ಸ್ಫೂರ್ತಿಯ ಮಾತುಗಳು : ಸಂಚಿಕೆ - 122
Monday, July 1, 2024
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 122
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಅಂದು ಆ ಶಾಲೆಯ ವಾರ್ಷಿಕೋತ್ಸವ. ಮಕ್ಕಳು ನಕ್ಕು ನಲಿದು ಸಂಭ್ರಮಿಸುವ ದಿನ. ಅವರ ಮನೆಯವರೆಲ್ಲರೂ ಬಂದಿದ್ದಾರೆ. ಮೊಮ್ಮಗುವಿನ ನೃತ್ಯ ಮತ್ತು ನಾಟಕ ನೋಡಲು ಅದರ ತಾತ ಮತ್ತು ಅಜ್ಜಿಯೂ ಬಂದಿದ್ದಾರೆ. ನೆರೆಕರೆಯವರನ್ನೂ ಮಕ್ಕಳು ಆಮಂತ್ರಸಿದ್ದಾರೆ. ಎಲ್ಲರೂ ಸೇರಿದ್ದಾರೆ. ಅಂದ ಚಂದದ ಉಡುಪು ಧರಿಸಿ ಶಾಲೆಗೆ ಬಂದ ಮಕ್ಕಳಿಗೆ, “ನಾನು ಯಾವಾಗ ವೇದಿಕೆಯೇರಿ ಬಹುಮಾನ ಸ್ವೀಕರಿಸಲಿಲ್ಲ!” ಎಂಬ ತವಕ. ಬಹುಮಾನ ಪಡೆಯುವಾಗ ತನ್ನ ಹೊಸ ಪೋಷಾಕಿನ ಗತ್ತು ಗಮ್ಮತ್ತಿನಲ್ಲಿಯೇ ಭಾವಚಿತ್ರ ಸೆರೆಹಿಡಿಯಲು ಕ್ಯಾಮರಾದವನಿಗೆ ಸೂಚಿಸಿಯೂ ಆಗಿದೆ. ಊರ ಪ್ರಮುಖರು ಸರಿಯಾಗಿ ಒಂಭತ್ತು ಘಂಟೆಗೆ ಆಗಮಿಸಿ ಧ್ವಜಾರೋಹಣ ಮಾಡಿ ಸಮಯ ಪ್ರಜ್ಞೆಯ ಪ್ರಶಂಸೆಗೆ ಭಾಜನರಾಗಿದ್ದಾರೆ.
ಇನ್ನೇನು ಹತ್ತು ಘಂಟೆಗೆ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ಬಂದವರೆಲ್ಲರೂ ಮಕ್ಕಳೊಂದಿಗೆ ಲವಲವಿಕೆಯಿಂದ ಸಭಾ ಮಂಟಪದಲ್ಲಿ ನೆರೆಯಲಾರಂಭಿಸಿದ್ದಾರೆ. ಗಡಿಯಾರದ ಸಣ್ಣ ಮುಳ್ಳು ಘಂಟೆ ಹನ್ನೊಂದರ ಹತ್ತಿರ ತಲಪುತ್ತಿದೆ. ಸಭೆ ಆರಂಭವಾಗುವುದು ಕಾಣುವುದಿಲ್ಲ. ಅಂದು ಬೇಸಗೆಯ ಪ್ರಖರ ಬಿಸಿಲಿನ ದಿನ. ಬೆವರಿ ಮಕ್ಕಳೆಲ್ಲರೂ ಸುಸ್ತು. ಮುಖ ಬಾಡಲಾರಂಭಿಸಿದೆ. ಬಹುಮಾನ ಪಡೆಯುವಾಗ ಇನ್ನೆಂತಹ ಫೋಟೋ? ಬಹುತೇಕ ಮಕ್ಕಳ ಮೊಗದಲ್ಲಿ ನಿರಾಸೆಯ ಕರಿ ಛಾಯೆ. ಕಾರ್ಯಕ್ರಮ ತಡವೇಕೆ ಎಂದು ವಿಚಾರಿಸಿದ ಹೆತ್ತವರಿಗೆ ಸಿಕ್ಕಿದ ಉತ್ತರ, “ಎಂ.