-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 45

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 45

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 45
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

      
ಪ್ರೀತಿಯ ಮಕ್ಕಳೇ.... ನಾನು ಮಕ್ಕಳ ಜಗಲಿಯ ಹೆಚ್ಚಿನ ಲೇಖನಗಳನ್ನು ಓದುತ್ತೇನೆ. ಅದರಲ್ಲಿರುವ ವಿಜ್ಞಾನದ ವಿಷಯಗಳನ್ನು ಹುಡುಕುವುದು ನನ್ನ ಉದ್ದೇಶ. ನಾನು ವಿಜಯ ಸಾಲೆತ್ತೂರು ಅವರು ಬರೆಯುವ ನಿಷ್ಪಾಪಿ ಸಸ್ಯಗಳು ಲೇಖನ ಮಾಲೆಯ ಒಬ್ಬ ಖಾಯಂ ಓದುಗ. ಅದರಲ್ಲಿರುವ ಸಾಮಾನ್ಯ ವಿವರಣೆ ಮತ್ತು ವೈಜ್ಞಾನಿಕ ವಿಷಯ ಎರಡೂ ನನಗೆ ಆತ್ಮೀಯ ವಿಷಯಗಳು. ಅವರು ಹಿಂದೆ ಹಸ್ತಿಪಾದ ಸಸ್ಯದ ಬಗ್ಗೆ ಬರೆದು ನೀವು ಎಂದಾದರೂ ನೋಡಿದ್ದೀರಾ ಎಂದು ಕೇಳಿದ್ದರು. ನಾನು ಹೊಲದಲ್ಲಿ ಹುಲ್ಲು ಕೊಯ್ಯುತ್ತಿದ್ದೆ. ಅದರ ಒಂದು ಗಿಡ ನನ್ನ ಕತ್ತಿಗೆ ಬಲಿಯಾಗಿತ್ತು. ಲವ್ ಗ್ರಾಸ್ ಹುಲ್ಲುಗಳ ನಡುವೆ ಬಿದ್ದಿದ್ದ ಅದರ ಎಲೆಗಳ ಚಿತ್ರ ತೆಗೆದು ಕಳುಹಿಸಿದೆ. ಅವರು ಮುಂದಿನ ನನ್ನ ಪರಿಚಯ ಇದೇ ಹುಲ್ಲಿನದು ಎಂದು ಬರೆದಿದ್ದರು. ಅದರಂತೆ ಮುಂದಿನ ಸಂಚಿಕೆಯಲ್ಲಿ ಅವರು ಲವ್ ಗ್ರಾಸ್ ಬಗ್ಗೆ ಬರೆದಿದ್ದಾರೆ. ಅದರ ಒಂದು ಸಾಲು ನನ್ನ ಗಮನ ಸೆಳೆಯಿತು. ಅದೆಂದರೆ "ತಾನು ಜನ್ಮ ಪಡೆದ ಜಾಗದ ಏರಿಳಿತ, ತೇವಾಂಶ, ನೆರಳು ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಬೆಳವಣಿಗೆಯ ದಾರಿಯನ್ನು ಕಂಡುಕೊಳ್ಳುತ್ತದೆ." ಇದೊಂದು ಶುದ್ಧ ವಿಜ್ಞಾನದ ವಿಷಯ. ಇದನ್ನು ಬಿಡಲುಂಟೇ? ಆದ್ದರಿಂದ ಮತ್ತೊಮ್ಮೆ ವಿಷಯಾಂತರ ಮಾಡಿ ಈ ಲೇಖನ.

