-->
ಮಕ್ಕಳ ಕವನಗಳು (ಮಳೆಯ ಫಜೀತಿ ಪ್ರಸಂಗ) : ಸಂಚಿಕೆ -25

ಮಕ್ಕಳ ಕವನಗಳು (ಮಳೆಯ ಫಜೀತಿ ಪ್ರಸಂಗ) : ಸಂಚಿಕೆ -25

ಮಕ್ಕಳ ಕವನಗಳು (ಮಳೆಯ ಫಜೀತಿ ಪ್ರಸಂಗ) : ಸಂಚಿಕೆ -25
ಮಳೆ, ಜಡಿ ಮಳೆ, ಭೀಕರ ಮಳೆ, ಧಾರಾಕಾರ ಮಳೆ... ಮಳೆಯ ಬಗ್ಗೆ ಜಗಲಿಯ ಮಕ್ಕಳ ಕವನಗಳು

ಕವನ ರಚನೆ ಮಾಡಿರುವ ವಿದ್ಯಾರ್ಥಿಗಳು :

◾ ಮುಝಮ್ಮಿಲ್ ಕರಾಯ
◾ ಸಿಂಚನಾ ಎಸ್ ಶೆಟ್ಟಿ, ಎಮ್. ಐ. ಟಿ. ಇ
◾ ಧೃತಿ ಕಲ್ಲಾಜೆ, ದ್ವಿತೀಯ ಪಿಯುಸಿ 
◾ ಸಾತ್ವಿಕ್ ಗಣೇಶ್, 10ನೇ ತರಗತಿ
◾ ರಿಧಿ, 6ನೇ ತರಗತಿ




ಕವಿ ಬಿಂಬಿಸುವ ಚಿತ್ರವದು
ಭುಗಿಲೆದ್ದ ನೀರಿನ ರೂಪವದು
ಮನುಜನ ಜೀವರಕ್ಷಣೆಯ ಪಾಡದು
ನಾಶವಾಗುತ್ತಿರುವ ಪ್ರಕೃತಿಯ ನೋಟವದು

ರೌದ್ರರೂಪ ತಾಳಿದ ಆಕರ
ಜೀವ ಉಳಿಸಲಿರುವುದು ಎತ್ತರ
ಜೀವ ಆಸ್ತಿಗೆ ಬಿದ್ದಿದೆ ತತ್ತರ
ಇಲ್ಲವಾಗಿದೆ ಭೂಮಿಗೆ ಬರ

ಧರೆಗಿಳಿದ ಮುಂಗಾರಿನ ಮಳೆ
ನೀಡಿತು ಪಸರಿದ ಹಸಿರಿಗೆ ಕಳೆ
ಧಾರೆ ಮೀರಿದೆ ಮಿತಿಯ ಬಲೆ
ಜರ್ಜರಿತವಾಗಿದೆ ನರನ ಇಳೆ

ನರನ ಅಪಚಾರ ಮರುಕಳಿಸಿದೆ
ಆಕಾಶಸಲಿಲದ ಪಾತ್ರ ಬದಲಾಗಿದೆ
ಹೊನಲು ವಿಕಟ ರೂಪ ತಾಳಿದೆ
ಪತನದ ಆಕ್ರೋಶ ಭಾಸವಾಗಿದೆ
.............................. ಮುಝಮ್ಮಿಲ್ ಕರಾಯ
ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ
ಒಳಮುಗ್ರು, ಕುಂಬ್ರ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************