ಎಲ್.ಎ ಬರಲಿದ್ದಾರೆ. ಬರುತ್ತಾ ಇದ್ದಾರೆ, ಬಂದ ಕೂಡಲೇ ಸಭೆ ಆರಂಭ ಮಾಡುತ್ತೇವೆ.” ಮುಖ್ಯ ಗುರುಗಳನ್ನು ದಬಾಯಿಸೋಣ ಎಂದೆನಿಸಿದವರಿಗೂ ಅವರ ಕಳೆಗುಂದಿದ ಮೋರೆ ನೋಡಿ, ಅಯ್ಯೋ ಪಾಪ! ಎನಿಸಿತು. ಅವರು ಬಡಪಾಯಿ, ಎಂ.ಎಲ್.ಎ ಇಷ್ಟೂ ತಡವಾಗುತ್ತಾರೆ ಎಂದು ಅವರಿಗನಿಸಿರಲಿಕ್ಕಿಲ್ಲ. ಆಮಂತ್ರಣ ನೀಡುವಾಗ ಬೇಗ ಬನ್ನಿ ಎಂದು ಹೇಳುವಂತಿಲ್ಲ. ಕರೆಯದೇ ಇದ್ದರೆ ‘ಪ್ರೊಟೋಕಾಲ್’ ಎಂಬ ತೂಗುಗತ್ತಿ. ತಾನು ತಡವಾಗುವುದರಿಂದ ನೂರಾರು ಜನರಿಗೆ ತಾಳಲಸಾಧ್ಯವಾದ ಸಮಸ್ಯೆಯಾಗುತ್ತದೆ ಎಂಬ ಸಾಮಾನ್ಯ ಪ್ರಜ್ಞೆಯಿದ್ದವರಿಗೆ ಸಮಯ ಪ್ರಜ್ಞೆಯೂ ಇರುತ್ತದೆ.
ಶಿಕ್ಷಕರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೇದಿಕೆಯೇರಲಿರುವ ಮಕ್ಕಳನ್ನು ಮುಖವರ್ಣಿಕೆ ಮತ್ತು ವೇಷಭೂಷಣಕ್ಕಾಗಿ ಹನ್ನೊಂದು ಘಂಟೆಯಾಗುವ ಹೊತ್ತಿಗೆ ಅಣಿಗೊಳಿಸಲಾದ ಕೊಠಡಿಗೆ ಕಳುಹಿಸಿದರು. ಸಾಂಸ್ಕೃತಿಕ ಕಾರ್ಯ ಕ್ರಮದ ಸಿದ್ಧತೆಯಲ್ಲಿ ಎಡವಟ್ಟಾದರೆ ತಡರಾತ್ರಿಯವರೆಗೂ ಮಕ್ಕಳು ಕಷ್ಟಪಡಬೇಕಾಗುತ್ತದೆಂಬ ಶಿಕ್ಷಕರ ಕಳಕಳಿ ಶ್ಲಾಘನೀಯ. ಮಕ್ಕಳು ಮುಖವರ್ಣಿಕೆ ಮತ್ತು ಪೋಷಾಕುಗಳೊಂದಿಗೆ ಎಲ್ಲರೂ ಸಿದ್ಧರಾಗುವಾಗ ಘಂಟೆ ಹನ್ನೆರಡಾಯಿತು. ಹತ್ತು ಘಂಟೆಗೆ ಆಗಮಿಸ ಬೇಕಾಗಿದ್ದ ಮಾನ್ಯ ಶಾಸಕರು ಇನ್ನೂ ಬಂದಿರಲಿಲ್ಲ. ಉಪಸ್ಥಿತ ಗಣ್ಯರು, ಅತಿಥಿಗಳು ಮತ್ತು ಪಾಲಕರು ಕತ್ತು ನೀಳ ಮಾಡಿ ಮಾಡಿ ಗೊಣಗಲಾರಂಭಿದರು, ಮನದೊಳಗೆ ಹಾಕುತ್ತಿದ್ದ ಹಿಡಿ ಶಾಪ ಕಿವಿಗೆ ಕೇಳಿಸುತ್ತಿರಲಿಲ್ಲ. ಭಗವಂತನಿಗೆ ಮಾತ್ರ ತಲುಪುತ್ತಲೇ ಇತ್ತು.
ಭಾರದ ಉಡುಪು ತೊಡುಪುಗಳಿಂದ ಮಕ್ಕಳು ಗಲಿಬಿಲಿಗೊಳ್ಳುವುದನ್ನು ಗಮನಿಸಿದ ಹಿರಿಯರನೇಕರು, ಶಾಸಕರು ಬಂದ ಮೇಲೇ ಮತ್ತೆ ವೇದಿಕೆ ಅಣಿಗೊಳಿಸೋಣ, ಈಗ ವೇದಿಕೆಯನ್ನು ತೆರವುಗೊಳಿಸಿ ಮಕ್ಕಳ ಕಾರ್ಯಕ್ರಮ ಆರಂಭಿಸೋಣ ಎಂದು ಸಲಹೆಯಿತ್ತರು. ಶಾಸಕರಿಗೆ ಫೋನಾಯಿಸಲಾಗಿ, ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆಂದು ಮೊಬೈಲ್ ಅರಚಲಾರಂಭಿಸಿತು. ವೇದಿಕೆ ತೆರವುಗೊಳಿಸಿ ನಿರೂಪಕರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪೀಠಿಕೆ ಹಾಕಲಾರಂಭಿಸಿದರು. ಆಗ ಸಮಯ ಹನ್ನೆರಡು ಮೂವತ್ತು. ಅದೇ ಹೊತ್ತಿಗೆ ಶಾಸಕರು ಆಗಮಿಸಬೇಕೇ? ವೇದಿಕೆಯಲ್ಲಿ ಮತ್ತೆ ಘೋಷಣೆ. ಮೊದಲಿಗೆ ಸಭಾ ಕಾರ್ಯಕ್ರಮ, ಜನಪ್ರಿಯ ಶಾಸಕರು ಸಮಯಕ್ಕೆ ಸರಿಯಾಗಿ ಈಗಾಗಲೇ ನಮ್ಮ ಜೊತೆ ಸೇರಿಕೊಂಡಿದ್ದಾರೆ. ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ಆರಂಭವಾಯಿತು. ದೀಪ ಬೆಳಗಿ ಉದ್ಘಾಟನೆಯನ್ನೂ ಮಾಡಿದರು.
ಶಾಸಕರು ಬಹಳ ತುರ್ತಿನಲ್ಲಿದ್ದರು. ಸಭಾ ಕಾರ್ಯಕ್ರಮದ ನಿರೂಪಕರಲ್ಲಿ ಮುಂದೇನು ಎಂದು ವಿಚಾರಿಸಿದಾಗ, “ವರದಿ ವಾಚನ” ಎಂದರು ನಿರೂಪಕರು. ಶಾಸಕರು, “ವರದಿ ವಾಚನ” ಮತ್ತೆ ಮುಂದುವರಿಸಿ. ನನಗೆ ತುರ್ತಾಗಿ ಹೋಗಬೇಕಾಗಿದೆ ಎನ್ನಬೇಕೆ! ನಿರೂಪಕರು ಬಾಗಲೇ ಬೇಕಾಯಿತು. ಶಾಸಕರು ಮಾತು ಆರಂಭಿಸಿದರು, “ ಕ್ಷಮಿಸಿ, ನಾನು ಬರುವಾಗ ಸ್ವಲ್ಪ ತಡವಾಯಿತು. ತಡವಾಗಿ ಬಂದರೂ ಬೇಗ ಹೊರಡಲು ಅನುಮತಿಸ ಬೇಕು ಎಂದು ಮಾತು ಆರಂಭಿಸಿದರು. ಶಾಸಕರಾಗಿ ತನ್ನಲ್ಲಿರುವ ಉದ್ದೇಶ, ಅವರು ಕ್ಷೇತ್ರಕ್ಕೆ ತಂದ ಅನುದಾನ, ಮುಂದಿನ ಕಾರ್ಯಯೋಜನೆಗಳು, ಸರಕಾರದ ಶಿಕ್ಷಣ ನೀತಿಗಳು, ತನಗೆ ಸಮಾಜದ ಬಗ್ಗೆ ಇರುವ ಕಳಕಳಿ ಎಲ್ಲವನ್ನೂ ವಿವರಿಸಿ ಮುಗಿಸುವಾಗ ಸಮಯ ಮಧ್ಯಾಹ್ನ ಒಂದೂವರೆ ಘಂಟೆ. ಸಾಂಕೇತಿಕವಾಗಿ ಇಬ್ಬರಿಗೆ ಬಹುಮಾನ ವಿತರಿಸಿ, ಶಾಲೆಗಾಗಿ ಶ್ರಮಿಸಿದ ಇಬ್ಬರನ್ನು ಶಾಲಾ ವತಿಯಿಂದ ಸನ್ಮಾನಿಸಿ ಖುಷಿಯಿಂದ ಹೊರಟೇ ಬಿಟ್ಟರು.
