ನಾನು ಮೆಚ್ಚಿದ ಶಿಕ್ಷಕರು - ಹಿರಿಯರ ಬರಹಗಳು : ಸಂಚಿಕೆ - 01
Saturday, September 7, 2024
Edit
ಶಿಕ್ಷಕರ ದಿನಾಚರಣೆಯ ವಿಶೇಷ - 2024
ನಾನು ಮೆಚ್ಚಿದ ಶಿಕ್ಷಕರು
ಹಿರಿಯರ ಬರಹಗಳು : ಸಂಚಿಕೆ - 01
ಶಿಕ್ಷಕರ ದಿನಾಚರಣೆ - 2024 ವಿಶೇಷತೆಯಾಗಿ 'ನಾ ಮೆಚ್ಚಿದ ಶಿಕ್ಷಕರು' ವಿಷಯದಲ್ಲಿ ತಮ್ಮ ತಮ್ಮ ನೆಚ್ಚಿನ ಶಿಕ್ಷಕರ ಕುರಿತಾಗಿ.... ಕೇವಲ ಒಂದೇ ದಿನದ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯ ಜಗಲಿಯ ಹಿರಿಯರು ಬರಹಗಳನ್ನು ಕಳುಹಿಸಿಕೊಟ್ಟಿದ್ದೀರಿ... ನಿಮಗೆಲ್ಲ ಪ್ರೀತಿಪೂರ್ವಕ ಧನ್ಯವಾದಗಳು...
ಎಲ್ಲಾ ಬರಹಗಳನ್ನು ಮಕ್ಕಳ ಜಗಲಿಯಲ್ಲಿ - ಸಂಚಿಕೆಗಳ ರೂಪದಲ್ಲಿ ಪ್ರಕಟಿಸುತ್ತೇವೆ... ಪ್ರಥಮ ಸಂಚಿಕೆಯ ಬರಹಗಳು ಇಲ್ಲಿವೆ.... ತಾರಾನಾಥ್ ಕೈರಂಗಳ
ಗುರುಬಲವಿಲ್ಲದಿದ್ದರೆ ನಾನು ಏನಾಗುತ್ತಿದ್ದೆ?ಎಂದು ಯೋಚಿಸಿದಾಗ ‘ವಿಜ್ಞಾನ ಮೂಢನಂಬಿಕೆಗಳನ್ನು ಅಳಿಸುತ್ತದೆ’ ಎಂಬ ವಿಷಯದ ಬಗ್ಗೆ ಭಾಷಣ ಮಾಡಲು ವಿಜ್ಞಾನ ಶಿಕ್ಷಕರು ಅವಕಾಶ ನೀಡಿದ ಆ ದಿನ ನೆನಪಾಗುತ್ತದೆ...! ನಾನು 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಗ ವಿಜ್ಞಾನ ಶಿಕ್ಷಕರು ಭಾಷಣ ಸ್ಪರ್ಧೆಗೆ ವಿಷಯ ನಿಗದಿಪಡಿಸಿ ಭಾಗವಹಿಸುವಂತೆ ಪ್ರೋತ್ಸಾಹಿಸಿದ್ದರು. ತಂದೆಯವರು ಎರಡು ಪುಟಗಳ ಭಾಷಣ ಸಿದ್ಧಪಡಿಸಿ ಕೊಟ್ಟಿದ್ದರು! ಆದರೆ ಭಾಷಣದ ದಿನ ವೇದಿಕೆಯಲ್ಲಿ ನಿಂತಾಗ ನನ್ನ ಮುಂದೆ ಇದ್ದ ನೂರಾರು ಸಹಪಾಠಿಗಳ ಎದುರು ಒಂದಕ್ಷರವನ್ನೂ ಹೇಳದೇ ಆತಂಕದಿಂದ ನಿಂತಿದ್ದ ನನ್ನನ್ನು ಇಂದು ಶಿಕ್ಷಕಿಯಾಗಿ ನಿರರ್ಗಳವಾಗಿ ಮಾತನಾಡುವ ಮಟ್ಟಕ್ಕೆ ಬೆಳೆಸಿದ ಸ್ಫೂರ್ತಿ ನನ್ನ ಪ್ರೌಢಶಾಲಾ ಹಂತದ ವಿಜ್ಞಾನ ಶಿಕ್ಷಕರಾದ ಶ್ರೀ ಸಂಪಗೋಡು ಗುರುಮೂರ್ತಿ ಸರ್.
ನಾನು ಪ್ರೌಢಶಾಲಾ ಹಂತದ ವಿದ್ಯಾಭ್ಯಾಸ ಮಾಡಿದ್ದು ಸರಕಾರಿ ಪ್ರೌಢಶಾಲೆ ತೊರೆಹಡ್ಲು ಎಂಬ ಗ್ರಾಮೀಣ ಪರಿಸರದ ಪಶ್ಚಿಮ ಘಟ್ಟದ ಹಸಿರಿನಿಂದ ಆವೃತವಾದ ಮಲೆನಾಡಿನ ಶಾಲೆಯಲ್ಲಿ. ಇದು ಶೃಂಗೇರಿ ತಾಲೂಕು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಇಲ್ಲಿ ವಿಜ್ಞಾನ ಬೋಧಕರಾಗಿ ಸೇವೆ ಸಲ್ಲಿಸುತ್ತಿರುವ ನನ್ನ ನೆಚ್ಚಿನ ಶಿಕ್ಷಕರು ಅವರ ಅಪರೂಪದ ಗುಣಗಳಿಗಾಗಿ ನನಗೆ ಇಂದಿಗೂ ಸ್ಫೂರ್ತಿಯ ಸೆಲೆ..!
