-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 40

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 40

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 40
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


                
ಪ್ರೀತಿಯ ಮಕ್ಕಳೇ.... ಹೃದಯದ ರಚನೆಯ ಬಗ್ಗೆ ಕಳೆದ ವಾರ ಓದಿದಿರಿ. ಈ ವಾರ ರಕ್ತ ಪರಿಚಲನೆಯ ಬಗ್ಗೆ ಚರ್ಚಿಸೋಣ. ದೇಹದ ಬೇರೆ ಬೇರೆ ಭಾಗಗಳಿಂದ ಎರಡು ಅಭಿಧಮನಿಗಳು (vena cava) ರಕ್ತವನ್ನು ಹೃದಯದ ಬಲಹೃತ್ಕರ್ಣದೊಳಕ್ಕೆ ತಂದು ಸುರಿಯುತ್ತವೆ. ದೇಹದ ಕೆಳಭಾಗದ ರಕ್ತವನ್ನು ನೀಚ ಅಭಿದಮನಿ ಹೊತ್ತು ತಂದರೆ ತಲೆಯ ಭಾಗದ ರಕ್ತವನ್ನು ಉಚ್ಛ ಅಭಿಧಮನಿ ತಂದು ಸುರಿಯುತ್ತದೆ. ಇದು ಪೂರ್ತಿಯಾಗಿ ಆಮ್ಲಜನಕ ರಹಿತ ರಕ್ತ. ಬಲ ಹೃತ್ಕರ್ಣ ಸಂಕುಚಿಸಿದಾಗ ರಕ್ತವು ಬಲ ಹೃತ್ಕುಕ್ಷಿಗೆ ತಳ್ಳಲ್ಪಡುತ್ತದೆ. ಬಲಹೃತ್ಕುಕ್ಷಿ ಸಂಕುಚಿಸಿದಾಗ ರಕ್ತವು ಶ್ವಾಸಕೋಶದ ಅಪಧಮನಿಗಳ ಮೂಲಕ ಶ್ವಾಸಕೋಶಕ್ಕೆ ತಲುಪುತ್ತದೆ. ಅಲ್ಲಿನ ಲೋಮನಾಳಗಳ ಮೂಲಕ ಹರಿಯುವಾಗ ರಕ್ತ ಆಮ್ಲಜನಕವನ್ನು ಹೀರಿಕೊಳ್ಳುತ್ತದೆ. ಈ ಲೋಮನಾಳಗಳು ಒಟ್ಟು ಸೇರಿ ಎರಡು ಜೊತೆ ಶ್ವಾಸಕೋಶದ ಅಭಿಧಮನಿಗಳು (pulmonary veins) ರೂಪುಗೊಳ್ಳುತ್ತವೆ. ಇವು ಆಮ್ಲಜನಕಪೂರಿತ ರಕ್ತವನ್ನು ತಂದು ಎಡ ಹೃತ್ಕರ್ಣದೊಳಗೆ ಸುರಿಯುತ್ತದೆ. ಹೀಗೆ ರಕ್ತ ಶ್ವಾಸಕೋಶಕ್ಕೆ ಹೋಗಿ ಅಲ್ಲಿಂದ ವಾಪಾಸು ಹೃದಯವನ್ನು ಸೇರುವ ವರೆಗಿನ ಹಂತವನ್ನು ಶ್ವಾಸಕ ರಕ್ತ ಪರಿಚಲನೆ (pulmonary circulation) ಎನ್ನುತ್ತೇವೆ.

