನ್ನೇ ಅರಸುತ್ತಿದ್ದೆ. ಅಲ್ಲಿ ಸೂಸುವ ಅಭಿಮಾನ ಇದೆಯಲ್ಲಾ ? ಅದು ನನಗೆ ಉಳಿದೆಲ್ಲವುಗಳಿಗಿಂತ ಮಿಗಿಲು. ಕಾಲೇಜಿನಲ್ಲಿದ್ದಷ್ಟು ದಿನ ಮಾತ್ರವಲ್ಲ, ಈಗಲೂ ನನ್ನ ಪ್ರತೀ ಸಣ್ಣ ಸಣ್ಣ ಬೆಳವಣಿಗೆಗಳಿಗೆಲ್ಲಾ ಪ್ರೋತ್ಸಾಹಿಸುವ ಅವರು, ನಾನ್ಯಾವತ್ತೂ ಸರಿಯಾದ ದಾರಿಯಲ್ಲೇ ನಡೆಯುತ್ತೇನೆ ಅಂತ ಬಲವಾಗಿ ನಂಬಿದ್ದಾರೆ. ನಾನು ಹಿಂಜರಿದ ಸಮಯಗಳಲ್ಲಿ “ನೀನೆಂತ ಅಂತ ನಿನಗೆ ಗೊತ್ತಿಲ್ಲ ಶ್ರೀಕಲಾ, ನನಗೆ ಗೊತ್ತಿದೆ” ಅಂತ ಹುರಿದುಂಬಿಸುತ್ತಾರೆ. ಬದುಕಿನಲ್ಲಿ ಇದಕ್ಕಿಂತ ಬೇರೇನು ಬೇಕು....? 
     ಸದಾ ಮಧುರ ವಾತ್ಸಲ್ಯ ಸೂಸುವ ಚಂದ್ರಕಲಾ ಮೇಡಂ…. ಶಿಕ್ಷಕರ ದಿನಾಚರಣೆಯ ಶುಭಾಶಯ….
.................................... ಶ್ರೀಕಲಾ ಬಿ ಕಾರಂತ್
ವಿಟ್ಲ, ಅಳಿಕೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : +91 94817 58423
****************************************


            

    ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ 
       ಈ ಮಾತು ಗುರುಗಳ ಮಹತ್ವವನ್ನು ಎತ್ತಿ ಸಾರುತ್ತಿದೆ. ಗುರುವೇ ಬ್ರಹ್ಮ ವಿಷ್ಣು ಮಹೇಶ್ವರ ಹರ ಮುನಿದರೂ ಗುರು ಕಾಯುವನು ಎಂಬ ಉಕ್ತಿಯಂತೆ ನಾನು ಪ್ರಾಥಮಿಕ ಹಂತದಲ್ಲಿ ಓದುತ್ತಿದ್ದಾಗ ತುಂಬಾ ಕಡು ಬಡತನವಿತ್ತು. ಆಗ ನನ್ನ ನೆಚ್ಚಿನ ಗುರು ಶ್ರೀ ಮುರುಗೆಪ್ಪ ರವರು ನನ್ನ ಎಲ್ಲಾ ಖರ್ಚುಗಳನ್ನು ಭರಿಸುತ್ತಿದ್ದರು. ಹಾಗೂ ಉತ್ತಮ ಕಲಿಕೆಯ ಜೊತೆ ನಮ್ಮನ್ನು ಪ್ರಶಂಸಿಸುತ್ತಿದ್ದರು. ಒಂದು ದಿನ ನಾನು ಶಿಕ್ಷಕಿಯಾದರೆ ಎಂಬ ಪ್ರಬಂಧ ಬರೆಯಲು ತಿಳಿಸಿದಾಗ ನಾನು ಬರೆದ ಉತ್ತಮ ಪ್ರಬಂಧವನ್ನು ನೋಡಿ ನೀನು ಮುಂದೆ ಈ ಗುರಿ ಸಾಧಿಸುವವರೆಗೂ ನಿನ್ನ ಹಠ ಛಲ ಬಿಡಬಾರದು ಎಂದು ಉತ್ತೇಜನ ನೀಡಿದರು. ಮುಂದೆ ನಾನು ಓದಿ ಶಿಕ್ಷಕಿಯಾದಾಗ ನನ್ನ ಗುರು ಕಣ್ಮುಂದೆ ಬಂದು ಮೈ ರೋಮಾಂಚನಗೊಂಡಿತು. 
