-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 41

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 41

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 41
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

                       
ಪ್ರೀತಿಯ ಮಕ್ಕಳೇ... ಮಾನವನಲ್ಲಿ ಸಾಗಾಣಿಕಾ ವ್ಯವಸ್ಥೆ ಹೇಗಿದೆ ಎಂಬುದನ್ನು ತಿಳಿದೆವು. ಹಾಗಾದರೆ ಭೂಮಿಯ ಮೇಲೆ ಸಸ್ಯಗಳೆಂಬ ಇನ್ನೊಂದು ಜೀವಿಗಳಿವೆಯಲ್ಲ ಅವುಗಳಲ್ಲಿ ಸಾಗಾಣಿಕಾ ವ್ಯವಸ್ಥೆ ಇದೆಯೇ ಹೇಗೆ ಎಂದು ನೀವು ಕೇಳುತ್ತಿದ್ದೀರಿ ತಾನೆ...? ಪಾಚಿಯಂತಹ ಜೀವಿಗಳು ನೀರಿನಲ್ಲೇ ಮುಳುಗೇಳುವುದರಿಂದ ಅವುಗಳ ಸುತ್ತಲೂ ನೀರೇ ಇರುತ್ತದೆ. ನೀರಿನ ಸಾಗಾಟದ ಅವಶ್ಯಕತೆಯಾದರೂ ಏನು ಎಂಬುದು ಸರಳ ವಿವರಣೆ. ಆದರೆ ಭೂಮಿಯ ಮೇಲೆ ಬದುಕುತ್ತವಲ್ಲ ಭೂಮಿಯಿಂದ ನೀರನ್ನು ಹೀರಿ ಬದುಕುವಂತವು ಅವುಗಳಿಗಾದರೂ ಒಂದು ಸಾಗಾಣಿಕಾ ವ್ಯವಸ್ಥೆ ಬೇಡವೇ? ಬೇಕೇ ಬೇಕು ತಾನೆ? ಸಣ್ಣ ಪುಟ್ಟ ಗಿಡಗಳು ಬಿಡಿ ಅಮೇರಿಕಾದಲ್ಲಿ ಬೆಳೆಯುವ ಹೆಗ್ಗಾತ್ರದ ಸಿಕೋಯಾ ಮರಗಳ ಎತ್ತರ ಸರಾಸರಿ 250 ರಿಂದ 300 ಅಡಿಗಳು. ಅತೀ ಎತ್ತರದ ಸಿಕೋಯಾ ಮರ 325 ಅಡಿ ಎತ್ತರವಿದೆ. ಅಂದರೆ ಹೆಚ್ಚು ಕಡಿಮೆ 30 ಮಹಡಿಯ ಕಟ್ಟಡಕ್ಕಿಂತಲೂ ಎತ್ತರ. ಅಂತಹ ಎತ್ತರಕ್ಕೆ ನೀರು ಕೊಂಡೊಯ್ಯುವುದೆಂದರೆ ಸುಲಭದ ಮಾತೇ!! ಒಬ್ಬ ಇಂಜಿನಿಯರ್ ಬಳಿ ಹೋಗಿ ಅಷ್ಟು ಎತ್ತರಕ್ಕೆ ನೀರನ್ನು ಕಳುಹಿಸಲು ಏನು ಮಾಡಬೇಕು ಎಂದು ಕೇಳಿ ನೋಡಿ. ಅವರು ತಲೆ ಕೆರೆದುಕೊಳ್ಳುತ್ತಾ ಇಷ್ಟು ಅಶ್ವ ಶಕ್ತಿಯ, ಇಷ್ಟು ಹಂತಗಳ, ಪಂಪ್ ಬೇಕು. ಅದಕ್ಕೆ ಗಂಟೆಗ ಇಷ್ಟು ವಿದ್ಯುತ್ ಬಿಲ್ ಬರುತ್ತದೆ ಎಂದು ಲೆಕ್ಕದ ಮತ್ತು ವೆಚ್ಚದ ಬಿಲ್ ಅನ್ನು ನಿಮ್ಮ ಮುಂದಿಡುತ್ತಾರೆ. ಆದರೆ ಪ್ರಕೃತಿ ಎಂಬ ಇಂಜಿನಿಯರ್ ಸಿಕೋಯಾ ಮರಗಳನ್ನು ಸೃಷ್ಟಿಸುವಾಗ ಯಾವ ನೀರೆತ್ತುವ ಪಂಪನ್ನೂ ಜೋಡಿಸದೇ 30 ಮಹಡಿಗಳೆತ್ತರದ ಮರ ನಿರ್ಮಿಸಿದ್ದಾರೆಂದರೆ ಆತನ ಧೈರ್ಯಕ್ಕೆ ಏನೆನ್ನ ಬೇಕು ನೀವೇ ಹೇಳಿ.

