ಸ್ವಾತಂತ್ರ್ಯೋತ್ಸವದ ಕಥೆ - ವ್ಯಥೆ....
Wednesday, August 14, 2024
Edit
ಸ್ವಾತಂತ್ರ್ಯೋತ್ಸವದ ವಿಶೇಷ ಲೇಖನ : ಸ್ವಾತಂತ್ರ್ಯೋತ್ಸವದ ಕಥೆ - ವ್ಯಥೆ....
ಲೇಖಕರು: ಕೆ ಎಂ ಅಬೂಬಕರ್ ಸಿದ್ದೀಖ್ ಮೋಂಟುಗೋಳಿ
ಪ್ರಧಾನ ಸಂಪಾದಕರು
ಮೊಯಿಲಾಂಜಿ ಮಾಸಪತ್ರಿಕೆ
ಕುತ್ತಾರ್, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
Mob: 7760909786
ಜಗಲಿಯ ಎಲ್ಲಾ ಓದುಗರಿಗೂ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಶುಭಾಶಯಗಳು...
ಪ್ರೀತಿಯ ಮಕ್ಕಳೇ.... ಆಗಸ್ಟ್ 15, ಸ್ವಾತಂತ್ರ್ಯೋತ್ಸವ ದಿನ. ಹಾಗೆಂದರೇನು? ನಮಗದು ಸರಿಯಾಗಿ ಅರ್ಥವಾಗುವುದಿಲ್ಲ. ಏಕೆಂದರೆ ನಾವು ಹುಟ್ಟುತ್ತಲೇ ಸ್ವತಂತ್ರರಿದ್ದೇವೆ. ಆದರೆ 1947ರ ಆಗಸ್ಟ್ 14ರ ತನಕ ನಮಗೆ ಸ್ವಾತಂತ್ರ್ಯವಿರಲಿಲ್ಲ. ನಮ್ಮ ತಾತ ಮುತ್ತಾತಂದಿರು ಬ್ರಿಟಿಷರ ಅಧೀನದಲ್ಲಿದ್ದರು. ಬ್ರಿಟಿಷರು ಬಂದು ನಮ್ಮ ದೇಶದ ಸಂಪತ್ತನ್ನು ಅವರ ದೇಶಕ್ಕೆ ಹೊತ್ತುಕೊಂಡು ಹೋಗುತ್ತಿದ್ದರು. ಅಲ್ಲಿನ ಅಧಿಕಾರಿಗಳನ್ನು ಇಲ್ಲಿಗೆ ತಂದು ನಮ್ಮನ್ನು ದುಡಿಸುತ್ತಿದ್ದರು, ದಂಡಿಸುತ್ತಿದ್ದರು. ಬ್ರಿಟಿಷರು ತಾವು ಸೇರಿಕೊಂಡು ಮಜಾ ಉಡಾಯಿಸಲು ದೊಡ್ಡ ಕ್ಲಬ್ಬುಗಳನ್ನು ನಡೆಸುತ್ತಿದ್ದರು. ಆ ಕ್ಲಬ್ಬುಗಳ ಗೇಟಿನಲ್ಲಿ ಒಂದು ಬೋರ್ಡ್ ಕಾಣಬಹುದಿತ್ತು- Indians and Dogs are not allowed- ಭಾರತೀಯರಿಗೂ ನಾಯಿಗಳಿಗೂ ಪ್ರವೇಶವಿಲ್ಲ! ಅಂದರೆ, ಬ್ರಿಟಿಷರ ಪಾಲಿಗೆ ನಾವು ಕೇವಲ ನಾಯಿಗಳಷ್ಟೇ!
