-->
ಪಯಣ : ಸಂಚಿಕೆ - 03 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 03 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 03 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ಸರಕಾರಿ ಪ್ರೌಢಶಾಲೆ ದರೆಗುಡ್ಡೆ 
ಮೂಡಬಿದ್ರೆ , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ : +91 94488 87713


      ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದುಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
           
           .  
     ಜೋಗ ಅಥವಾ ಗೇರುಸೊಪ್ಪೆ ಜಲಪಾತವು ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲಿ ಒಂದು. ಇದು ಭಾರತದ ಎರಡನೆಯ ಅತಿ ಎತ್ತರದ ಜಲಪಾತವಾಗಿದ್ದು, ಕರ್ನಾಟಕದ ಹೆಮ್ಮೆಯ ಪ್ರವಾಸಿ ತಾಣವಾಗಿದೆ. ಇದು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ದಟ್ಟವಾದ ಕಾಡು ಹಾಗೂ ಗುಡ್ಡಗಳಿಂದ ಆವೃತ್ತವಾದ ಸ್ಥಳದಲ್ಲಿದೆ. ಜೋಗ ಜಲಪಾತವನ್ನು ವೀಕ್ಷಿಸುವ ತಾಣ ಜೋಗವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಇದು ಒಂದು ಪ್ರಮುಖ ಪ್ರವಾಸಿ ತಾಣ. ಜೋಗ ಜಲಪಾತವು ಸುಮಾರು 292 ಮೀಟರ್ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ ನದಿಯು ನಾಲ್ಕು ಸೀಳಾಗಿ ಧುಮುಕುತ್ತದೆ. ವೈಭವದಿಂದ ಅವ್ಯಾಹತವಾಗಿ ಧುಮಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮಕುವ ರೋರರ್, ಬಳಕುತ್ತಾ ಜಾರುವ ರಾಣಿ (ಲೇಡಿ) ಮತ್ತು ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತಾ ನುಗ್ಗುವ ರಾಕೆಟ್ ಈ ನಾಲ್ಕು ಜಲ ಭಾಗಗಳಾಗಿವೆ. ಮಳೆಗಾಲದಲ್ಲಿ ಅತ್ಯಂತ ರಮಣೀಯರೂಪ ತೊಡುವ ಈ ಜಲಪಾತ ಬಿಳಿ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆ ಆಡುತ್ತಾ ನೋಡುಗರ ಕಣ್ಮನ ಸೆಳೆಯುವುದು.

    ಶರವತಿಯ ನಾಲ್ಕು ಕವಲುಗಳ ಜಲಧಾರೆಯ ವಿವರ ಹೀಗಿದೆ :
ರಾಜ : ಈ ಝರಿಯು ರಾಜಗಾಂಭೀರ್ಯದಿಂದ ಧುಮುಕುತ್ತದೆ.
ರೋರರ್ : ಕಲ್ಲು ಬಂಡೆಗಳ ನಡುವಿನಿಂದ ನುಗ್ಗುವ ಈ ಝರಿಯು ಅತಿ ಹೆಚ್ಚಿನ ಶಬ್ದ ಮಾಡುತ್ತದೆ.
ರಾಕೆಟ್ : ಹೆಚ್ಚಿನ ಪ್ರಮಾಣದ ನೀರು ಸಣ್ಣ ಕಿಂಡಿಯಿಂದ ರಭಸವಾಗಿ ಧುಮುಕುತ್ತದೆ.
ರಾಣಿ : ಈ ಝರಿಯ ಆಕಾರವು ಹೆಣ್ಣು ನರ್ತಕಿಯ ತಳುಕು - ಬಳುಕಿಗೆ ಹೋಲುತ್ತದೆ.
       ಇದು ಪ್ರಕೃತಿಯ ಸಹಜ ಅದ್ಭುತವಾಗಿದೆ. ದಟ್ಟವಾದ ನಿತ್ಯಹರಿದ್ವರ್ಣ ಕಾಡಿನಲ್ಲಿ ನೆಲೆಗೊಂಡಿದೆ. ಈ ಅದ್ಭುತ ಜಲಪಾತ ಅದರ ಸುತ್ತಲಿನ ಪರಿಸರವನ್ನು ರಮಣೀಯಗೊಳಿಸುವುದಲ್ಲದೆ ಅದರ ಸುಂದರವಾದ ಪ್ರದೇಶವನ್ನು ಸೃಷ್ಟಿಸಿದೆ. ಇದು ಹೇರಳವಾದ ಸಸ್ಯವರ್ಗದಿಂದ ಆವೃತವಾಗಿದ್ದು, ಇದರ ಜಲಧಾರೆಯು ಬಂಡೆಗಳ ಮೇಲೆ ಹರಿಯದೆ ನೇರವಾಗಿ ಕೆಳಗೆ ಬೀಳುವುದೇ ವಿಸ್ಮಯ.