ಏಕ ಕೋಶಿಕ ಜೀವಿಗಳಲ್ಲಿ ಒಂದೇ ಕೋಶ ಎಲ್ಲಾ ಜೈವಿಕ ಕೆಲಸಗಳನ್ನು ಮಾಡಬೇಕಾಗುತ್ತದೆ. ಆದರೆ ಬಹು ಕೋಶೀಯ ಜೀವಿಗಳಲ್ಲಿ ಈ ಕೆಲಸ ಬೇರೆ ಬೇರೆ ಕೋಶಗಳ ಗುಂಪಿಗೆ ಹಂಚಲಾಗಿರುತ್ತದೆ. ಒಂದೇ ರಚನೆಯನ್ನು ಹೊಂದಿರುವ ಒಂದೇ ಕೆಲಸ ಮಾಡುವ ಜೀವ ಕೋಶಗಳ ಗುಂಪನ್ನು ಅಂಗಾಂಶ ಎನ್ನುತ್ತೇವೆ. ರಕ್ತ ಒಂದು ಅಂಗಾಂಶ, ನರ ಒಂದು ಅಂಗಾಂಶ, ಚರ್ಮ ಒಂದು ಅಂಗಾಂಶ ಹೀಗೆ. ಸಸ್ಯಗಳು ಕೂಡಾ ಅಂಗಾಂಶಗಳನ್ನು ಹೊಂದಿರುತ್ತವೆ. ಬೆಳವಣಿಗೆಗೆ ವರ್ಧನ ಅಂಗಾಂಶ (meristematic tissue), ಆಧಾರಕ್ಕಾಗಿ ಸ್ಲೀರೆಂಕೈಮಾ (sclerenchyma tissue), ಆಹಾರ ಸಾಗಿಸಲು ಫ್ಲೋಯಂ (phloem tissue) ಹೀಗೆ. ವಿಜಯ ಟೀಚರ್ ಲವ್ ಗ್ರಾಸ್ ನ ಬೆಳವಣಿಗೆ ಬಗ್ಗೆ ಮಾತನಾಡಿರುವುದರಿಂದ ನಾವು ಈ ಬೆಳವಣಿಗೆಗೆ ಕಾರಣವಾಗುವ ವರ್ಧನ ಅಂಗಾಂಶದ ಬಗ್ಗೆ ಮಾತ್ರ ಗಮನ ಹರಿಸೋಣ. 