       ಮುಂದೆ ಪ್ರೌಢ ಹಂತಕ್ಕೆ ಹೋದಾಗ ಶೇಕ್ಸರ್, ಮೌನೇಶ ಮತ್ತು ಬೆನಕಣ್ಣ ಸರ್ ಈ ಮೂವರು ಗುರುಗಳು ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿದರು. ಗಣಿತ ಹಿಂದಿ ಸಮಾಜ ಪಾಠದಲ್ಲಿ ಆಸಕ್ತಿ ಬರುವಂತೆ ಬೋಧನೆ ಮಾಡುತ್ತಿದ್ದರು. ಅವರು ಮಾಡಿದ ಪಾಠಗಳು ಇನ್ನೂ ನಮ್ಮ ಕಣ್ಮುಂದೆ ಸುಳಿದಾಡುತ್ತಿವೆ.
      ಶಿಕ್ಷಕರು ಹೇಗಿರುತ್ತಾರೆ ಹಾಗೆ ಮಕ್ಕಳನ್ನು ರೂಪಿಸುತ್ತಾರೆ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿತ್ತು. ಈ ಎಲ್ಲಾ ಗುರುಗಳ ಸ್ಮರಣೆಯನ್ನು ನಾನು ಪ್ರತಿನಿತ್ಯವೂ ಕಣ್ಮುಂದೆ ತಂದುಕೊಂಡು ನನ್ನ ಮುದ್ದು ಮಕ್ಕಳಿಗೆ ಪಾಠ ಮಾಡುತ್ತೇನೆ. ಅದರಂತೆ ಈಗ ಶಿಕ್ಷಕ ವೃತ್ತಿಯಲ್ಲಿ ನನ್ನ ಮಕ್ಕಳನ್ನು ಪಾಠದ ಜೊತೆ ಸಾಹಿತ್ಯ ಸಂಗೀತ ಕವನವಾಚನ ಪ್ರತಿಭಾ ಕಾರಂಜಿ ಎಲ್ಲದರಲ್ಲಿ ತೊಡಗಿಸಿ ಕೊಳ್ಳುತ್ತಿದ್ದೇನೆ. ನನ್ನ ಕೈಯಲ್ಲಿ ಓದಿದಂತಹ ಮುದ್ದು ಮಕ್ಕಳು ಮುಂದೆ ಒಳ್ಳೆಯ ಸಾಹಿತಿಗಳಾಗಿ ಕವಿಗಳಾಗಿ ಉತ್ತಮ ನಾಗರಿಕರಾಗಿ ಸುಸಂಸ್ಕೃತ ವ್ಯಕ್ತಿಗಳಾಗಿ ತಂದೆ ತಾಯಿಗಳಿಗೆ ವಿಧೇಯಕರಾಗಿ ಬೆಳೆದು ಹೆಮ್ಮರವಾಗಲಿ ಎಂಬುದು ನನ್ನಯ ಆಶಯ.
................. ಶ್ರೀಮತಿ ಮಂಜುಳಾ ಸ ಹಿರೇಬಿದರಿ 
ಸಹಶಿಕ್ಷಕಿ 
ರಾಣೇಬೆನ್ನೂರು 
ಸ್ಫೂರ್ತಿ ಸಂದೀಪ ನಿಲಯ 
ವಿಕಾಸ ನಗರ ಫಸ್ಟ್ ಮೇನ್ ಸೆಕೆಂಡ್ ಕ್ರಾಸ್
ರಾಣೆಬೆನ್ನೂರು 
Mob : +91 98807 92627



   ನನ್ನೆಲ್ಲಾ ಪ್ರೀತಿ ಶಿಕ್ಷಕ, ಶಿಕ್ಷಕಿಯರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು....