     ಪ್ರವಾಸಿಗರಿಗೆ ಜಲಪಾತಗಳನ್ನು ವೀಕ್ಷಿಸಲು ಎರಡು ತೆರೆದ ವೀಕ್ಷಣಾ ಕಟ್ಟೆಯ ವ್ಯವಸ್ಥೆಗಳಿವೆ. ಅಲ್ಲದೆ ಕೆಲವು ಋತುವಿನಲ್ಲಿ ಪ್ರವಾಸಿಗರು ಜಲಪಾತದ ತಳಕ್ಕೆ ಹೋಗಲು ಅವಕಾಶವಿದ್ದು, ಸುಮಾರು 1400 ಮೆಟ್ಟಿಲುಗಳನ್ನು ಇಳಿದು ಹೋಗಬಹುದು. ಇಲ್ಲಿ ಪ್ರಕೃತಿಯ ಸೌಂದರ್ಯ ನೋಡುವುದರೊಂದಿಗೆ ಜಲಧಾರೆಯ ದನಿಯ ರೋಮಾಂಚನವನ್ನು ಪಡೆಯಬಹುದು.
ಮಹಾತ್ಮ ಗಾಂಧಿ ಜಲ ವಿದ್ಯುತ್ ಯೋಜನೆ :
       ಮಹಾತ್ಮ ಗಾಂಧಿ ಜಲ ವಿದ್ಯುತ್ ಯೋಜನೆ ಜೋಗ ಜಲಪಾತದ ಬಳಿ ಇರುವ ವಿದ್ಯುತ್ ಸ್ಥಾವರ. ಸ್ವಾತಂತ್ರಪೂರ್ವದಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರು ಮೊದಲ ಬಾರಿ ಜೋಗಕ್ಕೆ ಭೇಟಿಯಿತ್ತಾಗ ಜೋಗ ಜಲಪಾತವನ್ನು ನೋಡಿ "ಎಂತಹ ವ್ಯರ್ಥ" ಎಂದು ಉದ್ಗರಿಸಿದರಂತೆ. ಅವರ ಈ ಮಾತಿನ ಫಲಶ್ರುತಿ ಈ ಜಲವಿದ್ಯುತ್ ಆಗಾರ. 1930 ರ ದಶಕದ ಪೂರ್ವಭಾಗದಲ್ಲಿ ಮೈಸೂರು ಲೋಕೋಪಯೊಗಿ ಇಲಾಖೆಯಿಂದ ಜಲವಿದ್ಯುತ್ ಯೋಜನಾ ಕಾರ್ಯ ಶುರುವಾಯಿತು. ಮೊದಲು ಕೃಷ್ಣರಾಜೇಂದ್ರ ಜಲವಿದ್ಯುತ್ ಯೋಜನೆಯೆಂದು ಕರೆಯಲ್ಪಡುತ್ತಿದ್ದ ಈ ಯೋಜನೆಯನ್ನು ನಂತರ ಮಹಾತ್ಮ ಗಾಂಧಿ ಜಲವಿದ್ಯುತ್ ಯೊಜನೆಯೆಂದು ನಾಮಕರಣ ಮಾಡಲಾಯಿತು. 
    ಜೋಗದಲ್ಲಿ ಪ್ರವಾಸಿಗರಿಗೆ ಶರಾವತಿ ಸಾಹಸ ಶಿಬಿರದಲ್ಲಿ ಅನೇಕ ಚಟುವಟಿಕೆಗಳ ವ್ಯವಸ್ಥೆ ಇದೆ. ಪ್ರಕೃತಿಯ ನಡಿಗೆ, ವಿವಿಧ ರೀತಿಯ ವಲಸೆ ಹಕ್ಕಿಗಳನ್ನು ವೀಕ್ಷಿಸುವುದು, ಕಯಾಕಿಂಗ್ (ಕಾಯಕ್ ಒಂದು ಸಣ್ಣ ಹಡಗು (ದೋಣಿ) ಇದು ಪ್ಯಾಡಲ್ನೊಂದಿಗೆ ನೀರನ್ನು ತಳ್ಳುವ ಮೂಲಕ ಶಕ್ತಿಯನ್ನು ಪಡೆಯುತ್ತದೆ - ಕಯಾಕ್ ಅನ್ನು ಬಳಸುವ ಚಟುವಟಿಕೆಯನ್ನು ಕಯಾಕಿಂಗ್ ಎಂದು ಕರೆಯಲಾಗುತ್ತದೆ). ಕೊರಾಕಲ್ ರೈಡ್ (ಕೊರಾಕಲ್ಸ್ ಎಂದು ಕರೆಯಲ್ಪಡುವ ಸಣ್ಣ, ಹಗುರವಾದ ದೋಣಿಗಳನ್ನು ನದಿ ಪ್ರಯಾಣಕ್ಕಾಗಿ ಬಳಸಲಾಗುತ್ತದೆ.) ಮತ್ತು ಇನ್ನೂ ಹೆಚ್ಚಿನ ಚಟುವಟಿಕೆಗಳನ್ನು ಇಷ್ಟಪಡುವ ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆಗಳಿವೆ.   
     ಜೋಗಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಮಳೆಗಾಲ ಅದರಲ್ಲೂ - ಆಗಸ್ಟ್ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ.
    ಇಲ್ಲಿ ಪ್ರವಾಸಿಗರಿಗೆ ಸೂಕ್ತವಾದ ಉಳಿದುಕೊಳ್ಳಲು ಲಾರ್ಡ್ಸ್, ರೆಸಾರ್ಟ್, ಹೋಟೆಲ್, ಹೋಮ್ ಸ್ಟೇ ಗಳ ವ್ಯವಸ್ಥೆ ಇದೆ.
        ಸಮೀಪದ ಆಕರ್ಷಣೆಗಳು :
  ಹೊನ್ನೆಮರಡು [ಇದು ಶರಾವತಿ ನದಿಯ ದಡದಲ್ಲಿರುವ ಹಿನ್ನೀರು ಪ್ರದೇಶ ] 20 ಕಿ.ಮೀಟರ್ ಮತ್ತು ಕೆಳದಿ [ಕೆಳದಿ ಸಂಸ್ಥಾನ] 35 ಕಿ.ಮೀಟರ್ ಜೋಗ ಜಲಪಾತದಿಂದ ದೂರದಲ್ಲಿದೆ. ಅಲ್ಲದೆ ಜಲಪಾತದ ಸಮೀಪವಿರುವ ಪ್ರದೇಶವು ಚಾರಣಕ್ಕೆ ಸಹ ಸೂಕ್ತವಾಗಿದೆ. ಸ್ವರ್ಣ ನದಿಯ ದಂಡೆ, ಶರಾವತಿ ಕಣಿವೆ ಮತ್ತು ಜಲಪಾತಗಳ ಸುತ್ತಲೂ ಹಚ್ಚ ಹಸಿರಿನ ಕಾಡುಗಳು ಅಷ್ಟೇ ರಮಣೀಯವಾಗಿವೆ. ಜಲಪಾತದ ಬಳಿ ಭೇಟಿ ನೀಡಬಹುದಾದ ಇತರ ಸ್ಥಳಗಳೆಂದರೆ ದಬ್ಬೆ ಜಲಪಾತ, ಲಿಂಗನಮಕ್ಕಿ ಅಣೆಕಟ್ಟು, ತುಂಗಾ ಆನಿಕಟ್ ಅಣೆಕಟ್ಟು , ತ್ಯಾವರೆಕೊಪ್ಪ ವನ್ಯಧಾಮ ಸಿಂಹ ಮತ್ತು ಹುಲಿ ಸಂರಕ್ಷಿತ ಪ್ರದೇಶ ಮತ್ತು ಶರಾವತಿ ನದಿ.