ಪ್ರತಿದಿನವೂ ಪ್ರಯೋಗಗಳ ಸಹಿತ ಪಾಠ, ನಿತ್ಯ ಜೀವನದಲ್ಲಿ ವಿಜ್ಞಾನದ ಬಳಕೆಯ ಸರಳ ಉದಾಹರಣೆಗಳು ಅವರ ವಿಜ್ಞಾನದ ತರಗತಿಗಾಗಿ ಕಾಯುವಂತೆ ನಮ್ಮನ್ನು ಬೆಳೆಸಿದ್ದವು. ನಾವು ಓದುತ್ತಿದ್ದ ಅವಧಿಯಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಸ್ಥಳೀಯ ದಾನಿಗಳ ನೆರವಿನಿಂದ ಸೌಲಭ್ಯಗಳ ವಿಸ್ತರಿಸುವ ಅವರ ಪ್ರಯತ್ನದಿಂದ ಶಾಲೆಗೆ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯವಿತ್ತು! ಅದರಲ್ಲಿ ಟೆಲಿಸ್ಕೋಪ್ ಕೂಡಾ ಇತ್ತು! ಅವರ ಪ್ರಯತ್ನಶೀಲ ನಡೆ ನನ್ನೊಳಗೆ ಶಿಕ್ಷಕಿಯಾಗುವ ಕನಸಿನ ಬೀಜ ಬಿತ್ತಿತು.
ಅಂದದ ಅಕ್ಷರಗಳು, ಅರ್ಥಪೂರ್ಣ ಪಾಠ ಮಾತ್ರವಲ್ಲದೇ ತರಗತಿಯ ಹೊರಗೆ ವೇದಿಕೆ ಏರಿದಾಗ ಗುರುಗಳ ಅದ್ಭುತ ಮಾತಿನ ಜಾಲ, ಅವರ ಅಪರೂಪದ ನಿರೂಪಣಾ ಶೈಲಿ, ಕನ್ನಡ - ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಅವರ ಪ್ರಾವೀಣ್ಯತೆ ನನ್ನಂತೆ ಅನೇಕ ಹಳ್ಳಿಮೂಲೆಯ ಮಕ್ಕಳ ಮನಸಿನಲ್ಲಿ ಧೈರ್ಯ ಹಾಗೂ ಸಾಧನೆಯ ತುಡಿತ ತುಂಬಿಕೊಟ್ಟಿವೆ. ಸಂಗೀತದ ಬಗ್ಗೆ ಅಪೂರ್ವ ಅಭಿರುಚಿ ಹೊಂದಿರುವ ಶ್ರೀಯುತರು ಮೋರ್ಚಿಂಗ್ ವಾದನದಲ್ಲಿ ಆಸಕ್ತರು.
ಇಂದು ಶೃಂಗೇರಿ ತಾಲೂಕಿನಾದ್ಯಂತ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿರುವ ಕನ್ನಡ - ಆಂಗ್ಲ ಮಾಧ್ಯಮಗಳ ಪಾಠ ಬೋಧನೆಗೆ ಮಾತ್ರವಲ್ಲದೇ ಕ್ರೀಡೆ & ವಿಜ್ಞಾನ ನಾಟಕಗಳಲ್ಲೂ ಉನ್ನತ ಸಾಧನೆಗಳನ್ನು ಮಾಡುತ್ತಾ ಮಾದರಿ ಸರಕಾರಿ ಶಾಲೆಯಾಗಿ ಗುರುತಿಸಿಕೊಂಡಿರುವ ತೊರೆಹಡ್ಲಿನ ಪ್ರೌಢಶಾಲೆಯ ಸಂಪನ್ಮೂಲ ಶಿಕ್ಷಕರಾದ ಶ್ರೀ ಗುರುಮೂರ್ತಿಯವರು ಹೆಸರಿಗೆ ಅನ್ವರ್ಥವಾಗುವಂತೆ ವಿದ್ಯಾರ್ಥಿಗಳಿಗೆ ಗುರುಮೂರ್ತಿಯಾಗಿ ಬೆಳಕಾಗಿದ್ದಾರೆ.
ನಾನು ಸಮಾಜ ವಿಜ್ಞಾನ ಶಿಕ್ಷಕಿಯಾಗಿ ಅವರ ವೈಜ್ಞಾನಿಕ - ವೈಚಾರಿಕ ದೃಷ್ಟಿಕೋನಗಳನ್ನು ಉಳಿಸಿಕೊಂಡು ಬಳಸುತ್ತಿದ್ದೇನೆ. ಪ್ರತಿ ವಿಚಾರವನ್ನೂ ಹೊಸದಾಗಿ ನೋಡುವ, ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುವ ಗುರುಗಳ ಗುಣ ನನಗೆ ಸದಾ ಮಾದರಿ. ಪಶ್ಚಿಮ ಘಟ್ಟಗಳ ಅನನ್ಯತೆಯನ್ನು ನನ್ನ ಹೃದಯಕ್ಕಿಳಿಸಿದ ಗಂಗಾಮೂಲ, ವರಾಹತೀರ್ಥ, ಕುಂದಾದ್ರಿಯ ಪ್ರವಾಸಗಳಲ್ಲಿ ಅವರು ನೀಡಿದ ವಿವರಣೆ ಎಂದಿಗೂ ಸ್ಮರಣೀಯ. ವಿವಿಧ ಸ್ಪರ್ಧೆಗಳಿಗೆ ಅವರು ವಿದ್ಯಾರ್ಥಿಗಳ ಮಾರ್ಗದರ್ಶನದಲ್ಲಿ ತೋರುತ್ತಿದ್ದ ಕಾಳಜಿ ನನಗೆ ಸದಾ ಮಾರ್ಗದರ್ಶಿ. ನಿರಂತರ ಜ್ಞಾನದ ಹಸಿವು ಹಾಗೂ ಹೊಸತನಕ್ಕಾಗಿ ಹಂಬಲಿಸುವ ಅವರ ಮನೋಭಾವ ನನ್ನೊಳಗೆ ಸುಭದ್ರ.