     ಬದುಕಿನಲ್ಲಿ ಎದುರಾದ ಅನಿರೀಕ್ಷಿತ ಘಟನೆಯ ಮನಸ್ಥಿತಿಯಿಂದ ಹೊರಬರಲು.... ಸದಾ ಹುರಿದುಂಬಿಸುವ, ಕ್ರಿಯಾಶೀಲವಾಗಿಸುವ ಮನಸ್ಸುಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜ್ಞಾನದ ಕಡೆಗೆ ಮುಖ ಮಾಡಲು ನಿರ್ಧರಿಸಿದಾಗ ನಾನು ಕಂಡುಕೊಂಡ ನನ್ನ ಪ್ರೀತಿಯ ಗುರುಗಳು ಗೋಪಾಡ್ಕರ್ ಸರ್ ಮತ್ತು ಸುಮಂಗಲ ಮೇಡಂ. ಮನಸ್ಸಿನ ಪ್ರಫುಲ್ಲತೆಯನ್ನು ಹೆಚ್ಚಿಸುವ ಶಿಕ್ಷಣದ ಅಗತ್ಯವನ್ನು ಮನಗಂಡು ಸ್ವರೂಪ ಅಧ್ಯಯನ ಕೇಂದ್ರದ ಮೂಲಕ ತಮ್ಮ ಇಷುಧಿಯಲ್ಲಿರುವ ನೈಜ ಪ್ರಾಮಾಣಿಕ ಪ್ರಯೋಗಗಳನ್ನು ಪ್ರಯೋಗಿಸಿ, ಸ್ವಕಲಿಕೆಯೊಂದಿಗೆ ಮಕ್ಕಳ ಮನಸ್ಸನ್ನು ಹಗುರಗೊಳಿಸಿ, ಸಾಮರ್ಥ್ಯದ ಸಾಧ್ಯತೆಯೊಂದಿಗೆ ಆತ್ಮವಿಶ್ವಾಸ ತುಂಬುವ ನನ್ನ ಮನ ಮೆಚ್ಚಿದ ಶಿಕ್ಷಕರು. ಗೋಪಾಡ್ಕ ಸರ್ ಅವರು ಮೊದಲ ಭೇಟಿಯಲ್ಲಿಯೇ 'ಸಂತೋಷವನ್ನು ವೃದ್ಧಿಸಿರಿ' ಎಂಬ ಚಾರ್ಟ್ ತೋರಿಸಿ ಕೆಲಸವೇ ದೇಹದಲ್ಲಿ ಮತ್ತು ಮನಸ್ಸಿನಲ್ಲಿ ಉಂಟಾಗುವ ಗೊಂದಲವನ್ನು ಪರಿಹರಿಸಿ ಸಂತೋಷವನ್ನು ವೃದ್ಧಿಸುತ್ತದೆ ಎಂದರು. ಇದು ಅಂದಿನಿಂದ ನನ್ನನ್ನು ನಾನು ಯಾವುದಾದರೂ ಒಂದು ಹೊಸತನದ ಕಲಿಕೆಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಯಿತು. ನಾನು ಯಾರು....? ಎಲ್ಲಿದ್ದೇನೆ....? ಏನನ್ನು