    ಜೋಗ ಜಲಪಾತ ತಲುಪುವುದು ಹೀಗೆ...
        ವಿಮಾನದ ಮೂಲಕ ಹೋಗುವುದಾದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸುಮಾರು 219 ಕಿ.ಮೀ ದೂರದಲ್ಲಿರುವ ಹತ್ತಿರದ ವಿಮಾನ ನಿಲ್ದಾಣವಾಗಿದೆ.
    ರೈಲಿನ ಮೂಲಕ ಹೋಗುವುದಾದರೆ ಹತ್ತಿರದ ರೈಲು ನಿಲ್ದಾಣ ತಾಳಗುಪ್ಪ 20 ಕಿ.ಮೀ, ಹೊನ್ನಾವರದಿಂದ 72 ಕಿ.ಮೀ ದೂರದಲ್ಲಿದೆ.
     ರಸ್ತೆಯ ಮೂಲಕ ಹೋಗುವುದಾದರೆ ಬೆಂಗಳೂರಿನಿಂದ 410 ಕಿ.ಮೀ ಇದೆ. ಇದರ ನಡುವಿನಲ್ಲಿ ಶಿವಮೊಗ್ಗದಿಂದ 107 ಕಿ. ಮೀ , ಸಾಗರದಿಂದ 36 ಕಿ. ಮೀ. ಇದೆ. ಶಿರಸಿಯಿಂದ 64 ಕಿ.ಮೀ ಹಾಗೂ ಸಿದ್ದಾಪುರದಿಂದ 26 ಕಿ.ಮೀ ದೂರದಲ್ಲಿದೆ. ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 66 ರಿಂದ ಹೋಗುವುದಾದರೆ ಹೊನ್ನಾವರದಿಂದ 69 ಕಿ.ಮಿ ದೂರದಲ್ಲಿದೆ. ಇದರ ನಡುವೆ ಗೇರುಸೊಪ್ಪ ಮತ್ತು ಮಾವಿನಗುಂಡಿ ಊರು ಸಿಗುತ್ತದೆ.

