ಕಲಿಕೆಗೂ ಸೈ - ಚಿತ್ರಕ್ಕೂ ಜೈ : ಸಮ್ಯತಾ ಆಚಾರ್ಯ
Tuesday, July 2, 2024
Edit
ಪ್ರತಿಭಾ ಪರಿಚಯ : ಕಲಿಕೆಗೂ ಸೈ ಚಿತ್ರಕ್ಕೂ ಜೈ : ಸಮ್ಯತಾ ಆಚಾರ್ಯ
ಲೇಖನ : ತಾರಾನಾಥ್ ಕೈರಂಗಳ
ಪ್ರತಿಭೆ : ಸಮ್ಯತಾ ಆಚಾರ್ಯ
ದ್ವಿತೀಯ ಪಿಯುಸಿ (ವಿಜ್ಞಾನ ವಿಭಾಗ)
ಶ್ರೀ ದುರ್ಗಾಪರಮೇಶ್ವರಿ ಟೆಂಪಲ್
ಪದವಿಪೂರ್ವ ಕಾಲೇಜು, ಕಟೀಲು
ದಕ್ಷಿಣ ಕನ್ನಡ ಜಿಲ್ಲೆ
ಎಲ್ಲಾ ಮಕ್ಕಳಲ್ಲಿ ಎಲ್ಲಾ ರೀತಿಯ ಪ್ರತಿಭೆಗಳು ಅಡಕವಾಗಿರುತ್ತದೆ. ಅವನ್ನು ಪೋಷಿಸಿ ಬೆಳಗಿಸಿದಾಗ ಮಾತ್ರ ಪ್ರಕಟವಾಗುತ್ತದೆ. ನಮ್ಮ ಸುತ್ತಲಿನ ವಲಯದಿಂದ ಹೆಚ್ಚು ಪ್ರಭಾವಿತರಾಗಿ ನಮ್ಮ ಹವ್ಯಾಸಗಳು ಸೃಷ್ಟಿಯಾಗುತ್ತದೆ. ಹೀಗೆ ಬೆಳೆಯುವ ಮಕ್ಕಳಿಗೆ ಸಂಸ್ಕಾರ ಸಹಿತವಾದ ಹವ್ಯಾಸಗಳು ಬೆಳೆದಾಗ ಗುಣಮಟ್ಟದ ವ್ಯಕ್ತಿತ್ವವನ್ನು ಪಡೆದುಕೊಳ್ಳುತ್ತಾರೆ. ಸ್ವಪ್ರಜ್ಞೆ ಸ್ವಕಲಿಕೆಯ ಮನೋಗುಣವುಳ್ಳ ಮಕ್ಕಳು ಇನ್ನೂ ಎತ್ತರಕ್ಕೆ ಬೆಳೆಯುತ್ತಾ ಹೋಗುತ್ತಾರೆ. ಹೀಗೆ ಕಲಿಕೆಗೂ ಸೈ ಚಿತ್ರಕ್ಕೂ ಜೈ ಎಂದು ತನ್ನ ಕಿರಿಯವ ವಯಸ್ಸಿನಲ್ಲೇ ಪ್ರತಿಭೆಯನ್ನು ಅನಾವರಣಗೊಳಿಸಿರುವ ಬಾಲಕಿ ಸಮ್ಯತಾ ಆಚಾರ್ಯ.