ಸಾಗಾಣಿಕಾ ವ್ಯವಸ್ಥೆ ಹೊಂದಿರುವ ಈ ಭೂಮಿಯ ಮೇಲಿನ ಸಸ್ಯಗಳನ್ನು ನಾಳ ಸಸ್ಯಗಳು (vascular plants) ಎಂದು ಕರೆಯುತ್ತೇವೆ. ಇವುಗಳಲ್ಲಿ ನೀರನ್ನು ಸಾಗಿಸಲು ಒಂದು ವ್ಯವಸ್ಥೆ ಮತ್ತು ಆಹಾರ ಸಾಗಿಸಲು ಇನ್ನೊಂದು ವ್ಯವಸ್ಥೆ ಇದೆ. ನೀರನ್ನು ಸಾಗಿಸುವುದು ನೀರ್ಗೊಳವೆಗಳಾದರೆ (xylem) ಆಹಾರವನ್ನು ಸಾಗಿಸಲು ಆಹಾರದ ಕೊಳವೆಗಳಿವೆ (phloem).

ನೀರ್ಗೊಳವೆ ಅಂಗಾಂಶಗಳಲ್ಲಿ ನೀರ್ಗೊಳವೆ ಕೋಶಗಳು (trechids), ನೀರ್ಗೊಳವೆಗಳು (trechea), ಕ್ಸೈಲಮ್ ಪ್ಯಾರೆಂಕೈಮಾ ಮತ್ತು ಕ್ಸೈಲಮ್ ಸ್ಲೀರೆಂಕೈಮಾ ಎಂಬ ನಾಲ್ಕು ರೀತಿಯ ಕೋಶಗಳಿವೆ. ನೀರ್ಗೊಳವೆ ಕೋಶಗಳು ತೂತಿರುವ ಗೋಡೆಗಳಿಂದ ಮಾಡಲ್ಪಟ್ಟ ಕೋಶಗಳು. ಇವುಗಳ ಮೂಲಕ ನೀರು ಮೇಲಕ್ಕೆ ಹರಿಯುತ್ತದೆ. ಅದೇ ನೀರ್ಗೊಳವೆಗಳನ್ನು ತೆಗೆದುಕೊಂಡರೆ ಇವು ಯಾವುದೇ ಅಡೆತಡೆಗಳಿಲ್ಲದೆ ನೀರು ಸರಾಗವಾಗಿ ಚಲಿಸಬಲ್ಲ ಕೊಳವೆಯಂತಹ ರಚನೆಗಳು. ಕ್ಸೈಲಮ್ ಸ್ಲೀರೆಂಕೈಮಾ ಈ ಉದ್ದವಾದ ಕೊಳವೆಗಳಿಗೆ ಸೂಕ್ತ ಆಧಾರವನ್ನೊದಗಿಸುವ ಕೆಲಸ ಮಾಡುತ್ತವೆ. ಉದ್ದವಾದ ಪೈಪಿಗೆ ಆಧಾರ ನೀಡುವ ದೋಟಿಯ ಹಾಗೆ.

