-->
ಪಯಣ : ಸಂಚಿಕೆ - 05 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 05 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 05 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


      ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದುಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ

                      
     ಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತಾ “ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ” ಎಂದು ವರ್ಣಿಸಿ ಹೇಳಿದ್ದ ಮಾತು ಇಂದಿಗೂ ಸತ್ಯ. ಒಮ್ಮೆ ಬನವಾಸಿಗೆ ಹೋದ ಪ್ರವಾಸಿಗ ಅಲ್ಲಿನ ಸೌಂದರ್ಯವನ್ನು ಮರೆಯುವುದಿಲ್ಲ. ಶಾಲಾ ಮಕ್ಕಳಿಗೆ ತೋರಿಸಿಕೊಂಡು ಬರುವ ಐತಿಹಾಸಿಕ ಪ್ರವಾಸಿ ಸ್ಥಳ ಮಾತ್ರವಲ್ಲ. ಇಲ್ಲಿ ಹಲವಾರು ವೈವಿಧ್ಯತೆಗಳಿವೆ. ಇತಿಹಾಸ ಪ್ರಸಿದ್ಧ ಮಧುಕೇಶ್ವರ ದೇವಾಲಯ, ಐತಿಹಾಸದ ಶಾಸನ ಮತ್ತು ಪ್ರಾಕೃತಿಕ ಸೊಬಗೂ ಇದೆ. ಕೃಷಿಯ ವೈವಿಧ್ಯವಿದೆ. ಜಾನಪದದ ಸೊಗಡಿದೆ, ಕರಕುಶಲ ಕಲೆಗಳ ಸೃಜನಶೀಲತೆ ಇಲ್ಲಿದೆ, ಹಲವಾರು ವೈವಿಧ್ಯಮಯ ಬನವಾಸಿ ಇದು.

ಗ್ರಾಮೀಣ ಪ್ರವಾಸೋದ್ಯಮಕ್ಕೆ ಬನವಾಸಿಯನ್ನು ಅಣಿಮಾಡಲು ಸರ್ಕಾರೇತರ ಸಂಸ್ಥೆಗಳು ಕೆಲಸ ಮಾಡಿವೆ. ಇಲ್ಲಿಗೆ ಬಂದರೆ ಪ್ರವಾಸಿಗರಿಗೆ ಒಂದಲ್ಲ ಎರಡಲ್ಲ ಹಲವಾರು ಮಾಹಿತಿ ಸಿಗುತ್ತದೆ.
    ವರದಾನದಿಯ ತಟದಲ್ಲಿರುವ ಬನವಾಸಿಯಲ್ಲಿ ಕನ್ನಡದ ಮೊದಲ ರಾಜವಂಶ ಎನಿಸಿಕೊಂಡ ಕದಂಬ ವಂಶಸ್ಥರು ನಿರ್ಮಿಸಿದ ಮಧುಕೇಶ್ವರ ದೇವಸ್ಥಾನ ಅತಿ ಸುಂದರ. ಇದರ ಒಳಾಂಗಣದ ಕಂಬಗಳು ಮತ್ತು ಬಸವ ನೋಡಲು ಬಲು ಚಂದ. ಪಕ್ಕದಲ್ಲಿರುವ ಪಾರ್ವತಿ ದೇವಸ್ಥಾನ, ಕದಂಬೇಶ್ವರ, ಆದಿ ಮಧುಕೇಶ್ವರ, ಅಲ್ಲಮ ಪ್ರಭು ದೇವಸ್ಥಾನಗಳು ನೋಡುಗರನ್ನು ಸೆಳೆಯುತ್ತದೆ.

   ಐತಿಹಾಸಿಕ ದೇವಸ್ಥಾನಗಳ ಜೊತೆಯಲ್ಲಿ ಒಂದಷ್ಟು ಕಲಾವಿದರ ಸಂಗಮ ಇಲ್ಲಿದೆ. ಸಿಮೆಂಟ್ ಶಿಲ್ಪ ತಯಾರಿಕೆಯಲ್ಲಿ ಸಿದ್ಧ ಹಸ್ತರಾದ ಶ್ರೀಪಾದ ಪುರೋಹಿತ್‌ ಇಲ್ಲಿದ್ದು, ಅದ್ಭುತವೆನಿಸಿದ ಆರ್ಟ್ ಗ್ಯಾಲರಿಯನ್ನು ಮಾಡಿದ್ದಾರೆ. ತಮ್ಮ ಊರಿನ ಕೆಲವು ಮಂದಿರ ತದ್ರೂಪಿ ಶಿಲ್ಪಗಳನ್ನು ರಚಿಸಿದ್ದಾರೆ. ದೇವಸ್ಥಾನದ ಪಕ್ಕದಲ್ಲೇ ಇರುವ ಪುರೋಹಿತರ ಆರ್ಟ್ ಗ್ಯಾಲರಿ ದೇವಸ್ಥಾನ ನೋಡಲಿಕ್ಕೆ ಬಂದವರಿಗೆ ಕಲೆಯ ಆಸ್ವಾದನೆಯ ಅವಕಾಶವನ್ನು ಮಾಡಿಕೊಡುತ್ತದೆ.