ಎಡ ಹೃತ್ಕರ್ಣಕ್ಕೆ ಬಂದ ಶುದ್ಧ ರಕ್ತವನ್ನು ಎಡ ಹೃತ್ಕುಕ್ಷಿಗೆ ತಳ್ಳಲಾಗುತ್ತದೆ. ಅಲ್ಲಿಂದ ಬಲ ಹೃತ್ಕುಕ್ಷಿಯು ಸಂಕುಚಿಸಿ ಮಹಾಪಧಮನಿಯ (aorta) ಕವಲುಗಳ ಮೂಲಕ ದೇಹದ ಎಲ್ಲಾ ಭಾಗಗಳಿಗೆ ರಕ್ತವನ್ನು ಕಳುಹಿಸುತ್ತದೆ. ಈ ರಕ್ತ ಲೋಮನಾಳಗಳ ಮೂಲಕ ಹರಿಯುವಾಗ ದೇಹದ ಎಲ್ಲಾ ಕೋಶಗಳು ಆಮ್ಲಜನಕ ಸಹಿತ ರಕ್ತದಲ್ಲಿರುವ ಆಮ್ಲಜನಕವನ್ನು ಪಡೆಯುತ್ತವೆ. ಈ ಲೋಮನಾಳಗಳು ಒಟ್ಟು ಸೇರಿ ಉಚ್ಛ ಮತ್ತು ನೀಚ ಅಭಿಧಮನಿಗಳಾಗಿ ರಕ್ತ ಬಲ ಹೃತ್ಕರ್ಣವನ್ನು ತಲುಪುತ್ತದೆ. ಹೀಗೆ ಎಡ ಹೃತ್ಕುಕ್ಷಿಯಿಂದ ಹೊರಟ ರಕ್ತ ದೇಹದ ಎಲ್ಲಾ ಭಾಗಗಳಿಗೆ ಹೋಗಿ ಪುನಃ ಬಂದು ಹೃದಯವನ್ನು ಸೇರುವ ಹಂತವನ್ನು ದೈಹಿಕ ರಕ್ತ ಪರಿಚಲನೆ (systemic circulation) ಎನ್ನುತ್ತೇವೆ. ಹೀಗೆ ರಕ್ತ ಪರಿಚಲನೆಯ ಮೊದಲನೆಯ ಚಕ್ರ ಶ್ವಾಸಕ ಪರಿಚಲನೆ ಮತ್ತು ಎರಡನೆಯ ಚಕ್ರ ದೈಹಿಕ ರಕ್ತ ಪರಿಚಲನೆ ಎರಡು ಪ್ರತ್ಯೇಕವಾಗಿರುವುದರಿಂದ ಇದನ್ನು ದ್ವಿ ರಕ್ತ ಪರಿಚಲನೆ (double circulation) ಎಂದು ಕರೆಯಲಾಗುತ್ತದೆ. ಈ ರೀತಿಯ ದ್ವಿ ರಕ್ತ ಪರಿಚಲನೆ ಪರಿಪೂರ್ಣವಾಗಿ ಕಂಡು ಬರುವುದು ಪಕ್ಷಿಗಳಲ್ಲಿ ಮತ್ತು ಸಸ್ತನಿಗಳಲ್ಲಿ ಮಾತ್ರ.

ಗಾಳಿಯಲ್ಲಿ ಎರಡು ಘಟಕಗಳಾದ ಆಮ್ಲಜನಕ ಮತ್ತು ಇಂಗಾಲದ ಡೈಆಕ್ಸೈಡ್ ಗಳಲ್ಲಿ ಎರಡನೆಯದು ನೀರಿನಲ್ಲಿ ಅಂದರೆ ರಕ್ತದ ಪ್ಲಾಸ್ಮಾದಲ್ಲಿ ಸುಲಭವಾಗಿ ಕರಗುತ್ತದೆ. ಆದರೆ ಆಮ್ಲಜನಕ ಕರಗುವುದು ತುಂಬಾ ಕಡಿಮೆ. ಆದ್ದರಿಂದ ಮೇಲ್ವರ್ಗದ ಜೀವಿಗಳಲ್ಲಿ ಶಕ್ತಿಯ ಬೇಡಿಕೆ ಜಾಸ್ತಿ ಇದ್ದು ಅಧಿಕ ಆಮ್ಲಜನಕದ ಅವಶ್ಯಕತೆ ಇರುವುದರಿಂದ ಆಮ್ಲಜನಕ ಹೊತ್ತೊಯ್ಯಲು ಒಂದು ಪ್ರತ್ಯೇಕ ವರ್ಣಕದ (pigment) ಅಗತ್ಯವಿದೆ. ಇದೇ ಹೀಮೋಗ್ಲೋಬಿನ್. ಈ ಹೀಮೋಗ್ಲೋಬಿನ್ ಶ್ವಾಸಕೋಶಗಳಲ್ಲಿ ಆಮ್ಲಜನಕವನ್ನು ಹೀರಿಕೊಂಡು ಕೆಂಪು ಬಣ್ಣದ ಆಕ್ಸಿ ಹೀಮೋಗ್ಲೋಬಿನ್ ಆಗುತ್ತದೆ. ಕೋಶಗಳಲ್ಲಿ ಆಮ್ಲಜನಕದ ಕೊರತೆ ಇರುವುದರಿಂದ ಅಲ್ಲಿ ಇದು ಆಮ್ಲಜನಕವನ್ನು ಕಳೆದುಕೊಂಡು ಹೀಮೋಗ್ಲೋಬಿನ್ ಆಗಿ ಹ್ಯಾಪಮೋರೆ ಹಾಕಿಕೊಂಡು ಶ್ವಾಸಕೋಶದ ಕಡೆಗೆ ಫೇರಿ ಹೊರಡುತ್ತದೆ. ಬರುವಾಗ ಇದು ಇಂಗಾಲದ ಡೈಆಕ್ಸೈಡ್ ಅನ್ನು ಹೊತ್ತು ತರುವುದಿಲ್ಲ. ಇಂಗಾಲದ ಡೈಆಕ್ಸೈಡ್ ಗೆ ನೀರಿನ ಕಡೆಗೆ ಆಕರ್ಷಣೆ ಜಾಸ್ತಿ. ಅದು ರಕ್ತದ ಪ್ಲಾಸ್ಮಾದಲ್ಲಿ ಕರಗಿ ಕಾರ್ಬಾನಿಕ್ ಆಮ್ಲದ ರೂಪದಲ್ಲಿ ಶ್ವಾಸಕೋಸಕ್ಕೆ ಬರುತ್ತದೆ. ಕಾರ್ಬಾನಿಕ್ ಆಮ್ಲ ಎಂದರೆ ನಾವು ಕುಡಿಯುವ ಸೋಡಾದ ಹಾಗೆ. ಶ್ವಾಸಕೋಶಕ್ಕೆ ಬಂದಾಗ ಸೋಡಾ ಬಾಟಲಿಯ ಮುಚ್ಚಳ ತೆರೆದಾಗ ಅನಿಲದ ಗುಳ್ಳೆಗಳು ಹೊರ ಬರುತ್ತವಲ್ಲ ಹಾಗೆ ಇವು ತಪ್ಪಿಸಿಕೊಂಡು ಬಿಡುತ್ತವೆ. ಈ ಸಮಯದಲ್ಲಿ ಹೀಮೋಗ್ಲೋಬಿನ್ ಆಮ್ಲಜನಕವನ್ನು ಖುಷಿಯಿಂದ ಕುಡಿಯುತ್ತಿರುತ್ತದೆ. ಹೀಗೆ ಅನಿಲ ವಿನಿಮಯ ನಡೆಯುವುದು.