ಸಸ್ಯಗಳು ಎತ್ತರಕ್ಕೆ ಬೆಳೆಯತ್ತಾ ಹೋಗುತ್ತವೆ. ನಿಮ್ಮ ಮನೆಯ ಮಾವು, ಹಲಸು, ತೆಂಗು, ಕಂಗಿನ ಮರಗಳು ಆರಂಭದಲ್ಲಿ ವೇಗವಾಗಿ ನಂತರ ನಿಧಾನವಾಗಿ ತಮ್ಮ ಎತ್ತರವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುವುದನ್ನು ನೀವು ಗಮನಿಸಿಯೇ ಇರುತ್ತೀರಿ. ಫಿಲಿಪೈನ್ಸ್ ನಲ್ಲಿನ ಬಿದಿರು ತನ್ನ ಬೆಳವಣಿಗೆಯಲ್ಲಿ ಜಗತ್ ವಿಕ್ರಮ ಸಾಧಿಸಿದೆ. ಮೊದಲ ದಿನ ಅದು ಹನ್ನೆರಡು ಅಡಿ ಬೆಳೆಯುತ್ತದೆ ಅಂದರೆ ಪ್ರತಿ ಗಂಟಗೆ ಅರ್ಧ ಅಡಿ. ಹಿಂದೆ ಮರಣ ದಂಡನೆ ವಿಧಿಸಿದ ಖೈದಿಯನ್ನು ಈ ಬಿದಿರನ್ನು ಆತನ ಗುದದ್ವಾರಕ್ಕೆ ಬರುವ ಹಾಗೆ ಅವನನ್ನು ನೆಲಕ್ಕೆ ಕಟ್ಟಲಾಗುತ್ತಿತ್ತು. ಮಾರನೆಯ ದಿನ ಬೆಳಿಗ್ಗೆ ಆತನ ಗುದದ್ವಾರದ ಮೂಲಕ ತೂರಿಕೊಂಡು ಹೋಗಿ ಆತ ಸಾವನ್ನಪ್ಪುತ್ತಿದ್ದ. ಸರಾಸರಿ 300 ಅಡಿ ಎತ್ತರ ಇರುವ ಸಾವಿರಾರು ವರ್ಷ ಪ್ರಾಯದ ಅಮೇರಿಕಾದ ಸಿಕೋಯಾ ಮರಗಳು ಇನ್ನೂ ಬೆಳೆಯುತ್ತಲೇ ಇವೆ. ಸಸ್ಯಗಳ ಬೇರುಗಳು ನೀರನ್ನು ಹುಡುಕಿಕೊಂಡು ಭೂಮಿಯ ಒಳಗಡೆ ಬೆಳೆಯುತ್ತಲೇ ಇರುತ್ತವೆ. ಇದಕ್ಕೆ ಸಸ್ಯದ/ಅದರ ಕೊಂಬೆಯ/ಬೇರಿನ ತುದಿಗಳು ಬೆಳೆಯತ್ತಿರುವುದೇ ಕಾರಣ. ಈ ಸಸ್ಯಗಳ ಕಾಂಡಗಳ/ಬೇರಿನ ತುದಿಗಳ ಬೆಳವಣಿಗೆಯನ್ನು ಉಂಟು ಮಾಡುವ ವರ್ಧನ ಅಂಗಾಂಶವನ್ನು ತುದಿ ವರ್ಧನ ಅಂಗಾಂಶ (apical meristem) ಎನ್ನುತ್ತೇವೆ. ಕಾಂಡದ ತುದಿಯಲ್ಲಿರುವ ಅಂಗಾಂಶವನ್ನು ಸಣ್ಣ ಎಲೆಗಳಿಂದ ರಕ್ಷಿಸಲ್ಪಟ್ಟರೆ ಬೇರಿನ ತುದಿಯಲ್ಲಿರುವ ಅಂಗಾಂಶವನ್ನು ಬೇರಿನ ಟೋಪಿ (root cap) ರಕ್ಷಿಸುತ್ತದೆ. ಇದನ್ನು ಸುಲಭವಾಗಿ ನೀವು ಗೋಳಿ ಮರದ ಬಿಳಲು ಬೇರಿನ (prop root) ತುದಿಗಳಲ್ಲಿ ಕಾಣಬಹುದು.

ತೆಂಗು, ಅಡಿಕೆ, ಹುಲ್ಲು ಇತ್ಯಾದಿ ಗಿಡಗಳನ್ನು ಗಮನಿಸಿ. ಅವುಗಳಲ್ಲಿ ಗಂಟುಗಳಿರುತ್ತವೆ. ಎಲ್ಲ ಗಿಡಗಳಲ್ಲಿಯೂ ಈ ಗಂಟುಗಳನ್ನು ನೀವು ಗಮನಿಸಿರಬಹುದು. ಈ ಗಂಟುಗಳು ಗಿಣ್ಣುಗಳು (nodes). ಎರಡು ಗಿಣ್ಣುಗಳ ನಡುವಿನ ಖಾಲಿ ಜಾಗವೇ ಅಂತರ ಗಿಣ್ಣು (inter node). ಈ ಗಿಣ್ಣುಗಳಲ್ಲಿ ಮೊಗ್ಗುಗಳು/ ಗೆಲ್ಲುಗಳು ಹೊರಡುವುದನ್ನು ನೀವು ಗಮನಿಸಿಯೇ ಇರಬಹುದು. ಈ ಗಿಣ್ಣುಗಳು ಉದ್ದವಾಗುವುದನ್ನು ನೀವು ನೋಡಿರಬಹುದು. ಅಡಿಕೆ ಮರದ ಗಿಣ್ಣುಗಳನ್ನು ಗಮನಿಸಿ. ಬಿಸಿಲಿನಲ್ಲಿ ಬೆಳೆದ ಮರದ ಗಂಟುಗಳು ಹತ್ತಿರ ಹತ್ತಿರವಿದ್ದರೆ ತೋಟದ ಮಧ್ಯೆ ಬೆಳೆಯುವ ಅಡಿಕೆ ಮರದ ಗಂಟುಗಳು ಹೆಚ್ಚು ಉದ್ದವಿರುವ ಗಂಟುಗಳನ್ನು ಗಮನಿಸಿಯೇ ಇದ್ದೀರಿ. ಇದಕ್ಕೆ ಕಾರಣವೆಂದರೆ ಗಿಣ್ಣಿನ ಮೇಲ್ಭಾಗದಲ್ಲಿ ಇರುವ ಉಂಗುರಾಕಾರದ ವರ್ಧನ ಅಂಗಾಂಶ. ಇದನ್ನು ಗಿಣ್ಣಿನ ವರ್ಧನ ಅಂಗಾಂಶ (intecallery meristem) ಎಂದು ಕರೆಯುತ್ತೇವೆ.