ಕೊಂಡು ಹೋಗ್ತಾ ಇದ್ದೇನೆ....? ಎಂಬ ಪ್ರಜ್ಞೆಯಲ್ಲಿ ನಮ್ಮನ್ನು ಸದಾ ಜಾಗೃತವಾಗಿರಿಸುತ್ತಾ ಕಷ್ಟ ಅನ್ನೋದು ಸುಖದ ಅನುಭವದ ದಾರಿ ಎಂಬ ಅರಿವನ್ನಿತ್ತವರು ಗೋಪಾಡ್ಕರ್ ಸರ್. 'ಸ್ವರೂಪ' ಮನೆಯ ವಾತಾವರಣದ ಪ್ರೀತಿಯ ಶಿಕ್ಷಣ ಇಲ್ಲಿ ನಮ್ಮನ್ನೆಲ್ಲ ಮಾತು, ಬರೆಹಗಳಲ್ಲಿ ತೊಡಸಿಕೊಳ್ಳಲು ಪ್ರೇರೇಪಿಸುವ ಮಾತೃ ಹೃದಯದ ಶಿಕ್ಷಕಿ ಸುಮಂಗಲ ಮೇಡಂ. ಬೆಳಗಿನಿಂದ ಸಂಜೆವರೆಗೆ ದಣಿವರಿಯದ ಉತ್ಸಾಹದಿಂದ ಮನಮುಟ್ಟುವಂತೆ ಮಾಡುವ ಅವರ ತರಗತಿಗಳು ನನಗೆ ಅಚ್ಚುಮೆಚ್ಚು. ಪುಸ್ತಕಗಳು ಮತ್ತು ಪ್ರಕೃತಿಯ ಬಗ್ಗೆ ಅಪಾರ ಪ್ರೀತಿ ಇರುವ ಮೇಡಂ ವಿದ್ಯಾರ್ಥಿಯ ಪುಸ್ತಕಕ್ಕೆ ಕಾಳಜಿಯಿಂದ ಬೈಂಡ್ ಹಾಕಿ ಕೊಟ್ಟಿರುವುದನ್ನು ಕಂಡಿದ್ದೇನೆ. ಸಣ್ಣ ಸಣ್ಣ ವಿಚಾರಗಳಲ್ಲಿಯೂ ಖುಷಿಯನ್ನು ಅನುಭವಿಸುವುದನ್ನು ತಿಳಿಸಿಕೊಟ್ಟವರು. ನಡೆವರೆಡವದೆ ಕುಳಿತರೆಡವರೆ ಎಂದು ನಮ್ಮನ್ನು ಸದಾ ಪ್ರೋತ್ಸಾಹಿಸಿ ಸ್ವರೂಪದ ಸುಖದ ಅನುಭವದೊಳಗಿರಲು ಸಾಧ್ಯವಾಗಿಸಿದ ಗೋಪಾಡ್ಕರ್ ಸರ್ ಮತ್ತು ಸುಮಂಗಲ ಮೇಡಂ ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ಪ್ರಜ್ಞೆಯಲ್ಲಿ ಮುನ್ನಡೆಸುತ್ತಿರುವ ಗುರುವಿಗೆ ಅಕ್ಷರ ನಮನ ಸಲ್ಲಿಸಲು ಅವಕಾಶವನ್ನಿತ್ತ ಜಗಲಿಯ ತಾರನಾಥ ಸರ್ ದಂಪತಿಗಳಿಗೂ ನನ್ನ ಪ್ರೀತಿಯ ನಮನಗಳು.