ಸನ್ಮಾನ್ಯರು SG Sir ಎಂದೇ ಊರಿನವರ - ವಿದ್ಯಾರ್ಥಿಗಳ ಪ್ರೀತಿಪಾತ್ರರು. ಎಸ್. ಗುರುಮೂರ್ತಿ ಸರ್ ಅವರ ಪ್ರೇರಣೆಯಿಂದಲೇ ನಾನು ಪ್ರೌಢಶಾಲಾ ಸಹ ಶಿಕ್ಷಕಿಯಾಗುವ ಕನಸನ್ನು ನನಸಾಗಿಸಿಕೊಂಡಿದ್ದು. ಆಚಾರ್ಯ ಋಣವೆಂಬುದು ತೀರಿಸಲಾಗದ್ದು.. ಅವರಿತ್ತ ಸನ್ಮಾರ್ಗ ಹಾಗೂ ಸದಾಶಯದ ವಿದ್ಯೆಗೆ ನಾನು ಸದಾ ಋಣಿ.
ಸಹ ಶಿಕ್ಷಕರು (ಕಲಾ),
ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು,
ಮಂಗಳೂರು ಉತ್ತರ ವಲಯ.
ದಕ್ಷಿಣ ಕನ್ನಡ ಜಿಲ್ಲೆ
Mob : 9449946810
********************************************
ನನ್ನ ವಿದ್ಯಾರ್ಥಿ ಜೀವನದಲ್ಲಿ ಅರಿವಿನ ವರ ಗುರುವಾಗಿ ಹಾದಿಯ ತೋರಿದ ಸಮಸ್ತ ಗುರುವೃಂದಕ್ಕೆ ನಾನು ಭಕ್ತಿಯಿಂದ ವಿನೀತ ಭಾವದಿಂದ ಕರಗಳ ಜೋಡಿಸಿ ಶಿರಬಾಗಿ ನಮಿಸುತ್ತೇನೆ. ಅವರೆಲ್ಲರ ಗುರು ಕಾರುಣ್ಯವೂ ಸದಾ ಇರಲೆಂದು ಬೇಡುವೆನು. ಸಮಸ್ತ ಗುರು ಬಳಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ನಾನು ಇಂದು ಶಿಕ್ಷಕನಾಗಿ ಗುರುತಿಸುಕೊಂಡಿರುವ ಬಗ್ಗೆ ಹೆಮ್ಮೆ ನನಗೆ ಇದೆ. ಪವಿತ್ರವಾದ ಶಿಕ್ಷಕ ವೃತ್ತಿ ನನ್ನ ಯೋಗ ಭಾಗ್ಯ. ಇದು ನನಗೆ ದೈವದತ್ತವಾಗಿ ದೊರತದ್ದೇನಲ್ಲ. ಎಲ್ಲವೂ ಹೆತ್ತ ತಾಯಿ ತಂದೆಯ ಬಂಧು ಬಳಗದವರ ಸನ್ಮಿತ್ರರ ಸಕ್ಕರೆಯಂತಹ ಅಕ್ಕರೆಯ ಪ್ರೀತಿ ತೋರಿದ ಹಿರಿಯ ಕಿರಿಯರ ಪ್ರೋತ್ಸಾಹದಿಂದ ಹಾಗೆಯೇ ಗುರುಗಳ ಆತ್ಮ ಸ್ಥೈರ್ಯ ತುಂಬುವ ಮಾತುಗಳಿಂದ ನನ್ನ ಅರಿವಿನ ಅಲ್ಪಮತಿಯ ಮಟ್ಟದಲ್ಲಿ ಕಲಿಯುತ್ತಾ ಸಾಗಿದೆ... ಇಂದು ಶಿಕ್ಷಕನಾಗಿ ಗುರುತಿಸಿಕೊಂಡೆ. ಸಂಗೀತ ಸಾಹಿತ್ಯ ಕಲೆ ಯಕ್ಷಗಾನ ಲೇಖನ ಭಾಷಣ ಗಾಯನದಲ್ಲಿ ತೊಡಿಸಿಕೊಳ್ಳುವ ಪುಟ್ಟ ಅವಕಾಶವನ್ನು ಪಡೆದೆ. ಇದಕ್ಕೆಲ್ಲಾ ಕಾರಣ ನನ್ನ ಸಮಸ್ತ ಗುರುಗಳು.