ಸಮ್ಯತಾ ಆಚಾರ್ಯ ಹುಟ್ಟು ಪ್ರತಿಭಾವಂತೆ. ಚುರುಕು ಹಾಗೂ ಎಲ್ಲಾ ವಿಷಯಗಳಲ್ಲೂ ತುಂಬಾ ಆಸಕ್ತಿ. ಬಾಲ್ಯದಿಂದಲೂ ಚಿತ್ರಕಲೆ ಅಂದರೆ ತುಂಬಾ ಇಷ್ಟ. ಪ್ರಾಥಮಿಕ ಶಾಲಾ ಹಂತವನ್ನು ಸುಮಾರು ನಾಲ್ಕು ಶಾಲೆಗಳಲ್ಲಿ ಕಲಿಯುವ ಅವಕಾಶ ದೊರೆತ್ತಿದ್ದರಿಂದ ವೈವಿಧ್ಯ ಪರಿಸರದಲ್ಲಿ ಬೆಳೆಯುವ ಅರಿವನ್ನು ಮೂಡಿಸಿತು. ತರಗತಿ ಕಲಿಕೆಯಲ್ಲಿ ಯಾವತ್ತೂ ಮುಂದು. ಜೊತೆ ಜೊತೆಗೆ ಚಿತ್ರಕಲೆಯ ಅಭ್ಯಾಸ ಸ್ವಕಲಿಕೆಯ ಮೂಲಕ ಸಾಗಿತು. ಯಾವುದೇ ಪ್ರಬುದ್ಧ ಚಿತ್ರ ಕಲಾವಿದರ ನಿರಂತರ ಅಭ್ಯಾಸ ದೊರೆಯದಿದ್ದರೂ ಅವರ ಸಲಹೆ ಸಹಕಾರಗಳೊಂದಿಗೆ ಏಕಲವ್ಯನಂತೆ ಸ್ವಪರಿಶ್ರಮದಿಂದ ಗುರಿಯನ್ನು ಸಾಧಿಸುತ್ತಿರುವ ಸಮ್ಯತಾ ವಿಶಿಷ್ಟ ಪ್ರತಿಭೆಯಾಗಿ ಗುರುತಿಸಿಕೊಳ್ಳುತ್ತಾಳೆ.
ಪೊಳಲಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಜಯಂತ ಆಚಾರ್ಯ ಹಾಗೂ ಗೃಹಿಣಿ ಶ್ರೀಮತಿ ಸಂತೋಷ್ಮ ಇವರ ಪುತ್ರಿ. ತಂದೆ ಜಯಂತ್ ಆಚಾರ್ಯ ಮೂಲತಃ ಆಭರಣಗಳ ತಯಾರಿ ವಿನ್ಯಾಸಕಾರರಾಗಿದ್ದರು. ಅವರ ಕಲೆಯ ನಂಟು ಹಾಗೂ ತಾಯಿಯ ನಿರಂತರ ಪ್ರೋತ್ಸಾಹದಿಂದ ಕಲಿಕೆಯ ಜೊತೆಗೆ ಚಿತ್ರಕಲೆಯಲ್ಲಿ ವಿಶೇಷ ಸಾಧನೆ ಮಾಡುವ ನಿಟ್ಟಿನಲ್ಲಿ ಸಾಗುತ್ತಿದ್ದಾಳೆ. ಮಾವ ಸಂದೀಪ್ ಆಚಾರ್ಯ ಬಿಡಿಸುತ್ತಿದ್ದ ಚಿತ್ರಗಳನ್ನು ಗಮನಿಸುತ್ತಾ ಪ್ರೇರಣೆಗೊಂಡು ಗೀಚಿ ಗೀಚಿ ಚಿತ್ರಿಸುವ ಹಂತದಿಂದ ಸಹಜ ಬೆಳವಣಿಗೆಯನ್ನು ಕಾಣುತ್ತಾ ಬೆಳೆದ ಪರಿ ನಿಬ್ಬೆರಗಾಗಿಸುತ್ತದೆ.