............................ ಕವಿತಾ ಶ್ರೀನಿವಾಸ ದೈಪಲ 
'ಚೈತನ್ಯ ' ನೆಲ್ಯಡ್ಕ, ಅಂತರ, 
ನರಿಕೊಂಬು ಅಂಚೆ ಮತ್ತು ಗ್ರಾಮ  
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : +91 94806 25773
******************************************

  

ಎಲ್ಲರಿಗೂ ನಮಸ್ಕಾರಗಳು... ಜೀವನವೆಂದರೆ ಕೇವಲ ಸಕಾರಾತ್ಮಕವಾದ ಘಟನೆಗಳಿಗೆ ಮಾತ್ರ ಸೀಮಿತವಲ್ಲ. ಜೀವನವೆಂದ ಮೇಲೆ ಅಲ್ಲಿ ನೋವು- ನಲಿವು, ಸರಿ -ತಪ್ಪು, ಆಚಾರ - ವಿಚಾರ ಹೀಗೆ ನಾನಾ ಮುಖವಾಡಗಳ ಧರಿಸುವ ಸಂದರ್ಭಗಳು ಎಲ್ಲರಿಗೂ ಬಂದೆ ಬರುತ್ತದೆ. ಎಲ್ಲವನ್ನೂ ಸಮವಾಗಿಯೇ ತೂಗಿಸಿಕೊಂಡು ನಡೆದರೆ ಮಾತ್ರ ಬಾಳು ಯಥಾವತ್ತಾಗಿ ಸಾಗುತ್ತದೆ. ಬದುಕನ್ನು ಸವೆಯಲು ಬಿಡದೆ ಸಾರಯುಕ್ತವಾಗಿ ಸವಿದಾಗ ಮಾನವ ಜನ್ಮ ಅತೀ ದೊಡ್ಡದೆಂಬ ಭಾವನೆ ನಿರಾಯಾಸವಾಗಿ ಹೊರಹೊಮ್ಮುತ್ತದೆ. ಈ ಎಲ್ಲ ಬೇಕು -ಬೇಡಗಳಲ್ಲಿ ಬದುಕಿಗೆ ಯಾವುದು ಸೂಕ್ತ ಎಂಬುವುದ ಅರ್ಥೈಸಿ, ದಾರಿ ತೋರುವವರೆ ನಿಜವಾದ ಶಿಕ್ಷಕರು.
     ಮಕ್ಕಳ ಜಗಲಿ ವೇದಿಕೆಯ ಎಲ್ಲಾ ಶಿಕ್ಷಕರಿಗೂ "ಶಿಕ್ಷಕರ ದಿನ" ದ ಹಾರ್ದಿಕ ಶುಭಾಶಯಗಳು.
      ಸಮಸ್ತ ಗುರುವರೇಣ್ಯರನ್ನು ಗೌರವಿಸುತ್ತಾ... ನಾನು ಇಂದು ಈ ಸಂಚಿಕೆಯಲ್ಲಿ, ನನ್ನ ಬರವಣಿಗೆಯ ಅಕ್ಷರಗಳಿಗೆ ಜೀವ ತುಂಬಿಸುವಲ್ಲಿ ಸ್ಪೂರ್ತಿಯಾಗಿರುವ ಗುರುಗಳಿಗೆ ಪದಗಳ ಮುಖೇನ ಗೌರವ ಸಲ್ಲಿಸಬೇಕಿಂದ್ದಿದ್ದೇನೆ.
      ನಾನು ಪ್ರಾಥಮಿಕ ಶಾಲೆಯಲ್ಲಿ ಕಲಿಯುತಿದ್ದ ಸಮಯವದು. ನಮ್ಮ ಗುರುಗಳೊಬ್ಬರು ದಿನಕ್ಕೊಂದು ವಿಷಯವ ನೀಡಿ ಹತ್ತು ಸಾಲು ಕವನ ರಚಿಸಿ ತರುವಂತೆ ಹೇಳುತ್ತಿದ್ದರು. ನದಿ, ಬೆಟ್ಟ, ಗಿಡಮರ, ಗಿಳಿ ಹೀಗೇ ಪ್ರಾರಂಭವಾದ ಕವನಗಳು ಇಂದು ನೂರಾರು ವಿಚಾರಗಳ ಮಹತ್ವವನರಿತು ಸಾಗುತ್ತಲಿವೆ. ನಾ ಬರೆದ ಕವನಗಳಿಂದು ನೂರರ ಗಡಿಯ ದಾಟಿ, ಬರೆದ ಪುಸ್ತಕ ದೊಳಗೇ ಬಂಧಿಯಾಗಿ ಕುಳಿತಿವೆ. ಹೊರ ಜಗಕೆ ಅನಾವರಣ ಗೊಳಿಸುವ ಆಸೆ ಮುಗಿಲಿನಷ್ಟಿದ್ದರೂ ಸಂದರ್ಭಕ್ಕಾಗಿ ತವಕಿಸುತ್ತಿದೆ. ನನ್ನ ಬೆರಳುಗಳಿಂದ ಹೊರ ಚಿಮ್ಮುವ ಪ್ರತೀ ಅಕ್ಷರಗಳಿಗೆ ನನ್ನ ಮೆಚ್ಚಿನ ಗುರುಗಳಾದ ಶೇಖರ ಪನ್ಯಾಡಿ ಇವರು ನೀಡಿದ ಸಲಹೆ, ಪ್ರೋತ್ಸಾಹವೇ ಕಾರಣ ಎಂಬ ಸತ್ಯವನ್ನು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ.
