-->
ಜೀವನವೆಂಬ ಪರೀಕ್ಷೆಯನ್ನು ಗೆಲ್ಲಬೇಕಾದರೆ....

ಜೀವನವೆಂಬ ಪರೀಕ್ಷೆಯನ್ನು ಗೆಲ್ಲಬೇಕಾದರೆ....

ಲೇಖನ : ಜೀವನವೆಂಬ ಪರೀಕ್ಷೆಯನ್ನು ಗೆಲ್ಲಬೇಕಾದರೆ....
ಲೇಖಕಿ: ಮಂಜುಳಾ ಪ್ರಸಾದ್
ಸಹ ಶಿಕ್ಷಕಿ
ಕರ್ನಾಟಕ ಪಬ್ಲಿಕ್ ಶಾಲೆ ತ್ಯಾವಣಿಗೆ 
ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ
Mob : +91 97433 77517


         
ಆಗಿನ್ನೂ ನಾನು ಪ್ರೌಢ ಶಾಲೆಯ ವಿದ್ಯಾರ್ಥಿನಿ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಶ್ರೀ ಪಂಚದುರ್ಗಾ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದ ನಾನು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತಯಾರಾಗುತ್ತಿದ್ದೆ. ಆಗಿನ ಕಾಲದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಒಂದು ವಿಷಯದಲ್ಲಿ ಎರಡು ಭಾಗಗಳಿದ್ದು ಪ್ರತಿಯೊಂದು ಭಾಗಕ್ಕೂ ಪ್ರತ್ಯೇಕ ಪರೀಕ್ಷೆಗಳಿರುತ್ತಿದ್ದವು. ಬೆಳಗಿನ ಅವಧಿಯಲ್ಲಿ ಭಾಗ ಒಂದಕ್ಕೆ ಪರೀಕ್ಷೆ ನಡೆದರೆ ಮಧ್ಯಾಹ್ನದ ಅವಧಿಯಲ್ಲಿ ಭಾಗ ಎರಡಕ್ಕೆ ಪರೀಕ್ಷೆ ಇರುತ್ತಿತ್ತು. 

ಈಗಿನಂತೆ ಆಗಿನ ಕಾಲದಲ್ಲಿ ಯಾವ ರೀತಿಯ ಪಾಸಿಂಗ್ ಪ್ಯಾಕೇಜ್ ಆಗಲಿ ಸ್ಕೋರಿಂಗ್ ಪ್ಯಾಕೇಜ್ ಆಗಲಿ ಇರಲಿಲ್ಲ. ಶಿಕ್ಷಕರು ಪಾಠ ಬೋಧಿಸುತ್ತಿದ್ದರು, ಅದಕ್ಕೆ ತಕ್ಕಂತೆ ನೋಟ್ಸ್ ಗಳನ್ನು ನೀಡುತ್ತಿದ್ದರು. ವಿದ್ಯಾರ್ಥಿಗಳು ಅವುಗಳನ್ನು ಓದಿಕೊಂಡು ಪರೀಕ್ಷೆಗೆ ತಯಾರಾಗುತ್ತಿದ್ದರು. ಅದರಂತೆ ನಾನು ಶಿಕ್ಷಕರು ನೀಡಿದ ನೋಟ್ಸ್ ಗಳನ್ನು ಪರೀಕ್ಷೆಗೆ ಮುನ್ನ ಕನಿಷ್ಠವೆಂದರೂ ಮೂರು ಸಲ ಓದಿ ಮುಗಿಸುತ್ತಿದ್ದೆ. ಒಂದು ವೇಳೆ ಮೂರು ಸಲ ಓದಿ ಮುಗಿದಿಲ್ಲವಾದರೆ ಪರೀಕ್ಷೆಗೆ ಹೋಗಲು ಬಹಳಷ್ಟು ಭಯವಾಗುತ್ತಿತ್ತು. ಮೂರು ಸಲ ಪೂರ್ಣವಾಗಿ ಓದಿ ಮುಗಿಸಿದರೆ ಸಮಾಧಾನದಿಂದ ಪರೀಕ್ಷಾ ಕೊಠಡಿಗೆ ತೆರಳುತ್ತಿದ್ದೆ. 

ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ನಮಗೆ ಇದ್ದಿದ್ದು ಆಗ ನಮ್ಮ ಶಾಲೆಯಿಂದ ಸುಮಾರು 20 ಕಿಲೋಮೀಟರ್ ದೂರದ ಉಪ್ಪಿನಂಗಡಿಯ ಶಾಲೆಯಲ್ಲಿ. ಅಂದು ನಮಗೆ ಇಂಗ್ಲಿಷ್ ಪರೀಕ್ಷೆ ಇತ್ತು. ನಮ್ಮ ಕೊಠಡಿಯಲ್ಲಿ ಮೌನವಾಗಿ ಕುಳಿತು ನಾನು ಪರೀಕ್ಷೆ ಬರೆಯುತ್ತಿದ್ದೆ. ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ಬಂದಂತಹ ಒಂದು ಪ್ರಶ್ನೆ ಫ್ಲೆಕ್ಸಿಬಲ್ ಇದರ ವಿರುದ್ಧ ಪದ. ಇದು ನನಗೆ ಗೊತ್ತಿರಲಿಲ್ಲ. ಹಾಗೆ ಉತ್ತರದ ಜಾಗ ಖಾಲಿ ಬಿಟ್ಟಿದ್ದೆ. ಆ ಸಮಯದಲ್ಲಿ ರಿಲೀವರ್ ಆಗಿ ಬಂದ ಒಬ್ಬ ಶಿಕ್ಷಕರು ನನಗೆ ಎಕ್ಸ್ಟ್ರಾ ಹಾಳೆ ಕೊಡಲು ಬಂದಾಗ ನನ್ನ ಒಂದು ಉತ್ತರ ಖಾಲಿ ಇರುವುದನ್ನು ಕಂಡು ಅದಕ್ಕೆ ಉತ್ತರ ಇನ್ ಫ್ಲೆಕ್ಸಿಬಲ್ ಎಂದು ಹೇಳಿದರು. ಅಕ್ಕಪಕ್ಕದವರಲ್ಲಾಗಲಿ ಯಾರಲ್ಲೂ ಆಗಲಿ ಉತ್ತರ ಕೇಳಿ, ನೋಡಿ ಬರೆಯುವ ಅಭ್ಯಾಸವಿಲ್ಲದ ನನಗೆ ಆ ಉತ್ತರ ಶಿಕ್ಷಕರೇ ತಿಳಿಸಿದ್ದರಿಂದ, ಉಪಾಯವಿಲ್ಲದೇ ಅದನ್ನು ಸರಿಯಾಗಿ ಉತ್ತರಿಸಿದೆ! ಆದರೂ ತಪ್ಪಿತಸ್ಥ ಭಾವ ನನ್ನನ್ನು ಕಾಡುತ್ತಿತ್ತು. ಯಾಕೆಂದರೆ ನನ್ನ ಶೈಕ್ಷಣಿಕ ಜೀವನದಲ್ಲಿ ನನಗೆ ಗೊತ್ತಿಲ್ಲದೆ, ಹೇಳಿಕೊಟ್ಟು ಬರೆದ ಒಂದೇ ಒಂದು ಉತ್ತರವೆಂದರೆ ಅದು. ಅದಕ್ಕೆ ನನಗೆ ಇಂದಿಗೂ ಆ ಇಂಗ್ಲಿಷ್ ಪದ ಮರೆಯದೆ ಮನ ಪಟಲದಲ್ಲಿ ಉಳಿದಿರುವುದು!! ಸೋಜಿಗವೆನಿಸಿದರೂ ಅಪ್ಪಟ ಸತ್ಯ!

ನಕಲಿ ಮಾಡುವುದರ ಬದ್ದ ವಿರೋಧಿಯಾದ ನಾನು ಪರೀಕ್ಷಾ ಕೊಠಡಿಯಲ್ಲಿ ಯಾರಲ್ಲೂ ಕೇಳುತ್ತಿರಲಿಲ್ಲ, ಹಾಗೂ ಯಾರಿಗೂ ನನ್ನ ಉತ್ತರಗಳನ್ನು ತೋರಿಸುತ್ತಿರಲಿಲ್ಲ. ಯಾಕೆಂದರೆ ನಕಲಿ ಮಾಡುವುದು ತಪ್ಪು ಎನ್ನುವ ಭಾವ ಮನದಾಳದಲ್ಲಿ ಬೇರೂರಿತ್ತು. ಆದ್ದರಿಂದ ನಕಲಿ ಮಾಡದಿದ್ದರೂ ಇನ್ನೊಬ್ಬರು ಹೇಳಿಕೊಟ್ಟು ಬರೆದು ನಾನು ಮಾಡಿದ ಆ ತಪ್ಪು ಇಂದಿಗೂ ನನ್ನನ್ನು ಕಾಡುತ್ತಿರುತ್ತದೆ. ಪ್ರತೀ ಸಲ ತರಗತಿಯಲ್ಲಿ ಮೂರನೇ ಅಥವಾ ಎರಡನೇ ಸ್ಥಾನ ಬರುತ್ತಿದ್ದ ನನಗೆ ಎಸ್ ಎಸ್ ಎಲ್ ಸಿ ಯಲ್ಲೂ ಮೂರನೇ ಸ್ಥಾನ ಬಂದಿತ್ತು. ಅವೆಲ್ಲವೂ ಸ್ವ ಸಾಮರ್ಥ್ಯದಿಂದ ಪಡೆದ ಅಂಕಗಳೆನ್ನುವ ಹೆಮ್ಮೆ ಇಂದಿಗೂ ಇದೆ.