ಇಂದು ಈ ಸಂದರ್ಭದಲ್ಲಿ ನಾನು ನೆನೆಯಲೇಬೇಕು ನನ್ನ ಪ್ರಾಥಮಿಕ ಶಿಕ್ಷಣದಲ್ಲಿ ನನಗರಿವಿಲ್ಲದೇ ಇದ್ದ ನನ್ನ ಪ್ರತಿಭೆಯನ್ನು ಗುರುತಿಸಿ ನೀರೆರೆದ ಶ್ರೇಷ್ಠ ಗುರುಗಳಾದ ಜಾಲ್ಸೂರಿನ ಕಾಟೂರು ನಾರಾಯಣ ಮಾಸ್ತರರವರು. ಇತ್ತೀಚೆಗೆ ನಮ್ಮನ್ನು ಅಗಲಿದರು. ಅಕ್ಷರ ನುಡಿಯಿಂದ ಭಾಷ್ಪಾಂಜಲಿ ಸಲ್ಲಿಸಿ ಕೃತಾರ್ಥನಾದೆ. ಅಂತೆಯೇ ನನ್ನ ಪ್ರೌಢಶಾಲಾ ಶಿಕ್ಷಣದಲ್ಲಿ ನನ್ನ ಗಣಿತ ಮೇಸ್ಟ್ರಾದ ಜಯರಾಮ ಸರ್ ರವರು ಮೂಡಬಿದ್ರೆಯ ಶಿರ್ತಾಡಿಯ ಜವಾಹರ್ ಲಾಲ್ ನೆಹರು ಅನುದಾನಿತ ಶಾಲೆಯ ಸಹಶಿಕ್ಷಕನಾಗಿ ಮತ್ತೆ ಮುಖ್ಯ ಶಿಕ್ಷಕರಾಗಿ ಕಳೆದ ಮೇ ಅಂತ್ಯದಲ್ಲಿ ಸೇವೆಯಿಂದ ನಿವೃತ್ತರಾದರು. ಆವರು ಸಂಕಲ್ಪಿಸಿದ ಬಗೆ ಏನೆಂದರೆ ಕಲಿಸಿದ ಶಿಷ್ಯನಾದ ನನ್ನನ್ನೇ ಬೀಳ್ಕೊಡುಗೆ ಕಾರ್ಯಕ್ರಮದ ಅತಿಥಿಯಾಗಿ ಕರೆಯಬೇಕು. ಹಾಗೆಯೇ ನನ್ನ ಮಾತುಗಳೇ ನನಗೆ ಗುರುದಕ್ಷಿಣೆಯಾಗಿ ನೀಡಬೇಕೆಂದಾಗ ಅಂಜಿಕೆ ನಾಚಿಕೆಯಾದರೂ ಬರಲೇಬೇಕು ಎಂದಾಗ ಗುರುವಾಜ್ಞೆಯಿಂದ ಒಪ್ಪಿದೆ ಭಾಗವಹಿಸಿ ಕೃತಾರ್ಥನಾದೆ. ಇದು ಗುರುಗಳ ಗುರುತ್ವದ ಶ್ರೇಷ್ಠತೆ ಎಂದೇ ಭಾವಿಸಿದೆ.
ಅಂತೆಯೇ ನನ್ನ ಸ್ನಾತಕೋತ್ತರ ಪದವಿ ಕಲಿಕೆಯಲ್ಲಿಯಲ್ಲಿ ಗುರುಗಳಾಗಿದ್ದ ನಾಡು ಕಂಡ ಶ್ರೇಷ್ಠ ವಿದ್ವಾಂಸರಾದ ವಿಶ್ರಾಂತ ಕುಲಪತಿಗಳಾದ ಜರ್ಮನಿ ವಿ ವಿ ಯ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ ಬಿ ಎ ವಿವೇಕ ರೈ ಸರ್ ರವರು ಅವರ ಅಂದಿನ ಪಾಠ ನನ್ನಲ್ಲಿ ಪುಸ್ತಕ ಓದಿನ ಪ್ರೀತಿ ಹುಟ್ಟಿಸಿತು. ಅವರನ್ನು ಇಂದಿಗೂ ಎದುರು ಕಂಡಾಗ ಅವರ ಜೊತೆ ಮಾತಾನಾಡಲು ಏನೋ ಗೌರವದ ಭಯ ಭಕ್ತಿ. ಆದರೆ ಈಗಲೂ ಧೈರ್ಯ ಮಾಡಿ ವಾಟ್ಸಾಪ್ ಮೇಸೇಜ್ ನಲ್ಲಿ ಮಾತ್ರ ಅವರ ಕ್ಷೇಮ ಸಮಾಚಾರ ತಿಳಿಯುತ್ತಾ ಶುಭಾಶೀರ್ವಾದ ಪಡೆಯುತ್ತಿರುವೆ.
ನಾಯಕತ್ವ ಸೇವಾ ಗುಣವನ್ನು ಮತ್ತಷ್ಟು ಕಲಿಸಿದ ಉಡುಪಿ ಜಿಲ್ಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಯಲ್ಲಿ ತೊಡಗಿಸಿಕೊಂಡಾಗ ಯೋಗ್ಯ ಗುರುಗಳಾಗಿ ದೊರತು ನನ್ನ ಬೆಳೆಸಿದವರು ಉಡುಪಿ ಜಿಲ್ಲೆಯ ಕುಂದಾಪುರದ ದಿ ಕೊಗ್ಗ ಗಾಣಿಗ ಸರ್ ಮತ್ತು ನಾವುಂದದ ಆನಂದ ಅಡಿಗ ಸರ್. ಇವರು ಈರ್ವರು ಸಮರ್ಥ ಸ್ಕೌಟ್ ಗೈಡ್ಸ್ ಗುರುದ್ವಯರಾಗಿ ಗುರುತಿಸಿಕೊಂಡವರು. ಅಂತೆಯೇ ನನಗೆ ಬಹಳಷ್ಟು ಪ್ರೇರಣೆ ಪ್ರಭಾವ ಬೀರಿದವರು. ಅಡಿಗ ಸರ್ ರವರ ಕ್ರಿಯಾಶೀಲತೆ ನಮಗೊಂದು ಸ್ಫೂರ್ತಿ. ಇಂದು ನಾನು ಶಿಕ್ಷಕನಾಗಿ ಸೇವೆ ಮಾಡುತ್ತಿರುವ ನನ್ನ ಹೆಮ್ಮೆಯ ಅಭಿಮಾನದ ಕಾರ್ಕಳದ ಶ್ರೀಮದ್ ಭುವನೇಂದ್ರ ವಿದ್ಯಾಸಂಸ್ಥೆಯ ಗೌರವಾನ್ವಿತ ಆಡಳಿತ ಮಂಡಳಿಯವರ ಮುಖ್ಯ ಶಿಕ್ಷಕರ ಇದ್ಯಾ ಸಂಸ್ಥೆಯ ಸಮಸ್ತ ಶಿಕ್ಷಕ ಶಿಕ್ಷಕೇತರ ಬಂಧುಗಳ ಪೋಷಕರ ಪ್ರೋತ್ಸಾಹ ಹಾಗೂ ವಿದ್ಯಾರ್ಥಿ ದೇವರುಗಳ ಪ್ರೀತಿಯಿಂದ ಸಂತೋಷದಿಂದ ಸಂತೃಪ್ತ ಭಾವದಿಂದ ಕರ್ತವ್ಯ ಮಾಡುತ್ತಿರುವೆ ನಾಡಿನ ಗುರುಬಳಗ ಹೆಮ್ಮೆಯ ಶಿಕ್ಷಣ ಇಲಾಖೆ ವಿಶಾಲ ಸಮೃದ್ಧ ಕರ್ನಾಟಕವನ್ನು ಆದರ್ಶವಾಗಿಸಿದೆ. ನನಗೂ ಅರಿವಿನ ಹಾದಿಯ ತೋರಿದೆ.
