-->
ನಾನು ಮೆಚ್ಚಿದ ಶಿಕ್ಷಕರು - ಮಕ್ಕಳ ಬರಹಗಳು : ಸಂಚಿಕೆ - 02

ನಾನು ಮೆಚ್ಚಿದ ಶಿಕ್ಷಕರು - ಮಕ್ಕಳ ಬರಹಗಳು : ಸಂಚಿಕೆ - 02

ಶಿಕ್ಷಕರ ದಿನಾಚರಣೆಯ ವಿಶೇಷ ಸಂಚಿಕೆ - 2024
ನಾನು ಮೆಚ್ಚಿದ ಶಿಕ್ಷಕರು
ಮಕ್ಕಳ ಬರಹಗಳು : ಸಂಚಿಕೆ - 02


ಶಿಕ್ಷಕರ ದಿನಾಚರಣೆ - 2024 ವಿಶೇಷತೆಯಾಗಿ 'ನಾ ಮೆಚ್ಚಿದ ಶಿಕ್ಷಕರು' ವಿಷಯದಲ್ಲಿ ತಮ್ಮ ತಮ್ಮ ನೆಚ್ಚಿನ ಶಿಕ್ಷಕರ ಕುರಿತಾಗಿ.... ಕೇವಲ ಒಂದೇ ದಿನದ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯ ಜಗಲಿಯ ವಿದ್ಯಾರ್ಥಿಗಳು ಬರಹಗಳನ್ನು ಕಳುಹಿಸಿಕೊಟ್ಟಿದ್ದೀರಿ... ನಿಮಗೆಲ್ಲ ಪ್ರೀತಿಪೂರ್ವಕ ಧನ್ಯವಾದಗಳು...
      ಎಲ್ಲಾ ಬರಹಗಳನ್ನು ಮಕ್ಕಳ ಜಗಲಿಯಲ್ಲಿ - ಸಂಚಿಕೆಗಳ ರೂಪದಲ್ಲಿ ಪ್ರಕಟಿಸುತ್ತೇವೆ... ದ್ವಿತೀಯ ಸಂಚಿಕೆಯ ಬರಹಗಳು ಇಲ್ಲಿವೆ.... ತಾರಾನಾಥ್ ಕೈರಂಗಳ



  ಶೀರ್ಷಿಕೆ: ನನ್ನ ಗುರುಗಳು ಮಹೇಶ್ ವಿ ಕರ್ಕೇರ ಸರ್

   ನಾನು ಲಿಖಿತಾ ಆರ್ ಸಾಲ್ಯಾನ್, 10ನೇ ತರಗತಿ.. ನನ್ನ ಶಿಕ್ಷಣ ಕ್ಷೇತ್ರದ ನೆಚ್ಚಿನ ಗುರು.. ನನ್ನ ಜೀವನ ಸಾಧನೆಯ ಸ್ಫೂರ್ತಿ… ಸದಾ ಹೊಸತನದ ಕನಸುಗಾರರು.. ಉತ್ತಮ ಮಾತುಗಾರರು …ಉತ್ತಮ ಭಾಷಣಕಾರರು... ನನ್ನಲ್ಲಿ ಪ್ರೌಢಶಾಲಾ ಹಂತದವರೆಗೆ ಯಾರು ಕಾಣದ ಪ್ರತಿಭೆಯನ್ನು ಗುರುತಿಸಿ ಕನಸುಗಳ ಸರಮಾಲೆಯನ್ನ ಕಟ್ಟಿಕೊಟ್ಟು… ಬೆಳೆಸಿದವರು.. ನನ್ನ ಗುರುಗಳು ಅವರೇ ಮಹೇಶ್ ವಿ ಕರ್ಕೇರ ಸರ್ ..
     ನಾನು ಒಂದನೇ ತರಗತಿಯಿಂದ 7ನೇ ತರಗತಿಯವರೆಗೆ ಮಾತುಗಾರಿಕೆಗೆಂದು ಯಾವುದೇ ವೇದಿಕೆ ಹತ್ತಿದವಳಲ್ಲ… ಆದರೆ ಎಂಟನೇ ತರಗತಿಗೆ ಬಂದ ಕೆಲವು ದಿವಸಗಳಲ್ಲಿ ನನ್ನೊಳಗಿದ್ದಂತಹ ಪ್ರತಿಭೆಯನ್ನು ಗುರುತಿಸಿ ಭಾಷಣ ಸ್ಪರ್ಧೆಯಲ್ಲಿ ಮೂರು ಬಾರಿ ರಾಜ್ಯ ಮಟ್ಟದ ವೇದಿಕೆ ಹತ್ತುವಂತೆ ಬಹುಮಾನಗಳನ್ನು ಗಳಿಸುವಂತೆ ಮಾಡಿದರು.. ಪ್ರಸ್ತುತ ಜಿಲ್ಲಾ ಇಂಟರಾಕ್ಟ್ ಪ್ರತಿನಿಧಿ ಅನ್ನೋ ರೋಟರಿ ಪದವಿಗೂ ಆಯ್ಕೆಗೊಂಡಿದ್ದೇನೆ… ಇದ್ಯಾವುದು ನನ್ನ ಕನಸಾಗಿರಲಿಲ್ಲ.. ನನ್ನ ಗುರಿ ಇದ್ದದ್ದು ನನ್ನ ಗುರುಗಳ ಕನಸು ನನಸು ಮಾಡುವುದು…ಈಡೇರಿಸುತ್ತಿರೋ ಹೆಮ್ಮೆ ನನ್ನದು. ಪಠ್ಯಪುಸ್ತಕದಲ್ಲಿರೋದನ್ನ ತಲೆಗೆ ತುರುಕುವುದೊಂದೇ ಶಿಕ್ಷಣವಲ್ಲ. ಮಗುವಿನಲ್ಲಿರುವ ಪ್ರತಿಭೆಯನ್ನ ಗುರುತಿಸಿ, ಪ್ರೋತ್ಸಾಹಿಸುವುದು ಶಿಕ್ಷಣ ಎಂಬುದನ್ನು ನಂಬಿದವರು ನಮ್ಮ ಗುರುಗಳು. ನನ್ನಂಥ ಎಷ್ಟೋ ವಿದ್ಯಾರ್ಥಿಗಳಿಗೆ ಅಹಲ್ಯ ರೂಪ ಕೊಟ್ಟ ಶಿಲ್ಪಿ ನನ್ನ ಗುರುಗಳು. ವಿವೇಕಾನಂದರ ಸ್ಪೂರ್ತಿ ಚಿಂತಕರಾದ ನನ್ನ ಗುರುಗಳು ನನ್ನ ಪಾಲಿಗೆ ರಾಮಕೃಷ್ಣರಂತಿಹರು. ಇವರಿಂದ ವಿದ್ಯಾರ್ಥಿಗಳಿಗಷ್ಟೇ ಕನಸು ಇರೋದಲ್ಲ. ಶಿಕ್ಷಕರಿಗೂ ಕನಸುಗಳು ಇರುತ್ತದೆ ಅನ್ನೋದನ್ನ ತಿಳಿದೆ. ಅದನ್ನ ಈಡೇರಿಸೋ ಜವಾಬ್ದಾರಿ ನಮ್ಮದು ಅನ್ನೋದನ್ನ ಅರಿತೆ. ಈ ನನ್ನ ಪೂಜ್ಯನೀಯ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು… ಈ ಲೇಖನ ಗುರುಗಳ ಚರಣಗಳಿಗೆ ಅರ್ಪಣೆ.. 
.................................. ಲಿಖಿತಾ ಆರ್ ಸಾಲ್ಯಾನ್
10ನೇ ತರಗತಿ
ಸರಕಾರಿ ಪ್ರೌಢಶಾಲೆ ಸಿದ್ಧಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************