ಅವರು ಮಾಡಿದ್ದ ಕಾನೂನುಗಳೆಲ್ಲವೂ ಅವರಿಗೆ ಮಾತ್ರ ಅನುಕೂಲಕರವಾಗಿದ್ದವು. ಉದಾಹರಣೆಗೆ; ಭಾರತೀಯನೊಬ್ಬನು ಬ್ರಿಟಿಷನೊಬ್ಬನನ್ನು ಕೊಂದರೆ ಅವನನ್ನು ಗಲ್ಲಿಗೇರಿಸಿ ಕೊಲ್ಲಬೇಕು. ಆದರೆ ಒಬ್ಬ ಬ್ರಿಟಿಷ್ ವ್ಯಕ್ತಿ ಭಾರತೀಯ ಹೆಣ್ಣೊಬ್ಬಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದರೂ ನೂರು ರೂಪಾಯಿ ದಂಡ ತೆತ್ತರೆ ಸಾಕಿತ್ತು! ನಮ್ಮ ನಾಡು, ನಮ್ಮ ಜನ. ಅಧಿಕಾರವೆಲ್ಲ ಬ್ರಿಟಿಷರದ್ದು. ಹೇಗಿದ್ದೀತು?
ಬ್ರಿಟಿಷರಿಂದ ಶೋಷಣೆ, ಹಿಂಸಾಚಾರಗಳು ಅತಿಯಾದಾಗ ನಮ್ಮ ಪೂರ್ವಿಕ ಭಾರತೀಯರು ಅವರ ವಿರುದ್ಧ ಸಿಡಿದೆದ್ದರು. ಹೋರಾಟಕ್ಕಿಳಿದರು. 1757ರ ಪ್ಲಾಸಿ ಕದನ, 1799ರ ವರೆಗಿನ ಮೈಸೂರು ಯುದ್ಧಗಳು ಸೇರಿದಂತೆ ಹಲವು ರಾಜ ಮಹಾರಾಜರು ಬ್ರಿಟಿಷರ ವಿರುದ್ಧ ಹೋರಾಡಿದ್ದರೂ ನಮ್ಮ ಕೆಲವು ರಾಜರುಗಳೇ ಬ್ರಿಟಿಷರೊಂದಿಗೆ ಸೇರಿಕೊಂಡಿದ್ದರಿಂದ ಅವರು ಮತ್ತಷ್ಟು ಪ್ರಬಲರಾದರು. 1857ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಹೋರಾಟ (ಬ್ರಿಟಿಷರು ಅದನ್ನು 'ಸಿಪಾಯಿ ದಂಗೆ' ಎಂದು ಕರೆದು ಸಣ್ಣದು ಮಾಡಿದ್ದರು!) ಒಂದು ನಿರ್ಣಾಯಕ ಸಮರವಾಗಿತ್ತು. 1857 ಮೇ 11 ರಂದು ಹೋರಾಟಗಾರರು ದಿಲ್ಲಿಯಲ್ಲಿ ಸೇರಿ ಮೊಗಲ್ ದೊರೆ ಮುಹಮ್ಮದ್ ಬಹಾದೂರ್ ಶಾ ಝಫರ್‌ರನ್ನು ಭಾರತದ ಚಕ್ರವರ್ತಿ ಎಂದು ಘೋಷಿಸುತ್ತಾರೆ. ಭಾರತ ಸ್ವತಂತ್ರವೆಂದು ಘೋಷಿಸಿ ಹೋರಾಟಕ್ಕೆ ಚಾಲನೆ ನೀಡಿದ ಬಹಾದೂರ್ ಶಾ...
ಗಾಜಿಯೋ ಮೇ ಬೂ ರಹೇಗಿ
ಜಬ್ ತಕ್ ಈಮಾನ್ ಕಿ
ತಬ್ ತೊ ಲಂಡನ್ ತಕ್ ಚಲೇಗಿ
ತೇಗ್ ಹಿಂದೂಸ್ಥಾನ್ ಕಿ -
"ಭಾರತದ ಹೋರಾಟಗಾರರಿಗೆ ಕೊನೆ ತನಕವೂ ಅಣುವಿನಷ್ಟಾದರೂ ದೃಢವಿಶ್ವಾಸವಿದ್ದರೆ ಭಾರತದ ಖಡ್ಗ ಲಂಡನ್ನಿನ ಬಸಿರನ್ನು ಬೇಧಿಸಲು ಮುನ್ನುಗ್ಗುತ್ತಿರುತ್ತದೆ" ಎಂದು ಘೋಷಿಸುತ್ತಾರೆ.