ಮಳೆ... ಮಳೆ... ಮಳೆ!!
ಎತ್ತನೋಡಿದರೂ ಮಳೆ. 
ಜೊತೆಗೆ ಗುಡುಗು, ಸಿಡಿಲು, 
ಮಿಂಚಿನ ಆರ್ಭಟ. 
ವಟವಟ ಸದ್ದು ಮಾಡುವ ಕಪ್ಪೆಗಳು. 
ಮೊದಮೊದಲು ನಿಧಾನವಾಗಿ ಧರೆಗಿಳಿದ
ಮಳೆರಾಯನದ್ದು ಈಗ ರುದ್ರನರ್ತನ 
ಕೆರೆ, ಬಾವಿ, ಹಳ್ಳ -ಕೊಳ್ಳ
ನದಿ ಸಾಗರಗಳ ರೌದ್ರಾವತಾರ
ಸಮುದ್ರಗಳ ಅಲೆಗಳು  
ತಟದಲ್ಲಿರುವ ಅದೆಷ್ಟೋ ಜೀವರಾಶಿಗಳನ್ನು
ತಿಂದು ತೇಗಿತು. 
ರೈತ ಮಾಡಿದ ಕೃಷಿ ಸಂಪತ್ತನ್ನೆಲ್ಲ 
ಮಾರಣ ಹೋಮ ಮಾಡಿ 
ರೈತ ಕಟ್ಟಿದ ಕನಸಿನ ಮಂದಹಾಸ 
ಕಮರುವಂತೆ ಮಾಡಿತು 
ಬೆಳಗೆದ್ದರೆ ಸಾಕು ಮಳೆಯದ್ದೆ ಪಜೀತಿ...!! 
ಮಳೆಯೆಂದು ಮನೆಯೊಳಗಡೆ ಕೂತರೆ 
ಹೊಟ್ಟೆಗೆ ಬಟ್ಟೆಯೇ ಗತಿ. 
ಹಾಗೆಂದು ದೈರ್ಯದಿಂದ ಹೊರಹೋದರೆ 
ಈ ಗಾಳಿಮಳೆಗೆ ಸಿಲುಕಿ 
ಏನಾದರಾಯಿತು...!! ಎಂಬ ಚಿಂತೆ
ಒಟ್ಟಿನಲ್ಲಿ ಈಗಿನ ಪರಿಸ್ಥಿತಿ 
ಬಾಯಿಯಲ್ಲಿ ಬಿಸಿತುಪ್ಪ ಇಟ್ಟಂತೆ
ಇದರ ನಡುವೆ ಡೆಂಗ್ಯೂ -ಮಲೇರಿಯಾ 
ಎಂಬ ಹಲವಾರು ರೋಗಗಳು. 
ಇವೆಲ್ಲವನ್ನೂ ನೋಡಿದಾಗ ಅನ್ನಿಸುವುದು 
"ಬೇಕಾ ಮಳೆಗಾಲ?"
ಅಲ್ಲಲ್ಲಿ ಜರಿಯುತ್ತಿರುವ ಬೆಟ್ಟ -ಗುಡ್ಡಗಳು
ಆಸರೆ ಇಲ್ಲದೆ ಚೀರುತ್ತಿರುವ ಪಕ್ಷಿಗಳು 
ಅಬ್ಬಬ್ಬಾ ಒಂದಾ ಎರಡಾ..? 
ಒಂದು ಕಡೆ ಹಚ್ಚ ಹಸಿರಿನಿಂದ 
ಕಂಗೊಳಿಸುತ್ತಿರುವ ಗಿಡಮರಗಳಾದರೆ 
ಮತ್ತೊಂದು ಕಡೆ ಹೆಮ್ಮರವಾಗಿ 
ಬೆಳೆದಿರುವ ಮರಗಳು 
ನೀರಿನಲ್ಲಿ ತೇಲಿ ಹೋಗುತ್ತಿವೆ....!! 
ಎಲ್ಲವೂ ನನ್ನದೆಂದು 
ಜಂಬ ಕೊಚ್ಚಿಕೊಳ್ಳುವ ಮನುಜ 
ಪ್ರಕೃತಿ ಮುನಿದರೆ ನಾವೆಲ್ಲಾ 
ಶೂನ್ಯರೆಂದು ಅರಿತುಕೊಳ್ಳಬೇಕಷ್ಟೆ...!!
................................... ಸಿಂಚನಾ ಎಸ್ ಶೆಟ್ಟಿ 
ಎಮ್. ಐ. ಟಿ. ಇ
ಪ್ರಥಮ ವರ್ಷ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
*******************************************



                 
ನಿನಗಾಗಿ ಪ್ರಾರ್ಥಿಸಿದೆವು ನಾವು ಅಂದು 
ಒಮ್ಮೆ ಧರೆಗಿಳಿದು ಬರಲೆಂದು 
ಬೇಡಿಕೊಳ್ಳುತ್ತಿರುವೆವು‌ ನಾವು ಇಂದು 
ತುಸುವಿರಾಮ ಪಡೆದುಕೋ ಎಂದು

ನದಿ ತೊರೆಗಳು ತುಂಬಿ ತುಳುಕಿ 
ಬರುತಿಹುದು ಗುಡ್ಡದಿಂದ ಧುಮುಕಿ
ಕಾಣೆಯಾದ ಶವಗಳ ಹುಡುಕಿ
ಕಾಯುತಿಹುದು ನೊಂದ ಜೀವ ಬದುಕಿ 

ಜನಜಂಜಾಟದ ನಡುವಿನಲಿ
ಜೀವನ ಸಾಗಿಸುವ ಭರದಲಿ 
ಮೋಡಿ ನಡೆಯಿತು ಭೂಮಿಯಲಿ 
ಕಣ್ಣೀರ ಕೋಡಿಗೆ ಕೊನೆಯೆಲ್ಲಿ..?