ಮಕ್ಕಳ ಚಿತ್ರಗಳು, ಕಲ್ಪನೆಯ ಚಿತ್ರಗಳು, ತದ್ರೂಪಿ ಚಿತ್ರಗಳು ಇವು ಮಕ್ಕಳ ಸ್ವಾಭಾವಿಕ ಹಂತಗಳು. ಹೀಗೆ ಹಂತ ಹಂತವಾಗಿ ಬೆಳೆದ ಸಮ್ಯತಾ ಪ್ರಕೃತಿ ಚಿತ್ರಗಳು, ವಸ್ತು ಚಿತ್ರಗಳು, ಸಾಂದರ್ಭಿಕ ಚಿತ್ರಗಳು, ದೇವರ ಚಿತ್ರಗಳು, ಹಾಗೂ ವ್ಯಕ್ತಿ ಚಿತ್ರಗಳು ಹೆಚ್ಚು ಇಷ್ಟವಾಗುತ್ತಾ ಹೋಯಿತು. ಬೇರೆ ಬೇರೆ ಕಲಾವಿದರು ಬಿಡಿಸಿದ ಚಿತ್ರಗಳನ್ನು ಗಮನಿಸುತ್ತಾ ತಾನು ಉತ್ತಮ ಕಲಾಕೃತಿಗಳ ರಚನೆ ಮಾಡಬೇಕೆನ್ನುವ ಅಭಿಲಾಷೆ ಹೊಂದಿದಳು. ಪಠ್ಯದ ಜೊತೆ ಜೊತೆಗೆ ಸಮಯವನ್ನು ಹೊಂದಿಸಿಕೊಂಡು ಯೂಟ್ಯೂಬಲ್ಲಿ ಬರುವ ಕಲಾಕೃತಿಗಳ ರಚನಾ ತಾಂತ್ರಿಕತೆಯನ್ನು ಅಭ್ಯಾಸ ಮಾಡಿಕೊಂಡು ಬೆಳೆಯ ತೊಡಗಿದಳು. ವ್ಯಕ್ತಿ ಚಿತ್ರಣ ರಚನೆಯಲ್ಲಿ ಪೆನ್ಸಿಲ್ ಶೇಡಿಂಗ್ ನ ತಂತ್ರಗಾರಿಕೆ, ಕತ್ತಲು ಬೆಳಕಿನ ಸಂಯೋಜನೆ, ಒಟ್ಟು ಅಂತಿಮ ರೂಪದ ಕಲ್ಪನೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಸಾಮರ್ಥ್ಯವನ್ನು ಗಳಿಸಿಕೊಂಡಿದ್ದಾಳೆ.
ಮಕ್ಕಳ ಜಗಲಿ ಆರಂಭವಾದಾಗಿನಿಂದ ಸಮ್ಯತಾ ನಿರಂತರವಾಗಿ ಮಕ್ಕಳ ಜಗಲಿಯಲ್ಲಿ ಕೂಡಾ ತೊಡಗಿಸಿಕೊಳ್ಳುತ್ತಾ ಬಂದಿರುವುದು ಶ್ಲಾಘನೀಯ. ಅವಳು ರಚಿಸುತ್ತಿದ್ದ ಚಿತ್ರಗಳನ್ನು ಪ್ರಕಟಿಸಿ ಬೆಳೆಯುವ ಅವಕಾಶಗಳಲ್ಲಿ ಒಂದಾಗಿ ಮಕ್ಕಳ ಜಗಲಿ ಜೊತೆಗೆ ನಿಂತಿದೆ.
ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಮಾಜಿ ಶಿಕ್ಷಣ ಸಚಿವರಾಗಿದ್ದ ಶ್ರೀ ಸುರೇಶ್ ಕುಮಾರ್ , ಥಟ್ ಅಂತ ಹೇಳಿ ಕಾರ್ಯಕ್ರಮದ ನಿರೂಪಕರು ಡಾ. ನಾ ಸೋಮೇಶ್ವರ ಇವರ ಭಾವಚಿತ್ರಗಳನ್ನು ರಚಿಸಿ ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಕೈಗಿತ್ತು ಪ್ರಶಂಸೆಗೆ ಪಾತ್ರರಾಗಿರುವ ಸಮ್ಯತಾಳ ಪ್ರತಿಭೆ ಅನನ್ಯ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಚಲನಚಿತ್ರ ನಟಿ ರಚಿತಾ ರಾಮ್, ಖ್ಯಾತ ನಾಯಕ ನಟ ಸುದೀಪ್ ಹಾಗೂ ಇನ್ನೂ ಅನೇಕರ ಭಾವಚಿತ್ರಗಳನ್ನು ನೈಜವಾಗಿ ರಚಿಸಿ, ಇವರೆಲ್ಲರ ಆಶೀರ್ವಾದದ ನುಡಿಗಳಿಗೆ ಕಿವಿಯಾಗಿರುವ ಸಮ್ಯತಾ ಮುಂದೊಂದಿನ ಕಲಾಲೋಕದ ಅದ್ಭುತ ಪ್ರತಿಭೆಯಾಗಿ ಹೊರ ಹೊಮ್ಮಲಿದ್ದಾಳೆ.