       ನನ್ನ ನೆಚ್ಚಿನ ಗುರುಗಳಿಗೂ ಶಿಕ್ಷಕರ ದಿನದ ಶುಭಾಶಯಗಳು. ಕಲೆಗೆ ಪ್ರೋತ್ಸಾಹವಿತ್ತ ಗುರುಗಳೇ ನಿಮಗೆಂದೆಂದಿಗೂ ನಾನು ಚಿರಋಣಿ. ಅವಕಾಶ ನೀಡಿದ ಜಗಲಿಯ ಬಳಗಕ್ಕೂ ಧನ್ಯವಾದಗಳು....
........................................... ವಿದ್ಯಾ ಗಣೇಶ್
ಚಾಮೆತ್ತಮೂಲೆ ತರವಾಡುಮನೆ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 99453 11853
********************************************




       ನಾನು ಮೆಚ್ಚಿದ ಶಿಕ್ಷಕರು ಎಂದಾಗ ನನ್ನ ಕಣ್ಣ ಮುಂದೆ ಬರುವ ಶಿಕ್ಷಕರೆಂದರೆ ಶ್ರೀಮತಿ ಗುಲಾಬಿ. ಶ್ರೀಮತಿ ವನಜಾಕ್ಷಿ ಹಾಗೂ ಶ್ರೀ ಪರಮೇಶ್ವರ. ಜಿ. ಹೆಗಡೆ ಸರ್. ಇಂದು ನಾನು ಶಿಕ್ಷಕ ವೃತ್ತಿಯನ್ನು ಆರಿಸಿಕೊಳ್ಳಲು ಮೂಲ ಕಾರಣವೇ ನನ್ನ ಶಿಕ್ಷಕರು. ಶಿಕ್ಷಕರು ತಾವು ಕಲಿತ ವಿದ್ಯೆಯನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುವುದು ಮಾತ್ರವಲ್ಲದೆ, ಜೀವನಕ್ಕೆ ಬೇಕಾಗುವ ಮೌಲ್ಯವನ್ನು ಕೂಡ ಕಲಿಸಿಕೊಡುತ್ತಾರೆ. ನನಗೆ ಇನ್ನೂ ಆ ದಿನಗಳ ನೆನಪಿದೆ, ನಾನು ಹತ್ತನೇ ತರಗತಿಯ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದಾಗ ನನ್ನನ್ನು ಹುರಿದುಂಬಿಸಿ ಇವಳು ಖಂಡಿತ ಮುಂದೆ ಪಾಸ್ ಆಗುತ್ತಾಳೆ, ಒಳ್ಳೆ ಅಂಕಗಳನ್ನೇ ಗಳಿಸುತ್ತಾಳೆ ಎಂದು ಹೇಳಿದ ಆ ಒಂದು ಮಾತೇ ಇವತ್ತು ನಾನು ಶಿಕ್ಷಕಿ ಆಗಲು ಕಾರಣ. ವಿದ್ಯಾರ್ಥಿಗಳು ಸೋತಾಗ ಶಿಕ್ಷಕರು ಹೇಳುವ ಒಂದೊಂದು ಮಾತು ಅವರ ಭವಿಷ್ಯವನ್ನೇ ನಿರ್ಧರಿಸುತ್ತದೆ. ಶಿಕ್ಷಕರ ಸಿಟ್ಟಿನಲ್ಲಿಯೂ ಪ್ರೀತಿಯನ್ನು ಕಂಡುಕೊಂಡಾಗ ಮಾತ್ರ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನವೂ ಪಾವನವಾಗುವುದು. ಈ ಒಂದು ಲೇಖನದ ಮೂಲಕ ನನ್ನ ಪ್ರೀತಿಯ ಗುರುವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಸಲ್ಲಿಸುತ್ತಿದ್ದೇನೆ.