ಹಿಂದಿನ ಈ ನನ್ನ ಅನುಭವವನ್ನು ಇಲ್ಲಿ ಯಾಕೆ ಬಿಚ್ಚಿಡುತ್ತಿದ್ದೇನೆ ಎಂದರೆ ಈಗಿನ ಮಕ್ಕಳು ಯಾವುದೇ ಪರೀಕ್ಷೆ ಇರಲಿ, ನಕಲಿ ಮಾಡುವುದನ್ನು ರೂಢಿ ಮಾಡಿಕೊಂಡಿದ್ದಾರೆ. ತಮ್ಮಲ್ಲಿ ಸ್ವ ಸಾಮರ್ಥ್ಯ ಇದೆ ಎಂದು ತಿಳಿದರೂ ಕಾಪಿ ಚೀಟಿ ಇಟ್ಕೊಂಡು ಅಥವಾ ಇತರರ ಉತ್ತರ ಪತ್ರಿಕೆಯನ್ನು ಕದ್ದು ನೋಡಿ ಬರೆಯುವ ಹವ್ಯಾಸ ರೂಢಿ ಮಾಡಿಕೊಂಡಿದ್ದಾರೆ. ನಾವು ಶಾಲೆಯಲ್ಲಿ ಮಾಡುವ ಬಹುತೇಕ ಪರೀಕ್ಷೆಗಳಲ್ಲಿ ಶಿಕ್ಷಕರ ಕಣ್ತಪ್ಪಿಸಿ ಮಾಡುವ ನಕಲಿಗಳು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಕಸಿದಿವೆ ಎಂದರೆ ತಪ್ಪಾಗಲಾರದು. ನಕಲಿಯಿಂದ ನಾನು ಕಲಿಯಲಾರೆ, ನಾನು ಮೇಲೇರಲಾರೆ ಅನ್ನುವ ಕಟು ಸತ್ಯ ವಾಸ್ತವ ಎಲ್ಲೀವರೆಗೆ ಮಕ್ಕಳಿಗೆ ಅರಿವಾಗುವುದಿಲ್ಲವೋ ಅಲ್ಲೀವರೆಗೆ ಮಗುವಿನ ನೈಜ ಸಾಮರ್ಥ್ಯ ಹೊರಬರಲಾರದು! ಈ ಬದಲಾವಣೆಗೆ ದಿಟ್ಟ ಹೆಜ್ಜೆ ಎಂದರೆ ಈ ವರ್ಷದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯನ್ನು ಸಿಸಿ ಕ್ಯಾಮೆರಾ ವೆಬ್ ಕ್ಯಾಸ್ಟಿಂಗ್ ಮುಖಾಂತರ ಮಾಡಿರುವುದು. ಆ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಿ ಗುಣಮಟ್ಟ ಸುಧಾರಿಸುವುದರ ಜೊತೆಗೆ ವಿದ್ಯಾರ್ಥಿಗಳು, ಪೋಷಕರೂ ಎಚ್ಚೆತ್ತುಕೊಂಡು ವಿದ್ಯಾಬ್ಯಾಸದ ಕಡೆಗೆ ಹೆಚ್ಚಿನ ಒತ್ತು ನೀಡುವಂತಾಗಲು ಈ ವಿಧಾನ ಅತ್ಯುಪಯುಕ್ತವಾಗಿದೆ.