ನೀರ್ಗೊಳವೆಗಳಲ್ಲಿ ನೀರನ್ನು ಸಾಗಿಸುವುದೆಂದರೆ ನೆಲದಿಂದ ಮೇಲೆತ್ತುವುದು. ಇದು ಗುರುತ್ವಾಕರ್ಷಣ ಶಕ್ತಿಯ ವಿರುದ್ಧ ಕೆಲಸ ಮಾಡುವುದೆಂದು ಅರ್ಥ. ಇದರಲ್ಲಿ ನೀರು ಅಷ್ಟು ಎತ್ತರಕ್ಕೆ ಏರುವ ವಿಸ್ಮಯ ಸೂಕ್ತ ವಿವರಣೆ ಹೇಳುವುದು ಕಷ್ಟವೇ. ಆದರೆ ವಿಜ್ಞಾನ ಈ ನಿಟ್ಟಿನಲ್ಲಿ ತನಗೆ ತೋಚುವ ವಿವರಣೆ ನೀಡುತ್ತಾ ಹೋಗುತ್ತದೆ. ಬೇರಿನ‌ ಕೋಶಗಳಲ್ಲಿ ನೀರಿನ ಸಾಂದ್ರತೆ ಕಡಿಮೆ ಹೊರಗಡೆ ಸಾಂದ್ರತೆ ಹೆಚ್ಚು. ಆದ್ದರಿಂದ ಕೋಶಪೊರೆಯ ಮೂಲಕ ನಿರಂತರವಾಗಿ ನೀರು ಕೋಶದೊಳಗಡೆ ಚಲಿಸುತ್ತದೆ. ಇದರಿಂದ ಕೋಶ ಉಬ್ಬುತ್ತ ಹೋಗಿ ಅದರ ಒತ್ತಡ ಇದಕ್ಕೆ ಜೋಡಿಸಿಟ್ಟ ನೀರ್ಗೊಳವೆಯಲ್ಲಿ ಮೇಲಕ್ಕೇರುತ್ತದೆ. ಈ ರೀತಿ ಎಷ್ಟು ಮೇಲಕ್ಕೆ ಎತ್ತಬಹುದು ಎಂದರೆ ಇದಕ್ಕೆ ಉತ್ತರ ನೀವು ಊಹಿಸುವುದು ಕಷ್ಟ. ಒಂದು ಸ್ಟ್ರಾವನ್ನು ನೀರಿನಲ್ಲಿ ಮುಳುಗಿಸಿ ಅದರಲ್ಲಿ ನೀರಿನ ಮಟ್ಟ ನೋಡಿ. ಸ್ಟ್ರಾದಲ್ಲಿ ನೀರು ಲೋಟದಲ್ಲಿರುವುದಕ್ಕಿಂತ ಹೆಚ್ಚು ಎತ್ತರದಲ್ಲಿರುತ್ತದೆ. ಈ ಸ್ಟ್ರಾ ಸಪೂರವಾದಷ್ಟು ನೀರು ಮೇಲಕ್ಕೇರುವ ಎತ್ತರ ಹೆಚ್ಚುತ್ತಾ ಹೋಗುತ್ತದೆ. ಇದನ್ನು ಲೋಮನಾಳ ಬಲ (capillary force) ಎನ್ನುತ್ತೇವೆ. ದೀಪದ ಬತ್ತಿಯಲ್ಲಿ ಎಣ್ಣೆ ಮೇಲಕ್ಕೆ ಏರುತ್ತದಲ್ಲ ಅದು ಇದೇ ತತ್ವದ ಮೂಲಕ. ಇಲ್ಲಿಯೂ ಅದು 300 ಅಡಿ ಎತ್ತರಕ್ಕೆ ತಲುಪುತ್ತದೆಯೇ ಎಂದು ಕೇಳಬೇಡಿ. ಅದು ಅಧಿಕ ಪ್ರಸಂಗ ಎನ್ನಿಸಬಹುದು. ಹಾಗೋ ಹೀಗೋ ಮಾಡಿ ನೀರು 300 ಅಡಿ ಎತ್ತರಕ್ಕೆ ಏರಿ ಬಿಟ್ಟಿದೆ. ಅದು ಯಾವುದೇ ಕ್ಷಣದಲ್ಲಿ ಕುಸಿಯಬಹುದಲ್ಲ ಎಂಬ ತಾರ್ಕಿಕ ವಾದ ಮುಂದಿಡುತ್ತೀರಿ ಎಂದುಕೊಳ್ಳೋಣ. ಅದಕ್ಕೂ ನಮ್ಮ ಬಳಿ ಇನ್ನೊಂದು ವಾದವಿದೆ. ಸಸ್ಯಗಳ ಎಲೆಗಳಲ್ಲಿರುವ ಸೂಕ್ಷ್ಮವಾದ ಪತ್ರ ಸೂಕ್ಷ್ಮ ರಂಧ್ರಗಳ ಮೂಲಕ (stomata) ನೀರು ಆವಿಯಾಗುತ್ತಲೇ ಇರುತ್ತದೆ. ಈ ಆವಿಯಾಗುವಾಗ ನೀರಿನ ಅಣುಗಳ ಅಂಟುವ ಗುಣದಿಂದಾಗಿ (cohesive force) ಈ ನೀರಿನ ಸ್ತಂಭ ಕತ್ತರಿಸಿಹೋಗದಂತೆ ಬೇರಿನಿಂದ ನಿರಂತರವಾಗಿ ನೀರು ಮೇಲೇರುವಂತೆ ಮಾಡುತ್ತದೆ ಎನ್ನುತ್ತದೆ ವಿಜ್ಞಾನ. ಈ ಸಜಾತೀಯ ಮತ್ತು ವಿಜಾತೀಯ ಅಂಟುಗುಣ (cohesive and adhesive force) ಗುರುತ್ವ ಬಲಕ್ಕಿಂತ ಹೆಚ್ಚು ಬಲಯುತವಾಗಿದೆಯೇ ನನ್ನ ಹತ್ತಿರ ಕೇಳಬೇಡಿ. ಆದರೆ 300 ಅಡಿ ಎತ್ತರದ ಸಿಕೋಯಾ ಮರಗಳು ಈಗಲೂ ಉತ್ತರ ಅಮೇರಿಕಾದಲ್ಲಿ ಜೀವಂತವಾಗಿವೆ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 



Ads on article

Advertise in articles 1

advertising articles 2

Advertise under the article