ಶಿಕ್ಷಕರು
ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆ
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
Mob : +91 94812 14438
*******************************************
ನಾನು ಪ್ರೌಢ ಶಿಕ್ಷಣವನ್ನು ಮಂಚಿ ಪ್ರೌಢಶಾಲೆಯಲ್ಲಿ ಮುಗಿಸಿದ್ದು. ಆವಾಗ ಎಲ್ಲ ಶಿಕ್ಷಕರು ನನಗೆ ಅಚ್ಚುಮೆಚ್ಚು. ಆದರೆ ನಾನು 9ನೇ ತರಗತಿ ಕಲಿಯುತ್ತಿದ್ದಾಗ (1993) ನನ್ನ ಮೇಲೆ ಪ್ರಭಾವ ಬೀರಿದ ಶಿಕ್ಷಕರು ಅಂದರೆ ವಿಜ್ಞಾನ ಪಾಠ ಕಲಿಸುತ್ತಿದ್ದ ಪುರುಷೋತ್ತಮ್ ಸರ್.
ಗ್ರಾಮೀಣ ಭಾಗದಿಂದ ಸುಮಾರು 6 ಕಿ.ಮೀ ನಡೆದುಕೊಂಡೇ ಬರುತ್ತಿದ್ದ (ನಂದ್ರಬೈಲ್ ) ನಾನು ಒಬ್ಬ ಸಾಧಾರಣ ಕಲಿಯುವ ವಿದ್ಯಾರ್ಥಿ ಆಗಿದ್ದೆ. ನನಗೆ ಪಾಠಕ್ಕಿಂತ ಕ್ರೀಡೆಯಲ್ಲಿ ಆಸಕ್ತಿ ಜಾಸ್ತಿ ಇತ್ತು. ಈಗಲೂ ಇದೆ. ಅದಕ್ಕೆ ಒಂದು ಸಣ್ಣ ಉದಾಹರಣೆ ಕಳೆದ ವಾರ ಮಂಗಳೂರಿನಲ್ಲಿ ನಡೆದ ಪ್ರೊ ಕಬಡ್ಡಿ ಪ್ರೀಮಿಯರ್ ಲೀಗ್ (season2) ಅದರ ಆಯೋಜನೆಯನ್ನು ಎಲ್ಲಾ ಗೆಳೆಯರೊಂದಿಗೆ ಸೇರಿ ಮಾಡಿದ ಸಾಧನೆ. ಪುರುಷೋತ್ತಮ ಸರ್ ಮಾಡುತ್ತಿದ್ದ ಪಾಠ ಎಂದಿಗೂ ನೆನಪಿದೆ. ನೀತಿ ಹೇಳುವ ಮೂಲಕ ನಮಗೆ ಜೀವನದ ಪಾಠವನ್ನು ಅರ್ಥೈಸಿದ್ದಾರೆ. ಒಂದು ಸಲ ಅಸೆಂಬ್ಲಿಯಲ್ಲಿ ಅವರು ಹೇಳಿದ ನೀತಿ ಇಂದಿಗೂ ನನಗೆ ನೆನಪಿದೆ. ಜೀವನದಲ್ಲಿ ಕುಡಿತ ಮತ್ತು ತಂಬಾಕುಗಳಿಂದ ದೂರ ಇರಿ. ಈಗ ನೀವು ಕುಡಿದರೆ ಮತ್ತೆ ಅದು ನಿಮ್ಮನ್ನು ಕುಡಿಯುತ್ತದೆ. ಈಗ ನೀವು ಸೇದಿದರೆ ಮತ್ತೆ ಅದು ನಿಮ್ಮನ್ನು ಸೇದುತ್ತದೆ. ಅವರ ಆ ಪ್ರೇರಣಾದಾಯಕ, ಸ್ಪೂರ್ತಿಯ ಮಾತುಗಳು ನನ್ನ ಮೇಲೆ ಪ್ರಭಾವ ಬೀರಿದೆ. ನನ್ನ ಜೀವನದಲ್ಲಿ ಸವಾಲುಗಳನ್ನು ಎದುರಿಸಿ ಸಾಧನೆಗಳನ್ನು ಮಾಡಬೇಕೆಂಬ ಛಲ ನೀವು ಮೂಡಿಸಿದಿರಿ. ನನ್ನ ವ್ಯಕ್ತಿತ್ವ ಸುಂದರವಾಗಿ ರೂಪುಗೊಳ್ಳಲು ನಿಮ್ಮ ಪ್ರಭಾವವೂ ಇದೆ. ಪುಸ್ತಕದ ಪಾಠಕ್ಕಿಂತ ಹೊರಗಿನ ಪ್ರಪಂಚದ ಮೌಲ್ಯಾಧಾರಿತ ವಿಷಯಗಳನ್ನು ತಿಳಿಸಿಕೊಟ್ಟಿದ್ದೀರಿ. ತಂದೆ ತಾಯಿ ಜೀವ ನೀಡಿದರೆ, ನಿಮ್ಮಂತಹ ಗುರುಗಳು ನನ್ನಂತಹ ಎಷ್ಟೋ ಜನರಿಗೆ ಜೀವನವನ್ನು ಕಟ್ಟಿಕೊಟ್ಟಿದ್ದೀರಿ.
