-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 35

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 35

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 35
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


 ಪ್ರೀತಿಯ ಮಕ್ಕಳೇ.... ಪ್ರತಿಯೊಂದು ಜೀವಕೋಶ ಗ್ಲುಕೋಸ್ ಮತ್ತು ಆಮ್ಲಜನಕವನ್ನು ಬಳಸಿಕೊಳ್ಳುತ್ತವೆ. ಇಂಗಾಲದ ಡೈಆಕ್ಸೈಡ್ ಮತ್ತು ಇತರ ವಿಸರ್ಜಕ ವಸ್ತುಗಳನ್ನು ಬಿಡುಗಡೆ ಮಾಡುತ್ತವೆ. ಏಕ ಕೋಶೀಯ ಜೀವಿಗಳಾದರೆ ತಮ್ಮ ಸುತ್ತಲಿರುವ ನೀರಿನಲ್ಲಿ ವಿಸರಣೆ (diffusion) ಮೂಲಕ ಕೊಡು ಕೊಳ್ಳುವ ಕೆಲಸ ಮಾಡಬಹುದು. ಆದರೆ ಬಹುಕೋಶೀಯ ಜೀವಿಗಳಲ್ಲಿ ಬರಿಯ ವಿಸರಣೆಯ ಮೂಲಕ ಸುಲಭ ಸಾಧ್ಯವಲ್ಲ. ಉದಾಹರಣೆಗೆ ಶ್ವಾಸಕೋಶದಲ್ಲಿ ಹೀರಿಕೊಂಡ ಆಮ್ಲಜನಕ ಉಂಗುಷ್ಟವನ್ನು ವಿಸರಣೆಯ ಮೂಲಕ ಉಂಗುಷ್ಟವನ್ನು ತಲುಪಲು ಮೂರು ವರ್ಷ ಬೇಕಾಗುತ್ತದೆ. ಆದ್ದರಿಂದ ಇದಕ್ಕಾಗಿ ಒಂದು ಕೆಲಸಕ್ಕಾಗಿ ಒಂದು ಸಮರ್ಥ ಸಂಯೋಜಕ ಅಂಗಾಂಶ ಮತ್ತು ಅದನ್ನು ಸಾಗಿಸಲು ಸಾಗಣಿಕಾ ವ್ಯವಸ್ಥೆ ಬೇಕು. ಪ್ರಾಣಿಗಳಲ್ಲಿ ಇದಕ್ಕಾಗಿ ಇರುವ ಸಮರ್ಥ ಸಂಯೋಜಕ ಅಂಗಾಂಶವೇ ರಕ್ತ. ರಕ್ತ ಎಂದರೆ ಕೆಂಪು ಬಣ್ಣ ಮನಸ್ಸಿಗೆ ರಾಚುತ್ತದೆ. ರಕ್ತಕ್ಕೆ ಕೆಂಪು ಬಣ್ಣ ಬರಲು ಕಾರಣ ಅದರಲ್ಲಿರುವ ಹೀಮೋಗ್ಲೋಬಿನ್ ಎಂಬ ವಸ್ತು. ಇದರ ಕೆಲಸ ಆಮ್ಲಜನಕವನ್ನು ಹೀರಿಕೊಳ್ಳುವುದು. ಅಕ್ಟೋಪಸ್ ನಂತಹ ಮೃದ್ವಂಗಿಗಳಲ್ಲಿ (molluscs) ಹೀಮೋಗ್ಲೋಬಿನ್ ಬದಲಾಗಿ ಹೀಮೋಸಯನಿನ್ ಇರುವುದರಿಂದ ಅವುಗಳ ರಕ್ತ ಹಸಿರು. ಜಿರಳೆ ಚೇಳುಗಳಂತಹ ಸಂಧಿಪಾದಿಗಳಲ್ಲಿ (arthropods) ಗಳಲ್ಲಿ ರಕ್ತಕ್ಕೆ ಆಮ್ಲಜನಕ ಸಾಗಣೆಯ ಜವಾಬ್ದಾರಿ ಇಲ್ಲ ಆದ್ದರಿಂದ ಅವುಗಳ ರಕ್ತ ಬಿಳಿ ಅಥವಾ ಬಣ್ಣವಿಲ್ಲ.  