ಶ್ರೀ ರಾಜರಾಜೇಶ್ವರಿ ಸರಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಪೂರೈಸಿರುವ ಈಕೆ 606/625 ವಿಶಿಷ್ಟ ಶ್ರೇಣಿ ಅಂಕವನ್ನು ಪಡೆದಿದ್ದಾಳೆ. ಅದೇ ರೀತಿ ಈ ಬಾರಿ 2023-24 ನೇ ಸಾಲಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಕಟೀಲು ಶ್ರೀ ದುರ್ಗಪರಮೇಶ್ವರಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪೂರೈಸಿರುವ ಈಕೆ 579/600 ಅಂಕಗಳನ್ನು ಗಳಿಸಿ ಸಾಧನೆಯ ಮುಕುಟವನ್ನು ಧರಿಸಿದ್ದಾಳೆ. ಇಷ್ಟೊಂದು ದೊಡ್ಡ ಅಂಕಿಯ ಸಾಧನೆ ಅದು ಸುಲಭದ ಮಾತಲ್ಲ. ಅದರ ಹಿಂದಿರುವ ಪರಿಶ್ರಮ ಶ್ರದ್ಧೆ ಆತ್ಮವಿಶ್ವಾಸಕ್ಕೆ ಚಿತ್ರಕಲೆ ಸಹಕಾರಿಯಾಗಿದೆ ಎಂದರೆ ತಪ್ಪಲ್ಲ. ಚಿತ್ರಕಲೆಯ ಹವ್ಯಾಸವು ಶಿಕ್ಷಣಕ್ಕೆ ಪೂರಕವಾಗಿ ಸಂಯೋಜನೆಯಾಗಿರುವುದನ್ನು ಕೃತಿಯ ಮೂಲಕ ತೋರಿಸಿ ಕೊಟ್ಟಿದ್ದಾಳೆ. ಕಲಿಕೆಯಲ್ಲೂ ಅತ್ಯುನ್ನತವಾದ ಸಾಧನೆ ತೋರಿಸುತ್ತಾ ಚಿತ್ರಕಲೆಯಲ್ಲಿ ಕೂಡ ವಿಭಿನ್ನವಾಗಿ ತೊಡಸಿಕೊಳ್ಳುತ್ತಾ ಅಪರೂಪದ ವಿದ್ಯಾರ್ಥಿನಿಯಾಗಿ ನಮ್ಮ ನಡುವೆ ಗೋಚರಿಸುತ್ತಾಳೆ.
ಪಠ್ಯದ ಜೊತೆ ಚಿತ್ರಕಲೆಯನ್ನು ಪ್ರೀತಿಸುವ ಆರಾಧಿಸುವ, ಬೆಳೆಸಿಕೊಳ್ಳುವ ಸಂದೇಶವನ್ನು ರವಾನಿಸಿದ ಸಮ್ಯತಾಳ ಸಾಧನೆ ಪ್ರತಿಯೊಬ್ಬರಿಗೂ ಮಾದರಿ. ಈ ಯುವ ಪ್ರತಿಭೆ ಇನ್ನಷ್ಟು ಹೊಸ ಹೊಸ ಸಾಧನೆಯ ಅಧ್ಯಾಯಗಳಿಗೆ ಸಾಕ್ಷಿಯಾಗಲಿ ಎನ್ನುವುದೇ ಮಕ್ಕಳ ಜಗಲಿಯ ಹಾರೈಕೆ.
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************