ತೆಂಗಿನ ಮತ್ತು ಅಡಿಕೆ ಮರಗಳನ್ನು ಗಮನಿಸಿದ್ದೀರಾ? ಅವುಗಳ ದಪ್ಪ ನೀವು ಸಣ್ಣವರಿರುವಾಗ ಎಷ್ಟಿತ್ತೋ ನಿಮಗೆ ನಲವತ್ತು ವರ್ಷವಾಗುವಾಗಲೂ ಅಷ್ಟೇ ಇರುತ್ತದೆ. ಆದರೆ ಮಾವು ಹಲಸಿನ ಮರಗಳನ್ನು ನೋಡಿ. ಅವುಗಳ ಎತ್ತರದೊಂದಿಗೆ ಅವುಗಳ ದಪ್ಪವೂ ವರ್ಷ ವರ್ಷ ಬೆಳೆಯುತ್ತಲೇ ಹೋಗುತ್ತವೆ. ಮರದ ತಿರುಳು (cambium) ಬೆಳೆಯುತ್ತಲೇ ಹೋಗುತ್ತದೆ. ಇದಕ್ಕೆ ಕಾರಣ ಮರದ ತೊಗಟೆಯ ಒಳ ಭಾಗದಲ್ಲಿ ಕಾಂಡದ ಉದ್ದಕ್ಕೂ ಇರುವ ಸಿಲಿಂಡರಾಕಾರದ ವರ್ಧನ ಅಂಗಾಂಶ. ಇದನ್ನು ಪಕ್ಕದ ವರ್ಧನ ಅಂಗಾಂಶ (lateral meristem) ಎನ್ನುವುದು.

ವಿಜಯಾ ಟೀಚರ್ ಹೇಳಿದ ಲವ್ ಗ್ರಾಸ್ ನಲ್ಲಿ ಇರುವುದು ತುದಿ ವರ್ಧನ ಅಂಗಾಂಶ ಮತ್ತು ಗಿಣ್ಣಿನ ವರ್ಧನ ಅಂಗಾಂಶಗಳು ಮಾತ್ರ. ಅದರಲ್ಲಿ ಪಕ್ಕದ ವರ್ಧನ ಅಂಗಾಂಶ ಇಲ್ಲ ಏಕೆಂದರೆ ಲವ್ ಗ್ರಾಸ್ ಒಂದು ಏಕದಳ ಸಸ್ಯ. ಏಕದಳ ಸಸ್ಯಗಳಲ್ಲಿ ಪಕ್ಕದ ವರ್ಧನ ಅಂಗಾಂಶವಿರುವುದಿಲ್ಲ. ಲೇಖನದಲ್ಲಿ ಹೇಳಿರುವ ಸಸ್ಯ ತನ್ನ ಬೆಳವಣಿಗೆಯ ದಾರಿಯನ್ನು ನಿರ್ಧರಿಸುತ್ತದೆ ಎಂಬುದು ಗಿಣ್ಣಿನ ವರ್ಧನ ಅಂಗಾಂಶದಿಂದ.
   ಯಾಕೆ ಹೀಗೆ ಎಂಬುದು ಮುಂದಿನವಾರಕ್ಕೆ...
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article