ಅಲ್ಲಿಂದ ಹೋರಾಟದ ಕಿಚ್ಚು ಎಲ್ಲೆಡೆ ಹಬ್ಬುತ್ತದೆ. ಬ್ರಿಟಿಷರಿಗೆ ತಲೆ ನೋವು ಶುರುವಾಯಿತು. ಹೋರಾಟವನ್ನು ಮಟ್ಟ ಹಾಕಲು ಉಗ್ರಶಿಕ್ಷೆಗೆ ಇಳಿಯುತ್ತಾರೆ. 1858 ಎಪ್ರಿಲ್18ರಂದು ಧೀರ ಹೋರಾಟಗಾರರಾಗಿದ್ದ ತಾತ್ಯಾಟೋಪಿ, ನಾನಾ ಸಾಹಿಬ್, ಅಜೀಮುಲ್ಲಾ ಖಾನ್, ಅಹಮದುಲ್ಲಾ ಶಾ, ಕುನ್ವರ್ ಸಿಂಗ್, ಜನರಲ್ ಬಕ್ತ್ ಖಾನ್, ಬೇಗಂ ಹಜರತ್ ಮಹಲ್ ಮೊದಲಾದವರನ್ನು ಗಲ್ಲಿಗೇರಿಸಿದರೆ, ಬಹಾದೂರ್ ಶಾ ಝಫರ್ ರನ್ನು ರಂಗೂನ್ (ಬರ್ಮಾ/ಈಗಿನ ಮ್ಯಾನ್ಮಾರ್) ಗೆ ಗಡೀಪಾರು ಮಾಡಲಾಯಿತು. ಎಂಬತ್ತು ವರ್ಷ ದಾಟಿದ್ದ ವಯೋವೃದ್ಧ, ನಾಲ್ಕೈದು ಶತಮಾನಗಳ ಕಾಲ ಭಾರತವನ್ನು ಆಳಿದ ಮೊಗಲ್ ರಾಜವಂಶದ ದೊರೆ, ಅರಸನಾಗಿ ಅರಮನೆಯಲ್ಲಿ ಆರಾಮವಾಗಿ ಬದುಕಿದ್ದ ಬಹಾದೂರ್ ಶಾ ತಮ್ಮ ಕೊನೆಯ ಕಾಲವನ್ನು ಸೆರೆಮನೆಯಲ್ಲಿ ಸಾಮಾನ್ಯ ಖೈದಿಯಾಗಿ ಕಳೆಯಬೇಕಾಯಿತು. ಭಾರತದ ಮಣ್ಣಲ್ಲಿ ಮಲಗಬೇಕೆಂಬ ಅವರ ಅಂತಿಮ ಆಸೆಯನ್ನು ಕೂಡ ತಳ್ಳಿ ಹಾಕಿದ ಬ್ರಿಟಿಷರು ಮೃತ ದೇಹವನ್ನು ಭಾರತಕ್ಕೆ ತರಲು ಸಮ್ಮತಿಸಲಿಲ್ಲ. ಸ್ವತಃ ಕವಿಯಾಗಿದ್ದ ಬಹದೂರ್ ಶಾ, ಹೃದಯ ವಿದ್ರಾವಕವಾಗಿ ಹೇಳುತ್ತಾರೆ;
ಇತ್ನಾ ಬದ್‌ನಸೀಬ್ ಝಫರ್!
ದಫನ್ ಕೇಲಿಯೆ ಕೀ ದೋ ಗಝ್ ಝಮೀನ್
ನ ಮಿಲಾ ಕೂಹೆ ಯಾರ್ ಮೆ!!
(ಈ ಝಫರ್ ಅದೆಷ್ಟು ಭಾಗ್ಯಹೀನ! ಎರಡು ಗಜ ಭೂಮಿಯೂ ದಿಲ್ಲಿಯಲ್ಲಿ ಸಿಗಲಿಲ್ಲವಲ್ಲ!)
ಒಬ್ಬೊಬ್ಬರು ಹೋರಾಟಗಾರರದ್ದೂ ಇಂತಹುದೇ ಕಥೆ.