    ಶೀರ್ಷಿಕೆ:  ಅರುಣ್ ಸರ್ ಮತ್ತು ರಮೇಶ್ ಸರ್...

    ನಾನು ಕೃತಿಕಾ, ಪ್ರಥಮ ಪಿಯುಸಿ, ಕಲಾ ವಿಭಾಗ.... ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದ ಕಡೆಗೆ ಕರೆದುಕೊಂಡು ಹೋಗುವ ಶಕ್ತಿಯೇ ಗುರು. ಮೊದಲನೆಯದಾಗಿ ನನ್ನೆಲ್ಲ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. 
       ನನಗೆ ಎಲ್ಲಾ ಶಿಕ್ಷಕರೂ ಕೂಡ ತುಂಬಾ ಇಷ್ಟ. ಆದರೆ ನಾನು ಮೆಚ್ಚಿದ ಶಿಕ್ಷಕರೆಂದರೆ ನಾನು ಪ್ರೌಢಶಾಲೆಯಲ್ಲಿರುವಾಗ ನನಗೆ ಸಿಕ್ಕ ಶಿಕ್ಷಕರಾದ ಅರುಣ್ ಸರ್ ಮತ್ತು ರಮೇಶ್ ಸರ್...
ನಾನು ಪ್ರೌಢಶಾಲೆಗೆ ಹೋದಾಗ ನನಗೆ ಪರಿಚಯವಾದ ಮೊದಲ ಶಿಕ್ಷಕರೆಂದರೆ ಅದು ರಮೇಶ್ ಸರ್... ನಮಗೆ ಮೊದಲು ಶಾಲೆಗೆ ಹೋದಾಗ ತುಂಬಾ ಭಯ ಇತ್ತು. ಆದರೆ ಆ ಭಯವನ್ನೆಲ್ಲ ಹೋಗಲಾಡಿಸಿದ್ದು ಇವರು. ಇವರು ನಮಗೆ ಕನ್ನಡ ಪಾಠವನ್ನು ಮಾಡುತಿದ್ದರು.
ಸಾಹಿತ್ಯ ಲೋಕವನ್ನು ನನಗೆ ಪರಿಚಯಿಸಿದವರು, ನಮ್ಮೊಳಗಿದ್ದ ಪ್ರತಿಭೆಯನ್ನು ಹೊರತಂದವರು, ನನಗೆ ತುಂಬಾ ಆತ್ಮೀಯರಾಗಿದ್ದವರು. ಮಕ್ಕಳಿಗೆ ಕೇವಲ ಪುಸ್ತಕದ ಪಾಠವಲ್ಲದೆ ಜೀವನಕ್ಕೆ ಬೇಕಾದ ಅತ್ಯಮೂಲ್ಯ ಅಂಶಗಳನ್ನು ಹೇಳಿಕೊಟ್ಟವರು.