ಈ ರಕ್ತವು ಕೆಲವು ಜೀವಿಗಳಲ್ಲಿ ಖಾಲಿ ಜಾಗದ ಮೂಲಕ ಹರಿದರೆ ಉಳಿದ ರಕ್ತ ಭಾಗಶಃ ಅಥವಾ ಪೂರ್ತಿಯಾಗಿ ರಕ್ತ ನಾಳಗಳಲ್ಲಿ ಹರಿಯುತ್ತದೆ. ರಕ್ತ ದೇಹದ ಮೂಲೆ ಮೂಲೆಗಳನ್ನು ತಲುಪಬೇಕಾಗುವುದರಿಂದ ಅದನ್ನು ಒತ್ತಿ ತಳ್ಳಲು ಒಂದು ಪಂಪ್ ನ ಅವಶ್ಯಕತೆ ಇದೆ. ಇದೇ ಹೃದಯ. ಎರೆಹುಳು ತನ್ನ ಜೀರ್ಣ ನಾಳದ ಇಕ್ಕೆಲಗಳಲ್ಲಿ ಹೃದಯವನ್ನು ಹೊಂದಿದ್ದರೆ ಉಳಿದ ಅಕಶೇರುಕಗಳು ಜೀರ್ಣನಾಳದ ಮೇಲ್ಭಾಗದಲ್ಲಿ ಹೃದಯವನ್ನು ಹೊಂದಿರುತ್ತವೆ. ಬೆನ್ನುಮೂಳೆ ಹೊಂದಿರುವ ಕಶೇರುಕಗಳಲ್ಲಿ ಹೃದಯ ಜೀರ್ಣನಾಳದ ಕೆಳಭಾಗದಲ್ಲಿವೆ. ಹೃದಯ ಒಂದು ಪಂಪ್ ಎಂದ ಕೂಡಲೇ ನೀವು ನಿಮ್ಮ ಮನೆಯ ನೀರೆತ್ತುವ ಪಂಪ್ ನ ಹಾಗೆ ಎಂದು ಭಾವಿಸಬೇಡಿ. ಇದು ಕುಲುಮೆಯಲ್ಲಿ ಬಳಸುತ್ತಿದ್ದ ತಿದಿಯ ಹಾಗೆ. ತನ್ನೊಳಗೆ ತಂದು ಸುರಿದ ರಕ್ತವನ್ನು ಒತ್ತಿ ಮುಂದಿನ ‌ನಿಲ್ದಾಣಕ್ಕೆ ಸಾಗಿಸುವುದು ಮಾತ್ರ ಅದರ ಕೆಲಸ. ಹತ್ಕರ್ಣದಿಂದ ಹೃತ್ಕುಕ್ಷಿಗೆ, ಹೃತ್ಕುಕ್ಷಿಯಿಂದ ದೇಹದ ಬೇರೆ ಬೇರೆ ಭಾಗಗಳಿಗೆ. ಹಾಗಾದರೆ ಹೃದಯಕ್ಕೆ ರಕ್ತವನ್ನೊತ್ತುವವರು ಯಾರು? ಈ ಕೆಲಸ ಸ್ನಾಯುಗಳದ್ದು. ಸ್ನಾಯು ಸಂಕೋಚನದಿಂದಾಗಿ ರಕ್ತ ಹೃದಯವನ್ನು ತಲುಪುತ್ತದೆ. ಸ್ನಾಯು ಸಂಕೋಚನ ಇಲ್ಲದಿದ್ದರೆ ಅಥವಾ ಕಡಿಮೆಯಾದರೆ ರಕ್ತ ದೇಹದ ಕೆಳ ಭಾಗದಲ್ಲಿ ನಿಂತು ಬಿಡುತ್ತದೆ. ನಿಂತು ಕೆಲಸ ಮಾಡುವ ಪೋಲೀಸರು ದಾದಿಯರ ಕಾಲುಗಳಲ್ಲಿ ರಕ್ತ ನಾಳಗಳು ನೀಲಿಯಾಗಿ ದಪ್ಪನಾಗಿರುವುದನ್ನು ನೀವು ನೋಡಿರಬಹುದು. ಇದನ್ನು varicose veins ಎಂದು ಕರೆಯುತ್ತೀರಿ ತಾನೇ. ಇದಕ್ಕೆ ಕಾರಣ ಈಗ ತಿಳಿಯಿತೇ? ಬೆಳಿಗ್ಗೆ ಪ್ರಾರ್ಥನೆಗೆ ಬಹಳ ಕಾಲ ನಿಂತಾಗ ನಿಮ್ಮ ಮಿತ್ರರು ಕೆಲವರು ತಲೆಸುತ್ತಿ ಬೀಳುವುದನ್ನು ನೋಡಿದ್ದೀರಲ್ಲವೇ? ಅಥವಾ ನೀವೇ ಬಿದ್ದು ಬಿಟ್ಟಿರಬಹುದು ಕೂಡಾ. ಅದೇ ಸಾಮೂಹಿಕ ಕವಾಯತಿಗಾಗಿ 40 ನಿಮಿಷಗಳಲ್ಲಿ ಯಾರೂ ತಲೆ ಸುತ್ತಿ ಬೀಳುವುದಿಲ್ಲ. ನೀವು ತಲೆ ಸುತ್ತಿ ಬಿದ್ದಾಗ ಯಾಕೆ ಬೆಳಿಗ್ಗೆ ತಿಂಡಿ ಮಾಡಿಲ್ಲ ಎನ್ನುವರು. ತಿನ್ನದೇ ಇದ್ದರೂ ತಲೆ ಸುತ್ತಿ ಬೀಳುವುದಿಲ್ಲ ಹೆದರಬೇಡಿ. ಏಕೆಂದರೆ ನಿಮ್ಮ ಪಿತ್ಥ ಜನಕಾಂಗ ಆಪತ್ಕಾಲಕ್ಕೆ ಅಗತ್ಯವಾದ ಆಹಾರವನ್ನು ಶೇಖರಿಸಿರುತ್ತವೆ. ಹಾಗಾದರೆ ತಲೆ ಸುತ್ತಿ ಬೀಳುವುದಾದರೂ ಏಕೆ ಗೊತ್ತೆ? 