ಹುಟ್ಟಿನಿಂದ ಯಾವುದೇ ಮಗುವೂ ಜಾಣ ಅಥವಾ ದಡ್ಡ ಎಂದು ಗುರುತಿಸಲ್ಪಡುವುದಿಲ್ಲ. ತನ್ನನ್ನು ತಾನು ಹೇಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಅಥವಾ ಇನ್ನಿತರ ಬೌದ್ಧಿಕ ವಿಕಾಸದ ಕಾರ್ಯಗಳಿಗೆ ಪೂರಕವಾಗಿ ಬಳಸಿಕೊಳ್ಳುವನೋ ಆ ಮೂಲಕ ಆ ಮಗು ಜಾಣ ಅಥವಾ ದಡ್ಡ ಎನಿಸಿಕೊಳ್ಳುತ್ತಾನೆ. ತಮ್ಮ ಮೆದುಳನ್ನು ಕ್ರಿಯಾಶೀಲವಾಗಿಸುವ ಚಟುವಟಿಕೆಗಳಿಗೆ ತನ್ನನ್ನು ತಾನು ತೆರೆದುಕೊಳ್ಳದಿರುವುದು, ಅತಿಯಾದ ಮೊಬೈಲ್ ಬಳಕೆ, ಪೋಷಕರ ನಿರ್ಲಕ್ಷ್ಯ ಹಾಗೂ ಅಂತರ್ಜಾಲ ತಾಣಗಳಲ್ಲಿ ಸಕ್ರಿಯವಾಗುವಿಕೆ ಮುಂತಾದ ಹಲವಾರು ಕಾರಣಗಳು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ನೈತಿಕ ಮಟ್ಟ ಹಾಗೂ ಶೈಕ್ಷಣಿಕ ಗುಣಮಟ್ಟ ಕುಸಿಯುವಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ ಎಂದರೆ ತಪ್ಪಾಗಲಾರದು. 

"ಪರೀಕ್ಷೆಯಲ್ಲಿ ನಕಲಿ ಮಾಡಿದರೆ ನಿನ್ನ ಅಂಕಗಳು ಉತ್ತಮವಾದೀತು, ಆದರೆ ನೀನಲ್ಲ. ನಿನ್ನನ್ನು ನೀನು ಉತ್ತಮ ಪಡಿಸಿಕೊಂಡರೆ ನಿನ್ನ ಅಂಕಗಳು ಅಚಾನಕ್ ಆಗಿ ಉತ್ತಮಗೊಳ್ಳುತ್ತವೆ. ಆದ್ದರಿಂದ ಮೊದಲು ನಿನ್ನನ್ನು ನೀನು ಉತ್ತಮ ಪಡಿಸಿಕೊಳ್ಳು, ಆಗ ಜೀವನವೆಂಬ ಪರೀಕ್ಷೆಯಲ್ಲಿ ನೀನು ಗೆಲ್ಲುವೆ."
        ನಾನೇ ಬರೆದ ಸುಭಾಷಿತದ ಸಾಲುಗಳು! ಬಹುಶಃ ಈ ಸಾಲುಗಳನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡರೆ, ಅದರ ಒಳಾರ್ಥವನ್ನು ಅರಿತು ಬದಲಾದರೆ ಅವರ ಭವಿಷ್ಯವು ಬೆಳಕಾಗಬಹುದು. ಆ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಅಸಾಧ್ಯವಾದುದನ್ನು ಸಾಧ್ಯ ಮಾಡಿಕೊಂಡು ಜೀವನದಲ್ಲಿ ವಿದ್ಯಾರ್ಥಿಗಳು ಯಶಸ್ಸನ್ನು ತಮ್ಮದಾಗಿಸಿಕೊಳ್ಳುವಂತೆ ಮಾಡುವಲ್ಲಿ ಶಿಕ್ಷಕರಾದ ನಮ್ಮ ಪಾತ್ರವೂ ಹಿರಿದಾಗಿರುತ್ತದೆ. ಆ ದಿಕ್ಕಿನಲ್ಲಿ ನಮ್ಮ ಪ್ರಯತ್ನ ಮುಂದುವರಿಯಲಿ.
.................................... ಮಂಜುಳಾ ಪ್ರಸಾದ್
ಸಹ ಶಿಕ್ಷಕಿ
ಕರ್ನಾಟಕ ಪಬ್ಲಿಕ್ ಶಾಲೆ ತ್ಯಾವಣಿಗೆ 
ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ
Mob : +91 97433 77517
******************************************


Ads on article

Advertise in articles 1

advertising articles 2

Advertise under the article