ಹೋರಾಟ ಮುಂದುವರಿಯಿತು. 1919ರಲ್ಲಿ ಮಹಾತ್ಮಾ ಗಾಂಧೀಜಿಯವರು ನೇತೃತ್ವ ವಹಿಸುತ್ತಾರೆ. ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ ಸೇರಿದಂತೆ ನಾನಾ ಬಗೆಯ ಹೋರಾಟಗಳು ನಡೆಯುತ್ತವೆ. ಹಲವಾರು ವರ್ಷಗಟ್ಟಲೆ ಜೈಲುವಾಸ ಅನುಭವಿಸುತ್ತಾರೆ. ಭಗತ್ ಸಿಂಗ್, ಅಶ್ಫಕುಲ್ಲಾ ಖಾನ್ ಸೇರಿದಂತೆ ಲಕ್ಷಾಂತರ ಭಾರತೀಯರು ಜೀವದಾನ ಮಾಡುತ್ತಾರೆ. ಆದರೆ ಹೋರಾಟ ನಿಲ್ಲುವುದಿಲ್ಲ. ಚೆಂಡನ್ನು ಎಷ್ಟು ಬಲವಾಗಿ ನೆಲಕ್ಕೆ ಎಸೆಯುತ್ತೇವೋ, ಅಷ್ಟು ಎತ್ತರಕ್ಕೆ ಅದು ಏರುತ್ತದಲ್ಲ, ಅದೇ ರೀತಿ ಹೋರಾಟವನ್ನು ಮಟ್ಟ ಹಾಕಲು ಪ್ರಯತ್ನಿಸಿದಂತೆ ಹೋರಾಟ ಹಿಡಿದಿಡಲು ಆಗದಷ್ಟು ಜೋರಾಗುತ್ತದೆ. ಅಂತಿಮವಾಗಿ 1947ರ ದಿನಾಂಕ 14 ಕಳೆದ 15ರ ಮಧ್ಯರಾತ್ರಿ ಭಾರತ ಸ್ವತಂತ್ರವಾಗುತ್ತದೆ. ಬ್ರಿಟಿಷರು ಭಾರತ ಬಿಟ್ಟು ಹೋಗುತ್ತಾರೆ. ಭಾರತದ ಅಧಿಕಾರ ಭಾರತೀಯರ ಕೈಗೆ ಬರುತ್ತದೆ. ಬ್ರಿಟಿಷರ ಧ್ವಜವನ್ನು ಇಳಿಸಿ ಪಂಡಿತ್ ಜವಾಹರಲಾಲ್ ನೆಹರೂ ಭಾರತದ ತ್ರಿವರ್ಣ ಧ್ವಜವನ್ನು ಆರೋಹಣ ಮಾಡುತ್ತಾರೆ. ಆ ಸಂಭ್ರಮವನ್ನು ಪ್ರತಿ ವರ್ಷ ನೆನಪು ಮಾಡಿಕೊಳ್ಳುವುದೇ ಸ್ವಾತಂತ್ರ್ಯೋತ್ಸವ ದಿನಾಚರಣೆ.
78ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ನಾವು ದೇಶಕ್ಕಾಗಿ ದೇಹ ಕೊಟ್ಟ ಪೂರ್ವಿಕರನ್ನು ನೆನೆಯಬೇಕು. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಭಾರತದ ಮಣ್ಣನ್ನು, ಆ ಮಣ್ಣಿನಲ್ಲಿ ಬದುಕು ಕಟ್ಟಿಕೊಂಡಿರುವ ಪ್ರತಿಯೊಬ್ಬರನ್ನೂ ಜಾತಿ ಮತ ಪಥ ಪಂಥಗಳ ಬೇಧವಿಲ್ಲದೆ ಪ್ರೀತಿಸಬೇಕು. ಅದು ನಿಜವಾದ ದೇಶಪ್ರೇಮ. ಆಗ ಮಾತ್ರ ದೇಶ ಬೆಳೆಯುತ್ತದೆ, ಬೆಳಗುತ್ತದೆ. ಹಾಗಾಗಲಿ ಎಂಬ ಹಾರೈಕೆಯೊಂದಿಗೆ ಸ್ವಾತಂತ್ರ್ಯೋತ್ಸವ ಶುಭಾಶಯಗಳು.
ಪ್ರಧಾನ ಸಂಪಾದಕರು
ಮೊಯಿಲಾಂಜಿ ಮಾಸಪತ್ರಿಕೆ
ಕುತ್ತಾರ್, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
Mob: 7760909786
******************************************