ರಕ್ತ ಒಂದು ದ್ರವ. ದ್ರವಗಳು ಯಾವಾಗಲೂ ಎತ್ತರದಿಂದ ಕೆಳಕ್ಕೆ ಹರಿಯುತ್ತವೆ. ನೀವು ನಿಂತಾಗ ಕಾಲಿಗೆ ಬಂದ ರಕ್ತ ಅಲ್ಲಿಯೇ ಸಂಗ್ರಹವಾಗುತ್ತಾ ಸಾಗುವುದರಿಂದ ಮೆದುಳಿಗೆ ರಕ್ತದ ಸರಬರಾಜು ಕಡಿಮೆಯಾಗುತ್ತದೆ. ಆಗ ಮೆದುಳು ತಕ್ಷಣ ಸ್ನಾಯುಗಳಿಗೆ ಸಂದೇಶ ಕಳಿಸಿ ಮೆದುಳು ಮತ್ತು ದೇಹದ ಇತರ ಭಾಗಗಳನ್ನು ಒಂದೇ ಮಟ್ಟಕ್ಕೆ ತರುವಂತೆ ಆದೇಶಿಸುತ್ತದೆ. ಆಗ ನಿಮ್ಮ ತೊಡೆ ಮತ್ತು ಮೀನ ಖಂಡದ ಸ್ನಾಯುಗಳು ಸಂಕುಚಿಸಿ ನೀವು ಕೆಳಕ್ಕೆ ಕುಸಿಯುತ್ತೀರಿ. ಆಗ ನಿಮ್ಮ ದೇಹದ ಎಲ್ಲ ಭಾಗಗಳು ಸಮ ಮಟ್ಟದಲ್ಲಿರುವುದರಿಂದ ಮೆದುಳು ರಕ್ತ ಪಡೆದುಕೊಳ್ಳುತ್ತದೆ. ಇದೊಂದು ಸಹಜವಾದ ದೇಹದ ಪ್ರಕ್ರಿಯೆ (normal body mechanism). ಆದರೆ ನಿಮ್ಮ ಶಿಕ್ಷಕರು ನಿಮ್ಮ ಮಿತ್ರರೊಂದಿಗೆ ಓಡಿ ಬರುತ್ತಾರೆ ನಿಮ್ಮನ್ನು ಎತ್ತಿ ಕೂರಿಸುತ್ತಾರೆ. ಅಂದರೆ ನಿಮ್ಮ ತಲೆಯನ್ನು ಮೇಲಕ್ಕೆ ಎತ್ತುತ್ತಾರೆ. ನಿಮಗೆ ನೀರು ಕುಡಿಸುತ್ತಾರೆ. ಎಲ್ಲರೂ ನಿಮ್ಮ ಸುತ್ತಲೂ ಸೇರಿ ನಿಮಗೆ ಉಸಿರಾಡಲು ತಣ್ಣಗಿನ ಗಾಳಿಗೂ ತಡೆ ಹಾಕುತ್ತಾರೆ. ಹಾಗಾದರೆ ನಾವು ಏನು ಮಾಡಬೇಕು ಎಂದು ನೀವು ಕೇಳಬಹುದು. ಆತನನ್ನು ನೆಲದ ಮೇಲೆ ಅಥವಾ ಬೆಂಚಿನ ಮೇಲೆ ಮಲಗಿಸಬೇಕು. ಆತನ ಕಾಲುಗಳನ್ನು ದೇಹಕ್ಕಿಂತ ಸ್ವಲ್ಪ ಮೇಲಕ್ಕಿರಿಸಿ ಧಾರಳವಾಗಿ ಗಾಳಿ ಬರುವಂತೆ ಮಾಡಬೇಕು. 