ರಕ್ತ ಪರಿಚಲನೆಯಲ್ಲಿ ಹೃದಯ ಒಂದು ಪ್ರಮುಖ ಅಂಗ. ಇದನ್ನು ನಮ್ಮ ದೇಹ ಗೌರವದೊಂದಿಗೆ ನಡೆಸಿಕೊಳ್ಳುತ್ತದೆ. ಅಂದರೆ ಇದಕ್ಕೆ ರಕ್ತವನ್ನು ಕಳುಹಿಸುವ ಕೆಲಸ ದೈಹಿಕ ರಕ್ತ ಪರಿಚಲನೆಯಡಿಯಲ್ಲಿ ಸೇರಿಸಿಲ್ಲ ಅದರ ಬದಲಾಗಿ ಅದಕ್ಕೆ ಒಂದು ಪ್ರತ್ಯೇಕ ಡಿಪಾರ್ಟ್‌ಮೆಂಟ್ ಇದೆ. ಅಂದರೆ ಪ್ರತ್ಯೇಕ ಪರಿಚಲನಾ ವ್ಯವಸ್ಥೆ ಮಾಡಲಾಗಿದೆ. ಈ ಹೃದಯದ ಪರಿಚಲನೆಗೆ (cardiac circulation) ಪ್ರತ್ಯೇಕವಾದ ಹೃದಯದ ಅಪಧಮನಿ (coronary artery) ಮತ್ತು ಅಭಿಧಮನಿಗಳಿವೆ (coronary veins). ನಾವು ತಿನ್ನುವ ಆಹಾರದಲ್ಲಿರುವ ಕೊಬ್ಬು ಕೆಲವೊಮ್ಮೆ ಈ ರಕ್ತನಾಳಗಳಲ್ಲಿ ಅಂಟಿನ ಹಾಗೆ ಕುಳಿತು ಮುಂದೆ ರಕ್ತ ಹೋಗಲು ತಡೆಯುಂಟು (block) ಮಾಡುತ್ತವೆ. ಇದರಿಂದ ಹೃದಯದ ಸ್ನಾಯುಗಳು ಸಾಕಷ್ಟು ಆಮ್ಲಜನಕ ಸಿಗದೇ ಆಘಾತಕ್ಕೆ ಒಳಗಾಗುತ್ತವೆ. ಇದೇ ಹೃದಯಾಘಾತ. ಹೃದಯಾಘಾತಕ್ಕೆ ಚಿಕಿತ್ಸೆ ಹೇಗೆ ಎನ್ನುವುದು ನಿಮಗೆ ಚೆನ್ನಾಗಿ ತಿಳಿದಿರುವುದಿಂದ ನಾನು ಇಲ್ಲಿಗೆ ಮುಗಿಸುತ್ತೇನೆ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article