........................................................ ಸೌಮ್ಯ 
ದಾಸಕೋಡಿ, ಬಾಳ್ತಿಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 99026 06128
****************************************



          
        ಅಕ್ಕರೆಯ ತೈಲವನ್ನೆರೆದು, ಜ್ಞಾನ ದೀವಿಗೆಯ ಬೆಳಗಿ, ನನ್ನ ಜೀವನಕ್ಕೆ ಬೆಳಕು ತೋರಿದ, ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು, ಮತ್ತೆ ಅಕ್ಕರೆಯ ತೈಲವೆರೆಸಿ ಕಿರು ಹಣತೆಗಳ ಬೆಳಗಲು ದಾರಿ ತೋರಿದ, ಪರಬ್ರಹ್ಮ ಸ್ವರೂಪಿ ನನ್ನೆಲ್ಲ ಗುರುಗಳನ್ನು ಸ್ಮರಿಸಲು ಅತ್ಯಂತ ಸಂತೋಷವೆನಿಸುತ್ತಿದೆ. 
     ನನ್ನ ಅಚ್ಚುಮೆಚ್ಚಿನ ಮೊದಲ ಗುರುಗಳೆಂದರೆ ನನ್ನ ಅಮ್ಮನ ಸಮಾನರಾದ ಚಿಕ್ಕಮ್ಮನವರಾದ ಶ್ರೀಮತಿ ರಾಧ ಟೀಚರ್. ಇವರು ನನಗೆ ಒಂದನೇ ತರಗತಿಯಿಂದ ಮೂರನೇ ತರಗತಿಯವರೆಗೆ ಮನೆಯಲ್ಲಿ ಪ್ರಾರಂಭಿಕ ಬುನಾದಿ ಹಾಕಿಕೊಟ್ಟವರು. ನಾನು ಕೋಪಿಯನ್ನು ಎಷ್ಟೇ ಅಂದವಾಗಿ ಬರೆದರೂ ಅದರಲ್ಲಿ ಇನ್ನೂ ಪರಿಣತಗೊಳಿಸಲು ಸದಾ ತಪ್ಪು ಹುಡುಕುತ್ತಾ ನನ್ನಲ್ಲಿ ಸರಿಪಡಿಸುತ್ತಿದ್ದರು. ಇಂದಿಗೂ ನನ್ನ ಅಕ್ಷರದ ಬಗ್ಗೆ ನನಗೆ ಹೆಮ್ಮೆ ಇದೆ. ನನಗೆ ಶಿಕ್ಷಕಿಯಾಗಿ ಅಮ್ಮನಂತೆ ಈಗಲೂ ಸಹ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಪಿಯುಸಿ ಮುಗಿಸಿ ಟಿಸಿಎಚ್ ಸೇರಿದಾಗ ಬೇಕಾದ ಪುಸ್ತಕಗಳು, ಮೊದಲ ಬಾರಿ ಇಂಗ್ಲಿಷ್ ಡಿಕ್ಷನರಿ, ಪ್ರವಾಸ ಹೋಗಲು ಬೇಕಾದ ಖರ್ಚು ವೆಚ್ಚಗಳು, ಎಲ್ಲವನ್ನು ನೀಡಿ ನನ್ನನ್ನು ಸ್ವಾವಲಂಬಿಯಾಗಿ ಬೆಳೆಸಿ ಇಂದಿಗೂ ಪ್ರೋತ್ಸಾಹಿಸಿ ಬೆಳೆಸುತ್ತಿರುವವರು. ಹಾಗೆಯೇ ನನ್ನ ಪ್ರಾಥಮಿಕ ಶಾಲೆಯಲ್ಲಿ ಇಷ್ಟವಾದ ಶಿಕ್ಷಕರೆಂದರೆ ಶ್ರೀ ಶಂಕರನಾರಾಯಣ ಭಟ್. ಇವರು ವಿಜ್ಞಾನ ವಿಷಯವನ್ನು ಕಣ್ಣಿಗೆ ಕಟ್ಟುವಂತೆ ಬೋಧಿಸಿದುದರಿಂದ ನನಗೆ ಮುಂದೆ ವಿಜ್ಞಾನವು ಆಸಕ್ತಿಯ ವಿಷಯವಾಗಿ ಅಧ್ಯಯನ ಮಾಡಲು ಸಾಧ್ಯವಾಯಿತು. ಗಣಿತ ಶಿಕ್ಷಕರಾದ ತಿರುಮಲೇಶ್ವರ ಭಟ್ ಗಣಿತವನ್ನು ಅತ್ಯಂತ ಸುಲಭದ ರೀತಿಯಲ್ಲಿ ಕಲಿಸಿಕೊಡುತ್ತಿದ್ದರು. ಇದರಿಂದ ಗಣಿತವೂ ಕೂಡ ಆಸಕ್ತಿಯ ವಿಷಯವಾಯಿತು. ಹಾಗೆ ನನ್ನ ಟಿಸಿಎಚ್ ನಲ್ಲಿ ಇದ್ದ ಚಿತ್ರಕಲಾ ಶಿಕ್ಷಕರಾದ ಜಿ ಆರ್ ಉಪಾಧ್ಯಾಯರ ಮೂಲಕ ಚಿತ್ರಕಲೆಯ ಮೂಲವನ್ನು ತಿಳಿಯಲು ಸಾಧ್ಯವಾಯಿತು. ಅಲ್ಲಿಯೇ ಇದ್ದ ನಾರಾಯಣ ಸರ್, ಮಂಜುನಾಥ ಪ್ರಭು, ಹೇಮಲತ ಮೇಡಂ ಕೂಡ ಪ್ರೀತಿಯ ಶಿಕ್ಷಕರಾಗಿದ್ದಾರೆ. ಈ ಎಲ್ಲ ಗುರುಗಳ ಹಾಗೂ ಇನ್ನಷ್ಟು ಗುರುಗಳ ಆಶೀರ್ವಾದದಿಂದ ಇಂದು ವೃತ್ತಿಯಲ್ಲಿ ಶಿಕ್ಷಕಿಯಾಗಿ ಹೆಮ್ಮೆ ಹಾಗೂ ತೃಪ್ತಿಯಿಂದ ಜೀವನ ಸಾಗಿಸಲು ಸಾಧ್ಯವಾಗಿದೆ. ಈ ಎಲ್ಲಾ ಶಿಕ್ಷಕ ವೃಂದದವರಿಗೆ ದೇವರು ಆಯುರಾರೋಗ್ಯ ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸಲಿ. ಎಲ್ಲ ಗುರುವರ್ಯರಿಗೂ ಶಿಕ್ಷಕ ದಿನಾಚರಣೆಯ ಅಚ್ಚುಮೆಚ್ಚಿನ ಶುಭಾಶಯಗಳನ್ನು ಕೋರುತ್ತಿದ್ದೇನೆ.
............................................. ವಿಶಾಲಾಕ್ಷಿ ಕೆ 
ಸಹಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ 
ಶಾಲೆ ಆನಡ್ಕ, ಶಾಂತಿಗೋಡು ಗ್ರಾಮ. 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 70220 90744
********************************************


          

Ads on article

Advertise in articles 1

advertising articles 2

Advertise under the article