ಹಾಗಾದರೆ ತಲೆ ಸುತ್ತಿ ಬೀಳದಿರಲು ಏನು ಮಾಡಬೇಕು ಎಂದು ನೀವು ಕೇಳಬಹುದು. ಒಂದು ನೆನಪಿಡಿ ದೇಹದ ಬೇರೆ ಬೇರೆ ಭಾಗಗಳಿಗೆ ಹೃದಯ ರಕ್ತವನ್ನು ಒತ್ತುತ್ತದೆ. ಆದರೆ ದೇಹದ ಬೇರೆ ಬೇರೆ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ಒತ್ತುವುದು ಸ್ನಾಯುಗಳು. ನೀವು ಸಾವಧಾನ ಸ್ಥಿತಿಯಲ್ಲಿ ನಿಂತಾಗ ನೀವು ಚಲಿಸಬಾರದು. ಆದರೆ ನಿಮ್ಮ ಕಾಲ್ಬೆರಳುಗಳು ಅದರಲ್ಲಿಯೂ ಕಾಲಿನ ಹೆಬ್ಬೆರಳು ಚಲಿಸುತ್ತಿರಬೇಕು. ಆಗ ಮೀನ ಖಂಡದ ಸ್ನಾಯುಗಳ ಸೆಳೆತದಿಂದ (muscular pull) ರಕ್ತ ಹೃದಯಕ್ಕೆ ತಳ್ಳಲ್ಪಡುತ್ತದೆ ಮತ್ತು ಮೆದುಳು ಸಾಕಷ್ಟು ರಕ್ತವನ್ನು ಪಡೆಯುತ್ತದೆ.

ಹೇಳುತ್ತಾ ಹೇಳುತ್ತಾ ಹೇಳಬೇಕಾದ ವಿಷಯವನ್ನೇ ಮರೆತೆ. ಮುಂದಿನವಾರ ರಕ್ತ ನಾಳಗಳು ಮತ್ತು ಉಳಿದ ವಿಯಯಗಳ ಬಗ್ಗೆ ತಿಳಿಯೋಣ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article