ಅಂದಿಗೂ ಎಂದಿಗೂ ಇತೀ ನಿಮ್ಮ ವಿದ್ಯಾರ್ಥಿ......
ಹಿರಿಯ ವಿದ್ಯಾರ್ಥಿ
ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 99169 40131
********************************************
ಗುರುಗಳೆಲ್ಲರಿಗೂ ನಮನಗಳನ್ನು ಸಲ್ಲಿಸುವ ಸಲುವಾಗಿ ನಿಮಗಿದೋ ನನ್ನ ಮನದಾಳದ ನೆನಪಿನ ಸಾಲುಗಳು...
ಬಾಲ್ಯದಲ್ಲಿ 'ಮನೆಯೇ ಪಾಠ ಶಾಲೆ, ತಾಯಿಯೇ ಮೊದಲ ಗುರು' ಎನ್ನುವಂತೆ ತೊದಲು ನುಡಿಗಳನ್ನಾಡಲು, ಅಂಬೆಗಾಲಿಡಲು ಕೈ ಜೋಡಿಸಿದ 'ಅಮ್ಮ' ನಾದರೆ... ಬೇಕು ಬೇಡಗಳ ಬಗ್ಗೆ ಬುಧ್ಧಿ ಹೇಳಿ ತಿದ್ದಿದ ಗುರು 'ಅಪ್ಪ' ನಾದರೆ... ಪ್ರಾಥಮಿಕ ಹಂತದಲ್ಲಿ ಅ, ಆ.... ಎಂದು ಕೈ ಹಿಡಿದು ಬಳಪದಲ್ಲಿ ಅಕ್ಷರ ಜ್ಞಾನದ ಪ್ರಯೋಗವನ್ನು ಮಾಡಿಸಿದ ನನ್ನ ಪ್ರೀತಿಯ ಶಾಲಾ ಮೊದಲ ಗುರುವೇ ನಿರ್ಮಲ ಟೀಚರ್. ಮುಂದೆ ಆಂಗ್ಲ ಭಾಷೆಯ A, B, C.. ಯಿಂದ ಹಿಡಿದು ಇವತ್ತು ಆಂಗ್ಲ ಪದಗಳನ್ನು ಬರೆಯಲು ನಿಪುಣಳನ್ನಾಗಿ ಮಾಡಲು ಅಡಿಪಾಯ ಹಾಕಿದವರೂ ಇವರೇ ಎಂದರೆ ತಪ್ಪಾಗಲಾರದು. ಹಿಂದಿಯಲ್ಲಿ अ,आ , ಏಕ್, ದೋ ಅಂತ... ಕೋಪಿ ಪುಸ್ತಕದಲ್ಲಿ ಅಂದವಾದ ಅಕ್ಷರಗಳಿಗೆ अचछा ಎಂದು ಬರೆದು ಕೊಟ್ಟು ಖುಷಿ ಪಡಿಸಿದ ಮನೋರಮಾ ಟೀಚರ್. ಆದರೆ.. ಬಡತನದಲ್ಲಿ ತಾನು ಬೆಳೆದ ರೀತಿ, ಕಷ್ಟ ಪಟ್ಟ ದಿನಗಳ ಕತೆಯ ಮೂಲಕ ಸಮಾಜ ವಿಜ್ಞಾನದಲ್ಲಿ ಅಭಿರುಚಿಯನ್ನು ಬೆಳೆಸಿದ ಹೇಮಾ ಟೀಚರ್, ಕನ್ನಡದ ವ್ಯಾಕರಣ ಮಾಲೆಯು ಜೀವನದುದ್ದಕ್ಕೂ ನಮ್ಮೊಂದಿಗಿರುವುದು ಎಂಬುದನ್ನು ತಿಳಿಸಿದ ಶಾಂತ ಟೀಚರ್, ಹೀಗೆ ಪಾಠದ ಜೊತೆಗೆ ಓಟ, ಖೋಖೋ ಆಟ ಇವುಗಳ ಪ್ರಾಶಸ್ತ್ಯ ತಿಳಿಸಿದ ನಾರಾಯಣ ದೈಹಿಕ ಶಿಕ್ಷಕರು ಬೆತ್ತ ಹಿಡಿದು ಮೈದಾನಕ್ಕೆ ಓಡಿಸುತ್ತಿದ್ದ ನೆನಪುಗಳ ಪರಿಯಲ್ಲಿ ಮುಂದೆ ಪ್ರೌಢಶಾಲೆಗೆ ಕಾಲಿಟ್ಟರೆ ಆರ್ಥಿಕ ಕೊರತೆಯಿದ್ದ ನನ್ನ ಕ್ರಿಯಾತ್ಮಕ ಪ್ರತಿಭೆಗೆ 'ವಿಜ್ಞಾನ ಚಾರ್ಟ್' ತಯಾರಿಕೆಗೆಂದು ಹತ್ತು ರೂಪಾಯಿ ನೀಡಿ ಪ್ರೋತ್ಸಾಹಿಸಿ ಬಹುಮಾನ ಪಡೆಯುವಂತೆ ಮಾಡಿದ ಪಾಠ ಇಂದಿಗೂ ಕಸದಿಂದ ರಸ, ಕ್ರಿಯಾತ್ಮಕ ಕಲೆಗೆ ಒಲವು ಬರುವಂತೆ ಮಾಡಿದ ಪ್ರಸನ್ನ ಟೀಚರ್, ಎಸ್. ಎಸ್.ಎಲ್.