-->
ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 09 : ಬರಹ : ಸಾನ್ವಿ ಸಿ ಎಸ್ ,  7ನೇ ತರಗತಿ

ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 09 : ಬರಹ : ಸಾನ್ವಿ ಸಿ ಎಸ್ , 7ನೇ ತರಗತಿ

ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 09
ಲೇಖನ : ಭತ್ತದ ಗದ್ದೆಯಲ್ಲಿ ಒಂದು ದಿನ
ಬರಹ : ಸಾನ್ವಿ ಸಿ ಎಸ್ 
7ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

        
ಅದು ಒಂದು ಮಳೆಗಾಲದ ಮುಂಜಾನೆ. ಅಂದು ನನಗಂತೂ ತುಂಬಾ ಆನಂದದ ದಿನವಾಗಿತ್ತು. ಯಾಕೆಂದರೆ ಅಂದು ನಮಗೆ ಶಾಲೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ ಇತ್ತು. ಒಡಿಯೂರು ಸಮೀಪದ ಬನಾರಿ ಎಂಬಲ್ಲಿ ಶ್ರೀ ಕ್ಷೇತ್ರ ಓಡಿಯೂರಿಗೆ ಸಂಬಂಧಪಟ್ಟ ಒಂದು ಗದ್ದೆ ಇದೆ. ಅಲ್ಲಿ ನೇಜಿ ನೆಡುವ ಕಾರ್ಯಕ್ರಮ. ಅಂದು ಬೆಳಗ್ಗೆ ಬೇಗನೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಶಾಲೆಗೆ ಹೊರಟೆನು. ಏಳನೇ ತರಗತಿ ಹಾಗೂ ಹತ್ತನೇ ತರಗತಿಯ ಎಲ್ಲಾ ಮಕ್ಕಳಿಗೆ ಹಾಗೂ ಉಳಿದ ತರಗತಿಗಳ ಗೈಡ್ಸ್ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ಕರೆದೊಯ್ದರು. ನಾವೆಲ್ಲರೂ ನಡೆಯುತ್ತಾ ಗದ್ದೆಯತ್ತ ಬಂದೆವು.  
ಗದ್ದೆಯ ಪಕ್ಕದ ಒಂದು ಮನೆಯಲ್ಲಿ ನಮಗೆ ಬಟ್ಟೆ ಬದಲಾಯಿಸಲು ಅನುವು ಮಾಡಿಕೊಟ್ಟರು. ಅಲ್ಲಿ ಬಟ್ಟೆ ಬದಲಾಯಿಸಿಕೊಂಡು ಮಳೆ ಸುರಿಯುತ್ತಿದ್ದರೂ ಅದನ್ನು ಲೆಕ್ಕಿಸದೆ ಸಂಭ್ರಮದಿಂದ ಗದ್ದೆಗೆ ಇಳಿದೆವು. ಅಲ್ಲಿ ಮೋನಪ್ಪ ಎಂಬವರು ನಮಗೆ ಗದ್ದೆ ಬೇಸಾಯದ ಬಗ್ಗೆ ಮಾಹಿತಿ ನೀಡಿದರು. ಚಾಪೆ ನೇಜಿ ಬಗ್ಗೆಯೂ ಇವರು ನಮಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ನಂತರ ನಾವೆಲ್ಲರೂ ಗದ್ದೆಗೆ ಇಳಿದು, ಅವರ ಮಾರ್ಗದರ್ಶನದೊಂದಿಗೆ ನೇಜಿ ನೆಡಲು ಆರಂಭಿಸಿದೆವು. ನೇಜಿ ನೆಡುವ ಸಂಭ್ರಮವೇ ಬೇರೆ. ಅದೂ ಜೋರಾಗಿ ಸುರಿಯುತ್ತಿರುವ ಮಳೆಯ ನಡುವೆ ಈ ರೀತಿ ನೇಜಿ ನೆಡುವಾಗ ಸ್ವಲ್ಪವೂ ಆಯಾಸ ಗೊತ್ತೇ ಆಗುವುದಿಲ್ಲ. ನಾವು ಎರಡು - ಮೂರು ಸಾಲು ನೇಜಿ ನೆಟ್ಟೆವು. 
ನಂತರ ಅವರು ಚಾಪೆ ನೇಜಿಯನ್ನು ಯಂತ್ರದ ಸಹಾಯದಿಂದ ನೆಟ್ಟರು. ಇದನ್ನು ನೋಡುತ್ತಿದ್ದರೆ ನನಗಂತೂ ನಾನು ಒಂದು ದಿನ ಕೃಷಿಕಳಾಗಬೇಕು ಎಂಬ ಬಯಕೆ ಮೂಡಿತು. ನೇಜಿ ನೆಡುವುದನ್ನು ನೋಡಿದ ಬಳಿಕ ನಾವು ಕೈ ಕಾಲು ಮುಖ ತೊಳೆದು ಅವಲಕ್ಕಿ ಸವಿದು, ಪಾನಕ ಸೇವಿಸಿದೆವು. ನಂತರ ಬಟ್ಟೆ ಬದಲಾಯಿಸಿಕೊಂಡು ಶಾಲೆಗೆ ಹಿಂತಿರುಗಿದೆವು.
ನನ್ನ ಈ ಮೊದಲ ಅನುಭವವು ನನ್ನ ಜೀವನದಲ್ಲಿ ಎಂದಿಗೂ ಮರೆಯಲಾರದ ಘಟನೆ. ಈಗಿನ ಆಧುನಿಕ ಯುಗದಲ್ಲಿ ನಮ್ಮಂತಹ ಮಕ್ಕಳಿಗೆ ಕೃಷಿಯ ಶಿಕ್ಷಣ ನೀಡಿ, ಕೃಷಿಯಲ್ಲಿ ಆಸಕ್ತಿ ಮೂಡಿಸಬೇಕು. ಇಷ್ಟು ಒಳ್ಳೆಯ ಕಾರ್ಯಕ್ರಮವನ್ನು ಆಯೋಜಿಸಿ ನಮಗೆ ಭತ್ತದ ಕೃಷಿಯ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದ ನನ್ನ ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ಹಾಗೂ ಪೂಜ್ಯ ಸ್ವಾಮೀಜಿಯವರಿಗೂ ದನ್ಯವಾದಗಳು.
........................................... ಸಾನ್ವಿ ಸಿ ಎಸ್ 
7ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************