       ಕುಂಬಾರಿಕೆಯಲ್ಲಿ ಸೃಜನಶೀಲರಾಗಿರುವ ಚಕ್ರಸಾಲಿ ಅವರು ತಯಾರಿಸಿದ ವಿವಿಧ ತರಹದ ಮಡಿಕೆಗಳು, ಸುಂದರವಾದ ಹೂಜಿಗಳು ಇಲ್ಲಿ ಸಿಗುತ್ತವೆ. ದೇವಸ್ಥಾನದ ಶಿಲ್ಪಗಳನ್ನು ತಯಾರಿಸುವ ಶಿಲ್ಪಿಗಳು ಇಲ್ಲಿದ್ದಾರೆ. ಮರದ ಶಿಲ್ಪ ಮತ್ತು ಮದುವೆಗೆ ಬೇಕಾಗುವ ನಾನಾ ತರಹದ ಕುಶಲ ಕೆಲಸ ಮಾಡುವ ಗುಡಿಗಾರರು ಇಲ್ಲಿದ್ದಾರೆ. ಬನವಾಸಿಗೆ ಬಂದ ನೆನಪಿಗಾಗಿ ಇಲ್ಲಿನ ಸುಂದರ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು.

      ಬನವಾಸಿಯ ಅಂಗಳದಲ್ಲಿ ಒಂದು ಸಾಗವಾನಿಯ ಮರವಿದೆ. ಇದರ ಪ್ರಾಯ ಸುಮಾರು 500 ವರ್ಷ
ಎನ್ನುವುದು ಪರಿಸರ ತಜ್ಞರ ಅಭಿಪ್ರಾಯ. ಇದು ಕೂಡಾ ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲೇ ಹತ್ತಿರದಲ್ಲಿಯೇ ಜಡೆ ಎನ್ನುವ ಊರು ಸಿಗುತ್ತದೆ. ಇಲ್ಲಿ ಆಲದ ಮರದ ಜಾತಿಗೆ ಹೋಲುವ ಪಿಳಲಿ ಮರವಿದೆ. ಸುಮಾರು 500 ವರ್ಷ ಹಳೆಯ ಮರ, ಮರ ಬೆಳೆದ ವಿಸ್ತೀರ್ಣ ಸುಮಾರು 4 ಎಕರೆ ! ಇದನ್ನು ನೋಡಿದ ನಂತರ ಸ್ವಲ್ಪ ದೂರ ಪ್ರಯಾಣಿಸಿದರೆ ಗುಡವಿ ಪಕ್ಷಿದಾಮ ಸಿಗುತ್ತದೆ. ಪಕ್ಷಿಗಳ ಕಲರವದಲ್ಲಿ ಕಳೆದುಹೋಗಬಹುದು.
 ಇಲ್ಲಿ ಉಳಿಯುವ ವ್ಯವಸ್ಥೆ : 
        ಸರ್ಕಾರಿ ಅತಿಥಿ ಗೃಹವಿದೆ. ಹೊಸತಾಗಿ ನಿರ್ಮಿಸಿದ ಪ್ರವಾಸಿ ಬಂಗಲೆ ಇದೆ. ಆಸಕ್ತರಿಗೆ ಹೋಂ ಸ್ಟೇ . ಶಿರಸಿಯಿಂದ ಕೇವಲ 24 ಕಿ.ಮೀ. ದೂರ ಬನವಾಸಿ ಇರುವುದರಿಂದ, ತಾಲೂಕು ಸ್ಥಳವಾದ ಶಿರಸಿಯಲ್ಲೂ ವಸತಿಗೆ ಸಾಕಷ್ಟು ಹೋಟೆಲ್ ಇದೆ. ಪ್ರವಾಸಿಗರು ಬನವಾಸಿಗೆ ಬಂದರೆ, ಎರಡು ದಿನ ಉಳಿದು ತಿರುಗಾಡಿದರೂ ಮಿಕ್ಕುವಷ್ಟು ಪ್ರವಾಸಿ ತಾಣಗಳಿವೆ. 
 ಇಲ್ಲಿಗೆ ಹೋಗುವುದು ಹೀಗೆ.... 
 ಶಿರಸಿಗೆ ರಾಜ್ಯದ ಎಲ್ಲ ಕಡೆಯಿಂದಲೂ ಬಸ್ ವ್ಯವಸ್ಥೆ ಇದೆ. ಶಿರಸಿಯಿಂದ ಬನವಾಸಿಗೆ ಅರ್ಧ ಗಂಟೆಗೊಂದು ಸರ್ಕಾರಿ ಬಸ್‌ ಇದೆ. ಅಲ್ಲದೆ ಖಾಸಗಿ ಸಾರಿಗೆಯೂ ಇದೆ. ಮೊದಲೇ ಹೇಳಿದ ಹಾಗೆ ಶಿರಸಿಯಿಂದ ಬನವಾಸಿಗೆ 24 ಕಿ.ಮೀ, ಸೊರಬದಿಂದ 25 ಕಿ. ಮೀಟರ್ ಅಷ್ಟೇ.....

      "ಕ್ರಿ.ಶ. ೧ನೆಯ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ಗ್ರೀಕ್ ಪ್ರವಾಸಿ ಟಾಲೆಮಿ ಈ ಪಟ್ಟಣವನ್ನು “ಬನೌಸಿ” ಎಂದು ಕರೆದಿದ್ದಾನೆ. ಕ್ರಿ.ಶ. ೪ನೆಯ ಶತಮಾನದಲ್ಲಿ 'ಜಯಂತಿಪುರ' ಅಥವಾ 'ವೈಜಯಂತಿ' ಎಂದು ಕರೆಯಲಾಗುವ ಬನವಾಸಿಯನ್ನು ಮಹಾಭಾರತದಲ್ಲಿ 'ವನವಾಸಕ' ಎಂಬ ಉಲ್ಲೇಖವಿರುವುದು ಕನ್ನಡನಾಡಿನ ಹೆಮ್ಮೆಯ ವಿಷಯವಾಗಿದೆ. "ಬನ್ನಿ ಒಮ್ಮೆ ಪ್ರವಾಸಕ್ಕೆ" ... 
   ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
********************************************


Ads on article

Advertise in articles 1

advertising articles 2

Advertise under the article