ಸಿ ನಲ್ಲಿ ಬೇಗನೆ ಕಠಿಣದ ಲೆಕ್ಕವ ಬಿಡಿಸಿ ನಿಂತರೆ ಸಾಕು ನನ್ನನ್ನು 'ಗಣಿತದ ಡೊಡ್ಡ ಮಂಡೆ' ಎಂದು ಕರೆಯುವ ಮಾತಿಗೆ ಓಡೋಡಿ ಲೆಕ್ಕವ ತೋರಿಸುವ ಹುಮ್ಮಸ್ಸು ನೀಡಿದ ಗಣಿತ ಮೇಷ್ಟ್ರು ಅವರೇ ನನ್ನ ಪುರಂದರ ಮೇಷ್ಟ್ರು. ಸಮವಸ್ತ್ರ ಧರಿಸಿ ಶಿಸ್ತಿನ ಸಿಪಾಯಿಯ ನಡಿಗೆಯ ಕಲಿಸಿದ ಸುಂದರ ಗೌಡ ಸರ್... ಹೀಗೆ ಮುಂದುವರೆದ ಪಿ.ಯ.ಕಾಲೇಜು ಬಂದಾಗ ನಾವಾಡುವ ಮಾತಿನಲ್ಲಿ ಪ್ರತೀ ಅಕ್ಷರ, ಪದಪದಗಳಲ್ಲಿ ಉಚ್ಛಾರಣೆಯ ಮಹತ್ವವನ್ನು ತಿಳಿಸಿ ಇವತ್ತು 'ಸ್ಪಷ್ಟ ಉಚ್ಛಾರಣೆ ನೀವಾಡುತ್ತೀರಿ' ಎಂಬ ಹೆಗ್ಗಳಿಕೆ ನನಗೆ ಇತರರಿಂದ ಸಿಗಲು ನಿಮ್ಮ ಮಾರ್ಗದರ್ಶನವೇ ಸರಿ ಎನ್ನುವೆ ನನ್ನ ಆ ಕನ್ನಡ ಪ್ರಾಧ್ಯಾಪಕರೇ ಚೇತನ್ ಸರ್. ಶ್ರಮಜೀವಿಗಳಾಗಿ ಸಮಾಜದ ಮೌಲ್ಯಯುತ ಸಾರಾಂಶವನ್ನು ತಿಳಿಹೇಳುತ್ತಾ ಸಮಾಜಶಾಸ್ತ್ರ ಬೋಧಿಸುತ್ತಿದ್ದ ಅವರೇ ಸರ್ ಮಧೂ, ಮುಂದೆ ಈ ಎಲ್ಲಾ ಗುರುಗಳಂತೆ ನಾನೂ ಒಬ್ಬ ಮುಗ್ಧ ಮನಗಳಿರುವ ಸಾವಿರಾರು ಪುಟ್ಟ ಮಕ್ಕಳಿಗೆ ವಿದ್ಯಾರ್ಜನೆ ಗೈಯುವ, ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯುವ ಸೇವೆಯ ಪ್ರವೃತ್ತಿಯನ್ನು ನಿಸ್ವಾರ್ಥ ಸೇವಕಿಯಂತೆ ಇದೀಗ ಶಿಕ್ಷಕಿಯಾಗಿ ಹೊರಹೊಮ್ಮಲು ನೆರವಾದ ನನ್ನ ಶಿಕ್ಷಕ ಶಿಕ್ಷಣ ತರಬೇತಿಯನ್ನು ನೀಡಿದ ಎಲ್ಲಾ ಗುರುಗಳು. ಇವರೆಲ್ಲರ ಮಾರ್ಗದರ್ಶನದೊಂದಿಗೆ, ಉತ್ತಮ ಪರಿಸರದ ನಿರ್ಮಾತೃತ್ವದಲ್ಲಿ ಬೆಳೆದು ಜಾತಿ-ಧರ್ಮದ ಬೇಧವನ್ನು ಅಲ್ಲಗಳೆಯುವ ಶಿಕ್ಷಣ ನಮ್ಮದಾಗಬೇಕು. ಬೆಳೆಯುವ ಮುಗ್ಧ ಮನಸ್ಸಿನ ಕಂದಮ್ಮಗಳಿಗೆ ಶಿಕ್ಷಕರಾದವರು ಅಧರ್ಮದ, ಜಾತಿ -ಕುಲ, ಮತಗಳ ಬೋಧನೆಯನ್ನು ಬಿಟ್ಟು ಮಾನವಕುಲ, ಧರ್ಮ ಒಂದೇ ಜನರ ಸೇವೆ, ಅಸಹಾಯಕರಿಗೆ ನೆರವು, ಅಸ್ಪೃಶ್ಯತೆಯನ್ನು ಹೋಗಲಾಡಿಸಿ ಸಂವಿಧಾನದಲ್ಲಿರುವ ಅಂಶಗಳಿಗೆ ಬೆಲೆ ಕಟ್ಟುವಂತೆ ನಮ್ಮ ಈ ಆಧುನಿಕ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ಸದಾ ನಾವು ಪ್ರೇರಕರಾಗಿರಬೇಕು, ಉತ್ತಮ ನಡೆ-ನುಡಿಯಲ್ಲಿ ಸಾಗಲು ನನ್ನ ಈವರೆಗಿನ ಜೀವನದ ಎಲ್ಲಾ ಹಂತಗಳಲ್ಲೂ ದಾರಿ ತೋರಿಸಿದ ಹಾಗೂ ಈ ದಿನ ಒಬ್ಬ 'ಶಿಕ್ಷಕಿ' ಎಂಬ ಶ್ರೇಷ್ಠ ವೃತ್ತಿಗೆ ಸೇರಲು ಸಶಕ್ತಗೊಳಿಸಿದ ನನ್ನಲ್ಲಿರುವ ಜ್ಞಾನದ ಜೊತೆಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕರಿಸಿದ ನನ್ನೆಲ್ಲಾ ಗುರುವೃಂದಕ್ಕೆ ನಮನ.. ನಮನ.. ನನ್ನದೊಂದು ದೊಡ್ಡ ನಮನ.. ಗುರು ವೃಂದಕ್ಕೆ ನಮನ.