     "ಪ್ರಕೃತಿಯ ಸಹಜ ಸೌಂದರ್ಯದ ಜಲಧಾರೆಯ ನಡುವೆ ಮೈಮನ ತಣಿಸುವ ಜೋಗ ಪ್ರಾಕೃತಿಕ ಅದ್ಭುತವೇ ಸರಿ" - ಬನ್ನಿ ಒಮ್ಮೆ, ಮತ್ತೊಮ್ಮೆ ಬರಬೇಕು ಅನ್ನಿಸುತ್ತದೆ.
          ಮೂಗೂರು ಮಲ್ಲಪ್ಪರವರು ಬರೆದ , ಡಾ || ರಾಜಕುಮಾರ್ ಹಾಡಿ ನಟಿಸಿರುವ ಈ ಹಾಡನ್ನು ಹಾಡಿ ಮತ್ತಷ್ಟು ಜೋಗ ಜಲಪಾತದ ಬಗ್ಗೆ ತಿಳಿಯೋಣವೇ...... 

'ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ?
ಸಾಯೋ ತನಕ ಸಂಸಾರ್ದೊಳಗೆ ಗಂಡಾಗುಂಡಿ
ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ
ಇರೋದ್ರೊಳಗೆ ನೋಡು ಒಮ್ಮೆ ಜೋಗದ ಗುಂಡಿ' ||

ರಾಜ ರಾಕೆಟ್ ರೋರರ್ ಲೇಡಿ ಚತುರ್ಮುಖ
ಜೋಡಿಗೂಡಿ ಹಾಡುತಾವ ಹಿಂದಿನ್ ಸುಖ
ತಾನು ಬಿದ್ರೆ ಆದೀತೆಳು ತಾಯಿಗೆ ಬೆಳಕ
ಮುಂದಿನವರು ಕಂಡರೆ ಸಾಕು ಸ್ವಂತ ಸುಖ

ಒಂದು ಎರಡು ಮೂರು ನಾಲ್ಕು ಆದಾವ್ ಮತ
ಹಿಂದಿನಿಂದ ಹರಿದು ಬಂದದ್ ಒಂದೇ ಮತ
ಗುಂಡಿಗ್ ಬಿದ್ದು ಹಾಳಾಗಲಿಕ್ಕೆ ಸಾವಿರ ಮತ
ಮುಂದೆ ಹೋಗಿ ಸೇರುವಲ್ಲಿ ಒಂದೇ ಮತ

ನಾಡಿನೊಳಗೆ ನಾಡು ಚೆಲುವ ಕನ್ನಡ ನಾಡು
ಬೆಳ್ಳಿ ಬಂಗಾರ ಬೆಳಿಯುತಾವೆ ಬೆಟ್ಟ ಕಾಡು
ಭೂಮಿ ತಾಯಿ ಮುಡಿದು ನಿಂತಾಳ್ ಬಾಸಿಂಗ್ ಜೋಡು
ಬಾಣಾವತಿ ಬೆಡಗಿನಿಂದ ಬರ್ತಾಳ್ ನೋಡು 

ಶರಾವತಿ ಕನ್ನಡ ನಾಡ ಭಾಗೀರಥಿ
ಪುಣ್ಯವಂತ್ರು ಬರ್ತಾರಿಲ್ಲಿ ದಿನಂಪ್ರತಿ
ಸಾವು ನೋವು ಸುಳಿಯೋದಿಲ್ಲಿಯ ಕರಾಮತಿ
ಮಲ್ಲೇಶನ ನೆನೆಯುತಿದ್ರೆ ಜೀವನ್ಮುಕ್ತಿ

  ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ಸರಕಾರಿ ಪ್ರೌಢಶಾಲೆ ದರೆಗುಡ್ಡೆ 
ಮೂಡಬಿದ್ರೆ , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ : +91 94488 87713
********************************************



Ads on article

Advertise in articles 1

advertising articles 2

Advertise under the article