ಊಟದ ಸಮಯ. ಬೆಳಗ್ಗೆ ಸೇವಿಸಿದ ಲಘು ಉಪಾಹಾರ ದೊಡ್ಡ ಕರುಳು ಸೇರಿದೆ. ಸಣ್ಣ ಕರುಳು ಅಳಲಾರಭಿಸಿತ್ತು. ಬೇಗ ಬೇಗ ಮುಗಿಸುತ್ತೇವೆ ಎಂದು ಎಷ್ಟು ಹೇಳಿದರೂ, ವರದಿ ವಾಚನ, ಬಹುಮಾನ ವಿತರಣೆ, ಅತಿಥಿಗಳ ಭಾಷಣ ಮುಗಿಯುವಾಗ ಸಮಯ ಮೂರು ಘಂಟೆ. ಎಲ್ಲರಿಗೂ ಹಸಿವಾಗಿದೆ, ಇನ್ನು ಮಧ್ಯಾಹ್ನದ ಭೋಜನ ವಿರಾಮ ಎಂಬ ಘೊಷಣೆ ಆಗುತ್ತಿದ್ದಂತೆ ಊಟಕ್ಕಾಗಿ ನೂಕು ನುಗ್ಗಲು ಆರಂಭ. ಹನ್ನರಡು ಘಂಟೆಗೆ ತಯಾರಾಗಿದ್ದ ಅನ್ನ, ಸಾರು, ಸಾಂಬಾರು, ಪಲ್ಯ, ಪಾಯಸ, ಸ್ವೀಟುಗಳ ಮೇಲೆ ಈಗಾಗಲೇ ನೊಣಗಳು ಜಮಾಯಿಸಿದ್ದುವು. ಮಧ್ಯಾಹ್ನದ ಊಟದ ಹೊತ್ತಿಗೆ ಒಂದು ಸಾವಿರ ಜನರಿರಬಹುದೆಂಬ ಲೆಕ್ಕಾಚಾರದಲ್ಲಿ ಅಡುಗೆ ಸಿದ್ಧವಾಗಿತ್ತು. ಆದರೆ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲೆಂದು ಜನರ ದಂಡು ಎರಡು ಘಂಟೆಯ ನಂತರ ಬರಲಾರಂಭಿಸಿತ್ತು. ಮೂರು ಘಂಟೆಯ ಹೊತ್ತಿಗೆ ಎರಡು ಸಾವಿರ ಮೀರಿದ ಪ್ರೇಕ್ಷಕರು. ಭೋಜನದ ವ್ಯವಸ್ಥೆ ಅರ್ಧ ಭಾಗವನ್ನು ಮಾತ್ರ ತೃಪ್ತಿಗೊಳಿಸಲು ಸಾಧ್ಯ. ಬಡಿಸುವವರ ಕೈ ಚಳಕದಿಂದ ಒಂದೂವರೆ ಸಾವಿರ ಜನರು ಉಂಡರು. ಪುಣ್ಯಕ್ಕೆ ಮಕ್ಕಳಿಗೆ ಪ್ರತ್ಯೇಕ ಕೌಂಟರ್ ಇದ್ದ ಕಾರಣ ಅವರಿಗೆ ಊಟ ದೊರೆಯಿತೆಂಬುದು ಸಂತಸದ ವಿಷಯ.
ಅಡುಗೆಯವರು ಮತ್ತೆ ಬೇಯಿಸಿದರು. ಅಂತೂ ಇಂತೂ ಸಂಜೆ ಘಂಟೆ ಐದರ ಸುಮಾರಿಗೆ ಎಲ್ಲರೂ ಮಧ್ಯಾಹ್ನದ ಊಟ ಉಂಡು ತೇಗಿದರು. ಒಬ್ಬರ ಸಮಯ ಪ್ರಜ್ಞೆಯ ಕೊರತೆ ವ್ಯವಸ್ಥೆಯನ್ನು ಹೀಗೆ ಉಲ್ಲೋಲ ಕುಲ್ಲೋಲಗೊಳಿಸಿತಲ್ಲವೇ? ಸಮಯಕ್ಕೆ ಸರಿಯಾಗಿರದವರ ಮೇಲೆ ಛೀಮಾರಿ ಹಾಕುವ ಸ್ವಾತಂತ್ರ್ಯವಿರದ ತನಕ, ಸ್ವತಂತ್ರರೆಂದು ಬೀಗುವ ನಮ್ಮ ದುಸ್ಥಿತಿಗೆ ಎಷ್ಟು ಮರುಗಿದರೂ ಪರಿಹಾರವಿಲ್ಲ. ಶಿಸ್ತು ಮತ್ತು ಸಮಯ ಪ್ರಜ್ಞೆ ಪ್ರತಿಯೊಬ್ಬನ ಜೀವನದ ಪ್ರಮುಖ ಆದ್ಯತೆಯಾಗಬೇಕು.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
********************************************