ಮಾಯವಾಗಿವೆಯೆಲ್ಲಾ ಸೂರುಗಳು
ಗುರುತೇ ಸಿಗದ ದೇಹಗಳು 
ಎಲ್ಲೆಂದರಲ್ಲಿ ಬಿದ್ದ ಪ್ರಾಣಿಗಳು
ನೊಂದಿವೆ ಬದುಕುಳಿದ ಜೀವಗಳು

ಸಾಕು ನಿಲ್ಲಿಸು ನಿನ್ನ ಹಾರಾಟ
ಮಾಡುತಿರುವರು ಬದುಕಲು ಹೋರಾಟ
ಕೊನೆಯಾಗುತ್ತಿಲ ಚೀರಾಟ
ಕಲಿತಿರುವರು ನಿನ್ನಿಂದ ಜೀವನ ಪಾಠ
............................................ ಧೃತಿ ಕಲ್ಲಾಜೆ
ದ್ವಿತೀಯ ಪಿಯುಸಿ 
ವಿಠಲ ಪದವಿಪೂರ್ವ ಕಾಲೇಜು ವಿಟ್ಲ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************

                    

ಎಚ್ಚರದಿಂದಿರು ಮನುಜಾ ಎಚ್ಚರದಿಂದಿರು   
ಇನ್ನಾದರೂ ಮಾಡುವ ಕೆಲಸದಲಿ ಎಚ್ಚರದಿಂದಿರು 
         ಕಾಡನು ಅಳಿಸಿ ಕಟ್ಟಡ ಕಟ್ಟಿ
         ಹಾಳು ಗೆಡವಿದೆ ಅರಣ್ಯವನು 
        ಗುಡ್ಡೆಯ ಅಗೆದು ಮಣ್ಣನು ತೆಗೆದು
         ಹಾಳುಗೆಡವಿದೆ ಭೂಮಿಯನು     
ಸಿಡಿದೆದ್ದ ಜಲವು ಒಮ್ಮೆಲೆ ಚಿಮ್ಮಿತು ಮೇಲೆ
ಘೋರ ಯುದ್ಧವ ಮಾಡಿತು ನಿನ್ನ ಮೇಲೆ
ನಿನ್ನತಿ ಆಸೆಗೆ ಬಲಿಯಾಯಿತು ಜೀವರಾಶಿಗಳು
ವರುಣನಬ್ಬರಕೆ ತತ್ತರಿಸಿತು ಸಕಲ ಜೀವಿಗಳು
    ಎಲ್ಲವೂ ನನ್ನದು ಎಂಬ ಭ್ರಮೆಯನ್ನು ಬಿಟ್ಟು
    ನಮ್ಮ ಸಂಸ್ಕೃತಿಯನ್ನು ಉಳಿಸಿ ಒಟ್ಟಾಗಿ
    ಕಾಡನು ಬೆಳೆಸಿ ಗಿಡಗಳ ನೆಟ್ಟು
    ನೀರನು ಮಿತವಾಗಿ ಬಳಸಿ ಬಾಳು ಮನುಜಾ 
ಎಚ್ಚರದಿಂದಿರು ಮನುಜಾ ಎಚ್ಚರದಿಂದಿರು
ಇನ್ನಾದರೂ ಮಾಡುವ ಕೆಲಸದಲಿ ಎಚ್ಚರದಿಂದಿರು
....................................... ಸಾತ್ವಿಕ್ ಗಣೇಶ್
10ನೇ ತರಗತಿ
ಸರಕಾರಿ ಪದವಿ ಪೂರ್ವ 
ಕಾಲೇಜು, ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
********************************************
         

        
ಇಳೆಯ ಕೊಳೆಯ ತೊಳೆದು 
ಭುವಿಗೆ ಹೊಸ ಕಳೆಯ ಕೊಡುವವಳು
ಬಸವಳಿದ ದೇಹಕ್ಕೆ ಕಸುವ ನೀಡುವಳು
ಕೆಸುವಿನ ಎಲೆಯ ಮೇಲೆ 
ಸ್ಥಟಿಕದಂತೆ ಕೂತಿಹಳು
ಬಂಜರು ನೆಲಕೆ ಸಂಜೀವಿನಿಯಾಗಿ ಹರಿವಳು
ಹೂ ಗಿಡಗಳಿಗೆ ಜಲವ ಸಿಂಚಿಸಿ 
ನಗುತಾ ನಲಿವಳು
ಧರೆಗೆ ಇಳಿಯುವ ಮುನ್ನ 
ದಿಬ್ಬಣದಿ ಬರುವಳು
ಅನ್ನದಾತನ ಬೆಳೆಯ 
ಹಸುಗೂಸಂತೆ ಕಾಯುವಳು
ಚಿಣ್ಣರಿಗೆ ಕಾಮನ ಬಿಲ್ಲಿನ
ಚಿತ್ತಾರ ತೋರುವಳು
ಬಣ್ಣದ ಕೊಡೆಗಳ ಮೇಲೇರಿ
ಕುಣಿದು ಕುಪ್ಪಳಿಸುವಳು
ರವಳಿಯ ತೊರೆದು 
ಕರಾವಳಿಗೆ ಬಾ... ವರ್ಷ
ಎಂಬ ತರಳೆ
ಇಳೆಯ ಕೊಳೆಯ ತೊಳೆದು 
ಬಾ ಮಳೆಯೇ..
........................................................ ರಿಧಿ
6ನೇ ತರಗತಿ
ಶ್ರೀ ವಾಣಿ ಇಂಗ್ಲಿಷ್ ಮೀಡಿಯಂ
ಎಜುಕೇಶನ್ ಸೆಂಟರ್ ಪಾವಂಜೆ
ಹಳೆಯಂಗಡಿ, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article