W/o ಎಂ ಉಮೇಶ
ಚೋಮಗುರಿ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
Mob : +91 95356 92734
********************************************
ಪ್ರಾಥಮಿಕ ಶಿಕ್ಷಣ ಮುಗಿಸಿದ ನಾನು ಅನಿವಾರ್ಯವಾಗಿ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿರುವ ನಿರ್ಮಲಾ ಪ್ರೌಢಶಾಲೆಗೆ ಸೇರಬೇಕಾಯಿತು. ಅಲ್ಲಿ ಕನ್ನಡ ಪಾಠ ಮಾಡುತ್ತಿದ್ದವರು ಖ್ಯಾತ ಗಾಯಕ ಹಾಗೂ ಗಮಕಿ ಕಲಾವಿದರಾದ ದಿ. ಚಂದ್ರಶೇಖರ ಕೆದಿಲಾಯ ಸರ್. ಇವರೆಂದರೆ ಎಲ್ಲರಿಗೂ ಭಯ. ಬಹಳ ಶಿಸ್ತಿನ ಮನುಷ್ಯ. ಕ್ಲಾಸಿಗೆ ಬರುವಾಗ ಕನ್ನಡ ಪುಸ್ತಕ ಡೆಸ್ಕ್ ಮೇಲಿರಬೇಕು. ಇಲ್ಲದಿದ್ದರೆ ಪೆಟ್ಟು ಸಿಗುತ್ತಿತ್ತು. ಇನ್ನು ಕನ್ನಡ ನೋಟ್ಸ್ ಕೊಡುವ ವಿಧಾನ ಹೇಗಂದ್ರೆ ಅವರು ಹೇಳಿಕೊಂಡು ಹೋಗ್ತಾರೆ ಅದನ್ನು ಸರಿಯಾಗಿ ಆಲಿಸಬೇಕು. ನಂತರ ಮನೆಯಲ್ಲಿ ಬರೆಯಬೇಕು. ನೋಟ್ಸ್ ತಿದ್ದುವ ಮೊದಲು ಯಾರ ನೋಟ್ಸ್ ಕಂಪ್ಲೀಟ್ ಆಗಿದೆ ಅಂತ ಕೇಳ್ತಾ ಇರಲಿಲ್ಲ. ಬದಲಿಗೆ ಬೆಂಚು ಪ್ರಕಾರ ಅವರು ಹೇಳಿದ ಪ್ರಶ್ನೆಗೆ ಬರೆದ ಉತ್ತರವನ್ನು ಓದುತ್ತಾ ಹೋಗಬೇಕು. ಸರಿಯಾಗಿ ಇದ್ದರೆ ಹೊಗಳುತ್ತಿದ್ದರು. ತಪ್ಪು ಬರೆದರೆ ಬೆತ್ತದ ರುಚಿ ತೋರಿಸುತ್ತಿದ್ದರು.
ಕನ್ನಡ ಪದ್ಯ ಭಾಗ ಎಂದರೆ ಎಲ್ಲರಿಗೂ ಇಷ್ಟ ಏಕೆಂದರೆ ಅವರೊಬ್ಬ ಅದ್ಭುತ ಹಾಡುಗಾರರು. ಅವರ ಕನ್ನಡ ಭಾಷಾ ಶೈಲಿಯಿಂದ ನನ್ನಲ್ಲಿ ಸಾಹಿತ್ಯದ ಆಸಕ್ತಿ ಮೂಡಿತ್ತು. ಆಗಲೇ ನಾನು ಸಣ್ಣ ಪುಟ್ಟ ಕವಿತೆ ಬರೆಯಲು ಆರಂಭಿಸಿದ್ದು. ಮೊತ್ತ ಮೊದಲು ಬಾರ್ಕೂರು ನೇಶನಲ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಟಿಯಲ್ಲಿ ಭಾಗವಹಿಸುವ ಅವಕಾಶ ಸಿಗಲು ಕೆದ್ಲಾಯ ಸರ್ ಕಾರಣೀಭೂತರು. ಇಂದು ನಾನು ಸಣ್ಣಪುಟ್ಟ ಸಾಹಿತ್ಯ ರಚಿಸಲು ಅವರೇ ಸ್ಪೂರ್ತಿ. ಅವರ ಶಿಷ್ಯೆ ಎನಿಸಿದ್ದು ನನ್ನ ಹೆಮ್ಮ. ಎರಡು ವರ್ಷದ ಹಿಂದೆ ಅವರು ನಮ್ಮನ್ನು ಅಗಲಿದರೂ ಅವರು ನೆನಪು ನಿತ್ಯ ಚಿರಸ್ಮರಣೀಯ. ಗುರುಭ್ಯೋನಮ:
ಸ.ಹಿ.ಪ್ರಾ.ಶಾಲೆ ಪಡುಬೆಟ್ಟು
ನೆಲ್ಯಾಡಿ ಗ್ರಾಮ ಮತ್ತು ಅಂಚೆ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 77603 03308
********************************************